ಸಮಾಜಕೇಂದ್ರಿತ ವಿಮರ್ಶೆ
ಸಾಹಿತಿಯೂ ಒಂದು ಸಮಾಜದ, ಒಂದು ಸಾಂಸ್ಕೃತಿಕ ಘಟಕದ ಅಂಗ. ಇತರರಂತೆಯೇ ಅವನೂ ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ, ಒಂದು ವಿಶಿಷ್ಟ ಸಮಾಜ ವ್ಯವಸ್ಥೆಯಲ್ಲಿ ಬೇರುಬಿಟ್ಟಿರುತ್ತಾನೆ. ಆದ್ದರಿಂದ ಆ ವಿಶಿಷ್ಟ ವ್ಯವಸ್ಥೆಯಿಂದ, ಮತ್ತು ಆ ಕಾಲಘಟ್ಟದಲ್ಲಿ ಪ್ರಭಾವಶಾಲಿಯಾದ ವೈಚಾರಿಕ ಪ್ರಣಾಲಿಗಳಿಂದ ಅವನು ಪ್ರಭಾವಿತನಾಗದೇ ಇರಲು ಸಾಧ್ಯವಿಲ್ಲ. ತನ್ನ ಸಮಕಾಲೀನ ವ್ಯವಸ್ಥೆಯನ್ನೂ ವೈಚಾರಿಕತೆಯನ್ನೂ ಅವನು ವಿರೋಧಿಸಬಹುದು, ಅಥವಾ ಒಪ್ಪಿಕೊಳ್ಳಬಹುದು ಅಥವಾ ಸುಧಾರಿಸಲು ಪ್ರಯತ್ನಿಸಬಹುದು, ಅಥವಾ ಅವೆಲ್ಲವನ್ನೂ ಮೀರಿ ನಿಂತು ತನ್ನತನವನ್ನು ಕಂಡುಕೊಳ್ಳಬಹುದು. ಆದರೆ ಒಂದಲ್ಲ ಒಂದು ರೀತಿಯಲ್ಲಿ ಅವುಗಳಿಗೆ ಸ್ಪಂದಿಸದೆ ಇರಲು ಸಾಧ್ಯವಿಲ್ಲ. ಈ ಮಾತು ವಾಸ್ತವಿಕತೆಗೆ ಸಂಬಂಧವಿಲ್ಲದಂತೆ ತೋರುವ ಮಕ್ಕಳ ಕಿನ್ನರ ಕಥೆಗಳಿಗೆ ಮತ್ತು ವೈಜ್ಞಾನಿಕ ಕತೆಗಳಿಗೆ ಕೂಡ ಅನ್ವಯಿಸುತ್ತದೆ. ಇವುಗಳೂ ಕೂಡ ಯಾವುದೋ ಒಂದು ನೆಲೆಯಲ್ಲಿ ವಾಸ್ತವಿಕತೆಗೇ ಪ್ರತಿಕ್ರಿಯಿಸುತ್ತಿರುತ್ತವೆ.
ಹಾಗೆಯೇ, ಆದಿಕವಿಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸಾಹಿತಿಗಳಿಗೂ ಒಂದು ಸಾಹಿತ್ಯಿಕ ಪರಂಪರೆಯಿರುತ್ತದೆ; ಮತ್ತು ಈ ಪರಂಪರೆಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೋರ್ವ ಸಾಹಿತಿಯೂ ಪ್ರತಿಕ್ರಿಯಿಸಲೇ ಬೇಕಾಗುತ್ತದೆ. ಆ ಪರಂಪರೆಯನ್ನು ಅವನು ಮುಂದುವರಿಸಲಿ ಅಥವಾ ತಿರಸ್ಕರಿಸಲಿ – ಆ ಪರಂಪರೆಯ ಅಸ್ತಿತ್ವವನ್ನು ಅವನು ಅಲ್ಲಗಳೆಯಲಾಗುವುದಿಲ್ಲ. ಪರಿಪೂರ್ಣ ಸ್ವೋಪಜ್ಞತೆ ಸಾಹಿತ್ಯಕ್ಷೇತ್ರದಲ್ಲಿ ಒಂದು ಮಿಥ್ಯೆಯೇ ಸರಿ.
ಈ ಕಾರಣಗಳಿಂದಾಗಿ ಯಾವುದೇ ಒಂದು ಸಾಹಿತ್ಯ ಕೃತಿಯನ್ನು ನಾವು ಅರ್ಥ ಮಾಡಿಕೊಳ್ಳಲು ಮತ್ತು ಮೌಲ್ಯಮಾಪನ ಮಾಡಲು ಆ ಕೃತಿ ರಚನೆಯಾದ ಸಾಮಾಜಿಕ ವ್ಯವಸ್ಥೆ ಆ ಕಾಲದಲ್ಲಿದ್ದ ಪ್ರಮುಖ ವೈಚಾರಿಕ ಪ್ರಣಾಲಿ, ಮತ್ತು ಆ ಕೃತಿಯ ಹಿಂದಿದ್ದ ಸಾಹಿತ್ಯಿಕ ಪರಂಪರೆ ಇವುಗಳ ಅರಿವು ನಮಗಿರಲೇಬೇಕು; ಮತ್ತು ಈ ಅರಿವಿನಲ್ಲಿಯೇ ಒಂದು ಕೃತಿ ಹಾಗೂ ಅದು ನಿರ್ಮಾಣವಾದ ಸಮಾಜ, ಕೃತಿ ಹಾಗೂ ಆ ಕಾಲದ ವೈಚಾರಿಕತೆ – ಇವುಗಳ ನಡುವಣ ಸಂಕೀರ್ಣ ಸಂಬಂಧಗಳನ್ನು ವಿಶ್ಲೇಷಿಸಿ ವ್ಯಾಖ್ಯಾನಿಸುವುದೇ ವಿಮರ್ಶಕನ ಮೂಲಭೂತ ಕರ್ತವ್ಯ – ಎಂಬ ನಿಲುವಿನಲ್ಲಿ ಹೊರಡುವ ವಿಮರ್ಶೆಯನ್ನು ಸಮಾಜಕೇಂದ್ರಿತ ವಿಮರ್ಶೆ ಎನ್ನಬಹುದು.
ಸಮಾಜಕೇಂದ್ರಿತ ವಿಮರ್ಶೆ ಈ ಶತಮಾನದಲ್ಲಿ ನಾನಾ ಮಾರ್ಗಗಳಲ್ಲಿ, ನಾನಾ ರೂಪಗಳಲ್ಲಿ ಬೆಳೆದು ಶ್ರೀಮಂತವಾಗಿದೆ. ನಮ್ಮ ಅಧ್ಯಯನದ ಅನುಕೂಲಕ್ಕಾಗಿ ನಾವು ಇಂತಹ ವಿಮರ್ಶೆಯ ಮೂರು ಮುಖ್ಯ ಪ್ರಭೇದಗಳನ್ನು ಗುರುತಿಸಬಹುದು. ಅವೆಂದರೆ ಚಾರಿತ್ರಿಕ ವಿಮರ್ಶೆ, ಮಾರ್ಕ್ಸ್‌ವಾದಿ ವಿಮರ್ಶೆ ಮತ್ತು ಸ್ತ್ರೀನಿಷ್ಠ ವಿಮರ್ಶೆ.
೧. ಚಾರಿತ್ರಿಕವಿಮರ್ಶೆ:
ಚಾರಿತ್ರಿಕ ವಿಮರ್ಶೆಯ ಮುಖ್ಯ ಪರಿಮಾಣಗಳನ್ನು (Parameters) ಗುರುತಿಸುವುದು ಕಷ್ಟಸಾಧ್ಯ. ಏಕೆಂದರೆ ಚಾರಿತ್ರಿಕ ವಿಮರ್ಶೆಯ ಲಕ್ಷಣಗಳು ವಿಮರ್ಶಕನಿಂದ ವಿಮರ್ಶಕನಿಗೆ ಬದಲಾಗುತ್ತಾ ಹೋಗುತ್ತವೆ.
೧) ಲೇಖಕನೊಬ್ಬನ ಸಮಕಾಲೀನ ಸಾಹಿತ್ಯಿಕ ಅಥವಾ / ಮತ್ತು ಸಾಂಸ್ಕೃತಿಕ ಸನ್ನಿವೇಶವನ್ನು ಅಪಾರ ಪಾಂಡಿತ್ಯ ಹಾಗೂ ಶ್ರಮದ ಮೂಲಕ ಪುನರ್ನಿರ್ಮಿಸುವುದು; ೨) ಕೃತಿ-ನಿರ್ಮಾಣ ಕಾಲದಲ್ಲಿ ಪ್ರಭಾವಶಾಲಿಯಾಗಿದ್ದ ವೈಚಾರಿಕತೆಯನ್ನು ಗುರುತಿಸುವುದು ೩) ಒಂದು ಕೃತಿಯ ಸಾಹಿತ್ಯಿಕ ಆಕರಗಳು ಮತ್ತು ಒಂದು ಕೃತಿಯ ಮೇಲೆ ಪ್ರಭಾವ ಬೀರಿರಬಹುದಾದ ಇತರ ಕೃತಿಗಳು – ಇವನ್ನು ಸಂಶೋಧಿಸುವುದು; ೪) ಪ್ರಾಚೀನ ಕಾಲದ ಕೃತಿಯ ಅನೇಕ ಪಾಠಾಂತರಗಳನ್ನು ಪರಿಶೀಲಿಸಿ ಯೋಗ್ಯ ‘ಪಠ್ಯ’ವನ್ನು ಸಿದ್ಧಪಡಿಸುವುದು; ೫) ಒಂದು ಕೃತಿಯ ಕಾಲ – ನಿರ್ದೇಶನ ಮಾಡುವುದು ; ೬) ಕೃತಿಕಾರನ ವೈಚಾರಿಕ ಮೌಲ್ಯಗಳನ್ನು ಗುರುತಿಸುವುದು ೭) ಕೃತಿಕಾರನ ಜೀವನ ಚರಿತ್ರೆಯನ್ನು ಸಿದ್ಧಪಡಿಸುವುದು – ಇವೆಲ್ಲವೂ ಚಾರಿತ್ರಿಕ ವಿಮರ್ಶೆಯ ವ್ಯಾಪ್ತಿಯೊಳಗೇ ಬರುತ್ತವೆ. (ನೋಡಿ : Handy and Westbrook, ೧೯೭೪ : ೩೦೪-೬). ಎಂದರೆ, ಇವೆಲ್ಲಾ ಕಾಳಜಿಗಳೂ ಎಲ್ಲಾ ಚಾರಿತ್ರಿಕ ವಿಮರ್ಶಕರಲ್ಲಿರುತ್ತವೆ ಎಂದಲ್ಲ, ಕೆಲ ಕೆಲವು ಕಾಳಜಿಗಳು ಕೆಲ ವಿಮರ್ಶಕರಲ್ಲಿ ಮುಖ್ಯವಾಗಿ ಕಂಡುಬರುತ್ತವೆ.
ಎಡ್ಮಂಡ್ ವಿಲ್ಸನ್‌ನ ಪ್ರಕಾರ ಚಾರಿತ್ರಿಕ ವಿಮರ್ಶೆ ೧೮ನೆಯ ಶತಮಾನದ ಇಟಾಲಿಯನ್ ದಾರ್ಶನಿಕ ವಿಕೋನಿಂದಲೇ ಪ್ರಾರಂಭವಾಗುತ್ತದೆ. ವಿಕೋ ಹೋಮರ್ ರಚಿಸಿದ ‘ಇಲಿಯಡ್’ನ ಗ್ರೀಕ್ ಸಮಾಜವನ್ನು ‘ಒಡಿಸ್ಸಿ’ಯ ಗ್ರೀಕ್ ಸಮಾಜದೊಡನೆ ತುಲನೆ ಮಾಡುತ್ತಾ ಅವರೆಡು ಕೃತಿಗಳಿಗೂ ಮತ್ತು ಅವೆರಡರ ಸಮಾಜ ವ್ಯವಸ್ಥೆಗಳಿಗೂ ಇರುವ ಸಂಬಂಧವನ್ನು ಚರ್ಚಿಸುತ್ತಾನೆ. ಆದರೆ ಚಾರಿತ್ರಿಕ ವಿಮರ್ಶೆಯ ಜನಕನೆಂದರೆ ೧೯ನೆಯ ಶತಮಾನದ ಫ್ರೆಂಚ್ ವಿಮರ್ಶಕ – ಇತಿಹಾಸಕಾರ ಹಿಪೋಲಿಟ್ ಟೇನ್ (Hyppolyte Taine). ತನ್ನ ಸುಪ್ರಸಿದ್ಧ ‘ಇಂಗ್ಲಿಷ್ ಸಾಹಿತ್ಯದ ಇತಿಹಾಸ’ (1863) ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ಟೇನ್ ಚಾರಿತ್ರಿಕ ವಿಮರ್ಶೆಯ ಮೂಲ ಸಿದ್ಧಾಂತಗಳನ್ನು ವಿವರಿಸುತ್ತಾನೆ. ಅದೇ ಕಾಲದ ಕ್ರಾಂತಿಕಾರಕ ಇತಿಹಾಸಕಾರ ಲೆಪಲ್ಡ್ ರ್ಯಾಂಕ್ (Leopold Ranke)ನ ವಿಚಾರಗಳಿಂದ ಪ್ರಭಾವಿತನಾದ ಟೇನ್ ಸಾಹಿತ್ಯ ವಿಮರ್ಶೆಯಲ್ಲಿ ಅನುಸರಿಸಬೇಕಾದ ಮೂರು ನಿರ್ಣಾಯಕ ಪ್ರಮಾಣಗಳನ್ನು ‘ಜನಾಂಗ – ಕಾಲಘಟ್ಟ – ಯುಗ’ (race -moment-milieu; ತನ್ನ ಮೊದಲಿನ ಆವೃತ್ತಿಯಲ್ಲಿ ಅವನು `race – surroundings – epoch’ ಎಂದು ಗುರುತಿಸಿದ್ದನು) ಎಂದು ಮಂಡಿಸುತ್ತಾನೆ. ಟೇನ್‌ನ ಪ್ರಕಾರ (ಅಥವಾ ರ್ಯಾಂಕ್‌ನ ವಿಚಾರವನ್ನು ಟೇನ್ ಹೇಳುವಂತೆ) ಪ್ರತಿಯೊಂದು ಜನಾಂಗಕ್ಕೂ ತನ್ನದೇ ಆದ ವಿಶಿಷ್ಟ ಪ್ರತಿಭೆಯಿದೆ (genius of the race) ಮತ್ತು ಈ ವಿಶಿಷ್ಟ ಪ್ರತಿಭೆಯನ್ನು ಆ ಜನಾಂಗ ವಾಸಿಸುವ ನಾಡಿನ ಭೌಗೋಳಿಕತೆ (ಅತಿಶೀತ ಪ್ರದೇಶ ಅಥವಾ ಅತ್ಯುಷ್ಣ ಪ್ರದೇಶ, ಫಲವತ್ತಾದ ನೆಲ ಅಥವಾ ಕೃಷಿ ಕಷ್ಟಸಾಧ್ಯವಾಗಿರುವ ಇತ್ಯಾದಿ) ರೂಪಿಸಿರುತ್ತದೆ. ಕಾಲಘಟ್ಟವೆಂದರೆ ಒಂದು ವಿಶಿಷ್ಟ ಚಾರಿತ್ರಿಕ ಕಾಲ (ವ್ಯಕ್ತಿಯ ಜೀವನದಲ್ಲಿ ಹಾಗೂ ಸಮಾಜದಲ್ಲಿ) : ಲೇಖಕ ಒಂದು ಕೃತಿಯನ್ನು ರಚಿಸುವಾಗ ಅಂಧನಾಗಿರುವುದು ಅಥವಾ ದೇಶಭ್ರಷ್ಟನಾಗಿರುವುದು; ಹಾಗೆಯೇ ಸಮಾಜದಲ್ಲಿ ಪರರ ಆಳ್ವಿಕೆ ಇರುವ ಕಾಲ, ಸ್ವತಂತ್ರ ಕಾಲ, ಕ್ರಾಂತಿಯಾದ ಕಾಲ, ಇತ್ಯಾದಿ. ‘ಯುಗ’ವನ್ನು (milieu) ಟೇನ್ ವೈಚಾರಿಕವಾಗಿ ಮತ್ತು ಸಾಹಿತ್ಯಿಕವಾಗಿ ನೋಡುತ್ತಾನೆ. ಎಂದರೆ ಕೃತಿ ರಚನೆಯ ಕಾಲದಲ್ಲಿ ಮಾನವ-ದೇವರು, ಸ್ತ್ರೀ – ಪುರುಷ, ಮಾನವ- ನಿಸರ್ಗ ಇವುಗಳ ಸಂಬಂಧವನ್ನು ಕುರಿತಾಗಿದ್ದ ವಿಶಿಷ್ಟ – ವೈಚಾರಿಕ ಪ್ರಣಾಲಿ ಮತ್ತು ಕೃತಿರಚನೆಯ ಕಾಲದಲ್ಲಿದ್ದ ಸಾಹಿತ್ಯಿಕ ಸನ್ನಿವೇಶ (ಯಾವ ಸಾಹಿತ್ಯ ಪ್ರಭೇದ ಜನಪ್ರಿಯವಾಗಿದ್ದಿತು? ಯಾವ ವಿಧದ ಸಾಹಿತ್ಯ ಪರಂಪರೆಯಿದ್ದಿತು? ಇತ್ಯಾದಿ) – ಇವೆರಡನ್ನೂ ಟೇನ್ ‘ಯುಗ’ವೆಂದು ಕರೆಯುತ್ತಾನೆ.
ರ್ಯಾಂಕ್ ಇತಿಹಾಸ ರಚನೆಗೆ ವಿಜ್ಞಾನಶಾಸ್ತ್ರಗಳ ತಾರ್ಕಿಕ ಶುದ್ಧತೆ ಮತ್ತು ವ್ಯಕ್ತಿ ನಿರಪೇಕ್ಷತೆಗಳನ್ನು ತರಲು ಪ್ರಯತ್ನಿಸಿದಂತೆಯೇ ಸಾಹಿತ್ಯ ಚರಿತ್ರೆಯಲ್ಲಿಯೂ ಈ ಗುಣಗಳನ್ನು ತರಬೇಕಾದರೆ ಟೇನ್‌ನ ಪ್ರಕಾರ ನಾವು ‘ಜನಾಂಗ – ಕಾಲಘಟ್ಟ – ಯುಗ’ ಈ ಮೂರು ಪರಿಕಲ್ಪನೆಗಳ ಚೌಕಟ್ಟನಲ್ಲಿ ಪ್ರತಿಯೊಬ್ಬ ಲೇಖಕನನ್ನೂ ಮತ್ತು ಕೃತಿಯನ್ನೂ ಅರ್ಥೈಸಬೇಕು. ತಾತ್ವಿಕ ನೆಲೆಯಲ್ಲಿ ಈ ಮೂರೂ ಪರಿಕಲ್ಪನೆಗಳು ಸಮಾನವಾಗಿದ್ದರೂ ಆಚರಣೆಯಲ್ಲಿ ಒತ್ತು ಬೀಳುವುದು ಯುಗಕ್ಕೆಂದು ನಮಗೆ ಟೇನ್‌ನ ಸಾಹಿತ್ಯ ಚರಿತ್ರೆಯಿಂದ ಕಂಡುಬರುತ್ತದೆ. ಜನಾಂಗದ ಪ್ರಶ್ನೆ ಮರೆತೇ ಹೋಗುತ್ತದೆ; ಮತ್ತು ‘ಕಾಲಘಟ್ಟ’ ಯುಗದ ಚರ್ಚೆಯಲ್ಲಿಯೇ ಕೂಡಿಕೊಳ್ಳುತ್ತದೆ.
ಟೇನ್ ಸಾಹಿತ್ಯ ವಿಮರ್ಶೆಯ ಪರಿಮಾಣಗಳನ್ನು ಮಂಡಿಸಿದಾಗ ವಿಮರ್ಶೆಯ ಹೊಸ ಯುಗವೇ ಆರಂಭವಾಯಿತೆಂದು ಸಾಧಾರಣವಾಗಿ ಎಲ್ಲರೂ ಭಾವಿಸಿದರು. “ಅಂತೂ ಕೊನೆಗೆ ವ್ಯಕ್ತಿ ನಿರಪೇಕ್ಷ ವಿಮರ್ಶೆ ಸಾಧ್ಯವಾಯಿತು” ಎಂದು ಲೆಸ್ಲಿ ಸ್ಟೀಫನ್ ಚಾರಿತ್ರಿಕ ವಿಮರ್ಶೆಯನ್ನು ಸ್ವಾಗತಿಸಿದನು. ೧೮೯೫ – ೧೯೧೦ರ ಅವಧಿಯಲ್ಲಿ ಪ್ರಕಟವಾದ ಕೂರ್ತ್‌ಹೋಪ್‌ನ (W.J. Courthope) “ಇಂಗ್ಲಿಷ್ ಕಾವ್ಯದ ಇತಿಹಾಸ’ ಗ್ರಂಥದ ಮೂಲಕ ಟೇನ್‌ಪ್ರಾರಂಭಿಸಿದ ಚಾರಿತ್ರಿಕ ವಿಮರ್ಶೆ ತನ್ನ ಸಾಧ್ಯತೆಯ ಶಿಖರವನ್ನು ಮುಟ್ಟಿತು. ದೀರ್ಘವಾದ ಮತ್ತು ಮಹತ್ವಾಕಾಂಕ್ಷೆಯ ಈ ಗ್ರಂಥದಲ್ಲಿ ಕೂರ್ತ್‌ಹೋಪ್ ಬ್ರಿಟಿಷ್ ಜನಾಂಗದ ಪ್ರತಿಭೆ ಮತ್ತು ಬ್ರಿಟಿಷ್ ರಾಜಕೀಯ ಸಂಸ್ಥೆಗಳು ಇವೆರಡನ್ನೂ ಒಟ್ಟಿಗೇ ಅಭ್ಯಸಿಸುತ್ತಾ ಇಂಗ್ಲೆಂಡ್‌ನಲ್ಲಿ ಇತಿಹಾಸದುದ್ದಕ್ಕೂ ವ್ಯಕ್ತಿವಾದ ಮತ್ತು ಸಮಷ್ಟಿವಾದ ಇವುಗಳ ನಡುವೆ ಗತಿ ತಾರ್ಕಿಕ (ಡಯಲೆಕ್ಟಿಕಲ್) ಸಂಘರ್ಷ ನಡೆದಿದೆಯೆಂಬ ಸಿದ್ಧಾಂತವನ್ನು ಮಂಡಿಸುತ್ತಾನೆ. ಕೂರ್ತ್‌ಹೋಪ್‌ನ ಸಾಹಿತ್ಯಚರಿತ್ರೆ ಬಂದ ಒಂದು ದಶಕದ ನಂತರ ಸುಪ್ರಸಿದ್ಧ “ಕೇಂಬ್ರಿಜ್ ಇಂಗ್ಲಿಷ್ ಸಾಹಿತ್ಯದ ಇತಿಹಾಸ” ೧೨ ಭಾಗಗಳಲ್ಲಿ ಹೊರಬಂದಿತು. ಮತ್ತೆ ಅನೇಕಾನೇಕ ಸಂಗ್ರಹ ಸಾಹಿತ್ಯ ಚರಿತ್ರೆಗಳು, ಒಂದೊಂದು ಸಾಹಿತ್ಯ ಪ್ರಭೇದದ ಚರಿತ್ರೆಗಳು, ಒಂದು ಕಾಲಘಟ್ಟದ ಸಮಗ್ರ ಸಾಹಿತ್ಯದ ಅಧ್ಯಯನ, ಸಾಹಿತ್ಯ ಸಂಶೋಧನೆ ಇತ್ಯಾದಿ ವಿಫುಲವಾಗಿ ಹೊರಬಂದುವು.
೨೦ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ ಚಾರಿತ್ರಿಕ ವಿಮರ್ಶೆಯ ವಿರುದ್ಧ ಎಲಿಯಟ್ ತನ್ನ ಧ್ವನಿಯೆತ್ತಿದರೂ ಈ ವಿಮರ್ಶಾ ಮಾರ್ಗವನ್ನು ಬಲವಾಗಿ ಖಂಡಿಸಿದವರು ಅಮೆರಿಕನ್ ನವ್ಯ ವಿಮರ್ಶಕರು. ಇದೇ ಕಾಲದಲ್ಲಿ (೧೯೩೦ರ ದಶಕದಲ್ಲಿ) ಭಾಷಾಶಾಸ್ತ್ರದಲ್ಲಿಯೂ ಸೊಸ್ಯೊ (Saussure), ಬ್ಲೂಮ್‌ಫೀಲ್ಡ್ ಮುಂತಾದವರು ಚಾರಿತ್ರಿಕ ಮಾರ್ಗವನ್ನು ತ್ಯಜಿಸಿ ರಾಚನಿಕ ಮಾರ್ಗವನ್ನು ಕೈಗೊಂಡಿದ್ದುದೂ ಸಾಹಿತ್ಯ ವಿಮರ್ಶೆಯಲ್ಲಿ ಚಾರಿತ್ರಿಕತೆಯ ತಿರಸ್ಕಾರಕ್ಕೆ ಪೂರಕವಾಗಿರಬಹುದು. ಚಾರಿತ್ರಿಕ ವಿಮರ್ಶೆಯನ್ನು ಕುರಿತ ಎಲಿಯಟ್, ರ‍್ಯಾನ್‌ಸಮ್, ಕ್ಲಿಯಂತ್‌ಬ್ರೂಕ್ಸ್ ಮುಂತಾದವರ ನಿಲುವನ್ನು ಸ್ಥೂಲವಾಗಿ ಹೀಗೆ ಸಂಗ್ರಹಿಸಬಹುದು :
೧. ಚಾರಿತ್ರಿಕ ವಿಮರ್ಶೆ ತನ್ನ ನಿಯತಿವಾದೀ (deterministic) ಧೋರಣೆಯಿಂದ ಯಾಂತ್ರಿಕವಾಗುತ್ತದೆ ಮತ್ತು ಸಾಹಿತಿಯ ವಿಶಿಷ್ಟ ಪ್ರತಿಭೆಯನ್ನು ಅಗಣ್ಯ ಮಾಡುತ್ತದೆ. ಟೇನ್, ಕೂರ್ತ್‌ಹೋಪ್‌ಇವರು ಜನಾಂಗ, ಕಾಲಘಟ್ಟ – ಯುಗ ಇವುಗಳನ್ನು ವಿಶ್ಲೇಷಿಸಿ, “ಇಂತಹ ಸನ್ನಿವೇಶ ಇಂತಿಂತಹ ಲೇಖಕನಿಗೇ / ಕೃತಿಗಳಿಗೇ ಜನ್ಮ ಕೊಡುತ್ತದೆ” ಎಂದು ನಿರ್ಣಯಿಸುತ್ತಾರೆ. ಆದ್ದರಿಂದ ಇವರುಗಳು ಆನಂತರ ಕೈಗೊಳ್ಳುವ ಕೃತಿಯ ಅಭ್ಯಾಸ – ವ್ಯಾಖ್ಯಾನಗಳು ಪೂರ್ವನಿಶ್ಚಿತ ನಿರ್ಣಯಗಳ ನಿದರ್ಶನಗಳಾಗುತ್ತವೆ.
೨. ಸಾಮಾಜಿಕ – ಸಾಹಿತ್ಯಿಕ ಪರಿಸರ ಎಲ್ಲ ಲೇಖಕರ ಮೇಲೆ ಸಮಾನವಾಗಿ, ಒಂದೇ ರೀತಿಯಾಗಿ ಪ್ರಭಾವ ಬೀರುವುದಿಲ್ಲ. “ಕಲೆಗಳ ಮತ್ತು ವಿಜ್ಞಾನಗಳ ಇತಿಹಾಸವನ್ನು ನಾವು ಗುರುತಿಸಲು ತೊಡಗುವಾಗ ಇತರ ಕ್ಷೇತ್ರಗಳಲ್ಲಿರುವುದಕ್ಕಿಂತ ಹೆಚ್ಚು ಎಚ್ಚರಿಕೆಯಿಂದ ಮುಂದುವರಿಯಬೇಕು. ಇಲ್ಲದಿದ್ದರೆ ಅಸ್ತಿತ್ವದಲ್ಲಿರದಿದ್ದ ಕಾರಣಗಳನ್ನು ಹುಡುಕುತ್ತಾ ನಾವು ಆನುಷಂಗಿಕ ವಾದವನ್ನು ಸಾರ್ವಕಾಲಿಕ ಸತ್ಯಗಳೆಂದು ತೀರ್ಮಾನಿಸುವ ಸಾಧ್ಯತೆ ಇದೆ” ಎಂದು ಹ್ಯೂಮ್‌ಹೇಳುವುದನ್ನು ನವ್ಯ ವಿಮರ್ಶಕರು ಪುನರುಚ್ಛರಿಸುತ್ತಾರೆ.
೩. ಈ ಎರಡೂ ಕಾರಣಗಳಿಗಿಂತ ಹೆಚ್ಚು ಮಹತ್ವದ್ದಾಗಿ ನವ್ಯ ವಿಮರ್ಶಕರಿಗೆ ಕಾಣುವುದು ಚಾರಿತ್ರಿಕ ವಿಮರ್ಶೆಯಲ್ಲಿ ಕೃತಿಯ ಕಾಲ, ಸಾಮಾಜಿಕ ಪರಿಸರ, ಕೃತಿಕಾರನ ವೈಯಕ್ತಿಕ ವ್ಯಕ್ತಿತ್ವ – ಈ ವಿವರಗಳಲ್ಲಿ ಕೃತಿಯೇ ಕಡೆಗಣಿಸಲ್ಪಡಬಹುದಾದ ಸಾಧ್ಯತೆ. ಈ ಭೀತಿಯನ್ನು ಅತ್ಯಂತ ಸಮರ್ಥವಾಗಿ ಎಲಿಯಟ್ ತನ್ನ ‘ವಿಮರ್ಶೆಯ ಮೇರೆಗಳು’ (The Frontiers of Criticism, 1956) ಲೇಖನದಲ್ಲಿ ವ್ಯಕ್ತಪಡಿಸುತ್ತಾನೆ : “ನಾವು ಛಾಸರ್ ಕವಿಯ ಶಬ್ದಸಂಪತ್ತಿ, ಕಾಗುಣಿತ, ವ್ಯಾಕರಣ, ವಾಕ್ಯರಚನೆ – ಮತ್ತು ಇನ್ನೂ ಮುಂದೆ ಹೋಗಿ ಛಾಸರ್‌ನ ಕಾಲ, ಆ ಕಾಲದ ಸಾಮಾಜಿಕ ರೀತಿ – ನೀತಿಗಳು, ನಂಬಿಕೆಗಳು, ವೈಚಾರಿಕತೆ – ಇವೆಲ್ಲವನ್ನೂ ಕೂಲಂಕಷವಾಗಿ ಮನನ ಮಾಡಿಯೂ ಛಾಸರನ ಕಾವ್ಯವನ್ನು ಅರ್ಥ ಮಾಡಿಕೊಳ್ಳದೇ ಹೋಗಬಹುದು.”
ಚಾರಿತ್ರಿಕ ವಿಮರ್ಶೆ ವಿರುದ್ಧ ನಮ್ಮ ವಿಮರ್ಶಕರ ಅತಿರೇಕದ ನಿಲುವನ್ನು ನವ್ಯ ವಿಮರ್ಶೆಗೆ ಸಮೀಪವಿರುವ ಲಯನಲ್ ಟ್ರಿಲಿಂಗ್ ತನ್ನ ‘ಗತಕಾಲದ ಪ್ರಜ್ಞೆ’ (The Sense of the Past) ಎಂಬ ಲೇಖನದಲ್ಲಿ ಈ ರೀತಿ ಗುರುತಿಸುತ್ತಾನೆ : “ಚಾರಿತ್ರಿಕ ವಿಮರ್ಶೆಯ ಮಾರ್ಗವನ್ನು ಮಂಡಿಸುವಾಗ ನವ್ಯ ವಿಮರ್ಶಕರು ಒಂದು ಸಾಹಿತ್ಯಿಕ ಕೃತಿಯೂ ಅನಿವರ್ಯವಾದ ಚಾರಿತ್ರಿಕ ಸಂಗತಿಯೇ; ಮತ್ತು ಆ ಕೃತಿಯ ಚಾರಿತ್ರಿಕತೆಯೇ ನಮ್ಮ ಕಲಾನುಭವದ ಭಾಗ ಎಂಬ ವಿಚಾರವನ್ನು ಮರೆಯುತ್ತಾರೆ.”
ಚಾರಿತ್ರಿಕ ವಿಮರ್ಶೆಯ ಇನ್ನೊಂದು ಮುಖ್ಯ ಕವಲೆಂದರೆ ‘ವಿಚಾರಗಳ ಚರಿತ್ರೆ’ (History of Ideas). ಈ ಮಾರ್ಗದಲ್ಲಿ ವಿಮರ್ಶಕನು ಯಾವುದಾದರೂ ಒಂದು ಮುಖ್ಯ ವಿಚಾರವನ್ನು ಕೇಂದ್ರವಾಗಿಟ್ಟುಕೊಂಡು ಆ ವಿಚಾರದ ಉಗಮ, ವ್ಯಾಪ್ತಿ ಮತ್ತು ಬೆಳವಣಿಗೆಯನ್ನು ಒಂದು ದೇಶದ ಒಟ್ಟಾರೆ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಸಾಹಿತ್ಯ ಕೃತಿಗಳ ಆಧಾರದ ಮೇಲೆ ಗುರುತಿಸುತ್ತಾನೆ. ಇಂತಹ ವಿಮರ್ಶಾಮಾರ್ಗದ ಪ್ರಮುಖ ವಿಮರ್ಶಕನೆಂದರೆ ಎ.ಒ.ಲವ್‌ಜಾಯ್(Lovejoy). ಇವನು ಇಂತಹ ವಿಮರ್ಶೆಗೇ ಮೀಸಲಾಗಿಟ್ಟ “ಜರ್ನಲ್ ಆಫ್ ದ ಹಿಸ್ಟರಿ ಆಫ್ ಐಡಿಯಾಸ್” ಪತ್ರಿಕೆಯನ್ನು ೧೯೪೦ ರಲ್ಲಿ ಸ್ಥಾಪಿಸಿದನು. ಇವನು ಐತಿಹಾಸಿಕವಾಗಿ ಗುರುತಿಸುವ ಒಂದು ಮುಖ್ಯ ವಿಚಾರವೆಂದರೆ ‘ಜೈವಿಕ ಸರಪಳಿ’ (Chain of being). “ಸೃಷ್ಟಿಯಲ್ಲಿನ ಜೀವಜಾತಿಗಳೆಲ್ಲಾ ಒಂದು ಶ್ರೇಣಿಯಲ್ಲಿ ಬಂಧಿಸಲ್ಪಟ್ಟಿವೆ; ಮತ್ತು ಪ್ರತಿಯೊಂದು ಜೀವಜಾತಿಗೂ ತನ್ನ ಮೇಲಿನ ಮತ್ತು ಕೆಳಗಿನ ಜೀವ ಜಾತಿಯೊಡನೆ ಘನಿಷ್ಠ ಸಂಬಂಧವಿರುತ್ತದೆ” – ಎಂಬ ವಿಚಾರವು ಹೇಗೆ ೧೮ನೆಯ ಶತಮಾನದ ಆಂಗ್ಲ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿದೆ ಎಂಬುದನ್ನು ಲವ್‌ಜಾಯ್ ಆಳವಾಗಿ ವ್ಯಾಖ್ಯಾನಿಸುತ್ತಾನೆ.
ಕನ್ನಡದಲ್ಲಿ ಆರ್. ನರಸಿಂಹಾಚಾರ್ ಅವರ ‘ಕವಿಚರಿತೆ’, ರಂ. ಶ್ರೀ. ಮುಗಳಿಯವರ ‘ಕನ್ನಡ ಸಾಹಿತ್ಯ ಚರಿತ್ರೆ’, ಪಂಪನ ಕಾಲ-ದೇಶ-ವೈಚಾರಿಕತೆಗಳನ್ನು ಗುರುತಿಸುವ ಮುಳಿಯ ತಿಮ್ಮಪ್ಪಯ್ಯನವರ ‘ನಾಡೋಜ ಪಂಪ’, ಇತಿಹಾಸ – ಸಾಹಿತ್ಯಗಳನ್ನು ಕುರಿತಾದ ಗೋವಿಂದ ಪೈಯವರ ಸಂಶೋಧನಾತ್ಮಕ ಲೇಖನಗಳು. ಸೇಡಿಯಾಪು ಕೃಷ್ಣ ಭಟ್ಟರ ‘ವಿಚಾರ ಪ್ರಪಂಚ’, ಸಿ. ವೀರಣ್ಣನವರ ‘ಕನ್ನಡ ಸಾಹಿತ್ಯ : ಚಾರಿತ್ರಿಕ ಬೆಳವಣಿಗೆ’ – ಇವು ಚಾರಿತ್ರಿಕ ವಿಮರ್ಶೆಯ ಕೆಲವು ಮುಖ್ಯ ಉದಾಹರಣೆಗಳು.
ಕಳೆದೆರಡು ದಶಕಗಳಿಂದ ಚಾರಿತ್ರಿಕ ವಿಮರ್ಶೆ ‘ನವಚಾರಿತ್ರಿಕ ವಾದ’ (New Historicism) ಎಂಬ ಹೆಸರಿನಲ್ಲಿ ಮರುಹುಟ್ಟು ಪಡೆದು ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ. ಒಂದು ನೆಲೆಯಲ್ಲಿ ಈ ವಾದ ಫುಕೋನ ಸಂಕಥನ ಅತವಾ ಡಿಸ್‌ಕೋರ್ಸ್ ಪರಿಕಲ್ಪನೆಯಿಂದ ಪ್ರಭಾವಿತವಾಗಿ ಸೈದ್ ಪ್ರಣೀತ ವಸಾಹತೋತ್ತರ ಚಿಂತನೆಗೆ ಸಮೀಪವಿದ್ದರೆ, ಮತ್ತೊಂದು ನೆಲೆಯಲ್ಲಿ ನವಮಾರ್ಕ್ಸ್‌ವಾದಿ ಲೂಯಿ ಆಲ್‌ಥೂಸರ್‌ನ ಐಡಿಯಾಲಜಿಯ ವ್ಯಾಖ್ಯಾನವನ್ನು ಆಧರಿಸಿದೆ. (ಮುಂದಿನ ಭಾಗದಲ್ಲಿ ವಿವರಿಸುವಂತೆ ಆಲ್‌ಥೂಸರ್ ಸಾಂಪ್ರದಾಯಿಕ ಮಾರ್ಕ್ಸಿಸ್ಟ್‌ಚಿಂತಕರು ಆಗ್ರಹಿಸುವಂತೆ ಐಡಿಯಾಲಜಿ ಸರ್ವಶಕ್ತವೆಂದು ನಂಬುವುದಿಲ್ಲ; ಮತ್ತು ಸಾಹಿತ್ಯಕೃತಿಗಳ ‘ಸಾಪೇಕ್ಷ ಸ್ವಾಯತ್ತೆ’ಯನ್ನು ಪ್ರತಿಪಾದಿಸುತ್ತಾನೆ.) ನವಚಾರಿತ್ರಿಕತೆಯ ಪ್ರಮುಖ ವಕ್ತಾರರೆಂದರೆ ಸ್ಟೀಫನ್ ಗ್ರೀನ್‌ಬ್ಲಾಟ್, ಲೂಯಿ ಮಾನ್‌ಟ್ರೋಸ್, ಕ್ಲಿಫರ್ಡ್ ಜೀರ್ಟ್ಸ್ ಮುಂತಾದವರು (Stephen Greenblatt, Louiss Montrose, Clifford Geertz).
ಎಂ.ಎಚ್. ಏಬ್ರಮ್ಸ್ ದಾಖಲಿಸುವಂತೆ ‘ನವಚಾರಿತ್ರಿಕತೆ’ ಎಂಬ ವಿಮರ್ಶಾತ್ಮಕ ಪರಿಕಲ್ಪನೆಯನ್ನು ಮೊದಲಗೆ Genre ಎಂಬ ನಿಯತಕಾಲಿಕೆಯ ೧೫ನೆಯ ಸಂಪುಟದಲ್ಲಿ (೧೯೮೨) ಪ್ರಯೋಗಿಸಿ, ಅಂತಹುದೊಂದು ‘ಪ್ರಸ್ಥಾನ’ವನ್ನು ಹುಟ್ಟುಹಾಕಿದವನು ಸ್ಟೀಫನ್ ಗ್ರೀನ್‌ಬ್ಲಾಟ್ (ಏಬ್ರಮ್ಸ್, ೧೯೯೩, ಪು. ೨೫೨). ಅನಂತರ, ಲೂಯಿ ಮಾನ್‌ಟ್ರೋಸ್ “ಪಠ್ಯಗಳ ಚಾರಿತ್ರಿಕತೆ ಮತ್ತು ಚರಿತ್ರೆಗಳ ಪಠ್ಯತೆ ಇವುಗಳ ನಡುವಿನ ಪರಸ್ಪರ ಸಂಬಂಧ ನವಚಾರಿತ್ರಿಕತೆಯ ಕಾಳಜಿ” ಎಂದು ಘೋಷಿಸಿ, ಅಂತಹ ವಿಮರ್ಶಾವಿಧಾನಕ್ಕೆ ಮನ್ನಣೆ ಗಳಿಸಿಕೊಟ್ಟನು. (”A reciprocal concern with the historicity of texts and the textuality of history”). ಗ್ರೀನ್‌ಬ್ಲಾಟ್ ಮತ್ತು ಇತರ ನವಚಾರಿತ್ರಿಕವಾದಿಗಳ ಮುಖ್ಯ ಗೃಹೀತಗಳನ್ನು ಹೀಗೆ ಸಂಗ್ರಹಿಸಬಹುದು :
೧. ಸಾಂಪ್ರದಾಯಿಕ ಮಾರ್ಕ್ಸ್‌ವಾದಿಗಳು ನಂಬುವಂತೆ, ಚರಿತ್ರೆಯ ಗತಿ ಸದಾ ಏಕಮುಖಿಯಾಗಿ ಪ್ರಗತಿಗಾಮಿಯಾಗಿರುವುದಿಲ್ಲ; ಚರಿತ್ರೆಯೆಂದರೆ ವಿಚ್ಛಿನ್ನತೆಗಳ, ಆಕಸ್ಮಿಕಗಳ ಚರಿತ್ರೆ. (ಇದು ಫುಕೋನ ಡಿಸ್‌ಕೋರ್ಸ್ ಪರಿಕಲ್ಪನೆಯ ಒಂದು ಮುಖ್ಯ ಅಂಶ.)
೨. ಸಾಹಿತ್ಯಿಕ ಪಠ್ಯಗಳೂ ಇತರ ಚಾರಿತ್ರಿಕ, ಮಾನವಿಕ ಶಾಸ್ತ್ರೀಯ ಪಠ್ಯಗಳಂತೆ, ವಿಶಿಷ್ಟ ಕಾಲ ದೇಶಗಳ, ವಿಶಿಷ್ಟ ಸಾಂಸ್ಕೃತಿಕ ಸಂದರ್ಭಗಳ ‘ಉತ್ಪನ್ನ’. ಆದ್ದರಿಂದ ನವ್ಯ/ ರೂಪನಿಷ್ಟ ವಿಮರ್ಶಕರಂತೆ ಸಾಹಿತ್ಯಕೃತಿಗಳನ್ನು ಅವುಗಳ ರಾಜಕೀಯ – ಸಾಂಸ್ಕೃತಿಕ ಸಂದರ್ಭಗಳಿಂದ ಹೊರತುಪಡಿಸಿ ವ್ಯಾಖ್ಯಾನ ಮಾಡಲಾಗುವುದಿಲ್ಲ.
೩. ಸಾಹಿತ್ಯಕ ಪಠ್ಯಗಳೂ ಸಮಕಾಲೀನ ಅಧಿಕಾರ – ಸಂಬಂಧಗಳನ್ನು ಬಲಪಡಿಸುವ / ಸಮರ್ಥಿಸುವ ಐಡಿಯಾಲಜಿಯಿಂದಲೇ ರೂಪಿಸಲ್ಪಟ್ಟಿರುತ್ತವೆ. ಆದರೆ, ಎಲ್ಲೋ ಒಂದು ಕಡೆ ಇವುಗಳು ಐಡಿಯಾಜಿಯ ನಿಯಂತ್ರಣವನ್ನು ಮೀರಿ ಅದರಲ್ಲಡಗಿರುವ ಸ್ವವಿರೋಧಗಳನ್ನೂ ದರ್ಶಿಸುತ್ತವೆ. ಆದ್ದರಿಂದ ಒಂದು ಸಾಹಿತ್ಯಕ ಪಠ್ಯವೆಂದರೆ ‘ವಿಸಂಗತ ದನಿಗಳ ತುಮುಲದ ಸ್ಥಳ’. (ಈ ಅಂಶ ಬಕ್ತಿನ್ ಚರ್ಚಿಸುವ ‘polyphony’ ಅಥವಾ ಬಹುಧ್ವನಿತ್ವದ ಪರಿಕಲ್ಪನೆಯಿಂದ ಪ್ರಭಾವಿತವಾಗಿದೆ.)
೪. ಎಲ್ಲಾ ಪ್ರಭಾವೀ ರಾಜಕೀಯ – ಸಾಂಸ್ಕೃತಿಕ ಸಂಸ್ಥೆಗಳೂ ಒಂದು ಮಟ್ಟದವರೆಗೆ ತಮಗೆ ವಿರುದ್ಧವಿರುವ ಶಕ್ತಿಗಳನ್ನು ಪೋಷಿಸಿ, ಪ್ರೋತ್ಸಾಹಿಸುತ್ತವೆ; ಇಂತಹ ಪೋಷಣೆ – ಪ್ರೋತ್ಸಾಹಗಳ ಹಿಂದಿನ ಉದ್ದೇಶ ತಮ್ಮ ನಿಯಂತ್ರಣ ಹಾಗೂ ಅಧಿಕಾರಗಳನ್ನು ಬಲಪಡಿಸುವುದೇ ಆಗಿದೆ.
೫. ವಿಮರ್ಶಕನ ಗುರಿಯೆಂದರೆ ಒಂದು ಸಾಹಿತ್ಯಕ ಪಠ್ಯದಲ್ಲಿರುವ ಎಲ್ಲಾ ಬಗೆಯ ‘ವಿಸಂಗತ ದನಿ’ಗಳನ್ನು ಗುರುತಿಸಿ, ಒಂದು ಕೃತಿ ಒಂದು ನಿರ್ದಿಷ್ಟ ಸ್ಥಳ ಮತ್ತು ಕಾಲದಲ್ಲಿ ಹೇಗೆ ಮತ್ತು ಏಕೆ ಅಸ್ತಿತ್ವಕ್ಕೆ ಬರುತ್ತದೆ ಎಂದು ಶೋಧಿಸುವುದು. ಹಾಗೆಯೇ, ಅದೇ ನೆಲೆಯಲ್ಲಿ, ಒಂದು ಪಠ್ಯದಲ್ಲಿ ‘ಅಡಗಿಸಲ್ಪಟ್ಟಿರುವ’ ಅಥವಾ ‘ಅಚಿಗೆ ತಳ್ಳಲ್ಪಟ್ಟಿರುವ’ ದನಿಗಳನ್ನು ಗುರುತಿಸುವುದು.
ನವ್ಯ ವಿಮರ್ಶೆ ಮತ್ತು ನಿರಚನ ವಿಮರ್ಶೆ ಇವೆರಡನ್ನೂ ತಿರಸ್ಕರಿಸುವ, ರಾಚನಿಕೋತ್ತರ ವಾದಗಳಲ್ಲಿ ಒಂದಾಗಿರುವ, ನವಚಾರಿತ್ರಿಕವಾದ ವಸಾಹತೋತ್ತರ ಚಿಂತನೆಗೆ ಸರಿಸಮವಾಗಿ ಕಳೆದೆರಡು ದಶಕಗಳಿಂದ ಬೆಳೆಯುತ್ತಾ ಬಂದಿದೆ. ವಿಶೇಷತಃ ‘ಟೆಂಪೆಸ್ಟ್’. ಹೆನ್ರಿ ನಾಟಕಮಾಲೆ, ಇತ್ಯಾದಿ ಷೇಕ್ಸ್‌ಪಯರ್‌ನ ನಾಟಕಗಳಲ್ಲಿ ಅಂದು, ಎಂದರೆ ಸಾಮ್ರಾಜ್ಯವಾದದ ಪ್ರಾಥಮಿಕ ಘಟ್ಟವಾದ ೧೬ನೆಯ ಶತಮಾನದಲ್ಲಿ, ಪ್ರಚಲಿತವಾಗಿದ್ದ ಬಿಳಿಯರ ಜಾನಾಂಗಿಕ ಪೂರ್ವಾಗ್ರಹಗಳು, ತಮ್ಮ ರಾಜಕೀಯ – ಸಾಂಸ್ಕೃತಿಕ ವ್ಯವಸ್ಥೆಗಳ ಬಗ್ಗೆ ಅವರಿಗಿದ್ದ ಹೆಮ್ಮೆ ಮತ್ತು ಅಹಂ, ಇವೆಲ್ಲವೂ ಹೇಗೆ ರೂಪಣೆಗೊಂಡಿವೆ ಎಂಬುದನ್ನು ದಾಖಲಿಸುವ ಗ್ರೀನ್‌ಬ್ಲಾಟ್‌ನ ವಿಮರ್ಶೆ – ವ್ಯಾಖ್ಯಾನಗಳನ್ನು ನವಚಾರಿತ್ರಿಕವಾದದ ಪ್ರಾತಿನಿಧಿಕ ಪ್ರಯೋಗಗಳೆಂದು ಪರಿಗಣಿಸಬಹುದು. (ಹೆಚ್ಚಿನ ಮಾಹಿತಿಗೆ ನೋಡಿ : Aram Veeser, ed. The New Historicism (1989); M.H. Abrams, A. Glossary of Literary Terms, Revd. (1993); ಮನು ಚಕ್ರವರ್ತಿ, ‘ಬಹುಮುಖ’ (೧೯೯೯) ಇತ್ಯಾದಿ.
೨. ಮಾರ್ಕ್ಸ್ವಾದಿವಿಮರ್ಶೆ:
ಕಾಲ್ಸ್‌ಮಾಕ್ಸ್‌ಮತ್ತು ಫ್ರೆಡರಿಕ್ ಎಂಗೆಲ್ಸ್ ಇವರ ಆರ್ಥಿಕ – ಸಾಮಾಜಿಕ ಸಿದ್ಧಾಂತಗಳ ಆಧಾರದ ಮೇಲೆ ಸಾಹಿತ್ಯವನ್ನು ಹಾಗೂ ಆ ಸಾಹಿತ್ಯಕ್ಕೆ ಕಾರಣವಾದ ಒಂದು ವಿಶಿಷ್ಟ ಸಮಾಜ ರಚನೆಯನ್ನು ಮಾರ್ಕ್ಸ್‌ವಾದಿ ವಿಮರ್ಶಕರು ಅಭ್ಯಸಿಸುತ್ತಾರೆ ಮತ್ತು ವ್ಯಾಖ್ಯಾನಿಸುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಮಾರ್ಕ್ಸ್‌ವಾದಿ ವಿಮರ್ಶಕರ ದೃಷ್ಟಿಯಲ್ಲಿ ಇತರ ವಿಮರ್ಶಾ ಮಾರ್ಗಗಳಂತೆ ಮಾರ್ಕ್ಸ್‌ವಾದಿ ವಿಮರ್ಶೆಯೂ ಒಂದು ಮಾರ್ಗವಲ್ಲ. ಮಾರ್ಕ್ಸ್‌ವಾದೆಂದರೆ ಮಾನವ ಸಮಾಜಗಳನ್ನು ಮತ್ತು ಅವುಗಳ ಪರಿವರ್ತನೆಯನ್ನು ಕುರಿತಾದ ‘ವೈಜ್ಞಾನಿಕ’ ಸಿದ್ಧಾಂತವೆಂದು ನಂಬುವ ಈ ಮಾರ್ಗದ ವಿಮರ್ಶಕರಿಗೆ ಮಾರ್ಕ್ಸ್‌ವಾದಿ ವಿಮರ್ಶೆಯೊಂದೇ ‘ನಿಜವಾದ’ ಏಕಮೇವ ವಿಮರ್ಶಾಮಾರ್ಗ.
ಅತ್ಯಂತ ಜಟಿಲ ಹಾಗೂ ಸಂಕೀರ್ಣ ವೈಚಾರಿಕ ಪ್ರಣಾಲಿಯನ್ನು ಸರಳೀಕರಣಗೊಳಿಸುವ ಅಪಾಯವನ್ನು ಒಪ್ಪಿಕೊಂಡೂ ಮಾರ್ಕ್ಸ್‌ವಾದಿ ವಿಮರ್ಶೆಯ ಮುಖ್ಯ ವೈಚಾರಿಕ ನಿಲುವನ್ನು ಸ್ಥೂಲವಾಗಿ ಹೀಗೆ ಗುರುತಿಸಬಹುದು. ಕಾರ್ಲ್‌ಮಾರ್ಕ್ಸ್‌ನ ಎರಡು ಮುಖ್ಯ ಹೇಳಿಕೆಗಳು ಈ ವಿಮರ್ಶಾ ಕ್ರಮದ ಉಗಮವನ್ನು ನಿರ್ದೇಶಿಸುತ್ತವೆ :
೧. ದಾರ್ಶನಿಕರು ಅನೇಕ ರೀತಿಗಳಲ್ಲಿ ಈ ಜಗತ್ತನ್ನು ಕೇವಲ ಅರ್ಥೈಸಿದ್ದಾರೆ, ಅಷ್ಟೇ. ನಮಗೀಗ ಬೇಕಾಗಿರುವುದು ಜಗತ್ತನ್ನು ಪರಿವರ್ತಿಸುವುದು.
೨. ಮಾನವರ ಅಸ್ತಿತ್ವವನ್ನು ನಿರ್ಧರಿಸುವುದು ಅವರ ಪ್ರಜ್ಞೆಯಲ್ಲ; ಇದಕ್ಕೆ ವಿರುದ್ಧವಾಗಿ, ಮಾನವರ ಸಾಮಾಜಿಕ ಅಸ್ತಿತ್ವ ಅವರ ಪ್ರಜ್ಞೆಯನ್ನು ನಿರ್ಧರಿಸುತ್ತದೆ.
ಜರ್ಮನ್ ದಾರ್ಶನಿಕ ಹೆಗೆಲ್ ಮತ್ತು ಅವನ ಅನುಯಾಯಿಗಳು “ಜಗತ್ತನ್ನು ರೂಪಿಸುವುದು ವಿಚಾರಶಕ್ತಿ (Thought)” ಎಂದು ನಂಬಿ “ಇತಿಹಾಸದ ಪ್ರಕ್ರಿಯೆಯೆಂದರೆ ಕ್ರಮಕ್ರಮವಾಗಿ ಆಗುವ ವಿವೇಚನಾ ಶಕ್ತಿಯ ತಾರ್ಕಿಕ ಅವಿರ್ಭಾವ” (”The process of history is the gradual dialectic unfolding of the laws of Reason”) ಎಂದು ಸಿದ್ಧಾಂತಿಸಿದರು. ಅವರ ಮತದಂತೆ ಮಾನವರ ವಿಚಾರಗಳು, ಅವರ ಸಾಂಸ್ಕೃತಿಕ ಜೀವನ, ನ್ಯಾಯಶಾಸ್ತ್ರಗಳು ಮತ್ತು ಮತ-ಧರ್ಮಗಳು – ಇವೆಲ್ಲವೂ ಮಾನವ ಮತ್ತು ದೈವಿಕ ‘ವಿವೇಚನಾ ಶಕ್ತಿ’ (Reason) ಯ ಸೃಷ್ಟಿಗಳು. ಹೆಗೆಲ್‌ನ ಇಂತಹ ‘ಆದರ್ಶವಾದಿ’ (Idealistic) ವೈಚಾರಿಕತೆಯನ್ನು ಮಾರ್ಕ್ಸ್ ಅಲ್ಲಗಳೆದು, ಎಲ್ಲಾ ವೈಚಾರಿಕ ವ್ಯವಸ್ಥೆಗಳು ಸಾಮಾಜಿಕ – ಆರ್ಥಿಕ ವ್ಯವಸ್ಥೆಗಳ ‘ಉತ್ಪನ್ನ’ಗಳೆಂದು ವಾದಿಸುತ್ತಾನೆ. ಅವನ ದೃಷ್ಟಿಯಲ್ಲಿ ಪ್ರಮುಖ ಚಾರಿತ್ರಿಕ ಬದಲಾವಣೆಗಳು ಆಗುವುದು ಹೆಗೆಲ್ ಗ್ರಹಿಸಿದಂತೆ ತಾತ್ವಿಕ ಸ್ವವಿರೋಧಗಳಿಂದಲ್ಲದೆ ಉತ್ಪಾದನಾ ವಿಧಾನಗಳ ಪಲ್ಲಟಗಳಿಂದ. ಈ ವಿಚಾರಗಳನ್ನು ಕುರಿತಂತೆ ಮಾರ್ಕ್ಸ್ ೧೮೪೬ ರಲ್ಲಿ ಬರೆದ (ಆದರೆ ಪ್ರಕಟವಾದದ್ದು ೧೯೩೨ರಲ್ಲಿ) ‘ದ ಜರ್ಮನ್ ಐಡಿಯಾಲಜಿ’ಯಲ್ಲಿ ಹೀಗೆ ಹೇಳುತ್ತಾನೆ :
“ಪರಿಕಲ್ಪನೆಗಳು, ವಿಚಾರಗಳು ಇತ್ಯಾದಿಗಳ ಉತ್ಪಾದಕರು ಮಾನವರು – ನಿಹ ಹಾಗೂ ಕಾರ್ಯಶೀಲ ಮಾನವರು; ಮತ್ತು ಅವರು ತಮ್ಮ ಉತ್ಪಾದಕ ಶಕ್ತಿಗಳ ಖಚಿತ ವಿಕಾಸದಿಂದ ರೂಪಿಸಲ್ಪಡುತ್ತಾರೆ. ಪ್ರಜ್ಞೆ ಎಂಬುದು ಪ್ರಜ್ಞಾಶೀಲ ಅಸ್ತಿತ್ವಕ್ಕಿಂತ ಬೇರೆಯಾಗಿರಲು ಸಾಧ್ಯವಿಲ್ಲ; ಮತ್ತು ಮಾನವರ ಅಸ್ತಿತ್ವವು ಅವರು ವಾಸ್ತವದಲ್ಲಿ ಬದುಕುವ ಪ್ರಕ್ರಿಯೆಯೇ ಆಗಿದೆ.. ಸ್ವರ್ಗದಿಂದ ಭೂಮಿಗೆ ಇಳಿಯುವ ಜರ್ಮನ್ ತತ್ವಶಾಸ್ತ್ರಕ್ಕಿಂತ ಭಿನ್ನವಾಗಿ ನಾವಿಲ್ಲಿ ಭೂಮಿಯಿಂದ ಸ್ವರ್ಗಕ್ಕೆ ಏರುತ್ತಿದ್ದೇವೆ. ಎಂದರೆ, ರಕ್ತಮಾಂಸಗಳಿಂದ ಕೂಡಿದ ಮಾನವರನ್ನು ಅರಿತುಕೊಳ್ಳಲು ಅವರು ಏನು ಹೇಳುತ್ತಾರೆ, ಕಲ್ಪಿಸುತ್ತಾರೆ, ಗ್ರಹಿಸುತ್ತಾನೆ. ಅಥವಾ ಹೇಗೆ ಅವರು ಕಥಿಸಲ್ಪಟ್ಟಿದ್ದಾರೆ, ಕಲ್ಪಿಸಲ್ಪಟ್ಟಿದ್ದಾರೆ, ಗ್ರಹಿಸಲ್ಪಟ್ಟಿದ್ದಾರೆ. – ಇವುಗಳ ಮೂಲಕ ಹೊರಡುವುದಲ್ಲ. ನಿಜ ಹಾಗೂ ಕಾರ್ಯಶೀಲ ಮಾನವರಿಂದ ನಾವು ಪ್ರಾರಂಭಿಸಿ, ಅವರ ವಾಸ್ತವ ಬದುಕಿನ ಆಧಾರದ ಮೇಲೆ ತಾತ್ವಿಕ ಚಿಂತನೆಗಳನ್ನು ಮತ್ತ ಜೀವನಪ್ರಕ್ರಿಯೆಯ ಮಾರ್ದನಿಗಳನ್ನು ಪ್ರತಿಪಾದಿಸುತ್ತೇವೆ. ಮಾನವನ ಮೆದುಳಿನಲ್ಲಿ ಜನ್ಮಿಸುವ ಭ್ರಮೆಗಳೂ ಕೂಡ ಅನಿವಾರ್ಯವಾಗಿ, ಭೌತಿಕ ಜೀವನ ಪ್ರಕ್ರಿಯೆಯ ರೂಪಾಂತರಗಳೇ ಆಗಿವೆ. ಪರಿಣಾಮತಃ ನೈತಿಕತೆ, ಧರ್ಮ, ಆಧ್ಯಾತ್ಮ ಹಾಗೂ ವೈಚಾರಿಕತೆಯ ಮಿಕ್ಕ ಎಲ್ಲಾ ರೂಪಗಳು ಮತ್ತು ಅವುಗಳಿಗನುವಾದ ಪ್ರಜ್ಞೆಯ ಆಕೃತಿಗಳು – ಇವುಗಳಿಗೆ ಸ್ವತಂತ್ರ ಅಸ್ತಿತ್ವದ ಲವಲೇಶವೂ ಇಲ್ಲ. ಇವುಗಳಿಗೆ ಇತಿಹಾಸವೂ ಇಲ್ಲ, ಪ್ರಗತಿಯೂ ಇಲ್ಲ. ಆದರೆ ಮಾನವರು, ತಮ್ಮ ಭೌತಿಕ ಉತ್ಪಾದನೆಯನ್ನು ಮತ್ತು ಸಾಮೂಹಿಕ, ಆರ್ಥಿಕ ಸ್ಥಿತಿಯನ್ನು ವೃದ್ಧಿಸಿಕೊಂಡು, ತಮ್ಮ ಬದುಕಿನ ಸ್ವರೂಪವನ್ನು, ತಮ್ಮ ವೈಚಾರಿಕತೆಯನ್ನು, ತಮ್ಮ ವೈಚಾರಿಕತೆಯ ಉತ್ಪನ್ನಗಳನ್ನೂ ಬದಲಾಯಿಸುತ್ತಾರೆ. ಪ್ರಜ್ಞೆ ಬದುಕಿನಿಂದಲ್ಲದೆ ಬದುಕು ಪ್ರಜ್ಞೆಯಿಂದ ನಿರ್ಧರಿಸಲ್ಪಡುವುದಿಲ್ಲ. (Life is not determined by consciousness, but consciousness by life) ಕಾರ್ಯಶೀಲ ಜೀವನ – ಪ್ರಕ್ರಿಯೆ (life – Process)ಯನ್ನು ಈ ಬಗೆಯಲ್ಲಿ ವಿವರಿಸಿದ ಕೂಡಲೇ ಅನುಭವೈಕ್ಯ ವಾದವು (Empiricism) ನಂಬುವಂತೆ ಇತಿಹಾಸವು ನಿರ್ಜೀವ ಸಂಗತಿಗಳ ಸಂಕಲನವಾಗುವುದು ನಿಲ್ಲುತ್ತದೆ; ಮತ್ತು (ಆದರ್ಶವಾದಿಗಳು – Idealists – ನಂಬುವಂತೆ) ಕಾಲ್ಪನಿಕ ವ್ಯಕ್ತಿಗಳ ಕಾಲ್ಪನಿಕ ಕಾರ್ಯಗಳ ಮೊತ್ತವಾಗುವುದೂ ತಪ್ಪುತ್ತದೆ” (David H. Richter, 1989, pp. 564-65).
ಮಾನವರ ಸಾಮಾಜಿಕ – ಆರ್ಥಿಕ ಸಂಬಂಧಗಳನ್ನು ಮಾರ್ಕ್ಸ್ ಇನ್ನೊಂದು ಸಂದರ್ಭದಲ್ಲಿ (Contribution to Critique of Political Economy, 1859) ಹೀಗೆ ಒಂದು ವಾಸ್ತುಶಿಲ್ಪ ರೂಪಕದ ಮೂಲಕ ವಿವರಿಸುತ್ತಾನೆ.
“ತಮ್ಮ ಸಾಮಾಜಿಕ ಉತ್ಪಾದನೆಯಲ್ಲಿ ಮಾನವರು ಅನಿವಾರ್ಯವಾಗಿ ಅವರ ಇಚ್ಛಾಶಕ್ತಿಯನ್ನು ಮೀರಿದ ಖಚಿತ ಸಂಬಂಧಗಳನ್ನು ಒಳಗೊಳ್ಳುತ್ತಾರೆ; ಮತ್ತು ಇಂತಹ ಉತ್ಪಾದನಾ – ಸಂಬಂಧಗಳು ಅವರ ಭೌತಿಕ ಉತ್ಪಾದನಾ – ಶಕ್ತಿಗಳು ವಿಕಾಸವನ್ನು ಅನುಸರಿಸುತ್ತವೆ. ಉತ್ಪಾದನಾ – ಸಂಬಂಧಗಳ ಒಟ್ಟು ಮೊತ್ತ ಸಮಾಜವೊಂದರ ಆರ್ಥಿಕ ರಚನೆಯನ್ನು ಸ್ಥಾಪಿಸುತ್ತದೆ. ಆರ್ಥಿಕ ರಚನೆಯ ವಾಸ್ತವ ಬುನಾದಿಯ ಮೇಲೆ ಶಾಸಕೀಯ ಮತ್ತು ರಾಜಕೀಯ ಮೇಲ್‌ರಚನೆಯು ಏಳುತ್ತದೆ; ಮತ್ತು ಖಚಿತ ರೂಪಗಳು ಈ ಆರ್ಥಿಕ ರಚನೆಗೆ ಅನುರೂಪವಾಗುತ್ತದೆ. ವಾಸ್ತವ ಪ್ರಪಂಚದ ಉತ್ಪಾದನಾ ವಿಧಾನಗಳು (Modes of Production) ಸಾಧಾರಣವಾಗಿ, ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕ ಪ್ರಕ್ರಿಯೆಗಳನ್ನು ನಿರ್ಧರಿಸುತ್ತವೆ. ಮಾನವರ ಅಸ್ತಿತ್ವವನ್ನು ನಿರ್ಧರಿಸುವುದು ಅವರ ಪ್ರಜ್ಞೆಯಲ್ಲ; ಇದಕ್ಕೆ ಬದಲಾಗಿ ಅವರ ಸಾಮಾಜಿಕ ಅಸ್ತಿತ್ವವೂ ಅವರ ಪ್ರಜ್ಞೆಯನ್ನು ನಿರ್ಧರಿಸುತ್ತದೆ… ಆರ್ಥಿಕ ಬುನಾದಿಯ ಬದಲಾವಣೆಯೊಡನೆ, ಇಡೀ ಮೇಲ್‌ರಚನೆಯ ಸಂಪೂರ್ಣವಾಗಿ ಮತ್ತು ಶೀಘ್ರಗತಿಯಲ್ಲಿ ಪರಿವರ್ತನೆಗೊಳ್ಳುತ್ತದೆ” (Richter, P. 569)
ಇಲ್ಲಿ ನಮಗೆ ಮುಖ್ಯವಾಗುವ ಸಂಗತಿಯೆಂದರೆ, ಮಾರ್ಕ್ಸ್‌ವಾದದ ಪ್ರಕಾರ ಸಾಹಿತ್ಯವೂ ಸೇರಿದಂತೆ ಕಲೆ ಸಮಾಜದ ಮೇಲ್‌ರಚನೆಗೆ ಸೇರಿರುವುದು. ಆದ್ದರಿಂದ ಸಮಾಜದ ಕೆಳರಚನೆಯ ಅರಿವಿಲ್ಲದೆ, ಎಂದರೆ ಸಮಾಜದ ಆರ್ಥಿಕ ಸಂಬಂಧಗಳ ಪೂರ್ಣ ಜ್ಞಾನವಿಲ್ಲದೆ, ಮೇಲ್‌ರಚನೆಯಲ್ಲಿರುವ ಸಾಹಿತ್ಯ, ಕಲೆ ಇವುಗಳನ್ನು ಅರ್ಥೈಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಮಾರ್ಕ್ಸ್ ಹೇಳುವ ಮೌಲಿಕ ವಿಚಾರವೇನೆಂದರೆ – ಗ್ರೀಕರ ಕಾಲದಿಂದಲೂ ಆರ್ಷೇಯವಾಗಿ ನಂಬಿಕೊಂಡು ಬಂದಿರುವಂತೆ ‘ಸಂಸ್ಕೃತಿ’ ಎಂಬುದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ. ಮಾನವರು ತಮ್ಮ ಭೌತಿಕ ಜೀವನವನ್ನು ನಿರ್ಮಿಸಿಕೊಳ್ಳುವ ಚಾರಿತ್ರಿಕ ಸಂದರ್ಭಗಳಿಂದ ಸಂಸ್ಕೃತಿಯನ್ನು ಬೇರ್ಪಡಿಸಲಾಗುವುದಿಲ್ಲ. ಎಂದರೆ, ಮಾನವ ಚರಿತ್ರೆಯ ಒಂದು ಘಟ್ಟದ ವಿಶಿಷ್ಟ ಸಾಮಾಜಿಕ – ಆರ್ಥಿಕ ವ್ಯವಸ್ಥೆಯನ್ನು ನಿರ್ಧರಿಸುವ ‘ಒಡೆತನ – ಅಧೀನತೆ’ ಸಂಬಂಧಗಳು ಆ ಕಾಲದ ಸಂಸ್ಕೃತಿಯನ್ನು ರೂಪಿಸುತ್ತವೆ; ಮತ್ತು ವರ್ಗನಿಷ್ಠ ಸಮಾಜಗಳು ಅವುಗಳಲ್ಲಿನ ಪ್ರಬಲ ವರ್ಗಗಳ ಆರ್ಥಿಕ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುವ ವಿಚಾರಗಳನ್ನು ಮತ್ತು ನಂಬಿಕೆಗಳನ್ನು ಪೋಷಿಸುತ್ತವೆ.
ಈ ವಿಚಾರಗಳೊಂದಿಗೆ ಮತ್ತೆ ಕೆಲವು ಸಾಮಾನ್ಯ ‘ಸಿದ್ಧಾಂತ’ಗಳನ್ನೂ ಮಾರ್ಕ್ಸ್‌ವಾದಿಗಳು ಒಪ್ಪುತ್ತಾರೆ. ಅವೆಂದರೆ ೧. ವರ್ಗನಿಷ್ಠ ಸಮಾಜದಲ್ಲಿ ವರ್ಗಕಲಹ ಅನಿವಾರ್ಯ ಮತ್ತು ವರ್ಗಕಲಹದ ಮೂಲಕ ಒಂದಲ್ಲ ಒಂದು ದಿನ ‘ನಿಜ ಉತ್ಪಾದಕರ ವರ್ಗ’, ‘ಉಪಭೋಕ್ತ ವರ್ಗ’ದ ಮೇಲೆ ಜಯವನ್ನು ಸಾಧಿಸುತ್ತದೆ. ೨. ಉತ್ಪಾದಕ ವರ್ಗದೊಡನೆ ತನಗಿರುವ ಸಂಬಂಧಗಳನ್ನು ನಿರಾಕರಿಸುವುದರಿಂದ, ನಿಜ ಉತ್ಪಾದಕರಲ್ಲದೆ ಬೂರ್ಜ್ವಾ ವರ್ಗದ ವಿಶ್ವವನ್ನು ಕುರಿತಾದ ದೃಷ್ಟಿಕೋನ (World – view) ಅನಿವಾರ್ಯವಾಗಿ ಸತ್ಯದಿಂದ ದೂರವಾಗಿ, ಕೃತಕವಾಗಿರುತ್ತದೆ. ೩. ಇಂತಹ ಕೃತಕ ಅಥವಾ ಪೊಳ್ಳು ದೃಷ್ಟಿಕೋನದ ಕಾರಣದಿಂದ ಉಪಭೋಕ್ತ ವರ್ಗದಲ್ಲಿ ದ್ವಂದ್ವಗಳು ಹಾಗೂ ಕರ್ಷಣಗಳು ಸಹಜವಾಗಿಯೇ ಉದ್ಭವಿಸುತ್ತವೆ.
ಈ ವೈಚಾರಿಕ ನೆಲೆಯನ್ನೊಪ್ಪುವ ಮಾರ್ಕ್ಸ್‌ವಾದಿ ವಿಮರ್ಶಕನಿಗೆ ಒಂದು ಕೃತಿಯ ವ್ಯಾಖ್ಯಾನ ಆ ಕೃತಿಯ ಸಾಹಿತ್ಯಿಕ ಹಿನ್ನೆಲೆ, ಪ್ರತಿಮೆಗಳು ಮತ್ತು ಅಲಂಕಾರಗಳು, ಸಾಂಕೇತಿಕತೆ – ಇವುಗಳ ವ್ಯಾಖ್ಯಾನವೇ ಆಗುವುದಿಲ್ಲ. ಈ ಕೃತಿಗಳು ಪ್ರತಿಬಿಂಬಿಸುವ ಒಂದು ವಿಶಿಷ್ಟ ಸಮಾಜದ ‘ಐಡಿಯಾಲಜಿ’ (ಆ ಸಮಾಜ ಮಾನ್ಯ ಮಾಡಿದ ವಿಚಾರಗಳು, ನಂಬಿಕೆಗಳು, ಮೌಲ್ಯಗಳು, ವ್ಯವಸ್ಥೆಗಳು ಇತ್ಯಾದಿಗಳ ಮೊತ್ತ) ಮುಖ್ಯವಾಗುತ್ತದೆ. ಐಡಿಯಾಲಜಿಯ ವಿಶ್ಲೇಷಣೆ, ಆ ವಿಶಿಷ್ಟ ಐಡಿಯಾಲಜಿಯನ್ನು ರೂಪಿಸಿದ ಒಂದು ನಿರ್ದಿಷ್ಟ ವರ್ಗದ ಹಿತಾಸಕ್ತಿಗಳು ಮತ್ತು ಮೌಲ್ಯಗಳು ಹಾಗೂ ಜಗತ್ತನ್ನು ಪರಿಭಾವಿಸುವ ಒಂದು ದೃಷ್ಟಿಕೋನ ಇವುಗಳ ವಿಶ್ಲೇಷಣೆಯಾಗುತ್ತದೆ.
ಸಂಗ್ರಹವಾಗಿ ಹೇಳಬೇಕೆಂದರೆ, ಮೌಲಿಕ ಮಾರ್ಕ್ಸ್‌ವಾದಿ ವಿಮರ್ಶೆ ಎರಡು ಹಂತದಲ್ಲಿ ಮುಂದುವರಿಯುತ್ತದೆ. ಮೊದಲನೆಯ ಹಂತದಲ್ಲಿ ವಿಮರ್ಶಕರನು ಒಂದು ಕೃತಿಯ ಭಾಷೆ, ಶಿಲ್ಪ, ಕಥಾಸನ್ನಿವೇಶಗಳು, ನಿರೂಪಣೆ, ಪ್ರತಿಮೆಗಳು ಮತ್ತು ಸಂಕೇತಗಳು – ಇವೆಲ್ಲವುಗಳ ವಿಶ್ಲೇಷಣೆಯ ಮೂಲಕ ಆ ಕೃತಿಯನ್ನು ರೂಪಿಸಿದ ಮತ್ತು ಕೃತಿಯಲ್ಲಿ ಅಭಿವ್ಯಕ್ತಿಗೊಂಡ ವಿಶಿಷ್ಟ ‘ಐಡಿಯಾಲಜಿ’ಯನ್ನು ಗುರುತಿಸುತ್ತಾನೆ. ಅನಂತರ ಎರಡನೆಯ ಹಂತದಲ್ಲಿ, ಇಂತಹ ಐಡಿಯಾಲಜಿ ಸತ್ಯದೂರವಾಗಿರುವುದರಿಂದ (ಶ್ರೇಣೀಕೃತ ಸಮಾಜದ ‘ಐಡಿಯಾಲಜಿ’ ಸತ್ಯದೂರವಾಗಿರಲೇಬೇಕಾದ್ದರಿಂದ) ಆ ಕೃತಿಯಲ್ಲಿ ಯಾವ ಬಗೆಯ ವೈರುಧ್ಯಗಳು ಹಾಗೂ ವಿಸಂಗತಿಗಳು ಉದ್ಭವಿಸಿವೆ ಎಂದು ಶೋಧಿಸುತ್ತಾನೆ. ಮೇಲ್ನೋಟಕ್ಕೆ ಕೃತಿಯಲ್ಲಿ ಯಾವ ಬಗೆಯ ವಿರೋಧಗಳೂ ಕರ್ಷಣಗಳೂ ಇಲ್ಲವೆಂದು ಭಾಸವಾದರೂ ಆಳವಾದ ವಿಶ್ಲೇಷಣೆ ಅವುಗಳನ್ನು ಪ್ರಕಟಪಡಿಸಬಲ್ಲದು ಎಂಬುದು ಮಾರ್ಕ್ಸ್‌ವಾದಿ ವಿಮರ್ಶಕನ ನಿಲುವು. (ಹೆಚ್ಚಿನ ವಿವರಗಳಿಗೆ ನೋಡಿ : Terry Eagleton, 1976, Christopher Butler, 1984)
ಸುಮಾರು ನೂರು ವರ್ಷಗಳ ಇತಿಹಾಸವಿರುವ ಮಾರ್ಕ್ಸ್‌ವಾದಿ ವಿಮರ್ಶೆ ಅನೇಕ ಬಗೆಯ ಒಳಪಂಥಗಳನ್ನು ಮತ್ತು ಚಿಂತಕರನ್ನು ಒಳಗೊಂಡಿದೆ. ಹಾಗೆಯೇ, ಅಂತಹ ಒಳಪಂಥಗಳಲ್ಲಿಯೇ ತಾತ್ವಿಕ ನೆಲೆಯಲ್ಲಿ ಮತ್ತು ವಿಮರ್ಶಾ ಕ್ರಮದಲ್ಲಿ ಪರಸ್ಪರ ವಿರೋಧವೂ ಕಂಡುಬರುವುದು ಸಹಜ. ಆದ್ದರಿಂದ ಮಾರ್ಕ್ಸ್‌ವಾದೀ ವಿಮರ್ಶೆಯನ್ನು ಕಾಲಕ್ರಮಕ್ಕೆ ಅನುಸಾರವಾಗಿ ನಿರೂಪಿಸುವುದಾಗಲೀ ಅಥವಾ ಎಲ್ಲಾ ಪ್ರಮುಖ ಮಾರ್ಕ್ಸ್‌ವಾದೀ ವಿಮರ್ಶಕರನ್ನು ಚರ್ಚಿಸುವುದಾಗಲೀ ಈ ಪುಸ್ತಿಕೆಯ ಚೌಕಟ್ಟಿನಲ್ಲಿ ಅಸಾಧ್ಯ. ಆದ್ದರಿಂದ, ನಾನು ಇಲ್ಲಿಂದ ಮುಂದೆ ಮೊದಲು ಸಾಂಪ್ರದಾಯಿಕ ಮಾರ್ಕ್ಸ್‌ವಾದದ ಪ್ರಾತಿನಿಧಿಕ ವಿಮರ್ಶಕ ಜಾರ್ಜ್ ಲೂಕಾಕ್ಸ್‌ನನ್ನು ಪರಿಚಯಿಸಿ, ಅನಂತರ ಸಂಕ್ಷಿಪ್ತವಾಗಿ ಕೆಲವು ಪ್ರಮುಖ ಮಾರ್ಕ್ಸ್‌ವಾದೀ ಪರಿಕಲ್ಪನೆಗಳನ್ನು ಚರ್ಚಿಸುತ್ತೇನೆ. ಕೊನೆಯಲ್ಲಿ ಇಂದಿನ ಭಾರತಯ ಪರಿಸ್ಥಿತಿಯಲ್ಲಿ ಅತ್ಯಂತ ಪ್ರಸ್ತುತವಾಗುವ, ಜನಪ್ರಿಯ ಕಲೆಗಳ ಬಗ್ಗೆ ಮಾರ್ಕ್ಸ್‌ವಾದವು ಕಾಲಕಾಲಕ್ಕೆ ಭಿನ್ನ ನೆಲೆಗಳಲ್ಲಿ ಪ್ರತಿಕ್ರಿಯಿಸಿರುವುದನ್ನು ಸ್ವಲ್ಪ ದೀರ್ಘವಾಗಿ ಚರ್ಚಿಸುತ್ತೇನೆ.
ಅ. ವಾಸ್ತವವಾದ ಮತ್ತು ಜಾರ್ಜ್‌ಲೂಕಾಕ್ಸ್ :
ಮೂಲತಃ ಹಂಗರಿಯವನಾದ ಜಾರ್ಜ್ ಲೂಕಾರ್ಕ್ಸ್ (Georg Lucaks) ಶ್ರೇಷ್ಠ ಸಾಂಪ್ರದಾಯಿಕ ಮಾರ್ಕ್ಸ್‌ವಾದೀ ವಿಮರ್ಶೆಯಲ್ಲಿ ಒಬ್ಬನೆಂದು ಗುರುತಿಸಲ್ಪಟ್ಟಿದ್ದಾನೆ. ಇವನ ಪ್ರಮುಖ ವಿಮರ್ಶಾ ಗ್ರಂಥಗಳೆಂದರೆ ‘ಚಾರಿತ್ರಿಕ ಕಾದಂಬರಿ’ (The Historical Novel, 1937), ‘ಯುರೋಪಿನ ವಾಸ್ತವತಾವಾದದ ಅಧ್ಯಯನಗಳು’ (Studies in European Realism, 1950) ಇತ್ಯಾದಿ. ಇವನು ಮಾರ್ಕ್ಸ್‌ವಾದದ ಹೆಗೆಲ್ – ಕವಲನ್ನು ಪ್ರತಿನಿಧಿಸುತ್ತಾನೆ.
ಹತ್ತೊಂಭತ್ತನೆಯ ಶತಮಾನದ ಯುರೋಪ್ ಮತ್ತು ಅಮೇರಿಕಾ ದೇಶಗಳಲ್ಲಿ (ಮುಖ್ಯವಾಗಿ ಫ್ರಾನ್ಸ್‌ನಲ್ಲಿ) ಎಮಿಲಿ ಜೊಲಾ, ಥಿಯಡೋರ್ ಡ್ರೇಸರ್‌ಮುಂತಾದ ಲೇಖಕರ ಕಾದಂಬರಿಗಳಲ್ಲಿ ‘ಪ್ರಕೃತಿವಾದ’ವು (Naturalism) ವಿಜೃಂಭಿಸುತ್ತಿತ್ತು. ಮಾನವ ಬದುಕಿನಲ್ಲಿ ಆನುವಂಶಿಕತೆಯನ್ನು ಮತ್ತು ಸಾಮಾಜಿಕ ಪರಿಸರವನ್ನು ನಿರ್ಧಾರಕವಾಗಿ ಕಾಣುವ ‘ಪ್ರಕೃತಿವಾದ’ವನ್ನು (ಇದು ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಮಂಡಿಸಿ ‘ವಿಕಾಸವಾದ’ದ ಸಾಮಾಜಿಕ ಕವಲು) ಲೂಕಾಕ್ಸ್ ಸಂಪೂರ್ಣವಾಗಿ ತಿರಸ್ಕರಿಸುತ್ತಾನೆ. ಏಕೆಂದರೆ, ಆ ವಾದದ ಪ್ರಕಾರ ಮಾನವರೆಲ್ಲರೂ ಅಸ್ವತಂತ್ರರು ಮತ್ತು ಜನ್ಮ ತಾಳುವಾಗಲೇ ತಮ್ಮ ವಿಶಿಷ್ಟ ಆನುವಂಶಿಕತೆ ಮತ್ತು ಪರಿಸರಗಳಲ್ಲಿ ಸಿಕ್ಕಿ ಬಿದ್ದಿರುವವರು. ಪ್ರಕೃತಿವಾದಕ್ಕೆ ವಿರುದ್ಧವಾಗಿ ಲೂಕಾಕ್ಸ್, ವಾಸ್ತವವಾದವನ್ನು ರೂಪಿಸುತ್ತಾನೆ. ಹಾಗೆಯೇ ಕಾಫ್ಕ, ಜಾಯ್ಸ್ ಮುಂತಾದ ಆಧುನಿಕತಾವಾದಿ (Modernist) ಲೇಖಕರನ್ನು ಅವರು ವ್ಯಕ್ತಿಯನ್ನು ಮತ್ತು ಮಾನಸಿಕ ಪ್ರಕ್ರಿಯೆಗಳನ್ನು ಎತ್ತಿ ಹಿಡಿಯುತ್ತಾರೆ ಮತ್ತು ಪರಿವರ್ತನಶೀಲ ಸಾಮಾಜಿಕ ಚಲನೆಗಳನ್ನು ನಿರ್ಲಕ್ಷಿಸುತ್ತಾರೆ ಎಂಬ ಕಾರಣಗಳಿಗಾಗಿ ತಿರಸ್ಕರಿಸುತ್ತಾನೆ.
ಪ್ರಕೃತಿವಾದ ಮತ್ತು ಆಧುನಿಕತಾವಾದಗಳಿಗೆ ವಿರುದ್ಧವಾಗಿ ಲೂಕಾಕ್ಸ್‌ತನ್ನ ವಾಸ್ತವತಾವಾದವನ್ನು ಕಟ್ಟುತ್ತಾನೆ. ಲೂಕಾಕ್ಸ್ ಸಾಹಿತ್ಯದಲ್ಲಿ ‘ವಾಸ್ತವತೆ’ಯನ್ನು ಒಂದು ಸಂಕೀರ್ಣ ಪರಿಕಲ್ಪನೆಯಾಗಿ ವ್ಯಾಖ್ಯಾನಿಸುತ್ತಾನೆ. ಅವನ ವಾದದ ಸಾರಾಂಶವನ್ನು ಹೀಗೆ ಗ್ರಹಿಸಬಹುದು : ಔದ್ಯೋಗಿಕ ಕ್ರಾಂತಿ ನಂತರ ಅಸ್ತಿತ್ವಕ್ಕೆ ಬಂದ ಬಂಡವಾಳ ಶಾಹಿ ಸಮಾಜದಲ್ಲಿ ಚಿಂತನೆ ಮತ್ತು ಅನುಭವ, ವ್ಯಕ್ತಿ ಮತ್ತು ಸಮಾಜ, ಜ್ಞೇಯ ಮತ್ತು ಜ್ಞಾತೃ – ಇವುಗಳ ನಡುವೆ ತೀವ್ರ ವಿರೋಧವನ್ನು ನಾವು ಕಾಣುತ್ತೇವೆ. ಆದರೆ ಶ್ರೇಷ್ಠ ಲೇಖಕನೊಬ್ಬನಿಗೆ ಇಂತಹ ಪರಸ್ಪರ ವಿರೋಧಗಳನ್ನು ತಾರ್ಕಿಕವಾಗಿ (Dialectical) ಸಮನ್ವಯಗೊಳಿಸಿ, ಬದುಕಿನ ಅಖಂಡತೆಯ ದರ್ಶನವನ್ನು ಕೊಡಲು ಸಾಧ್ಯವಾಗುತ್ತದೆ. ಶ್ರೇಣೀಕೃತ ಹಾಗೂ ದ್ವಂದ್ವಾತ್ಮಕ ಸಮಾಜದಲ್ಲಿ ಅಖಂಡ ಸತ್ಯವನ್ನು ಪ್ರತಿಫಲಿಸಬಲ್ಲ. ಆ ಬಗೆಯ ಕಲೆಯನ್ನು – ಶ್ರೇಣೀಕೃತ, ದ್ವಂದ್ವಪೂರ್ಣ ಸಮಾಜದಲ್ಲಿ ಅಖಂಡ ಸತ್ಯವನ್ನು ಪ್ರತಿಫಲಿಸಬಲ್ಲ ಮತ್ತು ಹಾಗೆ ಮಾಡುವುದರ ಮೂಲಕವೇ ಉಪಭೋಕ್ತ ಸಮಾಜದ ‘ಪರಕೀಯತೆ’ (Alienation) ಮತ್ತು ‘ಛಿದ್ರೀಕರಣ’ (Fragmentation) ಪ್ರವೃತ್ತಿಗಳನ್ನು ಸಫಲವಾಗಿ ಎದುರಿಸುವ ಕಲೆಯನ್ನು – ಲೂಕಾಕ್ಸ್ ವಾಸ್ತವವಾದಿ ಕಲೆಯೆಂದು ಕರೆಯುತ್ತಾನೆ. ಅವನ ದೃಷ್ಟಿಯಲ್ಲಿ ಗ್ರೀಕ್ ಸಾಹಿತಿಗಳು, ಶೇಕ್ಸ್‌ಪಿಯರ್, ಬಾಲ್‌ಜಾಕ್ ಮತ್ತು ಟಾಲ್‌ಸ್ಟಾಯ್ ಇಂತಹ ವಾಸ್ತವವಾದಿ ಲೇಖಕರು.
ಲ್ಯೂಕಾಕ್ಸ್‌ನ ಇತರ ಮುಖ್ಯ ಪರಿಕಲ್ಪನೆಗಳೆಂದರೆ ‘ಅಖಂಡತೆ’ (totality), ‘ಪ್ರಾತಿನಿಧ್ಯತೆ’ (typicality) ಮತ್ತು ‘ವಿಶ್ವ – ಚಾರಿತ್ರಿಕತೆ’ (World-Historical). ‘ಅಖಂಡತೆ’ ಎಂದರೆ ವ್ಯಕ್ತಿ ತನ್ನ ಸುತ್ತಲಿನ ಪ್ರಪಂಚದಿಂದ ಪರಕೀಯವಾಗದೇ ಇದ್ದಂತಹ ಒಂದು ಸಮಾಜದ ಸ್ಥಿತಿ. ಸಮಾಜದ ಇಂತಹ ಸ್ಥಿತಿಯಲ್ಲಿ ಸಾಧಾರಣ ಮತ್ತು ವಿಶಿಷ್ಟ, ಚಿಂತನೀಯ ಮತ್ತು ಅನುಭವಗಮ್ಯ, ಸಾಮಾಜಿಕ ಮತ್ತು ವೈಯಕ್ತಿಕ – ಇವೇ ಮುಂತಾದ ಸ್ತರಗಳಲ್ಲಿ ಪರಸ್ಪರ ವಿರೋಧವಿರುವುದಿಲ್ಲ. ಇಂತಹ ಅಖಂಡತೆಯನ್ನು ಪ್ರತಿಫಲಿಸುವ ಮೂಲಕ ಶ್ರೇಷ್ಠ ಸಾಹಿತ್ಯಕೃತಿ ಮಾನವನ ಪರಕೀಯತೆಯನ್ನು ಮತ್ತು ಸಮಾಜದ ಛಿದ್ರೀಕರಣ ಪ್ರವೃತ್ತಿಯನ್ನು ಯಶಸ್ವಿಯಾಗಿ ಎದುರಿಸುತ್ತದೆ. ‘ಪ್ರಾತಿನಿಧ್ಯತೆ’ ಎಂದರೆ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ಚಾರಿತ್ರಿಕವಾಗಿ ಮುಖ್ಯವಾಗುವ ಹಾಗೂ ಪ್ರಗತಿಪರವಾಗಿರುವ ಮತ್ತು ಒಂದು ಸಮಾಜದ ಆಂತರಿಕ ರಚನೆ ಹಾಗೂ ಕ್ರಿಯಾಶೀಲತೆ ಇವುಗಳನ್ನು ಸ್ಪಷ್ಟಪಡಿಸುವ, ಆ ಸಮಾಜದ ಆಳದಲ್ಲಿ ಹುದುಗಿರುವ ಶಕ್ತಿ. ಲ್ಯೂಕಾಕ್ಸ್‌ನ ಅಭಿಪ್ರಾಯದಲ್ಲಿ ‘ವಾಸ್ತವತಾವಾದೀ’ ಲೇಖಕನ ಕರ್ತವ್ಯವೆಂದರೆ ಇಂತಹ ಪ್ರಾತಿನಿಧಿಕ ಗುಪ್ತ ಶಕ್ತಿಗಳನ್ನು ಕೃತಿಗಳಲ್ಲಿ ಇಂದ್ರಿಯಗಮ್ಯವಾಗಿ ಅಭಿವ್ಯಕ್ತಗೊಂಡ ಪಾತ್ರಗಳಲ್ಲಿ ಮತ್ತು ಕಾರ್ಯಗಳಲ್ಲಿ ಗುರುತಿಸುವುದು. ‘ವಿಶ್ವ-ಚಾರಿತ್ರಿಕ’ವೆಂದರೆ ಈ ಜಗತ್ತಿನ ಇತಿಹಾಸದಲ್ಲಿ ಪ್ರಮುಖವಾಗಿ ಕಂಡುಬರುವ ಆಂದೋಳನಗಳು (ಫ್ರಾನ್ಸಿನ ಮಹಾಕ್ರಾಂತಿ, ರಶ್ಯಾದಲ್ಲಾದ ಮಹಾಕ್ರಾಂತಿ ಇತ್ಯಾದಿ). ಎಂದರೆ ‘ವಾಸ್ತವತಾವಾದಿ’ ಲೇಖಕನು ಪ್ರಾತಿನಿಧಿಕ ಗುಪ್ತ ಶಕ್ತಿಗಳನ್ನು ಗುರುತಿಸುವ ಮೂಲಕ ವ್ಯಕ್ತಿಯನ್ನು ಒಟ್ಟು ಸಮಾಜದೊಡನೆ ಮತ್ತು ಕಾಲ – ದೇಶಗಳಿಂದ ಸೀಮಿತವಾದ ಒಂದು ಸಮಾಜದ ವಿಶಿಷ್ಟ ವಿವರಗಳನ್ನು ವಿಶ್ವಚಾರಿತ್ರಿಕ ಗತಿಯೊಡನೆ ಒಂದುಗೂಡಿಸಲು ಸಮರ್ಥನಾಗುತ್ತಾನೆ (Eagleton, 1976 : 27- 28).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ