ಫಿಲಿಪ್ಪೀನ್ಸ್‌ನ ಮರಿಯಾ ರೆಸ್ಸಾ ಹಾಗೂ ರಷ್ಯಾದ ಡಿಮಿತ್ರಿ ಮುರಾಟೊವ್, 2021ರ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1935ರಲ್ಲಿ ಜರ್ಮನಿಯ ಪತ್ರಕರ್ತನೊಬ್ಬನಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದುದನ್ನು ಹೊರತುಪಡಿಸಿದರೆ – ಪತ್ರಿಕೆಗಳನ್ನು ಗುರ್ತಿಸಿ, ಪತ್ರಕರ್ತರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಇದೇ ಮೊದಲು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಶ್ವದಾದ್ಯಂತ ಧಕ್ಕೆಯುಂಟಾಗಿರುವ ಸಂದರ್ಭದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಈ ಪತ್ರಕರ್ತರು ನಡೆಸಿದ ಧೈರ್ಯದ ಹೋರಾಟವನ್ನು ಆಯ್ಕೆ ಸಮಿತಿ ಗುರ್ತಿಸಿದೆ.
ಈ ಆಯ್ಕೆಯ ಮೂಲಕ ನೊಬೆಲ್ ಸಮಿತಿ ಸೂಚ್ಯವಾಗಿ ಒಂದು ಸಂದೇಶ ನೀಡುತ್ತಿರುವಂತಿದೆ. ಈ ಜಗತ್ತನ್ನು ಮಾನವೀಯಗೊಳಿಸಲು ವೃತ್ತಿನಿಷ್ಠ ಪತ್ರಕರ್ತರು ಅಗತ್ಯ ಹಾಗೂ ಅಂಥವರನ್ನು ಗುರ್ತಿಸಿ ಗೌರವಿಸುವುದು ಈ ಹೊತ್ತಿನ ಜರೂರು ಎನ್ನುವ ಸೂಚನೆಯದು. ನಿಜ ಪತ್ರಿಕೋದ್ಯಮದ ಬೆನ್ನುತಟ್ಟಿದಂತಿರುವ ನೊಬೆಲ್ ಗೌರವ, ಸಮಕಾಲೀನ ಪತ್ರಿಕೋದ್ಯಮದಲ್ಲಿ ನೈತಿಕತೆ ಮತ್ತು ವ್ಯಾಪಾರದ ನಡುವಿನ ಗೆರೆ ಅಳಿಸಿಹೋಗಿರುವಷ್ಟು ತೆಳುವಾಗಿರುವ ಸನ್ನಿವೇಶದಲ್ಲಿ, ‘ಪತ್ರಕರ್ತ’ ಎನ್ನುವ
ಅಳಿಸಿಹೋಗುತ್ತಿರುವ ಪ್ರಭೇದವನ್ನು ರಕ್ಷಿಸುವಪ್ರಯತ್ನದಂತೆಯೂ ಇದೆ. ಈ ಕಾರಣಗಳಿಂದಾಗಿ, ಮರಿಯಾ ಮತ್ತು ಮುರಾಟೊವ್ ಅವರಿಗೆ ಸಂದಿರುವ ಪ್ರಶಸ್ತಿ ಪತ್ರಿಕೋದ್ಯಮದ ಸಂಭ್ರಮವಷ್ಟೇ ಅಲ್ಲ; ಅದು ಮಾನವೀಯತೆ ಮತ್ತು ವಿಶ್ವಶಾಂತಿಗೆ ಹಂಬಲಿಸುವ ಎಲ್ಲರ ಸಂಭ್ರಮವೂ ಹೌದು.
ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯ ವಿಶ್ವದೆಲ್ಲೆಡೆ ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿವೆ. ಆ ಪ್ರವಾಹದೆದುರು ಈಜುವ ಧೈರ್ಯ ತೋರಿರುವ ಮರಿಯಾ ಹಾಗೂ ಮುರಾಟೊವ್, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರಯತ್ನಿಸುವ ಎಲ್ಲ ಪತ್ರಕರ್ತರ ಪ್ರತಿನಿಧಿಗಳು.
ಮರಿಯಾ (ಜ: 1963) ಅವರ ‘ರ‍್ಯಾಪ್ಲರ್’ ನ್ಯೂಸ್ ವೆಬ್‌ಸೈಟ್‌ಗೆ ಇನ್ನೂ ಹತ್ತರ ಪ್ರಾಯವೂ ತುಂಬಿಲ್ಲ. 2012ರಲ್ಲಿ ಆರಂಭವಾದ ಈ ಅಂತರ್ಜಾಲ ಪತ್ರಿಕೆ, ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೊ ಡುಟರ್ಟೆ ಆಡಳಿತದ ಜನ ವಿರೋಧಿ ಕ್ರಮಗಳ ಬಗ್ಗೆ ನಿರಂತರವಾಗಿ ಬರೆಯುತ್ತಿದೆ. ಮಾದಕವಸ್ತು ವಿರುದ್ಧದ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಳ್ಳು ಸುದ್ದಿ ಹರಡಲು ಹಾಗೂ ವಿರೋಧಿಗಳಿಗೆ ಕಿರುಕುಳ ನೀಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಪ್ರಯತ್ನಗಳನ್ನು ಬಯಲಿ ಗೆಳೆಯುತ್ತಾ ಬಂದಿದೆ.
ಮರಿಯಾ ಅವರಿಗಿಂತ ಎರಡು ವರ್ಷ ಹಿರಿಯರಾದ ಮುರಾಟೊವ್‌ರ (ಜ: 1961) ‘ನೊವಾಯಾ ಗೆಝೆಟ್’ (ಆರಂಭ: 1993) ‘ರ‍್ಯಾಪ್ಲರ್’ಗೆ ಅಣ್ಣನಂತಹ ಪತ್ರಿಕೆ; 19 ವರ್ಷಗಳಷ್ಟು ಹೆಚ್ಚಿನ ಪ್ರಾಯದ್ದು. ‘ರ‍್ಯಾಪ್ಲರ್’ ಆನ್‌ಲೈನ್ ಪತ್ರಿಕೆ, ‘ನೊವಾಯಾ ಗೆಝೆಟ್’ ಮುದ್ರಿತ ಪತ್ರಿಕೆ ಎನ್ನುವ ವ್ಯತ್ಯಾಸ ಹೊರತುಪಡಿಸಿದರೆ, ಎರಡರ ದಾರಿ–ಧ್ಯೇಯಗಳು ಒಂದೇ. ಪ್ರಭುತ್ವವಿರೋಧಿ ಧೋರಣೆ ಹಾಗೂ ಜನಪರ ಕಾಳಜಿ ಮಾಧ್ಯಮದ ಪ್ರಮುಖ ಕಾಳಜಿಯಷ್ಟೇ. ಈ ಧೋರಣೆಯನ್ನು ಎತ್ತಿ ಹಿಡಿಯಲಿಕ್ಕಾಗಿ ಎರಡೂ ಪತ್ರಿಕೆಗಳು ಎಂಥ ಸವಾಲನ್ನೂ ಎದುರುಗೊಳ್ಳಲು ಹಿಂಜರಿದಿಲ್ಲ.
ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಮರಿಯಾ ಜೈಲು ಕಂಡು ಬಂದಿದ್ದಾರೆ; ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಮುರಾಟೊವ್ ಅವರ ದಾರಿ ಮತ್ತೂ ಕಠಿಣವಾದುದು. ಅವರ ಪತ್ರಿಕಾಬಳಗದ ಆರು ಸಹೋದ್ಯೋಗಿಗಳು ಹೋರಾಟದ ಹಾದಿಯಲ್ಲಿ ಹುತಾತ್ಮರಾಗಿದ್ದಾರೆ. ಆ ಕಾರಣದಿಂದಲೇ ನೊಬೆಲ್ ಪ್ರಕಟವಾದಾಗ ಮುರಾಟೊವ್ ಮೊದಲು ನೆನಪಿಸಿಕೊಂಡಿದ್ದು ತನ್ನ ಪತ್ರಿಕಾಬಳಗವನ್ನು, ಹುತಾತ್ಮರನ್ನು. ಹದಿನೈದು ವರ್ಷಗಳ ಹಿಂದೆ ಅಕ್ಟೋಬರ್ 7ರಂದು ಪತ್ರಿಕೆಯ ಅನ್ನಾ ಪೊಲಿಟ್‌ಕೋವ್ಸ್‌ಕಯ ಎನ್ನುವ ವರದಿಗಾರ್ತಿಯ ಕೊಲೆಯಾಗಿತ್ತು. ಕಾಕತಾಳೀಯ ಎನ್ನುವಂತೆ, ಆಕೆಯ ಸ್ಮರಣೆಯ ಆಸುಪಾಸಿನ ಸಂದರ್ಭದಲ್ಲೇ ಪ್ರಶಸ್ತಿ ಪ್ರಕಟಣೆಯ ಸುದ್ದಿ ಹೊರಬಿದ್ದಿದೆ.
‘ತಮಗೆ ಸಂದ ನೊಬೆಲ್, ವಿಶ್ವದೆಲ್ಲೆಡೆಯಲ್ಲಿನ ಪತ್ರಕರ್ತರಿಗೆ ಸಂದಿರುವ ಗೌರವ’ ಎಂದು ಮರಿಯಾ ಹೇಳಿದ್ದಾರೆ. ಪತ್ರಕರ್ತನ ಕೆಲಸ ಹಿಂದೆಂದಿಗಿಂತಲೂ ಕ್ಲಿಷ್ಟ ಹಾಗೂ ಅಪಾಯಕಾರಿ ಎಂದಿರುವ ಅವರು, ಈ ಪ್ರಶಸ್ತಿ ಪ್ರಭುತ್ವದ ಜನವಿರೋಧಿ ಧೋರಣೆಯ ವಿರುದ್ಧದ ಹೋರಾಟದಲ್ಲಿ ಹಲ್ಲೆಗಳಿಂದ ತಪ್ಪಿಸಿಕೊಳ್ಳಲು ಗುರಾಣಿಯಾಗಲಿದೆ. ಪತ್ರಕರ್ತರು ಆತಂಕವಿಲ್ಲದೆ ತಮ್ಮ ವೃತ್ತಿಯನ್ನು ನಿರ್ವಹಿಸಲು ಪ್ರೇರಣೆಯಾಗಲಿದೆ ಎನ್ನುವ ವಿಶ್ವಾಸ ಹೊಂದಿದ್ದಾರೆ.
ಪತ್ರಕರ್ತರ ಪಾಲಿಗೆ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲೊಂದು ಎನ್ನುವ ಕುಖ್ಯಾತಿಗೆ ಪಾತ್ರವಾದ ಫಿಲಿಪ್ಪೀನ್ಸ್‌ನಲ್ಲಿ, ಮರಿಯಾ ಅವರಿಗೆ ಸಂದಿರುವ ಗೌರವ ಅಲ್ಲಿನ ಪತ್ರಕರ್ತರಿಗೆ ವಿಜಯೋತ್ಸವದಂತೆ ಕಾಣಿಸಿದೆ.
ರೊಡ್ರಿಗೊ ಡುಟರ್ಟೆ 2016ರಲ್ಲಿ ಫಿಲಿಪ್ಪೀನ್ಸ್‌ನ ಅಧ್ಯಕ್ಷರಾದ ನಂತರ ಮರಿಯಾ ಮತ್ತು ‘ರ‍್ಯಾಪ್ಲರ್’ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು, ತನಿಖೆಗಳು ಹಾಗೂ ಆನ್‌ಲೈನ್ ದಾಳಿಗಳು ನಿರಂತರವಾಗಿ ನಡೆದಿವೆ. ರೊಡ್ರಿಗೊ ಅವರ ಪ್ರಕಾರ ‘ರ‍್ಯಾಪ್ಲರ್’ ಒಂದು ಸುಳ್ಳು ಸುದ್ದಿಗಳ ಕಾರ್ಖಾನೆ. ಸತ್ಯ ಹೇಳುವವರು ವ್ಯವಸ್ಥೆಯ ಕಣ್ಣಿಗೆ ಸುಳ್ಳುಗಾರರು, ದೇಶದ್ರೋಹಿಗಳಾಗಿ ಕಾಣುವುದರಲ್ಲಿ ಆಶ್ಚರ್ಯವೇನಿದೆ. ಫಿಲಿಪ್ಪೀನ್ಸ್ ಮಾದರಿ ಈಗ ವಿಶ್ವದ ಬಹುತೇಕ ದೇಶಗಳ ಮಾದರಿಯೂ ಆಗಿದೆ. ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ.
‘ಬುದ್ಧಿ–ಭಾವಗಳ ಮೇಲೆ ಸವಾರಿ ಮಾಡಲು ಭಯಕ್ಕೆ ಅವಕಾಶ ಮಾಡಿಕೊಟ್ಟರೆ ಅಧಿಕಾರದ ದುರುಪಯೋಗಕ್ಕೆ ಅವಕಾಶ ಕಲ್ಪಿಸಿದಂತೆಯೇ ಸರಿ. ಭಯದಿಂದ ಹೊರ ಬರುವುದು ಹೇಗೆನ್ನುವುದೇ ಬಹು ದೊಡ್ಡ ಸವಾಲು’ ಎನ್ನುವ ಮರಿಯಾ, ‘ಹೌ ಟು ಸ್ಟ್ಯಾಂಡಪ್ ಟು ಎ ಡಿಕ್ಟೇಟರ್’ (ಸರ್ವಾಧಿಕಾರಿಯನ್ನು ಎದುರಿಸುವುದು ಹೇಗೆ) ಪುಸ್ತಕದ ಲೇಖಕಿಯೂ ಹೌದು.
ಮರಿಯಾ ಅವರಂತೆ ಮುರಾಟೊವ್ ವ್ಯವಸ್ಥೆಯ ವಿರುದ್ಧದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವವರು. ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್, ತಮಗೆ ದೊರೆತ ನೊಬೆಲ್ ಶಾಂತಿ ಪುರಸ್ಕಾರದ ಮೊತ್ತದಲ್ಲಿ ಒಂದು ಭಾಗವನ್ನು ‘ನೊವಾಯಾ ಗೆಝೆಟ್’ಗೆ ನೀಡಿದ್ದರಂತೆ. ಆ ಹಣದಲ್ಲಿ ಪತ್ರಿಕೆಗೆ ಕಂಪ್ಯೂಟರ್‌ಗಳನ್ನು ಖರೀದಿಸಲಾಗಿತ್ತಂತೆ. ಪ್ರಶಸ್ತಿ ಪುಳಕದ ಪಾಳಿಯೀಗ ಮುರಾಟೊವ್ ಅವರದು. ಅವರು ತಮಗೆ ಬರುವ ಪ್ರಶಸ್ತಿಯ ಹಣದಲ್ಲಿ ಚಿಕ್ಕಾಸನ್ನೂ ಬಳಸದಿರಲು ನಿರ್ಧರಿಸಿದ್ದು, ಪ್ರಶಸ್ತಿಯ ಧ್ಯೇಯವನ್ನು ಸಾಕಾರಗೊಳಿಸುವ ಚಟುವಟಿಕೆಗಳಿಗಾಗಿ ಹಣ ಮೀಸಲಿಡಲು ಉದ್ದೇಶಿಸಿದ್ದಾರೆ.
ಮುರಾಟೊವ್ ಅವರಿಗೆ ಪ್ರಶಸ್ತಿ ಪ್ರಕಟವಾದ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ಗೊರ್ಬಚೆವ್, ‘ವಿರಳವಾಗಿಯಾದರೂ ಸತ್ಯವನ್ನು ನಿರಾಶೆಗೊಳಿಸುವುದಕ್ಕಾಗಿ ಪತ್ರಿಕೆಯನ್ನು ಅಭಿನಂದಿಸುತ್ತೇನೆ’ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಮುರಾಟೊವ್ ಪ್ರತಿಕ್ರಿಯೆ: ‘ನಾವು ಪರಿಪೂರ್ಣರಲ್ಲ, ತಪ್ಪು ಮಾಡಿರುವುದನ್ನು ಒಪ್ಪಿಕೊಳ್ಳುತ್ತೇವೆ’. ಈ ವಿನಯ ಮತ್ತು ವಿಮರ್ಶೆ ಸಮಕಾಲೀನ ಪತ್ರಿಕೋದ್ಯಮದಲ್ಲಿ ವಿರಳ. ಸತ್ಯವನ್ನು ಪದೇ ಪದೇ ನಿರಾಶೆಗೊಳಿಸುವುದು ಹಾಗೂ ತಮ್ಮನ್ನು ಪರಿಪೂರ್ಣ ಎಂದು ತಿಳಿದಿರುವುದು ಈಗಿನ ಮಾಧ್ಯಮಗಳ ಲಕ್ಷಣ.
ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಗೊಂಡ ಮರುದಿನದ ‘ನೊವಾಯಾ ಗೆಝೆಟ್’ ಪತ್ರಿಕೆಯ ಮುಖಪುಟದಲ್ಲಿ ಇದ್ದುದು ಮುರಾಟೊವ್ ಛಾಯಾಚಿತ್ರವಲ್ಲ– ಮರಿಯಾ ಅವರದು. ‘ಆಕೆ ಅಪ್ರತಿಮ ಪತ್ರಕರ್ತೆ. ಆಕೆಯ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ಪತ್ರಿಕೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವಂತೆ ಮರಿಯಾರನ್ನು ಆಹ್ವಾನಿಸಿದ್ದೇವೆ’ ಎಂದು ಮುರಾಟೊವ್ ಹೇಳಿದ್ದಾರೆ. ಮುರಾಟೊವ್‌ರ ಬಗ್ಗೆ ಪ್ರೀತಿ–ಗೌರವ ಮೂಡಲು ಈ ನಡವಳಿಕೆಯೊಂದು ಸಾಲದೆ?
ಸೆಟೆದು ನಿಲ್ಲದಿದ್ದರೂ ಪರವಾಗಿಲ್ಲ, ಬಾಗದಿರುವ ಕನಿಷ್ಠ ವೃತ್ತಿಪರತೆಯನ್ನು ಹೊಂದಲಿಕ್ಕೆ ಸಮಕಾಲೀನ ಪತ್ರಕರ್ತರಿಗೆ ಮರಿಯಾ–ಮುರಾಟೊವ್ ಪ್ರೇರಣೆಯಾಗ ಬೇಕು. ಸ್ವತಂತ್ರ ಪತ್ರಿಕೋದ್ಯಮದ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ಸಮಾನಮನಸ್ಕ ಪತ್ರಕರ್ತರ ಸಹಭಾಗಿತ್ವದಲ್ಲಿ ರೂಪುಗೊಂಡಿರುವ ‘ರ‍್ಯಾಪ್ಲರ್’ ಹಾಗೂ ‘ನೊವಾಯಾ ಗೆಝೆಟ್’ ಜೀವಂತಪಠ್ಯ ಗಳು ಭಾರತೀಯರಿಗೆ ಏನನ್ನೋ ಹೇಳುತ್ತಿರುವಂತಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ