ಗಾಂಧೀ-ಇರ್ವಿನ್ ಒಪ್ಪಂದ
ಗಾಂಧೀ-ಇರ್ವಿನ್ ಒಪ್ಪಂದ : ಭಾರತದ ವೈಸ್ರಾಯ್ ಇರ್ವಿನ್ ಮತ್ತು ಮಹಾತ್ಮ ಗಾಂಧೀ ಇವರ ನಡುವೆ 1931ರ ಮಾರ್ಚ್ 5ರಂದು ಆದ ಒಪ್ಪಂದ. ಆಧುನಿಕ ಭಾರತದ ಇತಿಹಾಸದಲ್ಲಿ ಇದು ಒಂದು ಮುಖ್ಯ ಘಟನೆ. ಬ್ರಿಟಿಷ್ ಸಾಮ್ರಾಜ್ಯದ ಪ್ರತಿನಿಧಿ ವೈಸ್ರಾಯಿಗೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ರಾಷ್ಟ್ರೀಯ ಕಾಂಗ್ರೆಸಿನ ನೇತಾರರಾದ ಗಾಂಧಿಯವರಿಗೂ ಪ್ರಥಮ ಬಾರಿಗೆ ಸಮಾನ ಅಂತಸ್ತಿನಲ್ಲಿ ವಿಚಾರವಿನಿಮಯ ನಡೆದು ಅದು ಈ ಒಪ್ಪಂದದಲ್ಲಿ ಪರ್ಯವಸಾನ ವಾಯಿತು. ಇದರಿಂದ ಕಾಂಗ್ರೆಸಿಗೆ ಪ್ರಾಮುಖ್ಯ ಅಧಿಕವಾಗಿ ಅದರ ಕೀರ್ತಿಯೂ ಹೆಚ್ಚಿತು. ದುಂಡುಮೇಜಿನ ಪರಿಷತ್ತಿನ ಎರಡನೆಯ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸಲು ಅವಕಾಶವಾಯಿತು.
1930ರ ಏಪ್ರಿಲ್ 6ರಂದು ಗಾಂಧಿಯವರು ಆರಂಭಿಸಿದ ಕಾನೂನು ಭಂಗ ಚಳವಳಿಯ ಪ್ರತಿಭಟನೆಯನ್ನು ಹತ್ತಿಕ್ಕಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿತ್ತು. ಭಾರತೀಯ ಜನರ ಮೇಲೆ ಕಾಂಗ್ರೆಸ್ ಹೊಂದಿದ್ದ ಪ್ರಭಾವವನ್ನು ಸರ್ಕಾರ ಸರಿಯಾಗಿ ಅರಿತಿರಲಿಲ್ಲ. ಕಾಂಗ್ರೆಸಿನಷ್ಟು ಪ್ರಭಾವಶಾಲಿಯಲ್ಲದ, ಪ್ರತಿಗಾಮಿಯಾಗಿದ್ದ ಹಲವಾರು ಸಣ್ಣಪುಟ್ಟ ಪಕ್ಷಗಳಿಗೆ ಅದು ವಿಶೇಷವಾಗಿ ಉತ್ತೇಜನ ನೀಡಲು ಯತ್ನಿಸಿತು. ಸರ್ಕಾರದ ದಮನನೀತಿಯಿಂದ ಸ್ವಾತಂತ್ರ್ಯ ಹೋರಾಟ ಇನ್ನೂ ಬಿರುಸಾಯಿತು. ಭಾರತದ ರಾಜಕೀಯ ಭವಿಷ್ಯದ ಬಗ್ಗೆ ಸಮಾಲೋಚಿಸಲು 1930ರ ನವೆಂಬರಿನಲ್ಲಿ ಸಮಾವೇಶಗೊಂಡಿದ್ದ ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೆಸ್ ಪ್ರತಿನಿಧಿ ಯಾರೂ ಇರಲಿಲ್ಲ. ಕಾಂಗ್ರೆಸ್ ಇಲ್ಲದ ಯಾವ ಸಮಾಲೋಚನೆಯೂ ಫಲಪ್ರದವಾಗುವಂತಿರಲಿಲ್ಲ. ಪರಿಷತ್ತಿನ ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸುವುದೆಂಬುದು ಬ್ರಿಟಿಷ್ ಪ್ರಧಾನಿಯ ಆಶಯವಾಗಿತ್ತು. 1931ರ ಫೆಬ್ರವರಿ 17ರಂದು ಗಾಂಧೀ ಇರ್ವಿನರ ನಡುವೆ ಮಾತುಕತೆಗಳು ಆರಂಭವಾದುವು. ಮಾರ್ಚ್ 5ರಂದು ಒಪ್ಪಂದಕ್ಕೆ ಸಹಿಯಾಯಿತು.
ಇರ್ವಿನರ ಅಭಿಲಾಷೆಗಳು ಪ್ರಾಮಾಣಿಕವಾಗಿವೆಯೆಂದು ಗಾಂಧಿಯವರಿಗೆ ಖಚಿತವಾಗಿತ್ತು. ಲಿಬರಲ್ ಪಕ್ಷದ ನಾಯಕರಾದ ತೇಜ್ಬಹದ್ದೂರ್ ಸಪ್ರು, ಎಂ.ಆರ್. ಜಯಕರ್, ವಿ. ಎಸ್. ಶ್ರೀನಿವಾಸ ಶಾಸ್ತ್ರಿ ಇವರು ಸಂಧಾನ ಫಲಪ್ರದವಾಗಲು ಪ್ರಮುಖ ಪಾತ್ರ ವಹಿಸಿದ್ದರು.
ಒಪ್ಪಂದದ ಮುಖ್ಯಾಂಶಗಳಿವು : ದಬ್ಬಾಳಿಕೆಯ ಸುಗ್ರೀವಾಜ್ಞೆಗಳನ್ನೂ ಇತ್ಯರ್ಥವಾಗದ ಆಪಾದನೆಗಳನ್ನೂ ಹಿಂತೆಗೆದುಕೊಳ್ಳಲೂ ಹಿಂಸೆಯಲ್ಲಿ ತೊಡಗಿದ್ದವರನ್ನು ಬಿಟ್ಟು ಉಳಿದ ಎಲ್ಲ ರಾಜಕೀಯ ಸೆರೆಯಾಳುಗಳ ಬಿಡುಗಡೆ ಮಾಡಲೂ ಸತ್ಯಾಗ್ರಹದಲ್ಲಿ ಭಾಗವಹಿಸಿ ಆಸ್ತಿ ಕಳೆದುಕೊಂಡಿದ್ದವರಿಗೆ ಅದನ್ನು ಹಿಂದಿರುಗಿಸಲೂ ಮದ್ಯ ಮತ್ತು ವಿದೇಶಿ ಬಟ್ಟೆ ಅಂಗಡಿಗಳ ಮುಂದೆ ಶಾಂತಿಯುತ ನಿರೋಧಕಾರ್ಯ ನಡೆಸುವುದಕ್ಕೆ ಮತ್ತು ಸಮುದ್ರತೀರದಿಂದ ನಿಯಮಿತ ದೂರದಲ್ಲಿ ವಾಸಿಸುವ ಜನ ತೆರಿಗೆಯಿಲ್ಲದೆ ಉಪ್ಪು ತಯಾರಿಸುವುದಕ್ಕೆ ಅವಕಾಶ ಕೊಡಲೂ ಸರ್ಕಾರದ ಪರವಾಗಿ ಇರ್ವಿನ್ ಒಪ್ಪಿಕೊಂಡ. ಪೋಲಿಸ್ ದೌರ್ಜನ್ಯ ಕುರಿತು ವಿಚಾರಣೆಗೆ ಒತ್ತಾಯಿಸದಿರಲೂ ಕಾನೂನುಭಂಗ ಚಳವಳಿ ನಿಲ್ಲಿಸಲೂ ಜವಾಬ್ದಾರಿ ಸರ್ಕಾರ ಸ್ಥಾಪನೆ ಮತ್ತು ಭಾರತ ಹಿತರಕ್ಷಣೆಯ ಆಧಾರದ ಮೇಲೆ ದುಂಡುಮೇಜಿನ ಪರಿಷತ್ತಿನ ಎರಡನೆಯ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸಲೂ ಬಹಿಷ್ಕಾರವನ್ನೆಲ್ಲ ನಿಲ್ಲಿಸಲೂ ಗಾಂಧಿಯವರು ಕಾಂಗ್ರೆಸಿನ ಪರವಾಗಿ ಸಮ್ಮತಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ