ರಾತ್ರಿ 2 ಗಂಟೆಗೆ ಅಧಿವೇಶನ ನಡೆಸಲು ಪ.ಬಂಗಾಳ ರಾಜ್ಯಪಾಲರ ಪಟ್ಟು; ದೀದಿ ನಾಡಲ್ಲಿ ಆಗ್ತಿರೋದೇನು?
26th February, 2022 23:10 IST
ಕೋಲ್ಕೊತಾ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರು ರಾತ್ರಿ 2 ಗಂಟೆಗೆ ವಿಧಾನಸಭೆ ಅಧಿವೇಶನ ನಡೆಸುವ ವಿಚಾರದಲ್ಲಿ ಯಾವುದೇ ಬದಲಾವಣೆಗೆ ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸಮಯ ಬದಲಾವಣೆ ಮಾಡುವಂತೆ ಸರಕಾರ ಮಾಡಿರುವ ಮನವಿಯನ್ನು ತಳ್ಳಿ ಹಾಕಿರುವ ಅವರು, ಮನವಿಯನ್ನು ಪರಿಗಣಿಸಲು ಸಚಿವ ಸಂಪುಟ ಸಭೆಯ ಅನುಮೋದನೆ ಬೇಕು ಎಂದು ಹೇಳಿದ್ದಾರೆ. ಫೆ.24ರಂದು ಮುಖ್ಯ ಕಾರ್ಯದರ್ಶಿ ಎಚ್.ಕೆ. ದ್ವಿವೇದಿ ಅವರು ವಿಧಾನಸಭೆ ಅಧಿವೇಶನ ಕರೆಯುವ ಅಧಿಕಾರ ಹೊಂದಿರುವ ರಾಜ್ಯಪಾಲರಿಗೆ ಪತ್ರ ಬರೆದು ಮಾ.7ರಂದು ಅಧಿವೇಶನ ಕರೆಯುವಂತೆ ಮನವಿ ಮಾಡಿದ್ದರು. ಆದರೆ ಪತ್ರದಲ್ಲಿ ಟೈಪಿಂಗ್ ತಪ್ಪಿನಿಂದಾಗಿ ಮಧ್ಯಾಹ್ನ 2 ಗಂಟೆ ಬದಲಿಗೆ ರಾತ್ರಿ 2 ಗಂಟೆ (2 ಎಎಂ) ಎಂದು ಮುದ್ರಣವಾಗಿತ್ತು. ಇದನ್ನು ನೋಡದೆ ಹಾಗೆಯೇ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು.
ಸಚಿವ ಸಂಪುಟದ ಶಿಫಾರಸಿನ ಮೇರೆಗೆ ಅಂದು ಆ ಸಮಯಕ್ಕೆ ಅಧಿವೇಶನ ಕರೆಯಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿತ್ತು. ಈ ತಪ್ಪಿನ ಅರಿವಾಗುತ್ತಲೇ ಕಾರ್ಯದರ್ಶಿಯವರು ಮತ್ತೆ ರಾಜ್ಯಪಾಲರಿಗೆ ಪತ್ರ ಬರೆದು, ಮೊದಲು ಬರೆದ ಪತ್ರದಲ್ಲಿ ಆದ ಪ್ರಮಾದದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಧಿವೇಶನ ಕರೆಯಬೇಕಾದ ಸಮಯವನ್ನು ರಾತ್ರಿ ಬದಲಿಗೆ ಮಧ್ಯಾಹ್ನ 2 ಗಂಟೆ ಎಂದು ಬದಲಾಯಿಸಲು ಮನವಿ ಮಾಡಿದ್ದಾರೆ. ಆದರೆ ರಾಜ್ಯಪಾಲರು ಇದಕ್ಕೆ ನಿರಾಕರಿಸಿದ್ದಾರೆ.
‘ರಾಜ್ಯಪಾಲರು ಅಧಿವೇಶನದ ಅವಧಿಯನ್ನು ಬದಲಾಯಿಸಿ ಹೊಸ ಪ್ರಕಟಣೆ ಹೊರಡಿಸಬೇಕಾದರೆ ಅದಕ್ಕೆ ಸಚಿವ ಸಂಪುಟ ಸಭೆಯ ಅನುಮೋದನೆ ಅತ್ಯಗತ್ಯ. ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸಿನಂತೆ ಮಾತ್ರ ಕೆಲಸ ಮಾಡುತ್ತಾರೆ. ಇಂತಹ ವಿಚಾರದಲ್ಲಿ ಯಾರೋ ಒಬ್ಬರನ್ನು ಸಚಿವ ಸಂಪುಟದ ಪ್ರತಿನಿಧಿ ಎಂದು ಪರಿಗಣಿಸಲಾಗದು. ಮತ್ತೆ ಸಂಪುಟ ಸಭೆ ಕರೆದು, ಶಿಫಾರಸು ಪತ್ರವನ್ನು ಅಧಿಕೃತವಾಗಿ ರವಾನಿಸಿದರೆ ಮಾತ್ರ ಸಮಯ ಬದಲಾಯಿಸಲಾಗುವುದು’ ಎಂದು ರಾಜಭವನ ಸ್ಪಷ್ಟಪಡಿಸಿದೆ.
‘ಸಂವಿಧಾನದ 163ನೇ ವಿಧಿಯ ಪ್ರಕಾರ ರಾಜ್ಯಪಾಲರು ನಡೆದು ಕೊಂಡಿದ್ದಾರೆ. ಈ ವಿಧಿ ಅನುಸಾರ ಅಧಿವೇಶನ ಕರೆಯುವ ವಿಚಾರದಲ್ಲಿ ಯಾವುದೇ ಬದಲಾವಣೆಗೆ ಸಂಪುಟದ ಶಿಫಾರಸು ಅತ್ಯಗತ್ಯ’ ಎಂದು ರಾಜಭವನ ತಿಳಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ