ಶುಕ್ರವಾರ, ಅಕ್ಟೋಬರ್ 26, 2018

ಚೋಮನದುಡಿಯ ವಿಮರ್ಶೆ

ಘಟ್ಟದ ಮೇಲಿಂದ ಹಿಂದಿರುಗಿದ ನಾಲ್ಕೇ ದಿನಗಳಲ್ಲಿ ತೀವ್ರವಾದ ಜ್ವರಭಾದೆಯಿಂದ ಚನಿಯ ಸತ್ತಾಗಿನ ಒಂದು ಸನ್ನಿವೇಶ ಹೀಗಿದೆ: “ಒಂದು ಕಡೆ ಬಾಡು ನಾಯಿ ನೆಲಕ್ಕೆ ಮೂತಿಯನ್ನು ಬಾಚಿ ಮಲಗಿತ್ತು. ಅದರ ಕಣ್ಣಲ್ಲೂ ನೀರ ಹನಿಗಳಿದ್ದುವು. ಕೊಟ್ಟಿಗೆಯಲ್ಲಿ ಕಟ್ಟಿದ ಎತ್ತುಗಳನ್ನು ಮಾತಾಡಿಸದೆ ಒಂದು ದಿನ ಸಂದಿತ್ತು”

ಚೋಮನ ಕಿರಿಮಗ ನೀಲ ಹಳ್ಳದ ನೀರಲ್ಲಿ ಮುಳುಗಿ ಸಾಯುವಂತಾದಾಗ, “ಒಬ್ಬ ಬ್ರಾಹ್ಮಣ ತರುಣನು ಧಾವಿಸಿ, ನೀಲವನ್ನು ಎಳೆದು ತರಲು ಮುಂದುವರಿದನು, ಅವನ ಹಿರಿಯರು ಅವನನ್ನು ತಡೆದರು! ‘ಅವರು ಹೊಲೆಯನಲ್ಲವೇ’ ಎಂದ ಬೆದರಿಸಿದರು”. ಆ ಸಂದರ್ಭವನ್ನು ವಿವರಿಸುತ್ತಾ, ಕೊನೆಯಲ್ಲಿ ಕಾರಂತರು ಹೀಗೆ ಹೇಳುತ್ತಾರೆ. “ಚೋಮನಿಗೆ ಹೊಲೆಯನ ಬಾಳ್ವೆಯ ಹುಣ್ಣು ಎಂಥದ್ದೆಂದು ಸಂಪೂರ್ಣ ಅನುಭವವಾಯಿತು. ಶವವನ್ನು ಹೊತ್ತು ಮನೆಗೆ ತಂದನು”.

ಮೇಲಿನ ಒಂದೆರಡು ವಾಕ್ಯಪುಂಜಗಳು ದಲಿತಜೀವನದ ವಿಷಾದ ಚಿತ್ರಗಳನ್ನು ಕಣ್ಣ ಮುಂದಿಡುತ್ತವೆ. ಓದುವಾಗ ಕರುಳು ಚುರುಕೆನ್ನುತ್ತದೆ. ಕಾರಂತರು ಬರೆಯುತ್ತಾರೆ “ನನ್ನ ಗ್ರಾಮಜೀವನದ ಸುತ್ತಾಟದಲ್ಲಿ, ಹತ್ತಾರು ಹೊಲೆಯರ ಮನೆಗಳನ್ನು ಕಂಡಿದ್ದೆ. ಅವರ ಜೀವನವನ್ನು ಸಾಕಷ್ಟು ನೋಡಿದ್ದೆ. ಅವರ ಹುಟ್ಟೂರುಗಳಿಂದ ಹಿಡಿದು, ಶ್ರಮಿಸುವ ಕಾಫಿ ತೋಟಗಳಿಗೂ ಹೋಗಿ ಬಂದಿದ್ದೆ. ಅದನ್ನೇ, ಐದು ದಿನಗಳಲ್ಲಿ ‘ಚೋಮನ ದುಡಿ’ಯ ರೂಪ ಕೊಟ್ಟು ಬರೆದು ಮುಗಿಸಿದೆ. ಅದರ ಮೊದಲಿನ ಮೆಚ್ಚಿಕೆ, ಮಾನವರಿಂದ ಬಂದುದಲ್ಲ. ಪಶುವಿನಿಂದ ಬಂದಿತ್ತು. ನಾನಿದ್ದ ಮನೆಯ ಹೊರ ಜಗುಲಿಯಲ್ಲಿ ಪುಸ್ತಕವನ್ನಿರಿಸಿ, ಒಳಗೆ ಕಾಫಿ ಕುಡಿಯಲು ಹೋದಾಗ, ಹೊಟ್ಟೆಗೆ ಹುಲ್ಲುಕಾಣದ ದನವೊಂದು ಬಂದು, ಆ ಪುಸ್ತಕವನ್ನು ಕಚ್ಚಿಕೊಂಡು ಹೊರಟೇ ಹೋಯಿತು. ಅದರ ಅರೆವಾಸಿ ಹಾಳೆಗಳನ್ನು ತಿಂದೂ ಹಾಕಿತು. ನಮ್ಮ ಮಂಗಳೂರಿನ ದನಗಳೆಂದರೆ ಬಹಳ ವಿದ್ಯಾವಂತ ಪಶುಗಳು. ಅಲ್ಲಿನ ಜನಗಳಿಗಿಂತಲೂ ವಿದ್ಯಾವಂತರು ಆ ಪಶುಗಳು. ಇದನ್ನು ಕಂಡ ಮೇಲೆ ‘ವಿದ್ಯಾವಿಹೀನಃ ಪಶುಃ ಸಮಾನಃ’ ಎನ್ನುವುದಕ್ಕೂ ನಾಚುತ್ತಿದ್ದೇನೆ. ಮನುಷ್ಯ ವಿದ್ಯೆ ಕಲಿತಾದರೂ ಪಶುವಿನ ಮಟ್ಟಕ್ಕೆ ಬಂದಾನು! ಆ ದನವನ್ನು ಬೆನ್ನಟ್ಟಿ, ನನ್ನ ಆ ಬರಹದಲ್ಲಿ ಅಳಿದುಳಿದ ಅಂಶವನ್ನು ಪಾರು ಮಾಡಿ, ಕಳೆದುಹೋದುದನ್ನು ತಿರುಗಿ ಬರೆದು, ಕೂಡಿಸಿ, ಪ್ರಕಟಿಸಿದೆ. ಅಲ್ಲಿಯ ತನಕ ನನ್ನ ಬರಹಗಳಾವುವನ್ನೂ ಇನ್ನೂರು, ಮುನ್ನೂರಕ್ಕಿಂತ ಹೆಚ್ಚಿಗೆ ಅಚ್ಚು ಹಾಕಿಸುತ್ತಿರಲಿಲ್ಲ. ಸ್ನೇಹಿತರು ಬೆನ್ನುಚಪ್ಪರಿಸಿದ್ದಕ್ಕೆ, ಇದರ ಸಾವಿರ ಪ್ರತಿಗಳನ್ನು ಹಾಕಿಸಲು ಒಪ್ಪಿಗೆ ಕೊಟ್ಟೆ. ನಮ್ಮ ಕನ್ನಡಿಗರು ಮೆಚ್ಚಿದ ಈ ಬರಹದ ಮೊದಲಿನ ಸಾವಿರ ಪ್ರತಿಗಳು ಖರ್ಚಾಗುವುದಕ್ಕೆ ಸಮನಾಗಿ ಹದಿನೆರಡು ವರ್ಷಗಳು ಹಿಡಿದವು! ಇಷ್ಟಿದ್ದರೂ ‘ಪುಸ್ತಕ’ ಬಹಳ ಚೆನ್ನಾಗಿದೆ’ ಎಂದೇ ಅನ್ನುತ್ತಿದ್ದಾರೆ. ಹಾಗೆ ಚೆನ್ನಾಗಿದ್ದುದು ಓದಿದ ಪುಸ್ತಕವೋ, ಓದದ್ದೋ! ಯಾರು ಬಲ್ಲರು?”
ಇವು ಕಾದಂಬರಿಯ ಕುರಿತು ಕಾರಂತರ ಮಾತು. ನೇರಾತಿನೇರ. ಯಾರನ್ನೋ ಮೆಚ್ಚಿಸುವ ಅಥವಾ ಓಲೈಸುವ ದನಿಯೇ ಇಲ್ಲ ಇಲ್ಲಿ. ಅವು ಅವರ ಕಾದಂಬರಿಗಳ ಮಟ್ಟಿಗೂ ಅಷ್ಟೇ ನಿಜ. ಚೋಮನ ದುಡಿ ಇದರಲ್ಲಿ ಪ್ರಥಮ ಹೆಜ್ಜೆ. ಜಾತೀಯತೆ ತೀವ್ರವಾಗಿದ್ದ ೩೦-೪೦ ರ ಕಾಲಘಟ್ಟದಲ್ಲಿ ಚೋಮನಂತವರಿಗೂ ಒಂದು ದನಿಯಿದೆ ಎಂದು ಈ ಕ್ರಾಂತಿಕಾರಿ ಕಾದಂಬರಿಯ ಮುಖಾಂತರ ತೋರಿಕೊಟ್ಟರು ಕಾರಂತರು.

ಸ್ವಾತಂತ್ರ್ಯಪೂರ್ವ ಕಾಲದ ದಲಿತ ವರ್ಗದ ಬವಣೆಯ ಬಾಳಿನ ಚಿತ್ರಣ ಈ ಕಾದಂಬರಿಯ ಕಥಾವಸ್ತು. ಕಾದಂಬರಿಯಲ್ಲಿ ಕಾರಂತರು ಚೋಮನ ಕುಟುಂಬದ ಪರಿಕಲ್ಪನೆ ಕೊಡುವುದೇ ಒಂದು ಹೂವಿನ ದಳದಂತೆ ಅನ್ಯೋನ್ಯವಾಗಿದ್ದ ಕುಟುಂಬ ಎಂದು. ಕಾದಂಬರಿ ಓದುತ್ತ ಹೋದಂತೆ ಹೇಗೆ ಆ ಹೂವಿನ ಎಸಳುಗಳು ವಿಘಟನೆಗೊಳ್ಳುತ್ತವೆ ಎಂಬುದರ ಸ್ಪಷ್ಟ ಪರಿಕಲ್ಪನೆ ನಿಮಗೆ ಸಿಗುತ್ತದೆ. ಬದಲಾಗುತ್ತಿರುವ ದೇಶ ಕಾಲಗಳಲ್ಲಿ ಬದಲಾಗದೆ ಇರುವುದೆಂದರೆ ಕಥಾನಾಯಕ ಚೋಮನ ಕಷ್ಟಜೀವನ. ಈತನ ಪ್ರೀತಿಯ ವಸ್ತು ಎಂದರೆ ದುಡಿ, ಅದೊಂದೇ ಅವನ ಸಂಪತ್ತು. ಸಮಾಜದ ಕಟ್ಟು ಕಟ್ಟಳೆಗಳಿಂದಾಗಿ ಈತ ಜೀವನದಲ್ಲಿ ಬಾರಿ ನೋವನ್ನು ಅನುಭವಿಸು ತ್ತಾನೆ. ಇವರು ಬಹಳ ಬಡ ಕುಟುಂಬ ಹಾಗೂ ಕೆಳಜಾತಿಗೆ ಸೇರಿದವರು. ಕೊನೆಗೊಮ್ಮೆ ತನ್ನ ಧರ್ಮವನ್ನು ತೊರೆಯುವ ನಿರ್ಧಾರಕ್ಕೆ ಚೋಮ ಬರುತ್ತಾನೆ. ಆದರೆ ಆತನ ಮನಸ್ಸು ಅದಕ್ಕೆ ಒಪ್ಪುವುದಿಲ್ಲ. ಕಡು ಬಡತನದಲ್ಲಿ ಜೀವನ ಸಾಗಿಸುತಿದ್ದ ಈತ, ಧಣಿಗಳ ಸಾಲ ತೀರಿಸಲು ತನ್ನ ಮಗನನ್ನೂ, ಮುಂದೆ ಮಗಳನ್ನು ದೂರದ ಊರಿಗೆ ಕಾಫಿ ತೋಟದ ಕೆಲಸಕ್ಕೆ ಕಳುಹಿಸುತ್ತಾನೆ. ಅಲ್ಲಿ ಮಗಳು ಬೆಳ್ಳಿ ಒಡೆಯನ ಕೈಸೆರೆಯಾದುದನ್ನು ಕಂಡ ಚೋಮ ವಿಹ್ವಲನಾಗಿ, ಕೊನೆಗೆ ಸಾಲವೂ ತೀರದೆ ಮಕ್ಕಳನ್ನು ಕಾಣದೆ ದುಡಿ ಬಾರಿಸುತ್ತಲೇ, ಏಕಾಂಗಿ ಯಾಗಿ ಸಮಾಜದ ಕ್ರೌರ್ಯಕ್ಕೆ ಬಲಿಪಶುವಾಗಿ ಮರಣವನ್ನು ಹೊಂದುತ್ತಾನೆ.

ಕನ್ನಡ ಸಾರಸ್ವತ ಲೋಕದ ಪ್ರಜ್ಞೆಯನ್ನು ಬೆಳಗಿಸಿದ ಹಾಗು ಸಾಹಿತ್ಯದಲ್ಲಿ ಹೊಸ ಸಾಧ್ಯತೆಗಳಿಗೆ ಎಡೆ ಮಾಡಿಕೊಟ್ಟ ಕೀರ್ತಿ ಚೋಮನ ದುಡಿಗೆ ಸಲ್ಲಬೇಕು. ಈ ನಿಟ್ಟಿನಲ್ಲಿ ಕಾದಂಬರಿ ಲೋಕದಲ್ಲಿ ‘ಚೋಮನ ದುಡಿ’ ಒಂದು ಅಪೂರ್ವ ಕ್ರಾಂತಿಕಾರಿ ಕೃತಿ. ಇದಕ್ಕೆ ಇಂಬು ಕೊಡುವಂತೆ ಕನ್ನಡ ಮತ್ತೋರ್ವ ಮಹತ್ವದ ಲೇಖಕರಾದ ಅನಂತಮೂರ್ತಿಯವರು ಬರೆಯುತ್ತಾರೆ: “ಆಗ ನಾವು ದೂರ್ವಾಸಪುರದಲ್ಲಿ ಶಾಲೆಗೆ ಹೋಗುತ್ತಿದ್ದ ಹುಡುಗ. ಚೋಮನ ದುಡಿ ಓದುತ್ತಿದ್ದೆ. ನಮ್ಮ ಮನೆಗೆ ಚೌಡ ಎನ್ನುವವನು ಕೊಟ್ಟಿಗೆ ಕೆಲಸಕ್ಕೆ ಬರುತ್ತಿದ್ದ. ನಾನು ಆ ಕಾದಂಬರಿಯನ್ನು ಆಗಷ್ಟೇ ಓದಿ ಮುಗಿಸಿದ್ದರಿಂದ ಚೌಡನನ್ನು ಆವತ್ತು ನೋಡಿದ ಕೂಡಲೇ ನನಗನ್ನಿಸಿದ್ದು ಈ ಚೌಡನಿಗೊಂದು ಒಳ ಜೀವನ ಇದೆ ಅಂತ. ಅದು ನನ್ನಲ್ಲಿ ಹೊಸಪ್ರಜ್ಞೆ ಹುಟ್ಟಿದ ಹೊತ್ತು. ಚೋಮನ ದುಡಿಯ ಚೋಮ ದುಡಿ ಬಾರಿಸುವುದು, ಬಾಯಿಯಲ್ಲಿ ಹೇಳಲಿಕ್ಕಾಗದ್ದನ್ನು ಅದರ ಮೂಲಕ ಬೇರೆ ಬೇರೆ ದನಿಯಲ್ಲಿ ಹೊರಡಿಸುವುದು, ಹಾಗೆ ಈ ಚೌಡನಿಗೂ ಕೂಡ ಮನಸ್ಸಿನಲ್ಲಿ ಏನೇನೋ ಹೊಸ ಭಾವನೆ ಇರಬಹುದು ಅನ್ನಿಸಿತ್ತು.” ಅಷ್ಟರ ಮಟ್ಟಿಗೆ ಕಾರಂತರ ಪ್ರಭಾವ ತಮ್ಮ ಮೇಲಾಗಿತ್ತು ಎಂದು ಅವರೆ ತಮ್ಮ ಆತ್ಮಕಥನ ಸುರಗಿಯಲ್ಲಿ ಬರೆದುಕೊಳ್ಳುತ್ತಾರೆ.
ಬರೀ ಭಾವಾವೇಶದ ಅಥವಾ ದುಗುಡ ತೋಡಿಕೊಳ್ಳುವ ಕಥೆಯಾಗಿ ಕಾಣದೆ ಬದಲಾಗಿ ಸಾಮಾಜಿಕ ಸಮಸ್ಯೆಗಳತ್ತ ಗಮನ ಸೆಳೆಯುವ ಈ ಅಪರೂಪದ ಕಾದಂಬರಿಯನ್ನು ಎಲ್ಲರು ಓದಲೇಬೇಕು ಎಂಬುದು ಈ ವಿಮರ್ಶೆಯ ಆಶಯ.

ಕೊನೆಯಲ್ಲಿ ಕಾದಂಬರಿಯ ನನ್ನಿಷ್ಟದ ಅಷ್ಟೇ ಪರಿಣಾಮಕಾರಿಯಾದ ಸಾಲುಗಳನ್ನ ಪಟ್ಟಿ ಮಾಡಿದ್ದೇನೆ.

“ಹೊತ್ತು ಮುಳುಗಿದ ಮೇಲೆ ಚೋಮನ ಗುಡಿಸಲಲ್ಲಿ ದೀಪ ಉರಿಸಿದವರಿಲ್ಲ,
ದೀಪ ಉರಿಸಲು ಅವನಲ್ಲೇನು ಮುತ್ತು ಸುರಿಯುತ್ತಾರೆಯೇ?”

“ತೋಟವು ಜನಕ್ಕೆಲ್ಲ ಕತ್ತಲಾಗಿ ಕಂಡರೂ ತಾವು ಮಾತ್ರ ಬೆಳುದಿಂಗಳನ್ನು ಅಲ್ಲಿ ಕಾಣುತ್ತೇವೆ ಎಂಬ ಹಿರಿಯ ಆಸೆ”

“ಒಂದಲ್ಲ ಒಂದು ಚಿಂತೆ ತಪ್ಪದ ಮನೆಯಲ್ಲಿ, ಕೊನೆಗೆ ಸಾವು ಕೂಡ ಒಂದು ವಿಶೇಷವಾದ ಘಟನೆಯೆನಿಸುವುದಿಲ್ಲ”

“ಒಂದೊಂದು ಗಳಿಗೆಯಲ್ಲಿ ಅವನ ಮನಸ್ಸು ತೀರ ವಿಹ್ವಲವಾಯಿತೆಂದರೆ ಪ್ರಪಂಚವನ್ನು ಮರೆಯಿಸಬಲ್ಲ ಅವನ ದುಡಿಯಿದೆ. ಅವನ ಒಡಲಿಗೂ ದುಡಿಗೂ ನಡುವೆ ಸೇಂದಿಯ ಸೇತುವೆಯಿದೆ”

“ಅಪ್ಪಾ, ಸುಮ್ಮನೆ ಇಲ್ಲದ ಚಿಂತೆಯನ್ನು ನೀನು ಕಟ್ಟಿಕೊಳ್ಳುತ್ತೀ. ನಾವು ಹೊಲೆಯರಾಗಿ ಹುಟ್ಟಿ, ನಮ್ಮ ಅಂತಸ್ತಿಗೂ ಮೀರಿದ ಆಸೆ ಹಿಡಿದರೆ ಹೇಗೆ? ಅದೃಷ್ಟಬೇಕಲ್ಲವೇ? ಮುಖ್ಯ ಬೇಕು ಅದೃಷ್ಟ. ದೇವರು ಹಣೆಯಲ್ಲಿ ಬರೆದಿರಬೇಕು”

“ಸರಿ ಒಮ್ಮೆಗೇ ದುಡಿಯನ್ನು ಹಿಡಿದು ಬಾರಿತೊಡಗಿದನು. ಅದರಂತೆ ದುಡಿಯನ್ನು ಅವನು ಈ ಜೀವಮಾನದಲ್ಲಿ ಬಾರಿಸಿರಲಿಲ್ಲ. ಇನ್ನು ಬಾರಿಸುವಂತಿಲ್ಲ. ತೀರ ಸ್ವಲ್ಪ ಹೊತ್ತು ಬಾರಿಸಿದುದು. ಆದರೆ ನಿಜಕ್ಕೂ ಅದು ಪ್ರಳಯ ತಾಂಡವದ ಡಮರುನಿನಾದ! ದುಡಿಯ ಢಮಡಮ್ಮವು. ನಿಂತಿತು, ಒಮ್ಮೆಗೇ ನಿಂತಿತು. ಚೋಮನ ಹೃದಯದ ಡಮರೂ ನಿಂತಿತು! ಅದೂ ಒಮ್ಮೆಗೇ ನಿಂತಿತು!”

“ಹಿಡಿದ ದುಡಿ, ಎತ್ತಿದ ಕೈ, ತುಂಬಿದ ಆವೇಶ! ಎಲ್ಲವೂ ಇದ್ದಕ್ಕಿಂದ್ದತೆಯೇ ಇವೆ. ಆದರೆ ‘ಚೋಮ’ನಿಲ್ಲ!”

ಚೋಮನ ದುಡಿ ಕಾದಂಬರಿಯಲ್ಲಿ ಬರುವ ಚಾರ್ಮಾಡಿ ಘಾಟ್ ನ ವರ್ಣನೆ:
“ಹಸುರಾದ ಕಣಿವೆಗಳು, ಭೀತಿ ಹುಟ್ಟಿಸುವ ಕೊರಕಲುಗಳು. ವಿಸ್ಮಯಗೊಳಿಸುವ ಗಿರಿಶೃಂಗಗಳು!. ಮುಂದೆ ಎಲ್ಲವನ್ನೂ ಒಮ್ಮೆಗೇ ಮರೆಯಿಸಿ ನಿಗೂಢ ಪ್ರಪಂಚದಲ್ಲಿ ತಳ್ಳುವ ಮಂಜು ಮುಸುಕಿನ ಬೆಳ್ಗತ್ತಲೆ! ಹಿಂದು ಮುಂದಿಲ್ಲದ ಪ್ರಪಂಚ. ಎದುರಿಗೆ ಸಾವಿರಾರು ಅಡಿ ಆಳದ ಕಣಿವೆಯಿದ್ದರೂ ನಾಲ್ಕು ಮಾರು ಮುಂದೆ ಏನಿದೆಯೆಂದು ತಿಳಿಯುವುದಿಲ್ಲ. ಮೋಡಗಳ ದಟ್ಟಣಿಯಿಂದ ತೀರ ಹತ್ತಿರದ ಗಿಡಮರಗಳು ಕದಲದೆ ನಿಂತ ಭೂತ ಪಿಶಾಚಿಗಳಂತೆ ಕಾಣಿಸುತ್ತಿವೆ. ಇತ್ತ, ಇನ್ನೊಂದು ಮಗ್ಗುಲಿಂದ ಹಿಮದ ಕಣಗಳು ಹಸುರು ಹುಲ್ಲಿಗೆ ಬಡಿದು ಹನಿಯಾಗಿ ಇಳಿದು, ಬಂಡೆಗಳ ಎಡೆಯಲ್ಲಿ ಚಿರಿ ಚಿರಿ, ಸುಳುಸುಳು ಎಂದು ಹರಿಯುವ ಸೊಗಸೇನು!”

ಧನ್ಯವಾದಗಳೊಂದಿಗೆ,

ವಿಮರ್ಶೆಯ ಕೃಪೆ:- ಕಾರಂತರ "ಚೋಮನದುಡಿ"ಯ ವಿಮರ್ಶಕರು ಆದರ್ಶ ಕೃಷ್ಣಭಟ್ಟರು.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ