ಶನಿವಾರ, ಫೆಬ್ರವರಿ 18, 2017

ಭಾರತದ ರಾಜಕೀಯ ವ್ಯವಸ್ಥೆ

ಅಧ್ಯಾಯ 1:
ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಹಾಗು ಬೆಳವಣಿಗೆ:

ಒಂದು ಅಥವ ಎರಡು ಅಂಕಗಳ ಪ್ರಶ್ನೋತ್ತರಗಳು:

1. ಭಾರತ ಯಾವಾಗ ಸ್ವತಂತ್ರವಾಯಿತು?
ಉ: ಭಾರತವು 15 ಆಗಸ್ಟ್ 1947ರಂದು ಸ್ವತಂತ್ರವಾಯಿತು.
2. ಭಾರತದ ಸಂವಿಧಾನವು ಎಂದು ಅಸ್ತಿತ್ವಕ್ಕೆ ಬಂದಿತು?
ಉ: ಭಾರತದ ಸಂವಿಧಾನವು 26 ಜನೇವರಿ 1950ರಂದು ಅಸ್ತಿತ್ವಕ್ಕೆ ಬಂತು.
3. ಭಾರತೀಯ ರಾಷ್ಟ್ರೀಯ ಕಾಂಗ್ರ್ಎಸ್ಸು ಯಾವಾಗ ಉದಯವಾಯಿತು?
ಉ: ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸು 1885ರಲ್ಲಿ ಉದಯವಾಯಿತು.
4. ಯಾವ ಕಾಯಿದೆಯು ಭಾರತದ ಆಡಳಿತಾಧಿಕಾರವನ್ನು ಕಂಪನಿಯಿಂದ ಕ್ರೌನಿಗೆ ವರ್ಗಾಯಿಸಿತು?
ಉ: 1858ರ ಭಾರತ ಕೌನ್ಸಿಲ್ ಕಾಯಿದೆಯು ಭಾರತದ ಆಡಳಿತಾಧಿಕಾರವನ್ನು ಕಂಪನಿಯಿಂದ ಕ್ರೌನ್ಗೆ ವರ್ಗಾಯಿಸಿತು.
5. ಮಿಂಟೊ ಮಾರ್ಲೆ ಸುಧಾರಣೆಯ ಒಂದು ಮುಖ್ಯಾಂಶವನ್ನು ಸೂಚಿಸಿ.
ಉ: ಮಿಂಟೊ ಮಾರ್ಲೆ ಸುಧಾರಣೆಯ ಒಂದು ಮುಖ್ಯಾಂಶವೆಂದರೆ ಮುಸಲ್ಮಾನರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಸ್ಥಾಪಿಸಲಾಯಿತು.
6. 1919ರ ಕಾಯಿದೆಯ ಒಂದು ಮುಖ್ಯಾಂಶವನ್ನು ಸೂಚಿಸಿ.
ಉ: 1919ರ ಭಾರತ ಸರ್ಕಾರ ಕಾಯಿದೆಯ [ಮಾಂಟೆಗೊ ಚೆಲ್ಮ್ಸಫ಼ರ್ಡ್ ಸುಧಾರಣೆಯ] ಒಂದು ಮುಖ್ಯಾಂಶವೆಂದರೆ ಪ್ರಾಂತ್ಯಗಳಲ್ಲಿ ದ್ವಿ ಸರ್ಕಾರವನ್ನು ಜಾರಿಗೊಳಿಸಲಾಯಿತು.
7. ಡಯಾರ್ಕಿ ಎಂದರೇನು?
ಉ: ಡಯಾರ್ಕಿ ಎಂದರೆ ದ್ವೀ ಸರ್ಕಾರ ಎಂದಾಗುತ್ತದೆ.
8. ಶಾಸನಾತ್ಮಕ ಆಯೋಗವನ್ನು ಏಕೆ ರಚಿಸಲಾಯಿತು? ಅದರ ಅಧ್ಯಕ್ಷರಾಗಿದ್ದವರು ಯಾರು?
ಉ: 1919ರ ಭಾರತ ಸರ್ಕಾರ ಕಾಯಿದೆಯ ಅನುಷ್ಟಾನವನ್ನು ಪರಿಶೀಲಿಸಿ ಅಗತ್ಯ ಸುಧಾರಣೆಗಳನ್ನು ಶಿಫ಼ಾರಸು ಮಾಡಲು ಶಾಸನಾತ್ಮಕ ಆಯೋಗವನ್ನು ರಚಿಸಲಾಯಿತು. ಅದರ ಅಧ್ಯಕ್ಷರಾಗಿದ್ದವರು ಜಾನ್ ಸೈಮನ್.
9. ಯಾವ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಲು ಶಿಫಾರಸು ಮಾಡಿತ್ತು?
ಉ: 1929ರಲ್ಲಿ ಸೈಮನ್ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಲು ಶಿಫ಼ಾರಸು ಮಾಡಿತ್ತು.
10. ಮೂರನೆಯ ದುಂಡು ಮೇಜಿನ ಸಮ್ಮೇಳನವು ಯಾವಾಗ ಜರುಗಿತು?
ಉ: ಮೂರನೆಯ ದುಂಡು ಮೇಜಿನ ಸಮ್ಮೇಳನವು 1932ರಲ್ಲಿ ಜರುಗಿತು.
11. 1935ರ ಭಾರತ ಸರ್ಕಾರ ಕಾಯಿದೆಯ ಒಂದು ಅಂಶವನ್ನು ಬರೆಯಿರಿ.
ಉ: 1935ರ ಭಾರತ ಸರ್ಕಾರ ಕಾಯಿದೆಯ ಒಂದು ಮುಖ್ಯಾಂಶವೆಂದರೆ ಕೇಂದ್ರದಲ್ಲಿ ದ್ವೀ ಸರ್ಕಾರವನ್ನು ಜಾರಿಗೊಳಿಸಲಾಯಿತು.
12. 1947ರ ಭಾರತ ಸ್ವತಂತ್ರ ಕಾಯಿದೆಯ ಒಂದು ಮುಖ್ಯಾಂಶವನ್ನು ಬರೆಯಿರಿ.
ಉ: 1947ರ ಭಾರತ ಸ್ವತಂತ್ರ ಕಾಯಿದೆಯ ಒಂದು ಮುಖ್ಯಾಂಶವೆಂದರೆ ಭಾರತದ ಮೇಲಿನ ಬ್ರಿಟನ್ ರಾಣಿಯ ಪರಮಾಧಿಕಾರ ಅಂತ್ಯವಾಯಿತು.
13. ಗಡಿ ಗುರುತಿಸುವ ಆಯೋಗದ ಅಧ್ಯಕ್ಷರಾಗಿದ್ದವರು ಯಾರು?
ಉ: ಸರ್ ಸಿರಿಜ್ ರ್ಯಾಡ್ಕ್ಲಿಪ್ ಗಡಿ ಗುರುತಿಸುವ ಆಯೋಗದ ಅಧ್ಯಕ್ಷರಾಗಿದ್ದರು.
14. ಮಧ್ಯಂತರ ಸರ್ಕಾರವು ಯಾವಾಗ ರಚನೆಯಾಯಿತು?
ಉ: ಮಧ್ಯಂತರ ಸರ್ಕಾರವು 2 ಸೆಪ್ಟಂಬರ್ 1946ರಂದು ರಚನೆಗೊಂಡಿತು.
15. ಯಾವ ಸಭೆಯು ಮಧ್ಯಂತರ ಸರ್ಕಾರವನ್ನು ರಚಿಸಿತು?
ಉ: ಸರ್ವ ಪಕ್ಷಗಳ ಸದಸ್ಯರಿಂದ  ಕೂಡಿದ ಸಂವಿಧಾನ ರಚನಾ ಸಭೆಯಿಂದ ಮಧ್ಯಂತರ ಸರ್ಕಾರವು ರಚೆನೆಗೊಂಡಿತು.
16. ಮಧ್ಯಂತರ ಸರ್ಕಾರವು ಎಲ್ಲಿಯವರೆಗೆ ಅಸ್ತಿತ್ವದಲ್ಲಿತ್ತು?
ಉ: ಮಧ್ಯಂತರ ಸರ್ಕಾರವು 15 ಆಗಸ್ಟ್ 1947ರವರೆಗೆ ಅಸ್ತಿತ್ವದಲ್ಲಿತ್ತು.
17. ವೈಸರಾಯ್ನ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾಗಿದ್ದವರು ಯಾರು?
ಉ: ವೈಸರಾಯ್ನ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾಗಿದ್ದವರು ಜವಾಹರಲಾಲ್ ನೆಹರು.
18. ಭಾರತದಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ಯಾವಾಗ ಜರುಗಿತು?
ಉ: ಭಾರತದಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ಅಕ್ಟೋಬರ್ 1951 ರಿಂದ ಫ಼ೇಬ್ರವರಿ 1952ರವರೆಗೆ ಜರುಗಿತು.
19. ಜಗತ್ತಿನ ಅತೀ ದೊಡ್ಡ ಪ್ರಜಾಸತ್ತಾತ್ಮಕ ದೇಶ ಯಾವುದು?
ಉ: ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶವಾಗಿದೆ.
20. ಪ್ಯಾರಮೌಂಟ್ಸಿ ಎಂದರೇನು?
ಉ: ಪ್ಯಾರಮೌಂಟ್ಸಿ ಎಂದರೆ ಅಂತಿಮ ಅಧಿಕಾರ ಅಥವ ಪರಮಾಧಿಕಾರ ಎಂದಾಗುತ್ತದೆ. 15/7/1947ರವರೆಗೆ ಭಾರತದ ಮೇಲೆ ಬ್ರಿಟನ್ ರಾಣಿ ಹೊಂದಿದ್ದ ಅಧಿಕಾರವನ್ನು ಈ ಪದ ಪ್ರತಿನಿಧಿಸುತ್ತದೆ.
21. ಆಪರೇಷನ್ ಪೋಲೊ ಎಂದರೇನು?
ಉ: ಹೈದರಾಬಾದ್ ಸಂಸ್ಥಾನದ ಮೇಲೆ ನಡೆಸಿದ ಪೋಲಿಸ್ ಕಾರ್ಯಾಚರಣೆಯನ್ನು ಆಪರೇಷನ್ ಪೋಲೊ ಎನ್ನುವರು.
22. ಇನ್ಸ್ಟ್ರುಮೆಂಟ್ ಆಫ಼್ ಅಕ್ಸೆಶನ್ ಎಂದರೇನು?
ಉ: ಇನ್ಸ್ಟ್ರುಮೆಂಟ್ ಆಫ಼್ ಅಕ್ಸೆಶನ್ ಎಂದರೆ ವಿಲೀನ ಒಪ್ಪಂದ ಎಂದಾಗುತ್ತದೆ.
23. ಭಾರತ ಸಂವಿಧಾನದ ಯಾವ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುತ್ತದೆ?
ಉ: ಭಾರತ ಸಂವಿಧಾನದ 370ನೆಯ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದೆ.
24. ದೇಶೀಯ ಸಂಸ್ಥಾನಗಳ ಏಕೀಕರಣದ ರುವಾರಿ ಯಾರು?
ಉ: ದೇಶೀಯ ಸಂಸ್ಥಾನಗಳ ಏಕೀಕರಣದ ರುವಾರಿ ಸರ್ದಾರ್ ವಲ್ಲಬಾಯ್ ಪಟೇಲ್.
25. ಭಾರತದ ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯಲಾಗುತ್ತದೆ?
ಉ: ಸರ್ದಾರ್ ವಲ್ಲಬಾಯ್ ಪಟೇಲರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ.
26. ರಾಜ್ಯಗಳ ಪುನರ್ ರಚನಾ ಆಯೋಗವು ಯಾವಾಗ ರಚನೆಗೊಂಡಿತ್ತು?
ಉ: ರಾಜ್ಯಗಳ ಪುನರ್ ರಚನಾ ಆಯೋಗವು 1953ರಲ್ಲಿ ರಚನೆಗೊಂಡಿತು.
27. ರಾಜ್ಯಗಳ ಪುನರ್ ರಚನಾ ಕಾಯಿದೆಯು ಯಾವಾಗ ಜಾರಿಗೊಂಡಿತು?
ಉ: ರಾಜ್ಯಗಳ ಪುನರ್ ರಚನಾ ಕಾಯಿದೆಯು 1956ರಲ್ಲಿ ಜಾರಿಗೊಂಡಿತು.
28. 1956ರಲ್ಲಿ ರಾಜ್ಯಗಳ ಪುನರ್ವಿಂಗಡಣಾ ಕಾಯಿದೆಯಂತೆ ಭಾರತದಲ್ಲಿ ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದವು?
ಉ: 1956ರಲ್ಲಿ ರಾಜ್ಯಗಳ ಪುನರ್ವಿಂಗಡಣಾ ಕಾಯಿದೆಯಂತೆ ಭಾರತದಲ್ಲಿ 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದವು.
29. ಬಾಂಬೆಯನ್ನು ಯಾವಾಗ ವಿಭಜಿಸಲಾಯಿತು?
ಉ: ಬಾಂಬೆಯನ್ನು 1960ರಲ್ಲಿ ವಿಭಜಿಸಲಾಯಿತು.
30. ಪಂಜಾಬನ್ನು ಯಾವಾಗ ವಿಭಜಿಸಲಾಯಿತು? ಆಗ ಯಾವ ರಾಜ್ಯಗಳು ಉದಯವಾದವು?
ಉ: ಪಂಜಾಬನ್ನು 1966ರಲ್ಲಿ ವಿಭಜಿಸಲಾಯಿತು. ಆಗ ಪಂಜಾಬ್ ಮತ್ತು ಹರಿಯಾಣಾ ರಾಜ್ಯಗಳು ಉದಯಿಸಿದವು.
31. 2014ರಲ್ಲಿ ಯಾವ ರಾಜ್ಯವನ್ನು ವಿಭಜಿಸಲಾಯಿತು?
ಉ: 2014ರಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಲಾಯಿತು.
32. ಭಾರತದಲ್ಲಿ ಜವಾಬ್ದಾರಿ ಸರ್ಕಾರವನ್ನುಯಾವ ಕಾಯಿದೆಯು  ಪರಿಚಯಿಸಿತು?
ಉ: 1909ರ ಭಾರತ ಪರಿಷತ್ತು ಕಾಯಿದೆಯು ಭಾರತದಲ್ಲಿ ಜವಾಬ್ದಾರಿ ಸರ್ಕಾರವನ್ನು ಪರಿಚಯಿಸಿತು.
33. ಭಾರತದಲ್ಲಿ ಮೊದಲ ಬಾರಿ ಫ಼ೆಡರಲ್ ಅಥವ ಸಂಯುಕ್ತ ವ್ಯವಸ್ಥೆಯನ್ನು ಯಾವ ಕಾಯಿದೆಯು ಜಾರಿಗೊಳಿಸಿತು?
ಉ: 1935ರ ಭಾರತ ಸರ್ಕಾರ ಕಾಯಿದೆಯು ಭಾರತದಲ್ಲಿ ಮೊದಲ ಬಾರಿ ಫ಼ೆಡರಲ್ ಅಥವ ಸಂಯುಕ್ತ ವ್ಯವಸ್ಥೆಯನ್ನು ಜಾರಿಗೊಳಿಸಿತು.
34. ಮೊದಲ ಲೋಕಸಭೆಯ ಸ್ಪೀಕರ್ ಆಗಿದ್ದವರು ಯಾರು?
ಉ: ಮೊದಲ ಲೋಕಸಭೆಯ ಸ್ಪೀಕರ್ ಆಗಿದ್ದವರು G.V.ಮಾಳವಂಕರ್.
35. ಭಾರತದ ಮೊದಲ ಭಾಷಾಧಾರಿತ ರಾಜ್ಯ ಯಾವುದು?
ಉ: ಭಾರತದ ಮೊದಲ ಭಾಷಾಧಾರಿತ ರಾಜ್ಯ ಆಂಧ್ರಪ್ರದೇಶವಾಗಿದ್ದು 1953ರಲ್ಲಿ ರಚನೆಗೊಂಡಿತ್ತು.
36. ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ಎಷ್ಟು ಸ್ಥಾನಗಳನ್ನು ಪಡೆದಿತ್ತು?
ಉ: ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು 384 ಸ್ಥಾನಗಳನ್ನು ಲೋಕಸಭೆಯಲ್ಲಿ ಪಡೆದಿತ್ತು.
37. PEPSU ವಿಸ್ತರಿಸಿ.
ಉ: PEPSU ವಿಸ್ತರಿಸಿದರೆ ಪಾಟಿಯಾಲಾ ಈಸ್ಟ್ ಪಂಜಾಬ್ ಸೌರಾಷ್ಟ್ರ  ಯೂನಿಯನ್ ಎಂದಾಗುತ್ತದೆ.

ಎರಡು ಅಂಕಗಳ ಪ್ರಶ್ನೋತ್ತರಗಳು:

1. ಫ಼ೆಡರಲ್ ನ್ಯಾಯಾಲಯವು ಯಾವಾಗ ಮತ್ತು ಎಲ್ಲಿ ಸ್ಥಾಪನೆಯಾಯಿತು?
ಉ: ಫ಼ೆಡರಲ್ ನ್ಯಾಯಾಲಯವು ದೆಹಲಿಯಲ್ಲಿ 1935ರಲ್ಲಿ ಸ್ಥಾಪನೆಯಾಯಿತು.
2. ಬಾಂಬೆಯನ್ನು ಎಷ್ಟು ರಾಜ್ಯಗಳಾಗಿ ವಿಂಗಡಿಸಲಾಯಿತು?ಅವು ಯಾವುವು?
ಉ: ಬಾಂಬೆಯನ್ನು 1960ರಲ್ಲಿ ಎರಡು ರಾಜ್ಯಗಳಾಗಿ ವಿಂಗಡಿಸಲಾಯಿತು. ಆ ರಾಜ್ಯಗಳೆಂದರೆ ಮಹರಾಷ್ಟ್ರ ಮತ್ತು ಗುಜರಾತ್.
3. ಪಂಜಾಬನ್ನು ಎಷ್ಟು ರಾಜ್ಯಗಳಾಗಿ ವಿಂಗಡಿಸಲಾಯಿತು? ಅವು ಯಾವುವು?
ಉ: ಪಂಜಾಬನ್ನು 1966ರಲ್ಲಿ ಎರಡು ರಾಜ್ಯಗಳಾಗಿ ವಿಂಗಡಿಸಲಾಯಿತು. ಆ ರಾಜ್ಯಗಳೆಂದರೆ ಪಂಜಾಬ್ ಮತ್ತು ಹರಿಯಾಣಾ.
4. ಪ್ರಥಮ ಸಾರ್ವತ್ರಿಕ ಅಥವ ಲೋಕಸಭಾ ಚುನಾವಣೆ ಕುರಿತು ಟಿಪ್ಪಣಿ ಬರೆಯಿರಿ.
ಉ: ಪ್ರಥಮ ಸಾರ್ವತ್ರಿಕ ಚುನಾವಣೆಯ ಪ್ರಮುಖ ಅಂಶಗಳೆಂದರೆ ಚುನಾವಣೆ ನಡೆದ ಒಟ್ಟು ಲೋಕಸಭಾ ಮತ ಕ್ಷೇತ್ರಗಳ ಸಂಖೆ 489,ಮತದಾರರ ಒಟ್ಟು ಸಂಖೆ 176 ಮಿಲಿಯನ್,ಮತಗಟ್ಟೆಗಳ ಸಂಖೆಯು 24000,ಚುನಾವಣಾ ಕಣದಲ್ಲಿದ್ದ ರಾಜಕೀಯ ಪಕ್ಷಗಳ ಸಂಖೆ ಸುಮಾರು 70 ಇತ್ಯಾದಿ.
5. ಡಯಾರ್ಕಿ ಅಥವ ದ್ವೀ ಸರ್ಕಾರ ಪದ್ಧತಿ ಬಗ್ಗೆ ಟಿಪ್ಪಣಿ ಬರೆಯಿರಿ.
ಉ: ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳನ್ನು ಮೀಸಲು ವಿಷಯ ಹಾಗು ವರ್ಗಾಯಿತ ವಿಷಯ ಎಂದು ವಿಂಗಡಿಸಲಾಗುತ್ತದೆ.ಮೀಸಲು ವಿಷಯಗಳನ್ನು ಕಾರ್ಯಾಂಗದ ಮುಖ್ಯಸ್ಥ ಹಾಗು ಆತನ ಯೂರೋಪಿಯನ್ ಮಂತ್ರಿ ಮಂಡಲವು ನೋಡಿಕೊಳ್ಳುತ್ತಿದ್ದು ಶಾಸಕಾಂಗಕ್ಕೆ ಉತ್ತರಿಸಬೇಕಿರಲಿಲ್ಲ.ವರ್ಗಾಯಿತ ವಿಷಯಗಳನ್ನು ಕಾರ್ಯಾಂಗದ ಮುಖ್ಯಸ್ಥ ಹಾಗು ಆತನ ಭಾರತೀಯ ಮಂತ್ರಿ ಮಂಡಲವು ನೋಡಿಕೊಳ್ಳುತ್ತಿದ್ದು ಶಾಸಕಾಂಗಕ್ಕೆ ಉತ್ತರಿಸಬೇಕಿತ್ತು.ಇದನ್ನೇ ಡಯಾರ್ಕಿ ಅಥವ ದ್ವೀ ಸರ್ಕಾರ ಪದ್ಧತಿ ಎನ್ನುವರು.
6. ಜಾನ್ ಸೈಮನ್ ಆಯೋಗವನ್ನು ಏಕೆ ರಚಿಸಲಾಯಿತು?
ಉ: 1919ರ ಭಾರತ ಸರ್ಕಾರ ಕಾಯಿದೆಯ ಅನುಷ್ಟಾನವನ್ನು ಪರಿಶೀಲಿಸಿ ಅಗತ್ಯ ಸುಧಾರಣೆಗಳನ್ನು ಶಿಫ಼ಾರಸು ಮಾಡಲು ಶಾಸನಾತ್ಮಕ ಜಾನ್ ಸೈಮನ್ ಆಯೋಗವನ್ನು ರಚಿಸಲಾಯಿತು.
7. 1935 ರ ಭಾರತ ಸರ್ಕಾರ ಕಾಯಿದೆಯು ಎಷ್ಟು ವಿಧಿಗಳು ಮತ್ತು ಸೆಡ್ಯುಲ್ಗಳನ್ನು ಹೊಂದಿದೆ?
ಉ: 1935 ರ ಭಾರತ ಸರ್ಕಾರ ಕಾಯಿದೆಯು 321 ವಿಧಿಗಳು,14 ಭಾಗಗಳು ಹಾಗು 10 ಸೆಡ್ಯುಲ್ಗಳಿಂದ ಕೂಡಿದೆ.
8. ದುಂಡು ಮೇಜಿನ ಸಮ್ಮೇಳನಗಳ ಬಗ್ಗೆ ನಿಮಗೇನು ತಿಳಿದಿದೆ?
ಉ: 1930, 1931 ಹಾಗು 1932ರಲ್ಲಿ ಮೂರು ದುಂಡು ಮೇಜಿನ ಸಮ್ಮೇಳನಗಳು ಇಂಗ್ಲೆಂಡಿನ ಲಂಡನ್ ನಗರದಲ್ಲಿ ಜರುಗಿದವು.ಇವುಗಳ ಪೈಕಿ ಗಾಂಧೀಜಿ ಎರಡನೆಯ ದುಂಡು ಮೇಜಿನ ಸಮ್ಮೇಳನಕ್ಕೂ ಹಾಗು ಅಂಬೇಡ್ಕರ್ ಮೂರು ಸಮ್ಮೇಳನಕ್ಕೂ ಹಾಜರಾಗಿದ್ದರು.
9. ಪುಣಾ ಒಪ್ಪಂದವು ಯಾವಾಗ ಜರುಗಿತು?ಅದರ ವಿಶೇಷವೇನು?
ಉ: ಪುನಾ ಒಪ್ಪಂದವು 1932ರ ಸೆಪ್ಟಂಬರ್ನಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಜರುಗಿತು. ಈ ಒಪ್ಪಂದದಂತೆ ಅಸ್ಪ್ರುಷ್ಯರಿಗೆ ಪ್ರತ್ಯೇಕ ಮತ ಕ್ಷೇತ್ರಗಳ ಬೇಡಿಕೆಯನ್ನು ಕೈ ಬಿಟ್ಟು ಅವರಿಗೆ ಮೀಸಲಾತಿ ನೀಡಲು ನಿರ್ಧರಿಸಲಾಯಿತು.
10. ಕ್ರಿಪ್ಸ್ ಆಯೋಗದ ಎರಡು ಶಿಫ಼ಾರಸುಗಳನ್ನು ತಿಳಿಸಿ?
ಉ: ಕ್ರಿಪ್ಸ್ ಆಯೋಗವು ಎರಡನೇಯ ಮಹಾ ಯುದ್ಧ ಮುಕ್ತಾಯವಾದ ಬಳಿಕ ಭಾರತೀಯ ಸಂವಿಧಾನ ರಚನಾ ಸಭೆಯನ್ನು ರಚಿಸಲು ಮತ್ತು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಲು ಶಿಫ಼ಾರಸು ಮಾಡಿತ್ತು.
11. ಕ್ಯಾಬಿನೆಟ್ ಮಿಶನ್ ನೀಡಿದ ಶಿಫ಼ಾರಸುಗಳನ್ನು ತಿಳಿಸಿ?
ಉ: ಕ್ಯಾಬಿನೆಟ್ ಮಿಷನ್ ನೀಡಿದ ಶಿಫ಼ಾರಸುಗಳೆಂದರೆ
a.389 ಸದಸ್ಯರಿಂದ ಕೂಡಿದ ಸಂವಿಧಾನ ರಚನಾ ಸಭೆಯನ್ನು ರಚಿಸುವುದು.
b.ಸರ್ವ ಪಕ್ಷಗಳ ಸದಸ್ಯರಿಂದ ಕೂಡಿದ ಮಧ್ಯಂತರ ಸರ್ಕಾರವನ್ನು ರಚಿಸುವುದು.
c.ಭಾರತವನ್ನು ಭಾರತ ಹಾಗು ಪಾಕಿಸ್ತಾನವೆಂದು ವಿಭಜಿಸದಿರುವುದು.
12. ಇನ್ ಸ್ಟ್ರುಮೆಂಟ್ ಆಫ಼್ ಅಕ್ಸೆಶನ್ ಎಂದರೇನು?ಅದರ ವಿಶೇಷವೇನು?
ಉ: ಸರದಾರ್ ಪಟೇಲ್ ದೇಶೀಯ ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಲು ತಯಾರಿಸಿದ ಯೋಜನೆಯೇ ಇನ್ಸ್ಟ್ರುಮೆಂಟ್ ಆಫ಼್ ಅಕ್ಸೆಶನ್ ಆಗಿದೆ.ಇದರಂತೆ ದೇಶೀಯ ಸಂಸ್ಥಾನಗಳು ರಕ್ಷಣೆ,ವಿದೇಶಾಂಗ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಭಾರತ ಒಕ್ಕೂಟಕ್ಕೆ ಬಿಟ್ಟು ಕೊಡಬೇಕಾಯಿತು.ಇದಕ್ಕೆ ಪ್ರತಿಯಾಗಿ ದೇಶೀಯ ಸಂಸ್ಥಾನಗಳ ರಾಜರಿಗೆ ಉನ್ನತ ಸ್ಥಾನಮಾನ್ಅ ಹಾಗು ಸೂಕ್ತ ಸೌಲಭ್ಯಗಳನ್ನು ನೀಡಲು ನಿರ್ಧರಿಸಲಾಗಿತ್ತು.
13. ಪಟೇಲ್ ಸ್ಕೀಮ್ ಎಂದರೇನು?
ಉ: ಭಾರತದಲ್ಲಿನ ದೇಶೀಯ ಸಂಸ್ಥಾನಗಳನ್ನು ಮೂರು ಹಂತಗಳಲ್ಲಿ ಭಾರತ ಒಕ್ಕೂಟಕ್ಕೆ ಸೇರಿಸುವ ಅಂದರೆ ಸಣ್ಣ ರಾಜ್ಯಗಳನ್ನು ಪಕ್ಕದ ರಾಜ್ಯಗಳೊಡನೆ ಸೇರಿಸುವುದು,ಸಣ್ಣಸಣ್ಣ ರಾಜ್ಯಗಳನ್ನು ಸೇರಿಸಿ ಹೊಸ ರಾಜ್ಯ ರಚಿಸುವುದು ಮತ್ತು ಚೀಫ಼್ ಕಮೀಶನರ್ ಪ್ರಾಂತ್ಯಗಳನ್ನು ರಚಿಸುವುದನ್ನು ಪಟೇಲ್ ಸ್ಕೀಮ್ ಎನ್ನಲಾಗುತ್ತದೆ.
14. ಭಾರತ ಒಕ್ಕೂಟ ಸೇರಲು ನಿರಾಕರಿಸಿದ ಮೂರು ಸಂಸ್ಥಾನಗಳಾವುವು?
ಉ: ಜುನಾಗಡ, ಹೈದರಾಬಾದ್ ಮತ್ತು ಕಾಶ್ಮೀರಗಳು ಭಾರತ ಒಕ್ಕೂಟವನ್ನು ಸೇರಲು ನಿರಾಕರಿಸಿದ್ದವು.
15. ರಾಜ್ಯಗಳ ಪುನರ್ ವಿಂಗಡಣಾ ಆಯೋಗವನ್ನು ಯಾವಾಗ ರಚಿಸಲಾಯಿತು?ಅದರ ಸದಸ್ಯರನ್ನು ಹೆಸರಿಸಿ?
ಉ: ರಾಜ್ಯಗಳ ಪುನರ್ ವಿಂಗಡಣಾ ಆಯೋಗವನ್ನು ಫ಼ಜಲ್ ಅಲಿಯವರ ನೇತ್ರುತ್ವದಲ್ಲಿ 1953ರಲ್ಲಿ ರಚಿಸಲಾಯಿತು.ಈ ಆಯೋಗದ ಇತರ ಸದಸ್ಯರೆಂದರೆ ಹ್ರುದಯನಾಥ ಕುಂಜ್ರು ಹಾಗು K.M ಫ಼ಣೀಕ್ಕರ್.ಈ ಆಯೋಗದ ಸಲಹೆಯಂತೆ ಸಂವಿಧಾನಕ್ಕೆ ಏಳನೆಯ ತಿದ್ದುಪಡಿ ತಂದು 1956ರಲ್ಲಿ ಭಾಷಾಧಾರಿತ ರಾಜ್ಯಗಳನ್ನು ರಚಿಸಲು ರಾಜ್ಯಗಳ ಪುನರ್ವಿಂಗಡಣಾ ಕಾಯಿದೆಯನ್ನು ಜಾರಿಗೊಳಿಸಲಾಯಿತು.
16. ರಾಜ್ಯಗಳ ಪುನರ್ವಿಂಗಡಣಾ ಕಾಯಿದೆಯ ಮುಖ್ಯಾಂಶಗಳಾವುವು?
ಉ: 1956ರ ರಾಜ್ಯಗಳ ಪುನರ್ವಿಂಗಡಣಾ ಕಾಯಿದೆಯ ಮುಖ್ಯಾಂಶಗಳು ಕೆಳಗಿನಂತಿವೆ.
A. A B C D ವರ್ಗದ ರಾಜ್ಯಗಳನ್ನು ರದ್ದುಗೊಳಿಸುವುದು.
B ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೆಶಗಳೆಂಬ ಎರಡು ವರ್ಗದ ಪ್ರದೇಶಗಳನ್ನು ಜಾರಿಗೊಳಿಸುವುದು.
C ರಾಜ ಪ್ರಮುಖ ಹುದ್ದೆಗಳನ್ನು ರದ್ದುಗೊಳಿಸುವುದು.
D ಭಾರತವನ್ನು 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವುದು.
17. ಪ್ರಥಮ ಲೋಕಸಭೆ ಕುರಿತು ಬರೆಯಿರಿ?
ಉ: ಪ್ರಥಮ ಲೋಕಸಭೆಯು 491 ಸ್ಥಾನಗಳಿಂದ ಕೂಡಿತ್ತು. ಇದರಲ್ಲಿ 489 ಸ್ಥಾನಗಳಿಗೆ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದವು ಹಾಗು ಇಬ್ಬರು ಆಂಗ್ಲೋ ಇಂಡಿಯ್ನ್ರು ನಾಮಕರಣಗೊಂಡರು. G.V ಮಾವಳಂಕರ್ ಪ್ರಥಮ ಲೋಕಸಭೆಯ ಸ್ಪೀಕರ್[ಅಧ್ಯಕ್ಷ] ಆಗಿದ್ದರು. ಇದರ ಅವಧಿಯು 17 ಏಪ್ರಿಲ್ 1952 ರಿಂದ 4 ಏಪ್ರಿಲ್ 1957 ರವರೆಗೆ ಆಗಿತ್ತು.

ಸಂಭವನೀಯ ಐದು ಅಥವ ಹತ್ತು ಅಂಕಗಳ ಪ್ರಶ್ನೆಗಳು

1. 1919ರ ಭಾರತ ಸರ್ಕಾರ ಕಾಯಿದೆ[ಮಾಂಟೆಗೊ ಚೆಲ್ಮ್ಸ್ ಫ಼ರ್ಡ್ ಸುಧಾರಣೆ]ಯ ಪ್ರಮುಖ ಅಂಶಗಳನ್ನು ಬರೆಯಿರಿ?
ಉ: 1909ರ ಭಾರತ ಸರ್ಕಾರ ಕಾಯಿದೆಯು ಭಾರತೀಯರ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಯಿತು. ಇದರಿಂದ ಅಸಮಧಾನಗೊಂಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸು ಹೋಮ್ ರೂಲ್ ಚಳುವಳಿಯನ್ನು ಕೈಗೊಂಡಿತು. ಆಗ ಭಾರತೀಯರಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ನೀಡಲು ರಾಜ್ಯ ಮಂತ್ರಿ ಮಾಂಟೇಗೊ ಮತ್ತು ಗೌರ್ನರ್ ಜನರಲ್ ಚೆಲ್ಮ್ಸ್ ಫ಼ರ್ಡ್ ತಯಾರಿಸಿದ ವರದಿ 1919ರ ಭಾರತ ಸರ್ಕಾರ ಕಾಯಿದೆ ಎನಿಸಿತು. ಇದರ ಮುಖ್ಯ ಅಂಶಗಳೆಂದರೆ
A. ಆಡಳಿತದ ವಿಷಯಗಳ ವಿಂಗಡಣೆ: ಈ ಕಾಯಿದೆ ಆಡಳಿತದ ವಿಷಯಗಳನ್ನು ಕೇಂದ್ರ ವಿಷಯಗಳು ಹಾಗು ಪ್ರಾಂತ್ಯ ವಿಷಯಗಳು ಎಂದು ವಿಂಗಡಿಸಿತು. ಜೊತೆಗೆ ಪ್ರಾಂತ್ಯಗಳ ವಿಷಯಗಳನ್ನು ಮತ್ತೆ ಮೀಸಲು ಮತ್ತು ವರ್ಗಾಯಿತ ವಿಷಯಗಳೆಂದು ವಿಂಗಡಿಸಿತು.
B. ಪ್ರಾಂತ್ಯಗಳಲ್ಲಿ ದ್ವೀ ಸರ್ಕಾರದ ಜಾರಿ: ಪ್ರಾಂತ್ಯ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳನ್ನು ಮೀಸಲು ವಿಷಯ ಹಾಗು ವರ್ಗಾಯಿತ ವಿಷಯ ಎಂದು ವಿಂಗಡಿಸಲಾಗುತ್ತದೆ. 28 ಮೀಸಲು ವಿಷಯಗಳನ್ನು ಕಾರ್ಯಾಂಗದ ಮುಖ್ಯಸ್ಥ ಗೌರ್ನರ್ ಹಾಗು ಆತನ ಯೂರೋಪಿಯನ್ ಮಂತ್ರಿ ಮಂಡಲವು ನೋಡಿಕೊಳ್ಳುತ್ತಿದ್ದು ಶಾಸಕಾಂಗಕ್ಕೆ ಉತ್ತರಿಸಬೇಕಿರಲಿಲ್ಲ. 22 ವರ್ಗಾಯಿತ ವಿಷಯಗಳನ್ನು ಕಾರ್ಯಾಂಗದ ಮುಖ್ಯಸ್ಥ ಗೌರ್ನರ್ ಹಾಗು ಆತನ ಭಾರತೀಯ ಮಂತ್ರಿ ಮಂಡಲವು ನೋಡಿಕೊಳ್ಳುತ್ತಿದ್ದು ಶಾಸಕಾಂಗಕ್ಕೆ ಉತ್ತರಿಸಬೇಕಿತ್ತು.
C. ದ್ವೀ ಸದನ ಶಾಸಕಾಂಗಕ್ಕೆ ಅವಕಾಶ: ಭಾರತ ಶಾಸಕಾಂಗವು 60 ಸದಸ್ಯರ ಮೇಲ್ಸದನವಾದ ರಾಜ್ಯ ಮಂಡಳಿ ಹಾಗು 144 ಸದಸ್ಯರ ಕೆಳಸದನ ಶಾಸನ ಸಭೆಯಿಂದ ಕೂಡಿತ್ತು.
D. ಭಾರತೀಯರಿಗೆ ಪ್ರಾತಿನಿಧ್ಯ: ಗೌರ್ನರ್ ಜನರಲ್ನ ಕಾರ್ಯಕಾರಿ ಮಂಡಳಿಗೆ ಮೂವರು ಭಾರತೀಯ ಸದಸ್ಯರನ್ನು ನೇಮಿಸಲು ಅವಕಾಶ ನೀಡಿತು.

2. 1935ರ ಭಾರತ ಸರ್ಕಾರ ಕಾಯಿದೆಯ ಲಕ್ಷಣಗಳನ್ನು ವಿವರಿಸಿ?
ಉ: 1919ರ ಭಾರತ ಸರ್ಕಾರದ ಕಾಯಿದೆಯು ಭಾರತೀಯರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಯಿತು. ಹೀಗಾಗಿ ಗಾಂಧೀಜಿ ಅಸಹಕಾರ ಚಳುವಳಿಯನ್ನು ಆರಂಭಿಸಿದರು. ಆಗ ಬ್ರಿಟನ್ ಸರ್ಕಾರವು 1919ರ ಕಾಯಿದೆಯ ಅನುಷ್ಟಾನವನ್ನು ಪರಿಶೀಲಿಸಿ ಹೆಚ್ಚಿನ ಸುಧಾರಣೆಗಳನ್ನು ಸೂಚಿಸಲು ಸೈಮನ್ ಆಯೋಗವನ್ನು ರಚಿಸಿತು. ಇದರ ಶಿಫಾರಸುಗಳನ್ನು ಮೂರು ದುಂಡು ಮೇಜಿನ ಸಭೆಗಳಲ್ಲಿ ಚರ್ಚಿಸಿ ತೀರ್ಮಾನಿಸಲಾದ ಅಂಶಗಳನ್ನು ಒಳಗೊಂಡ ಕಾಯಿದೆಯೇ 1935ರ ಭಾರತ ಸರ್ಕಾರದ ಕಾಯಿದೆ. 321 ವಿಧಿಗಳು ಮತ್ತು 10 ಅನುಸೂಚಿಗಳಿಂದ ಕೂಡಿದ್ದ ಈ ಕಾಯಿದೆಯ ಮುಖ್ಯ ಅಂಶಗಳು ಕೆಳಗಿನಂತಿವೆ.
A ಸಂಯುಕ್ತ ಪದ್ಧತಿಯ ಜಾರಿ: ಈ ಕಾಯಿದೆಯು ಭಾರತದಲ್ಲಿನ ಬ್ರಿಟನ್ ಪ್ರಾಂತ್ಯಗಳು ಮತ್ತು ದೇಶೀಯ ಸಂಸ್ಥಾನಗಳಿಂದ ಕೂಡಿದ ಸಂಯುಕ್ತ ಸರ್ಕಾರ ವ್ಯವಸ್ಥೆಯನ್ನು ಹೊಂದಲು ಅವಕಾಶ ನೀಡಿತು.
B ಅಧಿಕಾರದ ವಿಭಜನೆ: ಈ ಕಾಯಿದೆಯು ಶಾಸನೀಯ ಅಧಿಕಾರಗಳನ್ನು ಕೇಂದ್ರ ಹಾಗು ಪ್ರಾಂತ್ಯ ಶಾಸಕಾಂಗಗಳ ನಡುವೆ ಈ ಕೆಳಗಿನಂತೆ ವಿಂಗಡಿಸಿತು.
ಅ ಕೇಂದ್ರ ಪಟ್ಟಿ: ವಿದೇಶಾಂಗ, ರಕ್ಷಣೆ, ರೈಲ್ವೆ ಮುಂತಾದ 50 ವಿಷಯಗಳು ಕೇಂದ್ರ ಪಟ್ಟಿಯಲ್ಲಿದ್ದು ಇವುಗಳ ಮೇಲೆ ಕಾಯಿದೆ ರಚಿಸುವ ಅಧಿಕಾರವನ್ನು ಕೇಂದ್ರ ಶಾಸಕಾಂಗ ಪಡೆಯಿತು.
ಆ ಪ್ರಾಂತ್ಯ ಪಟ್ಟಿ: ಶಿಕ್ಷಣ, ಪೋಲಿಸ್ ಮುಂತಾದ 54 ವಿಷಯಗಳು ಪ್ರಾಂತ್ಯ ಪಟ್ಟಿಯಲ್ಲಿದ್ದು ಇವುಗಳ ಮೇಲೆ ಕಾಯಿದೆ ರಚಿಸುವ ಅಧಿಕಾರವನ್ನು ಪ್ರಾಂತ್ಯಗಳ ಶಾಸಕಾಂಗಗಳು ಪಡೆದವು.
ಇ ಸಮವರ್ತಿ ಪಟ್ಟಿ: ವಿವಾಹ, ವಿಚ್ಚೇಧನ, ನಾಗರಿಕ ಪ್ರಕ್ರಿಯೆ ಮುಂತಾದ 34 ವಿಷಯಗಳು ಸಮವರ್ತಿ ಪಟ್ಟಿಯಲ್ಲಿದ್ದು ಇವುಗಳ ಮೇಲೆ ಕಾಯಿದೆ ರಚಿಸುವ ಅಧಿಕಾರವನ್ನು ಕೇಂದ್ರ ಹಾಗು ಪ್ರಾಂತ್ಯ ಶಾಸಕಾಂಗಗಳು ಪಡೆದವು.
ಈ ಶೇಷಾಧಿಕಾರಗಳು: ಮೇಲಿನ ಮೂರು ಪಟ್ಟಿಗೆ ಸೇರದ ಉಳಿಕೆ ವಿಷಯಗಳ ಮೇಲೆ ಕಾಯಿದೆ ರಚಿಸುವ ಅಧಿಕಾರ ಭಾರತದ ಗೌರ್ನರ್ ಜನರಲ್ಗೆ ಸೇರಿತು.
C ಕೇಂದ್ರದಲ್ಲಿ ದ್ವೀ ಸರ್ಕಾರದ ಜಾರಿ: ಈ ಕಾಯಿದೆಯು ಪ್ರಾಂತ್ಯಗಳಲ್ಲಿದ್ದ ದ್ವೀ ಸರ್ಕಾರವನ್ನು ರದ್ದುಗೊಳಿಸಿ ಕೇಂದ್ರದಲ್ಲಿ ಜಾರಿಗೊಳಿಸಿತು. ಇದರಿಂದ ಗೌರ್ನರ್ ಜನರಲ್ ಯುರೋಪಿಯನ್ ಮಂತ್ರಿಗಳ ನೆರವಿನಿಂದ ಮೀಸಲು ವಿಷಯಗಳನ್ನು ಮತ್ತು ಭಾರತೀಯ ಮಂತ್ರಿಗಳ ನೆರವಿನಿಂದ ವರ್ಗಾಯಿತ ವಿಷಯಗಳನ್ನು ನೋಡಿಕೊಳ್ಳಬೇಕಾಯಿತು.
D ದ್ವೀ ಸದನ ಶಾಸಕಾಂಗಕ್ಕೆ ಅವಕಾಶ: ಈ ಕಾಯಿದೆಯಂತೆ ಕೇಂದ್ರ ಶಾಸಕಾಂಗ ಎರಡು ಸದನಗಳಿಂದ ಕೂಡಿತು. ರಾಜ್ಯಗಳ ಮಂಡಳಿ ಮೇಲ್ಸದನವಾಗಿದ್ದು 260 ಸದಸ್ಯರಿಂದ ಕೂಡಿತ್ತು. ಇದರಲ್ಲಿ 156 ಸದಸ್ಯರು ಬ್ರಿಟಿಷ್ ಪ್ರಾಂತ್ಯಗಳಿಂದ ಹಾಗು 104 ಸದಸ್ಯರು ದೇಶೀಯ ಸಂಸ್ಥಾನಗಳಿಂದ ನಾಮಕರಣಗೊಳ್ಳುತ್ತಿದ್ದರು. ಫೆಡರಲ್ ಅಸೆಮ್ಲಿಯು ಕೆಳ ಸದನವಾಗಿದ್ದು 375 ಸದಸ್ಯರಿಂದ ಕೂಡಿತ್ತು. ಇದರಲ್ಲಿ 250ಸದಸ್ಯರು ಬ್ರಿಟಿಷ್ ಪ್ರಾಂತ್ಯಗಳಿಂದ ಹಾಗು 125 ಸದಸ್ಯರು ದೇಶೀಯ ಸಂಸ್ಥಾನಗಳಿಂದ ಆಯ್ಕೆಯಾಗುತ್ತಿದ್ದರು.
E ಫೆಡರಲ್ ನ್ಯಾಯಾಲಯದ ಸ್ಥಾಪನೆ: ಈ ಕಾಯಿದೆ ಇಂದಿನ ಸರ್ವೋಚ್ಚ ನ್ಯಾಯಾಲಯಕ್ಕೆ ಸಮನಾದ ಫೆಡರಲ್ ನ್ಯಾಯಾಲಯವನ್ನು ದೆಹಲಿಯಲ್ಲಿ ಸ್ಥಾಪಿಸಿತು.
F ಪ್ರಾಂತ್ಯಗಳಿಗೆ ಸ್ವಾಯತ್ತತೆ: ಈ ಕಾಯಿದೆ ಕೇಂದ್ರದ ಹಿಡಿತದಿಂದ ಪ್ರಾಂತ್ಯಗಳಿಗೆ ಸ್ವಾತಂತ್ರ್ಯ ನೀಡಿತು. ಇದರಿಂದ ಪ್ರಾಂತ್ಯಗಳು ತಮಗೆ ಸರಿತೋರಿದ ತೀರ್ಮಾನಗಳನ್ನು ಕೈಗೊಳ್ಳುವಂತಾಯಿತು.

ಒಟ್ಟಿನಲ್ಲಿ ಭಾರತದ ರಾಜಕೀಯ ಇತಿಹಾಸದಲ್ಲಿ 1935ರ ಕಾಯಿದೆ ಮಹತ್ವದ ಮೈಲಿಗಲ್ಲು. ಇಂದಿನ ನಮ್ಮ ಸಂವಿಧಾನಕ್ಕೆ ಈ ಕಾಯಿದೆ ತಳಹದಿಯಾಗಿದೆ. ಈ ಕಾಯಿದೆಯಲ್ಲಿ ಸೂಚಿಸಲಾದ ಫೆಡರಲ್ ವ್ಯವಸ್ಥೆಯಾಗಲಿ ಪ್ರಾಂತ್ಯಗಳ ಸ್ವಾಯತ್ತತೆಯಾಗಲಿ ಕಾರ್ಯರೂಪಕ್ಕೆ ಬರಲಿಲ್ಲ. ಜೊತೆಗೆ ಡೊಮ್ಇನಿಯನ್ ಸ್ಥಾನಮಾನವೂ ದೊರಕಲಿಲ್ಲ. ಹೀಗಾಗಿ ಭಾರತೀಯರ ಅಸಮಧಾನ ಮುಂದುವರೆಯಿತು.

3. 1947ರ ಭಾರತ ಸ್ವತಂತ್ರ ಕಾಯಿದೆಯ ಪ್ರಮುಖ ಅಂಶಗಳನ್ನು ವಿವರಿಸಿ?
ಉ: ಎರಡನೆಯ ಮಹಾಯುದ್ಧ ನಡೆದಾಗ ಬ್ರಿಟನ್ ಸರ್ಕಾರ ಭಾರತೀಯರ ಬೆಂಬಲ ಪಡೆಯಲು ಕ್ರಿಪ್ಸ್ ಆಯೋಗವನ್ನು ಕಳುಹಿಸಿತು. ಈ ಆಯೋಗ ನೀಡಿದ ಡೊಮಿನಿಯನ್ ಸ್ಥಾನಮಾನ ಹಾಗು ಸಂವಿಧಾನ ರಚನೆಯ ಭರವಸೆಯನ್ನು ಭಾರತೀಯರು ಒಪ್ಪದೇ 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದರು. ಈ ನಡುವೆ ಇಂಗ್ಲೆಂಡಿನಲ್ಲಿ ಚುನಾವಣೆಗಳು ಜರುಗಿ ಲೇಬರ್ ಪಕ್ಷದ ಆಟ್ಲಿ ಪ್ರಧಾನಿಯಾದ. ಆತ ಕಳುಹಿಸಿದ ಕ್ಯಾಬಿನೆಟ್ ಆಯೋಗ ಸ್ವಾತಂತ್ರ್ಯ ನೀಡಲು ಒಪ್ಪಿದರೆ ಭಾರತದ ವಿಭಜನೆಗೆ ಒಪ್ಪಲಿಲ್ಲ. ಇದರಿಂದ ಮುಸ್ಲಿಮ್ ಲೀಗ್ ಅಸಮಧಾನಗೊಂಡಿತು. ಕೊನೆಗೆ ಮೌಂಟ್ ಬ್ಯಾಟನ್ ಯೋಜನೆಯಂತೆ 1947ರ ಭಾರತ ಸ್ವತಂತ್ರ ಕಾಯಿದೆ ಜಾರಿಗೊಂಡು ಎಲ್ಲ ವಿವಾದಗಳಿಗೂ ಪರಿಹಾರ ನೀಡಿತು. ಭಾರತ ಸ್ವತಂತ್ರ ಕಾಯಿದೆಯ ಮುಖ್ಯ ಅಂಶಗಳೆಂದರೆ
A. 15 ಆಗಸ್ಟ್ 1947ರಂದು ಭಾರತ ಮತ್ತು ಪಾಕಿಸ್ಥಾನ ಎಂಬ ಎರಡು ದೇಶಗಳು ಉದಯವಾದವು.
B. ಈ ಕಾಯಿದೆಯಂತೆ ಪೂರ್ವ ಬಂಗಾಳ, ಪಶ್ಚಿಮ ಪಂಜಾಬ್, ಸಿಂಧ್, ಬಲೂಚಿಸ್ಥಾನ, ವಾಯುವ್ಯ ಗಡಿ ಪ್ರಾಂತ್ಯ ಮತ್ತು ಅಸ್ಸಾಮ್ನ್ಅ ಸಿಲಹಟ್ ಜಿಲ್ಲೆ ಪಾಕಿಸ್ತಾನಕ್ಕೆ ಹಾಗು ಉಳಿದ ಬ್ರಿಟಿಷ್ ಪ್ರಾಂತ್ಯಗಳು ಭಾರತಕ್ಕೆ ಸೇರಿದವು. ದೇಶೀಯ ಸಂಸ್ಥಾನಗಳು ಸ್ವತಂತ್ರವಾಗಿರಲು, ಭಾರತ ಅಥವ ಪಾಕಿಸ್ತಾನಕ್ಕೆ ಸೇರಲು ಅವಕಾಶ ಪಡೆದವು.
C. ಭಾರತದ ಮೇಲಿನ ಬ್ರಿಟನ್ ಚಕ್ರವರ್ತಿಯ ಪರಮಾಧಿಕಾರ ಕೊನೆಗೊಂಡಿತು.
.
D. ಭಾರತದ ಗೌರ್ನರ್ ಜನರಲ್ ಮತ್ತು ಪ್ರಾಂತ್ಯಗಳ ಗೌರ್ನರ್ಗಳು ಕೇವಲ ನಾಮಮಾತ್ರ ಮುಖ್ಯಸ್ಥರಾಗಿದ್ದು ಕಾನೂನು ಮಾಡುವ ಅಧಿಕಾರ ಕಳೆದುಕೊಂಡರು.
E. ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಹುದ್ದೆ ರದ್ದಾಯಿತು.
F. 15 ಆಗಸ್ಟ್ 1947ರ ಮೊದಲು ಬ್ರಿಟಿಷ್ ಚಕ್ರಾಧಿಪತ್ಯ ಭಾರತದ ಪ್ರದೇಶದ ಮೇಲೆ ಹೊಂದಿದ್ದ ಅಧಿಕಾರವೆಲ್ಲ ರದ್ದಾದವು.
G. 17ಆಗಸ್ಟ್ 1947ರಿಂದ ಸಂವಿಧಾನ ರಚನಾ ಸಭೆಯು ಭಾರತದ ಶಾಸಕಾಂಗವಾಯಿತು.
ಒಟ್ಟಿನಲ್ಲಿ ಈ ಕಾಯಿದೆಯಂತೆ ಭಾರತಕ್ಕೆ ಸ್ವಾತಂತ್ರ್ಯ ದೊರೆತರೂ ಅನೇಕ ಗೊಂದಲಗಳು ಮುಂದುವರೆದವು. ದೇಶದ ಏಕೀಕರಣಕ್ಕೆ ಇದರಿಂದ ಪರಿಹಾರ ದೊರೆಯಲಿಲ್ಲ.

4. ಪ್ರಥಮ ಸಾರ್ವತ್ರಿಕ ಚುನಾವಣೆಯನ್ನು ಕುರಿತು ಟಿಪ್ಪಣಿ ಬರೆಯಿರಿ?
ಉ: 26 ಜನೇವರಿ 1950ರಂದು ಸಂವಿಧಾನ ಜಾರಿಗೊಂಡು ಭಾರತ ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಜೊತೆಗೆ ಪ್ರಥಮ ಸಾರ್ವತ್ರಿಕ ಚುನಾವಣೆಯು ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯಂತೆ ಅಕ್ಟೋಬರ್ 1951 ರಿಂದ ಫ಼ೇಬ್ರವರಿ 1952ರವರೆಗೆ ಜರುಗಿದವು. ಈ ಮೂಲಕ ಸಂವಿಧಾನ ರಚನಾಕಾರರ ಕನಸಿನಂತೆ ಭಾರತದ ಪ್ರಜೆಗಳು ಪ್ರಭುಗಳಾದರು. ಈ ಪ್ರಥಮ ಚುನಾವಣೆಭಾರತವನ್ನು ಅತಿ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರ ಎನಿಸಿತು.
ಚುನಾವಣೆಯ ಮುಖ್ಯಾಂಶಗಳು:
A. ಚುನಾವಣೆ ನಡೆದ ಒಟ್ಟು ಲೋಕಸಭಾ ಸ್ಥಾನಗಳ ಸಂಖೆ 489.
B. ಒಟ್ಟು ಮತಗಟ್ಟೆಗಳ ಸಂಖೆ 2,24,000.
C. ಮತ ನೀಡಲು ಅವಕಾಶ ಪಡೆದ ಮತದಾರರ ಸಂಖೆ 1.76 ಮಿಲಿಯನ್.
D. ಭಾಗವಹಿಸಿದ್ದ ರಾಜಕೀಯ ಪಕ್ಷಗಳ ಸಂಖೆ 70.
E. ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳ ಸಂಖೆ 1800.
ಫಲಿತಾಂಶ ಮತ್ತು ಪಕ್ಷಗಳ ಸ್ಥಾನ:

A. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸು:ಶೇವಾರು ಮತದಾನ 45:ಸ್ಥಾನಗಳು 364.
B. ಭಾರತೀಯ ಕಮ್ಯುನಿಷ್ಟ್ ಪಕ್ಷ:ಶೇವಾರು ಮತದಾನ 3.29:ಸ್ಥಾನಗಳು 16.
C. ಭಾರತೀಯ ಜನಸಂಘ:ಶೇವಾರು ಮತದಾನ 3.06:ಸ್ಥಾನಗಳು 3.
D ಅಖಿಲ ಭಾರತೀಯ ಹಿಂದೂ ಮಹಾ ಸಭಾ:ಶೇವಾರು ಮತದಾನ 0.95:ಸ್ಥಾನಗಳು 4.
E ಪರಿಶಿಷ್ಟ ಜಾತಿಗಳ ಒಕ್ಕೂಟ:ಶೇವಾರು ಮತದಾನ 2.38:ಸ್ಥಾನಗಳು 2.

ಒಟ್ಟಿನಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯು ಶಾಂತಿಯುತವಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನ ಪಡೆಯಿತು. ಸಂವಿಧಾನ ರಚನಾ ಸಭೆಯ ಬಹುತೇಕ ಸದಸ್ಯರು ಈ ಚುನಾವಣೆಯಲ್ಲಿ ಚುನಾಯಿತರಾದರು. ವಿಷಾದದ ಸಂಗತಿ ಎಂದರೆ ಅಂಬೇಡ್ಕರ್ ಮುಂಬೈನಲ್ಲಿ ಸೋತರು. ಈ ಚುನಾವಣೆ ಭಾರತೀಯರ ರಾಜಕೀಯ ಜಾಗ್ರುತಿಯನ್ನು ಸಾಬೀತು ಪಡಿಸಿತು.

5. ಮಧ್ಯಂತರ ಸರ್ಕಾರದ ರಚನೆ ಕುರಿತು ಟಿಪ್ಪಣಿ ಬರೆಯಿರಿ?
ಉ: ಕ್ಯಾಬಿನೆಟ್ ಆಯೋಗದ ಶಿಫಾರಸಿನಂತೆ ಮಧ್ಯಂತರ ಸರ್ಕಾರವು 2 ಸೆಪ್ಟಂಬರ್ 1946ರಂದು ಭಾರತದಲ್ಲಿ ಅಸ್ತಿತ್ವಕ್ಕೆ ಬಂದಿತು. ಸಂವಿಧಾನ ರಚನಾ ಸಭೆಯಲ್ಲಿದ್ದ ಸರ್ವ ಪಕ್ಷಗಳ ಸದಸ್ಯರಿಂದ  ಮಧ್ಯಂತರ ಸರ್ಕಾರವು ರಚೆನೆಗೊಂಡಿತು. ವೈಸರಾಯ್ನ ಕಾರ್ಯಕಾರಿ ಮಂಡಳಿಯು ಮಧ್ಯಂತರ ಸರ್ಕಾರದ ಮಂತ್ರಿ ಮಂಡಲವಾಗಿದ್ದು ಉಪಾಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರು ಪ್ರಧಾನಿ ಎನಿಸಿದರು. ಆರಂಭದಲ್ಲಿ ಮಧ್ಯಂತರ ಸರ್ಕಾರ ಸೇರಲು ನಿರಾಕರಿಸಿದ್ದ ಮುಸ್ಲೀಮ್ ಲೀಗ್ ಅಕ್ಟೋಬರ್ 1946ರಲ್ಲಿ ಸರ್ಕಾರವನ್ನು ಸೇರಿತು. ಭಾರತಕ್ಕೆ 15 ಆಗಸ್ಟ್ 1947ರಂದು ಸ್ವಾತಂತ್ರ್ಯ ದೊರೆಯುವವರೆಗೆ ಮಧ್ಯಂತರ ಸರ್ಕಾರ ಜಾರಿಯಲ್ಲಿತ್ತು. ಈ ಸರ್ಕಾರದಲ್ಲಿದ್ದ ಪ್ರಮುಖ ನಾಯಕರು ಮತ್ತು ಹುದ್ದೆಗಳು ಕೆಳಗಿನಂತಿವೆ.
* ಜವಾಹರಲಾಲ್ ನೆಹರು::ಪ್ರಧಾನ ಮಂತ್ರಿ
* ಸರ್ದಾರ್ ಪಟೇಲ್::ಉಪ ಪ್ರಧಾನಿ ಹಾಗು ಗ್ರುಹ ಮಂತ್ರಿ
* ರಾಜೇಂದ್ರ ಪ್ರಸಾದ್::ಕ್ರುಷಿ ಮತ್ತು ಆಹಾರ ಮಂತ್ರಿ [ನಂತರ ಪಿ. ದೇಶ್ಮುಕ್]
* ಜಗಜೀವನರಾಮ್::ಕಾರ್ಮಿಕ ಮಂತ್ರಿ
* ಸರ್ದಾರ್ ಬಲದೇವ್ಸಿಂಗ್::ರಕ್ಷಣಾ ಮಂತ್ರಿ
* ಸಿ. ಎಚ್. ಬಾಬಾ::ಗಣಿ ಮತ್ತು ಇಂಧನ ಮಂತ್ರಿ
* ಲಿಯಾಕ್ವತ್ ಅಲಿಖಾನ್::ಹಣಕಾಸು ಮಂತ್ರಿ [ನಂತರ ಶಣ್ಮುಗಂ ಚಟ್ಟಿ]
* ಅಸಫ್ ಅಲಿ::ರೈಲ್ವೇ ಮತ್ತು ಸಾರಿಗೆ ಮಂತ್ರಿ [ನಂತರ ಜಾನ್ ಮಥಾಯ್]
* ಘಜ್ನಫರ್ ಅಲಿಖಾನ್::ಆರೋಗ್ಯ ಮಂತ್ರಿ [ನಂತರರಾಜಕುಮಾರಿ ಅಮ್ರುತಾ ಕೌರ್]
* ಸಿ. ರಾಜಗೋಪಾಲಾಚಾರಿ::ಶಿಕ್ಷಣ ಹಾಗು ಕಲೆ ಮಂತ್ರಿ [ನಂತರ ಮೌಲಾನಾ ಆಜಾದ್]

ಒಟ್ಟಿನಲ್ಲಿ 15 ಆಗಸ್ಟ್ 1947ರವರೆಗೆ ಜಾರಿಯಲ್ಲಿದ್ದ ಮಧ್ಯಂತರ ಸರ್ಕಾರ ಬ್ರಿಟಿಷರ ಅಧಿನವಿದ್ದರೂ ಅಮೇರಿಕ ಸೇರಿದಂತೆ ಹಲವು ದೇಶಗಳೊಡನೆ ಸಂಬಂಧ ಬೆಳೆಸಲು ಪ್ರಯತ್ನಿಸಿತು. 1952ರಲ್ಲಿ ಮೊದಲ ಚುನಾಯಿತ ಸರ್ಕಾರ ಸ್ಥಾಪನೆಯಾಗುವವರೆಗೆ ಮಧ್ಯಂತರ ಸರ್ಕಾರ ಕೆಲವು ಬದಲಾವಣೆಯೊಂದಿಗೆ ಹಂಗಾಮಿ ಸರ್ಕಾರ ಎನಿಸಿಕೊಂಡು ಆಡಳಿತ ನಡೆಸಿತು.

6. ಭಾರತ ಒಕ್ಕೂಟಕ್ಕೆ ಜುನಾಗಡ, ಹೈದರಾಬಾದ್ ಮತ್ತು ಜಮ್ಮು ಕಾಶ್ಮೀರಗಳ ವಿಲೀನವನ್ನು ವಿವರಿಸಿ?
ಉ: ಸರದಾರ್ ಪಟೇಲ್ ಇನ್ಸ್ಟ್ರುಮೆಂಟ್ ಆಫ಼್ ಅಕ್ಸೆಶನ್ ಮೂಲಕ ಭಾರತದ ಬಹುತೇಕ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಒಳಪಡಿಸಿದರು. ಆದರೆ ಈ ಕೆಳಗಿನ ಮೂರು ರಾಜ್ಯಗಳು ಭಾರತಕ್ಕೆ ಸೇರಲು ನಿರಾಕರಿಸಿದವು. ಕೊನೆಗೆ ನಾನಾ ಕಾರಣಗಳಿಂದ ಈ ಕೆಳಗಿನ ಸಂಸ್ಥಾನಗಳು ಭಾರತಕ್ಕೆ ಒಳಪಟ್ಟವು.

ಜುನಾಗಡ: ಜುನಾಗಡವನ್ನು ಒಬ್ಬ ನವಾಬ ಆಳುತ್ತಿದ್ದನು. ಆತ ಜುನಾಗಡವನ್ನು ಪಾಕಿಸ್ತಾನಕ್ಕೆ ಸೇರಿಸಲು ತೀರ್ಮಾನಿಸಿದ್ದನು. ಆದರೆ ಜುನಾಗಡದ ಜನರು ಭಾರತಕ್ಕೆ ಸೇರಲು ಬಯಸಿದರು. ನವಾಬನ ತೀರ್ಮಾನದ ವಿರುದ್ಧ ಜನರು ಧಂಗೆ ಎದ್ದರು. ಆಗ ನವಾಬ ಪಾಕಿಸ್ತಾನಕ್ಕೆ ಓಡಿ ಹೋದನು. ಕೊನೆಗೆ ಜನರು ಮತ ನೀಡುವ ಮೂಲಕ ಭಾರತಕ್ಕೆ ಸೇರಲು ಜನಮತ ಗಣನೆಯಲ್ಲಿ ನಿರ್ಧರಿಸಿದಾಗ ಜುನಾಗಡ ಭಾರತ ಒಕ್ಕೂಟಕ್ಕೆ ಸೇರಿತು.

ಹೈದರಾಬಾದ್: ಹೈದರಾಬಾದ್ ದೇಶೀಯ ಸಂಸ್ಥಾನಗಳಲ್ಲಿಯೇ ಅತ್ಯಂತ ದೊಡ್ಡದಾಗಿತ್ತು. ಇದನ್ನು ನಿಜಾಮನು ಆಳುತ್ತಿದ್ದನು. ಭಾರತ ಸರ್ಕಾರದೊಡನೆ ನವೆಂಬರ್ 1947ರಲ್ಲಿ ಒಪ್ಪಂದ ಮಾಡಿಕೊಂಡ ನಿಜಾಮ 1947 ಆಗಸ್ಟ್ 15ರ ಮೊದಲಿನಂತೆ ಸ್ವತಂತ್ರವಾಗಿ ಆಡಳಿತ ನಡೆಸಲು ನಿರ್ಧರಿಸಿದ. ಆದರೆ ನಿಜಾಮನ ದುರಾಡಳಿತದಿಂದ ಹೈದರಾಬಾದ್ ಜನರು ಬೇಸತ್ತಿದ್ದರು. ರೈತರು ಹಾಗು ಮಹಿಳೆಯರು ನಿಜಾಮನ ವಿರುದ್ಧ ಚಳುವಳಿ ನಡೆಸಿದರು. ಈ ಜನರ ಹೋರಾಟಗಳನ್ನು ತಡೆಯಲು ರಜಾಕರು ಎಂಬ ಅರೆ ಸೈನಿಕ ಪಡೆಯನ್ನು ನಿಜಾಮ ಸ್ಥಾಪಿಸಿದನು ರಜಾಕರು ಮುಸ್ಲಿಮೇತರ ಮಹಿಳೆಯರನ್ನು ಹಿಂಸಿಸಿದರು. ಜೊತೆಗೆ ಹಿಂದುಗಳ ಆಸ್ತಿಪಾಸ್ತಿಯನ್ನು ರಜಾಕರು ನಾಶಗೊಳಿಸಿದರು. ಅಲ್ಲದೇ ಕಾಂಗ್ರೆಸ್ಸು ಹಾಗು ಕಮ್ಯುನಿಷ್ಟ್ ಪಕ್ಷಗಳು ನಿಜಾಮನ ಆಡಳಿತ ಅಂತ್ಯಗೊಳಿಸಿ ಭಾರತ ಸೇರಲು ಪ್ರಯತ್ನಿಸಿದವು. ಈ ನಡುವೆ ನಿಜಾಮ ವಿದೇಶಗಳಿಂದ ಶಸ್ತ್ರಾಸ್ತ್ರ ಪಡೆದು ಭಾರತ ಸರ್ಕಾರದೊಡನೆ ಯುದ್ಧಕ್ಕೆ ಸಿದ್ಧತೆ ನಡೆಸಿದನು. ಕೊನೆಗೆ ಹೈದರಾಬಾದಿನ ಪರಿಸ್ಥಿತಿ ಭಾರತದ ಭದ್ರತೆಗೆ ಆತಂಕವೆಂದು ಭಾವಿಸಿದ ಪಟೇಲ್ 1948ರ ಸೆಪ್ಟೆಂಬರ್ 13 ರಿಂದ 17 ರವರೆಗೆ ಸೈನಿಕ ಕಾರ್ಯಾಚರಣೆ ನಡೆಸಿ ಹೈದರಾಬಾದನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು. ಹೈದರಾಬಾದ್ ಮೇಲೆ ಕೈಗೊಂಡ ಈ ಪೋಲಿಸ್ ಕಾರ್ಯಾಚರಣೆಯನ್ನು ಆಪರೇಷನ್ ಪೋಲೊ   ಎನ್ನುವರು. ಇಂದಿಗೂ ಸೆಪ್ಟೆಂಬರ್ 17 ರಂದು ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ.

ಜಮ್ಮು ಕಾಶ್ಮೀರ: ಕಾಶ್ಮೀರದ ರಾಜ ಹರಿಸಿಂಗ್ ಹಿಂದೂ ಜನಾಂಗಕ್ಕೆ ಸೇರಿದ್ದರೆ ಬಹುತೇಕ ಜನರು ಮುಸ್ಲಿಮರಾಗಿದ್ದರು. ಕಾಶ್ಮೀರದ ಜನರು ಭಾರತ ಅಥವ ಪಾಕಿಸ್ತಾನಕ್ಕೆ ಸೇರಲು ಬಯಸದೇ ಸ್ವತಂತ್ರವಾಗಿರಲು ಬಯಸಿದರು. ರಾಷ್ಟ್ರೀಯ ಸಮ್ಮೇಳನ ಪಕ್ಷದ ನೆರವಿನಿಂದ ಹರಿಸಿಂಗನ ಆಡಳಿತ ಕೊನೆಗೊಳಿಸಲು ಚಳುವಳಿ ನಡೆಸಿದರು. ಈ ಸಮಯದಲ್ಲಿ ಪಾಕಿಸ್ತಾನ ಕಾಶ್ಮೀರದ ಮುಸ್ಲಿಮರ ಸಂಖೆ ಹಾಗು ಭೌಗೋಳಿಕ ಸಾಮಿಪ್ಯದ ಹಿನ್ನೆಲೆಯಲ್ಲಿ ಕಾಶ್ಮೀರವನ್ನು ಅಕ್ಟೋಬರ್ 1947ರಲ್ಲಿ ಆಕ್ರಮಿಸಲು ಮುಂದಾಯಿತು.

ಕಾಶ್ಮೀರದ ರಾಜ ಹರಿಸಿಂಗ್ ಮತ್ತು ರಾಷ್ಟ್ರೀಯ ಸಮ್ಮೇಳನ ಪಕ್ಷದ ಶೇಕ್ ಅಬ್ದುಲ್ಲಾ ಆಕ್ರಮಣದಿಂದ ಕಾಶ್ಮೀರವನ್ನು ರಕ್ಷಿಸುವಂತೆ ಭಾರತವನ್ನು ಕೇಳಿಕೊಂಡರು. ಆಗ ವಿಲೀನವಾಗದ ಹೊರತು ಸೈನಿಕ ನೆರವು ಅಸಾಧ್ಯವೆಂದು ಭಾರತ ತಿಳಿಸಿತು. ಹೀಗಾಗಿ 26 ಅಕ್ಟೋಬರ್ 1947ರಂದು ಹರಿಸಿಂಗ್ ಮತ್ತು ಶೇಕ್ ಅಬ್ದುಲ್ಲಾ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದರು. ಕೂಡಲೇ ಭಾರತದ ಸೈನ್ಯ ಕಾಶ್ಮೀರವನ್ನು ತಲುಪಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸತೊಡಗಿತು. ಆಗ ಪಾಕ್ ಭಾರತದ ವಿರುದ್ಧ ವಿಶ್ವ ಸಂಸ್ಥೆಗೆ ದೂರು ನೀಡಿತು. ಭದ್ರತಾ ಮಂಡಳಿಯ ಸೂಚನೆಯಂತೆ ಯುದ್ಧ ನಿಂತಾಗ ಮೂರನೆಯ ಒಂದು ಭಾಗದಷ್ಟು ಕಾಶ್ಮೀರವು ಪಾಕಿಸ್ತಾನದ ಹಿಡಿತದಲ್ಲಿ ಉಳಿಯಿತು. ಇದನ್ನು P.O.K ಎನ್ನಲಾಗುತ್ತದೆ. 1950ರಲ್ಲಿ ಭದ್ರತಾ ಮಂಡಳಿ ಭಾರತ ಮತ್ತು ಪಾಕ್ ನಡುವಿನ ಕಾಶ್ಮೀರ ಬಿಕ್ಕಟ್ಟನ್ನು ಬಗೆ ಹರಿಸಲು ಒವನ್ ಡಿಕ್ಸನ್ ಎಂಬಾತನನ್ನು ನೇಮಿಸಿದರೂ ವಿವಾದ ಪರಿಹಾರವಾಗಲಿಲ್ಲ. ಅಂದಿನಿಂದ ಇಂದಿನವರೆಗೆ ಕಾಶ್ಮೀರದ ಬಿಕ್ಕಟ್ಟು ಮುಂದುವರೆದುಕೊಂಡು ಬಂದಿದೆ.

ಭಾರತ ಸಂವಿಧಾನ ಸಭೆಯು ಕಾಶ್ಮೀರಕ್ಕೆ ಸಂವಿಧಾನದ 370 ವಿಧಿಯ ಮೂಲಕ ಕೆಲ ವಿಶೇಷ ಅವಕಾಶಗಳನ್ನು ನೀಡಿತು. ಅದರಂತೆ 1951ರಲ್ಲಿ ಕಾಶ್ಮೀರ ಸಂವಿಧಾನ ರಚನಾ ಸಭೆ ರಚನೆಗೊಂಡು 1954ರಲ್ಲಿ ಭಾರತದ ಜೊತೆಗಿನ ವಿಲೀನ ಒಪ್ಪಂದವನ್ನು ಬೆಂಬಲಿಸಿತು. ಅಲ್ಲದೇ ನವೆಂಬರ್ 1956ರಲ್ಲಿ ಕಾಶ್ಮೀರ ಸಂವಿಧಾನ ಜಾರಿಗೊಂಡು ಭಾರತದ ಭಾಗವಾಯಿತು. 1965 ಮತ್ತು 1971ರಲ್ಲಿ ಭಾರತ ಮತ್ತು ಪಾಕ್ ನಡುವೆ ಕಾಶ್ಮೀರಕ್ಕಾಗಿ ಯುದ್ಧ ಜರುಗಿದವು. ಇಂದಿರಾಗಾಂಧಿ ಹಾಗು ಶೇಕ್ ಅಬ್ದುಲ್ಲಾ ಒಪ್ಪಂದದಂತೆ 1975ರಿಂದ ಕಾಶ್ಮೀರದ ಪ್ರಧಾನಿ ಹುದ್ದೆಯನ್ನು ಮುಖ್ಯಮಂತ್ರಿ ಎಂದು ಕರೆಯಲಾಯಿತು. 1990ರಿಂದ ಪ್ರತ್ಯೇಕ ಕಾಶ್ಮೀರಕ್ಕಾಗಿ ಅಲ್ಲಿ ಉಗ್ರಗಾಮಿಗಳು ಹಿಂಸಾಚಾರ ನಡೆಸಿದ್ದರಿಂದ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. 1999ರಲ್ಲಿ ಪಾಕ್ಇಸ್ತಾನವನ್ನು ಕಾರ್ಗಿಲ್ ಯುದ್ಧದಲ್ಲಿ ಭಾರತ ಸೋಲಿಸಿತು. 2002ರಿಂದ ಚುನಾವಣೆಗಳು ಜರುಗಿ ಪ್ರಜಾಪರ ಆಡಳಿತ ಜರುಗುತ್ತಿದೆ. ಇಂದಿಗೂ ಕಾಶ್ಮೀರ ವಿವಾದ ಜೀವಂತವಾಗಿರುವುದು ಆತಂಕದ ವಿಚಾರ.

7. ಭಾರತದಲ್ಲಿ ಭಾಷಾಧಾರಿತ ರಾಜ್ಯಗಳ ಪುನರ್ ವಿಂಗಡಣೆಯನ್ನು ಸಮರ್ಥಿಸಿರಿ ಅಥವ ಭಾರತದಲ್ಲಿ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ಪುನರ್ವಿಂಗಡಣೆಗೆ ಕಾರಣಗಳನ್ನು ವಿವರಿಸಿ?
ಉ: ಮೋತಿಲಾಲ್ ನೆಹರು ವರದಿಯು ಒಂದು ಪ್ರಾಂತ್ಯ ಸಾಕ್ಷರತೆ ಸಾಧಿಸಲು ಹಾಗು ದಿನನಿತ್ಯದ ಆಡಳಿತವನ್ನು ಉತ್ತಮವಾಗಿ ನಡೆಸಲು ಭಾಷೆಯ ಪಾತ್ರ ಅಪಾರವೆಂದು ಬಹಳ ಹಿಂದೆಯೇ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಹಲವೆಡೆ ಭಾಷಾಧಾರಿತ ರಾಜ್ಯಗಳ ಸ್ಥಾಪನೆಗೆ ಹೋರಾಟಗಳು ಜರುಗಿದವು. ಕೆಳಗಿನ ಅಂಶಗಳು ರಾಜ್ಯಗಳ ರಚನೆ ಭಾಷಾಧಾರದ ಮೇಲೆ ಆಗಬೇಕೆನ್ನುವುದನ್ನು ಸಮರ್ಥಿಸುತ್ತವೆ.
A. ಭಾಷೆ ಒಂದು ಪ್ರದೇಶದ ಸಂಸ್ಕ್ರುತಿ ಹಾಗು ಸಂಪ್ರದಾಯಗಳೊಡನೆ ನಿಕಟವಾಗಿರುತ್ತದೆ.
B. ಮಾತ್ರು ಭಾಷೆಯಲ್ಲಿ ಸರಳವಾಗಿ ಶಿಕ್ಷಣ ಪಡೆದು ಸಾಕ್ಷರರಾಗಬಹುದು.
C. ಜನರ ಭಾಷೆಯಲ್ಲಿ ರಾಜಕಾರಣ ಹಾಗು ಆಡಳಿತ ನಡೆದರೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದು.
D. ಶಿಕ್ಷಣ, ನ್ಯಾಯದಾನ ಮುಂತಾದವನ್ನು ಭಾಷಾಧಾರದ ರಾಜ್ಯಗಳಲ್ಲಿ ಸರ್ವರಿಗೂ ನೀಡಬಹುದು.
E. ಏಕ ಭಾಷೆಯ ರಾಜ್ಯ ಜನರ ಸಹಕಾರದಿಂದ ಪ್ರಗತಿ ಹೊಂದಬಹುದು.

ಈ ಮೇಲಿನ ಕಾರಣಗಳಿಂದ ಭಾರತ ಸ್ವಾತಂತ್ರ್ಯ ಗಳಿಸಿದ ಕೆಲವೇ ವರ್ಷಗಳಲ್ಲಿ ಭಾಷಾಧಾರಿತ ರಾಜ್ಯಗಳಿಗೆ ಹೋರಾಟ ಹೆಚ್ಚಾದವು. ದೇಶದ ಏಕತೆಗೆ ಆತಂಕವನ್ನು ಅನೇಕ ಸಮೀತಿಗಳು ಸೂಚಿಸಿದರೂ ಹೋರಾಟಕ್ಕೆ ಮಣಿದ ಭಾರತ ಸರ್ಕಾರ 1956ರಲ್ಲಿ ರಾಜ್ಯಗಳ ಪುನರ್ವಿಂಗಡಣಾ ಕಾಯಿದೆಯಂತೆ ಭಾಷಾಧಾರಿತ ರಾಜ್ಯಗಳನ್ನು ಜಾರಿಗೊಳಿಸಿತು. ಈ ಕುರಿತ ಬೇಡಿಕೆಗಳು ಇನ್ನೂ ಅಲ್ಲಲ್ಲಿ ಕಂಡು ಬರುತ್ತಿರುವುದು ದೇಶಕ್ಕೆ ಸವಾಲಾಗಿದೆ.

8. ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಮಾಡಿ?
ಉ: ಭಾರತದಲ್ಲಿ 1956 ರ ರಾಜ್ಯಗಳ ಪುನರ್ವಿಂಗಡಣಾ ಕಾಯಿದೆಯಂತೆ ಭಾಷಾಧಾರಿತ ರಾಜ್ಯಗಳು ರಚನೆಗೊಂಡವು.ಆಗ 14 ರಾಜ್ಯಗಳು ಹಾಗು 6 ಕೇಂದ್ರಾಡಳಿತ ಪ್ರದೇಶಗಳಿದ್ದವು.ಮುಂದೆ ದೊಡ್ಡ ರಾಜ್ಯಗಳನ್ನು ಕಾರಣಾಂತರಗಳಿಂದ ವಿಭಜಿಸಿದ್ದರಿಂದ ರಾಜ್ಯಗಳ ಸಂಖೆ ಹೆಚ್ಚುತ್ತಲೇ ಬಂತು.ಪ್ರಸ್ತುತ ಭಾರತದಲ್ಲಿ 29 ರಾಜ್ಯಗಳು ಹಾಗು 7 ಕೇಂದ್ರಾಡಳಿತ ಪ್ರದೇಶಗಳಿವೆ.ಅವೆಂದರೆ

ಅಸ್ಸಾಮ್, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಬಿಹಾರ, ಚತ್ತೀಸ್ಗಡ, ಗುಜರಾತ್, ಗೋವಾ, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಕಂಡ್, ಜಮ್ಮು ಕಾಶ್ಮೀರ, ಕೇರಳ, ಕರ್ನಾಟಕ, ಮಹರಾಷ್ಟ್ರ, ಮಧ್ಯ ಪ್ರದೇಶ, ಮಣಿಪುರ, ಮೇಗಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಸ್ಸಾ, ಪಂಜಾಬ್, ಪಶ್ಚಿಮ ಬಂಗಾಳ, ರಾಜಸ್ತಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ತೆಲಂಗಾಣ, ಉತ್ತರ ಪ್ರದೇಶ, ಉತ್ತರಕಂಡ.
ಸೂತ್ರ: [3A1B1C2G2H2J2K5M1N1O2P1R1S3T2U]

ಕೇಂದ್ರಾಡಳಿತ ಪ್ರದೇಶಗಳನ್ನು ತಿಳಿಸುವುದಾದರೆ ಅಂಡಮಾನ್ ಹಾಗು ನಿಕೋಬಾರ್, ಚಂಡಿಗಡ, ದಾದರಾ ನಗರ್ಹವೇಲಿ, ಧಾಮನ್ ದಿಯೂ, ದೆಹಲಿ, ಲಕ್ಷದ್ವೀಪ ಮತ್ತು ಪಾಂಡಿಚೇರಿ.
ಸೂತ್ರ: [1A1C3D1L1P]

9. ಪಟೇಲ್ ಸ್ಕೀಮ್ ಕುರಿತು ಟಿಪ್ಪಣಿ ಬರೆಯಿರಿ ಅಥವ ದೇಶೀಯ ಸಂಸ್ಥಾನಗಳ ಏಕೀಕರಣದಲ್ಲಿ ಸರ್ದಾರ್ ಪಟೇಲರ ಪಾತ್ರವನ್ನು ವಿವರಿಸಿ?
ಉ: ಸ್ವಾತಂತ್ರ್ಯಕ್ಕಿಂತ ಮೊದಲು ಭಾರತದಲ್ಲಿ ಬ್ರಿಟಿಷ್ ಪ್ರಾಂತ್ಯಗಳು ಮತ್ತು ದೇಶೀಯ ಸಂಸ್ಥಾನಗಳು ಎಂಬ ಆಡಳಿತ ಘಟಕಗಳಿದ್ದವು. ಬ್ರಿಟಿಷ್ ಪ್ರಾಂತ್ಯಗಳನ್ನು ಬ್ರಿಟಿಷರೇನೇರವಾಗಿ ಆಳುತ್ತಿದ್ದರೆ ದೇಶೀಯ ಸಂಸ್ಥಾನಗಳನ್ನು ಬ್ರಿಟಿಷರ ಹಿಡಿತದೊಡನೆ ರಾಜಮಹರಾಜರು ಆಳುತ್ತಿದ್ದರು. 1947ರ ಭಾರತ ಸ್ವತಂತ್ರ ಕಾಯಿದೆ ಬ್ರಿಟಿಷ ಪ್ರಾಂತ್ಯಗಳನ್ನು ಭಾರತ ಮತ್ತು ಪಾಕಿಸ್ತಾನಕ್ಕೆ ಹಂಚಿತು. ದೇಶೀಯ ಸಂಸ್ಥಾನಗಳಿಗೆ ಸ್ವತಂತ್ರವಾಗಿ ಉಳಿಯಲು, ಭಾರತಕ್ಕೆ ಸೇರಲು ಅಥವ ಪಾಕಿಸ್ತಾನಕ್ಕೆ ಸೇರಲು ಅವಕಾಶ ನೀಡಿತು. ಹೀಗಾಗಿ ದೇಶದ ಏಕೀಕರಣ ಒಂದು ಸವಾಲಾಯಿತು.

ಸರದಾರ್ ಪಟೇಲ್  ಗ್ರುಹ ಮಂತ್ರಿಯಾಗಿ 560ಕ್ಕೂ ಹೆಚ್ಚಿನ ಭಾಗವಾಗಿದ್ದ ಭಾರತವನ್ನು ಏಕೀಕರಿಸಲು ಮುಂದಾದರು. ಇವರಿಗೆ ಗ್ರುಹ ಕಾರ್ಯದರ್ಶಿ ಮೆನನ್ ನೆರವಾದರು. ದೇಶೀಯ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಲು ಸರದಾರ್ ಪಟೇಲ್ ತಯಾರಿಸಿದ ಯೋಜನೆಯೇ ಇನ್ಸ್ಟ್ರುಮೆಂಟ್ ಆಫ಼್ ಅಕ್ಸೆಶನ್ ಆಗಿದೆ.ಇದರಂತೆ ದೇಶೀಯ ಸಂಸ್ಥಾನಗಳು ರಕ್ಷಣೆ,ವಿದೇಶಾಂಗ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಭಾರತ ಒಕ್ಕೂಟಕ್ಕೆ ಬಿಟ್ಟು ಕೊಡಬೇಕಾಯಿತು.ಇದಕ್ಕೆ ಪ್ರತಿಯಾಗಿ ದೇಶೀಯ ಸಂಸ್ಥಾನಗಳ ರಾಜರಿಗೆ ಉನ್ನತ ಸ್ಥಾನಮಾನ್ಅ ಹಾಗು ಸೂಕ್ತ ಸೌಲಭ್ಯಗಳನ್ನು ನೀಡಲು ನಿರ್ಧರಿಸಲಾಗಿತ್ತು. ಈ ವಿಲೀನ ಒಪ್ಪಂದದಂತೆ ಜುನಾಗಡ, ಹೈದರಾಬಾದ್, ಜಮ್ಮು ಕಾಶ್ಮೀರ ಹೊರತು ಪಡಿಸಿ ಎಲ್ಲ ದೇಶೀಯ ಸಂಸ್ಥಾನಗಳು ಭಾರತ ಒಕ್ಕೂಟವನ್ನು ಸೇರಿದವುಸರ್ದಾರ್ ಪಟೇಲ್ ನಾಯಕತ್ವದಲ್ಲಿ ಈ ಕೆಳಗಿನ ಮೂರು ಹಂತದಲ್ಲಿ ನಡೆದ ದೇಶೀಯ ಸಂಸ್ಥಾನಗಳ ವಿಲೀನವನ್ನು ಪಟೇಲ್ ಸ್ಕೀಮ್ ಎನ್ನಲಾಗುತ್ತದೆ..
A. ಸಣ್ಣ ರಾಜ್ಯಗಳ ವಿಲೀನ: ಚಿಕ್ಕ ಪುಟ್ಟ ಸಂಸ್ಥಾನಗಳನ್ನು ಅವುಗಳಿಗೆ ಹೊಂದಿಕೊಂಡ ದೊಡ್ಡ ರಾಜ್ಯಗಳಿಗೆ ಸೇರಿಸಲಾಯಿತು. ಹೀಗೆ 216 ರಾಜ್ಯಗಳನ್ನು ಹತ್ತಿರದ ರಾಜ್ಯಗಳಿಗೆ ವಿಲೀನಗೊಳಿಸಲಾಯಿತು. ಇಂತಹ ರಾಜ್ಯಗಳನ್ನು ಸಂವಿಧಾನದ ಬಿ ಭಾಗದಲ್ಲಿ ಸೇರಿಸಲಾಯಿತು. ಉ: ಒರಿಸ್ಸಾದೊಡನೆ 24, ಕೇಂದ್ರ ಪ್ರಾಂತ್ಯದೊಡನೆ 14 ಇತ್ಯಾದಿ.
B. ಸಣ್ಣ ರಾಜ್ಯಗಳ ಗುಂಪು: ಹಲವು ಸಣ್ಣಸಣ್ಣ ರಾಜ್ಯಗಳು ಸೇರಿ ಒಂದು ದೊಡ್ಡ ರಾಜ್ಯವನ್ನು ರಚಿಸಿಕೊಂಡವು. ಈ ರಾಜ್ಯಗಳ ಆಡಳಿತಗಾರರಲ್ಲಿ ಪ್ರಮುಖನಾದವರು ರಾಜಪ್ರಮುಖರಾದರು. ಉ: ಪಾಟಿಯಾಲಾ, ಪೂರ್ವ ಪಂಜಾಬ್ ಮತ್ತು ಸೌರಾಷ್ಟ್ರ ಸೇರಿ ಪೆಪ್ಸು ರಚಿಸಿಕೊಂಡವು.
C. ಚೀಫ್ ಕಮೀಷನರ್ ಪ್ರಾಂತ್ಯಗಳು: 61 ಚಿಕ್ಕ ಹಾಗು ಹಿಂದುಳಿದ ಪ್ರದೇಶಗಳನ್ನು ಕೇಂದ್ರ ಸರ್ಕಾರತಾನೇ ನೋಡಿಕೊಳ್ಳಲು ನಿರ್ಧರಿಸಿ ಚೀಫ್ ಕಮೀಷನರ್ ಆಡಳಿತಕ್ಕೆ ನೀಡಲಾಯಿತು. ಉ: ಹಿಮಾಚಲ ಪ್ರದೇಶ, ಕೂರ್ಗ್, ಬಿಹಾರ ಇತ್ಯಾದಿ.

ಸರ್ದಾರ್ ಪಟೇಲ್ ಈ ಮೇಲಿನ ಮೂರು ಹಂತಗಳಲ್ಲಿ ಸುಮಾರು 560 ದೇಶೀಯ ಸಂಸ್ಥಾನಗಳನ್ನು ಭಾರತಕ್ಕೆ ಸೇರಿಸಿದರು. ಈ ಸಮಯದಲ್ಲಿ ಪಟೇಲ್ ದೇಶೀಯ ಸಂಸ್ಥಾನಗಳ ಪ್ರಮುಖರೊಡನೆ ತಾಳ್ಮೆ, ಚತುರತೆ ಹಾಗು ಅನುಕಂಪದಿಂದ ವ್ಯವಹರಿಸುತ್ತಿದ್ದರು. ಜುನಾಗಡ, ಹೈದರಾಬಾದ್, ಜಮ್ಮು ಕಾಶ್ಮೀರಗಳನ್ನು ಆಯಾ ಸಮಯಕ್ಕೆ ಸೂಕ್ತ ತೀರ್ಮಾನ ಕೈಗೊಂಡು ಭಾರತಕ್ಕೆ ಸೇರಿಸುವಲ್ಲಿ ಪಟೇಲ್ ಪಾತ್ರ ಅಪಾರವಾಗಿತ್ತು. ಆಡಳಿತದಲ್ಲಿ ದಕ್ಷರಾಗಿ ಪಟೇಲ್ ಅಪಾರ ದೇಶಾಭಿಮಾನ ಹೊಂದಿ ದೇಶವನ್ನು ಏಕೀಕರಿಸಿದರು. ಈ ಕಾರ್ಯಕ್ಕಾಗಿ ಅವರನ್ನು ಭಾರತದ ಉಕ್ಕಿನ ಮನುಷ್ಯ ಎನ್ನಲಾಗುತ್ತದೆ.