Times Litfest-ಮಾಧ್ಯಮಗಳು ಸಮಾಜ ರಕ್ಷಕರಾಗಲಿ: ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ಸಮೀರ್‌ಜೈನ್ ಅಭಿಮತ
ಮಾಧ್ಯಮಗಳು ಕೇವಲ ಕಾವಲುನಾಯಿಗಳಾಗಿದ್ದರಷ್ಟೇ ಸಾಲದು, ಅವು ಸಮಾಜ ರಕ್ಷಕರಾಗಿಯೂ ಕಾರ್ಯ ನಿರ್ವಹಿಸಬೇಕಿದೆ ಎಂದು ಟೈಮ್ಸ್ ಗ್ರೂಪ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ. ದಿಲ್ಲಿಯಲ್ಲಿ ನಡೆಯುತ್ತಿರುವ 7ನೇ ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು‘‘ನಾಯಿಯನ್ನು ಮನುಷ್ಯನ ಆತ್ಮೀಯ ಸ್ನೇಹಿತ ಎಂದು ಜನ ನಂಬಿದ್ದಾರೆ. ಹಾಗಂದು ಮಾಧ್ಯಮಗಳು ಕೇವಲ ಬೊಗಳುವ ನಾಯಿ ಆಗಿರಬಾರದು. ರಚನಾತ್ಮಕ ಕೆಲಸ ಮಾಡುವ ಮೂಲಕ ಪತ್ರಿಕೆ ಓದುವ ಜನರಲ್ಲಿ ಹೊಸ ಚಿಂತನೆ ಮೂಡಿಸುವಂತಿರಬೇಕು, ಓದುಗರಲ್ಲಿ ಸಂತೋಷದ ಭಾವನೆ ಉಂಟು ಮಾಡುವಂತಿರಬೇಕು ಎಂದು ಸಲಹೆ ನೀಡಿದ್ದಾರೆ.
ಹೈಲೈಟ್ಸ್:
- ದಿಲ್ಲಿಯಲ್ಲಿ ನಡೆಯುತ್ತಿರುವ 7ನೇ ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಸಮೀರ್ ಜೈನ್
- ಮಾಧ್ಯಮಗಳೇ ಕಾವಲುನಾಯಿಗಳಾಗಿದ್ದರಷ್ಟೇ ಸಾಲುವುದಿಲ್ಲ, ಅವು ಸಮಾಜ ರಕ್ಷಕರಾಗಿಯೂ ಕಾರ್ಯ ನಿರ್ವಹಿಸಬೇಕಿದೆ ಎಂದು ಅಭಿಪ್ರಾಯ
- ಪತ್ರಿಕೆಗಳು ರಚನಾತ್ಮಕ ಕಾರ್ಯಗಳ ಮೂಲಕ ಓದುರಲ್ಲಿ ಹೊಸ ಚಿಂತನೆ ಮೂಡಿಸುವಂತಿರಬೇಕು, ಓದುಗರಲ್ಲಿ ಸಂತೋಷದ ಭಾವನೆ ಉಂಟು ಮಾಡುವಂತಿರಬೇಕು ಎಂದು ಸಲಹೆ
ದಿಲ್ಲಿಯಲ್ಲಿ ಶನಿವಾರ ಆರಂಭವಾದ 7ನೇ ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಸಮೀರ್ ಜೈನ್,‘‘ಶ್ವಾನವನ್ನು ಮಾನವನ ಆತ್ಮೀಯ ಸ್ನೇಹಿತ ಎಂದು ಜನ ನಂಬಿದ್ದಾರೆ. ಹಾಗಂತ ಮಾಧ್ಯಮಗಳು ಕೇವಲ ಬೊಗಳುವ ನಾಯಿಯಾಗಿರಬಾರದು. ಕೇವಲ ಟೀಕೆ ಟಿಪ್ಪಣಿ ಮಾಡದೇ ರಚನಾತ್ಮಕ ಕೆಲಸ ಮಾಡುವ ಮೂಲಕ ಪತ್ರಿಕೆ ಓದುವ ಜನರಲ್ಲಿ ಹೊಸ ಚಿಂತನೆ ಮೂಡಿಸುವಂತಿರಬೇಕು, ಆ ಮೂಲಕ ಓದುಗರಲ್ಲಿ ಸಂತೋಷದ ಭಾವನೆ ಉಂಟು ಮಾಡುವಂತಿರಬೇಕು,’’ ಎಂದು ಹೇಳಿದರು.
ವಿಶ್ವವಿದ್ಯಾಲಯಗಳ ಕುರಿತು ಪ್ರಸ್ತಾಪಿಸಿದ ಅವರು, ‘‘ವಿಶ್ವವಿದ್ಯಾಲಯಗಳು ಉದ್ಯೋಗ ಅರಸುವ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿವೆಯೇ ಹೊರತು ಅವರಲ್ಲಿ ತಾಂತ್ರಿಕ ಅಥವಾ ವೃತ್ತಿ ಕೌಶಲ್ಯ ತುಂಬುತ್ತಿಲ್ಲ. ವಿದ್ಯಾರ್ಥಿಗಳನ್ನು ಏಕ ಆಯಾಮದ ವ್ಯಕಿತ್ವ ಹೊಂದಿರುವ ವ್ಯಕ್ತಿಗಳಾಗಿ ಮಾತ್ರ ರೂಪಿಸುತ್ತಿವೆ,’’ ಎಂದು ವಿಷಾದಿಸಿದರು.
ಟೈಮ್ಸ್ ಸಾಹಿತ್ಯೋತ್ಸವದ ಮೂಲಕ ನಾವು ಸಾಹಿತ್ಯವನ್ನು ಕೋಟ್ಯಂತರ ಜನರ ಬಳಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ. ಕಾರಣ ಪುಸ್ತಕಗಳನ್ನು ಕೋಟಿಗಟ್ಟಲೆ ಜನ ಓದಲಾರರು. ಅವುಗಳಲ್ಲಿನ ಸಾರಾಂಶವನ್ನು ಪತ್ರಿಕಾ ಸಾಹಿತ್ಯದ ಮೂಲಕ ಎಲ್ಲರಿಗೂ ತಲುಪಿಸಲು ಸಾಧ್ಯ ಸಮೀರ್ ಜೈನ್ ತಿಳಿಸಿದರು.
ಟೈಮ್ಸ್ ಫೆಸ್ಟ್ ಗೆ ಚಾಲನೆ ನೀಡಿದ ಅಶ್ನಿನಿ ವೈಷ್ಣವ್
ಉತ್ತಮ ಸಾಹಿತ್ಯ ಹಾಗೂ ಸಾಹಿತ್ಯದೊಂದಿಗೆ ಗುರುತಿಸಿಕೊಂಡ ಮಹನೀಯರ ವಿಚಾರಧಾರೆಗಳೊಂದಿಗೆ ದಿಲ್ಲಿಯಲ್ಲಿ ಟೈಮ್ಸ್ ಸಾಹಿತ್ಯೋತ್ಸವ ಶನಿವಾರ ಚಾಲನೆ ಪಡೆಯಿತು.
ಕೇಂದ್ರ ಎಲೆಕ್ಟ್ರಾನಿಕ್ಸ್ , ತಂತ್ರಜ್ಞಾನ, ಸಂಚಾರ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ವಿದ್ಯಾರ್ಥಿಗಳು ವಿಜ್ಞಾನದೊಂದಿಗೆ ಸಾಹಿತ್ಯದ ಆಸಕ್ತಿಯನ್ನೂ ಬೆಳೆಸಿಕೊಳ್ಳಬೇಕು,’’ ಎಂದು ಕರೆ ನೀಡಿದರು.
ಟೈಮ್ಸ್ ಗ್ರುಪ್ ಬಿಸಿನೆಸ್ ವಿಭಾಗದ ಮುಖ್ಯಸ್ಥ ಸಿ.ಕೆ. ಶರ್ಮಾ ಮಾತನಾಡಿ, ‘‘ಟೈಮ್ಸ್ ಸಾಹಿತ್ಯೋತ್ಸವ ಒಂದು ಆರಂಭಿಕ ಹಂತವಾಗಿದೆ. ಸಾಹಿತ್ಯ ಎಂಬುದು ಮಾನವನ ರಚನಾತ್ಮಕತೆಯ ಭಾವ. ‘ಒಂದು ಜಗತ್ತು, ಹಲವು ಶಬ್ದಗಳು’ ಎಂಬುದು ಈ ಬಾರಿಯ ಸಾಹಿತ್ಯೋತ್ಸವದ ಘೋಷವಾಕ್ಯವಾಗಿದೆ. ಹಲವು ಯೋಚನೆಗಳು, ಆಸಕ್ತಿಗಳು, ವಿಚಾರಗಳು, ಸವಾಲುಗಳು ಸೇರಿ ಸಂವಾದವಾಗುತ್ತದೆ ಎಂದರಲ್ಲದೆ ಸಾಹಿತ್ಯ ವಾಸ್ತವಿಕತೆಯಲ್ಲಿ ಲೀನವಾಗುತ್ತದೆ’’, ಎಂದು ಹೇಳಿದರು.
ಉತ್ಸವದ ಮೊದಲ ದಿನದ ಮೊದಲ ಗೋಷ್ಠಿಯಲ್ಲಿ ‘ವೈ ಫಿಯರ್ ಎ ಧಾರ್ಮಿಕ್ ನೇಶನ್?’ ಕುರಿತು ಆರ್. ಜಗನ್ನಾಥ್, ಅಶ್ವಿನ್ ಸಾಂಘಿ, ಪವನ್ ವರ್ಮಾ, ಸುಧೀಂದ್ರ ಕುಲಕರ್ಣಿ ಮಾತನಾಡಿದರು. ‘ಈಸ್ ದಿಸ್ ಎ ಗುಡ್ ಟೈಮ್ ಬಿ ಕ್ಲೀಯರ್ ಇನ್ ಇಂಡಿಯಾ’, ‘ಹೌ ಮಚ್ ಮೈಥಾಲಜಿ ಈಸ್ ಪಾರ್ಟ್ ಆಫ್ ಹಿಸ್ಟರಿ’, ‘ಚೇಂಜಿಂಗ್ ಫೇಸ್ ಆಫ್ ಬುಕ್ಸ್’ ಇತ್ಯಾದಿ ವಿಷಯಗಳ ಕುರಿತು ಚರ್ಚೆಗಳು ನಡೆದವು. ಶಿವ ಖೋಡಾ ಅವರು ‘ಯೂ ಕ್ಯಾನ್ ಅಚೀವ್ ಮೋರ್’ ಕುರಿತು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ‘ವೈ ಕಾಶ್ಮೀರ್ ಫೈಲ್ ಮ್ಯಾಟರ್ಸ್’ ಕುರಿತು ಮಾತನಾಡಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ