ವಿದೇಶಿ ಬಂಡವಾಳ
ವಿದೇಶಿ ಬಂಡವಾಳವು ಇಂದು ವಿವಿಧ ದೇಶಗಳ ಆರ್ಥಿಕಾಭಿವೃದ್ಡಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಂಡವಾಳದ ಕೊರತೆಯನ್ನು ಅನುಭವಿಸುತ್ತಿರುವ ಹಿಂದುಳಿದ ದೇಶಗಳ ಆರ್ಥಿಕಾಭಿವೃದ್ಡಿಯಲ್ಲಿ ವಿದೇಶಿ ಬಂಡವಾಳದ ಪಾತ್ರ ಹಿರಿದಾದುದಾಗಿದೆ. ವಿದೇಶಿ ಬಂಡವಾಳ ಎ೦ದರೆ ಕೇವಲ ವಿದೇಶಿ ಹಣದ ನೆರವು ಎಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ ಇಂದು ವಿದೇಶಿ ಬಂಡವಾಳದ ಹೆಸರಿನಲ್ಲಿ ಯಂತ್ರಗಳು,ತಂತ್ರಜ್ಞಾನ, ತರಬೇತಿ, ಉತ್ಪಾದನಾ ನೈಪುಣ್ಯತೆ ಮುಂತಾದವುಗಳೂ ಕೂಡಾ ಲಭ್ಯವಾಗುತ್ತಿವೆ. ಆದ್ದರಿಂದ ವಿದೇಶಿ ಬಂಡವಾಳವನ್ನು ಸೌಮ್ಯ ಭಾಷೆಯಲ್ಲಿ "ವಿದೇಶಿ ನೆರವು" ಎಂದು ಕರೆಯಲಾಗಿದೆ.ವಿದೇಶಿ ಬಂಡವಾಳವು ಇಂದು ಎಲ್ಲಿಲ್ಲದ ಪ್ರಾಮುಖ್ಯತೆ ಪಡೆದಿರುವುದು ನಮ್ಮ ಮುಂಬರುವ ಚರ್ಚೆಯಲ್ಲಿ ವೇದ್ಯವಾಗುತ್ತದೆ. ಆರ್ಥಿಕಾಭಿವೃದ್ಡಿಗಾಗಿ ವಿದೇಶಿ ಬಂಡವಾಳವನ್ನು ಆಮದು ಮಾಡಿಕೊಳ್ಳುವ ಪರಿಪಾಠ ಹೊಸದೇನಲ್ಲ. ಇಂದು ಮುಂದುವರಿದ ಶ್ರೀಮಂತ ದೇಶಗಳೆಂದು ಕರೆಸಿಕೊಳ್ಳುತ್ತಿರುವ ದೇಶಗಳೂ ಕೂಡ ಅಭಿವೃದ್ದಿಯ ಆರಂಭಿಕ ಹಂತದಲ್ಲಿ ವಿದೇಶಿ ಬಂಡವಾಳವನ್ನು ಬಳಸಿಕೊಂಡಿವೆ. ೧೭ ಮತ್ತು ೧೮ನೇ ಶತಮಾನದಲ್ಲಿ ಇಂಗ್ಲೆಂಡ್ ಹಾಲೆಂಡ್ ದೇಶದಿಂದ ಬಂಡವಾಳದ ನೆರವು ಪಡೆದಿದ್ದರೆ, ೧೯ನೇ ಶತಮಾನದಲ್ಲಿ ಯೂರೋಪಿನಿಂದ ಬೃಹತ್ ಪ್ರಮಾಣದಲ್ಲಿ ಹಣ ಹರಿದು ಬಂದುದರಿಂದ ಅಮೇರಿಕಾ ತೀವ್ರ ಪ್ರಗತಿ ಸಾಧಿಸುವುದು ಸಾಧ್ಯವಾಯಿತು. ರಷ್ಯಾ ಕೂಡಾ ಪ್ರಾರಂಭದಲ್ಲಿ ವಿದೇಶಿ ಹಣದ ನೆರವಿನಿಂದಲೇ ಪ್ರಗತಿ ಸಾಧಿಸಿತು. ವಿದೇಶಿ ಬಂಡವಾಳದ ನೆರವಿನಿಂದ ಅನೇಕ ದೇಶಗಳು ತ್ವರಿತ ಆರ್ಥಿಕಾಭಿವೃದ್ದಿಯನ್ನು ಸಾಧಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ.೧೮ ಮತ್ತು೧೯ನೇ ಶತಮಾನಗಳಲ್ಲಿ ಸಾಲಗಾರರಾಗಿದ್ದ ದೇಶಗಳು ಇಂದು ಬೇರೆ ದೇಶಗಳಿಗೆ ಸಾಲ ನೀಡುವ ಶಕ್ತಿ ಪಡೆದಿವೆ.[೧]
ವಿದೇಶಿ ನೆರವಿನ ಜೊತೆಗೆ ತಂತ್ರಜ್ಞಾನ, ಉತ್ಪಾದನಾ ನೈಪುಣ್ಯತೆ,ಯಂತ್ರೋಪಕರಣಗಳು ಹಾಗೂ ಮತ್ತಿತರ ನೆರವುಗಳೂ ಕೂಡಾ ಹರಿದು ಬರುವುದರಿಂದ ತ್ವರಿತ ಪ್ರಗತಿ ಸಾಧ್ಯವಾಗುತ್ತದೆ. ವಿದೇಶಿ ಬಂಡವಾಳವು ಹಿಂದುಳಿದ ಬಡರಾಷ್ಟ್ರಗಳಲ್ಲಂತೂ ತುಂಬಾ ಮಹತ್ತರ ಪಾತ್ರವನ್ನು ವಹಿಸುತ್ತಿದೆ.[೨]
ವಿದೇಶಿ ಸಂಬಂಧದ ಸಚಿವಾಲಯ
ವಿದೇಶಿ ಬಂಡವಾಳದ ಪಾತ್ರಸಂಪಾದಿಸಿ
ವಿದೇಶಿ ಬಂಡವಾಳ ಅಥವಾ ನೆರವು ಹಿಂದುಳಿದ ದೇಶಗಳ ಆರ್ಥಿಕಾಭಿವೃದ್ಡಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಬಡತನ,ನಿರುದ್ಯೋಗ, ಮುಂತಾದ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ದೇಶಗಳಲ್ಲಿ ವಿದೇಶಿ ಬಂಡವಾಳ ಆರ್ಥಿಕಾಭಿವೃದ್ಡಿಯ ಜೀವಾಳವಾಗಬಲ್ಲದು.ಬಂಡವಾಳ ಕೊರತೆಯನ್ನು ಅನುಭವಿಸುತ್ತಿರುವ ಈ ದೇಶಗಳಲ್ಲಿ ವಿದೇಶಿ ಬಂಡವಾಳ ಪ್ರಗತಿಯ ಯಂತ್ರವಾಗಬಲ್ಲದು.ವಿವಿಧ ಕ್ಷೇತ್ರಗಳಲ್ಲಿ ಈ ಬಂಡವಾಳ ವಹಿಸುವ ಪಾತ್ರವನ್ನು ಈ ಕೆಳಗಿನಂತೆ ಚರ್ಚಿಸಬಹುದು.
◾ಬಂಡವಾಳ ಕೊರತೆ ನಿವಾರಣೆ
ಹಿಂದುಳಿದ ದೇಶಗಳು ಕಡಿಮೆ ಉಳಿತಾಯ ಮತ್ತು ಕಡಿಮೆ ಹೂಟೆಯ ದೇಶಗಳು. ಈ ದೇಶಗಳಲ್ಲಿ ವ್ಯಾಪಕ ಬಡತನವಿರುವುದರಿಂದ ಮತ್ತು ಕಡಿಮೆ ತಲಾ ಆದಾಯ ಮತ್ತು ರಾಷ್ಟ್ರೀಯವರಮಾನಗಳಿಂದ ಉಳಿತಾಯದ ಪ್ರಮಾಣ ತುಂಬಾ ಕಡಿಮೆಯಿದೆ. ಕಡಿಮೆ ಉಳಿತಾಯದಿಂದ ಕಡಿಮೆ ಹೂಟೆಯಾಗುತ್ತಿದೆ.ಈ ದೇಶಗಳಲ್ಲಿ ಬಂಡವಾಳ ಹೂಡಿಕೆಯ[೧] ರಾಷ್ಟ್ರೀಯ ಆದಾಯದ ಕೇವಲ ಶೇಕಡ ೫ ರಿಂದ ೬ ರಷ್ಟಿದೆ. ಪ್ರತಿವರ್ಷ ಶೇಕಡ ೨ ರಿಂದ ೨.೫ ರಷ್ಟು ಜನಸಂಖ್ಯೆ ಬೆಳೆಯುತ್ತಿರುವ ಈ ದೇಶಗಳಲ್ಲಿ ಈಗಿರುವ ಬಂಡವಾಳ ಹೂಡಿಕೆ ಏನೇನೂ ಸಾಲದು. ಹಿಂದುಳಿದ ದೇಶಗಳ ಬಡತನದ ವಿಷವೃತ್ತವನ್ನು ತಡೆಯಲು ಕನಿಷ್ಟಪಕ್ಷ ರಾಷ್ಟೀಯ ಆದಯದ ಶೇಕಡ ೨೦ ರಷ್ಟು ಹೂಟೆಯಾಗ ಬೇಕಾಗುತ್ತದೆ. ಇಲ್ಲಿನ ಸರ್ಕಾರಗಳು ತೆರಿಗೆ ಮತ್ತು ಸಾರ್ವಜನಿಕ ಸಾಲದ ಮುಖೇನ ಬಂಡವಾಳ ಸಂಗ್ರಹಣೆ ಮಾಡುತ್ತಿವೆಯಾದರೂ ಇದು ಸಾಲದಾಗುತ್ತಿಲ್ಲ.ಏಕೆಂದರೆ ಈ ರೀತಿಯ ಕ್ರಮಗಳಿಂದ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು. ಹಿಂದುಳಿದ ದೇಶಗಳ ಉಳಿತಾಯ ಮತ್ತು ಹೂಟೆಗಳ ನಡುವೆ ಆಗಾಧ ಅಂತರವಿದೆ.ವಿದೇಶಿ ನೆರವಿನ ಸಹಾಯದಿಂದ ಈ ದೇಶಗಳು ಬಂಡವಾಳ ಸಂಗ್ರಹಣೆಯನ್ನು ಉತ್ತಮಗೊಳಿಸಿಕೊಂಡು ಹೆಚ್ಚಿನ ಹೂಟೆಯನ್ನು ಮಾಡಲು ಸಾಧ್ಯವಾಗುತ್ತದೆ.ಆದ್ದರಿಂದ ವಿದೇಶಿ ಬಂಡವಾಳವು ಹಿಂದುಳಿದ ದೇಶಗಳ ಬಂಡವಾಳದ ಕೊರತೆ ಸಮಸ್ಯೆಯನ್ನು ನೀಗಿಸುತ್ತದೆ.
◾ತೀವ್ರ ಆರ್ಥಿಕಾಭಿವೃದ್ಧಿ
ಅಲ್ಪ ಉಳಿತಾಯ ಮತ್ತು ಅಲ್ಪ ಹೂಟೆಯ ಜೊತೆಗೆ ಹಿಂದುಳಿದ ದೇಶಗಳಲ್ಲಿ ತಂತ್ರಜ್ಞಾನ ಹಿಂದುಳಿದಿದೆ.ಈ ಹಿಂದುಳಿದ ತಂತ್ರಜ್ಞಾನದಿಂದಾಗಿ ಉತ್ಪಾದನಾ ವೆಚ್ಚ ಅಧಿಕವಾಗುತ್ತಿದೆಯಲ್ಲದೆ ಉತ್ಪಾದನಾ ಸಾಮರ್ಥ್ಯ ಕೂಡ ಕಡಿಮೆಯಾಗುತ್ತಿದೆ.ಈ ದೇಶಗಳಲ್ಲಿ ಬಂಡವಾಳ ಹಾಗೂ ಉತ್ಪಾದನೆಯ ಅನುಪಾತ ಕೂಡ ಹೆಚ್ಚಿದೆ.ವಿದೇಶಿ ಬಂಡವಾಳವನ್ನು ಉಪಯೋಗಿಸುವುದರಿಂದ ಬಂಡವಾಳ ಕೊರತೆಯನ್ನು ನೀಗಿಸುವುದರ ಜೊತೆಗೆ ತಾಂತ್ರಿಕ ಹಿಂದುಳಿದಿರುವಿಕೆಯ ಸಮಸ್ಯೆಯನ್ನು ಬಗೆಹರಿಸ ಬಹುದಾಗಿದೆ.ಏಕೆಂದರೆ ವಿದೇಶಿ ಬಂಡವಾಳವು ಹಣಕಾಸಿನ ಜೊತೆಗೆ ತಾಂತ್ರಿಕಜ್ಞಾನ, ಕುಶಲಶ್ರಮ, ಸಂಘಟನಾ ಚತುರತೆ, ಮಾರುಕಟ್ಟೆ ಮಾಹಿತಿ, ಆಧುನಿಕ ಉತ್ಪಾದನಾ ತಂತ್ರ, ಸರಕುಗಳಲ್ಲಿನ ಅವಿಷ್ಕಾರಗಳನ್ನು ತರುವುದರಿಂದ ಆರ್ಥಿಕಾಭಿವೃದ್ದಿ[೨] ತೀವ್ರಗೊಳ್ಳುತ್ತದೆ.ವಿದೇಶಿ ಬಂಡವಾಳವು ಸ್ಥಳೀಯ ಶ್ರಮವನ್ನು ಹೊಸ ಕೌಶಲ್ಯಗಳಲ್ಲಿ ತರಬೇತಿ ನೀಡುವುದರಿಂದ ಹೆಚ್ಚಿದ ಉತ್ಪಾದನಾ ಸಾಮರ್ಥ್ಯದಿಂದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ.
◾ಮೂಲ ಸೌಕರ್ಯಗಳ ನಿರ್ಮಾಣ
ಉತ್ತಮ ರಸ್ತೆಗಳು,ಕಾಲುವೆಗಳು, ವಿದ್ಯುತ್ ಸ್ಥಾವರಗಳು, ಶಿಕ್ಷಣ, ತರಬೇತಿ ಮುಂತಾದವುಗಳು ಆರ್ಥಿಕಾಭಿವೃದ್ಡಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈ ಎಲ್ಲಾ ಮೂಲಭೂತ ಸೌಲಭ್ಯಗಳು ಬಂಡವಾಳ ಹೂಡಿಕೆಗೆ ಬೇಕಿರುವ ಸೂಕ್ತ ವಾತಾವರಣವನ್ನು ನಿರ್ಮಿಸುತ್ತವೆಯಲ್ಲದೆ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುತ್ತವೆ. ಆದರೆ ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದರೆ ಬೃಹತ್ ಪ್ರಮಾಣದ ಬಂಡವಾಳವನ್ನು ಹೂಡ ಬೇಕಾಗುತ್ತದೆ. ಅಷ್ಟಲ್ಲದೆ ಇವುಗಳು ಫಲನೀಡಲು ಬಹಳ ದೀರ್ಘ ಕಾಲಾವಧಿಯನ್ನು ತೆಗೆದುಕೊಳ್ಳುತ್ತವೆ .ಈಗಗಾಲೇ ಬಂಡವಾಳದ ಕೊರತೆಯನ್ನು ಅನುಭವಿಸುತ್ತಿರುವ ಹಿಂದುಳಿದ ದೇಶಗಳು ಈ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಬೃಹತ್ ಬಂಡವಾಳವನ್ನು ಹೂಡಲು ಸ್ಥಿತಿಯಲ್ಲಿಲ್ಲ. ಆದ್ದರಿಂದ ವಿದೇಶಿ ನೆರವಿನ ಸಹಾಯದಿಂದ ಈ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಹಿಂದುಳಿದ ದೇಶಗಳು ಪ್ರಯತ್ನಿಸಬಹುದು.
◾ಕೈಗಾರಿಕೀಕರಣ
ಹಿಂದುಳಿದ ದೇಶಗಳು ಸ್ವಶಕ್ತಿಯಿಂದ ಮೂಲಭೂತ ಮತ್ತು ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ್.ಏಕೆಂದರೆ ಈ ದೇಶಗಳಲ್ಲಿ ಬಂಡವಾಳ ಮತ್ತು ತಂತ್ರಜ್ಞಾನದ ಕೊರತೆ ಇದೆ.ಈ ದೇಶಗಳು ವಿದೇಶಿ ನೆರವನ್ನು ಪಡೆದು ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು, ಯಂತ್ರೋಪಕರಣಗಳು,ರಾಸಾಯನಿಕ ವಸ್ತುಗಳು,ಸಿಮೆಂಟು ಮತ್ತು ವಿದ್ಯುತ್ ಉಪಕರಣಗಳ ಕೈಗಾರಿಕೆಗಳನ್ನು ಸ್ಥಾಪಿಸಬಹುದು.ವಿದೇಶಿ ಬಂಡವಾಳದ ನೆರವಿನಿಂದ ಈ ಮೂಲಭೂತ ಕೈಗಾರಿಕೆಗಳನ್ನು ಸ್ಥಾಪಿಸಿದಾದಲ್ಲಿ ಬೇರೆ ಕೈಗಾರಿಕೆಗಳ ಸ್ಥಾಪನೆ ಸುಲಭ ಸಾಧ್ಯವಾಗುತ್ತದೆ.ದೇಶದ ಸರ್ವತೋಮುಖ ಪ್ರಗತಿಯ ದೃಷ್ಟಿಯಿಂದ ಈ ಎಲ್ಲಾ ಕೈಗಾರಿಕೆಗಳನ್ನು ಸ್ಥಾಪಿನೆ ಅತೀ ಮುಖ್ಯ್.ಆದ್ದರಿಂದ ವಿದೇಶಿ ಬಂಡವಾಳ ಹಿಂದುಳಿದ ದೇಶಗಳ ಕೈಗಾರಿಕೀಕರಣಕ್ಕೆ[೩] ತುಂಬಾ ಸಹಾಯಕಾರಿ.
◾ಪ್ರಾದೇಶಿಕ ಅಸಮತೋಲನ ನಿವಾಹರಣೆ
ಹಿಂದುಳಿದ ದೇಶಗಳಲ್ಲಿ ಪ್ರಾದೇಶಿಕ ಅಸಮತೋಲನ ಬಹುದೊಡ್ಡ್ ಸಮಸ್ಯೆಯಾಗಿದೆ.ವಿವಿಧ ಪ್ರದೇಶಗಳಲ್ಲಿ ಸಮತೋಲನ ಅಭಿವೃದ್ಧಿ ಸಾಧಿಸ ಬೇಕಾಗಿರುವುದು ಅನಿವಾರ್ಯ.ಆದರೆ ಈ ದೇಶಗಳಲ್ಲಿ ಖಾಸಗೀ ವಲಯ ಗಂಡಾಂತರಗಳನ್ನು ಎದುರಿಸಿ ಎಲ್ಲಾ ಪ್ರದೇಶಗಳಲ್ಲಿ ಬಂಡವಾಳ ಹೂಡಲು ಮುಂದೆ ಬರುವುದಿಲ್ಲ.ವಿದೇಶಿ ಬಂಡವಾಳ ಸಹಾಯದಿಂದ ಎಲ್ಲಾ ಪ್ರದೇಶಗಳಲ್ಲಿ ಬಂಡವಾಳ ಹೂಡಿ ಅಭಿವೃದ್ಧಿ ಸಾಧಿಸುವ ಮೂಲಕ ಈ ದೇಶಗಳಲ್ಲಿರುವ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸ ಬಹುದಾಗಿದೆ.
◾ಉದ್ಯೋಗಾವಕಾಶಗಳ ವಿಸ್ತರಣೆ
ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆ,ಮೂಲ ಸೌಲಭ್ಯ್ಗಳ ವಿಸ್ತರಣೆ,ಹೊಸ ಸಂಪನ್ಮೂಲಗಳ ಸಂಶೋಧನೆ, ಹೊಸ ಪ್ರದೇಶಗಳ ಶೋಧನೆ ಮುಂತಾದವುಗಳೆಲ್ಲವೂ ಒಂದು ದೇಶದಲ್ಲಿನ ಉದ್ಯೋಗಾವಕಾಶಗಳ[೪] ವಿಸ್ತರಣೆಗೆ ಅವಕಾಶಗಳಾಗುತ್ತವೆ. ವಿದೇಶಿ ಬಂಡವಾಳದ ಉಪಯೋಗವು ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುವುದಲ್ಲದೆ,ಗ್ರಾಮೀಣ ಕ್ಷೇತ್ರದಲ್ಲಿರುವ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗಲು ಅವಕಾಶ ದೊರೆತಂತಾಗುತ್ತದೆ. ಇದರಿಂದಾಗಿ ಕೃಷಿ ಮೇಲಿನ ಮಿತಿಮೀರಿದ ಅವಲಂಬನೆ ಕಡಿಮೆಯಾಗುವುದಲ್ಲದೆ,ಮರೆಮಾಚಿದ ನಿರುದ್ಯೋಗ ಕಣ್ಮರೆಯಾಗುತ್ತದೆ.ಇದು ವಿದೇಶಿ ಬಂಡವಾಳದಿಂದ ಲಭ್ಯವಾಗುವ ಅತ್ಯಂತ ಪ್ರಮುಖವಾದ ಸಾಮಾಜಿಕ ಲಾಭವಾಗಿದೆ.
◾ಸಂಪನ್ಮೂಲಗಳ ವರ್ಧನೆ
ಹಿಂದುಳಿದ ದೇಶಗಳಲ್ಲಿ ಹೊಸ ಹೊಸ ಸಂಪನ್ಮೂಲಗಳನ್ನು ಕಂಡುಹಿಡಿಯುವ ಮತ್ತು ಹೊಸ ಪ್ರದೇಶಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಹುಡುಕುವಂತಹ ತೊಂದರೆಯ ಕೆಲಸಗಳನ್ನು ಮಾಡಲು ಖಾಸಗೀ ವಲಯ ಮುಂದಾಗುವುದಿಲ್ಲ. ವಿದೇಶಿ ಬಂಡವಾಳವು ಈ ಎಲ್ಲಾ ತೊಂದರಗಳನ್ನು ಎದುರಿಸಿ,ಕಷ್ಟನಷ್ಟಗಳನ್ನು ಅನುಭವಿಸಿ ಹೊಸ ಹೊಸ ಸಂಪನ್ಮೂಲಗಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ.ಇದರಿಂದಾಗಿ ದೇಶದ ನೈಸರ್ಗಿಕ ಸಂಪನ್ಮೂಲಗಳ ವರ್ಧನೆಯಾಗುತ್ತದೆ.ಭೌಗೋಳಿಕ ಸಂಶೋಧನೆಗೆ ಪ್ರೋತ್ಸಾಹ ದೊರೆಯುತ್ತದೆ.
◾ಜೀವನ ಮಟ್ಟದಲ್ಲಿ ಸುಧಾರಣೆ
ವಿದೇಶಿ ಬಂಡವಾಳವು ರಾಷ್ಟ್ರೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚುವಂತೆ ಮಾಡುವುದಲ್ಲದೆ ರಾಷ್ಟ್ರಾದಾಯ ಮತ್ತು ಉದ್ಯೋಗಾವಕಾಶಗಳು ಹೆಚ್ಚುವಂತೆ ಮಾಡುತ್ತದೆ.ಇದರಿಂದಗಿ ಕಾರ್ಮಿಕರಿಗೆ ಹೆಚ್ಚಿನ ಕೂಲಿ ದೊರೆಯುವುದು. ವಿದೇಶಿ ತಂತ್ರಜ್ಞಾನದ ಸಹಾಯದಿಂದ ಉತ್ಪಾದಿಸಿದ ಉತ್ತಮ ಗುಣಮಟ್ಟದ ಸರಕುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತಾಗುತ್ತವೆ.ಇದರಿಂದಾಗಿ ಜನರ ಜೀವನ ಮಟ್ಟದಲ್ಲಿ ಸುಧಾರಣೆಯಾಗುತ್ತದೆ.
◾ಸರ್ಕಾರಕ್ಕೆ ಹೆಚ್ಚಿನ ಅದಾಯ
ವಿದೇಶಿ ಬಂಡವಾಳದಾರರು ತಮ್ಮ ಬಂಡವಾಳವನ್ನು ಹಿಂದುಳಿದ ದೇಶಗಳಲ್ಲಿ ಹೂಡಿ ಹೆಚ್ಚಿನ ಲಾಭಗಳಿಸುತ್ತಾರೆ.ಸರ್ಕಾರ ಇವರುಗಳ ಲಾಭದಮೇಲೆ ತೆರಿಗೆಯನ್ನು ಹಾಕುವುದರ ಮೂಲಕ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ವಿದೇಶಿ ಬಂಡವಾಳದ ನೆರವಿನಿಂದ ತಲಾದಾಯ ಮತ್ತು ರಾಷ್ಟ್ರೀಯ ಆದಾಯಗಳು ಹೆಚ್ಚುವುದರಿಂದ ಜನರ ತೆರಿಗೆ ಕಟ್ಟುವ ಸಾಮರ್ಥ್ಯ ಹೆಚ್ಚುತ್ತದೆ. ಆಗ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸಿ ಆದಾಯ ಪಡೆಯಲು ಪ್ರಯತ್ನಿಸಬಹುದು.
◾ಹಣದುಬ್ಬರ ಒತ್ತಡಗಳ ನಿರ್ಮೂಲನೆ
ವಿದೇಶಿ ಬಂಡವಾಳ ನೆರವಿನಿಂದ ಹಿಂದುಳಿದ ದೇಶಗಳಲ್ಲಿ ಕಂಡುಬರುವ ಹಣದುಬ್ಬರ ಒತ್ತಡಗಳ ನಿರ್ಮೂಲನೆ ಮಾಡಬಹುದು.ಈ ದೇಶಗಳಲ್ಲಿ ಸರಕುಗಳ ಕೊರತೆಯಿಂದಾಗಿ ಹಣದುಬ್ಬರದ ಸನ್ನಿವೇಶಗಳು ಹುಟ್ಟಿಕೊಳ್ಳುತ್ತವೆ. ವಿದೇಶಿ ಬಂಡವಾಳ ಹರಿದು ಬಂದಾಗ ಅಗತ್ಯ ಸರಕುಗಳನ್ನು ಆಮದು ಮಾಡಿಕೊಳ್ಳ್ಬಹುದು.ಹಾಗೂ ದೇಶೀಯವಾಗಿಯೂ ಸರಕುಗಳ ಉತ್ಪಾದನೆ ಹೆಚ್ಚುತ್ತದೆ.ಇದರಿಂದಾಗಿ ಸರಕುಗಳ ನೀಡಿಕೆ ಮತ್ತು ಬೇಡಿಕೆಗಳ ನಡುವಿನ ಅಂತರ ಮಾಯವಾಗಿ ಬೆಲೆ ಏರಿಕೆಯ ಸನ್ನಿವೇಶಗಳು ಇಲ್ಲದಂತಾಗುತ್ತದೆ.
◾ಪಾವತಿ ಶಿಲ್ಕಿನ ಪರಿಸ್ಥಿತಿಯಲ್ಲಿ ಸುಧಾರಣೆ
ಹಿಂದುಳಿದ ದೇಶಗಳು ಇನ್ನೂ ಅಭಿವೃದ್ದಿಯ ಆರಂಭಿಕ ಹಂತದಲ್ಲಿರುವುದರಿಂದ ಈ ದೇಶಗಳು ಬೃಹತ್ ಪ್ರಮಾಣದಲ್ಲಿ ವಿದೇಶಿ ತಂತ್ರಜ್ಞಾನ,ಯಂತ್ರೋಪಕರಣಗಳು,ಕೆಲ ಕಚ್ಚಸಾಮಾಗ್ರಿಗಳು,ಸಲಕರಣೆಗಳು ಮುಂತಾದವುಗಳನ್ನು ಆನದು ಮಾಡಿಕೊಳ್ಳಬೇಕಾಗುತ್ತದೆ.ಜೊತೆಗೆ ಆಹಾರ ಸಮಸ್ಯೆಯನ್ನು ನೀಗಲು ಆಹಾರ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಈ ಕಾರಣದಿಂದಾಗಿ ಹಿಂದುಳಿದ ದೇಶಗಳಲ್ಲಿ ಪಾವತಿ ಶಿಲ್ಕಿನ ಸಮಸ್ಯೆ ಉದ್ಬವಿಸಿದೆ. ಈ ದೇಶಗಳು ಕೇವಲ ಪ್ರಾಥಮಿಕ ಸರಕುಗಳನ್ನು ಮಾತ್ರ ರಪ್ತು ಮಾಡುತ್ತಿವೆ.ವಿದೇಶಿ ಬಂಡವಾಳ ನೆರವಿನಿಂದ ಹಿಂದುಳಿದ ದೇಶಗಳು ಪಾವತಿ ಶಿಲ್ಕಿನ ಸಮಸ್ಯೆಯನ್ನು ಎದುರಿಸಲು ಸಾಧ್ಯವಾಗುತ್ತದೆ.ಕಾಲಾನಂತರ ಈ ದೇಶಗಳು ಕೈಗಾರಿಕೆ ಅಭಿವೃದ್ದಿಯನ್ನು ಸಾಧಿಸುವುದರಿಂದ ಹೆಚ್ಚು ತಯಾರಿಕಾ ಸರಕುಗಳನ್ನು ರಪ್ತು ಮಾಡಿ ಸಾಕಷ್ಟು ವಿದೇಶಿ ವಿನಿಮಯವನ್ನು ಗಳಿಸಬಹುದು.
◾ಯೋಜನೆಗಳ ಅನುಷ್ಠಾನ
ಇಂದು ಜಗತ್ತಿನ ಅನೇಕ ದೇಶಗಳು ತಮ್ಮ ತ್ವರಿತ ಆರ್ಥಿಕಾಭಿವೃದ್ಧಿಗಾಗಿ ಆರ್ಥಿಕ ಯೋಜನೆಗಳನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತಂದಿವೆ.ಯೋಜನೆಗಳ ಮೂಲಕ ತ್ವರಿತ ಆರ್ಥಿಕಾಭಿವೃದ್ಧಿಯನ್ನು ಸಾಧಿಸಬೇಕೆಂದರೆ ಬೃಹತ್ ಪ್ರಮಾಣದಲ್ಲಿ ಯಂತ್ರೋಪಕರಣಗಳು, ವಿವಿಧ ಸಲಕರಣೆಗಳು ಮುಂತಾದವುಗಳು ಬೇಕಾಗುತ್ತವೆ.ಇವುಗಳನ್ನೆಲ್ಲಾ ವಿದೇಶಿ ಬಂಡವಾಳದ ಮುಖೇನ ಈ ದೇಶಗಳು ಪಡೆಯಲು ಪ್ರಯತ್ನಿಸಬಹುದು.ಆರ್ಥಿಕ ಯೋಜನೆಗಳ ಅನುಷ್ಠಾನವೆಂದರೆ ಬೃಹತ್ ಪ್ರಮಾಣದಲ್ಲಿ ಬಂಡವಾಳವನ್ನು ತೊಡಗಿಸುವುದಾಗಿರುತ್ತದೆ. ಹೀಗೆ ವಿದೇಶಿ ಬಂಡವಾಳವು ತ್ವರಿತ ಆರ್ಥಿಕಾಭಿವೃದ್ಧಿ ಸಾಧಿಸಲು ಅತ್ಯಂತ ಅವಶ್ಯಕ.ವಿದೇಶಿ ಬಂಡವಾಳವು ಹಿಂದುಳಿದ ದೇಶಗಳಲ್ಲಿನ ಸಮಾಜವನ್ನು ಆಧುನೀಕರಿಸಲು ಸಹಾಯ ಮಾಡುತ್ತದೆಯಲ್ಲದೇ ಈ ದೇಶಗಳಲ್ಲಿನ ಸಾರ್ವಜನಿಕ ಮತ್ತು ಖಾಸಗಿ ರಂಗಗಳೆರಡನ್ನೂ ಬಲಪಡಿಸುತ್ತದೆ.
ವಿದೇಶಿ ಬಂಡವಾಳಾದ ಪ್ರಕಾರಗಳುಸಂಪಾದಿಸಿ
ವಿದೇಶಿ ಬಂಡವಾಳವು ಮುಖ್ಯವಾಗಿ ಎರಡು ರೂಪ ಅಥವಾ ಪ್ರಕಾರಗಳಲ್ಲಿ ಹರಿದುಬರುತ್ತದೆ.ಅವುಗಳೆಂದರೆ ವಿದೇಶಿ ಖಾಸಗಿ ಬಂಡವಾಳ ಮತ್ತು ವಿದೇಶಿ ಸಾರ್ವಜನಿಕ ಬಂಡವಾಳ.[೩]
ವಿದೇಶಿ ಖಾಸಗಿ ಬಂಡವಾಳಸಂಪಾದಿಸಿ
ವಿದೇಶಗಳ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಬೇರೆ ಬೇರೆ ದೇಶಗಳಲ್ಲಿ ಬಂಡವಾಳವನ್ನು ತೊಡಗಿಸಿದರೆ ಅದನ್ನು ವಿದೇಶಿ ಖಾಸಗಿ ಬಂಡವಾಳ ಎಂದು ಕರೆಯುವರು.ಅಂದರೆ ವಿದೇಶಿ ಖಾಸಗಿ ಬಂಡವಾಳವು ಮುಖ್ಯವಾಗಿ ವಿದೇಶಿ ಜನಗಳು ವಿಶ್ವದ ಇತರೆ ದೇಶಗಳಲ್ಲಿ ಮಾಡುವ ಬಂಡವಾಳ ಹೂಡಿಕೆಯಾಗಿದೆ.ಬಹುರಾಷ್ಟ್ರೀಯ ನಿಗಮಗಳು ಹೂಡುವ ಬಂಡವಾಳ ಇದರ ಒಂದು ಉತ್ತಮ ಉದಾಹರಣೆಯಾಗಿದೆ.ವಿದೇಶಿ ಖಾಸಗಿ ಬಂಡವಾಳವು ಮುಖ್ಯವಾಗಿ ನೇರಹೂಟೆ ಮತ್ತು ಪರೋಕ್ಷ ಹೂಟೆಯನ್ನು ಒಳಗೊಂಡಿರುತ್ತದೆ.
ವಿದೇಶಿ ಸಾರ್ವಜನಿಕ ಬಂಡವಾಳಸಂಪಾದಿಸಿ
ವಿದೇಶಿ ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಹಣಕಾಸಿನ ಸಂಸ್ಥೆಗಳು ನೀಡುವ ನೆರವು ವಿದೇಶಿ ಸಾರ್ವಜನಿಕ ಬಂಡವಾಳವಾಗುತ್ತದೆ. ವಿದೇಶಿ ಸಾರ್ವಜನಿಕ ಬಂಡವಾಳದಲ್ಲಿ ಪ್ರಮುಖವಾಗಿ ದ್ವಿಪಕ್ಷೀಯ ನೆರವು,ಬಹುಪಕ್ಷೀಯ ನೆರವು,ದಾನಹಣ,ರಫ್ತುಸಾಲ ಮುಂತಾದವುಗಳು ಸೇರಿಕೊಂಡಿರುತ್ತದೆ. ವಿದೇಶಿಯ ನೆರವು ಖಾಸಗಿಯಾದರೂ ಆಗಬಹುದು ಅಥವಾ ಸಾರ್ವಜನಿಕವಾದರೂ ಆಗಬಹುದು .ಒಟ್ಟಿನಲ್ಲಿ ವಿದೇಶಿಗಳಿಂದ ಹರಿದು ಬರುವ
ಅಥವಾ ಚಲನೆಯಾಗುವ ನೆರವು ಅಥವಾ ಬಂಡವಾಳವನ್ನು ಸಾಮಾನ್ಯವಾಗಿ ಈ ಕೆಳಗಿನಂತೆ ವರ್ಗೀಕರಿಸಬಹುದು.
Foreign Currency uses and pegs, Ruble included.png
◾ನೇರಹೂಟೆ
ನೇರ ಹೂಟೆಯೆಂದರೆ ವಿದೇಶಿದಲ್ಲಿ ಹೂಡಿ ಅದರ ಮೇಲೆ ಪೂರ್ಣ ಹತೋಟಿಯಿಟ್ಟುಕೊಳ್ಳುವುದು. ನೇರಹೂಟೆಯು ವಿದೇಶಿ ಖಾಸಗಿ ಬಂಡವಾಳದ ರೂಪದಲ್ಲಿರುತ್ತದೆ.ನೇರಹೂಟೆಯಲ್ಲಿ ವಿದೇಶಿ ಕಂಪನಿಯೊಂದು ಹೊಸದಾಗಿ ಒಂದು ಉದ್ಯಮವನ್ನು ಪ್ರಾರಂಭಿಸಬಹುದು ಅಥವಾ ಈಗಿರುವ ಒಂದು ಉದ್ಯಮವನ್ನೇ ತಾನು ತೆಗೆದುಕೊಳ್ಳಬಹುದು.ನೇರಹೂಟೆ[೫] ಉದ್ಯಮದ ನಿರ್ವಹಣೆಯ ಕಾರ್ಯಗಳು ಒಟ್ಟೊಟ್ಟಿಗೆ ನಡೆಯುತ್ತಿರುತ್ತವೆ.ನೇರ ಹೂಟೆಯಡಿ ವಿದೇಶಿ ಬಂಡವಾಳದಾರರು ಒಂದು ಉದ್ಯಮದಲ್ಲಿ ಬಂಡವಾಳ ತೊಡಗಿಸಿದಾಗ ಆ ಉದ್ಯಮದ ಹತೋಟಿ ತಮ್ಮ ಬಳಿಯಲ್ಲಿಯೇ ಇರುವುದರಿಂದ ಅವರು ಹೊಸ ಹೊಸ ಯಂತ್ರೋಪಕರಣ, ತಂತ್ರಜ್ಞಾನ,ಉದ್ಯಮ ಚತುರತೆ ಮುಂತಾದವುಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ಹಿಂದುಳಿದ ದೇಶಗಳಿಗೆ ತುಂಬಾ ಅನುಕೂಲವಾಗುತ್ತದೆ.
◾ನೇರಹೂಟೆಯ ಪರ ವಾದಗಳು
ವಿದೇಶಿ ನೇರ ಹೂಟೆಯು ಈಚಿನ ದಿನಗಳಲ್ಲಿ ಹಲವಾರು ವಾಗ್ವಾದಗಳನ್ನು ಹುಟ್ಟು ಹಾಕಿದೆ.ಈ ಕಾರಣದಿಂದಾಗಿ ಅದರ ಪರ ಮತ್ತು ವಿರೋಧ ವಾದಗಳನ್ನು ಗಮನಿಸಬೇಕಾದ ಅಗತ್ಯ ಎದುರಗಿದೆ. ನೇರ ಹೂಟೆಯ ಪರವಿರುವ ಪ್ರಮುಖ ವಾದಗಳು ಈ ಮುಂದಿನಓತಿವೆ.
1.ದಕ್ಷ ನಿರ್ವಹಣೆ ಮತ್ತು ಹತೋಟಿ
2.ತಾಂತ್ರಿಕ ಜ್ಞಾನದ ಲಭ್ಯತೆ
3.ದೇಶಿ ಉದ್ಯಮಗಳ ಬೆಳವಣಿಗೆ
4.ಬಂಡವಾಳದ ನಿರಂತರ ಹರಿವು
5.ಲಾಭದ ಮರುಹೂಡಿಕೆ
6.ಸರ್ಕಾರಕ್ಕೆ ಅಧಿಕ ವರಮಾನ
7.ಉದ್ಯೋಗ ಸೃಷ್ಟಿ
8.ಮಾರುಕಟ್ಟೆ ವಿಸ್ತರಣೆ
9.ಪಾವತಿ ಶಿಲ್ಕಿನ ಮೇಲೆ ಅನುಕೂಲಕಾರಿ ಪರಿಣಾಮ,ಇತ್ಯಾದಿ.
Exchange Money Conversion to Foreign Currency.jpg
◾ನೇರಹೂಟೆಯ ವಿರೋಧ ವಾದಗಳು
ವಿದೇಶಿ ನೇರ ಹೂಟೆಯ ವಿರುದ್ದವಾಗಿ ಮಂಡಿಸಲಾದ ಪ್ರಮುಖ ವಾದಗಳು ಈ ಮುಂದಿನಂತಿವೆ.
1.ಅಸಮತೋಲನ ಅಭಿವೃದ್ದಿಗೆ ದಾರಿ
2.ಸಂಪನ್ಮೂಲ ಮತ್ತು ಮಾರುಕಟ್ಟೆಯ ವ್ಯಾಪಕ ಶೋಷಣೆ
3.ಉದ್ಯೋಗಾವಕಾಶಗಳ ಮಿತವಾದ್ ಏರಿಕೆ
4.ತಂತ್ರಜ್ಞಾನದ ಅಲ್ಪವರ್ಗಾವಣೆ
5.ಕೈಗಾರಿಕೆಗಳ ಕೇಂದ್ರೀಕರಣ
6.ಏಕಸ್ವಾಮ್ಯದ ಬೆಳವಣಿಗೆ
7.ರಾಜಕೀಯ ಭ್ರಷ್ಟಾಚಾರ
8.ದುಬಾರಿ ಮೂಲ ಸೌಕರ್ಯ ನಿರ್ಮಾಣ ವೆಚ್ಚ,ಇತ್ಯಾದಿ.
◾ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಟೆ
ವಿದೇಶಿ ಕಂಪನಿಗಳು ಲಾಭ ಗಳಿಸುವ ದೃಷ್ಟಿಯಿಂದ ತಮ್ಮ ಹಣ ಅಥವಾ ಬಂಡವಾಳವನ್ನು ನೆರವು ಪಡೆಯಲ್ಚಿಸುವ ದೇಶದ [೬]ಕಂಪನಿಗಳ ಷೇರುಗಳು, ಸಾಲಪತ್ರಗಳು ಮತ್ತು ಬಾಂಡುಗಳ ಮೇಲೆ ತೊಡಗಿಸುವವು ಅಥವಾ ಈ ದೇಶದಗಳ ಬ್ಯಾಂಕುಗಳಲ್ಲಿ ಠೇವಣಿಗಳನ್ನು ಸಹ ಇಡಬಹುದು. ಈ ರೀತಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಬಂಡವಾಳವನ್ನು ಹೂಡಲಾಗುತ್ತದೆಯೇ ಹೊರತು ಈ ಬಂಡವಾಳ ಹೂಡಿಕೆಯ ಮೇಲೆ ಯಾವುದೇ ರಿತೀಯ ಹತೋಟಿಯನ್ನು ಹೊಂದಿರುವುದಿಲ್ಲ.ಆದ್ದರಿಂದ ವಿದೇಶಿ ಬಂಡವಾಳವು ಷೇರುಗಳು,ಬಾಂಡುಗಳು, ಸಾಲಪತ್ರಗಳು, ಮತ್ತು ಠೇವಣಿಗಳಂತಹ ವರ್ಗಾಯಿಸ ಬಹುದಾದ ವಿನಿಯೊಜಕ ರೂಪದಲ್ಲಿ ಬರುತ್ತಿದ್ದರೆ ಅದನ್ನು ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಡಿಕೆ ಎಂದು ಕರೆಯಲಾಗುತ್ತದೆ.ಈ ರೀತಿಯ ಬಂಡವಾಳ ಹೂಡಿಕೆಗಳು ವಿದೇಶಿ ಖಾಸಗಿಯವರಿಂದ ನಡೆಯುವುದೇ ಹೆಚ್ಚು. ವಿದೇಶಿ ಖಾಸಗಿ ಬಂಡವಾಳ ನೇರಹೂಟೆಯು ಸಾಮಾನ್ಯವಾಗಿ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಬರುತ್ತದೆ. ಆದರೆ ಖಾಸಗಿ ಬಂಡವಾಳದ ಪರೋಕ್ಷ ಹೂಟೆಯು ಕ್ಷೇತ್ರೀಯ ರೂಪದಲ್ಲಿ ಅಂದರೆ ಷೇರುಗಳು,ಬಾಂಡುಗಳು,ಸಾಲಪತ್ರಗಳು ಮೇಲಿನ ಹೂಡಿಕೇಯ ರೂಪದಲ್ಲಿರುತ್ತದೆ.
◾ವಿದೇಶಿ ಸಾಂಸ್ಥಿಕ ಹೂಡಿಕೆದಾರರು[೪]
ವಿದೇಶಿ ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು[೭] ಪ್ರಮುಖ ಪಾತ್ರವಹಿಸುತ್ತರೆ. ಈ ಸಾಂಸ್ಥಿಕ ಹೂಡಿಕೆದಾರರನ್ನು ಆಧುನಿಕ ಯುಗದಲ್ಲಿ ಷೇರು ಮಾರುಕಟ್ಟೆಯಾ "ನವ ಗೂಳಿಗಳು"ಎಂದು ಪರಿಗಣಿಸಲಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಗುಂಪು ಮುಖ್ಯವಾಗಿ ನಿವೃತ್ತಿ ನಿಧಿ,ಪರಸ್ಪರ ನಿಧಿ,ಆಸ್ತಿ ನಿರ್ವಾಹಣೆ ಕಂಪನಿಗಳು,ಹೂಟೆ ದತ್ತಿಗಳು, ನಾಮನಿರ್ದೇಶಿತ ಕಂಪನಿಗಳು,ಸಾಂಸ್ಥಿಕ ಪೋರ್ಟ್ ಫೋಲಿಯೋ ನಿರ್ವಾಹಕರು,ವಿಶ್ವವಿದ್ಯಾಲಯ ನಿಧಿಗಳು,ಧರ್ಮದರ್ಶಿ ಸಂಸ್ಥೆಗಳು,ದತ್ತಿ ಸಂಸ್ಥೆಗಳು ಮುಂತಾದದುವನ್ನು ಒಳಗೊಂಡಿರುತ್ತದೆ.[೫]
◾ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಟೆ ಪರವಾದಗಳು
ಪೋರ್ಟ್ ಫೋಲಿಯೋ ಹೂಟೆಯ ಪರವಾಗಿ ಈ ಕೆಳಗಿನ ವಾದಗಳನ್ನು ಮಂಡಿಸಲಾಗಿದೆ.
1.ಬಂಡವಾಳದ ಸಮರ್ಥ ಬಳಕೆ
2.ಸ್ವದೇಶಿ ಆರ್ಥಿಕತೆಯ ಶೋಷಣೆ ಇಲ್ಲ
3.ಸಾರ್ವಜನಿಕ ವಲಯದ ಬೆಳವಣೆಗೆ
4.ಸ್ವದೇಶಿ ನಿಯಂತ್ರಣ ಮತ್ತು ನಿರ್ವಹಣೆ
5.ಮಿತವ್ಯಯಕಾರಿ
6.ರಾಜಕೀಯ ಪ್ರಾಬಲ್ಯದ ಭಯವಿಲ್ಲ
7.ಏಕಸ್ವಾಮ್ಯ ಬೆಳವಣಿಗೆಯ ಭಯವಿಲ್ಲ, ಇತ್ಯಾದಿ.
◾ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಟೆ ವಿರೋಧ ವಾದಗಳು
ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಟೆಯ ಪ್ರಮುಖ ವಿರೋಧ ವಾದಗಳು ಮುಂದಿನಂತಿವೆ.
1.ಬಡ್ಡಿ ಪಾವತಿಯ ಹೊರೆ
2.ಆಧುನಿಕ ತಂತ್ರಜ್ಞಾನ ಲಭ್ಯತೆಯ ಅನುಕೂಲವಿಲ್ಲ
3.ಬಂಡವಾಳದ ಅದಕ್ಷ ಬಳಕೆಯ ಸಾಧ್ಯತೆ
4.ಮುಗ್ಗಟ್ಟಿನ ಕಾಲದಲ್ಲಿ ಅಪಾಯಕಾರಿ
5.ವಿದೇಶಿ ಮಧ್ಯಪ್ರವೇಶ ಸಾಧ್ಯತೆ
6.ಲಾಭದ ವರ್ಗಾವಣೆ
7.ನಿರ್ವಾಹಣೆ ಕ್ರಾಂತಿ ಸಾಧ್ಯವಿಲ್ಲ,ಇತ್ಯಾದಿ.
◾ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಬಂಡವಾಳ[೮]
ಒಂದು ವರ್ಷದ ಅವಧಿಗಿಂತ ಕಡಿಮೆ ಅವಧಿಗೆ ಲಭ್ಯವಿರುವ ಬಂಡವಾಳವನ್ನು ಅಲ್ಪಕಾಲಿಕ ಬಂಡವಾಳ ಎಂದು ಕರೆಯಾಲಾಗುತ್ತದೆ.ಈ ರೀತಿ ಅಲ್ಪಕಾಲಿಕ ಬಂಡವಾಳವು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಬಡ್ಡಿಯ ದರದಲ್ಲಿರುವ ವ್ಯತ್ಯಾಸದ ಮೇಲೆ ನಡೆಯುತ್ತದೆ. ಅಂದರೆ ಅಲ್ಪಕಾಲದಲ್ಲಿ ಹೆಚ್ಚಿನ ಬಡ್ಡಿ ದರದ ಲಾಭ ಪಡೆಯುವ ದೃಷ್ಟಿಯಿಂದ ಈ ರೀತಿ ಬಂಡವಾಳ ಹೂಡಿಕೆಯನ್ನು ಮಾಡಲಾಗುತ್ತದೆ. ದೀರ್ಘಕಾಲಿಕ ಬಂಡವಾಳವು ಸಾಮಾನ್ಯವಾಗಿ ದೀರ್ಘಕಾಲಿನ ಹೂಟೆಗಾಗಿ ಬಳಸಲ್ಪಡುವ ಬಂಡವಾಳವಾಗಿರುತ್ತದೆ.ಈ ರೀತಿ ಬಂಡವಾಳವನ್ನು ಬೃಹತ್ ಪ್ರಮಾಣದ ಉತ್ಪಾದಕ ಚಟುವಟಿಕೆಯನ್ನು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.
◾ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ನೆರವು
ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ನೆರವು ಸಾಮಾನ್ಯವಾಗಿ ಸರ್ಕಾರಿ ಅಥವಾ ಅಂತರರಾಷ್ಟ್ರೀಯ ಹಣಕಾಸಿನ ಸಂಸ್ಥೆಗಳ ಮೂಲದಿಂದ ಬರುವಂತಹುದು. ಎರಡು ದೇಶಗಳ ನಡುವಿನ ಪರಸ್ಪರ ಒಪ್ಪಂದಾ ಅಥವಾ ಆಧಾರದ ಮೇಲೆ ಒಂದು ದೇಶ ಮತ್ತೊಂದು ದೇಶಕ್ಕೆ ನೆರವು ನೀಡುವುದನ್ನು ದ್ವಿಪಕ್ಷೀಯ ನೆರವು ಎಂದು ಕರೆಯಾಲಾಗುತ್ತದೆ.ಇದು ಎರಡು ದೇಶಗಳ ಸರ್ಕಾರಗಳ ನಡುವಿನ ಒಪ್ಪಂದವಾಗಿರುವದರಿಂದ ಇದನ್ನು ಅಂತರ ಸರ್ಕಾರಗಳ ಸಾಲ ಎಂದು ಕರೆಯುವರು. ಬಹುಪಕ್ಷೀಯ ನೆರವೆಂದರೆ ಒಂದು ದೇಶದ ಸರ್ಕಾರ ಅಂತರರಾಷ್ಟ್ರೀಯ ಹಣಕಾಸಿನ ಸಂಸ್ಥೆಗಳಾದ ಅಂತರರಾಷ್ಟ್ರೀಯ ಹಣಕಾಸು ನಿಧಿ,ಜಾಗತಿಕ ಬ್ಯಾಂಕು, ಅಂತರರಾಷ್ಟ್ರೀಯ ಹಣಕಾಸಿನ ನಿಗಮ ಅಥವಾ ಏಷಿಯಾ ಅಭಿವೃದ್ದಿ ಬ್ಯಾಂಕುಗಳಂತಹ ಸಂಸ್ಥೆಗಳಿಂದ ಸಾಲ ಅಥವಾ ನೆರವು ಪಡೆಯುವುದಾಗಿದೆ. ಹಣಕಾಸಿನ ಸಂಸ್ಥೆಗಳು ವಿವಿಧ ಸದಸ್ಯ ದೇಶಗಳಿಂದ ವಂತಿಕೆ ಸಂಗ್ರಹಿಸಿದ ಹಣದಲ್ಲಿ ನೆರವು ಅಗತ್ಯವಿರುವ ಬಡದೇಶಗಳಿಗೆ ಕೊಡುತ್ತೆವೆಯಾದ್ದರಿಂದ ಇದು ಬಹುಪಕ್ಷೀಯ ನೆರವಾಗುತ್ತದೆ.ಬಹುಪಕ್ಷೀಯ ನೆರವಿನಡಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ಸಾಮಾನ್ಯವಾಗಿ ಕಡಿಮೆ ಬಡ್ಡಿ ದರದಲ್ಲಿ ಹಣಕಾಸನ್ನು ಅಭಿವೃದ್ದಿಯ ಚಟುವಟಿಕೆಗಳಿಗೆ ಒದಗಿಸಲಾಗುತ್ತದೆ.
◾ರಫ್ತು ಸಾಲ
ಹಿಂದುಳಿದ ದೇಶಗಳು ಈಗ ತಾನೇ ತಮ್ಮ ಅಭಿವೃದ್ದಿಯ ಚಟುವಟಿಕೆಗಳನ್ನು ಪ್ರಾರಂಭಿಸಿವೆಯಾದ್ದರಿಂದ ಈ ದೇಶಗಳು ಬೃಹತ್ ಪ್ರಮಾಣದಲ್ಲಿ ಯಂತ್ರೋಪಕರಣಗಳು, ತಂತ್ರಜ್ಞಾನ ಮತ್ತು ಕಚ್ಚಾ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳ ಬೇಕಾಗುತ್ತದೆ. ಅಷ್ಟೇ ಅಲ್ಲದೆ ಈ ದೇಶಗಳಲ್ಲಿ ಮಿತಿಮೀರಿದ ಜನಸಂಖ್ಯೆಯಿಂದಾಗಿ ಆಹಾರ ಸಾಮಾಗ್ರಿಗಳ ಕೊರತೆ ಉದ್ಭವಿಸಿದೆ.ಆದ್ದರಿಂದ ಈ ದೇಶಗಳು ಆಮದು ಮತ್ತು ರಫ್ತುಗಳ ನಡುವಿನ ಅಂತರದಿಂದ ನರಳುತ್ತಿವೆ.ಹಿಂದುಳಿದ ದೇಶಗಳು ಬೃಹತ್ ಪ್ರಮಾಣದಲ್ಲಿ ಯಂತ್ರೋಪಕರಣಗಳು, ಮತ್ತು ಆಹಾರ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳಬೇಕೆಂದರೆ ಬೃಹತ್ ಪ್ರಮಾಣದಲ್ಲಿ ಬಂಡವಾಳ ಬೇಕಾಗುತ್ತದೆ. ಬಂಡವಾಳ ಕೊರತೆಯ ಸಮಸ್ಯೆಯಿಂದ ನರಳುತ್ತಿರುವ ಈ ದೇಶಗಳಿಗೆ ಇದು ಸಾಧ್ಯವಾಗಲಾರದು.ಆದ್ದರಿಂದ ಹಿಂದುಳಿದ ದೇಶಗಳು ಅನಿರ್ವಾಯವಾಗಿ ಶ್ರೀಮಂತ ದೇಶಗಳ ನೆರವನ್ನು ಕೋರಬೇಕಾಗುತ್ತದೆ. ಹಿಂದುಳಿದ ದೇಶಗಳಿಗೆ ಬೇಕಿರುವ ಯಂತ್ರೋಪಕರಣಗಳು,ತಂತ್ರಜ್ಞಾನ, ಮತ್ತು ಆಹಾರ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳಲು ಅವಕಾಶವಾಗುವಂತೆ ಶ್ರೀಮಂತ ದೇಶಗಳು ಕೊಡುವ ಸಾಲವನ್ನು ರಫ್ತು ಸಾಲ ಎಂದು ಕರೆಯಲಾಗುತ್ತದೆ.
◾ವಿದೇಶಿ ಸಹಭಾಗಿತ್ವ
ಯಾವುದೇ ಒಂದು ಉದ್ಯಮದಲ್ಲಿ ಅಥವಾ ಯೋಜನೆಯಲ್ಲಿ ವಿದೇಶಿ ಮತ್ತು ಸ್ವದೇಶಿ ಬಂಡವಾಳಗಳೆದಡನ್ನು ಹೂಡುವುದಕ್ಕೆ ವಿದೇಶಿ ಸಹಭಾಗಿತ್ವ ಎಂದುಕರೆಯುತ್ತಾರೆ.ಜಂಟಿರಂಗದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳೆರಡರ ಸಹಭಾಗಿತ್ವವಿದ್ದ ಹಾಗೆ ವಿದೇಶಿ ಸಹಭಾಗಿತ್ವದಲ್ಲಿ ವಿದೇಶಿ ,ಸ್ವದೇಶಿ ಬಂಡವಾಳಗಳೆದಡನ್ನು ಹೂಡಲಾಗುತ್ತದೆ.ವಿದೇಶಿ ಸಹೋದ್ಯಮವು ಎರಡು ದೇಶಗಳ ಸರ್ಕಾರಗಳ ಸಹಭಾಗಿತ್ವ ಅಥವಾ ಎರಡು ದೇಶಗಳ ಖಾಸಗಿ ವ್ಯಕ್ತಿಗಳ ಸಹಭಾಗಿತ್ವ ,ವಿದೇಶಿ ಕೈಗಾರಿಕಾ ಸಂಸ್ಥೆಗಳು ಹಾಗು ಸ್ವದೇಶಿ ಸರ್ಕಾರಗಳ ಸಹಭಾಗಿತ್ವ ರೂಪದಲ್ಲಿರಬಹುದು.
◾ವಿದೇಶಿ ನೆರವು
ವಿದೇಶಿ ನೆರವು ಎಂಬ ಪದಗಳನ್ನು ಬಹಳ ದೊಡ್ಡ ಅರ್ಥದಲ್ಲಿ ವಿದೇಶಿ ಖಾಸಗೀ ಮತ್ತು ಸಾರ್ವಜನಿಕ ಬಂಡವಾಳದ ನೆರವುಗಳನ್ನು ಸೇರಿಸಿಕೊಂಡು ಉಪಯೋಗಿಸಲಾಗುತ್ತಾದರೂ ಕೆಲವೊಮ್ಮೆ ವಿದೇಶಿ ಬಂಡವಾಳದ ಏಕಮುಖ ಪಾವತಿಗಳನ್ನು ಮಾತ್ರ ಸೇರಿಸಿಕೊಂಡು ಅರ್ಥೈಸಲಾಗುತ್ತದೆ. ವಿದೇಶಿ ಏಕಮುಖ ಪಾವತಿಯಲ್ಲಿ ಅತ್ಯಂತ ಪ್ರಮುಖ ವಿದೇಶಿ ನೆರವೆಂದರೆ ಅನುದಾನಗಳು ಅಥವಾ ದಾನಗಳು.
◾ಅನುದಾನಗಳು ಅಥವಾ ದಾನಗಳು
ಕೆಲವೊಮ್ಮೆ ಮುಂದುವರಿದ ದೇಶಗಳು ಹಿಂದುಳಿದ ದೇಶಗಳಿಗೆ ಅನುದಾನಗಳು ಅಥವಾ ದಾನದ ರೂಪದಲ್ಲಿ ಕೆಲವು ಅಭಿವೃದ್ದಿ ಕಾರ್ಯಕ್ರಮಗಳಿಗೆ ಬಂಡವಾಳವನ್ನು ಒದಗಿಸುತ್ತದೆ.ಹೀಗೆ ಕೊಟ್ಟಿರುವ ಬಂಡವಾಳದ ನೆರವನ್ನು ಹಿಂದುಳಿದ ದೇಶಗಳು ಮರುಪಾವತಿಸ ಬೇಕಿಲ್ಲ.ಕೆಲವೊಮ್ಮೆ ಅಂತರರಾಷ್ಟ್ರೀಯ ಸಾಮಾಜಿಕ ಸಂಸ್ಥೆಗಳು ಕೂಡ ಈ ರೀತಿಯ ಅನುದಾನಗಳು ಅಥವಾ ದಾನಗಳ ರೂಪದಲ್ಲಿ ಬಂಡವಾಳದ ನೆರವನ್ನು ನೀಡುತ್ತದೆ. ಅನುದಾನಗಳು ಅಥವಾ ದಾನದ ರೂಪದಲ್ಲಿ ಪಡೆದ ವಿದೇಶಿ ನೆರವನ್ನು ಮರುಪಾವತಿ ಮಾಡವ ಅಗತ್ಯೈವಿಲ್ಲ ಇದರಿಂದ ಹಿಂದುಳಿದ ದೇಶಗಳ ಸರ್ವತೋಮುಖ ಅಭಿವೃದ್ದಿಗೆ ತುಂಬಾ ಅನುಕೂಲವಾಗುತ್ತದೆ.
◾ದ್ವಿಪಕ್ಷೀಯ ಕಠಿಣ ಸಾಲಗಳು ಮತ್ತು ಮೆದು ಸಾಲಗಳು
ದ್ವಿಪಕ್ಷೀಯ ಕಠಿಣ ಸಾಲಗಳಲ್ಲಿ ಸಾಲ ನೀಡುವ ದೇಶವು ತನ್ನ ಸ್ವಂತ ಹಣ ರೂಪದಲ್ಲಿಯೇ ಸಾಲ ಪಡೆಯಲ್ಚಿಸುವ ದೇಶಕ್ಕೆ ಸಾಲ ನೀಡುತ್ತೆದೆ. ಉದಾಹರಣೆಗೆ ಬ್ರಿಟೀಷ್ ಸರ್ಕಾರವು ಬೇರೊಂದು ದೇಶಕ್ಕೆ ಸಾಲ ನೀಡುವಾಗ ತನ್ನ ಕರೆನ್ಸಿಯಾದ ಪೌಂಡ್-ಸ್ಟರ್ಲಿಂಗ್ ರೂಪದಲ್ಲಿ ನೀಡಬಹುದು. ದ್ವಿಪಕ್ಷೀಯ ಮೆದು ಸಾಲಗಳಲ್ಲಿ ಸಾಲ ನೀಡುವ ದೇಶವು ಸಾಲ ಪಡೆಯುವ ದೇಶದ ಕರೆನ್ಸಿ ಹಣದ ರೂಪದಲ್ಲಿ ಸಾಲ ನೀಡುತ್ತೆದೆ. ಉದಾಹರಣೆಗೆ ಅಮೇರಿಕಾದ ಪಿ.ಎಲ್ ೪೮೦(pl)ವ್ಯವಸ್ಥೆಯಡಿ ಭಾರತಕ್ಕೆ ಆಹಾರ ಮತ್ತು ಕೃಷಿ ಸಾಮಾಗ್ರಿಗಳನ್ನು ಒದಗಿಸಿರುವುದು. ಈ ಸಾಲಗಳನ್ನು ಸಾಲ ಪಡೆದ ದೇಶ ತನ್ನ ಸ್ವಂತ ನಾಣ್ಯದ ರೂಪದಲ್ಲಿ ಮರುಪಾವತಿ ಮಾಡಬಹುದು.
◾ಬಂಧಿತ ನೆರವು
ನೆರವು ನೀಡುವ ದೇಶವು ತಾನು ನೀಡುತ್ತಿರುವ ನೆರವಿನ ಬಂಡವಾಳವನ್ನು ಒಂದು ನಿರ್ದಿಷ್ಟ ಉದ್ದೇಶ ಅಥವ ಯೋಜನೆಗೆ ಉಪಯೋಗಿಸಬೇಕೆಂದು ಒತ್ತಾಯಿಸಿದರೆ ಅದು ಬಂಧಿತ ನೆರವಾಗುತ್ತದೆ .ಅಂದರೆ ನೆರವು ನೀಡುವ ದೇಶವು ಸ್ಪಷ್ಟಪಡಿಸಿದರುವ ಉದ್ದೇಶಕ್ಕೆ ಮಾತ್ರ ಈ ಬಂಡವಾಳವನ್ನು ಉಪಯೋಗಿಸ ಬೇಕಾಗುತ್ತದೆಯೇ ಹೊರತು ಬೇರೆ ಉದ್ದೇಶಗಳಿಗೆ ಈ ಬಂಡವಾಳವನ್ನು ಬಳಸುವಂತಿಲ್ಲ.ಹೀಗೆ ಬಂಧಿತ ನೆರವಿನಲ್ಲಿ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನೆರವನ್ನು ಬಳಸಬೇಕೆಂದು ಬಂಧಿಸಲಾಗಿರುತ್ತದೆ ಅಥವಾ ಕಟ್ಟುಪಾಡು ಹಾಕಿರಲಾಗುತ್ತದೆ. ನೆರವು ಪಡೆಯುತ್ತಿರುವ ದೇಶಕ್ಕೆ ತನಗಿಷ್ಟ ಬಂದ ರೀತಿಯಲ್ಲಿ ಈ ಬಂಡವಾಳವನ್ನು ಬಳಸುವ ಸ್ವತಂತ್ರವಿರುವುದಿಲ್ಲ.ಬಂಧಿತ ನೆರವಿನಲ್ಲಿ ಎರಡು ವಿಧಗಳಿವೆ. ರಾಷ್ಟ್ರಬಂಧಿತ ನೆರವು ಮತ್ತು ಯೋಜನೆ ಅಥವಾ ಪ್ರಾಜೆಕ್ಟು ಬಂಧಿತ ನೆರವು.
◾ರಾಷ್ಟ್ರಬಂಧಿತ ನೆರವು
ರಾಷ್ಟ್ರಬಂಧಿತ ನೆರವು ರಾಷ್ಟ್ರಾ ಬಂಧಿತ ನೆರವು ನೀಡುತ್ತಿರುವ ನೆರವು ಪಡೆಯುತ್ತಿರುವ ದೇಶಕ್ಕೆ ತನ್ನ ಸರಕುಗಳನ್ನೇ ಕೊಂಡುಕೊಳ್ಳಬೇಕೆಂದು ಷರತ್ತು ಹಾಕುತ್ತದೆ. ಅಂದರೆ ಈ ರೀತಿಯ ನೆರವಿನಲ್ಲಿ ನೆರವು ನೀಡುತ್ತಿರುವ ದೇಶದ ಸರಕುಗಳನ್ನೇ ಆಮದು ಮಾಡಿಕೊಳ್ಳಬೇಕೆಂದು ಕಟ್ಟುಪಾಡು ಹಾಕಲಾಗುತ್ತದೆ.ನೆರವು ಪಡೆಯುತ್ತಿರುವ ದೇಶವು ನೆರವು ನೀಡುತ್ತಿರುವ ದೇ॑ಶದಿಂದ ಮಾತ್ರ ಸರಕನ್ನು ಆಮದು ಮಾಡಿಕೊಳ್ಳಬೇಕೆಂಬ ಷರತ್ತನ್ನು ವಿಧಿಸುತ್ತದೆ. ನೆರವು ನೀಡುತ್ತಿರುವ ದೇಶದ ಸರಕುಗಳನ್ನೇ ಆಮದು ಮಾಡಿಕೊಳ್ಳಬೇಕೆಂದು ಷರತ್ತುನ್ನು ವಿಧಿಸುತ್ತದೆ. ನೆರವು ನೀಡುತ್ತಿರುವ ದೇಶವು ನೆರವು ಪಡೆಯುತ್ತಿರುವ ದೇಶಕ್ಕೆ ಯಂತ್ರೋಪಕರಣಗಳು ,ಬಿಡಿಭಾಗಗಳು , ಆಹಾರ ಧಾನ್ಯಗಳು ಇತ್ಯಾದಿಗಳನ್ನು ಪೂರೈಕೆ ಮಾಡಲು ಮುಂದಾಗುತ್ತದೆ.
◾ಯೋಜನೆ ಬಂಧಿತ ನೆರವು
ಯೋಜನೆ ಬಂಧಿತ ನೆರವನ್ನು ಪ್ರಾಜೆಕ್ಟು ಬಂಧಿತ ನೆರವೆಂದೂ ಕರೆಯಬಹುದು.ಈ ರೀತಯ ನೆರವಿನಲ್ಲಿ ಯಾವ ಯೋಜನೆ ಅಥವಾ ಪ್ರಾಜೆಕ್ಟಿಗಾಗಿ ನೆರವನ್ನು ಪಡೆಯಲಾಗುತ್ತದೋ ಅದೇ ಉದ್ದೇಶಕ್ಕೆ ಮಾತ್ರ ನೆರವಿನ ಹಣವನ್ನು ಬಳಸಬೇಕೆಂಬ ಷರತ್ತನ್ನು ನೆರವು ನೀಡುವ ದೇಶ ವಿಧಿಸುತ್ತದೆ. ಯಾವುದೋ ನಿರ್ದಿಷ್ಟ ಯೋಜನಯ ಅನುಷ್ಠಾನಕ್ಕಾಗಿ ತೆಗೆದುಕೊಂಡ ನೆರವಿನ ಹಣವನ್ನು ಬೇರೊಂದು ಯೋಜನೆಯ ಅನುಷ್ಠಾನಕ್ಕಾಗಿ ಉಪಯೋಗಿಸುವಂತಿಲ್ಲ. ಉದಾಹರಣೆಗೆ ಒಂದು ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ವಿದೇಶಿ ಯೋಜನೆ ಬಂಧಿತ ನೆರವನ್ನು ತೆಗೆದುಕೊಳ್ಳಲಾಗಿದೆ ಎಂದರೆ ಈ ನೆರವಿನ ಹಣವನ್ನು ಬೇರೊಂದೆ ಕೈಗಾರಿಕೆಯ ಅಭಿವೃದ್ದಿ ಕಾರ್ಯಗಳಿಗೆ ತೊಡಗಿಸುವಂತಿಲ್ಲ.
◾ಬಂಧಿತವಲ್ಲದ ನೆರವು
ಯಾವುದೇ ಷರತ್ತು ಅಥವಾ ಕಟ್ಟುಪಾಡುಗಳಿಲ್ಲದೆ ಯಾವುದೇ ಅವಶ್ಯಕ ಅಭಿವೃದ್ದಿಯ ಕಾರ್ಯಕ್ರಮಗಳಿಗೆ ಉಪಯೋಗಿಸಲು ಅನುಕೂಲವಾಗುವಗುವಂತೆ ನೀಡಲಾಗುವ ವಿದೇಶಿ ನೆರವನ್ನು ಬಂಧಿತವಲ್ಲದ ಅಥವಾ ಬಂಧನರಹಿತ ನೆರವು ಎಂದು ಕರೆಯಲಾಗುತ್ತದೆ. ಅಂದರೆ ಇಂತಹ ನೆರವಿನಲ್ಲಿ ಒಂದು ನಿರ್ದಿಷ್ಟ ಯೋಜನೆ ಅಥವಾ ಪ್ರಾಜೆಕ್ಟಿಗೆ ಉಪಯೋಗಿಸಬೇಕೆಂಬ ಕಟ್ಟುಪಾಡುಗಳಿರುವುದಿಲ್ಲ.ನೆರವು ಪಡೆದ ದೇಶ ತನಗಿಷ್ಟ ಬಂದ ಅಭಿವೃದ್ದಿ ಯೋಜನೆಗಳನ್ನು ಕಾರ್ಯಗತ ಮಾಡಲು ಈ ನೆರವನ್ನು ಬಳಸಿಕೊಳ್ಳಬಹುದು.ಅಲ್ಲದೆ ನೆರವು ಪಡೆಯುತ್ತಿರುವ ದೇಶವು ನೆರವುನೀಡುತ್ತಿರುವ ದೇಶದಿಂದಲೇ ಸರಕುಗಳನ್ನು ತನಗಿಷ್ಟ ಬಂದ ದೇಶದಿಂದ ಆಮದು ಮಾಡಿಕೊಳ್ಳಲು ಈ ದೇಶ ಸ್ವತಂತ್ರವಾಗಿರುತ್ತದೆ. ಈ ರೀತಿ ಬಂಧನರಹಿತ ನೆರವನ್ನು ಕಾರ್ಯಕ್ರಮ ಆಧಾರಿತ ನೆರವು ಎಂತಲೂ ಕರೆಯುವರು. ಬಂಧನರಹಿತ ನೆರವು ಹಿಂದುಳಿದ ದೇಶಗಳ ಆರ್ಥಿಕಾಭಿವೃದ್ದಿಗೆ ತುಂಬಾ ಪೂರಕವಾಗುವುದು.ಏಕೆಂದರೆ ದೇಶವು ತಾವು ಪಡೆದ ನೆರವಿನ ಮೊತ್ತವನ್ನು ಅಗತ್ಯಕ್ಕನುಗುಣವಾಗಿ ತಮಗಿಷ್ಟ ಬಂದ ಅಭಿವೃದ್ದಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು. ತಮಗಿಷ್ಟ ಬಂದ ಮಾರುಕಟ್ಟೆಯಲ್ಲಿ .ಅಗತ್ಯ ಸಾಮಾಗ್ರಿಗಳನ್ನು ಕೊಂಡುಕೊಳ್ಳ ಬಹುದಲ್ಲದೆ ಸಂಪನ್ಮೂಲಗಳ ಸಮರ್ಪಕ ಹಂಚಿಕೆಗೂ ಮುಕ್ತ ಅವಕಾಶಗಳಿರುತ್ತವೆ.ನೆರವು ಪಡೆದ ದೇಶಗಳು ತಮ್ಮ ಬುದ್ದಿಶಕ್ತಿಯನ್ನು ಬಳಸಿ ನೆರವಿನ ಹಣವನ್ನು ಹೆಚ್ಚು ದಕ್ಷ ಹಾಗೂ ಪ್ರಾಮಾಣಿಕವಾಗಿ ಬಳಸಿಕೊಂಡಿದಾದಲ್ಲಿ ಇದರಿಂದ ಹೆಚ್ಚಿನ ಪ್ರಯೋಜನಗಳು ಲಭ್ಯವಾಗುತ್ತದೆ.ನೆರವು ನೀಡುತ್ತಿರುವ ದೇಶಗಳ ಬಿಡಿ ಹಿಡಿತದಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯ ಸಂದರ್ಭಗಳು ಈ ರೀತಿಯ ನೆರವಿನಲ್ಲಿ ಉದ್ಭವಿಸುವುದಿಲ್ಲ.
ನೆರವನ್ನು ನಿರ್ಧರಿಸುವ ಅಂಶಗಳುಸಂಪಾದಿಸಿ
ಹಿಂದಳಿದ ದೇಶಗಳಿಗೆ ಹರಿದುಬರುವ ವಿದೇಶಿ ನೆರವಿನ ಪ್ರಮಾಣವು ಅನೇಕ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ.ಏಕೆಂದರೆ ವಿದೇಶಿ ನೆರವು ನೀಡಬೇಕಾದರೆ ಅದಕ್ಕೊಂದು ಸೂಕ್ತ ವಾತವರಣವನ್ನು ಬೇಕಾಗುತ್ತದೆ.ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ಹರಿದುಬರುವ ವಿದೇಶಿ ನೆರವಿನ ಪ್ರಮಾಣವನ್ನು ನಿರ್ಧರಿಸುವ ಪ್ರಮುಖ ಅಂಶಗಳು ಕೆಳಗಿನಂತಿವೆ.
◾ಬಂವಾಳದ ಲಭ್ಯತೆ
ನೆರವು ನೀಡಬೇಕೆಂದರೆ ನೆರವು ನೀಡಲಿಚ್ಚಿಸುವ ದೇಶದಲ್ಲಿ ಸಾಕಷ್ಟು ಬಂಡವಳ ಲಭ್ಯವಿರಬೇಕಾಗುತ್ತದೆ. ಹಿಂದಳಿದ ದೇಶಗಳಿಗೆ ವಾರ್ಷಿಕವಾಗಿ ಸರಾಸರಿ ೧೫ ರಿಂದ ೨೦ಬಿಲಿಯನ್ ಡಾಲರ್ ಗಳ ಬಂಡವಾಳದ ಅವಶ್ಯಕತೆ ಇರುತ್ತದೆ. ಆದರೆ ಮುಂದುವರಿದ ದೇಶಗಳಲ್ಲಿ ಬಂಡವಾಳ ಲಭ್ಯವಿಲ್ಲ. ಅದೂ ಅಲ್ಲದೆ ಕೆಲ ಮುಂದುವರಿದ ದೇಶಗಳೇ ತಮ್ಮ ಅಭಿವೃದ್ದಿಯ ಚಟುವಟಿಕೆಗಳಿಗೆ ನೆರವನ್ನು ಪಡೆಯಲೆತ್ನಿಸಿವೆ.ಮುಂದುವರಿದ ಶ್ರಿಮಂತ ದೇಶಗಳು ಬಡದೇಶಗಳಿಗೆ ನೆರವಾಗುವ ದೃಷ್ಟಿಯಿಂದ ಸಾಕಷ್ಟು ಬಂಡವಾಳವನ್ನು ಸಂಗ್ರಹಿಸಲು ಮುಂದಾಗದಿದ್ದಲ್ಲಿ ಬಂಡವಳವು ಅಗತ್ಯ ಪ್ರಮಾಣದಲ್ಲ್ಲಿ ಲಭ್ಯವಿರುವುದಿಲ್ಲ.
◾ಹೀರುವ ಸಾಮರ್ಥ್ಯ
ವಿದೇಶಿ ನೆರವನ್ನು ನಿರ್ಧರಿಸುವ ಎರಡನೇ ಮುಖ್ಯ ಅಂಶವೆಂದರೆ ಹಿಂದಳಿದ ದೇಶಗಳ ಹೀರುವ ಸಾಮರ್ಥ್ಯ.ಹೂಡಿಕೆಗೆ ಅಗತ್ಯವಿರುವಷ್ಟು ಪ್ರಮಾಣವನ್ನು ಈ ದೇಶಗಳು ಬಂಡವಾಳ ಪಡೆಯುವಂತಿರಬೇಕು. ಅಭಿವೃದ್ದಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು, ಆರ್ಥಿಕ ಸಂಘಟನೆಯನ್ನು ಬದಲಾಯಿಸುವ ಮತ್ತು ಸಂಪನ್ಮೂಲಗಳನ್ನು ಮರುಹಂಚುವ ಸಾಮರ್ಥ್ಯಗಳು ಹಿಂದಳಿದ ದೇಶಗಳ ಹೀರುವ ಸಾಮರ್ಥ್ಯವನ್ನು ನಿರ್ಧರಿಸುತ್ತವೆ.ಹಿಂದಳಿದ ದೇಶಗಳು ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ಹೊಂದಿದ್ದರೆ,ಮತ್ತು ಅತಿ ವೇಗವಾಗಿ ಯೋಜನೆಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದರೆ ಅವುಗಳ ಹೀರುವ ಸಾಮರ್ಥ್ಯ ಹೆಚ್ಚುರುತ್ತದೆ.ಶಿಕ್ಷಣ, ತರಬೇತಿ, ರಸ್ತೆಗಳು, ಸದೃಢ ಸರ್ಕಾರ,ಶಿಕ್ಷಿತ ಜನರು, ತಂತ್ರಜ್ಞಾನ, ವೈಚಾರಿಕ ಮನೋಭಾವನೆ, ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಮುನ್ನಡೆ, ಇತ್ಯಾದಿಗಳು ಈ ದೇಶಗಳ ವಿದೇಶಿ ನೆರವನ್ನು ಹೀರುವ ಸಾಮರ್ಥ್ಯವನ್ನು ಹೆಚ್ಚುಸುತ್ತವೆ . ಹೀರುವ ಸಾಮರ್ಥ್ಯ ಜಾಸ್ತಿಯಿದ್ದಲ್ಲಿ ಆ ದೇಶಕ್ಕೆ ಹರಿದುಬರುವ ವಿದೇಶಿ ನೆರವೂ ಕೂಡ ಹೆಚ್ಚ್ಚಿರುತ್ತದೆ .
◾ಸಂಪನ್ಮೂಗಳ ಲಭ್ಯತೆ
ಸಂಪನ್ಮೂಗಳ ಲಭ್ಯತೆಯು ವಿದೇಶಿ ನೆರವಿನ ಪ್ರಮಾಣವನ್ನು ನಿರ್ಧಿರಿಸುವ ಮೂರನೇ ಪ್ರಮುಖ ಅಂಶವಾಗಿದೆ.ಮಾನವ ಮತ್ತು ನೈಸರ್ಗಿಕ ಸಂಪನ್ಮೂಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಅವುಗಳನ್ನು ಸರಿಯಾಗಿ ಅಭಿವೃದ್ದಿಪಡಿಸಲಾಗಿದ್ದರೆ ಯಾವುದೇ ಒಂದು ದೇಶದ ವಿದೇಶಿ ಬಂಡವಾಳವನ್ನು ಉಪಯೋಗಿಸುವ ಸಾಮರ್ಥ್ಯ ಹೆಚ್ಚಿರುತ್ತದೆ. ಆದರೆ ಮಾನವ ಮತ್ತು ನೈಸರ್ಗಿಕ ಸಂಪನ್ಮೂಗಳು ಕೊರತೆಯನ್ನು ಅನುಭವಿಸುತ್ತಿರುವ ದೇಶಕ್ಕೆ ವಿದೇಶಿ ನೆರವು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರಲಾರದು. ಸಂಪನ್ಮೂಗಳು ಸಾಕಷ್ಟು ಪ್ರಮಾಣದಲ್ಲಿದ್ದೂ ಸರಿಯಾಗಿ ಅಭಿವೃದ್ದಿಪಡಿಸದ ದೇಶಕ್ಕೆ ಯಾವ ವಿದೇಶಿಯಾರೂ ನೆರವು ನೀಡಲು ಮುಂದೆ ಬರುವುದಿಲ್ಲ.
◾ಮರುಪಾವತಿ ಸಾಮರ್ಥ್ಯ
ಹಿಂದಳಿದ ದೇಶಗಳ ಸಾಲ ಮರುಪಾವತಿ ಸಾಮರ್ಥ್ಯವು ವಿದೇಶಿ ನೆರವನ್ನು ನಿರ್ಧರಿಸುವ ಇನ್ನೊಂದು ಪ್ರಮುಖ ಅಂಶವಾಗಿದೆ.ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ದೇಶಕ್ಕೆ ನೆರವು ನೀಡಲು ಅನೇಕರು ಮುಂದೆ ಬರುತ್ತರೆ. ಹಿಂದಳಿದ ದೇಶಗಳು ಹೇಳಿ ಕೇಳಿ ಹಿಂದುಳಿದ ಬಡದೇಶಗಳು.ಈ ದೇಶಗಳ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಕಡಿಮೆಯೇ ಇರುತ್ತದೆ. ಪಡೆಯಲಾದ ವಿದೇಶಿ ನೆರವನ್ನು ಉತ್ಪಾದಕ ಚಟುವಟಿಕೆಗಳಲ್ಲಿ ಸಮರ್ಥವಾಗಿ ಬಳಸಿಕೊಂಡರೆ ಮರುಪಾವತಿ ಸಾಮರ್ಥ್ಯ ಸ್ವಯಂಚಾಲಿತವಾಗಿ ಜಾಸ್ತಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಿಂದಳಿದ ದೇಶಗಳ ಸಾಲದ ಭಾರ ಅತಿಯಾಗಿ ಅವುಗಳು ತಮ್ಮ ರಾಷ್ಟ್ರಾದಾಯದ ಹೆಚ್ಚಿನ ಭಾಗವನ್ನು ಸಾಲ ಮರುಪಾವತಿಗಾಗಿ ಉಪಯೋಗಿಸಬೇಕಾಗಿದೆ.
◾ಬಡ್ಡಿಯ ದರ
ಅಂತರರಾಷ್ಟ್ರೀಯ ಬಂಡವಾಳ ಚಲನೆಯನ್ನು ನಿರ್ಧರಿಸುವ ಅತ್ಯಂತ ಪ್ರಮುಖ ಅಂಶವು ಬಡ್ಡಿಯ ದರವಾಗಿದೆ. ಸಾಮಾನ್ಯವಾಗಿ ಕಡಿಮೆ ಬಡ್ಡಿದರ ಹೊಂದಿರುವ ದೇಶಕ್ಕೆ ಚಲನೆಯಾಗುತ್ತದೆ. ಈ ರೀತಿಯ ಬಂಡವಾಳ ಚಲನೆಯಲ್ಲಿ ಪ್ರಮುಖವಾಗಿ ವಿದೇಶಿ ಖಾಸಗಿ ಬಂಡವಾಳವೇ ಮುಖ್ಯವಾದುದಾಗಿದೆ.ಹೆಚ್ಚು ಬಡ್ದಿ ಪಡೆಯುವ ಆಸೆಯಿಂದ ವಿದೇಶಿಯರು ತಮ್ಮ ಬಂಡವಾಳವನ್ನು ಹಿಂದಳಿದ ದೇಶಗಳಲ್ಲಿ ಠೇವಣಿ ಇಟ್ಟಾಗ ಅಥವಾ ಸಾಲವನ್ನು ಕೊಟ್ಟಾಗ ಆ ಬಂಡವಾಳವೂ ಹೂಡಿಕೆಗೆ ಲಭ್ಯವಿರುತ್ತದೆ.
◾ಲಾಭದ ಸಾಧ್ಯತೆಗಳು
ವಿದೇಶಿ ಖಾಸಗಿ ಬಂಡವಾಳದ ಚಲನೆಯು ಲಾಭ ಗಳಿಸುವ ಸಾಧ್ಯತೆಗಳನ್ನು ಅವಲಂಬಿಸಿರುತ್ತದೆ. ಬಂಡವಾಳ ಹೂಡಿಕೆಯ ಮೇಲೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆಗಳಿದ್ದರೆ ವಿದೇಶಿಯರು ಹೆಚ್ಚು ಬಂಡವಾಳ ಹೂಡಲು ಮುಂದಾಗುತ್ತಾರೆ.
◾ಉತ್ಪಾದನಾ ವೆಚ್ಚ
ವಿದೇಶಿ ಖಾಸಗಿ ಬಂಡವಾಳದ ಚಲನೆಯು ಉತ್ಪಾದನಾ ವೆಚ್ಚ ಅಂಶಗಳಿಂದಲೂ ನಿರ್ಧರಿಸಲ್ಪಡುತ್ತದೆ. ವಿದೇಶದಲ್ಲಿ ಶ್ರಮ ಮತ್ತು ಉತ್ಪಾದನಾ ಸಂಪನ್ಮೂಲಗಳು ತುಂಬಾ ಅಗ್ಗದ ಬೆಲೆಯಲ್ಲಿ ಲಭ್ಯವಿದ್ದರೆ ಅನೇಕ ವಿದೇಶಿ ಬಂಡವಾಳಗಾರರು ತಮ್ಮ ಬಂಡವಾಳವನ್ನು ಆ ದೇಶದಲ್ಲಿ ತೊಡಗಿಸಲು ಮುಂದಾಗುತ್ತಾರೆ.
◾ಆರ್ಥಿಕ ಸ್ಥಿತಿಗತಿಗಳು
ಮಾರುಕಟ್ಟೆ ಸೌಲಭ್ಯಗಳು, ಮೂಲಭೂತ ಸೌಲಭ್ಯಗಳು, ಸಾರಿಗೆ ಸಂಪರ್ಕ ಇತ್ಯಾದಿ ಆರ್ಥಿಕ ಅಂಶಗಳು ಬಂಡವಾಳ ಲಭ್ಯತೆಯನ್ನು ನಿರ್ಧರಿಸುತ್ತವೆ. ಈ ಎಲ್ಲಾ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದ್ದರೆ ಹೆಚ್ಚಿನ ಬಂಡವಾಳ ಹೂಡಿಕೆಯಾಗುವ ಸಾಧ್ಯತೆಗಳಿರುತ್ತವೆ.
◾ಸರ್ಕಾರಿ ಧೋರಣೆ
ವಿದೇಶಿ ಬಂಡವಾಳ ಹೂಡಿಕೆಯ ಮತ್ತು ವಿದೇಶಿ ಸಹಭಾಗಿತ್ವ, ಲಾಭಗಳು, ತೆರಿಗೆ ನೀತಿ, ವಿದೇಶಿ ವಿನಿಮಯ[೯] ನಿಯಂತ್ರಣ, ಸುಂಕಗಳು, ಹಣಕಾಸಿನ ಮತ್ತು ಖಜಾನೆ ನೀತಿ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರ ತಾಳುವ ಧೋರಣೆಗಳು ವಿದೇಶಿ ನೆರವಿನ ಅಂಶವನ್ನು ನಿರ್ಧರಿಸುವ ಅತ್ಯಂತ ಪ್ರಭಾವೀ ಅಂಶವಾಗಿವೆ. ಈ ಎಲ್ಲಾ ವಿಷಯಗಳಲ್ಲಿ ಸರ್ಕಾರೀ ಧೋರಣೆ ವಿದೇಶಿಯರಿಗೆ ಅನುಕೂಲಕರವಾಗಿದ್ದರೆ ಹೆಚ್ಚಿನ ವಿದೇಶಿ ಬಂಡವಾಳ ಹರಿದುಬರುತ್ತದೆ.
◾ರಾಜಕೀಯ ಅಂಶಗಳು
ರಾಜಕೀಯ ಸ್ಥಿರತೆ, ರಾಜಕೀಯ ಪಕ್ಷಗಳ ಗುಣಲಕ್ಷಣಗಳು, ವಿದೇಶಿ ವ್ಯವಹಾರ, ಬುದ್ದಿವಂತ ಪ್ರಜೆಗಳು, ಸರ್ಕಾರೀ ನೀತಿ ಮುಂತಾದ ರಾಜಕೀಯ ಅಂಶಗಳು ವಿದೇಶಿ ನೆರವಿನ ಮೇಲೆ ತಮ್ಮದೇ ಆದ ಪರಿಣಾಮಗಳನ್ನು ಹೊಂದಿವೆ.
◾ಅಭಿವೃದ್ದಿಯ ಸಾಧಿಸುವ ಆಸಕ್ತಿ
ದೇಶವನ್ನು ಪ್ರಗತಿ ಪಥದಲ್ಲಿ ನಡೆಸಿಕೊಂಡು ಹೋಗುವ ಆಸಕ್ತಿ ಮತ್ತು ಆ ನಿಟ್ಟಿನಲ್ಲಿ ಮಾಡಲಾಗುವ ಪ್ರಯತ್ನಗಳು ವಿದೇಶಿ ನೆರವಿನ ಪ್ರಮಾಣವನ್ನು ನಿರ್ಧರಿಸುವ ಅತ್ಯಂತ ಪ್ರಮುಖ ಮತ್ತು ಮಹತ್ವದ ಅಂಶಗಳಾಗಿವ. ಯಾವುದೇ ರಾಷ್ಟ್ರ ಅಭಿವೃದ್ದಿಯ ಹೊಂದುವ ಆಸಕ್ತಿ ಮತ್ತು ಪ್ರಯತ್ನಗಳನ್ನೇ ಹೊಂದಿಲ್ಲವಾದರೆ, ಆ ರಾಷ್ಟ್ರ ವಿದೇಶಿ ನೆರವನ್ನು ಪ್ರಾಮಾಣಿಕವಾಗಿ ಮತ್ತು ಸಮರ್ಥವಾಗಿ ಬಳಸಿಕೊಳ್ಳುವುದೆಂಬ ಭರವಸೆ ಮೂಡುವುದಿಲ್ಲ. ಹಿಂದಳಿದ ದೇಶಗಳಿಗೆ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಆ ದೇಶಗಳಲ್ಲಿ ಇರಲೇಬೇಕಾದ ಪರಿಸ್ಥಿತಿಗಳನ್ನು ಏಷಿಯಾ ಮತ್ತು ದೂರ ಪ್ರಾಚ್ಯ ದೇಶಗಳಿರುವ ವಿಶ್ವಸಂಸ್ಥೆಯ ಆರ್ಥಿಕ ಸಮಿತಿಯು ಈ ಕೆಳಗಿನಂತೆ ಪಟ್ಟಿ ಮಾಡಿದೆ.
1.ರಾಜಕೀಯ ಸ್ಥಿರತೆ ಮತ್ತು ವಿದೇಶಿ ಹಿಡಿತದಿಂದ ಮುಕ್ತವಾಗಿರುವುದು
2.ಲಾಭಗಳಿಸುವ ಸಾಕಷ್ಟು ಅವಕಾಶಗಳು
3.ರಾಷ್ಟ್ರೀಕರಣ ಮಾಡಲ್ಪಟ್ಟ ವಿದೇಶಿ ಕಂಪೆನಿಗಳಿಗೆ ಸೂಕ್ತ ಪರಿಹಾರ
4.ಮೂಲಬಂಡವಾಳ ಹೂಡಿಕೆಯಿಂದ ಬರುವ ಲಾಭ, ಬಡ್ಡಿ, ಡಿವಿಡೆಂಡ್ ಇತ್ಯಾದಿಗಳ ಪಾವತಿ
5.ವಿದೇಶಿ ತಂತ್ರಜ್ಞರ ನೇಮಕಾತಿ ಅವಕಾಶ
6.ವಿದೇಶಿಯರಿಗೆ ಯಾವುದೇ ತಾರತಮ್ಯ ಮಾಡದಿರುವುದು
7.ದ್ವಿಮುಖ ತೆರಿಗೆಯಿಂದ ವಿನಾಯತಿ
8.ವಿದೇಶಿ ಹೂಡಿಕೆದಾರರ ಜೊತೆಯಲ್ಲಿ ಸಾಮಾನ್ಯ ಭ್ರಾತೃತ್ವ, ಇತ್ಯಾದಿ
ವಿದೇಶಿ ನೆರವಿನ ಅನಾನುಕೂಲಗಳು ಅಥವಾ ದೋಷಗಳುಸಂಪಾದಿಸಿ
ವಿದೇಶಿ ನೆರವು ಕೆಲವು ಅನಾನುಕೂಲಗಳು ಅಥವಾ ದೋಷಗಳನ್ನು ಹೊಂದಿದೆ. ಅದರಲ್ಲೂ ಖಾಸಗೀ ವಿದೇಶಿ ನೆರವು ಅನೇಕ ದೋಷಗಳನ್ನು ಹೊಂದಿರುವುದು ನಮ್ಮ ಗಮನಕ್ಕೆ ಬಂದಿದೆ. ಹಿಂದಳಿದ ದೇಶಗಳಲ್ಲಿ ಮೂಲಭೂತ ಸೌಲಭ್ಯಗಳು, ತಂತ್ರಿಕ ಜ್ಞಾನ, ಉತ್ಪಾದನಾಂಗಗಳು ಮುಂತಾದವುಗಳ ಕೊರತೆ,ಮಾರುಕಟ್ಟೆಯ ಸಂಕುಚಿತ ವ್ಯವಸ್ಥ,ಅದಕ್ಷ ಆಡಳಿತ, ಶಿಕ್ಷಣದ ಹಿಂದುಳಿದಿರುವಿಕೆ, ತರಬೇತಿ ಸೌಲಭ್ಯಗಳು ಮತ್ತು ನಿಪುಣತೆಯ ಕೊರತೆಯಿಂದಾಗಿ ಈ ದೇಶಗಳ ಹೀರುವ ಸಾಮರ್ಥ್ಯ ಒಂದು ಮಿತಿಯೊಳಗಿದೆ. ವಿದೇಶಿ ಬಂಡವಾಳವು ಮುಖ್ಯವಾಗಿ ಈ ಕೆಳಗಿನ ದೋಷಗಳು ಅಥವಾ ಅನಾನುಕೂಲಗಳನ್ನು ಹೊಂದಿದೆ.
◾ರಾಜಕೀಯ ಹಸ್ತಕ್ಷೇಪ
ವಿದೇಶಿ ನೆರವು ಕೆಲವೊಮ್ಮೆ ರಾಜಕೀಯ ಹಸ್ತಕ್ಷೇಪ ಕಾರಣವಾಗಬಹುದು. ನೆರವು ನೀಡುವ ದೇಶವು ನೆರವು ಪಡೆಯುತ್ತಿರುವ ದೇಶದ ಆರ್ಥಿಕ ಮತ್ತು ರಾಜಕೀಯ ನೀತಿಗಳಲ್ಲಿ ಹಸ್ತಕ್ಷೇಪ ನಡೆಸಿ ಈ ರಾಷ್ಟ್ರಗಳ ರಾಜಕೀಯ ಸ್ಥಿತಿಯನ್ನೇ ಹದಗೆಡಿಸ ಬಹುದು . ನಿರಂತರ ಹಸ್ತಕ್ಷೇಪದಿಂದಾಗಿ ರಾಜಕೀಯ ಸ್ವಾತಂತ್ರ್ಯದ ಹರಣವಾಗ ಬಹುದು.
◾ಪ್ರಾಥಮಿಕ ವಲಯದ ಉಪೇಕ್ಷೆ ಸಾಧ್ಯತೆ
ವಿದೇಶಿ ಬಂಡವಾಳವು ಸಾಮಾನ್ಯವಾಗಿ ಹೆಚ್ಚು ಲಾಭ ಬರುವ ಸಾಧ್ಯತೆ ಇರುವ ಕೈಗಾರಿಕೆ ಮತ್ತು ಇನ್ನಿತರ ಕ್ಷೇತ್ರಗಳಿಗೆ ಹೋಗುವ ಸಾಧ್ಯತೆಗಳಿರುತ್ತದೆ. ಹಿಂದಳಿದ ದೇಶಗಳ ಪ್ರಾಥಮಿಕ ಚಟುವಟಿಕೆಯಾದ ಕೃಷಿಕ್ಷೇತ್ರ ಉಪೇಕ್ಷಗೊಳಗಾಗ ಬಹುದಾದ ಸಾಧ್ಯತೆಗಳಿರುತ್ತದೆ.
◾ಸರಿಹೊಂದದ ತಂತ್ರಜ್ಞಾನ
ವಿದೇಶಿ ನೆರವಿನ ಹೆಸರಿನಲ್ಲಿ ಹಿಂದಳಿದ ದೇಶಗಳಿಗೆ ರವಾನೆಯಾಗುವ ತಂತ್ರಜ್ಞಾನ[೧೦] ಈ ದೇಶಗಳ ಪರಿಸ್ಥಿತಿ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳ್ಳದಿರ ಬಹುದು. ಈ ದೇಶಗಳ ಅನುಭೋಗದ ಅಗತ್ಯತೆಗಳು, ಸ್ವದೇಶಿ ಮಾರುಕಟ್ಟೆಯ ಗಾತ್ರ ಮತ್ತು ಆರ್ಥಿಕ ಪ್ರಗತಿಯ ಹಂತಗಳಿಗೆ ತಂತ್ರಜ್ಞಾನ ಸರಿ ಹೊಂದದಿರಬಹುದು. ಕೆಲವೊಮ್ಮೆ ಶ್ರೀಮಂತ ದೇಶಗಳು ವಿದೇಶಿ ನೆರವಿನ ಹೆಸರಿನಲ್ಲಿ ಹಳೆಯದಾದ, ಸವೆದು ಹೋದ ಮತ್ತು ಅಪ್ರಸ್ತುತ ತಂತ್ರಜ್ಞಾನವನ್ನು ರಪ್ತು ಮಾಡಬಹುದು.
◾ಅಧಿಕ ಬಡ್ಡಿದರ
ಶ್ರೀಮಂತ ದೇಶಗಳು ಹಿಂದಳಿದ ದೇಶಗಳಿಗೆ ನೆರವನ್ನು ನೀಡುವ ಸಂದರ್ಭದಲ್ಲಿ ಅತ್ಯಧಿಕ ಬಡ್ದಿದರವನ್ನು ನಿರ್ಧರಿಸಿದರೆ, ಅದು ಈ ದೇಶಗಳಿಗೆ ಭರಿಸಲಾಗದ ಹೊರೆಯಾಗಬಹುದು. ಸಾಲದ ಹೊರೆ ಹೆಚ್ಚಿ ಈ ದೇಶಗಳ ಆರ್ಥಿಕ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿರುತ್ತದೆ.
◾ಸ್ವಾವಲಂಬನೆಗೆ ಧಕ್ಕೆ
ವಿದೇಶಿ ನೆರವು ಹಲವು ಬಾರಿ ಹಿಂದಳಿದ ದೇಶಗಳ ಸ್ವಾವಲಂಬನೆಗೆ ಧಕ್ಕೆ ತಂದೊಡ್ಡುವ ಅಪಾಯವಿದೆ. ನೆರವು ನೀಡುವ ದೇಶಗಳು ನೆರವು ನೀಡುವ ವೇಳೆಯಲ್ಲಿ ಅನೇಕ ಷರತ್ತುಗಳನ್ನು ವಿಧಿಸುತ್ತವೆ. ಇಂದರಿಂದ ಹಿಂದಳಿದ ದೇಶಗಳ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಗೆ ಧಕ್ಕೆ ಬಂದೊದಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ನೆರವು ಪಡೆಯಲು ಮುಂದಾಗುತ್ತಿರುವ ಹಿಂದಳಿದ ದೇಶಗಳು ಅನೇಕ ಬಾರಿ ಮುಂದುವರಿದ ದೇಶಗಳ ತಾಳಕ್ಕೆ ತಕ್ಕಂತೆ ಕುಣಿಯ ಬೇಕಾಗುವುದು. ವಿದೇಶಿ ನೆರವು ಬಂಧಿತ ನೆರವಿನ ರೂಪದಲ್ಲಿ ಲಭ್ಯವಿದ್ದಿದ್ದಾದರೆ ಹೆಚ್ಚಿನ ಉಪಯೋಗಗಳಿರುವುದಿಲ್ಲ. ಅದೂ ಅಲ್ಲದೆ ಹಿಂದಳಿದ ದೇಶಗಳು ಯಾವ ದೇಶದಿಂದ ನೆರವು ಪಡೆದಿರುತ್ತವೆಯೋ ಅದೇ ದೇಶಗಳ ಕರೆನ್ಸಿಯಲ್ಲಿ ಸಾಲ ಮರುಪಾವತಿಗೆ ಶ್ರಮಪಡ ಬೇಕಾಗಬಹುದು. ನೆರವಿನ ರೂಪದಲ್ಲಿ ಬರುವ ಬಂಡವಾಳಗಾರರು ಅನೀತಿಯ ಕೆಲಸಗಳಲ್ಲಿ ತೊಡಗಬಹುದು. ಹೀಗೆ ವಿದೇಶಿ ಬಂಡವಾಳ ಅನುಕೂಲ ಹಾಗೂ ಅನಾನುಕೂಲಗಳೆರಡನ್ನು ಹೊಂದಿದೆ. ಆದರೆ ಅನುಕೂಲಗಳೆಷ್ಟು ಲಭ್ಯವಿರುತ್ತವೆಂಬುದು ಆ ಸಂದರ್ಭದ ಪರಿಸ್ಥಿತಿ ಮತ್ತು ಸನ್ನಿವೇಶಗಳಿಂದ ನಿರ್ಧರಿಸಲ್ಪಡುತ್ತದೆ. ಎಷ್ಟೇ ದೋಷಗಳು ಅಥವಾ ಅನಾನುಕೂಲತೆಗಳಿದ್ದರೂ ಸಹ ವಿದೇಶಿ ಬಂಡವಾಳ ತುಂಬಾ ಮುಖ್ಯ ಹಾಗೂ ಅನಿವಾರ್ಯ.