ಒಳ ಮೀಸಲಾತಿಯ ಒಳಸುಳಿಗಳು!
‘‘ಪರಿಶಿಷ್ಟ ಜಾತಿಗಳು ಏಕರೂಪ (homogenious) ಜಾತಿಗಳ ಸಮೂಹದಿಂದ ರೂಪುಗೊಂಡಿವೆ. ಆದುದರಿಂದ, ಅವುಗಳನ್ನು ಯಾವುದೇ ರೀತಿಯಲ್ಲಿ ಒಳ ವರ್ಗೀಕರಣಕ್ಕೆ ಒಳಪಡಿಸಿದಲ್ಲಿ, ಅದು ಸಂವಿಧಾನದ ವಿಧಿ14ರ ಉಲ್ಲಂಘನೆ.’’ ಎಂಬ ಈ ಉಕ್ತಿಗಳು ಆಂಧ್ರಪ್ರದೇಶ ಸರಕಾರ ಪರಿಶಿಷ್ಟ ಜಾತಿಗಳನ್ನು ಒಳ ವರ್ಗೀಕರಿಸಿ(ಒಳ ಮೀಸಲಾತಿ)ನೀಡಲಾಗಿದ್ದ ಮೀಸಲಾತಿಯನ್ನು ಪ್ರಶ್ನಿಸಿದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠ 2004ರಲ್ಲಿ (ಈ. ವಿ. ಚಿನ್ನಯ್ಯ vs ಆಂಧ್ರಪ್ರದೇಶ, ಎಐಆರ್ 2005 ಎಸ್‌ಸಿ 162)ನೀಡಿರುವ ತೀರ್ಪಿನಲ್ಲಿ ಉಲ್ಲೇಖವಾಗಿವೆ.
ಆಂಧ್ರಪ್ರದೇಶ ಸರಕಾರ ವರದಿ ಪಡೆದ ಕೆಲವಾರು ದಿನಗಳಲ್ಲೇ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಿ ಆದೇಶವನ್ನೇನೋ ಹೊರಡಿಸುತ್ತದೆ. ಆದರೆ, ಉಚ್ಚ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಿದ ಪ್ರಯುಕ್ತ, ನ್ಯಾಯಾಲಯ ಒಳ ಮೀಸಲಾತಿಯ ಆದೇಶವನ್ನು ಜಾರಿಗೆ ಕೊಡುವ ಮುನ್ನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದೊಡನೆ ಸಮಾಲೋಚಿಸಿರುವುದಿಲ್ಲ ಎಂದು ಆದೇಶವನ್ನು ರದ್ದು ಗೊಳಿಸುತ್ತದೆ. ಸರಕಾರ ಈ ಮಧ್ಯೆ ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಂದ (ಕೆ.ಆರ್. ನಾರಾಯಣನ್) ಸುಗ್ರೀವಾಜ್ಞೆಯೊಂದಕ್ಕೆ ಒಪ್ಪಿಗೆ ಪಡೆದುಕೊಳ್ಳುತ್ತದೆ. ಅದನ್ನೂ ‘ಮಾಲಾ ಮಹಾನಾಡು’ ಎಂಬ ಒಳ ಮೀಸಲಾತಿ ವಿರೋಧಿ ಸಂಸ್ಥೆಯೊಂದು ಸುಗ್ರೀವಾಜ್ಞೆ ಸಂವಿಧಾನದ ವಿಧಿಗಳಾದ 15(4), 16(4), 162, 246, 341(1), 338(7), 46, 335 ಮತ್ತು 213ರ ಉಲ್ಲಂಘನೆ ಎಂದು ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯದಲ್ಲಿ ರಿಟ್ ದಾಖಲಿಸುತ್ತದೆ. ಈ ನಡುವೆ ಸರಕಾರ, ರಿಟ್ ವಿಚಾರಣೆಗೆ ಬಾಕಿ ಇರುವಾಗಲೇ, ಕಾಯ್ದೆಯೊಂದನ್ನು (ANDRA PRADESH SCHEDULED CASTES, rationalization of reservation, ACT 2000) ಜಾರಿಗೆ ತರುತ್ತದೆ. ಉಚ್ಚ ನ್ಯಾಯಲಯದಲ್ಲಿ ಅದೂ ಪ್ರಶ್ನಿತವಾಗುತ್ತದೆ. ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯದ ಪಂಚ ಸದಸ್ಯರ ನ್ಯಾಯಪೀಠ ‘ಮಾಲಾ ಮಹಾನಾಡು’ ಸಂಸ್ಥೆ ಸಲ್ಲಿಸಿದ್ದ ರಿಟ್‌ಅನ್ನು ವಜಾಗೊಳಿಸಿ ಆದೇಶ ನೀಡುತ್ತದೆ.
ನ್ಯಾ. ಸಂತೋಷ್ ಹೆಗ್ಡೆ ಅವರ ನೇತೃತ್ವದ ಐವರು ನ್ಯಾಯಾಧೀಶರ ಪೀಠ ನವೆಂಬರ್ 2004ರ ತೀರ್ಪಿನಲ್ಲಿ ಈ ಲೇಖನದ ಪ್ರಾರಂಭದಲ್ಲಿ ಹೇಳಿರುವ ಉಕ್ತಿಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಆಂಧ್ರಪ್ರದೇಶ ಸರಕಾರ ಪರಿಶಿಷ್ಟ ಜಾತಿಗಳನ್ನು ಒಳವರ್ಗೀಕರಿಸಿ ನೀಡಿರುವ ಮೀಸಲಾತಿ ಅಸಿಂಧು ಎಂದು ಘೋಷಿಸಿ, ವಿಶೇಷ ಮೇಲ್ಮನವಿಯನ್ನು ಪುರಸ್ಕರಿಸುತ್ತದೆ. 1992ರಲ್ಲಿ ಸರ್ವೋಚ್ಚ ನ್ಯಾಯಾಲಯದ ನವ ನ್ಯಾಯಮೂರ್ತಿಗಳ ಪೀಠ, ಇಂದ್ರಾ ಸಹಾನಿ ಪ್ರಕರಣದ ತೀರ್ಪಿನಲ್ಲಿ ಹೇಳಿರುವ ಕೆಲ ಅಂಶಗಳನ್ನು ಪರಿಗಣಿಸಿ, ಪರಿಶಿಷ್ಟ ಜಾತಿಗಳನ್ನು ಒಳವರ್ಗೀಕರಿಸಿ ಪ್ರತ್ಯೇಕ ಮೀಸಲಾತಿ ನೀಡಲು ಅವಕಾಶ ಇಲ್ಲ ಎಂದು, 2004 ರ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಹೇಳಿದೆ.
ಪರಿಸ್ಥಿತಿ ಹೀಗಿದ್ದಾಗ್ಯೂ, ಇತ್ತ ಕರ್ನಾಟಕದಲ್ಲಿ, ಒಳ ಮೀಸಲಾತಿಗಾಗಿ ಮಾದಿಗ ಸಮುದಾಯದವರ ಹೋರಾಟ ತಾರಕಕ್ಕೆ ಏರಿತ್ತು. ಹೋರಾಟದ ಬೇಗೆಯನ್ನು ತಣಿಸುವ ದಿಸೆಯಲ್ಲಿ ಅಂದಿನ ಮುಖ್ಯಮಂತ್ರಿ ಎನ್.ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಮತ್ತು ಜನತಾದಳದ ಸಮ್ಮಿಶ್ರ ಸರಕಾರ ಕಾರ್ಯಮಗ್ನವಾಯಿತು. ಸರಕಾರ ಸೆಪ್ಟ್ಟಂಬರ್ 2005ರಲ್ಲಿ, ನ್ಯಾ. ಎ.ಜೆ. ಸದಾಶಿವ ಅವರ ಏಕ ವ್ಯಕ್ತಿ ಆಯೋಗವನ್ನು ರಚಿಸುತ್ತದೆ. ಆಯೋಗ 6 ವರ್ಷಗಳಿಗೂ ಹೆಚ್ಚು ಕಾಲ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡು, 20.54 ಲಕ್ಷ ಕುಟುಂಬಗಳನ್ನು ಮುಖಾಬಿಲೆ ಮಾಡಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಸಂಗ್ರಹಿಸುತ್ತದೆ. ಒಟ್ಟು ಪರಿಶಿಷ್ಟ ಜಾತಿಗಳಲ್ಲಿ ಎಡಗೈ ಶೇ. 33.47, ಬಲಗೈ ಶೇ. 32, ಸ್ಪೃಶ್ಯ ಶೇ. 23.4 ಮತ್ತು ಇತರರು ಶೇ. 4.65ರಷ್ಟಿದ್ದಾರೆ ಎಂದು ವರದಿಯಲ್ಲಿ ಹೇಳಿದೆ ಎಂದು ಪತ್ರಿಕಾ ಮಾಧ್ಯಮಗಳು ವರದಿ ಮಾಡಿವೆ.
ಸಂಗ್ರಹಿಸಿದ ದತ್ತಾಂಶಗಳನ್ನು ಮಾನದಂಡವಾಗಿ ಇರಿಸಿಕೊಂಡು, ಪರಿಶಿಷ್ಟ ಜಾತಿಗಳನ್ನು(101ಜಾತಿ) 1.ಎಡಗೈ(ಮಾದಿಗ, ಮೋಚಿ, ಅಸಾದರು, ಸಮಗಾರ್, ಮಾದರ್, ಚಮ್ಮಾರ್, ಹರಳಯ್ಯ ಮುಂತಾದವು) 2.ಬಲಗೈ (ಚಲವಾದಿ, ಚನ್ನಯ್ಯ, ಹೊಲೆಯ ಮುಂತಾದವು) 3.ಸ್ಪೃಶ್ಯ (ಬಂಜಾರ, ಲಂಬಾಣಿ, ಭೋವಿ, ವಡ್ಡರ್, ಕೊರಚ, ಕೊರಮ, ಕೊರವರ್ ಮುಂತಾದವು)ಹಾಗೂ 4.ಇತರರು(ಆಗೇರ್, ಘಂಟಿ ಚೋರ್, ಹಂದಿಜೋಗಿ, ಕೂಸ, ಮೊಗರ್, ಬೇಡ ಜಂಗಮ, ಬುಡಗ ಜಂಗಮ ಮುಂತಾದವು)ಎಂಬಂತೆ 4 ಭಾಗಗಳಾಗಿ ವಿಂಗಡಣೆ ಮಾಡಿ, ಕ್ರಮವಾಗಿ ಶೇ. 6, 5, 3 ಮತ್ತು 1ರಷ್ಟು ಕೋಟ ನಿಗದಿ ಮಾಡಿ ವರದಿಯನ್ನು ಆಯೋಗ ಜೂನ್ 2012ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡರಿಗೆ ಸಲ್ಲಿಸುತ್ತದೆ.ಮುಂದುವರಿದು ಸಂಸತ್ತಿನಲ್ಲಿ ಮಂಡಿಸಲು ಸಾಧ್ಯವಾಗುವಂತೆ ವರದಿಯನ್ನು ಒಕ್ಕೂಟ ಸರಕಾರಕ್ಕೆ ಸಲ್ಲಿಸಬೇಕೆಂದೂ ಮನವಿ ಮಾಡಿರುತ್ತದೆ.
ಸದಾನಂದ ಗೌಡರೇ ಆಗಲಿ ಅಥವಾ ಆನಂತರ ಬಂದ ಜಗದೀಶ್ ಶೆಟ್ಟರೇ ಆಗಲಿ ವರದಿ ಬಗ್ಗೆ ಯಾವುದೇ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಾರೆ. 2013 ಮತ್ತು 2018ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದು ಮತ್ತಿಬ್ಬರು ಮುಖ್ಯಮಂತ್ರಿಗಳು ಅಧಿಕಾರದ ಗದ್ದುಗೆ ಏರಿದರೂ, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಹಿಂಜರಿಕೆಗೆ ಇದ್ದ ಕಾರಣ ವರದಿಯ ಪರ-ವಿರೋಧಿ ಬಣಗಳ ನಡುವಿನ ಸಂಘರ್ಷ! ಈ ಮಧ್ಯೆ ತೆರೆಮರೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹಂಬಲಿಸುತ್ತಿದ್ದ ಯಡಿಯೂರಪ್ಪ, ಅಧಿಕಾರ ಸಿಕ್ಕ 24 ಗಂಟೆಗಳಲ್ಲಿ ವರದಿ ಜಾರಿಗೆ ಕ್ರಮ ಕೈಗೊಳ್ಳುವೆ ಎಂದು ಆರಂಭ ಶೂರತ್ವದ ಮಾತುಗಳನ್ನೂ ಆಡಿದ್ದರು. ಆದರೆ, ಅಧಿಕಾರ ಗಳಿಸಿದ ನಂತರ ಯಾವ ಕ್ರಮಕ್ಕೂ ಮುಂದಾಗದೆ ತೆಪ್ಪಗಾದರು. ವರದಿಯ ಪರ ಇದ್ದ ಹೋರಾಟಗಾರರು ಕೂಡಾ ಸದ್ಯ ಮೌನವಾಗಿದ್ದಾರೆ!. ಒಳ ಮೀಸಲಾತಿಗೆ ಅವಕಾಶ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಸ್ಪಷ್ಟವಾಗಿ ತೀರ್ಪಿತ್ತಿದ್ದರೂ, ಆಯೋಗದ ರಚನೆ, ಸರಕಾರದ ಪಕ್ಕಾ ರಾಜಕೀಯ ನಡೆಯಾಗಿದೆ ಎಂಬುದು ಸಂವಿಧಾನ ತಜ್ಞರ ಅಭಿಮತ.
ಈ ವಿದ್ಯಮಾನಗಳ ಮಧ್ಯೆ, ಬಾನಂಚಿನಲ್ಲೊಂದು ಬೆಳ್ಳಿಗೆರೆಯನ್ನು ಕಂಡು, ಒಳ ವರ್ಗೀಕರಣದ ಪರ ಇರುವವರ ಮುಖದಲ್ಲಿ ಮಂದಹಾಸ ಮಿನುಗಿದೆ. ಆ ಮಂದಹಾಸದ ಹಿಂದಿರುವ ಕಾರಣ, ಪಂಜಾಬ್ vs ದೇವಿಂದರ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು. ಆ ತೀರ್ಪಿನ ಹಿನ್ನೆಲೆ ಹೀಗಿದೆ-
ಪಂಜಾಬ್ ಸರಕಾರ ಕಾಯ್ದೆಯೊಂದನ್ನು (THE PUNJAB SCHEDULED CASTES AND BACKWARD CLASSES, reservation in Services, ACT, 2006) ಜಾರಿಗೊಳಿಸಿ ಪರಿಶಿಷ್ಟ ಜಾತಿಗಳಾದ ಬಾಲ್ಮೀಕಿ ಮತ್ತು ಮಜಭಿ ಸಿಖ್‌ರಿಗೆ ಪ್ರತ್ಯೇಕ ಮೀಸಲಾತಿ ನೀಡುತ್ತದೆ. ಪ್ರತ್ಯೇಕ ಮೀಸಲಾತಿಯ ಪ್ರಶ್ನೆ ಪಂಜಾಬ್ ಉಚ್ಚ ನ್ಯಾಯಾಲಯದ ಮುಂದೆ ಬಂದು ನ್ಯಾಯಾಲಯ ‘ಈ. ವಿ. ಚಿನ್ನಯ್ಯ vs ಆಂಧ್ರ ಪ್ರದೇಶ’ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿಗೆ, ಕಾಯ್ದೆ ವಿರುದ್ಧವಾಗಿದೆ ಎಂದೂ ಕಾಯ್ದೆಯ ಕಲಂ 4(5)ನ್ನು ಸಂವಿಧಾನ ವಿರೋಧಿ ಎಂದು ಘೋಷಿಸುತ್ತದೆ. ಈ ಘೋಷಣೆಯ ವಿರುದ್ಧ ಪಂಜಾಬ್ ಸರಕಾರ ವಿಶೇಷ ಮೆಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸುತ್ತದೆ. ಸರ್ವೋಚ್ಚ ನ್ಯಾಯಾಲಯ ನ್ಯಾ.ಅರುಣ್ ಮಿಶ್ರಾ ಅವರ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠ, ರಾಜ್ಯಗಳಿಗೆ ಪರಿಶಿಷ್ಟ ಜಾತಿಗಳನ್ನು ಒಳ ವರ್ಗೀಕರಿಸಿ ಮೀಸಲಾತಿ ನೀಡುವ ಅಧಿಕಾರದ ಬಗ್ಗೆ ಆಗಸ್ಟ್, 2020ರ ತನ್ನ ತೀರ್ಪಿನಲ್ಲಿ, ಈ. ವಿ.ಚಿನ್ನಯ್ಯ ಪ್ರಕರಣದ ತೀರ್ಪಿನ ಪುನರ್‌ಪರಿಶೀಲನೆ ಸಪ್ತ ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿ ಜರುಗಬೇಕು ಮತ್ತು ಇಂದ್ರಾ ಸಹಾನಿ ಪ್ರಕರಣದ ತೀರ್ಪಿನ ಕೆಲ ಅಂಶಗಳನ್ನೂ ಪುನರ್ಪರಿಶೀಲನೆಯಲ್ಲಿ ಪರಿಗಣಿಸಬೇಕೆಂದೂ ಹೇಳಿದೆ.
ಕರ್ನಾಟಕದಲ್ಲಿ ಡಾ. ನಾಗನಗೌಡ ವರದಿ ಆಧಾರಿತ ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ಅನುಷ್ಠಾನಗೊಳಿಸಿದಾಗ ಒಳ ವರ್ಗೀಕರಣಕ್ಕೆ ಒಳಪಡಿಸಲಾಗಿತ್ತು. ಆದರೆ, ಎಂ.ಆರ್. ಬಾಲಾಜಿ vs ಮೈಸೂರು(ನ್ಯಾ. ಗಜೇಂದ್ರಗಡಕರ್) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿ ಅಸಿಂಧು ಎಂದು ತೀರ್ಪು ನೀಡಿತ್ತು(1962). ಆನಂತರ 1977ರ ತನಕ ಕರ್ನಾಟಕದಲ್ಲಿ ಹಿಂದುಳಿದವರಿಗೆ ಮೀಸಲಾತಿ ಜಾರಿಯಲ್ಲಿ ಇರಲೇ ಇಲ್ಲ ಎಂಬುದು ಬೇರೆ ಮಾತು. ಆದರೆ, 1977ರಲ್ಲಿ ಎಲ್. ಜಿ. ಹಾವನೂರ್ ವರದಿ ಆಧರಿಸಿ ಜಾರಿ ಮಾಡಲಾಗಿದ್ದ ಹಿಂದುಳಿದ ವರ್ಗಗಳ ಮೀಸಲಾತಿಯೂ ಒಳ ವರ್ಗೀಕರಣಕ್ಕೆ ಒಳಪಟ್ಟಿತ್ತು. ಅದನ್ನು ಕೆ.ಸಿ. ವಸಂತ ಕುಮಾರ್ vs ಕರ್ನಾಟಕ(ನ್ಯಾ. ಚಿನ್ನಪ್ಪ ರೆಡ್ಡಿ )ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿಯಿತು(1984). ಹಾಗೆಯೇ, ಇಂದ್ರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತೆ ಅದನ್ನು ಸ್ಥಿರೀಕರಿಸಿ ಮಾರ್ಗಸೂಚಿಗಳನ್ನೂ ರೂಪಿಸಿತು. ಹಾಗಾಗಿ, ಹಿಂದುಳಿದ ವರ್ಗಗಳಲ್ಲಿ ಅದು ಚರ್ಚೆಯ ವಿಷಯವಾಗಿ ಇಂದು ಉಳಿದಿಲ್ಲ. ಅದೊಂದು ಒಪ್ಪಿತ ಮೌಲ್ಯವಾಗಿದೆ.
ಕೇಂದ್ರ ಸರಕಾರದ ಹುದ್ದೆಗಳಿಗೆ ಅನ್ವಯಿಸುವಂತೆ 1993ರಲ್ಲಿಯೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಾಗಿದ್ದರೂ, ಅದು ಒಳ ವರ್ಗೀಕರಣಕ್ಕೆ ಒಳಪಟ್ಟಿರುವುದಿಲ್ಲ. ಸದ್ಯ ಒಳ ವರ್ಗೀಕರಿಸಲು ಕೇಂದ್ರ ಸರಕಾರ ನ್ಯಾ.ರೋಹಿಣಿಯವರ ಏಕವ್ಯಕ್ತಿ ಆಯೋಗ ರಚಿಸಿದೆ. ಕಳೆದ 3 ವರ್ಷಗಳಿಂದ ಆಯೋಗ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಆದರೆ, ಪರಿಶಿಷ್ಟ ಜಾತಿಗಳಲ್ಲಿಯೂ ಒಳಮೀಸಲಾತಿ ಜಾರಿಗೆ ಬರಬೇಕು ಎಂಬ ಕೂಗು ಕೇಳಿದ ದಿನದಿಂದಲೂ ಅದು ವಿವಾದಕ್ಕೆ ಒಳಗಾಗಿದೆ.
ಸರಕಾರ ಯಾವುದೇ ಇರಲಿ, ಜನಹಿತ ಕೆಲಸಗಳೆಲ್ಲವೂ ರಾಜಕಾರಣದ ದೃಷ್ಟಿಯಿಂದಲೇ ನಿರ್ಣಯಿಸಲ್ಪಡುತ್ತವೆ ಎಂಬುದು ಸುಳ್ಳಾಗಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯೂ, ರಾಜಕೀಯದ ಒಳಸುಳಿಯಲ್ಲಿ ಸಿಲುಕಿಕೊಂಡಿರುವುದೂ ಆ ವರ್ಗಗಳ ಹಿತ ದೃಷ್ಟಿಯಿಂದ ಸರ್ವತಾ ಸರಿಯಲ್ಲ. ಕೇಂದ್ರ ಸರಕಾರವೇ ಈ ನಿಟ್ಟಿನಲ್ಲಿ ಮುಂದಾಗಬೇಕಿತ್ತು.ಆದರೆ, ರಾಜ್ಯ ಸರಕಾರಗಳು ಮಾತ್ರ ಒತ್ತಡಕ್ಕೆ ಒಳಗಾಗಿ ಕ್ರಮ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಆ ವರ್ಗದ ಜಾತಿಗಳ ಮಧ್ಯೆ ಇರುವ ಅಸಮಾನತೆಯನ್ನು ವೈಜ್ಞಾನಿಕ ತಳಹದಿಯ ಮೇಲೆ ಹೋಗಲಾಡಿಸುವ ತುರ್ತು ಕೆಲಸವಂತೂ, ಇಂದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲಿದೆ.
ಸದ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಒಳವರ್ಗೀಕರಣ ಮಾಡುವ ಅಧಿಕಾರ ಇರುವುದು ರಾಷ್ಟ್ರಪತಿಗಳಿಗೆ ಮಾತ್ರ (ವಿಧಿ 341 ಮತ್ತು 342). ಪರಿಶಿಷ್ಟ ಜಾತಿ ಪಟ್ಟಿಗೆ ಯಾವುದೇ ತಿದ್ದುಪಡಿ, ಮಾರ್ಪಾಡು ಅಥವಾ ಬದಲಾವಣೆ ತರಬೇಕು ಎಂದಿದ್ದರೆ ಆ ಅಧಿಕಾರ ಇರುವುದೂ ಸಂಸತ್ತಿಗಷ್ಟೇ.ಒಳ ಮೀಸಲಾತಿಗೆ ಸದ್ಯ ಇರುವ ಅವಕಾಶವೆಂದರೆ, ಒಂದೋ ಸಂವಿಧಾನದ ತಿದ್ದುಪಡಿ ಆಗಬೇಕು ಅಥವಾ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರ ಬರಬೇಕು. ಆ ತನಕ ಕಾಯುವುದೊಂದೇ ಬಾಕಿ.