ಭಾನುವಾರ, ಆಗಸ್ಟ್ 14, 2016

ಕರ್ನಾಟಕದ ಆರ್ಥಿಕತೆ (ಭಾಗ ೨)

ಕನ್ನಡ ಅಧ್ಯಯನ (ಕರ್ನಾಟಕದ ಆರ್ಥಿಕತೆ): ಭಾಗ ೧ – ಅಭಿವೃದ್ಧಿ – ಸಂಪನ್ಮೂಲಗಳು – ಜನಸಂಖ್ಯೆ – ಬಡತನ: ೨. ಕರ್ನಾಟಕದಲ್ಲಿ ಮಾನವಸಂಪನ್ಮೂಲಾಭಿವೃದ್ಧಿ : ಒಂದು ಸಮೀಕ್ಷೆ (೨)

ಪದವೀಪೂರ್ವ ಶಿಕ್ಷಣ

೧೯೫೬-೫೭ರಲ್ಲಿ ಎರಡು ವರ್ಷದ ಇಂಟರ್ ಮೀಡಿಯಟ್ ಶಿಕ್ಷಣವನ್ನು ರದ್ದುಗೊಳಿಸಿ ಒಂದು ವರ್ಷದ ಪದವೀಪೂರ್ಣ ಶಿಕ್ಷಣವನ್ನಾರಂಭಿಸಲಾಯಿತು. ಕೆಲವು ಪ್ರೌಢಶಾಲೆಗಳಲ್ಲಿ ೧೧ನೇ ತರಗತಿಯನ್ನು ತೆರೆಯಲಾಯಿತು.

೧೯೭೦ರಲ್ಲಿ ಪ್ರಿ ಯೂನಿವರ್ಸಿಟಿ ಬೋರ್ಡನ್ನು ಪ್ರಾರಂಭಿಸಲಾಯಿತು. ಪ್ರಿ ಯೂನಿವರ್ಸಿಟಿಯಲ್ಲಿ ಕೋರ್ಸ್‌‌ಗಳನ್ನು ವಿಸ್ತರಿಸಿ ಅದರೊಂದಿಗೆ ಸಾಧ್ಯವಾದಷ್ಟು ಸಮಾನತೆಯನ್ನೂ ತರುವ ಪ್ರಯತ್ನ ನಡೆಯಿತು. ೧೯೭೦ರ ದಶಕದಲ್ಲಿ ಪ್ರಿ ಯೂನಿವರ್ಸಿಟಿಯನ್ನು ಪದವೀಪೂರ್ವ ಕಾಲೇಜುಗಳೆಂದು ಕರೆಯಲಾಯಿತು.

೧೯೮೭ರಲ್ಲಿ ಒಟ್ಟು ೬೫೧ ಪದವೀಪೂರ್ವ ಕಾಲೇಜುಗಳಿದ್ದವು. ಅವುಗಳಲ್ಲಿ ಸುಮಾರು ೧, ೧೧, ೮೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ೧೯೮೦ ದಶಕದಲ್ಲಿ ತರಗತಿಗಳಲ್ಲಿ ಹೆಚ್ಚಿನಾಂಶ ತೇರ್ಗಡೆಯಾದವರು ಸೇರಿದ್ದು ವೃತ್ತಿ ಶಾಲೆಗೆ ಸೇರಿದ್ದ ಶಿಕ್ಷಣ. ಅವರುಗಳಲ್ಲಿ ಹೆಚ್ಚಿನಾಂಶ ವೈದ್ಯರೂ, ತಾಂತ್ರಿಕ ವಿಜ್ಞಾನಿಗಳೂ ಮತ್ತು ವೃತ್ತಿ ಶಿಕ್ಷಣ ಪಡೆದವರಾದರು.

೧೯೯೦ರ ದಶಕದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪದವಿ ಮುಗಿಸಿ ವೃತ್ತಿ ಆಧರಿತ ಶಿಕ್ಷಣ ಪಡೆಯುವ ಇಚ್ಛೆ ತೋರಿದುದರಿಂದ, ಡಿಗ್ರಿ ಕೋರ್ಸುಗಳಲ್ಲಿ ಭರ್ತಿಯಾಗುವವರ ಸಂಖ್ಯೆ ಕಡಿಮೆಯಾಗತೊಡಗಿತು.

ಪದವೀಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದಲ್ಲಿ ಒಂದು ತಿರುವನ್ನು ತರುವಂತಹ ಶಿಕ್ಷಣವಾದುದರಿಂದ ಅದಕ್ಕೆ ಹೆಚ್ಚು ಗಮನ ಕೊಡಲಾಯಿತು. ಇದಲ್ಲದೇ ಪದವೀಪೂರ್ವ (ಪ್ರಿ ಯೂನಿವರ್ಸಿಟಿ) ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳ ಗುಣಮಟ್ಟವನ್ನು ಗುರುತಿಸುವ ಸಾಮಾನ್ಯ ಭರ್ತಿ ಮಾಡುವ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಅವರಲ್ಲಿ ಹೆಚ್ಚು ಮಂದಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ, ಡೆಂಟಲ್ ಕೋರ್ಸ್‌‌ಗಳಿಗೆ ಆಯ್ಕೆ ಆಗುತ್ತಾರೆ. ಇದರಿಂದಲೇ ಈ ವಿಧದ ಶಿಕ್ಷಣಕ್ಕೆ ಬಹಳ ಮಹತ್ವ ಕೊಡಲಾಗುತ್ತಿದೆ. ಕೊಳಂದೆ ಸ್ವಾಮೀ ವರದಿಯ ಮೇರೆಗೆ ೧೯೭೭ರ ನಂತರ ಪದವೀ ಪೂರ್ವ ಶಿಕ್ಷಣದ ಜೊತೆಯಲ್ಲಿ ಶಾಲೆಗಳಲ್ಲಿ, ಡಿಗ್ರಿ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣವನ್ನು ಆರಂಭಿಸಿ ವಿದ್ಯಾರ್ಥಿಗಳು ಶೇಕಡ ೫೦ರಷ್ಟು ವೃತ್ತಿ ಶಿಕ್ಷಣಕ್ಕೆ ಭರ್ತಿಯಾಗುವಂತೆ ಉತ್ತೇಜನ ನೀಡಲಾಗುತ್ತಿದೆ.

ವೃತ್ತಿ ಶಿಕ್ಷಣ

೧೯೭೭ರಲ್ಲಿ ವೃತ್ತಿ ಶಿಕ್ಷಣ ನಿರ್ದೇಶನಾಲಯವನ್ನು ಅಸ್ತಿತ್ವಕ್ಕೆ ತರಲಾಯಿತು. ಮೊದಲು ಇದು ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿದ್ದು ನಂತರ ೧೯೭೯ರಲ್ಲಿ ಈ ಯೋಜನೆಯನ್ನು ರಾಜ್ಯಕ್ಕೆ ವರ್ಗಾಯಿಸಲಾಯಿತು. ಈಗ ಈ ನಿರ್ದೇಶನಾಲಯದಡಿಯಲ್ಲಿ ಒಟ್ಟು ಐದು ವಿಭಾಗಗಳು ಅಂದರೆ ಬೆಂಗಳೂರು, ಮಂಗಳೂರು, ಶಿವಮೊಗ್ಗ, ರಾಯಚೂರು ಮತ್ತು ಧಾರವಾಡಗಳಲ್ಲಿ ಉಪ ನಿರ್ದೇಶಕರ ಉಸ್ತುವಾರಿಯಲ್ಲಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ರಾಜ್ಯ ಮಟ್ಟದಲ್ಲಿ ಮಾನ್ಯ ವಿದ್ಯಾ ಮಂತ್ರಿಗಳ ಅಧ್ಯಕ್ಷತೆಯಲ್ಲಿ ವೃತ್ತಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಹಿನ್ನೆಲೆಯಲ್ಲಿ ವಿವಿಧ ಸರ್ಕಾರೇತರ ಮುಖ್ಯಸ್ಥರನ್ನೊಳಗೊಂಡ ರಾಜ್ಯ ಶಿಕ್ಷಣ ಮಂಡಳಿಯು ಪರೀಕ್ಷಾ ಸಂಬಂಧ ಮತ್ತಿತರ ವಿಷಯಗಳಲ್ಲಿ ಸಲಹೆ ನೀಡುತ್ತಾ ಬಂದಿದೆ.

೧೯೫೭, ೧೯೮೮, ೧೯೯೫-೯೬ರಲ್ಲಿ ಮೂರು ಬಾರಿ ವೃತ್ತಿ ಶಿಕ್ಷಣ ಸಮೀಕ್ಷೆಗಳನ್ನೂ ವಿವಿಧ ಜಿಲ್ಲೆಗಳಲ್ಲಿ ತಯಾರಿಸಿ, ವೃತ್ತಿ ಶಿಕ್ಷಣದ ಕೋರ್ಸಗಳನ್ನು ಅವುಗಳಿಗೆ ಸರಿಹೋದುವಂತಹ ಪಠ್ಯಕ್ರಮಗಳನ್ನೂ ತಯಾರಿಸಿ ಮತ್ತು ವೃತ್ತಿ ಶಿಕ್ಷಣಕ್ಕೆ ಸೌಲಭ್ಯ ಮತ್ತು ಸಲಕರಣೆಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ವೃತ್ತಿ ಶಿಕ್ಷಣವನ್ನು ಆರಂಭಿಸಲಾಗಿದೆ.

ಡಾ|| ರಾಮೇಗೌಡ ಕಮಿಟಿಯ ವರದಿಯ ಮೇರೆಗೆ ತಾಂತ್ರಿಕ ವಿದ್ಯೆಗೆ ಸೇರಿದಂತಹ ವೃತ್ತಿ ಶಿಕ್ಷಣವನ್ನು ಇಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯ/ಪಾಲಿಟೆಕ್ನಿಕ್ ಸಂಸ್ಥೆಗಳಿಗೆ ಬದಲಾಯಿಸಲಾಯಿತು.

ಎಂಟನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ವೃತ್ತಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದು, ಶೇಕಡ ೨೫ ಭಾಗ ಸಾಮಾನ್ಯ ಶಿಕ್ಷಣದಿಂದ ವೃತ್ತಿ ಶಿಕ್ಷಣಕ್ಕೆ ಅಳವಡಿಸುವ ಭೌತಿಕ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಅಂತೆಯೇ ೧೯೯೩-೯೪ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳು ಸೇರಿದಂತೆ ೨೦೫ ಹೊಸ ವೃತ್ತಿ ಶಿಕ್ಷಣ ಕೋರ್ಸಗಳನ್ನು ಪ್ರಾರಂಭಿಸಿ ಒಟ್ಟು ೫೯೧ ವಿದ್ಯಾಲಯಗಳಲ್ಲಿ ೧೦೧೫ ಕೋರ್ಸ್‌‌ಗಳನ್ನು (ಆಯ್ದ ೫೯ ಕಸಬುಗಳಲ್ಲಿ) ಒಟ್ಟು ೧೧೧೨ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.

ಪ್ರೌಢಶಾಲಾ ಹಂತದಲ್ಲಿ ವೃತ್ತಿ ಪೂರ್ವ (ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ) ಶಿಕ್ಷಣ ಕೋರ್ಸ್‌‌ಗಳನ್ನು ಸಂಯುಕ್ತ ಪದವಿ ಪೂರ್ವ ವಿದ್ಯಾಲಯಗಳಲ್ಲಿ ಆಯ್ದ (ವಿವಿಧ) ೨೦ ಕಸುಬುಗಳಲ್ಲಿ ೧೦೦ ಕೋರ್ಸ್‌‌ಗಳನ್ನು ೧೯೯೪-೯೫ನೇ ಸಾಲಿನಿಂದ ಜಾರಿಗೊಳಿಸಲು ನಿರ್ಧರಿಸಲಾಯಿತು.

ಇದಲ್ಲದೇ ವೃತ್ತಿ ಶಿಕ್ಷಣ ಪಡೆದ ಪದವೀಧರ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕೊಡುವುದರ ಸಲುವಾಗಿ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಪ್ರತ್ಯೇಕ ನೋಂದಣಿ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರವು ಸರ್ಕಾರೀ ಇಲಾಖೆಗಳಲ್ಲಿ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಸರ್ಕಾರೀ ಇಲಾಖೆಗಳಿಗೆ ಮತ್ತು ಕೋರ್ಸಿಗೆ ಸಂಬಂಧಿಸಿದಂತೆ ಇಲಾಖೆಗಳು ಸಿ ಮತ್ತು ಆರ್ ನಿಯಮಗಳನ್ನೂ ತಿದ್ದುಪಡಿ ಮಾಡಲಾಗಿದೆ. ಇವುಗಳಿಂದಾಗಿ ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದುಕೊಳ್ಳುತ್ತಿದ್ದಾರೆ. ಇವುಗಳಲ್ಲದೇ, ಎರಡು ವರ್ಷ ತರಬೇತಿಯಾದ ನಂತರ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ತರಬೇತಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ತಿದ್ದುಪಡಿ ಮಾಡಲಾಗಿದ್ದು ೧೦೦೦ ವಿದ್ಯಾರ್ಥಿಗಳು ಇದರಿಂದಾಗಿ ಪ್ರಯೋಜನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಪ್ರಾಯೋಗಿಕ ತರಬೇತಿ ಪಡೆದು ಕೆಲಸ/ಉದ್ದಿಮೆಗಳಲ್ಲಿ ಉನ್ನತ ಸ್ಥಾನ ಪಡೆಯಲು ಸಹಾಯಕವಾಗಿದೆ. ಇಲ್ಲವಾದಲ್ಲಿ ಸ್ವಯಂ ಉದ್ಯೋಗಿಗಳಾಗಲು ಸಾಧ್ಯವಿದೆ.

ವೃತ್ತಿ ಶಿಕ್ಷಣ ಇಲಾಖೆಯು ೧೯೯೩-೧೯೯೪ನೇ ಸಾಲಿನಲ್ಲಿ ಸುಮಾರು ೧೯೪.೦೭೫  ಲಕ್ಷ ರೂಪಾಯಿಗಳನ್ನು (ರಾಜ್ಯದ ಪಾಲು) ಮತ್ತು ೬೪೫.೩೩೫ ಲಕ್ಷ ರೂಪಾಯಿಗಳನ್ನು (ಕೇಂದ್ರದ ಪಾಲು) ವೃತ್ತಿ ಶಿಕ್ಷಣಕ್ಕಾಗಿ ಖರ್ಚು ಮಾಡಿದೆ.

ವೃತ್ತಿ ಶಿಕ್ಷಣವು ಪ್ರಗತಿಯಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ನೆರವಿನಿಂದ ಸಾಧ್ಯವಾಗಿದ್ದರೂ ಸಹಾ ನಿರೀಕ್ಷಿಸಿದಷ್ಟು ಫಲಕಾರಿಯಾಗಿಲ್ಲ. ಇದಕ್ಕೆ ಕಾರಣವನ್ನು ವಿವಿಧ ಸಂಶೋಧನೆಗಳಿಂದ (ಎನ್.ಸಿ.ಇ.ಆರ್.ಟಿ., ಐ.ಐ.ಎಮ್., ಐ.ಎಸ್.ಇ.ಸಿ. ಶಿವರುದ್ರಪ್ಪ) ಕಂಡುಹಿಡಿಯಲಾಗಿದೆ. ಇವುಗಳಿಂದ ಹೊರಬಂದಿರುವ ಅಂಶಗಳು ಹೀಗಿವೆ:

ಆಡಳಿತ ಮತ್ತು ನಿರ್ವಹಣೆಯಲ್ಲಿರುವ ಕುಂದುಕೊರತೆಗಳು.

ವಿದ್ಯಾರ್ಥಿಗಳು ಮತ್ತು ಪೋಷಕರು ತೋರುವ ಭಾವನೆಗಳು (ಕೋರ್ಸುಗಳಿಗೆ ಹೆಚ್ಚು ಮಹತ್ವ ಕೊಡದಿರುವಿಕೆ, ಕೆಲವು ಕೋರ್ಸ್‌‌ಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿರುವಿಕೆ ಮತ್ತು ಪದವೀ ಮಟ್ಟದಲ್ಲಿ ಕೋರ್ಸ್‌‌ಗಳನ್ನು ಮುಂದುವರೆಸುವಂತಹ ಕಾರ್ಯಕ್ರಮಗಳಿಲ್ಲದಿರುವಿಕೆ, ಉದ್ಯೋಗಾವಕಾಶ ಕಡಿಮೆ ಇರುವಿಕೆ).

ವೃತ್ತಿ ತರಬೇತಿ ಕೊಡುವ ಕೇಂದ್ರಗಳನ್ನು ಪದವೀಪೂರ್ವ ಕಾಲೇಜುಗಳಿಗೆ ಸೇರಿಸುವುದರಿಂದ ಆಡಳಿತ ಮಾರ್ಗದ ತಾರತಮ್ಯತೆಗೆ ತುತ್ತಾಗಿ ವೃತ್ತಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಾ ಬಂದಿದೆ.

ವೃತ್ತಿ ಶಿಕ್ಷಣದಲ್ಲಿ ಹೆಚ್ಚು ಶಿಕ್ಷಕರನ್ನು ನೇಮಿಸಲಾಗಿದ್ದು, ಅವರಿಗೆ (ಶಿಕ್ಷಕರಿಗೆ) ತರಬೇತಿ ನೀಡಲಾಗಿದೆ. ಅದರಡಿಯಲ್ಲಿ ಶ್ರಮಿಕ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ, ವೃತ್ತಿ ಶಿಕ್ಷಣ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡಲು ಅನುಕೂಲವಾಗುವಂತಹ ಜನರಲ್ ಫೌಂಡೇಷನ್ ಕೋರ್ಸ್‌ತರಬೇತಿ ಕೊಡಲಾಗುತ್ತಿದೆ.

ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಡೆಸಲಾಗುತ್ತಿರುವ ಪಾಲಿಟೆಕ್ನಿಕ್ ಮತ್ತು ಐ.ಟಿ.ಐ.ಕೋರ್ಸ್‌‌ಗಳೂ ಸಹ ಸಾಕಷ್ಟು ಪ್ರಗತಿ/ವಿಸ್ತರಣೆ ಹೊಂದಿವೆ. ಇವುಗಳೂ ಸಹ ಇತ್ತೀಚೆಗೆ ಗುಣಮಟ್ಟವನ್ನು ಕಳೆದುಕೊಂಡಿದ್ದು ಆ ಕಾರಣಕ್ಕಾಗಿ ಒಂದು ಕಮಿಟಿಯನ್ನೂ ರಚಿಸಿ ಅವರ ಸಲಹೆಯ ಮೇರೆಗೆ ಹೆಚ್ಚು ಕಾರ್ಯಕ್ರಮಗಳನ್ನು ನಿಯೋಜಿಸಲಾಗುತ್ತಿದೆ. ಈ ಕಾರಣದಿಂದಾಗಿ ಪಾಲಿಟೆಕ್ನಿಕ್ ಮತ್ತು ಐ.ಟಿ.ಐ. ಉತ್ತಮ ಪ್ರಗತಿ ಸಾಧಿಸುತ್ತಿವೆ. ಇವುಗಳನ್ನು ವಿಸ್ತರಿಸುವ ಯೋಜನೆ ಕರ್ನಾಟಕಕ್ಕೆ ಇದೆ. ಅವುಗಳಲ್ಲದೇ ಡ್ಯಾನಿಡ, ನಿಟ್ಟೂರು ಮುಂತಾದ ಖಾಸಗೀ ಸಂಸ್ಥೆಗಳೂ ವಿವಿಧ ವೃತ್ತಿ ಶಿಕ್ಷಣ ಕೊಡುವಂತಹ ಖಾಸಗೀ ಸಂಸ್ಥೆಗಳನ್ನೂ ನಗರ ವಲಯಗಳಲ್ಲಿ  ಕಾಣಬಹುದು.

ನಿರೀಕ್ಷಿಸಿದ ಮಟ್ಟದಲ್ಲಿ ಶಿಕ್ಷಣದ ವ್ಯಾಪ್ತಿಯಾಗದಿರುವಿಕೆ ಅಂದರೆ ಸುಮಾರು ಶೇಕಡ ೫೦ರಷ್ಟು (ಎಸ್.ಸಿ.ಇ.ಆರ್.ಟಿ. ಪರೀಕ್ಷೆಯವರು) ವಿದ್ಯಾರ್ಥಿಗಳು ಮತ್ತು ಶಿಕ್ಷಣಕ್ಕೆ ಬರದೇ ಇರುವುದು ಶೋಚನೀಯ. ಇದಕ್ಕೆ ಕಾರಣ ವೃತ್ತಿ ಶಿಕ್ಷಣದ ಬಗ್ಗೆ ಅಭಿಪ್ರಾಯ ಭಿನ್ನವಾಗಿರುವುದು  ಮತ್ತು ವೃತ್ತಿ ಶಿಕ್ಷಣದ ಮಹತ್ವವನ್ನು ಕುರಿತು ಪ್ರಚಾರ ನಡೆಸಲಾಗದಿರುವುದು.

ಶಿಕ್ಷಕರಿಗೆ ಖಾಯಂ ಕೆಲಸವಿಲ್ಲದಿರುವಿಕೆಯಿಂದಾಗಿ ಮತ್ತು ಶಿಕ್ಷಕರಿಗೆ ಸೂಕ್ತ ಸಂಭಾವನೆ ಮತ್ತು ಇನ್ನಿತರ ಕಾಲೇಜುಗಳಲ್ಲಿರುವ ಶಿಕ್ಷಕರಿಗೆ ಸಿಗುವಂತಹ ಸೌಲಭ್ಯಗಳು ಸಿಗದಿರುವಿಕೆಯಿಂದಾಗಿ ಶಿಕ್ಷಕರು ವೃತ್ತಿ ಶಿಕ್ಷಣದಲ್ಲಿ ಮುಂದುವರೆಸದೇ ಇರುವುದು ಮತ್ತೊಂದು ಪ್ರಬಲ ಕಾರಣ.

ಉನ್ನತ ಶಿಕ್ಷಣ

ಕರ್ನಾಟಕದ ಶಿಕ್ಷಣದ ಚರಿತ್ರೆಯನ್ನು ನೋಡಿದಾಗ ಕಂಡುಬರುವ ಅಂಶವೆಂದರೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದ್ದು ಅದರ ವಿಸ್ತರಣೆ, ಪ್ರಾದೇಶಿಕ ವ್ಯಾಪ್ತಿಗೆ ಅನುವಾಗುವಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ೧೯೫೬-೫೭ರಲ್ಲಿ ೫೧ ಕಾಲೇಜುಗಳಲ್ಲಿ ಅವುಗಳಲ್ಲಿ ೩೦೪೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು ಮತ್ತು ಅಧ್ಯಾಪಕರ ಸಂಖ್ಯೆ ೧೩೨೦ ಇದ್ದಿತು.

೧೯೮೧ರಲ್ಲಿ ೨೬೫ ಕಾಲೇಜುಗಳು ಅವುಗಳಲ್ಲಿ ೨೨೩೪೫೭ ವಿದ್ಯಾರ್ಥಿಗಳೂ, ೬೧೬೨ ಶಿಕ್ಷಕರೂ ಇದ್ದರು. ೧೯೮೯ರ ವೇಳೆಗೆ ಸಾಮಾನ್ಯ ಶಿಕ್ಷಣ ನೀಡುವ ಕಾಲೇಜುಗಳ ಸಂಖ್ಯೆ ೪೭೫೫ ಇದ್ದು, ವೃತ್ತಿ ಶಿಕ್ಷಣ ನೀಡುವ ಕಾಲೇಜುಗಳ ಸಂಖ್ಯೆ ೮೯೧ ಇದ್ದಿತು. ಇವುಗಳಲ್ಲಿ ಸುಮಾರು ೪೨೫೭೨೯೯ ವಿದ್ಯಾರ್ಥಿಗಳಿದ್ದರು.

೧೯೯೨-೯೩ರಲ್ಲಿ ೫೩೨ ಕಾಲೇಜುಗಳನ್ನೂ, ಸ್ನಾತಕೋತ್ತರ ವಿಭಾಗಗಳನ್ನು ಹೊಂದಿರುವ ೧೭೫ ಕಾಲೇಜುಗಳೂ, ಅವುಗಳಲ್ಲಿ ಸುಮಾರು ೩೪೪೦೧೦ ಮತ್ತು ೮೯೦೪ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರಮಾಣ ೬೩ ಇದ್ದಿತು. ಇವುಗಳನ್ನು ವಿಶ್ವವಿದ್ಯಾಲಯಗಳ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಉನ್ನತ ಶಿಕ್ಷಣದ ಮಹತ್ವವನ್ನು ಏಳನೇ ಮತ್ತು ಎಂಟನೇ ಪಂಚವಾರ್ಷಿಕ ಯೋಜನೆಗಳಲ್ಲಿ ತಿಳಿದು ಉನ್ನತ ಶಿಕ್ಷಣಕ್ಕೆ ಹೆಚ್ಚ ಹಣ ವ್ಯವಸ್ಥೆ ಮಾಡಲಾಗಿದೆ.

ಏಳನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣದಲ್ಲಿ ಪ್ರಗತಿಯನ್ನು ಗುರುತಿಸಿ ಎಂಟನೇ ವಾರ್ಷಿಕ ಯೋಜನೆಯಲ್ಲಿ ಅದನ್ನು ಹೆಚ್ಚು ಪರಿಣಾಮಕಾರಿಯಾಗಲು ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚುವಂತೆ ಮಾಡಲು ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಕರ್ನಾಟಕದಲ್ಲಿ ಪರ್ಸ್‌ಪೆಕ್ಟಿವ್ಸ್ ಫಾರ್ ಎಜುಕೇಶನ್ ಸೆಕ್ಟರ್ ಫಾರ್ ಪಾಲಿಸಿ ಪೇಪರ್ ಫಾರ್ ಎಯ್ತ್ ಫೈವ್ ಇಯರ್ ಪ್ಲಾನ್ (Perspectives for Education Sector Policy Paper for VIII Five Year Plan. August 1989) ಎಂಬ ವರದಿಯನ್ನು ಬಿಡುಗಡೆ ಮಾಡಲಾಯಿತು. ಇದರಡಿಯಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಯಿತು.

ಸರ್ ರಾಧಾಕೃಷ್ಣನ್ ಕಮೀಷನ್ (೧೯೪೮), ಮೊದಲಿಯಾರ್ ಕಮೀಷನ್ (೧೯೪೮), ಕೊಠಾರಿ ಕಮೀಷನ್ (೧೯೬೪-೬೬). ನೂತನ ಶಿಕ್ಷಣ ಪದ್ಧತಿ (೧೯೮೬) ಮತ್ತು ಆಚಾರ್ಯ ರಾಮಮೂರ್ತಿ ಕಮಿಟಿ ವರದಿಗಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಸಲಹೆಗಳನ್ನು ಮಾಡಿದ್ದವು. ಇವುಗಳನ್ನು ಕರ್ನಾಟಕದ ಉನ್ನತ ಶಿಕ್ಷಣದ ವಿವಿಧ ಅಂಗಗಳಲ್ಲಿ ಅಳವಡಿಸಲಾಗಿದ್ದು ಅದರಂತೆ ಶಿಕ್ಷಣದ ಪ್ರಗತಿ ಮತ್ತು ವಿಸ್ತರಣೆಯಾಗುವಂತೆ ಪಂಚವಾರ್ಷಿಕ ಯೋಜನೆಗಳಲ್ಲಿ ಹಣ ವಿನಿಮಯ ಮಾಡಲಾಗಿತ್ತು ಆದರೆ ಉನ್ನತ ಶಿ‌ಕ್ಷಣದಲ್ಲಿ ತಲೆದೋರಿದ ಸಮಸ್ಯೆಗಳು ಅನೇಕ. ಅವುಗಳನ್ನು ಗುರುತಿಸಿ ಎಂಟನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವೇರಿಸಲು ಸಾಧ್ಯವಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ವಿವರಗಳನ್ನು ಹೊತ್ತ ಮೇಲೆ ಹೇಳಿದ ವರದಿಯಲ್ಲಿ ಉನ್ನತ ಶಿಕ್ಷಣದ ಬಗ್ಗೆ ಕೆಲವು ಅನಿಸಿಕೆಗಳನ್ನು ನೋಡಿದಾಗ ಕಂಡು ಬರುವ ಅಂಶಗಳು ಹೀಗಿವೆ. “ಕರ್ನಾಟಕದಲ್ಲಿ ಮಾನವ ಸಂಪನ್ಮೂಲಾಭಿವೃದ್ಧಿ ಆಗಬೇಕಾದರೆ, ಔದ್ಯೋಗೀಕರಣ ಮತ್ತು ವಿಧಾನಗಳನ್ನು ನವೀಕರಿಸಿ ಅನುಸರಿಸಬೇಕಾದರೆ ಉನ್ನತ ಶಿಕ್ಷಣ ಪಡೆದ ಜನಶಕ್ತಿ ಅವಶ್ಯಕ.” ಉನ್ನತ ಶಿಕ್ಷಣ ಪಡೆದ ಜನಶಕ್ತಿಯೇ ಕರ್ನಾಟಕದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಅನುಕೂಲವಾಗುವಂತಹ ಜನಸಂಖ್ಯೆ. ಇವರಿಂದಲೇ ಕಾರ್ಖಾನೆಗಳಲ್ಲಿ, ಉದ್ದಿಮೆಗಳಲ್ಲಿ, ಸೇವಾ ಕ್ಷೇತ್ರಗಳಲ್ಲಿ ನುರಿತ ಜನಶಕ್ತಿ ಇರಲು ಸಾಧ್ಯವಾಗುತ್ತದೆ. ಇವುಗಳಿಂದಲೇ ರಾಜ್ಯದ ಆರ್ಥಿಕ ಮಟ್ಟ ಸುಧಾರಿಸಲು ಕಲೆ ವಿಭಾಗದಲ್ಲಿದ್ದಾರೆ. ವಿಜ್ಞಾನ ಶಿಕ್ಷಣ ಪಡೆಯುತ್ತಿರುವವರು ಶೇಕಡ ೨೦ರಷ್ಟು ಮಾತ್ರ. ಇದಕ್ಕೆ ಕಾರಣ ಅನೇಕ. ಇವುಗಳಲ್ಲಿ ಪ್ರಮುಖವಾದುದು ಪ್ರಯೋಗಶಾಲೆಗಳ ಗುಣಮಟ್ಟ (ಶೋಚನೀಯವಾಗಿದೆ) ಕಡಿಮೆ, ವಿಜ್ಞಾನ ಶಿಕ್ಷಣ ಪಡೆಯಲು ಸೌಲಭ್ಯ, ಸೌಕರ್ಯಗಳಿಲ್ಲದಿರುವಿಕೆ, ಮುಂದುವರೆದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸೌಲಭ್ಯ ಸಲಕರಣೆಗಳು ಮತ್ತು ವಿಜ್ಞಾನ ಶಿಕ್ಷಣಕ್ಕೆ ಅನುಕೂಲವಾಗುವಂತಹ ಪ್ರಯೋಗ ಶಾಲೆಗಳು ಮತ್ತು ಅದಕ್ಕೆ ಸೂಕ್ತವಾದ ಶಿಕ್ಷಕರ ವ್ಯವಸ್ಥೆ ಮಾಡುವುದರಿಂದಲೇ ಮುಂದಿನ ಪೀಳಿಗೆಯನ್ನು ವಿಜ್ಞಾನಿಗಳನ್ನು ಮತ್ತು ವಿಜ್ಞಾನಕ್ಕೆ ಹೊಂದುವಂತಹ ಜನಶಕ್ತಿಯನ್ನು ತಯಾರಿಸಲು ಸಾಧ್ಯವಾಗುವುದು. ಇಲ್ಲದಿದ್ದಲ್ಲಿ ನಮ್ಮ ದೇಶವು ವೈಜ್ಞಾನಿಕವಾಗಿ ಪ್ರಗತಿ ಪಡೆಯಲು ಅಸಾಧ್ಯ ಎಂದು ತಿಳಿಸಿದ್ದಾರೆ. ಅದಲ್ಲದೇ ಉನ್ನತ ಶಿಕ್ಷಣದಲ್ಲಿನ ಅನೇಕ ಸಮಸ್ಯೆಗಳನ್ನು ವಿಶ್ಲೇಷಿಸಿ ಎಂಟನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಏರಿಸುವಂತಹ ಸೌಲಭ್ಯಗಳನ್ನು ಕರ್ನಾಟಕ ಸರ್ಕಾರ (ಕೇಂದ್ರವು ಸರ್ಕಾರ ಮತ್ತು ಯು.ಜಿ.ಸಿ ನೆರವಿನಿಂದ) ಒದಗಿಸುತ್ತಿದೆ.

ಅಲ್ಲದೇ ೧೯೯೨ರಲ್ಲಿ ನವನೀತರಾವ್‌ರವರ ನೇತೃತ್ವದಲ್ಲಿ ಒಂದು ಕಮಿಟಿಯನ್ನು ರಚಿಸಲಾಗಿದ್ದು ಕರ್ನಾಟಕದ ವಿಶ್ವವಿದ್ಯಾಲಯಗಳ ಶೈಕ್ಷಣಿಕ, ಆಡಳಿತ ಮತ್ತು ನಿರ್ವಹಣೆಯನ್ನು ಕುರಿತಂತೆ ಇರುವ ಪ್ರಮುಖ ಸಮಸ್ಯೆಗಳನ್ನು ಅಧ್ಯಯಿಸಿ ಅವುಗಳ ನಿವಾರಣೋಪಾಯಕ್ಕೆ ಕೆಲವಾರು ಸಲಹೆಗಳನ್ನು ನೀಡಿದೆ. ಅವುಗಳಲ್ಲಿ ಪ್ರಮುಖವಾದವುಗಳು.

ಶಿಕ್ಷಣದ ಗುಣಮಟ್ಟವನ್ನು ಹೆಚ್ಚುವಂತೆ ಮಾಡಲು ಶಿಕ್ಷಕರ ತರಬೇತಿ, ಶಿಕ್ಷಕರಿಗೆ ವೇತನ ಹೆಚ್ಚಿಸುವಿಕೆ, ಕಾಲೇಜುಗಳನ್ನೂ ಮತ್ತು ವಿಶ್ವವಿದ್ಯಾಲಯಗಳನ್ನು ಸ್ವಯಂ ಶಾಸನ ಪದ್ಧತಿಗೆ ಅಳವಡಿಸುವುದು, ಉನ್ನತ ಶಿಕ್ಷಣದಲ್ಲಿ ವೃತ್ತಿ ಶಿಕ್ಷಣವನ್ನು ಜಾರಿಗೆ ತರುವುದು, ಅಂತರ್ ವಿಶ್ವವಿದ್ಯಾಲಯಗಳ ಸಮಾವೇಶ ಅಡಿಗಡಿಗೆ ಮಾಡಿ ಉನ್ನತ ಶಿಕ್ಷಣದಲ್ಲಿರುವ ಸಮಸ್ಯೆಗಳನ್ನು ನಿವಾರಿಸುವುದು, ಕುಲಪತಿಗಳ ಸ್ಥಾನಕ್ಕೆ ಶಿಕ್ಷಣ ವೃಂದದವರಿಂದಲೇ ಒಬ್ಬರನ್ನು ನೇಮಕಾತಿ ಮಾಡುವುದು, ಸಹಭಾಗಿತ್ವವುಳ್ಳ ಆಡಳಿತ ವ್ಯವಸ್ಥೆಯನ್ನು ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಳವಡಿಸಿಕೊಳ್ಳುವುದು.

ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ

ಕರ್ನಾಟಕದ ತಾಂತ್ರಿಕ ಶಿಕ್ಷಣವು ೧೯ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು ೧೯೫೧-೫೬ರ ವೇಳೆಗೆ ಸುಮಾರು ಆರು ಇಂಜಿನಿಯರಿಂಗ್ ಕಾಲೇಜುಗಳಿದ್ದವು. ೧೯೫೬-೬೧ರಲ್ಲಿ ಅವುಗಳ ಸಂಖ್ಯೆ ೧೧ಕ್ಕೆ ಏರಿತು. ೧೯೬೧ರಿಂದ ೧೯೮೫ರವರೆಗೆ ಅವುಗಳ ಸಂಖ್ಯೆ ೪೧ ಆಯಿತು ಮತ್ತು ೧೯೯೨-೯೩ರ ವೇಳೆಗೆ ೫೫ಕ್ಕೆ ಏರಿತು.

ಅದೇ ರೀತಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ೧೯೫೬ಕ್ಕೆ ಮುನ್ನ ಒಂದಾಗಿದ್ದು ೧೯೬೦-೬೧ರ ವೇಳೆಗೆ ೪ಕ್ಕೆ ಏರಿತು. ೧೯೮೧ರಿಂದ ೧೯೯೧ರವರೆಗೆ ಸುಮಾರು ೧೯ ಕಾಲೇಜುಗಳು ಪ್ರಾರಂಭವಾದವು.

ಕರ್ನಾಟಕದ ತಾಂತ್ರಿಕ ಶಿಕ್ಷಣ ಮತ್ತು ವೈದ್ಯಕೀಯ ಶಿ‌ಕ್ಷಣ ದೇಶದಲ್ಲಿ ಬಹು ಮಹತ್ವವನ್ನು ಪಡೆದಿದ್ದು ಈ ಶಿಕ್ಷಣ ಪಡೆಯಲು ಭಾರತಾದ್ಯಂತ (ಮತ್ತು ವಿದೇಶೀಯ) ವಿದ್ಯಾರ್ಥಿಗಳು ಇಚ್ಚಿಸುವ ಕಾರಣ ಕಾಲೇಜುಗಳಲ್ಲಿನ ಒತ್ತಡ ಹೆಚ್ಚುತ್ತಾ ಇದೆ. ಈ ಕಾರಣದಿಂದಲೇ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿರಿಸುವಂತಹ ಸುಪ್ರೀಂ ಕೋರ್ಟ್‌ಸುಗ್ರೀವಾಜ್ಞೆ ಹೊರಡಿಸಿತು. ಇದಕ್ಕಾಗಿ ಇಲ್ಲಿನ ಆಡಳಿತ ವ್ಯವಸ್ಥೆಯನ್ನು ಮಾಡಲು ಸರ್ಕಾರವು ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳಿಗೆ ಉತ್ತೇಜನ ನೀಡಲಾರಂಭಿಸಿತು. ಈ ವರ್ಷದಲ್ಲಿ ಕನ್ನಡಗರಿಗಾಗಿಯೇ ಮೀಸಲಾತಿ ಇರಬೇಕೆಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.

೧೯೬೧ರಿಂದ ೭೦ರವರೆಗೆ ಈ ಕೋರ್ಸ್‌ಗಳಲ್ಲಿ ಶೈಕ್ಷಣಿಕ ನಷ್ಟ ಹೆಚ್ಚಾಗಿತ್ತು. ಈಗ ಶೈಕ್ಷಣಿಕ ನಷ್ಟವು ಕಡಿಮೆಯಾಗುತ್ತಾ ಬರುವುದು ಕಂಡು ಬಂದಿದೆ (ಡಿ.ಎಮ್. ನಂಜುಂಡಪ್ಪ ಮತ್ತು ಗೌರಿಶಂಕರ) ಇದಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಈ ಎರಡು ಶಿಕ್ಷಣಗಳನ್ನು ಪಡೆದ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ವಿವಿಧ ಉದ್ಯೋಗ ಕೇಂದ್ರಗಳಲ್ಲಿ ಭರ್ತಿಯಾಗಿರುವುದನ್ನು ಗುರುತಿಸಬಹುದಾಗಿದೆ. ಉದ್ಯೋಗ ವಿನಿಮಯ ಕೇಂದ್ರಗಳಲ್ಲೂ ಸಹ ಹೆಸರನ್ನು ನೊಂದಾಯಿಸಿದವರ ಸಂಖ್ಯೆ ಹೆಚ್ಚಿರುವುದು ಕಂಡು ಬರುತ್ತದೆ.

ವಿಜ್ಞಾಣ ಶಿಕ್ಷಣ, ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ಹೆಚ್ಚಿನಾಂಶ ಇರುವುದರಿಂದಲೇ ಮಾನವ ಸಂಪನ್ಮೂಲಾಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದನ್ನು ಗುರುತಿಸಿ ಎಂಟನೇ ಪಂಚವಾರ್ಷಿಕ ಯೋಜನೆಯಲ್ಲಿ ಈ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಬೆಂಬಲ ನೀಡಲಾಗುತ್ತಿದೆ.

ಅಲ್ಲದೇ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾನಿಲಯ, ಐ.ಐ.ಎಮ್, ಐಸೆಕ್, ಇಸ್ರೋ, ಐ.ಐ.ಎಸ್.ಸಿ., ಮುಂತಾದ ಸಂಶೋಧನಾ ಕೇಂದ್ರಗಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತಿವೆ.

ಕರ್ನಾಟಕ ಸರ್ಕಾರವು ವಿವಿಧ ಯೋಜನೆಗಳಡಿಯಲ್ಲಿ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಪದವೀಧರ ಮತ್ತು ಸ್ನಾತಕೋತ್ತರ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹವಾದ ಅಂಶ.

ವಯಸ್ಕರ ಶಿಕ್ಷಣ

ವಯಸ್ಕರ ಶಿಕ್ಷಣವು ಕರ್ನಾಟಕದಲ್ಲಿ ಮೊಟ್ಟಮೊದಲು ೧೯ನೇ ಶತಮಾನದಲ್ಲಿ ಪ್ರಾರಂಭವಾಗಿ ಅದಕ್ಕೆ ಪ್ರತೀ ಪಂಚವಾರ್ಷಿಕ ಯೋಜನೆಗಳಲ್ಲೂ ಒತ್ತು ಕೊಡಲಾಗುತ್ತಿದೆ. ೧೯೮೯-೯೦ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಸಾಕ್ಷರತಾ ಆಂದೋಲನವನ್ನು ಘೋಷಿಸಲಾಯಿತು. ಸಾಮೂಹಿಕ ಸಾಕ್ಷರತಾ ಆಂದೋಲನವನ್ನು ೨೦ ತಾಲ್ಲೂಕುಗಳಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಸ್ವಯಂ ಸೇವಕರು, ಸಾಮೂಹಿಕ ಕ್ರಿಯಾ ಕಾರ್ಯಕ್ರಮದ ಅಂಗವಾಗಿ ಒಟ್ಟು ೨.೩೨ ಲಕ್ಷ ಅಕ್ಷರಸ್ಥರನ್ನು ದಾಖಲಾತಿ ಮಾಡಿಕೊಂಡು ೧.೯೪ ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲಾಗಿದೆ.

ರಾಷ್ಟ್ರೀಯ ಸಾಕ್ಷರತಾ ನಿಯೋಗ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಪರಿಷತ್, ಮಂಡಲ್ ಪಂಚಾಯತ್ ಮತ್ತು ಇತರ ಅಭಿವೃದ್ಧಿ ಇಲಾಖೆಗಳ ಸಹಕಾರದೊಂದಿಗೆ ಸಾಕ್ಷರತಾ ಕಾರ್ಯಾಚರಣೆಗೊಳಿಸಲಾಗಿದೆ.

೧೯೯೧-೯೨ರ ವೇಳೆಗೆ ಸುಮಾರು ೭೨೦೦ ಕೇಂದ್ರಗಳು ಅವುಗಳಲ್ಲಿ ೨೧೬೦೦೦ ದಾಖಲಾತಿ ಸಂಖ್ಯೆಯನ್ನು ಹೊಂದಿ ಸಂಪೂರ್ಣವಾಗಿ ಸಾಮೂಹಿಕ ಸಾಕ್ಷರತಾ ಆಂದೋಲನದ ದಾಖಲಾತಿ ೧೩.೯೧ ಲಕ್ಷ ದಾಖಲಾತಿಯಾಗುವಂತೆ ಕಾರ್ಯಾಚರಣೆ ನಡೆಸಲಾಗಿದೆ.

ಕಾರ್ಯಕ್ರಮದಿಂದಾಗಿ ರಾಜ್ಯದ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗುವ ಸಂಭವವಿದೆ. ಇದು ಜನರಿಗಾಗಿ ಜನರಿಂದಲೇ ನಡೆಸಲ್ಪಡುವ ಕಾರ್ಯಕ್ರಮವಾಗಿ ಹೆಚ್ಚು ಫಲಕಾರಿಯಾಗಿಯೂ ಮತ್ತು ಕರ್ನಾಟಕವು ದೇಶದಲ್ಲಿ ಒಂದು ಮಾದರಿ ರಾಜ್ಯವಾಗಲಿದೆಯೆಂದರೆ ಅತಿಶಯೋಕ್ತಿಯಲ್ಲ.

ಉಪಸಂಹಾರ

ಕರ್ನಾಟಕ ರಾಜ್ಯದ ಮಾನವ ಸಂಪನ್ಮೂಲಾಭಿವೃದ್ಧಿ ಮತ್ತು ವಿಸ್ತರಣೆಯಾಗಲು ಒಂದು ಕಡೆ ವಿಸ್ತರಣೆ ಪ್ರಗತಿಯಾಗಬೇಕು ಮತ್ತೊಂದು ಕಡೆ ಉದ್ಯೋಗದಲ್ಲಿ ನಿರತರಾಗಿರುವ ಜನಶಕ್ತಿಯ ಬೆಳವಣಿಗೆಯಾಗಬೇಕು. ಶಿಕ್ಷಣದಿಂದಲೇ ಸಾಮಾಜಿಕ ನಿರತರಾಗಿರುವ ಜನಶಕ್ತಿಯ ಬೆಳವಣಿಗೆಯಾಗಬೇಕು. ಶಿಕ್ಷಣದಿಂದಲೇ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು ಸಾಧ್ಯ. ಆದರೆ ಶಿಕ್ಷಣ ಪಡೆದ ನುರಿತ ಪರಿಣಿತರಾದ ಜನಶಕ್ತಿಯನ್ನೇ ಅವಲಂಬಿಸಿ ನಡೆಸಿರುವ ಆರ್ಥಿಕ ಯೋಜನೆಗಳ ಫಲಕಾರಿಯಾಗಿಯೂ ಮತ್ತು ಪರಿಣಾಮಕಾರಿಯಾಗುವಂತಹ ಕಾರ್ಯಕ್ರಮಗಳನ್ನು ಕೊಟ್ಟಿವೆ. ಆದರೆ ಈ ದಿಸೆಯಲ್ಲಿ ಕರ್ನಾಟಕದ ಮಾನವ ಸಂಪನ್ಮೂಲಾಭಿವೃದ್ಧಿಯಲ್ಲಿನ ಯೋಜನೆಗಳಲ್ಲಿ ನಿರೀಕ್ಷಿಸಿದ ಪ್ರಗತಿ ಸಾಧಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಆದರೆ ಸಾಕಷ್ಟು ಜನಶಕ್ತಿ ನಿರ್ದಿಷ್ಟ ದಿಸೆಯಲ್ಲಿ ಶಿಕ್ಷಣ ಮತ್ತು ತರಬೇತಿ ಪಡೆಯದಿರುವಿಕೆ, ಶಿಕ್ಷಣದ ಸಮಸ್ಯೆಗಳು, ಉದ್ಯಮ ಮತ್ತು ಶಿಕ್ಷಣ, ನೇರ ಸಂಬಂಧವಿಲ್ಲದಿರುವಿಕೆ. ಪದವೀಧರರು ನಿರುದ್ಯೋಗಿಗಳಾಗಿರುವಿಕೆ, ಶಿಕ್ಷಣ ಪಡೆದ ವ್ಯಕ್ತಿಗಳಿಗೆ ಹೊಂದುವಂತಹ ಉದ್ಯೋಗದ ಕೊರತೆ, ಶಿಕ್ಷಣ ಪಡೆದವರು ಹೊರದೇಶಗಳಿಗೆ ವಲಸೆ ಹೋಗುವಿಕೆ, ಉನ್ನತ ಶೈಕ್ಷಣಿಕ ನಷ್ಟ, ವಿಶ್ವವಿದ್ಯಾಲಯಗಳಿಂದ ಹೊರಬರುವಂತಹ ವಿದ್ಯಾರ್ಥಿಗಳ ಗುಣಮಟ್ಟ ಕಡಿಮೆ ಇರುವುದು. ಕರ್ನಾಟಕ ಸರ್ಕಾರವು ಯುವ ಜನರಿಗಾಗಿ ಮತ್ತು ಬಡತನ ರೇಖೆಯಡಿಯಲ್ಲಿರುವ ಜನರಿಗೆ ಒದಗಿಸುತ್ತಿರುವ ಕಾರ್ಯಕ್ರಮಗಳಲ್ಲಿ ಹೆಚ್ಚು ಫಲಾನುಭವಿಗಳಿಲ್ಲದಿರುವಿಕೆ, ಈ ಕಾರ್ಯಕ್ರಮಗಳಲ್ಲಿನ ಆಡಳಿತ ವ್ಯವಸ್ಥೆಯಲ್ಲಿರುವ ಲೋಪ ದೋಷಗಳು, ಶಿಕ್ಷಣದಲ್ಲಿ ರಾಜಕೀಯತೆ ಮತ್ತು ರಾಜಕಾರಣಿಗಳ ಅಕ್ರಮ ಪ್ರವೇಶ, ಯುವಜನಾಂಗಗಳಲ್ಲಿನ ಅಸಮಾಧಾನ, ಶಿಕ್ಷಕರು ಮತ್ತು ಶಿಕ್ಷಣ ಪಡೆಯುವವರಲ್ಲಿನ ಸಂಬಂಧದಲ್ಲಿ ಬಿರುಕು, ಜಾತ್ಯತೀತ ಘರ್ಷಣೆಗಳು, ಶಿಕ್ಷಕರ ಸಂಘಗಳ ಪ್ರತಿಭಟನೆ, ವಿದ್ಯಾರ್ಥಿಗಳ ಮೌಲ್ಯ/ನೈತಿಕ ಮಟ್ಟದಲ್ಲಿನ ಬದಲಾವಣೆಗಳು, ಪೋಷಕರ ಅನಕ್ಷರತೆ, ಗ್ರಾಮೀಣ ಮತ್ತು ನಗರವಾಸಿಗಳಲ್ಲಿರುವ ತಾರತಮ್ಯ ಮುಂತಾದವುಗಳೇ ಈಗಿನ ಸಮಸ್ಯೆಗಳು.

ಶಿಕ್ಷಣದ ಪ್ರಗತಿಯಾದಂತೆ ಮಾನವ ಸಂಪನ್ಮೂಲಾಭಿವೃದ್ಧಿಯು ನಡೆಯುತ್ತಿರುವುದು ಕರ್ನಾಟಕದಲ್ಲಿ ಕಂಡು ಬರುತ್ತಿದೆ. ಕರ್ನಾಟಕದ ಶಿಕ್ಷಣವು ದೇಶದಲ್ಲಿ ಹೆಚ್ಚಿನಾಂಶ ಮಾನವ ಸಂಪನ್ಮೂಲಾಭಿವೃದ್ಧಿಗೆ ಬೇಕಾದ ಜನಶಕ್ತಿಯನ್ನು ಉತ್ಪನ್ನ ಮಾಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಕಾರಣಗಳು ಅನೇಕ. ಅವುಗಳಲ್ಲಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ, ಸ್ವಯಂಶಾಸಕ ಸಂಘ ಸಂಸ್ಥೆಗಳ ಮುತುವರ್ಜಿ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನಿಯಮಗಳನ್ನು ಪಾಲಿಸುವಿಕೆ ಮತ್ತು ಪಂಚವಾರ್ಷಿಕ ಯೋಜನೆಗಳಲ್ಲಿ ಸೌಲಭ್ಯ  ಮತ್ತು ಸೌಕರ್ಯಗಳನ್ನು ಒದಗಿಸುವಿಕೆ ಮುಂತಾದವುಗಳು ಪ್ರಮಖವಾಗಿದೆ. ಇದಲ್ಲದೇ ಶೈಕ್ಷಣಿಕ ನಷ್ಟವಾಗುವುದನ್ನು ಕಡಿಮೆ ಮಾಡುವಂತಹ ಕಾರ್ಯಕ್ರಮಗಳಿಗೆ ವಿದೇಶೀ ವಿನಿಮಯದೊಂದಿಗೆ ವಿಶ್ವಸಂಸ್ಥೆಗಳಿಂದ ಧನ ಸಹಾಯ ಪಡೆದು ನಡೆಸುವ ವಿವಿಧ ಕಾರ್ಯಕ್ರಮಗಳಿಂದ ದೇಶದ ಮಾನವ ಸಂಪನ್ಮೂಲಾಭಿವೃದ್ಧಿಯಾಗುವುದರಲ್ಲಿ ಕರ್ನಾಟಕದ ಪಾತ್ರ ಹಿರಿದು ಎಂಬುದರಲ್ಲಿ ಸಂದೇಹವಿಲ್ಲ.

ಗ್ರಂಥ ಋಣ

ಲೇಖನಗಳು

ಸೀತಾ ಪ್ರಭು, ದಿ ಬಡ್ಜೆಟ್ ಆಂಡ್ ಸ್ಟ್ರಕ್ಚರಲ್ ಅಡ್ಜಸ್ಟ್‌ಮೆಂಟ್ ವಿತ್ ಎ ಹ್ಯೂಮನ್ ಫೇಸ್, ಈ.ಪಿ.ಡಬ್ಲ್ಯೂ, ಏಪ್ರಿಲ್ ೧೬-೨೩, ೧೯೯೪.

ಎಸ್.ಪಿ. ಗುಪ್ತ ಆಂಡ್ ಏ.ಕೆ. ಸರ್ಕಾರ್, ಫಿಸ್ಕಲ್ ಕರೆಕ್ಷನ್ ಆಂಡ್ ಹ್ಯೂಮನ್ ರಿಸೋರ್ಸ್‌ಡಿಪಾರ್ಟ್‌‌ಮೆಂಟ್, ಎಕ್ಸಪೆಂಡಿಚರ್ ಅಟ್ ಸೆಂಟ್ರಲ್ ಆಂಡ್ ಸ್ಟೇಟ್ ಲೆವಲ್ಸ್, ಈ.ಪಿ.ಡಬ್ಲ್ಯೂ, ಮಾರ್ಚ್ ೨೬, ೧೯೯೪.

ಯುನಿವರ್ಸಿಟಿ ನ್ಯೂಸ್, ಜುಲೈ ೩, ೧೯೯೫ ಪಿ.ಪಿ. ೧೮-೧೯.

ಯುನಿವರ್ಸಿಟಿ ನ್ಯೂಸ್, ಜೂನ್ ೧೯, ೧೯೯೫.

ಯು.ಎನ್.ಡಿ.ಪಿ. ಹ್ಯೂಮನ್ ಡೆವಲಪಮೆಂಟ್ ರಿಪೋರ್ಟ್, ೧೯೯೪.

ಗವರ್ನಮೆಂಟ್ ಆಫ್ ಇಂಡಿಯಾ (ಪ್ಲಾನಿಂಗ್ ಕಮೀಷನ್) ಸೆವೆನ್ತ್ ಫೈವ್ ಇಯರ್ ಪ್ಲಾನ್ ೧೯೮೫-೯೦, ಸೆಂಟರ್ ಫಾರ್ ರಿಸರ್ಚ್ ಇನ್ ರೂರಲ್ ಆಂಡ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟಲ್.

ಎಜುಕೇಷನ್ ಇನ್ ಇಂಡಿಯನ್ ಪಾಲಿಸೀಸ್ ಪ್ಲಾನಿಂಗ್ ಆಂಡ್ ಇಂಪ್ಲೀಮೆಂಟೇಷನ್ ೧೯೮೧-೮೫, ೧೯೯೫.

ಗವರ್ನಮೆಂಟ್ ಆಫ್ ಇಂಡಿಯಾ : (ಮಿನಿಸ್ಟ್ರಿ ಆಫ್ ಎಜುಕೇಷನ್), ರಿಪೋರ್ಟ್ ಆಫ್ ಎಜುಕೇಷನ್ ಕಮೀಷನ್ ೧೯೯೪-೬೬.

ನ್ಯಾಷನಲ್ ಲಿಟ್ರಸಿ ಮಿಷನ್ ದಿ ಕರ್ನಾಟಕಾ ಲಿಟ್ರಸಿ ಕ್ಯಾಂಪೇಸ್

ಕರ್ನಾಟಕ ಪ್ರಗತಿಪಥ, ನಂಜುಂಡಪ್ಪ ಡಿ.ಎಂ.

ಪುಸ್ತಕಗಳು

ಸೀತಾರಾಮು ಎ.ಎಸ್ (೧೯೮೦): ಎಜುಕೇಷನ್ ಆಮಡ್ ರೂರಲ್ ಡೆವೆಲಪ್‌ಮೆಂಟ್, ನ್ಯೂಡೆಲ್ಲಿ, ಆಷೀಷ ಪಬ್ಲಿಷರ್ಸ್

ಸೀತಾರಾಮು ಎ.ಎಸ್ (೧೯೮೫): ಎಜುಕೇಷನ್ ಇನ್ ಸ್ಲಮ್ಸ್, ನ್ಯೂಡೆಲ್ಲಿ, ಆಷೀಷ ಪಬ್ಲಿಷರ್ಸ್.

ಸೀತಾರಾಮು ಎ.ಎಸ್ ಮತ್ತು ಎಂ.ಡಿ. ಉಷಾದೇವಿ (೧೯೮೫): ಎಜುಕೇಷನ್ ಇನ್ ರೂರಲ್ ಏರಿಯಾಸ್: ಕನಸ್ಟ್ರೇನ್ಸ್ ಅಂಡ್ ಪ್ರಾಸ್ಪೆಕ್ಟಸ್, ನ್ಯೂಡೆಲ್ಲಿ, ಆಷೀಷ ಪಬ್ಲಿಷರ್ಸ್.

ದೇವೇಗೌಡ ಎ.ಸಿ. ಮತ್ತು ಪರಮೇಶ್ವರನ್ ಟಿ.ಆರ್(೧೯೮೫): ಹಿಸ್ಟರಿ ಆಫ್ ಎಜುಕೇಷನ್ ಇನ್ ಮೈಸೂರು, ಬೆಂಗಳೂರು, ಗಮರ್ನಮೆಂಟ್ ಆಫ್ ಕರ್ನಾಟಕ, ಡಿಪಾರ್ಟಮೆಂಟ್ ಆಫ್ ಎಜುಕೇಷನ್ ಅಂಡ್ ಯೂತ್ ಸರ್ವಿಸಸ್

ದೇವೇಗೌಡ ಎ.ಸಿ. (೧೯೭೪) ಪರಸೂಟ್ ಆಫ್ ಕ್ವಾಲಿಟಿ ಇನ್ ಎಜುಕೇಷನ್ ಬೆಂಗಳೂರು ಗಮರ್ನಮೆಂಟ್ ಆಫ್ ಕರ್ನಾಟಕ, ಡಿಪಾರ್ಟಮೆಂಟ್ ಆಫ್ ಎಜುಕೇಷನ್ ಅಂಡ್ ಯೂತ್ ಸರ್ವಿಸಸ್.

ವರದಿಗಳು

ಗವರ್ನಮೆಂಟ್

ಕರ್ನಾಟಕ

ಪಿ.ಎಚ್.ಡಿ. ಥೀಸಿಸ್

೧. ಚಂದ್ರಶೇಖರ್, ಸ್ಟಡಿ ಆಫ್ ದಿ ಯುಟಿಲೈಸೇಷನ್ ಆಫ್ ವೇರಿಯಸ್ ಮೆಜರ್ಸ್ ಪ್ರೊವೈಡೆಡ್ ಈಕ್ವಾಲಿಟಿ ಆಫ್ ಎಡುಕೇಷನಲ್ ಆಪರ್ಚುನಿಟಿ ಇನ್ ದಿ ಕೇಸ್ ಆಫ್ ಅದರ್ ಬ್ಯಾಕವರ್ಡ್ ಕ್ಲಾಸಸ್ ಇನ್ ಎ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ.

೨. ಗೌರೀಶಂಕರ, ಸ್ಟಡಿ ಆಫ್ ದಿ ರಿಲೇಷನ್‌ಷಿಪ್ ಬಿಟ್ವಿನ್ ಸೋಷಿಯಲ್ ಕ್ಲಾಸ್, ಎಜುಕೇಷನಲ್ ಅಚೀವ್‌ಮೆಂಟ್ ಅಂಡ್ ಇಂಜಿನಿಯರಿಂಗ್ ಎಜುಕೇಷನ್ ಇನ್ ಕರ್ನಾಟಕ ಸ್ಟೇಟ್ (೧೯೯೪).

೩. ಗಣೇಶ ಭಟ್ಟ, ಪರ್ಪಾರಮೆನ್ಸ್ ಆಫ್ ಸೆಕೆಂಡರಿ ಸ್ಕೂಲ್ ಸಿಸ್ಟಮ್ ಇನ್ ರೂರಲ್ ಕರ್ನಾಟಕ ( ೧೯೮೮).

೪. ಚಂದ್ರಶೇಖರ್, ಕ್ರಿಟಿಕಲ್ ಸ್ಟಡಿ ಇನ್ ಡೆಪ್ತ ಆಫ್ ದಿ ಗಮರ್ನಮೆಂಟ್ ಆಫ್ ಕರ್ನಾಟಕ ದಿ ಫಿಲ್ಡ ಆಫ್ ಎಜುಕೇಷನ್ ಡ್ಯೂರಿಂಗ್ ದಿ ಪೀರಿಯಡ್ ೧೯೪೭-೭೨ (೧೯೭೮).

೫. ಮಾನವೀಕರ್ ಶಾರದಾ, ಕ್ರಿಟಿಕಲ್ ಸ್ಟಡಿ ಆಫ್ ದಿ ರಿಲೇಷನ್‌ಷಿಪ್ ಬಿಟ್ವಿನ್ ಎಕ್ಸಪೆಂಡಿಚರ್ ಪ್ಯಾಟ್ರನ್ ಆಂಡ್ ಎಫಿಷಿಯನ್ಸಿ ಆಫ್ ಲೆವಲ್ಸ್ ಆಫ್ ದಿ ಸೆಕೆಂಡರಿ ಸ್ಕೂಲ್ಸ ಆಫ್ ಬೆಂಗಳೂರು ಡಿಸ್ಟ್ರಿಕ್ಟ್ (೧೯೮೨).

೬. ಶಕುಂತಲಾ, ಕ್ರಿಟಿಕಲ್ ಸ್ಟಡಿ ಆಫ್ ನಾನ್-ಫಾರ್ಮಲ್ ಎಜುಕೇಷನ್ ಫಾರ್ ಡ್ರಾಫ್ ಔಟ್ಸ್ ಆಂಡ್ ನಾನ್-ಎನರೋಲ್ಡ್ ಚಿಲ್ಡ್ರನ್ ಇನ್ ದಿ ಏಜ್ ಗ್ರೂಪ್ ೯-೧೪ ಇನ್ ಕರ್ನಾಟಕ ಸ್ಟೇಟ್ (೧೯೮೭)

ಪುಸ್ತಕ: ಕನ್ನಡ ಅಧ್ಯಯನ (ಕರ್ನಾಟಕದ ಆರ್ಥಿಕತೆ)
ಲೇಖಕರು: ಉಷಾ ರಾಮ್‌ಕುಮಾರ್
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಕೆ.ಜಿ. ವಾಸುಕಿಪ್ರೊ. ಅಬ್ದುಲ್ ಅಜೀಜ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ