ವಿಶ್ಲೇಷಣೆ, ಮೀಸಲಾತಿ ಹೆಚ್ಚಳ ಲಕ್ಷ್ಮಣರೇಖೆ ದಾಟಲಾಗದೆ?
- ಕೆಚ್ ಕಾಂತರಾಜ
ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಮೀಸಲಾತಿಯು ಶೇಕಡ 15 ಇದ್ದಿದ್ದನ್ನು ಶೇ 17 ಹಾಗೂ ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾತಿಯು ಶೇ 3ರಷ್ಟು ಇದ್ದಿದ್ದನ್ನು ಶೇ 7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ತಮಗೆ ತಮ್ಮ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬುದು ಸಮುದಾಯಗಳ ಬೇಡಿಕೆ. ಎಸ್‌ಟಿ ಸಮುದಾಯಗಳಿಂದ ಈ ಬೇಡಿಕೆ ಬಂದ ನಂತರದಲ್ಲಿ ರಾಜ್ಯ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತು.
ಆಯೋಗವು ಮೀಸಲಾತಿ ಹೆಚ್ಚಿಸುವ ಶಿಫಾರಸು ಮಾಡಿತು. ಅದನ್ನು ಆಧರಿಸಿ ರಾಜ್ಯ ಸರ್ಕಾರವು ಮೀಸಲಾತಿ ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ. ಇದೇ ಸಂದರ್ಭದಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಇರುವ ಶೇ 32ರ ಮೀಸಲಾತಿಯನ್ನು ಯಾವುದೇ ಬದಲಾವಣೆಗೆ ಒಳಪಡಿಸುವುದಿಲ್ಲವೆಂದು ಸ್ಪಷ್ಟಪಡಿಸಿದೆ.
ಇದು ಸ್ವಾಗತಾರ್ಹ. ಸರ್ಕಾರದ ಸುಗ್ರೀವಾಜ್ಞೆಯನ್ನು ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದಲ್ಲಿ, ಮೀಸಲಾತಿ ಹೆಚ್ಚಳವು ಊರ್ಜಿತವಾಗಬೇಕು ಎಂದಾದರೆ ಸರ್ಕಾರವು ಕೆಲವು ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳಬೇಕು.
ಮೀಸಲಾತಿ ಹೆಚ್ಚಿಸುವುದಕ್ಕೆ ಸಮುದಾಯಗಳ ಜನಸಂಖ್ಯೆಯ ನಿಖರ ಅಂಕಿ–ಅಂಶಗಳು ಬೇಕು. ಹಾಗೆಯೇ, ಸಮುದಾಯಗಳ ಸಾಮಾಜಿಕ ಹಿಂದುಳಿದಿರುವಿಕೆ ಖಚಿತವಾಗಬೇಕು. ನಾಗಮೋಹನದಾಸ್ ಆಯೋಗದ ವರದಿಯು ಬಹಿರಂಗವಾಗಿಲ್ಲ. ಜನಸಂಖ್ಯೆ ಪ್ರಮಾಣ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವುದರಲ್ಲಿ ತಪ್ಪಿಲ್ಲ.
ಮೀಸಲಾತಿ ಹೆಚ್ಚಿಸುವ ವಿಚಾರ ಬಂದಾಗಲೆಲ್ಲ ಪ್ರಸ್ತಾಪ ಆಗುವುದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು. ಅಂದರೆ, ಒಟ್ಟು ಮೀಸಲಾತಿಯು ಲಭ್ಯ ಹುದ್ದೆಗಳ ಶೇಕಡ 50ರಷ್ಟನ್ನು ಮೀರಬಾರದು ಎಂಬ ನಿಯಮ. ಈ ಮಾತನ್ನು ಸುಪ್ರೀಂ ಕೋರ್ಟ್ 1963ರ ಬಾಲಾಜಿ ಪ್ರಕರಣದಲ್ಲಿಯೂ ಹೇಳಿದೆ. 1992ರ ಮಂಡಲ್ ತೀರ್ಪಿನಲ್ಲಿಯೂ (ಇಂದಿರಾ ಸಹಾನಿ ಪ್ರಕರಣ) ಒಂಬತ್ತು ನ್ಯಾಯಮೂರ್ತಿಗಳ ಪೀಠವು ಈ ಮಾತು ಹೇಳಿದೆ. ಬಾಲಾಜಿ ಪ್ರಕರಣದ ತೀರ್ಪಿನಲ್ಲಿ ಹೇಳಿರುವಂತೆಯೇ, ಶೇ 50ರ ಮಿತಿ ಮೀರಬಾರದೆಂದು ಹೇಳುತ್ತಿರುವುದಾಗಿ ಮಂಡಲ್ ತೀರ್ಪಿನಲ್ಲಿ ಕೋರ್ಟ್ ಹೇಳಿ, ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ ಮೀಸಲಾತಿ ಶೇ 50ರಷ್ಟು ಇರಬೇಕು ಎಂದು ತೀರ್ಮಾನಿಸಿದೆ. ಮೀಸಲಾತಿಯನ್ನು ಹೆಚ್ಚಿಸಬೇಕು ಎಂದಾದರೆ ಅದಕ್ಕೆ ವಿಶಿಷ್ಟವಾದ ಸಂದರ್ಭ ಇರಬೇಕು ಎಂದು ಅರ್ಥೈಸಬಹುದು.
ಅಂದರೆ, ಮೀಸಲಾತಿ ವಿಚಾರವಾಗಿ ಶೇ 50ರ ಮಿತಿಯನ್ನು ಮೀರಲೇಬಾರದು ಎಂದೇನೂ ಇಲ್ಲ. ಶೇ 50 ಎಂಬುದು ಲಕ್ಷ್ಮಣರೇಖೆ ಅಲ್ಲ. ವಿಶೇಷ ಸಂದರ್ಭಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಬಹುದು.
2021ರಲ್ಲಿ ಜೈಶ್ರೀ ಲಕ್ಷ್ಮಣರಾವ್ ಪಾಟೀಲ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಮಹಾರಾಷ್ಟ್ರ ಸರ್ಕಾರವು ಮರಾಠಾ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದರಿಂದಾಗಿ ಒಟ್ಟು ಮೀಸಲಾತಿಯು ಶೇ 50ರ ಗಡಿಯನ್ನು ಮೀರಿದ್ದು, ಹಾಗೆ ಮಿತಿ ಮೀರುವುದಕ್ಕೆ ಬೇಕಿದ್ದ ಅಸಾಧಾರಣ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂಬ ಕಾರಣ ನೀಡಿ ಆ ಮೀಸಲಾತಿಯನ್ನು ಅನೂರ್ಜಿತಗೊಳಿಸಿತು. ಈ ಪ್ರಕರ ಣದಲ್ಲಿ ಮರಾಠಾ ಸಮುದಾಯಕ್ಕೆ ಅಷ್ಟು ಮೀಸಲಾತಿ (ಶೇ 16) ಕಲ್ಪಿಸಲು ಆಧಾರ ಏನು ಎಂಬುದು ಸ್ಪಷ್ಟವಿರಲಿಲ್ಲ, ಅಲ್ಲಿ ಅಂಕಿ–ಅಂಶಗಳ ಕೊರತೆ ಇತ್ತು ಎಂಬುದನ್ನು ಗಮನಿಸಬೇಕು. ಅಲ್ಲದೆ, ಶೇ 50ರ ಮಿತಿಯನ್ನು ಮೀರಬಹುದಾದ ಅಸಾಧಾರಣ ಪರಿಸ್ಥಿತಿ ಯಾವುದು ಎಂಬುದಕ್ಕೆ ಸ್ಪಷ್ಟವಾದ ವಿವರಣೆ ಯಾವ ತೀರ್ಪಿನಲ್ಲಿಯೂ ಈವರೆಗೆ ಬಂದಿಲ್ಲ ಎಂಬ ವಾದ ಇದೆ. ಅಂದರೆ, ಶೇ 50ರ ಮಿತಿ ಎಂಬ ಗಡಿಯನ್ನು ದಾಟುವಂತೆಯೇ ಇಲ್ಲ ಎನ್ನುವಂತಿಲ್ಲ. ಒಟ್ಟಿನಲ್ಲಿ, ಸಂವಿಧಾನ ಬಯಸುವ ಸಮಾನತೆಯ ಆಶಯ ಈಡೇರುವುದು ಮುಖ್ಯ.
ನಮ್ಮಲ್ಲಿ ಶೇ 50ರ ಮಿತಿಯನ್ನು ಮೀರಿರುವ ನಿದರ್ಶನಗಳು ಹಲವು ಇವೆ. ಮೀಸಲಾತಿಯು ಶೇ 50ರಷ್ಟೇ ಇರಬೇಕು ಎಂದು ಕೋರ್ಟ್ ಈ ಹಿಂದೆ ಹೇಳಲು ಒಂದು ಕಾರಣ, ಸಮುದಾಯಗಳ ಜನಸಂಖ್ಯೆ ಮತ್ತು ಸಮುದಾಯಗಳ ಹಿಂದುಳಿದಿರುವಿಕೆ ವಿಚಾರವಾಗಿ ಕೋರ್ಟ್ ಮುಂದೆ ನಿಖರ ಅಂಕಿ–ಅಂಶಗಳು ಇರದಿದ್ದುದು. ನಿಖರವಾದ ಅಂಕಿ–ಅಂಶಗಳು ಸಿಗುವುದು ಜನಗಣತಿ ಅಥವಾ ಸಮೀಕ್ಷೆಗಳ ಮೂಲಕ. 1931ರ ನಂತರದ ಜಾತಿವಾರು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಕುರಿತ ವಿವರ ಲಭ್ಯವಿಲ್ಲ. ಕರ್ನಾಟಕದಲ್ಲಿ 2015ರಲ್ಲಿ ಜಾತಿವಾರು ಸಮೀಕ್ಷೆ ನಡೆದಿದೆ. ಆದರೆ ಅದರ ವಿವರ ಬಹಿರಂಗವಾಗಿಲ್ಲ.
ಯಾವ ಜಾತಿ ಎಷ್ಟು ಹಿಂದುಳಿದಿದೆ ಅಥವಾ ಮುಂದೆ ಬಂದಿದೆ ಎಂಬ ಬಗ್ಗೆ ಅನುಭವಗಮ್ಯ ಅಂಕಿ–ಅಂಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. 2010ರಲ್ಲಿ ಕೆ. ಕೃಷ್ಣಮೂರ್ತಿ ಪ್ರಕರಣದಲ್ಲಿಯೂ ಅಂಕಿ–ಅಂಶಗಳ ಕೊರತೆ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ನಾವು ಮೀಸಲಾತಿ ನಿಗದಿ ಮಾಡುವುದು ಅಂಕಿ–ಅಂಶ ಆಧರಿಸಿದ್ದರೆ ಶೇ 50ರ ಗಡಿಯನ್ನು ಮೀರಲು ಅವಕಾಶ ಇದೆ.
ಮೀಸಲಾತಿಯ ಮೂಲ ಇರುವುದು ಸಂವಿಧಾನದಲ್ಲಿ. ಮೀಸಲಾತಿಯು ಇಂತಿಷ್ಟೇ ಪ್ರಮಾಣದಲ್ಲಿ ಇರಬೇಕು ಎಂದು ಸಂವಿಧಾನವು ಹೇಳಿಲ್ಲ. ಮೀಸಲಾತಿ ಇರಬೇಕು ಎಂದಷ್ಟೇ ಸಂವಿಧಾನ ಹೇಳುತ್ತದೆ. ಸಂವಿಧಾನದ ಉದ್ದೇಶ ಸಮಾನತೆಯ ಸಾಕಾರ. ಹಿಂದುಳಿದವರು, ಅಶಕ್ತರಿಗೆ ಶಕ್ತಿ ತುಂಬಿದಾಗ ಮಾತ್ರ ಸಮಾನತೆ ಸಾಧ್ಯ ಎಂಬುದು ಅದರ ಆಶಯ. ಸಮಾನತೆಯನ್ನು ತರಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಿ ಎಂದು ಸಂವಿಧಾನ ಹೇಳುತ್ತದೆ. 1985ರ ಕೆ.ಸಿ. ವಸಂತಕುಮಾರ್ ಪ್ರಕರಣ ದಲ್ಲಿ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿಯವರು, ‘ಮೀಸಲಾತಿ ಪ್ರಮಾಣಕ್ಕೆ ಮಿತಿ ಹೇರುವುದು ನ್ಯಾಯಾಲಯದ ಕೆಲಸವಲ್ಲ. ಆದರೆ ಅದು ಜನರ ಹಕ್ಕು. ಅಷ್ಟೇ ಅಲ್ಲ, ಮೀಸಲಾತಿ ಪ್ರಮಾಣ ನಿಗದಿಪಡಿಸಲು ಅಗತ್ಯ ಆಧಾರ ಇಲ್ಲದಿದ್ದಾಗ ಮೀಸಲಾತಿಯು ಶೇ 40, 50, 60 ಅನ್ನು ಮೀರಬಾರದು ಎಂದು ಹೇಳಿದರೆ ಅದು ಇಚ್ಛಾನುಸಾರ ವರ್ತನೆಯಾಗುತ್ತದೆ. ಅದಕ್ಕೆ ಸಂವಿಧಾನ ಅವಕಾಶ ಕೊಡುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇವನ್ನೆಲ್ಲ ಆಧಾರವಾಗಿ ಇರಿಸಿಕೊಂಡು, ಜಾತಿಗಳ ಹಿಂದುಳಿದಿರುವಿಕೆಗೆ ಸಂಬಂಧಿಸಿದ ಅಂಕಿ–ಅಂಶಗಳನ್ನು ನಿಖರವಾಗಿ ಇಟ್ಟುಕೊಂಡು ಮುನ್ನಡೆದರೆ ಶೇ 50ರ ಮಿತಿಯನ್ನು ಮೀರಲು ಆಗದ ಸನ್ನಿವೇಶ ಎದುರಾಗುವು ದಿಲ್ಲ. ಕರ್ನಾಟಕದಲ್ಲಿ ಶೇ 50ಕ್ಕಿಂತ ಹೆಚ್ಚಿನ ಮೀಸಲಾತಿ ಕಲ್ಪಿಸಬೇಕಾದ ಸಂದರ್ಭ ಇದೆ ಎಂಬುದನ್ನು ಸಾಬೀತು ಪಡಿಸಬೇಕು. ಆಗ ಮೀಸಲಾತಿ ಹೆಚ್ಚಿಸಿದ ಕ್ರಮವು ಉಳಿದುಕೊಳ್ಳುತ್ತದೆ.
ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನವು ನ್ಯಾಯಾಲಯದಲ್ಲಿ ಪ್ರಶ್ನೆಗೆ ಒಳಗಾದರೆ, ಮೀಸಲಾತಿ ಪ್ರಮಾಣವನ್ನು ಎಸ್‌ಸಿ ಸಮುದಾಯಗಳಿಗೆ ಶೇ 2ರಷ್ಟು, ಎಸ್‌ಟಿ ಸಮುದಾಯಗಳಿಗೆ ಶೇ 4ರಷ್ಟು ಜಾಸ್ತಿ ಮಾಡಲು ಅಂಕಿ–ಅಂಶ ಏನಿದೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಸೂಕ್ತ ವಿವರಣೆ ನೀಡಿದಲ್ಲಿ ಕ್ರಮ ಸಿಂಧುವಾಗುವ ಸಾಧ್ಯತೆ ಇರುತ್ತದೆ. ಇಂದಿರಾ ಸಹಾನಿ ಪ್ರಕರಣದ ಮರು ಪರಿಶೀಲನೆಗೆ ಕೂಡ ಸರ್ಕಾರ ಮನವಿ ಮಾಡಬಹುದು. ಅಥವಾ ಮೀಸಲಾತಿ ಹೆಚ್ಚಿಸಲು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಬೇಕು.
ಮೀಸಲಾತಿ ಹೆಚ್ಚಿಸುವ ಕ್ರಮವನ್ನು ಸಂವಿಧಾನದ 9ನೆಯ ಪರಿಚ್ಛೇದಕ್ಕೆ ಸೇರಿಸಿದ ಮಾತ್ರಕ್ಕೆ ಅದು ಸಿಂಧುವಾಗುತ್ತದೆ ಎನ್ನಲಾಗದು. ಏಕೆಂದರೆ, ಹಾಗೆ 9ನೆಯ ಪರಿಚ್ಛೇದಕ್ಕೆ ಸೇರಿಸುವ ಕ್ರಮ ಕಾನೂನು ಪ್ರಕಾರ ಇತ್ತೇ, ಹಾಗೆ ಸೇರಿಸುವುದಕ್ಕೆ ಅಂಕಿ–ಅಂಶಗಳ ಆಧಾರ ಇದೆಯೇ, ಪರಿಚ್ಛೇದಕ್ಕೆ ಸೇರಿಸಿದ್ದರಿಂದ ಸಂವಿಧಾನದ ಮೂಲತತ್ವಗಳಿಗೆ ಧಕ್ಕೆ ಬಂದಿದೆಯೇ ಎಂಬ ನೆಲೆಯಲ್ಲಿ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಬಹುದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿರುವುದು ಗಮನಾರ್ಹ. ಮೀಸಲಾತಿ ಹೆಚ್ಚಳದ ತೀರ್ಮಾನವನ್ನು 9ನೇ ಪರಿಚ್ಛೇದಕ್ಕೆ ಸೇರಿಸಿದ ಮಾತ್ರಕ್ಕೆ ಅದು ಪ್ರಶ್ನಾತೀತ ಆಗುವುದಿಲ್ಲ. ಮೇಲೆ ವಿವರಿಸಿರುವ ನಿರ್ದಿಷ್ಟ ಕ್ರಮಗಳ ಮೂಲಕ, ಮೀಸಲಾತಿ ಹೆಚ್ಚಳವನ್ನು ಊರ್ಜಿತವಾಗಿಸಬಹುದು. ಹಾಗೆ ಮಾಡಿದಾಗ ಮಾತ್ರ ಸರ್ಕಾರ ಈಗ ಕೈಗೊಂಡಿರುವ ಕ್ರಮಕ್ಕೆ ಭವಿಷ್ಯ ಇರುತ್ತದೆ.
ಲೇಖಕ: ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ, ರಾಜ್ಯ ⇒ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ