ಗುರುವಾರ, ಜುಲೈ 22, 2021

ಒಲಿಂಪಿಕ್ಸ್‌ನ ಕೆಲವು ಪ್ರಥಮಗಳ ದಾಖಲೆ ಹಾಗೂ ಕುತೂಹಲಕರ ಸಂಗತಿ



ಟೋಕಿಯೊದಲ್ಲಿ ಒಲಿಂಪಿಕ್‌ ಕ್ರೀಡೆಗಳು ಶುಕ್ರವಾರ (ಜುಲೈ 23) ಆರಂಭವಾಗಲಿವೆ. ಕೋವಿಡ್‌ ಪಿಡುಗಿನ ನೆರಳಿನಲ್ಲಿ ನಿರ್ಬಂಧಗಳ ನಡುವೆಯೇ ಕ್ರೀಡೆಗಳು ನಡೆಯಬೇಕಿವೆ. ಸೋಂಕು ಹಬ್ಬುವ ಭೀತಿಯಿಂದಾಗಿ ಸ್ಪರ್ಧೆಗಳನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಬೇಕಾದ ಅನಿವಾರ್ಯತೆ ಇದೆ. ಪ್ರೇಕ್ಷಕರಿಲ್ಲದೇ ಮೊದಲ ಬಾರಿ ಒಲಿಂಪಿಕ್ಸ್‌ ನಡೆಯುತ್ತಿದೆ.

ಈಗ ಒಲಿಂಪಿಕ್ಸ್‌ನ ಕೆಲವು ಪ್ರಥಮಗಳನ್ನು, ದಾಖಲೆ, ಕುತೂಹಲಕರ ಸಂಗತಿಗಳನ್ನು ನೋಡೋಣ.

* ಟೋಕಿಯೊ ಕ್ರೀಡೆಗಳ ಮ್ಯಾಸ್ಕಟ್‌ (ಬೊಂಬೆ ರೂಪದ ಸಂಕೇತ) ಮಿರೈಟೋವಾ. ಇದು ರಾಬೋಟ್‌ ರೂಪ ಹೊಂದಿದೆ. (ಮಿರೈ ಎಂದರೆ ಭವಿಷ್ಯ–Future, ಟೋವಾ ಎಂದರೆ ಅಳಿಯದ, ಶಾಶ್ವತ, Eternity. ಈ ಎರಡು ಪದಗಳನ್ನು ಜೋಡಿಸಿ ಈ ಬೊಂಬೆಗೆ ಹೆಸರಿಡಲಾಗಿದೆ). ಮೊದಲ ಬಾರಿ ಬೇಸಿಗೆ ಒಲಿಂಪಿಕ್ಕ್‌ ಕ್ರೀಡೆಗಳಲ್ಲಿ ಮ್ಯಾಸ್ಕಟ್‌ ಕಾಣಿಸಿಕೊಂಡಿದ್ದು ಯಾವಾಗ ಗೊತ್ತೇ? 1972ರ ಮ್ಯೂನಿಕ್‌ ಕ್ರೀಡೆಗಳಲ್ಲಿ. ಆ ವರ್ಷ ‘ವಾಲ್ಡಿ’ ಎಂಬ ಡ್ಯಾಷಹೌಂಡ್‌ ಶ್ವಾನದ ಬೊಂಬೆ ಮ್ಯಾಸ್ಕಟ್‌ ಆಗಿ ಸ್ಮರಣಿಕೆಗಳಲ್ಲಿ, ಒಲಿಂಪಿಕ್‌ ತಾಣಗಳಲ್ಲಿ ಕಾಣಿಸಿಕೊಂಡಿತು.

ಟೋಕಿಯೊ ಒಲಿಂಪಿಕ್ಸ್ ಮ್ಯಾಸ್ಕಟ್ 'ಮಿರೈಟೋವಾ'

* ಒಲಿಂಪಿಕ್‌ ಕ್ರೀಡಾಗ್ರಾಮ ಕಲ್ಪನೆ ಮೊದಲ ಬಾರಿ ಸಾಕಾರಕ್ಕೆ ಬಂದಿದ್ದು 1932 ರ ಲಾಸ್‌ ಏಂಜಲೀಸ್‌ ಕ್ರೀಡೆಗಳಲ್ಲಿ. ನಗರ ಹೊರವಲಯದ ಬಾಲ್ಡ್‌ವಿನ್‌ ಹಿಲ್ಸ್‌ನಲ್ಲಿ 321 ಎಕರೆ ಪ್ರದೇಶದಲ್ಲಿ ಕ್ರೀಡಾಗ್ರಾಮ ಮೈದಳೆದಿತ್ತು. 40 ಅಡುಗೆ ಕೋಣೆಗಳು, ಆಸ್ಪತ್ರೆ, ಅಂಚೆ ಕಚೇರಿ ವ್ಯವಸ್ಥೆ ಮಾಡಲಾಗಿತ್ತು. ಮಹಿಳಾ ಕ್ರೀಡಾಪಟುಗಳು ಆ ಬಾರಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.

* ಒಲಿಂಪಿಕ್ಸ್‌ನಲ್ಲಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಗಳು ಹೊಸದಲ್ಲ. ಆದರೆ ಮೊದಲ ಬಾರಿ ಉದ್ದೀಪನ ಮದ್ದು ಸೇವನೆ ಪರೀಕ್ಷೆ ನಡೆದಿದ್ದು 1968ರ ಮೆಕ್ಸಿಕೊ ಸಿಟಿ ಕ್ರೀಡೆಗಳಲ್ಲಿ. ಆ ವರ್ಷ ಒಬ್ಬರು ಸಿಕ್ಕಿಕೊಂಡರು. ಕಂಚಿನ ಪದಕ ಗೆದ್ದುಕೊಂಡಿದ್ದ ಸ್ವೀಡನ್‌ನ ಪೆಂಟಾತ್ಲಾನ್‌ ಸ್ಪರ್ಧಿ ಮದ್ಯಪಾನ ಮಾಡಿ ಭಾಗವಹಿಸಿದ್ದು ಖಚಿತಪಟ್ಟಿತ್ತು. ಅವರಿಂದ ಪದಕ ವಾಪಸು ಪಡೆಯಲಾಯಿತು. ಅವರು ಸ್ಪರ್ಧೆಗೆ ಮೊದಲು ಬಿಯರ್‌ ಸೇವಿಸಿದ್ದರು!

*ಬೇಸಿಗೆ ಮತ್ತು ಚಳಿಗಾಲದ ಕ್ರೀಡೆ (winter games)ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡ ಮೊದಲ ಸ್ಪರ್ಧಿ ಎಡ್ಡಿ (ಎಡ್ವರ್ಡ್‌) ಈಗನ್‌. ಅವರು ಆ್ಯಂಟ್‌ವರ್ಪ್‌ (1920ರ) ಕ್ರೀಡೆಗಳ ಲೈಟ್‌ ಹೆವಿವೇಟ್‌ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು.1932ರ ಲೇಕ್‌ ಪ್ಲಾಸಿಡ್‌ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಅವರು ಬಾಬ್‌ಸ್ಲೀಗ್‌ ಸ್ಪರ್ಧೆಯಲ್ಲಿ (ಇದು ಹಿಮದ ಇಕ್ಕಟ್ಟಾದ ಟ್ರ್ಯಾಕ್‌ನಲ್ಲಿ ವಾಹನದಲ್ಲಿ ನಡೆಯುವ ತಂಡ ಸ್ಪರ್ಧೆ) ಪಾಲ್ಗೊಂಡು ಮೊದಲ ಸ್ಥಾನ ಪಡೆದಿದ್ದರು.

ಮೈಕೆಲ್‌ ಫೆಲ್ಪ್ಸ್‌

* ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದುಕೊಂಡ ದಾಖಲೆ ಇರುವುದು ಅಮೆರಿಕದ ಈಜು ಪಟು, 36 ವರ್ಷದ ಮೈಕೆಲ್‌ ಫೆಲ್ಪ್ಸ್‌ ಹೆಸರಿನಲ್ಲಿ. ಅವರು ನಾಲ್ಕು (2004 ರಿಂದ 2016ರ ಅವಧಿ) ಒಲಿಂಪಿಕ್ಸ್‌ಗಳಿಂದ 28 ಪದಕಗಳನ್ನು ಗೆದ್ದುಕೊಂಡಿದ್ದಾರೆ! ಇವುಗಳಲ್ಲಿ 23 ಚಿನ್ನಗಳು ಸೇರಿವೆ. ಬೀಜಿಂಗ್‌ (2008) ಕ್ರೀಡೆಗಳಲ್ಲಿ ಅವರು ಎಂಟು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದೂ ದಾಖಲೆ. 23 ಚಿನ್ನಗಳ ಜೊತೆ ಮೂರು ಬೆಳ್ಳಿ, ಎರಡು ಕಂಚಿನ ಪದಕಗಳು ಈ ಈಜು ಸಾಧಕನಿಗೆ ಒಲಿದಿವೆ.

* 1976ರ ಮಾಂಟ್ರಿಯಲ್‌ ಒಲಿಂಪಿಕ್ಸ್‌ನಲ್ಲಿ ಸೋದರರಿಬ್ಬರು ಒಂದೇ ಕ್ರೀಡೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದು ಇತಿಹಾಸ. ಅಮೆರಿಕದ ಮೈಕೆಲ್‌ ಸ್ಪಿಂಕ್ಸ್‌ ಮತ್ತು ಲಿಯಾನ್ ಸ್ಪಿಂಕ್ಸ್‌ ಕ್ರಮವಾಗಿ ಬಾಕ್ಸಿಂಗ್‌ನ ಮಿಡ್ಲ್‌ವೇಟ್‌ ಮತ್ತು ಹೆವಿವೇಟ್‌ ವಿಭಾಗಗಳಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದರು. ಇವರಿಬ್ಬರೂ ಮುಂದೆ ವಿಶ್ವ ಚಾಂಪಿಯನ್‌ಗಳಾಗಿ ಬೆಳಗಿದರು. ಲಿಯಾನ್‌ ಎರಡು ವರ್ಷಗಳ ನಂತರ ವಿಶ್ವ ಹೆವಿವೇಟ್‌ ಚಾಂಪಿಯನ್‌ ಆದರು. ಮೈಕೆಲ್‌, ಲೈಟ್‌ ಹೆವಿವೇಟ್‌ (1981–85) ಮತ್ತು ಹೆವಿವೇಟ್‌ ವಿಭಾಗದಲ್ಲಿ (1985–88)ವಿಶ್ವ ಚಾಂಪಿಯನ್‌ ಆದರು.

ಲಿಯಾನ್ ಸ್ಪಿಂಕ್ಸ್‌ (ಬಲಭಾಗದಲ್ಲಿ)

* ಟೆನಿಸ್‌ 1988ರ ಒಲಿಂಪಿಕ್ಸ್‌ನಲ್ಲಿ ಮರುಸೇರ್ಪಡೆಗೊಂಡಿತು. ಅದಕ್ಕಿಂತ ಹಿಂದೆ, 1924ರಲ್ಲಿ ಕೊನೆಯ ಬಾರಿ ನಡೆದಿತ್ತು. ಆ ವರ್ಷ ಆಸ್ಟ್ರೇಲಿಯಾ, ಫ್ರೆಂಚ್‌, ವಿಂಬಲ್ಡನ್‌, ಯು.ಎಸ್‌. ಓಪನ್‌ ಚಾಂಪಿಯನ್‌ ಆಗಿದ್ದ ಸ್ಟೆಫಿ ಗ್ರಾಫ್‌ ಒಲಿಂಪಿಕ್ಸ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದು ಗೋಲ್ಡನ್‌ ಸ್ಲ್ಯಾಮ್ ಸಾಧನೆ ಮಾಡಿದರು. ಅವರು ಫೈನಲ್‌ನಲ್ಲಿ ಸೋಲಿಸಿದ್ದು ಆರ್ಜೆಂಟೀನಾದ ಗ್ಯಾಬ್ರಿಯೆಲಾ ಸೆಬಾಟಿನಿ ಅವರನ್ನು. ಗೋಲ್ಡನ್‌ ಸ್ಲ್ಯಾಮ್‌ ಪದ ಮಾಧ್ಯಮಗಳ ಕೊಡುಗೆ!

* ಯುದ್ಧದಿಂದ ಜರ್ಝರಿತಗೊಂಡ ದೇಶಗಳ ಅಥ್ಲೀಟುಗಳಿಗೆ ಅವಕಾಶ ನೀಡಲು ‘ನಿರಾಶ್ರಿತ (refugee) ತಂಡ ಮೊದಲ ಬಾರಿ ರೂಪುಗೊಂಡಿದ್ದು, ಕಳೆದ (2016, ರಿಯೊ ಡಿ ಜನೈರೊ) ಒಲಿಂಪಿಕ್ಸ್‌ನಲ್ಲಿ. ಯುದ್ಧಪೀಡಿತ ನಾಲ್ಕು ರಾಷ್ಟ್ರಗಳ (ದಕ್ಷಿಣ ಸುಡಾನ್‌, ಕಾಂಗೊ, ಸಿರಿಯಾ ಮತ್ತು ಇಥಿಯೋಪಿಯಾ) ಹತ್ತು ಮಂದಿ ಕ್ರೀಡಾಪಟುಗಳು ಆ ತಂಡದಲ್ಲಿದ್ದರು.

* ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುವೊಬ್ಬರಿಂದ ಪ್ರತಿಜ್ಞಾವಿಧಿ ಸ್ವೀಕರಿಸುವ ಪರಿಪಾಠ ಆರಂಭವಾಗಿದ್ದು 1920ರ ಆ್ಯಂಟ್‌ವರ್ಪ್‌ ಕ್ರೀಡೆಗಳಲ್ಲಿ. ಐದು ಖಂಡಗಳನ್ನು ಪ್ರತಿನಿಧಿಸುವ ಐದು ಬಳೆಗಳ ಚಿತ್ರ ಹೊಂದಿರುವ ಒಲಿಂಪಿಕ್‌ ಧ್ವಜ ಮೊದಲ ಬಾರಿ ಹಾರಾಡಿದ್ದು ಕೂಡ ಇದೇ ಒಲಿಂಪಿಕ್ಸ್‌ನಲ್ಲಿ.

* ಒಲಿಂಪಿಕ್ಸ್‌ ಕ್ರೀಡೆಗಳಿಗೆ ಮೂರು ಬಾರಿ ಆತಿಥ್ಯ ನೀಡಿದ ಮೊದಲ ನಗರ ಲಂಡನ್‌ (1908, 1948 ಮತ್ತು 1912).

* ಕ್ರೀಡಾ ಜ್ಯೋತಿಯನ್ನು ಕ್ರೀಡಾಪಟುಗಳ ರಿಲೇ ಓಟದ ಮೂಲಕ ಕ್ರೀಡಾಂಗಣಕ್ಕೆ ತರುವ ಸಂಪ್ರದಾಯ ಆರಂಭವಾಗಿದ್ದು 1936ರ ಬರ್ಲಿನ್‌ ಒಲಿಂಪಿಕ್ಸ್‌ನಲ್ಲಿ. ಆ ಕ್ರೀಡೆಗಳ ಸಂಘಟನಾ ಸಮಿತಿಯಲ್ಲಿದ್ದ ಕಾರ್ಲ್ ಡೀಮ್‌ ಅವರ ಯೋಚನೆ ಇದು. ಗ್ರೀಸ್‌ನ ಕಾನ್‌ಸ್ಟಂಟೈನ್‌ ಕಾಂಡಿಲಿಸ್‌ 1936ರ ಜುಲೈ 20ರಂದು ಒಲಿಂಪಿಯಾದಿಂದ ಜ್ಯೋತಿ ಓಟ ಆರಂಭಿಸಿದ ಮೊದಲಿಗರೆನಿಸಿದರು.

* ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಭಯೋತ್ಪಾದನಾ ದಾಳಿ ನಡೆದಿದ್ದು 1972ರ ಮ್ಯೂನಿಕ್‌ ಕ್ರೀಡೆಗಳಲ್ಲಿ. ಆ ಬಾರಿ ಆಗಿನ ಪಶ್ಚಿಮ ಜರ್ಮನಿಯ ಬವೇರಿಯಾದ ಈ ನಗರದ ಮೇಲೆ ಪ್ಯಾಲಸ್ಟೀನ್‌ ಭಯೋತ್ಪಾದಕ ಗುಂಪು (‘ಬ್ಲ್ಯಾಕ್‌ ಸೆಪ್ಟೆಂಬರ್‌’ ಎಂಬ ಹೆಸರು ಹೊಂದಿತ್ತು) ಇಸ್ರೇಲಿ ಕ್ರೀಡಾಪಟುಗಳು ತಂಗಿದ್ದ ಡಾರ್ಮಿಟರಿಯ ಮೇಲೆ ದಾಳಿ ನಡೆಸಿತ್ತು. ಇಸ್ರೇಲಿ ಕಾರಾಗೃಹಗಳಲ್ಲಿದ್ದ 200 ಮಂದಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಒಲಿಂಪಿಕ್‌ ತಂಡದ 9 ಒತ್ತೆಯಾಳುಗಳನ್ನಾಗಿಸಿದ್ದರು. ಅವರ ರಕ್ಷಣೆಗೆ ನಡೆದ ದಾಳಿಯಲ್ಲಿ ಒತ್ತೆ ಸೆರೆಯಲ್ಲಿದ್ದ ಕ್ರೀಡಾಪಟುಗಳು, ಐವರು ಭಯೋತ್ಪಾದಕರು, ಒಬ್ಬ ಪೊಲೀಸ್‌ ಸಿಬ್ಬಂದಿ ಮೃತಪಟ್ಟರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ