ಗುರುವಾರ, ಆಗಸ್ಟ್ 6, 2015

ಬಿಟ್‍ಕಾಯಿನ್ ಡಿಜಿಟಲ್ ಕರೆನ್ಸಿ

ಬಿಟ್‍ಕಾಯಿನ್ ಡಿಜಿಟಲ್ ಕರೆನ್ಸಿ


--------------------------------------------------------------------------------

ಬಿಟ್‍ಕಾಯಿನ್ ಡಿಜಿಟಲ್ ಕರೆನ್ಸಿ
ವಾಣಿಜ್ಯ -

ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ವಿಚಾರಗಳಲ್ಲಿ ಬಿಟ್ ಕಾಯಿನ್ ಕೂಡ ಒಂದು. ವಾಣಿಜ್ಯ ಲೋಕದಲ್ಲಿ ಎಲ್ಲೆಡೆ ಅದರದೇ ಮಾತು. ಅದರ ಕುರಿತಾಗಿಯೇ ಅನೇಕ ಚರ್ಚೆಗಳು ನಡೆಯುತ್ತಿವೆ. ಇವತ್ತಿನ ಡಿಜಿಟಲ್ ಯುಗದಲ್ಲಿ ದಿನದಿನವೂ ಒಂದೊಂದು ಹೊಸ ವಿಚಾರ ನಮ್ಮ ಮುಂದೆ ಧುತ್ತೆಂದು ಬರುತ್ತದೆ. ಬಂದಷ್ಟೇ ವೇಗವಾಗಿ ಕಣ್ಮರೆಯೂ ಆಗುತ್ತದೆ. ಇಂತಹ  ಕಾಲಘಟ್ಟದಲ್ಲಿರುವ ನಾವು ಬಿಟ್‍ಕಾಯಿನ್ ಬಗ್ಗೆ ಸ್ವಲ್ಪ ವಿಚಾರ ಮಾಡೋಣ ಬನ್ನಿ…
ಬಿಟ್‍ಕಾಯಿನ್ ಅಂದರೇನು?
ಇದು ಡಿಜಿಟಲ್  ಕರೆನ್ಸಿ ಎಂದು ಸರಳವಾಗಿ  ಹೇಳಬಹುದಾದ ಉತ್ತರ. ಆದರೆ ಅದರ ಒಳಹೊರಗು, ಬಳಕೆ, ಪ್ರಯೋಜನ, ಫಾಯಿದೆ ಏನು? ಎಂಬುದು ವಿಚಾರ ಮಾಡಬೇಕಾದ ಅಂಶ. ಇಂದಿನ ತಂತ್ರಜ್ಞಾನ ಯುಗದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಅನೇಕ ವಿಧದ ಸೌಲಭ್ಯಗಳಿವೆ. ಮಾಧ್ಯಮಗಳಿವೆ. ಆದರೆ ಅವೆಲ್ಲಕ್ಕಿಂತ ಸರಳ ಮತ್ತು ಸುಲಭ ರೀತಿಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಇಂಬುಕೊಡುವ ಹೊಸ ಮಾಧ್ಯಮವೇ  ಈ ಬಿಟ್‍ಕಾಯಿನ್. ಇದರ ಮೂಲಕವಾಗಿ ರಾತ್ರಿ ಹಗಲೆಂಬ ಭೇಧವಿಲ್ಲದೇ, ರಜಾದಿನಗಳಲ್ಲೂ ಸಹ ನಮ್ಮ ಸಹ ನಮ್ಮ ಅಪೇಕ್ಷೆಗೆ ತಕ್ಕಂತೆ ಅಗತ್ಯ ಮೊತ್ತವನ್ನು ಇನ್ನೊಬ್ಬರಿಗೆ ವರ್ಗಾಯಿಸುವುದು ಸಾಧ್ಯ. ನಾವು ಹಣ ತೆರಬೇಕಿರುವ ವ್ಯಕ್ತಿ  ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಸರಿ ಆತನಿಗೆ  ಬೇಕಾದ ಕರೆನ್ಸಿಯಲ್ಲಿ ನಗದು ವರ್ಗಾವಣೆ ಇದರಿಂದ ಸಾಧ್ಯ. ಮೂಲತಃ  ಇದೊಂದು ಕಂಪ್ಯೂಟರ್ ಸಾಫ್ಟ್ ವೇರ್. ಇದನ್ನು ಸ್ಮಾರ್ಟ್ ಫೋನಿಗೆ ಅಥವಾ ನಿಮ್ಮ ಕಂಪ್ಯೂಟರಿಗೆ ಅಳವಡಿಸಿಕೊಂಡು ಅದರ  ಮೂಲಕ ನಿಮ್ಮ ಖಾತೆ ನೊಂದಾವಣಿ ಮಾಡಿಕೊಂಡರೆ ಸಾಕು. ಮುಂದಿನದೆಲ್ಲ ಸಲೀಸು.  ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡಿನ ಮೂಲಕ ಮಾಡುವ ಪಾವತಿಗಿಂತ ಸುಲಭವಾಗಿ ಮತ್ತು ತ್ವರಿತವಾಗಿ ಈ ಮಾಧ್ಯಮದ ಮುಖೇನ ಪಾವತಿ ಸಾಧ್ಯ. ಇದನ್ನು ಕ್ರೆಪ್ರೋಕರೆನ್ಸಿ ಎಂತಲೂ ಕರೆಯಲಾಗುತ್ತಿತ್ತು. ಅದೊಂದು ಮೊಬೈಲ್  ಆ್ಯಪ್ ಅಥವಾ ಕಂಪ್ಯೂಟರ್ ಪ್ರೋಗ್ರಾಮ್.
ಇದನ್ನು ನಿಯಂತ್ರಿಸುವವರು ಯಾರು?
ಮೂಲತಃ ಈ ಬಿಟ್ ಕಾಯಿನ್ ವ್ಯವಸ್ಥೆ ಅನಿಯಂತ್ರಿತ. ಅದು ಯಾರೊಬ್ಬರ ನೇರ ಹತೋಟಿಯಲ್ಲಿಯೂ ಇಲ್ಲ. ನಮ್ಮ ದೇಶದಲ್ಲಿ ಹಣಕಾಸು ವಿಚಾರಗಳನ್ನು  ಆರ್.ಬಿ.ಐ. ನಿಯಂತ್ರಿಸುತ್ತದೆ. ಆದರೆ ಈ ಬಿಟ್ ಕಾಯಿನ್ ವ್ಯವಸ್ಥೆಗೆ ಅಂತಹ  ಯಾವ ನಿರ್ಬಂಧವೂ ಇಲ್ಲ. ಅದಕ್ಕೆ ಯಾವುದೇ ಕೇಂದ್ರಿಕೃತ ವ್ಯವಸ್ಥೆ ಇಲ್ಲ. ಮಧ್ಯವರ್ತಿಗಳಿಲ್ಲ. ದಲ್ಲಾಳಿಗಳೂ ಇಲ್ಲ. ಸರಳ ಅರ್ಥದಲ್ಲಿ ಇದನ್ನು ಇಂಟರ್ನೆಟ್ ಮಾಧ್ಯಮದಲ್ಲಿ ಪೇಪಾಲ್ ಮೂಲಕ ದೇಶವಿದೇಶಗಳ ಹಣಕಾಸು ಕೊಡಕೊಳ್ಳುವ  ವಹಿವಾಟು ಬಹಳ ವರ್ಷಗಳಿಂದ ಚಾಲ್ತಿ ಇರುವುದು ನಿಮಗೆಲ್ಲ ಗೊತ್ತೇ ಇದೆ.  ಆದರೆ ಅದಕ್ಕೊಂದು ಕೇಂದ್ರಿಕೃತ ವ್ಯವಸ್ಥೆ  ಇದ್ದು ಅದು ಬ್ಯಾಂಕಿನಂತೆ ವ್ಯವಹಾರ ನಡೆಸುತ್ತದೆ. ನಿಮ್ಮ ಈಮೇಲ್  ಐಡಿಯನ್ನು ಪೇಪಾಲ್‍ಗೆ  ಲಿಂಕ್ ಮಾಡಿ ನಿಮ್ಮ ಬ್ಯಾಂಕಿನ ಖಾತೆಯಿಂದ ನೇರವಾಗಿ ಪೇಪಾಲ್ ಮುಖೇನ ಬೇರೆಯವರಿಗೆ ಹಣ ವರ್ಗಾಯಿಸಬಹುದು ಮತ್ತು ಪೇಪಾಲ್‍ನಲ್ಲಿಯೇ ಠೇವಣಿ ಇಟ್ಟುಕೊಳ್ಳಬಹುದು. ಅದಕ್ಕೆ ನಿಗದಿಯಾದ ಶುಲ್ಕವಿದೆ. 2010ರ ಸುಮಾರಿಗೆ ಚಾಲನೆಗೆ ಬಂದ್ ಬಿಟ್‍ಕಾಯಿನ್ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಅಂಕಿಅಂಶಗಳ ಪ್ರಕಾರ ಈಗ ದಿನವಹಿ ಸುಮಾರು 1.5 ಯು.ಎಸ್. ಬಿಲಿಯನ್ ಡಾಲರ್‍ಗಳ ವಹಿವಾಟು ಈ ಮೂಲಕ ನಡೆಯುತ್ತಿದೆ. ಇದು ಇನ್ನಷ್ಟು ಜನಪ್ರಿಯವಾಗುವ ಲಕ್ಷಣಗಳೂ ಕಾಣಿಸುತ್ತಿವೆ. ಇಲ್ಲಿ ಭೌತಿಕರೂಫದಲ್ಲಿ ಹಣ ವರ್ಗಾವಣೆಯಾಗುವುದಿಲ್ಲ. ಆದರೆ ಅದು ಡಿಜಿಟಲ್ ರೂಪದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ, ಕಂಪೆನಿಯಿಂದ ಕಂಪೆನಿಗೆ  ವರ್ಗಾವಣೆ ಹೊಂದುತ್ತದೆ. ನಿಮ್ಮ ಬ್ಯಾಂಕ್ ಖಾತೆಯಿಂದ ಅಗತ್ಯ  ಮೊತ್ತ ಡೆಬಿಟ್ ಆಗಿ ಬಿಟ್‍ಕಾಯಿನ್ ಆಗಿ ಪರಿವರ್ತನೆಗೊಂಡು ಅದು ಯಾರಿಗೆ ತಲುಪಬೇಕೋ ಅವರಿಗೆ ತ್ವರಿತವಾಗಿ ತಲುಪುತ್ತದೆ. ಅದಕ್ಕೆ ದೇಶ, ಗಡಿಗಳ ಪರಿಮಿತಿಯಿಲ್ಲ, ಅದು ಎಲ್ಲಿಯೂ ಸಲ್ಲುತ್ತದೆ. ಇತ್ತೀಚಿನ ದಿನಗಳಲ್ಲಿ ವಿದೇಶಕ್ಕ  ಹೋಗುವವರು ಅಲ್ಲಿನ ಕರೆನ್ಸಿ ಖರೀದಿ ಮಾಡಿ ಇಟ್ಟುಕೊಳ್ಳಬೇಕಿಲ್ಲ. ಎಲ್ಲಾ ಖರ್ಚಿನ ಬಾಬ್ತುಗಳನ್ನೂ ಬಿಟ್ ಕಾಯಿನ್  ಮೂಲಕ ಪಾವತಿಸಬಹುದು.
ಇದರ ಫಾಯಿದೆಗಳೇನು ? ನ್ಯೂನತೆಗಳೇನು?
1. ಬೇರೆಲ್ಲಾ ಮಾಧ್ಯಮಗಳಿಗಿಂತ ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಹಣ ವರ್ಗಾವಣೆ ಸಾಧ್ಯ. ಶುಲ್ಕವೂ ಅತೀ ಕಡಿಮೆ.
2. ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲದೆಯೂ ಬಿಟ್ ಕಾಯಿನ್‍ಗಳನ್ನು  ನೀವು ಹೊಂದಬಹುದು, ಅವುಗಳನ್ನು  ಇನ್ನೊಬ್ಬರಿಗೆ ವರ್ಗಾಯಿಸಬಹುದು.
3. ಬಿಟ್ ಕಾಯಿನ್ ಮೂಲಕ ಒಮ್ಮೆ ಮಾಡಿದ  ಪಾವತಿಯನ್ನು ರದ್ದು ಮಾಡಲು ಆಗುವುದಿಲ್ಲ.
4. ಇತರೆ ಹಣಕಾಸು ವಹಿವಾಟುಗಳ ಹೋಲಿಕೆಯಲ್ಲಿ ಬಿಟ್ ಕಾಯಿನ್  ಅಷ್ಟು ಸುಲಭವಾಗಿ  ಪತ್ತೆ ಮಾಡಲಾಗುವುದಿಲ್ಲ. ಯಾರ ನಿಯಂತ್ರಣವೂ ಇಲ್ಲದ ಕಾರಣ ಸರಕಾರದ ಅಥವಾ ಹಣಕಾಸು  ಇಲಾಖೆಯ ಗಮನಕ್ಕೆ ಬಾರದೇ ಮೊತ್ತ ವರ್ಗಾವಣೆ ಮಾಡಬಹುದು.
ಹೀಗಾಗಿ ಬೇನಾಮಿ ಹಣಪಾವತಿಗಳು, ಹವಾಲಾಗಳು ಈ ಮಾಧ್ಯಮದಿಂದ ನಡೆಯುವ ಸಾಧ್ಯತೆಯೂ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ