ಭಾನುವಾರ, ಆಗಸ್ಟ್ 14, 2016

ಕರ್ನಾಟಕದ ಆರ್ಥಿಕತೆ (ಪ್ರಸ್ತಾವನೆ) ಭಾಗ ೧

ಕನ್ನಡ ಅಧ್ಯಯನ (ಕರ್ನಾಟಕದ ಆರ್ಥಿಕತೆ): ಪ್ರಸ್ತಾವನೆ

ಕರ್ನಾಟಕ ಆರ್ಥಿಕತೆ ಕೆಲವು ವರ್ಷಗಳ ಹಿಂದೆ ರಾಷ್ಟ್ರದಲ್ಲಿನ ಮೇಲ್ಮಟ್ಟದ ಅಭಿವೃದ್ಧಿ ಪಥದಲ್ಲಿನ ರಾಜ್ಯಗಳ ಪೈಕಿ ಒಂದಾಗಿತ್ತು. ಅದರ ಸರಾಸರಿ ತಲಾದಾಯ ಹಾಗೂ ಬೆಳವಣಿಗೆ ದರವು ರಾಷ್ಟ್ರದ ಸರಾಸರಿಗಿಂತ ಅಧಿಕವಿತ್ತು. ಆದರೆ ಇತ್ತೀಚೆಗೆ ಕರ್ನಾಟಕದ ಬೆಳವಣಿಗೆಯ ದರ ಕುಂಠಿತವಾದ ಕಾರಣ ಅದರ ತಲಾದಾಯವು ರಾಷ್ಟ್ರದಕ್ಕಿಂತ ಕೆಳಕ್ಕೆ ಇಳಿಯಿತು. ಹೀಗಾಗಿ ಅದರ ಸ್ಥಾನ ರಾಷ್ಟ್ರದ ಸರಾಸರಿಗಿಂತ ಕೆಳಕ್ಕೆ ಇಳಿದು ಬಂದಿದೆ. ಇದು ಆತಂಕವನ್ನುಂಟುಮಾಡುವಂತಹ ವಿಷಯವೇ ಸರಿ. ಆದ ಕಾರಣ ಕರ್ನಾಟಕ ಆರ್ಥಿಕತೆಯ ಈ ಒಂದು ಚಿತ್ರಣವನ್ನು ಅರ್ಥ ಮಾಡಿಕೊಂಡು ಅದಕ್ಕೆ ಸೂಕ್ತವಾದ ಕ್ರಮಗಳನ್ನು ಯೋಜಿಸುವುದು ಚಿಂತನಕಾರರ ಹಾಗೂ ಆಡಳಿತಕಾರರ ಜವಾಬ್ದಾರಿಯೆನಿಸುತ್ತದೆ.

ಒಂದು ದೃಷ್ಟಿಯಲ್ಲಿ ನೋಡಿದ್ದೇಯಾದರೆ, ಆರ್ಥಿಕತೆಯ ಬೆಳವಣಿಗೆಯ ದರ ಕಡಿಮೆಯಾದ ಪಕ್ಷದಲ್ಲಿ ಕೆಲವು ಸಂದರ್ಭದಲ್ಲಿ ಆತಂಕ ಪಡುವ ಅವಶ್ಯಕತೆಯಿಲ್ಲ. ಅನೇಕ ವೇಳೆ ಈ ದರವು ಕಡಿಮೆಯಾದರೂ ಆರ್ಥಿಕತೆಯ ಇತರೆ ಬೆಳವಣಿಗೆಯ ಸೂಚಿಗಳಲ್ಲಿ ಉತ್ತಮತೆಯನ್ನು ಕಾಣಬಹುದು. ಉದಾಹರಣೆಗೆ ಕೇರಳದ ಆರ್ಥಿಕತೆಯನ್ನು ತೆಗೆದುಕೊಂಡರೆ ಅಲ್ಲಿ ಆರ್ಥಿಕ ಬೆಳವಣಿಗೆ ದರ ಕಡಿಮೆಯಿದ್ದರೂ ಸಹ ಇತರೆ ಬೆಳವಣಿಗೆ ಸೂಚಿಗಳಾದ ಅಕ್ಷರತೆ ಮತ್ತು ಆರೋಗ್ಯ ಮಟ್ಟ, ಪೌಷ್ಟಿಕತೆ, ಶಿಶು ಮರಣ ಮತ್ತು ಆಯಸ್ಸು ಇವುಗಳಲ್ಲಿ ಉತ್ತಮತೆ ಕಂಡು ಬಂದಿದೆ. ಪರಿಸ್ಥಿತಿ ಹೀಗಿದ್ದ ಪಕ್ಷದಲ್ಲಿ ನಮ್ಮ ಮುಂದೆ ನಿಲ್ಲುವ ಪ್ರಶ್ನೆ ಏನೆಂದರೆ ಕರ್ನಾಟಕ ಆರ್ಥಿಕತೆ ಕಡಿಮೆ ಬೆಳವಣಿಗೆ ದರವನ್ನು ಸೂಚಿಸಿದ್ದಾದರೂ ಇತರ ಬೆಳವಣಿಗೆ ಸೂಚಿಗಳ ಬಗ್ಗೆಯಾದರೂ ಉತ್ತಮತೆಯನ್ನು ತೋರಿಸುತ್ತಿದೆಯೇ ಎಂಬುದು. ಒಂದು ವೇಳೆ ಈ ಸೂಚಿಗಳು ಸಹ ಉತ್ತೇಜನಕಾರಿ ಅಲ್ಲದಿದ್ದರೆ ನಮ್ಮ ಮುಂದೆ ನಿಲ್ಲುವ ಮತ್ತೊಂದು ಪ್ರಶ್ನೆ ಏನೆಂದರೆ ನಮ್ಮ ಆರ್ಥಿಕತೆಯು ಎಲ್ಲಿ ಎಡವಿದೆ? ಅದರ ಬೆಳವಣಿಗೆಯಲ್ಲಿ ಏನಾದರೂ ಅಡೆತಡೆಗಳು ಕಂಡು ಬಂದಿವೆಯೆ? ಹಾಗಿದ್ದ ಪಕ್ಷದಲ್ಲಿ ಇದನ್ನು ಸರಿಪಡಿಸಲು ಯಾವ ರೀತಿಯ ಪರಿಹಾರವನ್ನು ಸೂಚಿಸಬಹುದು?

ಈ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಆರ್ಥಿಕತೆಯ ಒಂದು ಸಮೀಕ್ಷೆಯನ್ನು ಕೈಗೊಳ್ಳುವ ದೃಷ್ಟಿಯಿಂದ ಕನ್ನಡ ವಿಶ್ವವಿದ್ಯಾಲಯದ ಅಡಿಯಲ್ಲಿ ಒಂದು ಸಂಕಿರಣವನ್ನು ಏರ್ಪಡಿಸಲಾಯಿತು. ಈ ಸಂಕಿರಣದ ಒಂದು ಸಮರ್ಪಕವಾದ ಚೌಕಟ್ಟನ್ನು ತಯಾರಿಸಿ, ಈ ಚೌಕಟ್ಟಿನಲ್ಲಿ ಸೇರ್ಪಡಿಸಬಹುದಾದ ಹದಿನಾರು ವಿಷಯಗಳನ್ನು ಗುರುತಿಸಲಾಯಿತು. ಪ್ರತಿಯೊಂದು ವಿಷಯಕ್ಕೂ ಒಬ್ಬ ಅಥವಾ ಇಬ್ಬರು ತಜ್ಞರನ್ನು ಆರಿಸಿ ಆ ವಿಷಯವನ್ನು ಕುರಿತು ಲೇಖನ ಬರೆಯುವ ಹಾಗೆ ಆಹ್ವಾನ ನೀಡಲಾಯಿತು. ಹಾಗೂ ಈ ಲೇಖನಗಳನ್ನು ಚರ್ಚಾಕೂಟದಲ್ಲಿ ಮಂಡಿಸಿ ಚರ್ಚೆಯಲ್ಲಿ ಬಂದಂತಹ ಸಲಹೆಗಳ ಆಧಾರದ  ಮೇಲೆ ಅವುಗಳನ್ನು ಪರಿಷ್ಕರಿಸಲಾಯಿತು. ಈ ಒಂದು ಪ್ರಯತ್ನದ ಫಲವೇ ಪ್ರಸ್ತುತ ಪುಸ್ತಕ. ಈ ಪ್ರಸ್ತಾಪನೆಯಲ್ಲಿ ಪ್ರಸ್ತುತ ಪುಸ್ತಕದ ಸ್ಥೂಲ ಪರಿಚಯವನ್ನು ಮಾಡಿಕೊಡುವ ಪ್ರಯತ್ನ ನಡೆದಿದೆ.

ಪಿ.ಆರ್. ಬ್ರಹ್ಮಾನಂದ ಅವರು ತಮ್ಮ ಲೇಖನದಲ್ಲಿ ಕರ್ನಾಟಕ ಆರ್ಥಿಕತೆಯ ಸಮಗ್ರ ಚಿತ್ರವನ್ನು ಮೂಡಿಸಿದ್ದಾರೆ. ಅದರ ಬೆಳವಣಿಗೆ ದರ, ಭವಿಷ್ಯತ್ತಿನಲ್ಲಿ ಅದು ಯಾವ ಪಥದಲ್ಲಿ ಮುನ್ನಡೆಯಬಹುದು ಹಾಗೂ ಅದರ ಮುನ್ನಡೆಯ ಪಥದಲ್ಲಿ ಯಾವ ಬಗೆಯ ಅಡೆತಡೆಗಳುಂಟಾಗಬಹುದು ಎಂಬ ಅಂಶಗಳನ್ನು ಅವರದೇ ಆದ ಶೈಲಿಯಲ್ಲಿ ವಿಶ್ಲೇಷಿಸಿದ್ದಾರೆ. ಆರ್ಥಿಕ ಬೆಳವಣಿಗೆ ದರವು ಇತ್ತೀಚೆಗೆ ಕುಂಠಿತವಾಗಿದ್ದು ರಾಷ್ಟ್ರದ ಆರ್ಥಿಕತೆಯ ಸರಾಸರಿಗಿಂತ ಕೆಳಮಟ್ಟದಲ್ಲಿರುವುದನ್ನು ತೋರಿಸಿಕೊಟ್ಟುದರ ಜೊತೆಗೆ ಇದಕ್ಕೆ ಕಾರಣವಾದ ಬಂಡವಾಳ ಕೊರತೆ ಹಾಗೂ ಸರ್ಕಾರದ ಹಣಕಾಸಿನ ನೀತಿಯ ಕೆಲವು ಕೊರತೆಗಳತ್ತ ನಮ್ಮ ಗಮನವನ್ನು ಸೆಳೆಯುತ್ತಾರೆ. ಅಲ್ಲದೆ, ನಮ್ಮ ಆರ್ಥಿಕತೆ ಏರುಗತಿ ಪ್ರಮಾಣದಲ್ಲಿ ಬೆಳೆಯಬೇಕಾದರೆ ಈ ಕೊರತೆಗಳನ್ನು ಸರಿಪಡಿಸುವುದರ ಜೊತೆಗೆ ಹೊರಗಿನ ಬಂಡವಾಳ ಹಾಗೂ ಕೆಲವು ವಿಧದ ತರಬೇತಿ ಹೊಂದಿದ ಮತ್ತು ಕೌಶಲ್ಯವಿರುವ ಕಾರ್ಮಿಕರ ಒಳ ಹರಿಯುವಿಕೆಯನ್ನು ಉತ್ತೇಜಿಸುವ ಹಾಗೂ ಅವುಗಳನ್ನು ತಾಳಿಕೊಳ್ಳುವ ಉದಾರವಾದ ವಾತಾವರಣವನ್ನು ನಾವು ಸೃಷ್ಟಿಸಬೇಕೆಂಬ ಮಾತನ್ನು ಹೇಳುತ್ತಾರೆ.

ಕರ್ನಾಟಕದ ಆರ್ಥಿಕ ಬೆಳವಣಿಗೆ ದರ ಕುಂಠಿತವಾಗಿರುವುದು ನಿಜವಷ್ಟೆ, ಆದರೆ ಬೆಳವಣಿಗೆಯ ಇತರೆ ಸೂಚಿಗಳ ಸ್ಥಿತಿಯೇನೆಂಬುದನ್ನು ನೋಡೋಣ. ಇಲ್ಲಿ ಲೂಯಿಸ್ ಅವರ ರಚಿಸಿರುವ ಭೌತಿಕ ಜೀವನ ಗುಣಮಟ್ಟ ಸೂಚಿಯನ್ನು ಮಾರ್ಗದರ್ಶಿಯಾಗಿ ತೆಗೆದುಕೊಳ್ಳೋಣ. ಅವರು ಮೂರು ಸಾಮಾಜಿಕ ಅಭಿವೃದ್ಧಿ ಅಂಶಗಳ ಆಧಾರದ ಮೇಲೆ ಈ ಸೂಚಿಯನ್ನು ರಚಿಸಿದ್ದಾರೆ. ಅವು ಯಾವುದೆಂದರೆ: ಒಂದು ವರ್ಷ ಪ್ರಾಯದಲ್ಲಿನ ಜೀವನಾಯುಷ್ಯ, ಶಿಶು ಮರಣ ದರ ಮತ್ತು ಸಾಕ್ಷರತೆ ದರ. ಅವರ ಈ ಸೂಚಿಯ ಪ್ರಕಾರ ಭಾರತದ ಎಲ್ಲಾ ರಾಜ್ಯಗಳನ್ನು ತೆಗೆದುಕೊಂಡಾಗ ಕೇರಳ ಮೊದಲನೆ ಸ್ಥಾನವನ್ನು ಪಡೆಯುತ್ತದೆ. ಕರ್ನಾಟಕ ನಾಲ್ಕನೆ ಸ್ಥಾನದಲ್ಲಿ ಇದೆ. ಅದರಲ್ಲೂ ಐದನೇ ಸ್ಥಾನದಲ್ಲಿರುವ ತಮಿಳುನಾಡಿಗೂ ನಮಗೂ ಇರುವ ಅಂತರ ತೀರ ಕಡಿಮೆ. ಒಂದು ವೇಳೆ ತಮಿಳುನಾಡು ಇನ್ನು ಸ್ವಲ್ಪವೇ ಬೆಳವಣಿಗೆ ತೋರಿಸಿದರೆ ಸಾಕು ಅದು ನಾಲ್ಕನೇ ಸ್ಥಾನಕ್ಕೆ ಬಂದು ಕರ್ನಾಟಕವು ಐದನೆಯದಕ್ಕೆ ತಳ್ಳಲ್ಪಡುತ್ತದೆ.

ಅಂದ ಮೇಲೆ ಕರ್ನಾಟಕದಲ್ಲಿ ಯಾವುದೇ ಪ್ರಮಾಣದ ಆರ್ಥಿಕ ಬೆಳೆವಣಿಗೆ ಉಂಟಾಗಿದ್ದರೂ ಸಹ ಅದರ ಪರಿಣಾಮ ಜನಜೀವನದ ಗುಣಮಟ್ಟದ ಮೇಲೆ ಅಷ್ಟಾಗಿ ಉಂಟಾಗಿಲ್ಲ ಎಂದಾಯಿತು. ಹಾಗೂ ಬೆಳವಣಿಗೆ ದರ ಕಡಿಮೆಯಿದ್ದರೂ ಇತರೆ ಸೂಚಿಗಳು ಉತ್ತಮವಾಗಿದೆ ಎಂಬ ಸಮಾಧಾನವನ್ನು ನಾವು  ತೆಗೆದುಕೊಳ್ಳುವಂತೂ ಇಲ್ಲ. ಕರ್ನಾಟಕದ ಭೌತಿಕ ಗುಣಮಟ್ಟ ಸೂಚಿಯು ಉತ್ತಮಗೊಳ್ಳಬೇಕಾದರೆ ಲೂಯಿಸ್ ಅವರ ಪ್ರಕಾರ ಶಿಕ್ಷಣ  ಹಾಗೂ ಪೌಷ್ಟಿಕತೆ ಕಾರ್ಯಕ್ರಮಗಳಿಗೆ ಸರ್ಕಾರವು ಹೆಚ್ಚಿನ ಗಮನ ಕೊಡಬೇಕು. ಹಾಗೂ ಸಾಕ್ಷರತೆಯ ರಂಗದಲ್ಲಿ ಮಹಿಳಾ ಸಾಕ್ಷರತೆಗೆ ವಿಶೇಷ ಒತ್ತು ನೀಡಬೇಕು. ಏಕೆಂದರೆ ಈ ಕ್ರಮವು ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ಹಾಗೂ ಶಿಶು ಮರಣ ದರದ ಮೇಲೆ ಲಾಭದಾಯಕ ಪ್ರಭಾವ ಬೀರುತ್ತದೆ ಎಂಬ ನಂಬಿಕೆ.

ಕರ್ನಾಟಕ ಆರ್ಥಿಕತೆಯ ಬೇರೆ ಬೇರೆ ಮುಖಗಳನ್ನು ಪರಿಚಯ ಮಾಡಿಕೊಡುತ್ತಾ ಉಳಿದ ತಜ್ಞರು ನಿರ್ದಿಷ್ಟವಾದ ಕ್ಷೇತ್ರಗಳನ್ನೂ ಸಮಸ್ಯೆಗಳನ್ನೂ ಕೈಗೆತ್ತಿಕೊಂಡು ಆಳವಾದ ಅಧ್ಯಯನ ಮಾಡಿ ತಮ್ಮ ಅನಿಸಿಕೆಗಳನ್ನು ನಿರೂಪಿಸಿದ್ದಾರೆ. ಈಗ ಅಂತಹ ಲೇಖನಗಳ ಪರಿಚಯದತ್ತ ದೃಷ್ಟಿ ಹರಿಸೋಣ.

ಸಾರಿಗೆ, ವಿದ್ಯುತ್ ಹಾಗೂ ಸಂಪರ್ಕಗಳಂತ ಅತಿ ಮುಖ್ಯವೆನಿಸಿದ ಮೂಲಭೂತ ಸೌಕರ್ಯಗಳ ಅಧ್ಯಯನವನ್ನು ಕೈಗೊಂಡ ಜಾನ್ಸನ್ ಸ್ಯಾಮ್ಯುಲ್ ಹಾಗೂ ಲಿಂಗರಾಜು ಅವರು ಆರ್ಥಿಕತೆಯಲ್ಲಿ ಈ ಸೌಲಭ್ಯಗಳ ಪ್ರಾಮುಖ್ಯತೆಯನ್ನು ಗುರುತಿಸುತ್ತಾ ಅವುಗಳ ಕುಂದುಕೊರತೆಗಳನ್ನು ಎತ್ತಿ ತೋರಿಸುತ್ತಾರೆ. ರೈಲು ಸಾರಿಗೆ ಇತ್ತೀಚೆಗೆ ಕರ್ನಾಟಕದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದೆ. ಹಾಗೆಯೆ ರಸ್ತೆ ಸಾರಿಗೆಯೂ ಸಹ. ಆದರೆ ಅವರು ರಸ್ತೆಗಳ ಗುಣಮಟ್ಟದಲ್ಲಿ ಕೊರತೆ ಇರುವುದನ್ನು ತೋರಿಸಿಕೊಡುತ್ತಾರೆ. ಅದರಲ್ಲೂ ರಾಷ್ಟೀಯ ಹೆದ್ದಾರಿಗಳ ಮತ್ತು ಗ್ರಾಮಾಂತರ ರಸ್ತೆಗಳ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕೆಂದು ವಾದಿಸುತ್ತಾರೆ.

ನಮ್ಮಲ್ಲಿ ವಿದ್ಯುತ್ ಕೊರತೆ ಸಮಸ್ಯೆ ಬಹಳ ವರ್ಷಗಳಿಂದಲೂ ಬೇರೂರಿಬಟ್ಟಿದೆ. ಕೊರತೆಯ ಜೊತೆಗೆ ರವಾನೆ ಮತ್ತು ಹಂಚಿಕೆಯಲ್ಲಿ ಅಧಿಕ ಪ್ರಮಾಣದಲ್ಲಿ ವಿದ್ಯುತ್ ನಷ್ಟವಾಗುವ ಸಮಸ್ಯೆಯೂ ಸೇರಿಕೊಂಡಿದೆ. ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಅದರ ಸೋರಿಕೆಯನ್ನು ಕೂಡಲೇ ತಡೆಗಟ್ಟುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು ಹಾಗೂ ಖಾಸಗಿ ಬಂಡವಾಳವು ವಿದ್ಯುತ್ ಕ್ಷೇತ್ರಕ್ಕೆ ಹರಿದುಬರುವಂತೆ ಉತ್ತೇಜಿಸುವ ನೀತಿಯೊಂದನ್ನು ಸರ್ಕಾರವು ರೂಪಿಸಬೇಕೆಂಬುದು ಇವರ ಅಭಿಪ್ರಾಯ.

ಭೌತಿಕ ಮೂಲಭೂತ ಸೌಕರ್ಯಗಳಲ್ಲದೆ, ಆರ್ಥಿಕ ಅಭಿವೃದ್ಧಿಗೆ ಅನುವಾಗುವ ಮತ್ತೊಂದು ಅತಿ ಮುಖ್ಯವಾದ ಅಂಶವೆಂದರೆ ಮಾನವ ಸಂಪತ್ತು. ವಿದ್ಯಾವಂತ ಹಾಗೂ ಆರೋಗ್ಯಕರವಾದ ಮಾನವ ಸಂಪತ್ತು ಆರ್ಥಿಕ ಬೆಳವಣಿಗೆಗೆ ಬಂಡವಾಳ ರೂಪದಲ್ಲಿ ಸಹಾಯಕವಾಗುತ್ತದೆ. ಆದ ಕಾರಣ ಅತಿ ಹೆಚ್ಚಿನ ಮಟ್ಟದ ಅನಕ್ಷರತೆಯಿರುವ ನಮ್ಮ ಸಮಾಜದಲ್ಲಿ ಅಕ್ಷರತೆಯನ್ನು ಹರಡುವ ಒಂದು ಚಳವಳಿಯನ್ನೇ ಕೈಗೊಂಡು ಮಾನವ ಸಂಪತ್ತನ್ನು ವೃದ್ಧಿಸಬೇಕು. ಈ ಪ್ರಯತ್ನವನ್ನು ಕೈಗೊಂಡ ಕರ್ನಾಟಕ ಸರ್ಕಾರದ  ಸಾಧನೆಯನ್ನು ಕುರಿತು ಉಷಾ ರಾಮಕುಮಾರ್ ಅವರು ಬರೆದಿರುವ ಲೇಖನ ಇಲ್ಲಿ ಉಚಿತವೆನಿಸುತ್ತದೆ.

ಶಾಲಾ ಶಿಕ್ಷಣವು ಒಂದು ದೃಷ್ಟಿಯಲ್ಲಿ ಮಾನವ ಸಂಪತ್ತಿನ ಸಮರ್ಪಕ ಬೆಳವಣಿಗೆಗೆ ಮೂಲಭೂತವಾದ ಅಡಿಪಾಯವನ್ನು ಹಾಕುತ್ತದೆಯೆಂದು ಮನಗಂಡು ಸರ್ಕಾರವು ಕರ್ನಾಟಕದಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ೬ ರಿಂದ ೧೧ ಮತ್ತು ೧೧ ರಿಂದ ೧೪ ರೊಳಗಿನ ಮಕ್ಕಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟುದಲ್ಲದೆ, ಕಾರಣಾಂತರದಿಂದ ಶಾಲೆ ಬಿಟ್ಟ ಮಕ್ಕಳಿಗಾಗಿ ಅನೌಪಚಾರಿಕ ಶಾಲಾ ಅಭ್ಯಾಸಕ್ಕೆ ಬೇರೆ ವ್ಯವಸ್ಥೆ ಮಾಡಿದೆ. ಶಾಲಾ ಶಿಕ್ಷಣ ಮುಗಿಸಿದ ಮಕ್ಕಳಿಗೆ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ವ್ಯವಸ್ಥೆ ಹಾಗೂ ತಾಂತ್ರಿಕ ಮತ್ತು ವೈದ್ಯಕೀಯ ಶಿ‌ಕ್ಷಣದ ವ್ಯವಸ್ಥೆಯನ್ನೂ ಮಾಡಿದೆ. ಶಿಕ್ಷಣ ಕ್ಷೇತ್ರವು ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ಎಲ್ಲಾ ಮಟ್ಟದಲ್ಲೂ ಖಾಸಗಿ ಶಾಲಾ ಕಾಲೇಜುಗಳನ್ನು ಸ್ಥಾಪಿಸುವ ಅನುಕೂಲವನ್ನು ಮಾಡಿಕೊಟ್ಟಿರುವುದು ಗಮನಾರ್ಹ. ಆದರೆ, ಶಿಕ್ಷಣ ಕ್ಷೇತ್ರದಲ್ಲಿ ಕಂಡುಬರುವ ಎರಡು ಅತಿ ಮುಖ್ಯವಾದ ಕೊರತೆಗಳೆಂದರೆ (ಅ) ಮಕ್ಕಳು ಶಾಲೆಯನ್ನು ತ್ಯಜಿಸುವ ಪ್ರಮಾಣದ ಹೆಚ್ಚಳ ಹಾಗೂ ವಿದ್ಯಾರ್ಜನೆಗೆಂದು ಮುಂದೆ ಬರುವ ಹೆಣ್ಣು ಮಕ್ಕಳ ಪ್ರಮಾಣ ಗಂಡು ಮಕ್ಕಳಿಗೆ ಹೋಲಿಸಿದರೆ ಕಡಿಮೆ ಇರುವುದು, ಮತ್ತು (ಆ) ಶಿಕ್ಷಣದ ಗುಣಮಟ್ಟದಲ್ಲಿ ಕೊರತೆ. ಈ ಕೊರತೆಗಳನ್ನು ನೀಗಿಸುವ ದೃಷ್ಟಿಯಿಂದ ಸಮರ್ಪಕವಾದ ಯೋಜನೆಗಳನ್ನು ಸರ್ಕಾರ ರೂಪಿಸಿ ಅನುಷ್ಠಾನಕ್ಕೆ ತರುವ ಅವಶ್ಯಕತೆ ಇದೆ ಎಂಬ ವಾದ ಉಷಾ ಅವರದು.

ಅದೇ ರೀತಿಯಾಗಿ ಮಾನವ ಸಂಪತ್ತನ್ನು ಗುಣಾತ್ಮಕವಾಗಿ ಉತ್ತಮಗೊಳಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಕೈಗೊಳ್ಳುವುದರ ಮೂಲಕ ತೆಗೆದುಕೊಂಡಿದೆ. ಈ ಕ್ರಮಗಳ ಸ್ಥೂಲ ಪರಿಚಯ ಮಾಡಿಕೊಟ್ಟು ಹಾಗೂ ಅವುಗಳ ಪರಿಣಾಮಗಳೇನೆಂಬುದನ್ನು ವಿಶ್ಲೇಷಿಸುತ್ತಾ ಹನುಮಂತ ರಾಯಪ್ಪ ಮತ್ತು ಉಮಾಮಣಿಯವರು ಒಟ್ಟಿನಲ್ಲಿ ಪರಿಮಾಣಕ್ಕಿಂತ ಗುಣಾತ್ಮಕ ಜನ ಸಂಪತ್ತನ್ನು ಬೆಳೆಸಲು ಪ್ರಯೋಗಿಸಬಹುದಾದ ಸಲಹೆಗಳನ್ನು ತಮ್ಮ ಲೇಖನದಲ್ಲಿ ಕೊಟ್ಟಿದ್ದಾರೆ. ಸ್ತ್ರೀಯರ ಮದುವೆ ವಯಸ್ಸನ್ನು ಸೂಕ್ತವಾಗಿ ಹೆಚ್ಚಿಸುವುದು, ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವುದು, ಮಕ್ಕಳ ಪಾಲನೆ ಮತ್ತು ಪೋಷಣೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯ ಕಾರ್ಯಕ್ರಮಗಳನ್ನು ಕೈಗೊಳ್ಳುವುದು – ಈ ಕ್ರಮಗಳಿಂದ ಜನಸಂಖ್ಯೆ ಬೆಳೆವಣಿಗೆ ಪ್ರಮಾಣ ಕಡಿಮೆಯಾಗುವುದಿಲ್ಲದೆ ಜನ ಸಂಪತ್ತಿನ ಗುಣಮಟ್ಟವೂ ಸಹ ಅಧಿಕವಾಗುತ್ತದೆ ಎಂಬ ಅಂಶವು ಅವರ ಲೇಖನದಿಂದ ಮೂಡಿಬರುತ್ತದೆ.

ಜೀವನ ಮಟ್ಟವನ್ನು ಉತ್ತಮಗೊಳಿಸುವ ಇತರೆ ಅಂಶಗಳು ಎಂದರೆ ಬಡತನ ಮತ್ತು ನಿರುದ್ಯೋಗವನ್ನು ತೊಡೆದು ಹಾಕುವುದು. ಈ ಕುತ್ತುಗಳ ಬಗ್ಗೆ ಅಧ್ಯಯನ ಮಾಡಿ ನಮಗಾಗಿ ಲೇಖನ ತಯಾರಿಸಿದವರು ಶಾಂತಪ್ಪ ಮತ್ತು ಕೇಶವ ಅವರು. ಅವರ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ ಬಡತನದ ಮಟ್ಟವು ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡಲ್ಲೂ ಭಾರತದ ಮಟ್ಟಕ್ಕಿಂತ ಹೆಚ್ಚಾಗಿರುವುದು ಕಂಡುಬರುತ್ತದೆ ಹಾಗೂ ನಿರುದ್ಯೋಗ ಮಟ್ಟವನ್ನು ಯಾವುದೇ ವಿಧಾನವನ್ನಳವಡಿಸಿ ಅಳೆದರೂ ಸಹ ಅದು ಭಾರತದ ಸ್ಥಿತಿಗಿಂತ ಗಮನಾರ್ಹವಾಗಿ ಕಡಿಮೆ ! ಸಾಮಾನ್ಯವಾಗಿ ಬಡತನ ಮತ್ತು ನಿರುದ್ಯೋಗ ಒಂದಕ್ಕೊಂದು ಅಂಟಿಕೊಂಡು ಚಲಿಸುವ ಚಾಲಕಗಳು, ಆದರೆ ಕರ್ನಾಟಕದ ಸ್ಥಿತಿಯಲ್ಲಿ ಅವುಗಳು ಬೇರೆಯಾಗಿರುವುದು ಗಮನಾರ್ಹ, ಇದಕ್ಕೆ ಕಾರಣ ಬಹುಶಃ ನಮ್ಮಲ್ಲಿನ ಉದ್ಯೋಗಾವಕಾಶಗಳು ಮುಖ್ಯವಾಗಿ ಪ್ರಥಮ ಮತ್ತು ತೃತೀಯ ಕ್ಷೇತ್ರಗಳಲ್ಲಿ ಅಷ್ಟು ಉತ್ಪಾದಕತ್ವದ್ದೂ ಲಾಭದಾಯಕವಾದ್ದೂ ಇಲ್ಲದಿರುವಿಕೆ.

ಬಡತನ ಮತ್ತು ನಿರುದ್ಯೋಗಗಳ ಬೇಗೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ದೇಶದಾದ್ಯಂತ ಮಾಡಿರುವ ಹಾಗೆ ಕರ್ನಾಟಕದಲ್ಲೂ ಸಹ ಅನೇಕ ನೇರ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸರಿಯಷ್ಟೆ. ಇಂತಹ ಕಾರ್ಯಕ್ರಮಗಳು ಎಷ್ಟು ಪರಿಣಾಮಕಾರಿಗಳಾಗಿವೆ ಎಂಬುದನ್ನು ಪರಿಶೀಲಿಸಿದ ಶಾಂತಪ್ಪ ಮತ್ತು ಕೇಶವ ಅವರು ಅವುಗಳನ್ನು ಅನುಷ್ಠಾನಗೊಳಿಸುವಿಕೆಯ ಕೆಲವು ನ್ಯೂನತೆಗಳನ್ನೂ ಎತ್ತಿ ತೋರಿಸಿದ್ದಾರೆ.

ಕೃಷಿ ಪ್ರಧಾನವಾದ ನಮ್ಮ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ದರ ಒಟ್ಟಾರೆ ಆರ್ಥಿಕತೆಯ ಬೆಳೆವಣಿಗೆ ದರವನ್ನು ನಿರ್ಣಯಿಸುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ನಮ್ಮ ಕೃಷಿ ಕ್ಷೇತ್ರದ ಬೆಳೆವಣಿಗೆ ದರ ಇತ್ತೀಚೆಗೆ ಅಷ್ಟೊಂದು ಗಮನಾರ್ಹ ಏರಿಕೆಯನ್ನು ತೋರಿಸುತ್ತಿಲ್ಲ. ಈ ಸಂಬಂಧಿತವಾಗಿ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ಶೆಣೈ ಹಾಗೂ ವಿವೇಕಾನಂದ ಅವರು ಅವರ ಲೇಖನದಲ್ಲಿ ಕೈಗೊಂಡಿದ್ದಾರೆ. ಹಾಗೂ ಕೃಷಿಗೆ ಸಂಬಂಧಿಸಿದ ಅನುಷ್ಟಾನಗೊಳಿಸಬಹುದಾದ ನೀತಯ ಆಯ್ಕೆ ಕುರಿತಂತೆ ಈ ಲೇಖನ ಒಂದು ಮಾರ್ಗದರ್ಶನ ನೀಡುತ್ತದೆ.

ಆದರೆ ಕರ್ನಾಟಕ ಕೃಷಿ ಕ್ಷೇತ್ರದ ಬೆಳೆವಣಿಗೆ ದರ ಇತ್ತೀಚೆಗೆ ಸ್ಥಗಿತಗೊಂಡಿರುವುದಲ್ಲದೆ ಅದು ರಾಷ್ಟ್ರಕ್ಕಿಂತ ಕೆಳಮಟ್ಟದಲ್ಲಿದೆ. ಇದಕ್ಕೆ ಕಾರಣ ಬೆಳೆಗಳ ಇಳುವರಿಕೆಯಲ್ಲಿ ಹೆಚ್ಚಿನ ಏರಿಕೆ ಇಲ್ಲದಿರುವುದು ಮತ್ತು ಅದು ಕೆಳಮಟ್ಟದಲ್ಲಿ ಸ್ಥಗಿತಗೊಂಡಿರುವುದು. ಹಾಗೂ ಕರ್ನಾಟಕ ಬೆಳೆಗಳ ವಿನ್ಯಾಸದಲ್ಲಿ ಬದಲಾವಣೆಯೂ ಸಹ ಕಂಡುಬಂದಿದೆ. ಇತ್ತೀಚೆಗೆ ಧಾನ್ಯಗಳಿಗಿಂತ ವ್ಯಾಪಾರೀ ಬೆಳೆಗಳಿಗೆ ಒತ್ತು ಹೆಚ್ಚು ಸಿಗುತ್ತಲಿದೆ. ಒಂದು ದೃಷ್ಟಿಯಲ್ಲಿ ಇಂತಹ ಪ್ರವೃತ್ತಿ ಒಳ್ಳೆಯದೇ. ಆದರೆ ಧಾನ್ಯಗಳ ಇಳುವರಿಯನ್ನು ತೀವ್ರ ದರದಲ್ಲಿ ಏರಿಕೆಗೊಳಿಸದಿದ್ದರೆ ನಮ್ಮಲ್ಲಿ ಧಾನ್ಯಗಳಭಾವವಾಗಿ ಬೇರೆ ರಾಜ್ಯಗಳಿಂದ ಅವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ.

ಕೃಷಿ ಉತ್ಪಾದನೆ ಹಾಗೂ ಬೆಳೆಗಳ ಇಳುವರಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಒಂದು ಸಮರ್ಪಕವಾದಂತಹ ಕೃಷಿ ಧೋರಣೆಯನ್ನು ಸರ್ಕಾರ ಅಳವಡಿಸಿಕೊಳ್ಳಬೇಕು. ಭೂ ಸುಧಾರಣೆ, ಕೃಷಿ ಸಾಲ, ಕೃಷಿಗೆ ಬೇಕಾಗುವ ಇತರೆ ಸೌಲಭ್ಯಗಳನ್ನು ಒದಗಿಸುವುದು – ಇವುಗಳು ಅಂತಹ ಧೋರಣೆಗಳ ಅಂಗಗಳಾಗಬೇಕಷ್ಟೆ.

ಆದರೆ ಮುಖ್ಯವಾಗಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವುದರಿಂದ ಕೃಷಿ ಕ್ಷೇತ್ರದ ಬೆಳೆವಣಿಗೆಗೆ ತುಂಬಾ ಅನುಕೂಲವಾಗುತ್ತದೆ, ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ವೆಂಕಟರೆಡ್ಡಿಯವರು ಕರ್ನಾಟಕದ ನೀರಾವರಿ ಅಭಿವೃದ್ಧಿ ಬಗ್ಗೆ ಉಂಟಾಗಿರುವ ಮುನ್ನಡೆ ಹಾಗೂ ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ, ನೀರಾವರಿ ಸೌಲಭ್ಯದ ಬಗ್ಗೆ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದರೂ ಅದರ ಮಟ್ಟವು ರಾಷ್ಟ್ರದ ಸರಾಸರಗಿಂತ ಕಡಿಮೆ ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ. ಹಾಗೂ ಅದರಲ್ಲಿ ಪ್ರಾದೇಶಿಕ ಅಸಮಾನತೆಯ ತೀರ ಹೆಚ್ಚು. ಅಂದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯನ್ನು ಕೈಗೊಂಡು ನೀರಾವರಿ ಶಕ್ಯತೆಯನ್ನು ಹೆಚ್ಚಿಸುವುದಲ್ಲದೆ ಪ್ರಾದೇಶಿಕ ಅಸಮಾನತೆಯನ್ನು ತೊಡೆದು ಹಾಕುವ ಪ್ರಯತ್ನ ಕೈಗೊಳ್ಳಬೇಕೆಂಬ ಅವರ ಸಲಹೆ ತುಂಬಾ ಉಚಿತ. ಅಲ್ಲದೆ ಅವರೇ ಹೇಳುವಂತೆ ನೀರಾವರಿ ಸೌಲಭ್ಯದ ವಿರಳತೆಯ ಸ್ಥಿತಿಯಲ್ಲಿ ನದಿ ಮೂಲ, ನೀರಿನ ಹಂಚಿಕೆ  ಮತ್ತು ಉಪಯೋಗದ ಬಗ್ಗೆ ಹಾಗೂ ರೈತರು ನೀರನ್ನು ಜಾಗರೂಕತೆಯನ್ನು ವಹಿಸಿ ಬಳಸುವ ವಿಧಾನಗಳನ್ನು ಅವರಿಗೆ ತಿಳಿಯ ಹೇಳುವ ಕಾರ್ಯಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂಬ ಸಲಹೆಗಳು ಒಪ್ಪಿಕೊಳ್ಳುವಂತಹವು.

ಅತಿ ಹೆಚ್ಚಿನ ಪ್ರಮಾಣದ ಜನ ಸಂಖ್ಯೆಯು ಇಂದು ಕರ್ನಾಟಕದಲ್ಲಿ ಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ಕಾರಣ ಅವರ ಕ್ಷೇಮಾಭಿವೃದ್ಧಿಯನ್ನುಂಟು ಮಾಡಬೇಕಾದರೆ ಗ್ರಾಮಾಭಿವೃದ್ಧಿಯನ್ನು ಕೈಗೊಳ್ಳಬೇಕು. ವಿ.ಎಮ್.ರಾವ್ ಅವರ ಪ್ರಕಾರ ಗ್ರಾಮಾಭಿವೃದ್ಧಿಯು ಪ್ರಮುಖವಾಗಿ ಮೂರು ಆಕರಗಳಿಂದ ಪ್ರಭಾವಿತಗೊಳ್ಳುತ್ತದೆ. ಅವು ಯಾವುವೆಂದರೆ: ಮಾರುಕಟ್ಟೆ ಶಕ್ತಿಗಳು, ಸರ್ಕಾರದ ಧೋರಣೆ ಹಾಗೂ ಕಾರ್ಯಕ್ರಮಗಳು, ಮತ್ತು ರಾಜಕೀಯ. ಆದರೆ ಇವು ಗ್ರಾಮೀಣ ಅಭಿವೃದ್ಧಿಯ ಮೇಲೆ ಒಂದೊಂದು ಬಾರಿ ಕೆಟ್ಟ ಪ್ರಭಾವವನ್ನು ಬೀರುವ ಸಾಧ್ಯತೆ ಉಂಟು. ಆದ ಕಾರಣ ಸರ್ಕಾರವು ಕೆಲವು ಸೂಕ್ತ ನೀತಿಗಳನ್ನು ರೂಪಿಸಿಕೊಳ್ಳಬೇಕು. ಉದಾಹರಣೆಗೆ, ಬೆಂಬಲ ನೀತಿಗಳಿಂದ ಬಡವರು ಸ್ವಾವಲಂಬಿಗಳಾಗುವಂತೆ ಮಾಡಬೇಕು, ಹೂಡಿಕೆ ನೀತಿಯಿಂದ ರಾಜ್ಯದ ನೆಲ-ಜಲ ಸಂಪನ್ಮೂಲದ ಸಂರಕ್ಷಣೆ ಮಾಡಬೇಕು, ಒಣ ಭೂಮಿಯ ಬೇಸಾಯವನ್ನು ಉತ್ತಮಗೊಳಿಸುವ ತಾಂತ್ರಿಕತೆಯನ್ನು ಬೆಳೆಸಬೇಕು. ಹಾಗೂ ರಫ್ತು ಮಾರುಕಟ್ಟೆಗೆ ದೇಣಿಗೆ ನೀಡುವ ತೋಟಗಾರಿಕೆ, ಮೀನುಗಾರಿಕೆ, ಹೂಗಳ ಬೆಳೆಗಳಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಬೇಕು. ಮೂರನೆಯದಾಗಿ, ನಿಯಂತ್ರಕ ಧೋರಣೆಗಳ ಮೂಲಕ ಮಾರುಕಟ್ಟೆ ನಿಯಂತ್ರಣೆ. ನಗರ ಉದ್ದಮೆಗಳಿಂದ ಗ್ರಾಮೀಣ ಹಿತಾಸಕ್ತಿಯ ರಕ್ಷಣೆ. ಖಾಸಗಿ ಬಂಡವಾಳ ಹೂಡಿಕೆಯಿಂದ ಉತ್ಪಾದನೆಯಲ್ಲಾಗುವ ವಿಕಾರಗಳ ನಿಯಂತ್ರಣ ಇವುಗಳನ್ನು ಕೈಗೊಳ್ಳಬೇಕು ಎಂಬ ಸಲಹೆಗಳ ಅತಿ ಸೂಕ್ತವಾದುವು.

ಗ್ರಾಮೀಣ ಅಭಿವೃದ್ಧಿಗೆ ಅನುವಾಗುವ ಹಾಗೂ ಗ್ರಾಮೀಣ ಬಡತನ ಮತ್ತು ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ಬಂದಿರುವ ಒಂದು ಉಪಾಯ ರೇಷ್ಮೆ ಕೃಷಿ ಎಂದರೆ ತಪ್ಪಾಗಲಾರದು. ಇದರ ಪ್ರಮುಖವಾದ ಪಾತ್ರವನ್ನು ಕುರಿತು ಪ್ರಸ್ತಾವನೆ ಮಾಡಿವು ಗೋವಿಂದರಾಜು ಅವರು ರೇಷ್ಮೆ ಕೃಷಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಕೈಗೊಂಡಿರುವ ಅನೇಕ ಯೋಜನೆಗಳನ್ನೂ ಕಾರ್ಯಕ್ರಮಗಳನ್ನೂ ಕುರಿತು ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲೂ ಹಿಪ್ಪುನೇರಳೆ ಬೆಳೆಯುವಂತೆ ಉತ್ತೇಜನ ಕೊಡುವ ಯೋಜನೆ, ರೇಷ್ಮೆ ಇಳುವರಿ ಹೆಚ್ಚಾಗುವಂತೆ ಮಾಡುವ ದೃಷ್ಟಿಯಿಂದ ಬೈವೋಲ್ಟೀನ್ ರೇಷ್ಮೆ ತಳಿಯನ್ನು ವೃದ್ಧಿಸಿ ಪ್ರಚುರ ಪಡಿಸುವುದು, ಮಧ್ಯವರ್ತಿಗಳ ಕಾಟವಿಲ್ಲದಂತೆ ಉತ್ಪಾದಕರು ಮತ್ತು ಗ್ರಾಹಕರು ರೇಷ್ಮೆ ಗೂಡು ಹಾಗೂ ಕಚ್ಚಾರೇಷ್ಮೆಗಳನ್ನು ಮಾರುವ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಿಕೊಡುವ ಕ್ರಮಗಳನ್ನು ಸರ್ಕಾರ ಕೈಗೊಂಡಿರುವುದು ಗಮನಾರ್ಹ.

ಇಂದು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಅಭಿವೃದ್ಧಿಯೂ ಆಗಬೇಕಾಗಿದೆ. ಹಿಂದುಳಿದವರ, ಮಹಿಳೆಯರ ಹಾಗೂ ಅಲ್ಪ ಸಂಖ್ಯಾತರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಾದಾಗಲೇ ನಮ್ಮ ಸಮಾಜವು ಒಂದು ಪ್ರಬುದ್ಧವಾದುದಾಗುತ್ತದೆ ಹಾಗೂ ಪ್ರಗತಿಪರವಾದುದು ಎನಿಸಿಕೊಳ್ಳುತ್ತದೆ. ಈ ಹಾದಿಯಲ್ಲಿ ಸರ್ಕಾರ ಸಾಕಷ್ಟು ಶ್ರಮಿಸುತ್ತಿರಿವುದರ ಬಗ್ಗೆ ಅನುಮಾನವಿಲ್ಲ. ಇದಲ್ಲದೆ ನಾವು ಗುರುತಿಸಬೇಕಾದುದು ಪಂಚಾಯತ್ ರಾಜ್ ಸಂಸ್ಥೆಗಳ ಹಾಗೂ ಸರ್ಕಾರೇತರ ಸಂಸ್ಥೆಗಳ ಪಾತ್ರ. ಇವುಗಳ ಪಾತ್ರವನ್ನು ಕುರಿತು ಬರೆದಿರುವ ಶಿವಣ್ಣನವರು ಇಲ್ಲಿಯತನಕ ಪಟ್ಟಭದ್ರವರ್ಗಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದ ಪಂಚಾಯತಿಗಳು ಇತ್ತೀಚಿನ ಕಾಯಿದೆಯ ಕಾರಣ ಅವುಗಳ ಆಡಳಿತ ಸೂತ್ರ ದುರ್ಬಲವರ್ಗಗಳ ಕೈಗೂ ಸಿಕ್ಕಿರುವ ದೃಷ್ಟಿಯಿಂದ ಇನ್ನು ಮೇಲೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಬದಲಾವಣೆಯಾಗುತ್ತದೆ ಎಂಬ ಆಶಯವನ್ನು ವ್ಯಕ್ತ ಪಡಿಸುತ್ತಾರೆ. ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳು ಪಂಚಾಯತ್‌ಗಳೊಟ್ಟಿಗೆ ಕೂಡಿ ಅಭಿವೃದ್ಧಿ ಕಾರ್ಯಗಳಿಗೆ ಕೈಒಡ್ಡಿದರೆ ಪಂಚಾಯತ್‌ಗಳು ಮತ್ತೂ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಅಭಿವೃದ್ಧಿಯನ್ನು ಪ್ರವರ್ತನಗೊಳಿಸಲು ಸಾಧ್ಯ ಎಂದೂ ಅಭಿಪ್ರಾಯ ಪಡುತ್ತಾರೆ.

ಕರ್ನಾಟಕ ಆರ್ಥಿಕತೆಯ ಮತ್ತೊಂದು ಮುಖ್ಯವಾದ ಕ್ಷೇತ್ರವೆಂದರೆ ಕೈಗಾರಿಕೆ. ಇದನ್ನು ಕುರಿತು ಬರೆಯುತ್ತಾ ಪ್ರಹ್ಲಾದಾಚಾರ್ ಅವರು ಕರ್ನಾಟಕ ಸರ್ಕಾರವು ತನ್ನ ದೂರದರ್ಶಿತ್ವ ನೀತಿಯಿಂದಾಗಿ ರಾಜ್ಯವು ದೇಶದಲ್ಲೇ ಕೈಗಾರಿಕಾ ಬೆಳವಣಿಗೆ ಮಟ್ಟದಲ್ಲಿ ಸ್ವಾತಂತ್ಯ್ರ, ಪೂರ್ವದಲ್ಲಿ ನಾಲ್ಕನೇ ಸ್ಥಾನ ಪಡೆಯುವಂತೆ ಮಾಡಿತ್ತು. ಆದರೆ ಇಂದು ಅದರ ಬೆಳೆವಣಿಗೆ ಕುಂಠಿತವಾಗಿ ಒಂಭತ್ತನೇ ಸ್ಥಾನಕ್ಕಿಳಿದಿದೆ ಎನ್ನುತ್ತಾರೆ. ಅಲ್ಲದೆ ರಾಜ್ಯದಲ್ಲಿ ಇಂದು ಕೈಗಾರಿಕೆಗಳ ಪ್ರಾದೇಶಿಕ ಅಸಮಾನತೆ, ಹಾಗೂ ಕೈಗಾರಿಕೆಗಳ ರೋಗಗ್ರಸ್ತತೆ ಕಡೆ ನಮ್ಮ ಗಮನವನ್ನು ಸೆಳೆದು ಈ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಅನುಕೂಲಕರವಾದ ಕೈಗಾರಿಕಾ ನೀತಿಯನ್ನು ರೂಪಿಸಿಕೊಳ್ಳಬೇಕೆಂದೂ ಸಲಹೆ ನೀಡುತ್ತಾರೆ. ಅವರು ಒತ್ತು ಕೊಡುವುದು ಮುಖ್ಯವಾಗಿ ಕೈಗಾರಿಕಾ ಬೆಳೆವಣಿಗೆಗೆ ಅನುಕೂಲ ಮಾಡಿಕೊಡುವಂತಹ ಒಂದು ವಾತಾವರಣದ ಸೃಷ್ಟಿ. ಅವರ ಪ್ರಕಾರ ಇಂತಹ ವಾತಾವರಣ ಸೃಷ್ಟಿಯಾಗಬೇಕಾದರೆ ಸಾಂಸ್ಥಿಕ ಸುಧಾರಣೆಗಳು, ಪ್ರಗತಿಪರ ತೆರಿಗೆ ನೀತಿ, ಸಾಧನ ಸಂಪತ್ತುಗಳ ಹಾಗೂ ಮೂಲಭೂತ ಸೌಲಭ್ಯಗಳ ಸೃಷ್ಟಿ ಆಗಬೇಕು.

ಕೈಗಾರಿಕಾಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸುವ ಮತ್ತೊಂದು ಮುಖ್ಯವಾದ ಅಂಶವೆಂದರೆ  ಹಿತಕರ ಕೈಗಾರಿಕಾ ಸಂಬಂಧಗಳು. ಇಂತಹ ವಾತಾವರಣವು ಕೈಗಾರಿಕಾ ವಿವಾದಗಳಿ‌ಲ್ಲಿದಿದ್ದ ಮಾತ್ರಕ್ಕೆ ಉಂಟಾಗುವುದಿಲ್ಲ. ಇದರ ಜೊತೆಗೆ ಕಾರ್ಮಿಕರ ಗೈರುಹಾಜರಿ ಹಾಗೂ ಉದ್ಯಮ ಬಿಟ್ಟು ಬೇರೆಯದಕ್ಕೆ ಹೊರಟುಹೋಗುವ ಕಾರ್ಮಿಕರ ಪ್ರಮಾಣ ತೀರ ಕಡಿಮೆಯಿರಬೇಕು. ಕೆಲಸದ ಜಾಗದಲ್ಲಿ ಹಾಗೂ ಉದ್ಯಮ ಬಿಟ್ಟು ಬೇರೆಯದಕ್ಕೆ ಹೊರಟುಹೋಗುವ ಕಾರ್ಮಿಕರ ಪ್ರಮಾಣ ತೀರ ಕಡಿಮೆಯಿರಬೇಕು. ಕೆಲಸದ ಜಾಗದಲ್ಲಿ ಹಾಗೂ ವೇಳೆಯಲ್ಲಿ ಶಿಸ್ತು, ಉತ್ಪಾದಕತ್ವವನ್ನು ಹೆಚ್ಚಿಸುವಂತೆ ಕಾರ್ಮಿಕರ ಸಹಕಾರ ಇರಬೇಕು. ಅಲ್ಲದೆ ಯಾವುದೇ ವಿವಾದ ಉಂಟಾದಾಗ ಅದನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಿಕೊಳ್ಳುವ ಮನೋಭಾವ ಕಾರ್ಮಿಕರಲ್ಲೂ ಉದ್ಯಮಿಗಳಲ್ಲೂ ಇರಬೇಕು. ಈ ಒಂದು ಚೌಕಟ್ಟಿನ್ನಿಟ್ಟಿಕೊಂಡು ಕರ್ನಾಟಕದಲ್ಲಿನ ಕೈಗಾರಿಕಾ ಸಂಬಂಧಗಳ ವಿಶ್ಲೇಷಣೆಯನ್ನು ಮಾಡುತ್ತಾ ರೇಣುಕಾರ್ಯ ಅವರು ಕೈಗಾರಿಕಾ ವಿವಾದಗಳ ಪ್ರಮಾಣ, ಇವುಗಳಿಂದ ತೊಂದರೆಗೀಡಾದ ಕಾರ್ಮಿಕರ ಸಂಖ್ಯೆ ಹಾಗೂ ಕಳೆದುಕೊಳ್ಳಲಾದ ಮಾನವ ದಿನಗಳನ್ನು ಇತರೆ ರಾಜ್ಯಗಳಿಗೆ ಹೋಲಿಸಿದ್ದೇ ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ಉತ್ತಮ ಎಂದು ಹೇಳುತ್ತಾರೆ. ಆದರೆ ಕೆಲಸಕ್ಕೆ ಗೈರು ಹಾಜರಾಗುವುದು, ಹಾಜರಾದರೂ ಕೆಲಸ ಮಾಡದಿರುವುದು, ಅಶಿಸ್ತನ್ನು ವ್ಯಕ್ತಪಡಿಸುವುದು – ಇವನ್ನು ಗಮನಿಸಿದರೆ ಕರ್ನಾಟಕದಲ್ಲಿ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಅಂದ ಮೇಲೆ ನಮ್ಮಲ್ಲಿ ಈ ಪರಿಸ್ಥಿತಿಯನ್ನು ಉತ್ತಮ ಪಡಿಸುವ ಯತ್ನವನ್ನು ಮಾಡಬೇಕಾಗಿದೆ. ಇದರಲ್ಲಿ ಕಾರ್ಮಿಕರು, ಮಾಲಿಕರು ಹಾಗೂ ಸರ್ಕಾರ ಪರಸ್ಪರ ಸಹಾಯಕವಾದ ಪಾತ್ರವನ್ನು ವಹಿಸಬೇಕು ಎಂಬುದನ್ನು ಅವರು ಒತ್ತಿ ಹೇಳುತ್ತಾರೆ.

ಕೈಗಾರಿಕಾ ಕ್ಷೇತ್ರಕ್ಕೆ ನೇರ ಸಂಬಂಧವುಳ್ಳ ಹಾಗೂ ಹೆಚ್ಚು ಗಮನ ಕೊಡಬೇಕಾದ ಕ್ಷೇತ್ರ ಎಂದರೆ ಸಾರ್ವಜನಿಕ ಉದ್ಯಮಗಳು. ಕರ್ನಾಟಕ ಸರ್ಕಾರವು ಅನೇಕ ಉದ್ಯಮಗಳನ್ನು ಸ್ವಾತಂತ್ಯ್ರ ಪೂರ್ವದಿಂದಲೂ ಪ್ರಾರಂಭಿಸಿ ಅವುಗಳನ್ನು ನಿರ್ವಹಿಸುತ್ತಿರುವುದು ನಿಜವಷ್ಟೆ. ಆದರೆ ಅವುಗಳಿಂದ ಬರುತ್ತಿರುವ ಲಾಭದ ಪ್ರಮಾಣ ಇತ್ತೀಚಿನ ಅಂದಾಜಿನ ಪ್ರಕಾರ ಕೇವಲ ಶೇಕಡಾ ೦.೮೨ ಹಾಗೂ ಅವುಗಳ ಪೈಕಿ ಬಹುತೇಕ ಉದ್ಯಮಗಳು ನಷ್ಟವನ್ನನುಭವಿಸುವಂತಹವು. ಇಂತಹ ಉದ್ಯಮಗಳ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿವೆ. ಇವುಗಳ ಬಗ್ಗೆ ಸರ್ಕಾರವು ಅವನ್ನು ತನ್ನೊಂದಿಗಿರಿಸಬೇಕೆ, ಮುಚ್ಚಬೇಕೆ, ಇಲ್ಲವೆ ಖಾಸಗೀ ಬಂಡವಾಳಸ್ಥರಿಗೆ ಮಾರಿಬಿಡಬೇಕೆ ಎಂಬ ಒಂದು ನಿರ್ಣಯಕ್ಕೆ ಬರಬೇಕು. ಆದರೆ ನಮ್ಮ ಮುಂದೆ ಇರುವ ಪ್ರಶ್ನೆ ಯಾವುದನ್ನು ಇರಿಸಿಕೊಳ್ಳಬೇಕು ಯಾವುದನ್ನು ಮಾರಬೇಕು? ಅಂದರೆ ಅವುಗಳ ಪೈಕಿ ನಿಜಕ್ಕೂ ಯಾವುವು ಸರ್ಕಾರಕ್ಕೆ ಹಾಗೂ ಸಮಾಜಕ್ಕೆ ಹೊರೆಯಾಗಿವೆ? ಇದಕ್ಕೆ ಶ್ರೀಕಂಠಾರಾಧ್ಯ ಅವರ ಉತ್ತರ ಬಹಳ ಸೂಕ್ತವಾಗಿದೆ. ಹಣಕಾಸು ಫಲಿತಾಂಶ ಮತ್ತು ಇತರೆ ಮಾನದಂಡಗಳು – ಎಂದರೆ ಸೇವೆಗಳ ಗುಣಮಟ್ಟ, ಮೊದಲೇ ನಿಗದಿಪಡಿಸಿರುವ ಗುರಿಗಳನ್ನು ಎಷ್ಟರ ಮಟ್ಟಿಗೆ ಮುಟ್ಟಲಾಗಿದೆ, ಉತ್ಪಾದಕತೆ, ಉದ್ಯೋಗ ಸೃಷ್ಟಿ-ಇವನ್ನು ಪ್ರಯೋಗಿಸಿ ಮೇಲಿನ ಪ್ರಶ್ನೆಯನ್ನು ಇತ್ಯರ್ಥ ಮಾಡಿಕೊಂಡು ಯಾವುದೇ ಒಂದು ನಿರ್ಧಾರಕ್ಕೆ ಬರಬೇಕು ಎಂಬುದು.

 

ಪುಸ್ತಕ: ಕನ್ನಡ ಅಧ್ಯಯನ (ಕರ್ನಾಟಕದ ಆರ್ಥಿಕತೆ)
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಕೆ.ಜಿ. ವಾಸುಕಿಪ್ರೊ. ಅಬ್ದುಲ್ ಅಜೀಜ್

1 ಕಾಮೆಂಟ್‌:

  1. ಮಾಹಿತಿ ಪರಿಪೂರ್ಣವಾಗಿದೆ. ಕರ್ನಾಟಕದ ಆರ್ಥಿಕತೆಗೆ ಸಂಬಂಧಿಸಿದಂತೆ ಇತ್ತಿಚ್ಚಿನ ಮಾಹಿತಿಗಳನ್ನು ತಿಳಿಸಿ

    ಪ್ರತ್ಯುತ್ತರಅಳಿಸಿ