ಬಿಗ್ ನ್ಯೂಸ್: ಕಾವೇರಿ ತೀರ್ಪಿನಲ್ಲಿ ರಾಜ್ಯಕ್ಕೆ ಶುಭ ಸುದ್ದಿ - ಹೆಚ್ಚುವರಿ 14.75 ಟಿ.ಎಂ.ಸಿ. ನೀರು ಲಭ್ಯ
Friday, 16 Feb, 2018
ನವದೆಹಲಿ: ಇಡೀ ರಾಜ್ಯ ಕುತೂಹಲದಿಂದ ಕಾಯುತ್ತಿದ್ದ ಕಾವೇರಿ ನದಿ ನೀರು ಹಂಚಿಕೆ ಕುರಿತ ತೀರ್ಪು ಹೊರಬಿದ್ದಿದ್ದು, ಕರ್ನಾಟಕಕ್ಕೆ 14.75 ಟಿ.ಎಂ.ಸಿ. ನೀರು ಹೆಚ್ಚುವರಿಯಾಗಿ ನೀಡಿದೆ. ಜೊತೆಗೆ ಕರ್ನಾಟಕ ನೀರಾವರಿ ಪ್ರದೇಶವನ್ನು ಹೆಚ್ಚುವರಿ ಮಾಡಿಕೊಳ್ಳಬಹುದು ಎಂದು ಹೇಳಿದೆ. 1924 ರ ಒಪ್ಪಂದ ಸಂವಿಧಾನಾತ್ಮಕವಾಗಿದೆ ಎಂದು ಹೇಳಿದೆ.
ಕಳೆದ 5 ತಿಂಗಳಿಂದ ಕಾವೇರಿ ಕಣಿವೆಯ ರಾಜ್ಯಗಳು ತೀರ್ಪಿಗಾಗಿ ಕಾದಿದ್ದವು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಅಮಿತವ್ ರಾಯ್, ಎ.ಎಂ. ಖನ್ವೀಲ್ಕರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿದೆ.
1990 ರಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿ ರಚಿಸಿದ್ದು, 17 ವರ್ಷಗಳ ಕಾಲ ವಿಚಾರಣೆ ನಡೆಸಿ 2007 ರಲ್ಲಿ ಐತೀರ್ಪು ನೀಡಿತ್ತು. ಈ ಐತೀರ್ಪಿನಲ್ಲಿದ್ದ ಅಂಶಗಳನ್ನು ಒಪ್ಪದೇ ಕಾವೇರಿ ಕಣಿವೆಯ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಕೇರಳ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದವು.
ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಇಂದು ಮಹತ್ವದ ತೀರ್ಪು ನೀಡಿದೆ.
120 ವರ್ಷಗಳ ಹಿಂದಿನ ಒಪ್ಪಂದ ಆಧಾರದ ಮೇಲೆ ನೀರು ಹಂಚಿಕೆ ಮಾಡಬೇಕೆಂದು ತಮಿಳುನಾಡು ಬಯಸಿದ್ದರೆ, ಸಂವಿಧಾನದ ಆಧಾರದ ಮೇಲೆ ಕರ್ನಾಟಕಕ್ಕೆ ಚೌಕಾಸಿ ಮಾಡುವ ಅಧಿಕಾರ ಇದೆ. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಬ್ರಿಟಿಷರು, ಮೈಸೂರು ಮಹಾರಾಜರನ್ನು ಒಪ್ಪಿಸಿ ಒಪ್ಪಂದ ಮಾಡಿಕೊಂಡಿರಬಹುದು. ಅದನ್ನು ಇಂದಿಗೂ ಅನ್ವಯಿಸಬೇಕೆ ಎಂಬುದರ ಬಗ್ಗೆ ಯೋಚಿಸಬೇಕಿದೆ ಎಂದು ಹೇಳಿದೆ.
ನದಿಗಳು ರಾಷ್ಟ್ರೀಯ ಸಂಪತ್ತು. ಯಾವುದೇ ರಾಜ್ಯಗಳು ಸಂಪೂರ್ಣ ಹಕ್ಕು ಹೊಂದಿರುವುದಿಲ್ಲ. ಸಮಾನ ಹಂಚಿಕೆ ತತ್ವ ಪಾಲಿಸಬೇಕೆಂದು ಕೋರ್ಟ್ ಹೇಳಿದೆ.
ಪಾಂಡಿಚೇರಿ ಮತ್ತು ಕೇರಳಕ್ಕೆ ಕೊಟ್ಟಿರುವ ನೀರಿನ ಪ್ರಮಾಣ ಸರಿ ಇದೆ. 20 ಟಿ.ಎಂ.ಸಿ. ಅಂತರ್ಜಲವನ್ನು ತಮಿಳುನಾಡು ಪರಿಗಣಿಸಬೇಕು. ಕರ್ನಾಟಕಕ್ಕೆ 14.5 ಟಿ.ಎಂ.ಸಿ. ಹೆಚ್ಚುವರಿ ನೀರು ನೀಡಬೇಕೆಂದು ಹೇಳಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ