ಸಹಾಯಕ ಪ್ರಾಧ್ಯಾಪಕರ ನೇಮಕಾತಿ: 1,242 ಹುದ್ದೆ, 33,379 ಅರ್ಜಿ
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 26 ವಿಷಯಗಳಿಗೆ ಸಂಬಂಧಿಸಿದ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಒಟ್ಟು 47,103 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈ ಪೈಕಿ, 33,379 ಅಭ್ಯರ್ಥಿಗಳು ಮಾತ್ರ ಶುಲ್ಕ ಪಾವತಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರವಾಗಿದ್ದು, ಜನವರಿ ಕೊನೆಯ ವಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಅದರಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಆಯ್ಕೆ ನಡೆಯಲಿದೆ. ಸಂದರ್ಶನ ಇರುವುದಿಲ್ಲ.
1,242 ಹುದ್ದೆಗಳ ಪೈಕಿ 16 ವಿಷಯಗಳಿಗೆ ಸಂಬಂಧಿಸಿದ 145 ಹುದ್ದೆಗಳು (ಕಲ್ಯಾಣ ಕರ್ನಾಟಕದ 63) 2015ರಲ್ಲಿ ಭರ್ತಿಯಾಗದ ಹುದ್ದೆಗಳಾಗಿವೆ. ಉಳಿದಂತೆ, ಪ್ರಸಕ್ತ ಸಾಲಿಗೆ 25 ವಿಷಯಗಳಿಗೆ 1,097 (ಕಲ್ಯಾಣ ಕರ್ನಾಟಕದ 158) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು ಹುದ್ದೆಗಳಲ್ಲಿ ಶೇಕಡ 5ರಷ್ಟು ಹುದ್ದೆಗಳನ್ನು (60 ಹುದ್ದೆಗಳು) ಇಲಾಖೆಯ ಗ್ರೂಪ್ 'ಸಿ' ವೃಂದದಿಂದ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ ಪಾವತಿಸಿದವರು: ಕನ್ನಡ, ಇತಿಹಾಸ, ಅರ್ಥಶಾಸ್ತ್ರ ಮತ್ತು ವಾಣಿಜ್ಯ ವಿಷಯಗಳಲ್ಲಿ 100ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕನ್ನಡ ವಿಷಯದ 107 ಹುದ್ದೆಗಳಿಗೆ ಅತೀ ಹೆಚ್ಚು 9,928 ಅರ್ಜಿಗಳು ಸಲ್ಲಿಕೆ ಆಗಿವೆ. ಆ ಪೈಕಿ 7,148 ಮಂದಿ ಮಾತ್ರ ಶುಲ್ಕ ಪಾವತಿಸಿದ್ದಾರೆ. ವಾಣಿಜ್ಯ ವಿಷಯದಲ್ಲಿ ಅತೀ ಹೆಚ್ಚು 198 ಹುದ್ದೆಗಳಿದ್ದು ಅರ್ಜಿ ಸಲ್ಲಿಸಿದ್ದ 6,801 ಅಭ್ಯರ್ಥಿಗಳ ಪೈಕಿ 5,015 ಅಭ್ಯರ್ಥಿಗಳು ಶುಲ್ಕ ಪಾವತಿಸಿದ್ದಾರೆ.
ಫ್ಯಾಷನ್ ಟೆಕ್ನಾಲಜಿ, ಸ್ಟ್ಯಾಟಿಸ್ಟಿಕ್ಸ್, ಎಲೆಕ್ಟ್ರಾನಿಕ್ಸ್, ಮೈಕ್ರೋ ಬಯಾಲಜಿ, ಭೂಗೋಳ ವಿಜ್ಞಾನ, ಭೂಗರ್ಭ ವಿಜ್ಞಾನ, ಸಾಮಾಜಿಕ ಕಾರ್ಯ, ಶಿಕ್ಷಣ, ಉರ್ದು ವಿಷಯಗಳಲ್ಲಿ 10 ಕ್ಕೂ ಕಡಿಮೆ ಹುದ್ದೆಗಳಿವೆ. ಕೇವಲ 2 ಹುದ್ದೆಗಳಿರುವ ಶಿಕ್ಷಣ ವಿಷಯಕ್ಕೆ 583 ಮಂದಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 461 ಮಂದಿ ಶುಲ್ಕ ಪಾವತಿಸಿದ್ದಾರೆ. 3 ಹುದ್ದೆಗಳಿರುವ ಫ್ಯಾಷನ್ ಟೆಕ್ನಾಲಜಿ ವಿಷಯಕ್ಕೆ 21 ಮಂದಿ ಅರ್ಜಿ ಸಲ್ಲಿಸಿದ್ದು, 14 ಅಭ್ಯರ್ಥಿಗಳು ಶುಲ್ಕ ಪಾವತಿಸಿದ್ದಾರೆ, 4 ಹುದ್ದೆಗಳಿರುವ ಎಲೆಕ್ಟ್ರಾನಿಕ್ಸ್ ವಿಷಯಕ್ಕೆ ಅರ್ಜಿ ಸಲ್ಲಿಸಿದ್ದ 244 ಮಂದಿಯಲ್ಲಿ 146 ಮಂದಿ ಮಾತ್ರ ಶುಲ್ಕ ಪಾವತಿಸಿದ್ದಾರೆ.
ಈ ಹುದ್ದೆಗಳಿಗೆ ಕೆಇಎ ಆನ್ ಲೈನ್ ಮೂಲಕ ಅ. 7ರಿಂದ ನ. 6ರವರೆಗೆ ಅರ್ಜಿ ಸಲ್ಲಿಸಲು ಮೊದಲು ಅವಕಾಶ ನೀಡಿತ್ತು. ಕೆ- ಸೆಟ್ (ಕರ್ನಾಟಕ ರಾಜ್ಯಮಟ್ಟದ ಅರ್ಹತಾ ಪರೀಕ್ಷೆ) ಫಲಿತಾಂಶ ನ. 2ರಂದು ಪ್ರಕಟವಾಗಿದ್ದರಿಂದ ಕೊನೆ ದಿನವನ್ನು ನ. 20ರವರೆಗೆ ವಿಸ್ತರಿಸಲಾಗಿತ್ತು. ರಾಜ್ಯ ಸರ್ಕಾರ ನ. 18ರಂದು ಅಧಿಸೂಚನೆ ಹೊರಡಿಸಿ ಕಂಪ್ಯೂಟರ್ ವಿಜ್ಞಾನ, ರಾಜ್ಯಶಾಸ್ತ್ರ, ರಸಾಯನವಿಜ್ಞಾನ, ಎಲೆಕ್ಟ್ರಾನಿಕ್ಸ್, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಅರ್ಥಶಾಸ್ತ್ರ ಮತ್ತು ಭೌತವಿಜ್ಞಾನ ವಿಷಯಗಳ ಹುದ್ದೆಗಳಿಗೆ ತತ್ಸಮಾನ ವಿಷಯಗಳ ವಿದ್ಯಾರ್ಹತೆ ನಿಗದಿಪಡಿಸಿದ್ದರಿಂದ ಮತ್ತೆ ಕೊನೆಯ ದಿನ ಮತ್ತೆ ವಿಸ್ತರಿಸಿ ಡಿ. 30ರವರೆಗೆ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಡಿ. 6 ಕೊನೆಯ ದಿನ ನೀಡಲಾಗಿತ್ತು. 2017ರ ಬಳಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆದಿಲ್ಲ.
'ಕನ್ನಡ, ಇಂಗ್ಲಿಷ್ ಉತ್ತೀರ್ಣ ಕಡ್ಡಾಯ'
'ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ವಿಷಯದಲ್ಲಿ ತಲಾ 100 ಅಂಕಗಳಿಗೆ ನಡೆಯಲಿರುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯ. ಈ ವಿಷಯಗಳಲ್ಲಿ ವಿವರಣಾತ್ಮಕ ಉತ್ತರ ಬರೆಯಬೇಕು. ಉಳಿದಂತೆ 50 ಅಂಕಗಳ ಸಾಮಾನ್ಯ ಜ್ಞಾನ ಮತ್ತು ಐಚ್ಚಿಕ ವಿಷಯದಲ್ಲಿ 250 ಅಂಕಗಳ ಬಹುಆಯ್ಕೆಯ ಪರೀಕ್ಷೆ ಬರೆಯಬೇಕು. ಬಹುಆಯ್ಕೆಯ ಪರೀಕ್ಷೆಯಲ್ಲಿ ತಪ್ಪು ಉತ್ತರಕ್ಕೆ ಅಂಕ ಕಡಿತ (ಒಂದು ಅಂಕಕ್ಕೆ 0.25 ಅಂಕ) ಆಗಲಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರತೀ ವಿಷಯದಲ್ಲಿ ಕನಿಷ್ಠ 30, ಎರಡೂ ಸೇರಿ 70 ಅಂಕ ಪಡೆಯಲೇಬೇಕು. ಅದರಲ್ಲಿ ಅನುತ್ತೀರ್ಣರಾಗಿ, ಬಹುಆಯ್ಕೆಯ ಪರೀಕ್ಷೆಯಲ್ಲಿ (ಐಚ್ಛಿಕ ಮತ್ತು ಸಾಮಾನ್ಯ ಜ್ಞಾನ) ಹೆಚ್ಚು ಅಂಕ ಗಳಿಸಿದ್ದರೂ ಪ್ರಯೋಜನ ಇಲ್ಲ. ಹೀಗಾಗಿ ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆಗೂ ಹೆಚ್ಚಿನ ಮಹತ್ವ ಕೊಡಬೇಕು' ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದರು.
'ಅಂಧ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಲಿಪಿಕಾರರನ್ನು ಆಯ್ಕೆ ಮಾಡಿಕೊಳ್ಳಲು ವಾರದೊಳಗೆ ವೆಬ್‌ಸೈಟ್‌ನಲ್ಲಿ ಲಿಂಕ್ ನೀಡಲಾಗುವುದು. ಲಿಪಿಕಾರರನ್ನು ಅಭ್ಯರ್ಥಿಗಳೇ ಸೂಚಿಸಬಹುದು. ಅಥವಾ ಇಲಾಖೆ ನೀಡುವವರನ್ನು ಆಯ್ಕೆ ಮಾಡಿಕೊಳ್ಳಬಹುದು. ಅಭ್ಯರ್ಥಿಗಳೇ ಸೂಚಿಸಿದವರು ಕಡಿಮೆ ಓದಿದವರಾಗಿರಬೇಕಿದ್ದು, ಅದರ ಆಧಾರದಲ್ಲಿ ಅವಕಾಶ ನೀಡಲಾಗುವುದು' ಎಂದರು.
*
ಪಾರದರ್ಶಕವಾಗಿ ನೇಮಕಾತಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷ ನೇಮಕಾತಿ ಮಾಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಡಾ. ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ