ಭಾನುವಾರ, ನವೆಂಬರ್ 25, 2018

ಬಡವರಿಗೆ ಬದುಕು ತುಟ್ಟಿ; ಸಾವು ಇನ್ನೂ ತುಟ್ಟಿ! ಪ್ರಜಾವಾಣಿ ವಾರ್ತೆ

ಬಡವರಿಗೆ ಬದುಕು ತುಟ್ಟಿ; ಸಾವು ಇನ್ನೂ ತುಟ್ಟಿ!
ಪ್ರಜಾವಾಣಿ ವಾರ್ತೆ
Published: 15 ಮೇ 2011, 01:00 IST
Updated: 15 ಮೇ 2011, 01:00 IST

 

ಹದಿನಾಲ್ಕು ವರ್ಷದ ಹನುಮಂತಪ್ಪ ಎಂಬ ಹುಡುಗನನ್ನು ಕೆಲವು ವಾರಗಳ ಹಿಂದೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಯಿತು. ಕೊಪ್ಪಳದ ಬಡರೈತ ಮುನಿಯಪ್ಪನವರ ಮಗ ಈ ಹನುಮಂತಪ್ಪ.

ಕಳೆದ ಐದು ವರ್ಷಗಳಿಂದ ಹನುಮಂತಪ್ಪ ಹೃದ್ರೋಗದಿಂದ ಬಳಲುತ್ತಿದ್ದ. ಮಗನಿಗೆ ಚಿಕಿತ್ಸೆ ಕೊಡಿಸಲು ಅಗತ್ಯವಿದ್ದ ಹಣ ಹೊಂದಿಸಲು ಮುನಿಯಪ್ಪನವರಿಗೆ ಅಷ್ಟೇ ವರ್ಷಗಳು ಬೇಕಾದವು. ಇದ್ದ ಕೆಲವೇ ಗುಂಟೆ ಜಮೀನನ್ನು ಮಾರಿ ಅವರು ಹಣ ಹೊಂದಿಸಿಕೊಂಡು ಮಗನನ್ನು ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ ಕರೆತಂದರು. ಆದರೆ, ‘ಹೃದ್ರೋಗ ಶಸ್ತ್ರಚಿಕಿತ್ಸೆಯಿಂದ ರೋಗ ಗುಣವಾಗುವ ಸ್ಥಿತಿ ಮೀರಿದೆ’ ಎಂದ ವೈದ್ಯರು, ‘ಹುಡುಗ ಇನ್ನು ಕೆಲವೇ ದಿನ ಬದುಕಿರುತ್ತಾನೆ’ ಎಂದು ಹೇಳಿದರು. ಆಗ ಹನುಮಂತಪ್ಪ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನಾನು ಕೆಲಸ ಮಾಡುತ್ತಿದ್ದ ಘಟಕಕ್ಕೆ ಬಂದ. ಅಲ್ಲಿ ಅಪ್ಪ-ಮಗ ನಮ್ಮೊಟ್ಟಿಗೆ ಮೂರು ವಾರ ಇದ್ದರು.

ಮುನಿಯಪ್ಪ ಪತ್ನಿಯನ್ನು ಕಳೆದುಕೊಂಡಿದ್ದರೂ ಮತ್ತೊಂದು ಮದುವೆ ಆಗಿರಲಿಲ್ಲ. ಗೋಣಿಚೀಲದಲ್ಲಿ ಒಂದಿಷ್ಟು ರಾಗಿ, ಸ್ವಲ್ಪ ಸೀಮೆಎಣ್ಣೆ, ಒಂದು ಸ್ಟವ್ ಮತ್ತಿತರ ವಸ್ತುಗಳನ್ನು ತಂದಿದ್ದರು. ಅವರು ಆಸ್ಪತ್ರೆಯಲ್ಲಿ ಇರುವ ಅಷ್ಟೂ ದಿನ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಮಗನಿಗೆ ಆಸ್ಪತ್ರೆಯವರೇ ಊಟ ಕೊಡುತ್ತಿದ್ದರಿಂದ ಸಮಸ್ಯೆ ಇರಲಿಲ್ಲ. ಮಗನ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲಾ ಪರೀಕ್ಷೆಗಳನ್ನು ಮಾಡಿಸಲು ಮುನಿಯಪ್ಪ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರು. ಸೊಂಟಕ್ಕೆ ಸುತ್ತಿಕೊಂಡಿದ್ದ ಪಟ್ಟಿಯಲ್ಲಿ ತಾವು ಕಷ್ಟಪಟ್ಟು ಹೊಂದಿಸಿದ ಹಣ ಇಟ್ಟುಕೊಂಡಿರುತ್ತಿದ್ದರು. ಬರಬರುತ್ತಾ ಹಣ ಕರಗಿತು. ಅವರು ತಂದಿದ್ದ ಗೋಣಿಚೀಲದ ವಸ್ತುಗಳೂ ಖಾಲಿಯಾಗತೊಡಗಿದವು. ಮಗ ಗುಣಮುಖನಾಗುವ ಭರವಸೆಯಂತೂ ಸಿಗಲಿಲ್ಲ.

ಪ್ರತಿ ಬೆಳಗ್ಗೆ ವೈದ್ಯರು ಭೇಟಿ ನೀಡುವ ಹೊತ್ತಿಗೆ ಸರಿಯಾಗಿ ತೀವ್ರ ನಿಗಾ ಘಟಕದಲ್ಲಿದ್ದ ತಮ್ಮ ಮಗನಿಗೆ ಮುನಿಯಪ್ಪ ಹಲ್ಲುತಿಕ್ಕಿ, ಸ್ನಾನ ಮಾಡಿಸುತ್ತಿದ್ದರು. ಹಿಂದಿನ ದಿನ ಒಗೆದು ಆಸ್ಪತ್ರೆಯ ಆವರಣದಲ್ಲೇ ಒಣಗಿಸಿದ, ಮುದುರಿದ ಬಟ್ಟೆ ತೊಡಿಸುತ್ತಿದ್ದರು.

ಆ ಅಪ್ಪ-ಮಗನ ನಡುವೆ ಇದ್ದ ಅವ್ಯಾಜ ಪ್ರೀತಿಯನ್ನು ನಾನು ಬದುಕಿರುವವರೆಗೆ ಮರೆಯಲಾರೆ. ಅವರಿಬ್ಬರ ನಡುವಿನ ವಾತ್ಸಲ್ಯದ ಚಿತ್ರಗಳು ನನ್ನ ಮನದಲ್ಲಿ ಅಚ್ಚೊತ್ತಿವೆ. ಒಬ್ಬನೇ ಮಗನನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಅಪ್ಪ ಪಡುತ್ತಿದ್ದ ಪಡಿಪಾಟಲನ್ನು ನೆನೆಸಿಕೊಂಡರೆ ನನ್ನ ಕಣ್ಣು ಈಗಲೂ ತುಂಬಿಕೊಳ್ಳುತ್ತದೆ. ಮುನಿಯಪ್ಪ ಮಗನ ಔಷಧಕ್ಕೆ ಮಾತ್ರ ಹಣ ಖರ್ಚು ಮಾಡುತ್ತಿದ್ದರೇ ಹೊರತು ಮಿಕ್ಕ ಯಾವುದಕ್ಕೂ ಅಲ್ಲ. ಇದ್ದ ಅಷ್ಟೂ ಹಣ ಮಗನ ಚಿಕಿತ್ಸೆಗಷ್ಟೇ ಉಪಯೋಗವಾಗಬೇಕು ಎಂಬ ಕಾಳಜಿ ಅವರದು.

ಹುಡುಗನ ಕಾಯಿಲೆಯಲ್ಲಿ ಏರಿಳಿತ ಇದ್ದೇಇತ್ತು. ಸ್ಥಿತಿ ಗಂಭೀರವಾದಾಗ ಹಾಸಿಗೆಯ ಪಕ್ಕದಲ್ಲಿ ನಿಂತು ಅಪ್ಪ ಸ್ತಂಭೀಭೂತರಾಗುತ್ತಿದ್ದರು. ಆ ನೋವಿನಲ್ಲೂ ಮಗ ನಗುಮೊಗದಿಂದಲೇ ಅಪ್ಪನಿಗೆ ಧೈರ್ಯ ತುಂಬುತ್ತಿದ್ದ. ತಾನೇ ಓಡಾಡುವ ಸ್ಥಿತಿಯಲ್ಲಿ ಇರುವಾಗಲೂ ಮಗನನ್ನು ಅಪ್ಪ ಶೌಚಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಅಕಸ್ಮಾತ್ತಾಗಿ ಅವನಿಗೇನಾದರೂ ಆದರೆ ಎಂಬ ಆತಂಕ ಅವರದು. ಏಳಲು ಆಗದ ಸ್ಥಿತಿಯಲ್ಲಿ ಅವನಿದ್ದಾಗ ಹಾಸಿಗೆಯ ಪಕ್ಕದಲ್ಲೇ ನಿಂತು, ಅಗತ್ಯವಿದ್ದಾಗ ತಾವೇ ಬೆಡ್‌ಪ್ಯಾನ್ ಇಡುತ್ತಿದ್ದರು. ಒಮ್ಮೆಯೂ ಮುನಿಯಪ್ಪ ಗೊಣಗಿದ್ದನ್ನಾಗಲೀ, ಬೇಸರ ಪಟ್ಟುಕೊಂಡಿದ್ದನ್ನಾಗಲೀ ನಾನು ನೋಡಲಿಲ್ಲ. ಬಂದದ್ದೆಲ್ಲವನ್ನೂ ಒಬ್ಬರೇ ಎದುರಿಸಿದರು.

ಹನುಮಂತಪ್ಪ ಕೊನೆಯುಸಿರೆಳೆದ ಕ್ಷಣಕ್ಕೆ ಸಾಕ್ಷಿಯಾದದ್ದು ನನ್ನ ದುರದೃಷ್ಟ. ತೀವ್ರ ನಿಗಾ ಘಟಕಕ್ಕೆ ಮುನಿಯಪ್ಪನವರನ್ನು ಕರೆದು, ಮಗ ಕೊನೆಯುಸಿರೆಳೆದ ವಿಷಯವನ್ನು ತಿಳಿಸಿದೆವು. ಅವರು ಅಳಲಿಲ್ಲ. ಅತ್ತಿದ್ದರೆ ಚೆನ್ನಾಗಿತ್ತು. ಮಾತೇ ಆಡಲಿಲ್ಲ. ಅಲ್ಲಿದ್ದ, ಅರ್ಧ ಕರಗಿದ್ದ ಗೋಣಿಚೀಲ ಎತ್ತಿಕೊಂಡರು. ಸೊಂಟದ ಪಟ್ಟಿಯಲ್ಲಿ ನೂರರ ಕೆಲವೇ ನೋಟುಗಳಿದ್ದವು.

ಮುನಿಯಪ್ಪ ಅಲ್ಲಿಂದ ಕಾಣೆಯಾದರು. ಎರಡು ತಾಸಾದರೂ ಬರಲಿಲ್ಲ. ಆಸ್ಪತ್ರೆಯ ನಿಯಮದ ಪ್ರಕಾರ ಮೂರು ತಾಸಿಗಿಂತ ಹೆಚ್ಚು ಹೊತ್ತು ಶವವನ್ನು ಇಟ್ಟುಕೊಳ್ಳುವಂತಿಲ್ಲ. ಹುಡುಗನ ಶವಕ್ಕೆ ಅನಾಥಶವದ ಪಟ್ಟಿ ಹಚ್ಚುವ ಯೋಚನೆಯೂ ನಡೆಯಿತು. ಅಷ್ಟರಲ್ಲಿ ದೊಡ್ಡದೊಂದು ಟ್ರಂಕ್ ಹೊತ್ತುಕೊಂಡು ಮುನಿಯಪ್ಪ ಬಂದರು.

ನಮ್ಮ ನೆರವಿನಿಂದ ಮಗನ ಶವವನ್ನು ಅದರಲ್ಲಿಟ್ಟುಕೊಂಡರು. ಶವವನ್ನು ಹಾಗೆ ಕಷ್ಟಪಟ್ಟು ಟ್ರಂಕಿನಲ್ಲಿ ಇರಿಸುವುದನ್ನು ಕಂಡು ನಾನು ದಂಗಾದೆ. ‘ಯಾಕೆ ಹೀಗೆ ಮಾಡುತ್ತಿದ್ದೀರಿ?’ ಎಂದು ಕೇಳಿದೆ. ಆಗ ಸಿಕ್ಕ ಉತ್ತರ ಇನ್ನೂ ದಂಗುಬಡಿಸಿತು.

ಮಗನನ್ನು ಕೊಪ್ಪಳದ ತಮ್ಮ ಜಾಗದಲ್ಲೇ ಮಣ್ಣು ಮಾಡುವುದು ಮುನಿಯಪ್ಪನವರ ಬಯಕೆಯಾಗಿತ್ತು. ಅದಕ್ಕಾಗಿ ಟ್ಯಾಕ್ಸಿ ವಿಚಾರಿಸಿದ್ದಾರೆ. ಟ್ಯಾಕ್ಸಿಯವರು ಮೂರೂವರೆಯಿಂದ ನಾಲ್ಕು ಸಾವಿರ ರೂಪಾಯಿ ಕೇಳಿದರಂತೆ. ಅವರು ತಮ್ಮ ಕೆಲವೇ ಗುಂಟೆಗಳ ಜಮೀನು ಮಾರಿದಾಗ ಬಂದ ಹಣ ಕೂಡ ಅಷ್ಟಿರಲಿಲ್ಲವಂತೆ. ಟ್ಯಾಕ್ಸಿಗೆ ಹಣ ಹೊಂದಿಸಲಾಗದ ಕಾರಣ, ಅವರು ನಾಲ್ಕುನೂರು ರೂಪಾಯಿ ಕೊಟ್ಟು ಟ್ರಂಕು ಖರೀದಿಸಿ ತಂದಿದ್ದರು. ಅದರಲ್ಲಿ ಮಗನ ಶವವನ್ನು ಊರಿಗೆ ಸಾಗಿಸುವುದು ಅವರ ಉದ್ದೇಶವಾಗಿತ್ತು.

ಟ್ರಂಕನ್ನು ತಲೆಮೇಲೆ ಇಡುವಂತೆ ಕೇಳಿದ ಮುನಿಯಪ್ಪನವರು ಅದನ್ನು ಕೆಎಸ್ಸಾರ್ಟಿಸಿ ಬಸ್‌ಸ್ಟ್ಯಾಂಡಿನವರೆಗೆ ಹೊತ್ತುಕೊಂಡೇ ಹೋದರು. ಅಲ್ಲಿಂದ ಬಸ್ಸಿನಲ್ಲಿ ಕೊಪ್ಪಳಕ್ಕೆ.

ಈ ಅಪ್ಪ-ಮಗ ನಾನು ಕಂಡ ಅದ್ಭುತ ವ್ಯಕ್ತಿತ್ವಗಳು. ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಅಂಥವರ ಪಾಲಿಗೆ ಬದುಕಿಗಿಂತ ಸಾವೇ ದುಬಾರಿ.

ಬಡವರಾದರೂ ಮುನಿಯಪ್ಪ ದುಃಖಿಸಲಿಲ್ಲ. ದೃಢ ಸಂಕಲ್ಪ ಮಾಡಿ ತಮ್ಮೂರಿಗೆ ಮಗನ ಶವ ಸಾಗಿಸಿ, ಅಂತಿಮ ಸಂಸ್ಕಾರ ಮಾಡಿದರು.

ಅನೇಕ ದಿನಗಳಾದರೂ ಮುನಿಯಪ್ಪ ಟ್ರಂಕ್ ಎತ್ತಿಕೊಂಡು ಹೋದ ಚಿತ್ರ ನನ್ನ ಮನಸ್ಸನ್ನು ಕಾಡುತ್ತಲೇ ಇದೆ. ಮೊನ್ನೆ ಕೆಎಸ್ಸಾರ್ಟಿಸಿಗೆ ಫೋನ್ ಮಾಡಿ, ಬಸ್‌ನಲ್ಲಿ ಪೆಟ್ಟಿಗೆಯ ಮೂಲ ಶವ ಸಾಗಿಸಲು ಅನುಮತಿ ಇದೆಯೇ ಎಂದು ಕೇಳಿದೆ. ಅದಕ್ಕೆ ಅಲ್ಲಿನ ಸಿಬ್ಬಂದಿ ಇಲ್ಲವೆಂದರು. ಮುನಿಯಪ್ಪ ಮಗನ ಶವವನ್ನು ಬಸ್ಸಿನಲ್ಲೇ ಸಾಗಿಸಿದ ವಿಚಾರವನ್ನು ಅವರಿಗೆ ಹೇಳಲಿಲ್ಲ. ಮುನಿಯಪ್ಪ ಹೇಗೋ ಮಗನ ಶವವನ್ನು ಕೆಎಸ್ಸಾರ್ಟಿಸಿ ಬಸ್ಸಿನಲ್ಲೇ ಸಾಗಿಸಿದ್ದಾರೆಂದು ನಾನು ಭಾವಿಸಿದ್ದೇನೆ.

ನಮಗೆ ಸ್ವಾತಂತ್ರ್ಯ ಬಂದು 62 ವರ್ಷಗಳಾಗಿವೆ. ಈಗಲೂ ಬಡವರಿಗೆ ನೆರವಾಗದ ಇಂಥ ನಿಯಮಗಳು ಇವೆ ಎಂಬುದೇ ದುರಂತ. ಮತ ಚಲಾಯಿಸುವಾಗ ಬೇಕಾಗುವ ಬಡವರು, ಬದುಕಿನಂತೆಯೇ ಸಾವಿನಲ್ಲೂ ಅನುಭವಿಸುವ ಯಾತನೆ ಬಣ್ಣಿಸಲು ಆಗದಂಥದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ