ಭಾನುವಾರ, ಜನವರಿ 10, 2021

ಕರ್ನಾಟಕದ ಇತಿಹಾಸ

ಇತಿಹಾಸ

ಕರ್ನಾಟಕ ರಾಜ್ಯವು ಪ್ರಾಚೀನವೂ ವೈಶಿಷ್ಟ್ಯಪೂರ್ಣವೂ ಆದ ಇತಿಹಾಸವನ್ನು ಹೊಂದಿದೆ. ಯಾವುದೇ ಪ್ರದೇಶದ ಇತಿಹಾಸವನ್ನು ತಿಳಿಯಲು ಅಲ್ಲಿ ದೊರೆಯುವ ಶಾಸನಗಳು, ಸ್ಮಾರಕಗಳು, ನಾಣ್ಯಗಳು, ಕಡತ ಮತ್ತು ಬಖೈರುಗಳು ಹಾಗೂ ಸಾಹಿತ್ಯ ಕೃತಿಗಳು ನೆರವಾಗುತ್ತವೆ. ಇಂತಹ ದಾಖಲೆಗಳಿಲ್ಲದ, ಕೇವಲ ಪಳೆಯುಳಿಕೆಗಳ ಮೂಲಕವೇ ತಿಳಿಯಬೇಕಾದ ಕಾಲವೊಂದಿದೆ. ಅದು ಇತಿಹಾಸಪೂರ್ವ ಅಥವಾ ಪ್ರಾಗಿತಿಹಾಸ ಕಾಲ.
ಕರ್ನಾಟಕದಲ್ಲೂ ಪ್ರಾಗಿತಿಹಾಸ ಕಾಲದಲ್ಲಿ ಜನ ವಾಸಿಸುತ್ತಿದ್ದರು. ಬೇರೆ ಬೇರೆ ಸ್ಥಳಗಳಲ್ಲಿ ನಡೆದಿರುವ ಉತ್ಖನನಗಳ ಮೂಲಕ ಆ ಕಾಲದ ಜನರ ಬದುಕಿನ ಬಗ್ಗೆ ತಿಳಿಯಲು ಸಾಧ್ಯವಾಗಿದೆ. ಕರ್ನಾಟಕದಲ್ಲಿ ಪ್ರಾಚೀನ ಶಿಲಾಯುಗ, ನೂತನ ಶಿಲಾಯುಗ, ಬೃಹತ್ ಶಿಲಾಯುಗ ಮತ್ತು ಲೋಹಯುಗಗಳಲ್ಲಿ ಮಾನವ ಜೀವಿಸಿದ್ದುದಕ್ಕೆ ಕುರುಹಾಗಿ ಅನೇಕ ಪ್ರಾಗಿತಿಹಾಸ ಕಾಲದ ಜನವಸತಿಯ ನೆಲೆಗಳು ದೊರೆತಿವೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ತುಂಗಭದ್ರಾ, ಕಾವೇರಿ ನದಿಗಳ ಬಯಲು ಪ್ರದೇಶಗಳಲ್ಲಿ ಮತ್ತು ಕೆಲವು ಬೆಟ್ಟ, ಗುಡ್ಡಗಳ ತಪ್ಪಲಿನಲ್ಲಿ ಪ್ರಾಗಿತಿಹಾಸ ಕಾಲದ ಮಾನವ ನೆಲೆಸಿ, ಬೇಟೆ ಪಶುಪಾಲನೆಗಳಲ್ಲಿ ನಿರತನಾಗಿ ಬದುಕಿದ್ದನ್ನು ಅನೇಕ ವಿದ್ವಾಂಸರು ಪತ್ತೆಹಚ್ಚಿದ್ದಾರೆ. ಬೃಹತ್ ಶಿಲಾಯುಗದ ಕಾಲದಲ್ಲಿ ಕಬ್ಷಿಣದ ಆಯುಧಗಳ ಉಪಯೋಗವನ್ನು ಚೆನ್ನಾಗಿ ತಿಳಿದಿದ್ದ ಜನರು ಸತ್ತವರನ್ನು ಸಮಾಧಿ ಮಾಡುತ್ತಿದ್ದ ಅಥವಾ ಅಸ್ಥಿಗಳನ್ನು ರಕ್ಷಿಸಿಡುತ್ತಿದ್ದ ಗೋರಿಗಳೇ ಪಾಂಡವರ ಗುಡಿಗಳು ಅಥವಾ ಮೋರಿಯರ ಮನೆಗಳು ಎಂದು ಗುರುತಿಸಲ್ಪಟ್ಟಿವೆ. ಇವೇ ಮೆಗಾಲಿಥ್‍ಗಳು.


ಮೌರ್ಯರು

ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ಅಶೋಕನ ಶಾಸನಗಳು ದೊರೆತಿವೆ. ಧರ್ಮ ಲಿಪಿಗಳೆಂದೇ ಪ್ರಸಿದ್ಧಿ ಪಡೆದಿರುವ ಅಶೋಕನ ಶಾಸನಗಳು ಬ್ರಾಹ್ಮೀಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿದ್ದು, ಇವು ದೊರೆತಿರುವ ಸ್ಥಳಗಳು ಮೌರ್ಯ ಸಾಮ್ರಾಜ್ಯದ ಗಡಿ ಎಂದು ಪರಿಗಣಿತವಾಗಿವೆ. ಕ್ರಿ.ಪೂ. 3ನೆಯ ಶತಮಾನದ ವೇಳೆಗೆ, ಅಂದರೆ ಅಶೋಕನ ಕಾಲಕ್ಕಾಗಲೇ ಕರ್ನಾಟಕವು ಮೌರ್ಯ ಸಾಮ್ರಾಜ್ಯದ ಗಡಿ ಪ್ರಾಂತವಾಗಿತ್ತು ಎಂದು ತಿಳಿಯುತ್ತದೆ. ಅಶೋಕನಿಗೂ ಮೊದಲೇ ಅವನ ತಾತ ಚಂದ್ರಗುಪ್ತನು ಭದ್ರಬಾಹು ಮುನಿಗಳ ಜೊತೆ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿ ಅಲ್ಲೇ ಸಮಾಧಿ ಆದನೆಂದು ಶಾಸನವೊಂದು ಸೂಚಿಸುತ್ತದೆ. ಅಶೋಕನು ಕರ್ನಾಟಕದ ವನವಾಸಕ(ಬನವಾಸಿ)ಕ್ಕೆ ಬೌದ್ಧಧರ್ಮ ಪ್ರಚಾರಕರನ್ನೂ ಕಳುಹಿಸಿದ್ದ.

ಶಾತವಾಹನರು

ಮೌರ್ಯರ ನಂತರ ಕ್ರಿ.ಪೂ. 3ನೆಯ ಶತಮಾನದಿಂದ ಕ್ರಿ.ಶ. 3ನೆಯ ಶತಮಾನದವರೆಗೆ ಕರ್ನಾಟಕದ ಬಹುಭಾಗಗಳನ್ನು ಶಾತವಾಹನರು ಆಳಿದರು. ಅವರ ಕಾಲದಲ್ಲಿ ಸನ್ನತಿಯು ಒಂದು ಪ್ರಮುಖ ಬೌದ್ಧ ನೆಲೆಯಾಗಿತ್ತು. ಶಾತವಾಹನ ವಂಶದ ಗೌತಮೀಪುತ್ರ ಶಾತಕರ್ಣಿಯ ಕಾಲದ ನಾಣ್ಯಗಳು ಬನವಾಸಿಯಲ್ಲಿ ದೊರೆತಿವೆ. ಗೌತಮೀಪುತ್ರ ಶಾತಕರ್ಣಿಯ ಮಗ ವಾಸಿಷ್ಠೀಪುತ್ರ ಪುಳುಮಾವಿಯ ಕಾಲದ ನಾಣ್ಯಗಳು ಚಿತ್ರದುರ್ಗದ ಸಮೀಪವಿರುವ ಚಂದ್ರವಳ್ಳಿಯಲ್ಲಿ ದೊರೆತಿವೆ. ಸಾತವಾಹನರ ಶಾಖೆಯವರಾದ ಶಾತಕರ್ಣಿಗಳು ಮತ್ತು ಚುಟುಗಳೂ ಸಹ ಕರ್ನಾಟಕವನ್ನಾಳಿದರು.

ಕದಂಬರು

ಶಾತವಾಹನರ ನಂತರ ಕರ್ನಾಟಕದ ಉತ್ತರಭಾಗವನ್ನು ಸ್ವತಂತ್ರವಾಗಿಯೇ ಆಳಿದ ಪ್ರಥಮ ಕನ್ನಡ ರಾಜವಂಶವೇ `ಕದಂಬ ವಂಶ'. ಮಯೂರವರ್ಮ ಆ ವಂಶದ ಮೊದಲ ದೊರೆ. ಬನವಾಸಿಯು ಕದಂಬರ ರಾಜಧಾನಿ. ಆದ್ದರಿಂದ ಇವರನ್ನು ಬನವಾಸಿಯ ಕದಂಬರು ಎಂದೇ ಗುರುತಿಸಲಾಗಿದೆ. ತಾಳಗುಂದ ಅವರ ಕಾಲದ ಪ್ರಮುಖ ಸ್ಥಳ. ಕಾಂಚಿಯ ಘಟಿಕಾಸ್ಥಾನದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಯೂರವರ್ಮನಿಗೆ, ಅಲ್ಲಿಯ ಪಲ್ಲವ ಅಶ್ವಸಂಸ್ಥೆಯವರೊಡನೆ ಜಗಳವಾಗಿ, ಸ್ವತಂತ್ರ ರಾಜನಾಗುವ ಛಲ ಹುಟ್ಟಿತು. ಅಂತೆಯೇ ಬೃಹದ್ಭಾಣರನ್ನು ಮತ್ತು ಪಲ್ಲವರನ್ನು ಸೋಲಿಸಿ, ಪಲ್ಲವರಿಂದ ಮಾನ್ಯತೆ ಪಡೆದು ಸ್ವತಂತ್ರ ರಾಜನಾಗಿ, ರಾಜ್ಯವಾಳಿದ ಕದಂಬ ಮಯೂರವರ್ಮ (ಕ್ರಿ.ಶ325ರಿಂದ 345ರ ವರೆಗೆ) ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯ ಕೆರೆಯನ್ನು ದುರಸ್ತಿ ಮಾಡಿಸಿದನೆಂದು, ಅಲ್ಲೇ ಇರುವ ಅವನ ಶಾಸನ ದಾಖಲಿಸಿದೆ. ಮಯೂರವರ್ಮನ ನಂತರ ಕಂಗವರ್ಮ, ಭಗೀರಥ ಮತ್ತು ರಘು ಒಬ್ಷರ ನಂತರ ಒಬ್ಷರು ಕ್ರಿ.ಶ. 405ರ ವರೆಗೆ ಆಳ್ವಿಕೆ ನಡೆಸಿದರು. ರಘುವಿನ ತಮ್ಮ ಕಾಕುಸ್ಥವರ್ಮ(ಕ್ರಿ.ಶ. 405 - 430)ನ ಕಾಲದಲ್ಲಿ ಕದಂಬ ರಾಜ್ಯ ವಿಸ್ತಾರವಾಯಿತು. ದಕ್ಷಿಣದ ಪಲ್ಲವರು, ಗಂಗರು ಮತ್ತು ಉತ್ತರದ ಗುಪ್ತರೊಡನೆ ವೈವಾಹಿಕ ಸಂಬಂಧ ಬೆಳೆಸಿದ ಕಾಕುಸ್ಥವರ್ಮನ ಕಾಲದ ಹಲ್ಮಿಡಿ ಶಾಸನವು ಈವರೆಗೆ ದೊರೆತಿರುವ ಮೊದಲ ಕನ್ನಡ ಶಾಸನವಾಗಿದೆ. ತಾಳಗುಂದದಲ್ಲಿ ಒಂದು ಕೆರೆಯನ್ನೂ ಕಟ್ಟಿಸಿದ ಕಾಕುಸ್ಥವರ್ಮನ ನಂತರ ಕದಂಬ ಸಾಮ್ರಾಜ್ಯವು ಎರಡು ಭಾಗಗಳಾಗಿ ಒಡೆದು ಹೋಗಿ, ಒಂದು ಭಾಗವನ್ನು ಅವನ ಮಗ 1ನೆಯ ಕೃಷ್ಣವರ್ಮನು ತ್ರಿಪರ್ವತದಿಂದಲೂ, ಮತ್ತೊಂದು ಭಾಗವನ್ನು ಮತ್ತೊಬ್ಷ ಮಗ ಶಾಂತಿವರ್ಮನು ಬನವಾಸಿಯಿಂದಲೂ ಆಳಿದರು. ಶಾಂತಿವರ್ಮನ ಮಗ ಮೃಗೇಶವರ್ಮನು ಪಲ್ಲವರು ಮತ್ತು ಗಂಗರ ಮೇಲೆ ಯುದ್ಧ ಮಾಡಿ ರಾಜ್ಯ ವಿಸ್ತಾರ ಮಾಡಿದ. ಅವನ ಕಾಲದಲ್ಲಿ ಹಲಸಿ (ಬೆಳಗಾವಿ ಜಿಲ್ಲೆ)ಯು 2ನೆಯ ರಾಜಧಾನಿಯಾಯಿತು. ಮೃಗೇಶವರ್ಮನ ಮಗ ರವಿವರ್ಮನು ಗುಡ್ನಾಪುರದಲ್ಲಿ ಕಾಮಜಿನಾಲಯವನ್ನು ಕಟ್ಟಿಸಿದ. ತ್ರಿಪರ್ವತದಿಂದ ಆಳಿದ ಕದಂಬರ ಮತ್ತೊಂದು ಶಾಖೆಯು ಮತ್ತೆ 2ನೆಯ ಕೃಷ್ಣವರ್ಮನ ಕಾಲದಲ್ಲಿ ಮೂಲ ಶಾಖೆಗೆ ಸೇರಿತು. ಇವರು ಕ್ರಿ.ಶ. 325ರಿಂದ 540ರ ವರೆಗೆ ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಪ್ರದೇಶವನ್ನು ಆಳಿದರು. ಕದಂಬರು ಹಲವಾರು ದೇವಾಲಯಗಳನ್ನು ಮತ್ತು ಬಸದಿಗಳನ್ನು ನಿರ್ಮಿಸಿದರು. ಕೆರೆಗಳನ್ನು ಕಟ್ಟಿಸಿದರು. ಕರ್ನಾಟಕ ಸಾಮ್ರಾಜ್ಯಕ್ಕೆ ರಾಜಕೀಯವಾದ ಮತ್ತು ಸಾಂಸ್ಕತಿಕವಾದ ಭದ್ರಬುನಾದಿಯನ್ನು ಹಾಕಿದ ಕೀರ್ತಿ ಕದಂಬರಿಗೆ ಸಲ್ಲುತ್ತದೆ.

ಗಂಗರು

ಕದಂಬರಿಗೆ ಸಮಕಾಲೀನರಾಗಿ ಕರ್ನಾಟಕದ ದಕ್ಷಿಣ ಭಾಗವನ್ನು ಮೊದಲಿಗೆ ಕುವಳಾಲಪುರ(ಕೋಲಾರ)ದಿಂದಲೂ, ನಂತರ ತಲಕಾಡಿನಿಂದಲೂ ಆಳಿದ ಗಂಗರ ಮೊದಲ ದೊರೆ ಕೊಂಗುಣಿವರ್ಮ, ಅವನ ನಂತರ ಕ್ರಮವಾಗಿ 1ನೆಯ ಮಾಧವ, ಹರಿವರ್ಮ, 2ನೆಯ ಮಾಧವ, ವಿಷ್ಣುಗೋಪ, 3ನೆಯ ಮಾಧವ ಮತ್ತು ಅವಿನೀತ ಅವರುಗಳು ಕ್ರಿ.ಶ. 350ರಿಂದ 469ರ ವರೆಗೆ ಆಳಿದರು. 3ನೆಯ ಮಾಧವನು ಕದಂಬ ಕಾಕುಸ್ಥವರ್ಮನ ಮಗಳನ್ನು ಮದುವೆಯಾಗಿದ್ದ. ಅವನ ಮಗ ಅವಿನೀತನು ಗಂಗರಾಜ್ಯವನ್ನು 60 ವರ್ಷಗಳ ಕಾಲ ಆಳಿ ರಾಜ್ಯವನ್ನು ವಿಸ್ತರಿಸಿದ. ಅವಿನೀತನ ಮಗ ದುರ್ವಿನೀತನು ಗಂಗ ವಂಶದ ಪ್ರಖ್ಯಾತ ದೊರೆಗಳಲ್ಲೊಬ್ಷ. ಪುನ್ನಾಟ ಮತ್ತು ಬಾಣ ರಾಜ್ಯಗಳನ್ನು ವಶಪಡಿಸಿಕೊಂಡ ದುರ್ವಿನೀತನು ಕವಿಯೂ ಆಗಿದ್ದ. ಅವನ ಆಸ್ಥಾನಕ್ಕೆ ಬಂದಿದ್ದ ಭಾರವಿಯ ಕಿರಾತಾರ್ಜುನೀಯದ 15ನೆಯ ಸರ್ಗಕ್ಕೆ ಸ್ವತಃ ಟೀಕೆಯನ್ನು ಬರೆದಿದ್ದ. ಗುಣಾಢ್ಯನ ವಡ್ಡಕಥೆಯನ್ನು ಸಂಸ್ಕೃತಕ್ಕೆ ಭಾಷಾಂತರ ಮಾಡಿದ ದುರ್ವಿನೀತನ ನಂತರ ಮುಷ್ಕರ, ಶ್ರೀವಿಕ್ರಮ, ಭೂವಿಕ್ರಮರು ಕ್ರಿ.ಶ. 539ರಿಂದ 679ರ ವರೆಗೆ ಗಂಗ ರಾಜ್ಯವನ್ನಾಳಿದರು. ಕ್ರಿ.ಶ. 679ರಲ್ಲಿ ಪಟ್ಟಕ್ಕೆ ಬಂದ 1ನೆಯ ಶಿವಮಾರ ರಾಜ್ಯವನ್ನು ಆಕ್ರಮಿಸಲು ಬಂದ ಪಲ್ಲವರನ್ನು ಸೋಲಿಸಿದ. ಅವನ ನಂತರ ಅವನ ಮೊಮ್ಮಗ ಶ್ರೀಪುರುಷ(ಕ್ರಿ.ಶ. 725-788)ನು ಪಲ್ಲವರು ಮತ್ತು ರಾಷ್ಟ್ರಕೂಟರೊಡನೆ ಸದಾ ಯುದ್ಧನಿರತನಾಗಿದ್ದ. ನೊಳಂಬರು ಮತ್ತು ಪಾಂಡ್ಯರೊಡನೆಯೂ ಹಲವು ಯುದ್ಧಗಳನ್ನು ಮಾಡಿದ. ಶ್ರೀಪುರುಷನ ನಂತರ ಪಟ್ಟಕ್ಕೆ ಬಂದ ಅವನ ಮಗ 2ನೆಯ ಶಿವಮಾರನು, ಹಲವಾರು ರಾಷ್ಟ್ರಕೂಟ - ಗಂಗ ಯುದ್ಧಗಳಲ್ಲಿ ಸೋತು ತನ್ನ ಜೀವಿತಾವಧಿಯ ಬಹುಕಾಲ ರಾಷ್ಟ್ರಕೂಟರ ಸೆರೆಮನೆಯಲ್ಲೇ ಇರಬೇಕಾಯಿತು. ಆ ಸಂದರ್ಭದಲ್ಲೇ ರಾಷ್ಟ್ರಕೂಟ ಸ್ತಂಭ (ಕಂಬಯ್ಯ) ಗಂಗವಾಡಿಯ ರಾಜ್ಯಪಾಲನಾದ. ರಾಷ್ಟ್ರಕೂಟ ಸಿಂಹಾಸನಕ್ಕೆ ಧ್ರುವನ ಮಕ್ಕಳಲ್ಲಿ ಘರ್ಷಣೆ ನಡೆದಾಗ, ರಾಜಕೀಯ ಕಾರಣಗಳಿಂದ, ಶಿವಮಾರ ಬಿಡುಗಡೆ ಹೊಂದಿದರೂ ಮತ್ತೆ ಬಂಧಿತನಾದ. ವೃದ್ಧಾಪ್ಯದಲ್ಲಿ ಬಿಡುಗಡೆ ಹೊಂದಿದ. `ಗಜಾಷ್ಟಕ' ಮತ್ತು `ಸೇತುಬಂಧ' ಎಂಬ ಕೃತಿಗಳನ್ನು ರಚಿಸಿದ. 2ನೆಯ ಶಿವಮಾರನ ನಂತರ ಗಂಗರು ರಾಷ್ಟ್ರಕೂಟರ ಅಧೀನರಾಗಿ ಆಳ್ವಿಕೆ ಮುಂದುವರೆಸಿದರು. 1ನೆಯ ರಾಜಮಲ್ಲ, ನೀತಿಮಾರ್ಗ ಎರೆಗಂಗ, ಬೂತುಗ, ಇಮ್ಮಡಿ ರಾಚಮಲ್ಲ, ಎರೆಯಪ್ಪ, ಇಮ್ಮಡಿ ಬೂತುಗ, ಇಮ್ಮಡಿ ಮಾರಸಿಂಹ, 4ನೆಯ ರಾಚಮಲ್ಲ ಇತ್ಯಾದಿ ಗಂಗವಂಶದ ರಾಜರುಗಳು ಆಳ್ವಿಕೆ ನಡೆಸಿದರು. ಅವರ ಕಾಲದಲ್ಲಿ ನೊಳಂಬ ಮತ್ತು ಚೋಳರೊಂದಿಗಿನ ಘರ್ಷಣೆಗಳು ಹೆಚ್ಚಿದವು. ಚೋಳರ ದಾಳಿಯಂತೂ ಅಧಿಕಗೊಂಡಿತು. ತಮ್ಮ ಅಂತಿಮ ದಿನಗಳವರೆಗೆ ರಾಷ್ಟ್ರಕೂಟರ ನಿಷ್ಠಾವಂತ ಸಾಮಂತರಾಗಿಯೇ ಮುಂದುವರಿದ ಗಂಗರ, ಇಮ್ಮಡಿ ಮಾರಸಿಂಹನ ಕಾಲದಲ್ಲಿ ಅವನ ಮಂತ್ರಿ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಅದ್ಭುತವಾದ ಗೊಮ್ಮಟ ವಿಗ್ರಹವನ್ನು ನಿರ್ಮಿಸಿದ. ಕ್ರಿ.ಶ. ಸುಮಾರು 350ರಿಂದ ಕ್ರಿ.ಶ. ಸುಮಾರು 999ರ ವರೆಗೆ ಸುಮಾರು 650 ವರ್ಷಗಳಷ್ಟು ಸುದೀರ್ಘ ಕಾಲ ಕರ್ನಾಟಕದ ದಕ್ಷಿಣ ಭಾಗದ ಬಹುತೇಕ ಪ್ರದೇಶವನ್ನು ಗಂಗವಾಡಿ 96000 ಎಂಬ ಹೆಸರಿನಿಂದ ಆಳಿದ ಗಂಗರು ಕರ್ನಾಟಕದ ಇತಿಹಾಸದಲ್ಲಿ ಗಣ್ಯಸ್ಥಾನ ಪಡೆದಿದ್ದಾರೆ.

ಬಾದಾಮಿಯ ಚಾಲುಕ್ಯರು

ಕನ್ನಡ ಭಾಷಿಕರನ್ನೆಲ್ಲ ಒಂದುಗೂಡಿಸಿ ನರ್ಮದೆಯವರೆಗೆ ಆಳಿದ ಬಾದಾಮಿ ಚಾಲುಕ್ಯರ (ಅವರ ರಾಜಧಾನಿ ಬಾದಾಮಿ) ಮೂಲ ಪುರುಷ ಜಯಸಿಂಹ. ಆ ವಂಶದ ಮೊದಲ ಪ್ರಖ್ಯಾತ ದೊರೆ 1ನೆಯ ಪುಲಕೇಶಿ. ಇವನ ಕಾಲದಲ್ಲಿ ಬಾದಾಮಿಯಲ್ಲಿ ಕೋಟೆಯ ನಿರ್ಮಾಣವಾಯಿತು. ಈ ವಿಷಯವನ್ನು ಬಾದಾಮಿಯ ಬಂಡೆಗಲ್ಲು ಶಾಸನ ತಿಳಿಸುತ್ತದೆ. 1ನೆಯ ಪುಲಕೇಶಿ ನಂತರ ಕೀರ್ತಿವರ್ಮ ಮತ್ತು ಮಂಗಳೀಶರು ಆಳಿದ ಕಾಲದಲ್ಲಿ ರಾಜ್ಯ ವಿಸ್ತಾರವಾದರೂ, ನಂತರದ 2ನೆಯ ಪುಲಿಕೇಶಿಯ ಕಾಲದಲ್ಲಿ ಕರ್ನಾಟಕವು ನರ್ಮದಾ ನದಿಯ ದಕ್ಷಿಣ ತೀರದವರೆಗೆ ವಿಸ್ತರಿಸಿತು. ಆಗ ಉತ್ತರಾಪಥೇಶ್ವರನೆಂದು ಪ್ರಸಿದ್ಧನಾಗಿದ್ದ ಕನೋಜದ ಹರ್ಷವರ್ಧನನನ್ನು ಸೋಲಿಸಿ ಕೀರ್ತಿಪಡೆದ 2ನೆಯ ಪುಲಿಕೇಶಿಯ ಕಾಲದಲ್ಲಿ ಪರ್ಷಿಯಾ ದೇಶ ಮತ್ತು ಕರ್ನಾಟಕಗಳ ನಡುವೆ ಪರಸ್ಪರ ರಾಯಭಾರಿಗಳು ನೇಮಕಗೊಂಡಿದ್ದರು. ಇವನ ಕಾಲದಲ್ಲೇ ಚೀನಿ ಪ್ರವಾಸಿ ಹ್ಯುಯೆನ್ತ್ಸಾಂ ಗನು ಕರ್ನಾಟಕಕ್ಕೆ ಭೇಟಿ ನೀಡಿದ್ದ. ಮೊದಲು ಪಲ್ಲವರನ್ನು ಸೋಲಿಸಿದ್ದ 2ನೆಯ ಪುಲಿಕೇಶಿಯು ನಂತರ ಪಲ್ಲವ ನರಸಿಂಹವರ್ಮನಿಂದ ಕ್ರಿ.ಶ. 642ರಲ್ಲಿ ಸೋಲಬೇಕಾಯಿತು. 13 ವರ್ಷಗಳ ನಂತರ 2ನೆಯ ಪುಲಕೇಶಿಯ ಮಗ 1ನೆಯ ವಿಕ್ರಮಾದಿತ್ಯನು ಮತ್ತೆ ಪಲ್ಲವರಿಂದ ಚಾಲುಕ್ಯ ಸಾಮ್ರಾಜ್ಯವನ್ನು ವಶಪಡಿಸಿಕೊಂಡ. ಕ್ರಿ.ಶ. 670ರಲ್ಲಿ ಅವನೇ ಪಲ್ಲವರನ್ನು ಕಾಂಚಿಯವರೆಗೆ ಓಡಿಸಿಕೊಂಡು ಹೋದ. ಪಲ್ಲವ ನರಸಿಂಹವರ್ಮ ಬಾದಾಮಿಯನ್ನು ಗೆದ್ದಾಗ, ಅಲ್ಲಿನ ಕೋಟೆ ಮತ್ತು ಊರುಗಳನ್ನು ಹಾಳು ಮಾಡಿದ್ದ. ಅನಂತರ ಚಾಲುಕ್ಯ ಸಾಮ್ರಾಜ್ಯವನ್ನು ವಿಜಯಾದಿತ್ಯ, 2ನೆಯ ವಿಕ್ರಮಾದಿತ್ಯ, ಇಮ್ಮಡಿ ಕೀರ್ತಿವರ್ಮ ಆಳಿದರು. 2ನೆಯ ವಿಕ್ರಮಾದಿತ್ಯ ಪಲ್ಲವರನ್ನು ಗೆದ್ದಾಗ ಕಾಂಚೀ ನಗರವನ್ನು ಹಾಳು ಮಾಡದೆ, ಅಲ್ಲಿನ ರಾಜಸೀಂಹೇಶ್ವರ ದೇವಾಲಯಕ್ಕೆ ದಾನ ನೀಡಿದ. ಅವನ ಕಾಲದಲ್ಲೇ ಪಟ್ಟದಕಲ್ಲಿನಲ್ಲಿ ಎರಡು ಉತ್ತಮ ಶಿವಾಲಯಗಳನ್ನು ಅವನ ಇಬ್ಷರು ರಾಣಿಯರು ಕಟ್ಟಿಸಿದರು. ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ಬಾದಾಮಿ ಚಾಲುಕ್ಯ ವಂಶದ ಆಳ್ವಿಕೆ ಕೊನೆಗೊಂಡಿತು.

ರಾಷ್ಟ್ರಕೂಟರು

ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದ ರಾಷ್ಟ್ರಕೂಟರು ಬಾದಾಮಿ ಚಾಲುಕ್ಯ ವಂಶದ ಇಮ್ಮಡಿ ಕೀರ್ತಿವರ್ಮನ ನಂತರ ಕ್ರಿ.ಶ. 733ರ ವೇಳೆಗೆ ಲಟ್ಟಲೂರನ್ನು (ಉಸ್ಮಾನಾಬಾದ್ ಜಿಲ್ಲೆಯ ಲಾತೂರು) ರಾಜಧಾನಿ ಮಾಡಿಕೊಂಡು ಆಳತೊಡಗಿದರು. ನಂತರ ಅವರ ರಾಜಧಾನಿ ಮಾನ್ಯಖೇಟ (ಗುಲ್ಷರ್ಗ ಜಿಲ್ಲೆಯ ಮಳಖೇಡ್)ಕ್ಕೆ ಬದಲಾಯಿತು. ರಾಷ್ಟ್ರಕೂಟ 1ನೆಯ ಕೃಷ್ಣನ ಕಾಲದಲ್ಲಿ ಎಲ್ಲೋರದ ಕೈಲಾಸದ ದೇವಾಲಯದ ನಿರ್ಮಾಣ ಕಾರ್ಯ ಆರಂಭವಾಯಿತು. ಅವನ ಕಾಲದಲ್ಲೇ ಗಂಗವಾಡಿಯೂ ರಾಷ್ಟ್ರಕೂಟರ ವಶವಾಯಿತು. ಅವನ ನಂತರ ಧ್ರುವ ಮತ್ತು ಗೋವಿಂದರ ನಡುವೆ ರಾಜ್ಯಾಧಿಕಾರಕ್ಕೆ ಹೋರಾಟ ನಡೆದು ಧ್ರುವನೇ ದೊರೆಯಾದ ಮತ್ತು ರಾಷ್ಟ್ರಕೂಟ ರಾಜ್ಯವನ್ನು ನರ್ಮದೆಯ ಆಚೆಗೂ ವಿಸ್ತರಿಸಿದ. ಧ್ರುವನ ನಂತರ 3ನೆಯ ಗೋವಿಂದ, ಅಮೋಘವರ್ಷ ನೃಪತುಂಗ, ಇಮ್ಮಡಿಕೃಷ್ಣ, ಮುಮ್ಮಡಿ ಇಂದ್ರ, ಇಮ್ಮಡಿ ಅಮೋಘವರ್ಷ, ಮುಮ್ಮಡಿ ಕೃಷ್ಣ ಇತ್ಯಾದಿ ದೊರೆಗಳು ರಾಷ್ಟ್ರಕೂಟ ಸಾಮ್ರಾಜ್ಯವನ್ನಾಳಿದರು. ಅವರ ಪೈಕಿ ಅಮೋಘವರ್ಷ ನೃಪತುಂಗನು, ಅವನ ಕಾಲದಲ್ಲಿ ಶ್ರೀವಿಜಯನಿಂದ ರಚಿತವಾದ `ಕವಿರಾಜಮಾರ್ಗ' ಕೃತಿಯಿಂದ ಹೆಸರು ಪಡೆದಿದ್ದಾನೆ. ಮೊದಲಿಗೆ ಗಂಗರೊಡನೆ ಯುದ್ಧಗಳನ್ನು ಮಾಡಿ ಗೆಲುವು ಪಡೆದ ರಾಷ್ಟ್ರಕೂಟರು, ಅನಂತರ ಅವರೊಡನೆ ಉತ್ತಮ ಸಂಬಂಧ ಬೆಳೆಸಿ ಕೊನೆಯ ಕಾಲದಲ್ಲಿ ಚೋಳರೊಡನೆ ಹೋರಾಡುವಾಗ ಹೆಚ್ಚಿನ ನೆರವನ್ನು ಸ್ವೀಕರಿಸಿದರು. 1ನೆಯ ಕೃಷ್ಣ, ನೃಪತುಂಗ ಮತ್ತು ಮುಮ್ಮಡಿ ಕೃಷ್ಣ ರಾಷ್ಟ್ರಕೂಟ ವಂಶದ ಜನಾನುರಾಗಿ ದೊರೆಗಳಾಗಿದ್ದರು. ಇವರ ಕಾಲದಲ್ಲಿ ಕರ್ನಾಟಕವು ಮಧ್ಯಪ್ರದೇಶದವರೆಗೆ ವಿಸ್ತರಿಸಿತ್ತು.

ಹೊಯ್ಸಳರು

ಗಂಗರ ನಂತರ ಕರ್ನಾಟಕದ ದಕ್ಷಿಣ ಭಾಗದಲ್ಲಿ ಪ್ರಬಲರಾಗಿದ್ದ ಹೊಯ್ಸಳರು ಮೊದಲಿಗೆ ಕಲ್ಯಾಣ ಚಾಲುಕ್ಯರ ಮಾಂಡಲಿಕರೇ ಆಗಿದ್ದರು. ನೃಪಕಾಮ, ವಿನಯಾದಿತ್ಯ, ಎರೆಯಂಗ ಮತ್ತು 1ನೆಯ ಬಲ್ಲಾಳನ ನಂತರ ಹೊಯ್ಸಳ ದೊರೆಯಾದ ವಿಷ್ಣುವರ್ಧನನು ಸ್ವತಂತ್ರನಾಗಲು ಪ್ರಯತ್ನಿಸಿದನಾದರೂ ಗೆಲುವು ದೊರೆಯಲಿಲ್ಲ. ಚೆಂಗಾಳ್ವರು, ಆಳ್ವಖೇಡರು, ಉಚ್ಚಂಗಿಯ ಪಾಂಡ್ಯರು, ದೇವಗಿರಿಯ ಸೇಉಣರು, ಹಾನಗಲ್ಲಿನ ಕದಂಬರು ಇತ್ಯಾದಿ ರಾಜರನ್ನು ಸೋಲಿಸಿ ಪ್ರಬಲನಾದ ವಿಷ್ಣುವರ್ಧನನು ಚಾಲುಕ್ಯರನ್ನು ಪೂರ್ಣವಾಗಿ ಗೆದ್ದು ಸ್ವತಂತ್ರನಾಗಲಿಲ್ಲ. ಆದರೆ ಅವನ ಮೊಮ್ಮಗ ಇಮ್ಮಡಿ ವೀರಬಲ್ಲಾಳನು ಕ್ರಿ.ಶ. 1190ರಲ್ಲಿ ಕಲ್ಯಾಣದ ಚಾಲುಕ್ಯರನ್ನು ಗೆದ್ದು ಸ್ವತಂತ್ರನಾದ. ಆ ವೇಳೆಗೆ ಚೋಳ ಹೊಯ್ಸಳ ವೈರವೂ ಕೊನೆಗೊಂಡಿತ್ತು. ಇಮ್ಮಡಿ ವೀರಬಲ್ಲಾಳನ ಮೊಮ್ಮಗ ಸೋಮೇಶ್ವರನು ತನ್ನ ಇಬ್ಷರು ಮಕ್ಕಳಿಗೆ ಹೊಯ್ಸಳ ರಾಜ್ಯವನ್ನು ಹಂಚಿದ. ಆಗ ರಾಮನಾಥನು ಕಣ್ಣಾನೂರನ್ನು ರಾಜಧಾನಿ ಮಾಡಿಕೊಂಡು ಆಳಿದ. ಆ ಕಾಲಕ್ಕೆ ಮುಸಲ್ಮಾನರ ದಾಳಿ ಅಧಿಕಗೊಳ್ಳುತ್ತಿತ್ತು. ದೆಹಲಿಯ ಖಿಲ್ಜಿ ವಂಶದ ಅಲ್ಲಾ ಉದ್ದೀನನ ಸೇನಾಧಿಪತಿ ಮಲ್ಲಿಕ್ ಕಾಫರ್ ಹೊಯ್ಸಳ ರಾಜಧಾನಿ ದ್ವಾರಸಮುದ್ರದ ಮೇಲೆ ಹಲವು ಬಾರಿ ದಾಳಿ ಮಾಡಿದ. ಅಂತಹ ಒಂದು ದಾಳಿಯಲ್ಲಿ ಮುಮ್ಮಡಿ ಬಲ್ಲಾಳನ ಮಗ 4ನೆಯ ಬಲ್ಲಾಳ ಸೆರೆಯಾದ. ಹೆಚ್ಚುತ್ತಿದ್ದ ಮುಸಲ್ಮಾನರ ದಾಳಿಯನ್ನು ತಡೆಗಟ್ಟಲು ದಕ್ಷಿಣದ ರಾಜರೆಲ್ಲ ಒಂದಾಗಬೇಕೆಂಬ ಕನಸು ಕಂಡಿದ್ದ ಮುಮ್ಮಡಿ ಬಲ್ಲಾಳ ಹೊಯ್ಸಳ ಸಾಮ್ರಾಜ್ಯದ ಗಡಿಗಳಲ್ಲಿ ಪ್ರಬಲರಾದ ನಾಯಕರುಗಳಿಗೆ ಆಡಳಿತದ ಜವಾಬ್ದಾರಿಯನ್ನು ನೀಡಿದ್ದ. 4ನೆಯ ಬಲ್ಲಾಳನ ಕಾಲಕ್ಕೆ ಹೊಯ್ಸಳ ಸಾಮ್ರಾಜ್ಯ ಅವನತಿ ಹೊಂದಿತ್ತು. ಹೊಯ್ಸಳರು ಅನೇಕ ದೇವಾಲಯಗಳನ್ನು ನಿರ್ಮಿಸಿ ಕರ್ನಾಟಕದ ವಾಸ್ತು ಮತ್ತು ಮೂರ್ತಿಶಿಲ್ಪಕ್ಕೆ ನೀಡಿರುವ ಕೊಡುಗೆ ಅನನ್ಯ. ಬೇಲೂರು, ಹಳೆಬೀಡು, ಮತ್ತಿತರ ಸ್ಥಳಗಳಲ್ಲಿ ಅವರ ಕಾಲದ ಅತ್ಯುತ್ಕಷ್ಟ ದೇವಾಲಯಗಳನ್ನು ಕಾಣಬಹುದು.

ವಿಜಯನಗರದ ಅರಸರು

13ನೆಯ ಶತಮಾನದಲ್ಲಿ ಭಾರತವು ಮುಸಲ್ಮಾನರ ದಾಳಿಯಿಂದ ತತ್ತರಿಸಿತು. ದಕ್ಷಿಣದ್ಲಲೂ ಕಾಕತೀಯರು, ಹೊಯ್ಸಳರು, ಸೇಉಣರು, ಕಂಪಿಲಿಯವರು, ಮಧುರೆಯವರು ಮುಸಲ್ಮಾನರ ದಾಳಿಗೆ ಗುರಿಯಾದರು. ಅವರ ದಾಳಿಯನ್ನು ಎದುರಿಸಲು ದಕ್ಷಿಣದ ರಾಜರೆಲ್ಲರೂ ಒಗ್ಗೂಡಿದರು. ಕ್ರಿ.ಶ. 1336ರಲ್ಲಿ ಸಂಗಮ ವಂಶದ ಹರಿಹರನು ವಿಜಯನಗರ ಸಾಮ್ರಾಜ್ಯವನ್ನು ಆಳತೊಡಗಿದ. ಅದೇ ಕಾಲಕ್ಕೆ ಗುಲಬರ್ಗದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯೂ ಆರಂಭವಾಯಿತು. ತನ್ನ ಸಹೋದರರ ನೆರವಿನಿಂದ ಆಳತೊಡಗಿದ ಹರಿಹರನು ರಾಜ್ಯ ವಿಸ್ತರಣೆ ಮಾಡಿದ. ನಂತರ ಅವನ ತಮ್ಮ ಬುಕ್ಕರಾಯನ ಕಾಲದಲ್ಲೂ ರಾಜ್ಯ ವಿಸ್ತರಣೆ ಆಯಿತು. ಮಧುರೆಯ ಸುಲ್ತಾನರನ್ನೂ ಸೋಲಿಸಲಾಯಿತು. ಬುಕ್ಕನ ಮಗ ಇಮ್ಮಡಿ ಹರಿಹರನು ಚೋಳ ಮತ್ತು ಪಾಂಡ್ಯರ ದಂಗೆಗಳನ್ನು ಅಡಗಿಸಿ ಶ್ರೀಲಂಕಾದ ಅರಸನನ್ನೂ ಸೋಲಿಸಿದ. ಅವನ ನಂತರ ಅಧಿಕಾರಕ್ಕೆ ಹೋರಾಟ ನಡೆದು ದೇವರಾಯ ಪಟ್ಟಕ್ಕೆ ಬಂದ. ಕೆಲವು ಹಿಂದೂ ರಾಜರ ನೆರವಿನಿಂದಲೇ ಬಹಮನಿ ಸುಲ್ತಾನ ಫಿರೋಜ್ಷಾಸ ದೇವರಾಯನ ಮೇಲೆ ಯುದ್ಧ ಮಾಡಿದ. ದೇವರಾಯನಿಗೆ ಗೆಲುವು ಲಭಿಸಿ, ಆಂಧ್ರದ ಪೂರ್ವ ತೀರದವರೆಗೂ ವಿಜಯನಗರ ವಿಸ್ತರಿಸಲ್ಪಟ್ಟಿತು. ದೇವರಾಯನು ಅರೇಬಿಯಾ ಮತ್ತು ಪರ್ಷಿಯಾ ದೇಶಗಳೊಡನೆ ವ್ಯಾಪಾರ ಸಂಬಂಧ ಬೆಳೆಸಿಕೊಂಡು ಅಲ್ಲಿಂದ ಕುದುರೆಗಳನ್ನು ತರಿಸಿಕೊಳ್ಳುತ್ತಿದ್ದ. ಅವನ ಕಾಲದಲ್ಲೇ ತುಂಗಭದ್ರೆಗೆ ಒಂದು ಅಣೆಕಟ್ಟೆ ಸಹ ನಿರ್ಮಾಣವಾಯಿತು. ಪ್ರೌಢದೇವರಾಯ ಎಂದೇ ಖ್ಯಾತನಾದ ಇಮ್ಮಡಿ ದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವು ಪ್ರಖ್ಯಾತವಾಯಿತು. ಎರಡು ಬಾರಿ ಬಹಮನಿ ಸುಲ್ತಾನರೊಡನೆ ಯುದ್ಧ ನಡೆಯಿತು. ಫಲಿತಾಂಶ ನಿರ್ಣಾಯಕವಾಗಲಿಲ್ಲ

ಬಹಮನಿ ಸುಲ್ತಾನರು

ದೆಹಲಿಯಲ್ಲಿ ಮಹಮದ್ ಬಿನ್ ತೊಗಲಕನ ನಿರಂಕುಶ ಆಳ್ವಿಕೆಯಿಂದ ಬೇಸತ್ತು ಬಂಡೆದ್ದ ಅವನ ಕೆಲವು ಅಧಿಕಾರಿಗಳು, ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶಗಳನ್ನು ತಾವೇ ಸ್ವತಂತ್ರರಾಗಿ ಆಳತೊಡಗಿದರು. ಅಂತಹವರಲ್ಲಿ ಬಹಮನಿ ಸುಲ್ತಾನರೂ ಒಬ್ಷರು. ಗುಲ್ಷರ್ಗವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಾ ಉದ್ದೀನ್ ಹಸನ್ ಬಹ್ಮನ್ ಷಹನಿಂದ ಕ್ರಿ.ಶ. 1347ರಲ್ಲಿ ಸ್ಥಾಪಿತವಾದ ಬಹಮನಿ ವಂಶವು ಕ್ರಿ.ಶ. 1518ರ ವರೆಗೆ ಕರ್ನಾಟಕದ ಬೀದರ್, ಗುಲ್ಷರ್ಗ ಮತ್ತು ರಾಯಚೂರುಗಳನ್ನೊಳಗೊಂಡ ಪ್ರದೇಶಗಳನ್ನು ಆಳಿತು. ಹಸನ್ ಬಹ್ಮನ್ ಷಹನ ನಂತರ ಅವನ ಮಗ 1ನೆಯ ಮಹಮದನು ಪಟ್ಟಕ್ಕೆ ಬಂದ. ಅವನ ಕಾಲದಲ್ಲಿ ವಿಜಯನಗರದೊಡನೆ ಹಲವು ಯುದ್ಧಗಳು ನಡೆದವು. ಆ ನಂತರ ಆಳಿದ ರಾಜರುಗಳೂ ವಿಜಯನಗರದೊಡನೆ ಯುದ್ಧಗಳಲ್ಲಿ ನಿರತರಾಗಬೇಕಾಯಿತು. ಸಂತ ಎಂದೇ ಗೌರವಿಸಲ್ಪಡುವ ಮಹಮದ್ನ್ ಕಾಲದಲ್ಲಿ ರಾಜಧಾನಿಯು ಬೀದರ್ಗೆಿ ಬದಲಾಯಿತು. ಕ್ರೂರಿಯೆಂದು ಪರಿಗಣಿತನಾದ ಸುಲ್ತಾನ್ ಹುಮಾಯೂನ್ನಡ ಮಂತ್ರಿಯಾದ ಮಹಮದ್ ಗವಾನನು ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅವಶ್ಯಕವಾದ ಸುಧಾರಣೆಗಳನ್ನು ಮಾಡಿದ. ಬೃಹತ್ ಗ್ರಂಥಭಂಡಾರವೊಂದನ್ನು ಹೊಂದಿದ್ದ. ಮಹಮದ್ ಗವಾನನ ಮೇಲೆ ಬಂದ ದೂರುಗಳೆಲ್ಲ ಸುಳ್ಳು ಎಂದು ತಿಳಿಯುವ ಮೊದಲೇ ಅವನನ್ನು ಗಲ್ಲಿಗೇರಿಸಲಾಗಿತ್ತು. ಕ್ರಿ.ಶ. 1518ರಲ್ಲಿ ಬಹಮನಿ ರಾಜ್ಯದಲ್ಲಿ ಪ್ರಾಂತಾಧಿಕಾರಿಗಳಾಗಿದ್ದವರೇ ಸ್ವತಂತ್ರರಾಗಿ ಆಳತೊಡಗಿದಾಗ, ರಾಜ್ಯವು ಐದು ಭಾಗಗಳಾಗಿ ಒಡೆಯಿತು. ಅವುಗಳೆಂದರೆ ಬಿಜಾಪುರ (ಆದಿಲ್ಷಾಧಹಿ), ಬೀದರ್ (ಬರೀದ್ಷಾೊಹಿ), ಅಹಮದ್ ನಗರ (ಇಮದ್ಷಾೇಹಿ), ಗೊಲ್ಕೊಂಡ (ನಿಜಾಮ್ಷಾಗಹಿ) ಮತ್ತು ಗುಲ್ಷರ್ಗಾ (ಕುತುಬ್ಷಾ(ಹಿ).

ಅರವೀಡು ಮನೆತನ

ವಿಜಯನಗರ ಸಾಮ್ರಾಜ್ಯವು ಅವನತಿಯ ಹಂತದಲ್ಲಿ ಅಧಿಕಾರ ನಡೆಸಿದ ಅಳಿಯ ರಾಮರಾಯ ಅರವೀಡು ಮನೆತನದವನು. ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಆತನ ಸೋದರರು ಪೆನುಗೊಂಡೆಗೆ ಓಡಿಹೋಗಿ, ಅಲ್ಲಿಂದ ಸ್ವತಂತ್ರರಾಗುವ ಪ್ರಯತ್ನ ನಡೆಸಿದರು. ಯುದ್ಧಾನಂತರ ಷಾಹಿಸುಲ್ತಾನರ ಒಕ್ಕೂಟವೂ ಒಡೆದುಹೋಗಿತ್ತು. ರಕ್ಕಸಗಿ - ತಂಗಡಗಿ ಯುದ್ಧವಾದ ಐದು ವರ್ಷಗಳ ನಂತರ ವಿಜಯನಗರ ದೊರೆಯೆಂದು ಪಟ್ಟಕ್ಕೆ ಬಂದ ತಿರುಮಲನು ತನ್ನ ಎಂಟು ವರ್ಷಗಳ ಆಳ್ವಿಕೆಯಲ್ಲಿ ರಾಜ್ಯವನ್ನು ಮೂರು (ಪೆನುಗೊಂಡೆ, ಶ್ರೀರಂಗಪಟ್ಟಣ, ಚಂದ್ರಗಿರಿ) ಭಾಗಗಳನ್ನಾಗಿ ಮಾಡಿ ಅಲ್ಲಿಗೆ ಪ್ರಾಂತ್ಯಾಧಿಕಾರಿಗಳನ್ನಾಗಿ ತನ್ನ ಮಕ್ಕಳನ್ನೇ ನೇಮಿಸಿದ. ಇವನ ಕಾಲದಲ್ಲಿ ಬಿಜಾಪುರದ ಆದಿಲ್ಷಾರಹಿಗಳ ದಾಳಿ ಅಧಿಕವಾಗಿತ್ತು ಮತ್ತು ಸ್ಥಳೀಯ ಪಾಳೆಯಗಾರರು ಸ್ವತಂತ್ರರಾಗಲು ಪ್ರಯತ್ನಿಸಿದರು. ಅಂತಹವರಲ್ಲಿ ಶ್ರೀರಂಗಪಟ್ಟಣದ ರಾಜ ಒಡೆಯರೂ ಒಬ್ಷರು. ಪಾಳೆಯಗಾರರು ಯಾರೂ ಅರವೀಡು ಮನೆತನಕ್ಕೆ ನಿಷ್ಠರಾಗಿರಲಿಲ್ಲ. ಆದಿಲ್ಷಾತಹಿಗಳ ದಾಳಿಯೂ ಹೆಚ್ಚುತ್ತಿತ್ತು. ಅಂತಹ ಸನ್ನಿವೇಶದಲ್ಲಿ ಅರವೀಡು ಮನೆತನದ ಆಳ್ವಿಕೆ ಕೊನೆಗೊಂಡು ಕರ್ನಾಟಕವನ್ನು ಹಲವರು ಪಾಳೆಯಗಾರರು ಮತ್ತು ಮೈಸೂರು ಒಡೆಯರು ಆಳಿದರು.

ಕರ್ನಾಟಕದ ಪಾಳೆಯಗಾರರು

ದಕ್ಷಿಣ ಭಾರತದಲ್ಲಿ ಮುಸಲ್ಮಾನರ ದಾಳಿ ಹೆಚ್ಚಾದಾಗ, ಹಲವು ಸ್ಥಳೀಯ ಅಧಿಕಾರಿಗಳು ಮತ್ತು ಮಾಂಡಲೀಕರು ಸ್ವಂತ ಸೈನ್ಯವನ್ನು ಹೊಂದಿ, ಸಮಯ ಬಂದಾಗ ತಮ್ಮ ದೊರೆಗಳಿಗೆ ನೆರವಾಗುತ್ತಿದ್ದರು. ವಿಜಯನಗರದ ಕಾಲದಲ್ಲಿ ಅಂತಹ ಹಲವು ಮಾಂಡಲೀಕರು ಮತ್ತು ಅಧಿಕಾರಿಗಳಿಗೆ ರಾಜಮನ್ನಣೆಯೂ ದೊರೆತು, ಪಾಳೆಯಗಾರರೆನಿಸಿಕೊಂಡರು. ವಿಜಯನಗರದ ಪತನಾನಂತರ ಅವರೇ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಅಂತಹ ಪಾಳೆಯಗಾರರ ಸಂಖ್ಯೆ ಕರ್ನಾಟಕದಲ್ಲಿ 60ಕ್ಕೂ ಹೆಚ್ಚಾಗಿಯೇ ಇತ್ತು. ಕರ್ನಾಟಕದ ಕೆಲವು ಪ್ರಮುಖ ಪಾಳೆಯ ಪಟ್ಟುಗಳೆಂದರೆ ಕೆಳದಿ, ಚಿತ್ರದುರ್ಗ, ಆವತಿ, ಉಮ್ಮತೂರು, ಚನ್ನಪಟ್ಟಣ, ಚಿಕ್ಕಬಳ್ಳಾಪುರ, ತರೀಕೆರೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಮಾಗಡಿ, ಸುಗಟೂರು, ಹರತಿ, ಹರಪನಹಳ್ಳಿ, ಹಾಗಲವಾಡಿ ಇತ್ಯಾದಿ. ಅಧಿಕಾರಕ್ಕಾಗಿ ಹಲವು ಪಾಳೆಯಗಾರರು ತಮ್ಮ ತಮ್ಮಲ್ಲೇ ಹೋರಾಡಿದರೂ ಜನತೆಯ ಹಿತಕ್ಕಾಗಿ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದರು. ಉಮ್ಮತ್ತೂರು, ಕೆಳದಿ ಮತ್ತು ಚಿತ್ರದುರ್ಗದ ಪಾಳೆಯ ಪಟ್ಟುಗಳು, ಬಹು ಪ್ರಬಲವಾಗಿದ್ದವು. ಟಿಪ್ಪುಸುಲ್ತಾನನ ಕಾಲಕ್ಕೆ ಬಹುತೇಕ ಪಾಳೆಯ ಪಟ್ಟುಗಳು ಅವನತಿ ಹೊಂದಿದ್ದವು. ಹಲವು ಪಾಳೆಯ ಪಟ್ಟುಗಳು ಮುಸಲ್ಮಾನ್ ದಾಳಿ ಮತ್ತು ಮರಾಠಾ ಆಕ್ರಮಣವನ್ನು ಸಮರ್ಥವಾಗಿ ಎದುರಿಸುತ್ತಿದ್ದವು. ಕೆಳದಿಯ ನಾಯಕರಂತೂ ಆಡಳಿತಾತ್ಮಕವಾಗಿ ಹೆಚ್ಚಿನ ಶಿಸ್ತನ್ನು ಅನುಸರಿಸುತ್ತಿದ್ದರು ಮಾತ್ರವಲ್ಲದೆ ಉತ್ತಮ ವ್ಯಾಪಾರ ಸಂಬಂಧವನ್ನು ಹೊಂದಿದ್ದರು.

ಮೈಸೂರಿನ ಒಡೆಯರು

ಮೊದಲಿಗೆ ಶ್ರೀರಂಗಪಟ್ಟಣ ಮತ್ತು ಆನಂತರ ಮೈಸೂರನ್ನು ರಾಜಧಾನಿಯನ್ನಾಗಿ ಹೊಂದಿ ಆಳಿದ ಮೈಸೂರಿನ ಅರಸರ ಸ್ಪಷ್ಟ ಇತಿಹಾಸ ಆರಂಭವಾಗುವುದು ರಾಜ ಒಡೆಯರ ಕಾಲದಿಂದ. 1578ರಲ್ಲಿ ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಅರವೀಡು ಮನೆತನದ ರಾಜ ಪ್ರತಿನಿಧಿಯಾಗಿದ್ದ ರಾಮನನ್ನು ಸೋಲಿಸಿ ಸ್ವತಂತ್ರರಾಜರಾದ ಒಡೆಯರು ನಂತರ ಅನೇಕ ಪಾಳೆಯಗಾರರನ್ನು ಗೆದ್ದು ಮೈಸೂರು ಸಂಸ್ಥಾನವನ್ನು ವಿಸ್ತರಿಸಿದರು. 1ನೆಯ ಕಂಠೀರವ ನರಸರಾಜ ಒಡೆಯರ್ (ಕ್ರಿ.ಶ. 1638-1662) ಅವರ ಕಾಲದಲ್ಲಿ ಮೈಸೂರು ಸಂಸ್ಥಾನದ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಿದವು. ಚಿಕ್ಕದೇವರಾಜ ಒಡೆಯರ (ಕ್ರಿ.ಶ. 1672-1704) ಕಾಲದಲ್ಲಿ ಹಲವಾರು ಪಾಳೆಯ ಪಟ್ಟುಗಳು ಮೈಸೂರು ಸಂಸ್ಥಾನಕ್ಕೆ ಸೇರಿದವು. ಮೊಗಲರು ಮತ್ತು ಮರಾಠರ ಹೋರಾಟಗಳನ್ನು ಗಮನಿಸುತ್ತಾ ರಾಜ್ಯ ವಿಸ್ತರಿಸಿ, ಮೊಗಲರ ವಶದಲ್ಲಿದ್ದ ಬೆಂಗಳೂರನ್ನು ಕೊಂಡ ಚಿಕ್ಕದೇವರಾಜ ಒಡೆಯರ ನಂತರ ಅಧಿಕಾರವು ದಳವಾಯಿಗಳ ಕೈಗಳಿಗೆ ಸೇರಿತು. ಹೆಸರಿಗೆ ಮಾತ್ರ ರಾಜರಿದ್ದರು. ಇಮ್ಮಡಿ ಕೃಷ್ಣರಾಜರ ಕಾಲದಲ್ಲಿ ಮೈಸೂರು ಸಂಸ್ಥಾನದ ಸೈನ್ಯದಲ್ಲಿ ಸಾಮಾನ್ಯ ಸೈನಿಕನಾಗಿ ಸೇರಿದ ಹೈದರ್ ಆಲಿಯು ಆನಂತರ ದಳವಾಯಿಗಳ ಪ್ರಾಬಲ್ಯವನ್ನು ನಿಗ್ರಹಿಸಿದರೂ, ತಾನೇ ಸರ್ವಾಧಿಕಾರಿಯಾದ. ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡು ಹಲವು ಯುದ್ಧಗಳನ್ನು ಮಾಡಿ ರಾಜ್ಯವನ್ನು ವಿಸ್ತರಿಸಿದ ಮತ್ತು ರಕ್ಷಿಸಿದ. ಹೈದರನ ನಂತರ ಅವನ ಮಗ ಟಿಪ್ಪುಸುಲ್ತಾನ್ ಮೈಸೂರು ಸಂಸ್ಥಾನವನ್ನು ವಿಸ್ತರಿಸಿ, ಪ್ರಖ್ಯಾತಿಯನ್ನು ಪಡೆದ. ಬ್ರಿಟಿಷರೊಡನೆ ಹಲವಾರು ಯುದ್ಧಗಳನ್ನು ಮಾಡಿ ಸೋಲು - ಗೆಲುವುಗಳ ಮಿಶ್ರಣದ ಫಲವನ್ನು ಪಡೆಯುತ್ತಲೇ ಕೊನೆಗೆ ಕ್ರಿ.ಶ. 1799ರಲ್ಲಿ ನಡೆದ 4ನೆಯ ಮೈಸೂರು ಯುದ್ಧದಲ್ಲಿ ಮರಣ ಹೊಂದಿದ. ಕರ್ನಾಟಕದಿಂದ ಬ್ರಿಟಿಷರನ್ನು ಹೊರದೂಡುವ ಆಸೆ ಟಿಪ್ಪುವಿಗಿತ್ತು. ಟಿಪ್ಪುವಿನ ಮರಣಾನಂತರ ಮೈಸೂರು ಸಂಸ್ಥಾನವನ್ನು ಬ್ರಿಟಿಷರು, ಮರಾಠರು ಮತ್ತು ಹೈದರಾಬಾದ್ ನಿಜಾಮರು ಹಂಚಿಕೊಂಡರು. ಬ್ರಿಟಿಷರು ಮೈಸೂರು ಸಂಸ್ಥಾನಿಕರಿಗೇ ರಾಜ್ಯಾಧಿಕಾರ ನೀಡಿದರು. ಅಪ್ರಾಪ್ತ ವಯಸ್ಸಿನ ಮುಮ್ಮಡಿ ಕೃಷ್ಣರಾಜಒಡೆಯರ್ ಪಟ್ಟಕ್ಕೆ ಬಂದರು. ಬ್ರಿಟಿಷ್ ರೆಸಿಡೆಂಟರೇ ಆಡಳಿತದ ಮೇಲ್ವಿಚಾರಕರಾಗಿದ್ದರು. ಕ್ರಿ.ಶ. 1831ರಲ್ಲಿ ಕೃಷ್ಣರಾಜ ಒಡೆಯರ್ ಆಡಳಿತವು ದುರ್ಬಲವಾಗಿದೆಯೆಂದು, ತಾವೇ ಆಡಳಿತದ ಪೂರ್ಣಾಧಿಕಾರ ಪಡೆದ ಬ್ರಿಟಿಷರು ನಂತರ 1881ರಲ್ಲಿ ರಾಜ್ಯವನ್ನು ಮೈಸೂರು ಒಡೆಯರಿಗೆ ಮತ್ತೆ ಒಪ್ಪಿಸಿದರು. ಆಗ 6ನೆಯ ಚಾಮರಾಜ ಒಡೆಯರು ಅಧಿಕಾರ ವಹಿಸಿಕೊಂಡರು. ಮೊದಲು ಸರ್ ಮಾರ್ಕ್ ಕಬ್ಷನ್ ಮತ್ತು ಬೌರಿಂಗ್ ಅವರುಗಳು ಕಮೀಷನರಾಗಿದ್ದರು. ನಂತರ ದಿವಾನರು ರಾಜರಿಗೆ ಆಡಳಿತದಲ್ಲಿ ನೆರವಾದರು. ದಿವಾನ್ ಪೂರ್ಣಯ್ಯ, ರಂಗಾಚಾರ್ಲು, ಶೇಷಾದ್ರಿ ಅಯ್ಯರ್, ಪಿ.ಎನ್. ಕೃಷ್ಣಮೂರ್ತಿ, ಕಾಂತರಾಜ ಅರಸು, ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರುಗಳ ಕಾಲದಲ್ಲಿ ಅನೇಕ ಪ್ರಗತಿಪರ ಕೆಲಸಗಳು ನಡೆದು ಮೈಸೂರು ಮಾದರಿ ಸಂಸ್ಥಾನವೆಂದು ಹೆಸರು ಪಡೆಯಿತು. ಕ್ರಿ.ಶ. 1940ರಲ್ಲಿ ಪಟ್ಟಕ್ಕೆ ಬಂದು 1947ರ ವರೆಗೆ ಆಳಿದ ಜಯಚಾಮರಾಜ ಒಡೆಯರು ಮೈಸೂರು ಸಂಸ್ಥಾನದ ಕೊನೆಯ ದೊರೆ ಎನಿಸಿಕೊಂಡರು. ಕ್ರಿ.ಶ. 1830ರ ನಂತರ ಮೈಸೂರು ಸಂಸ್ಥಾನದಲ್ಲಿ ಹಲವಾರು ವಿದ್ಯಾಸಂಸ್ಥೆಗಳು, ಕಾರ್ಖಾನೆಗಳು, ಉದ್ಯಮಗಳು, ಆಸ್ಪತ್ರೆಗಳು, ರೈಲು ಮಾರ್ಗಗಳು ಆರಂಭಗೊಂಡು ಸಾರ್ಥಕ ಪ್ರಗತಿ ಸಾಧಿಸಿದವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ