ಮಂಗಳವಾರ, ಡಿಸೆಂಬರ್ 25, 2018

ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016

ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016


ಮನುಷ್ಯ ತನ್ನ ಸುದೀರ್ಘಕಾಲದ ಅನುಭವದಿಂದ ಕೆಲವು ಆಹಾರ ಶರೀರದ ಬೆಳವಣಿಗೆ ಮತ್ತು ಸದೃಢತೆಗೆ ಅತ್ಯಗತ್ಯ ಎಂದು ಕಂಡುಕೊಂಡಿದ್ದಾನೆ. ಆಧುನಿಕ ಸಂಶೋಧನೆಗಳು ಇದನ್ನು ಪುಷ್ಟೀಕರಿಸಿ, ಈ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿವೆ.


ನಮ್ಮ ಶರೀರಕ್ಕೆ ಆಹಾರದ ಏಳು ಘಟಕಗಳು ಅತ್ಯಗತ್ಯ ಎಂದು ಸಂಶೋಧಕರು ಪಟ್ಟಿ ಮಾಡಿದ್ದಾರೆ.  ದೇಹಕ್ಕೆ ಶಕ್ತಿಯನ್ನು ಪೂರೈಸುವುದು ಕಾರ್ಬೋಹೈಡ್ರೇಟ್ ಮತ್ತು ಲಿಪಿಡ್ ಎಂದು ಗುರುತಿಸಲಾಗಿದೆ. ದೇಹದ ಬೆಳವಣಿಗೆಗೆ ಪ್ರೋಟೀನ್, ನೀರು ಮತ್ತು ಖನಿಜಗಳು ಅತ್ಯಗತ್ಯ. ವಿಟಮಿನ್ ಮತ್ತು ಖನಿಜಗಳು ನಿಯಂತ್ರಕಗಳಾಗಿ ಕಾರ್ಯನಿರ್ವಹಿಸಿದರೆ, ನಾರು ಪದಾರ್ಥವು ತ್ಯಾಜ್ಯವನ್ನು ಹೊರ ಹಾಕುವ ಕಾರ್ಯಕ್ಕೆ ನೆರವಾಗುವುದೆಂದು ಕಂಡುಕೊಳ್ಳಲಾಗಿದೆ.  ನಾವು ಸೇವಿಸುವ ಆಹಾರದಲ್ಲಿ ಈ ಎಲ್ಲ ಘಟಕಗಳು ಸೂಕ್ತ ಪ್ರಮಾಣಗಳಿದ್ದರೆ, ಅದನ್ನು ಸಮತೋಲನ ಆಹಾರವೆಂದು ಹೇಳಲಾಗುತ್ತದೆ.

ಸಂಶೋಧನೆಯಿಂದ ಕಂಡು ಬಂದಿರುವ ಅಂಶವೆಂದರೆ, ಶರೀರದ ಬೆಳವಣಿಗೆ ಮತ್ತು ಸದೃಢತೆಗೆ  ಕಾರ್ಬೋಹೈಡ್ರೇಟ್ ಮತ್ತು ಲಿಪಿಡ್ ಗಳು ಅಗತ್ಯ,  ದೇಹದ ಬೆಳವಣಿಗೆಗೆ ಸಹಕಾರಿಯಾಗಿರುವುದು ಪ್ರೋಟೀನ್, ನೀರು ಮತ್ತು ಖನಿಜಗಳು. ಜೊತೆಗೆ ವಿಟಮಿನ್ ಮತ್ತು ಖನಿಜಗಳು ನಿಯಂತ್ರಕಗಳಾಗಿ ಕಾರ್ಯನಿರ್ವಹಿಸಬಲ್ಲವು ಎಂದು ಕಂಡುಕೊಳ್ಳಲಾಗಿದೆ. ನಾರು ಪದಾರ್ಥವು ತ್ಯಾಜ್ಯವನ್ನು ಹೊರ ಹಾಕುವ ಕಾರ್ಯಕ್ಕೆ ನೆರವಾಗಬಲ್ಲದೆಂಬ ಕಾರಣಕ್ಕೆ ಅದಕ್ಕೂ ಆಹಾರದ ಘಟಕಗಳಲ್ಲಿ ಸ್ಥಾನ ನೀಡಲಾಗಿದೆ. ಈ ಎಲ್ಲ ಘಟಕಗಳು ಸೂಕ್ತ ಪ್ರಮಾಣಗಳಿದ್ದಂತಹ ಆಹಾರವನ್ನು ಸಮತೋಲನ ಆಹಾರವೆನ್ನುತ್ತಾರೆ.

          ದೇಹದ ಬೆಳವಣಿಗೆಗೆ ಅತ್ಯಗತ್ಯವಾದ ಪ್ರೋಟೀನ್‌ಗಳ ಮೂಲ ಆಕರ ಬೇಳೆಕಾಳುಗಳು. ವಿವಿಧ ಕಾರಣಗಳಿಂದ ಬೇಳೆಕಾಳುಗಳನ್ನು ಬೆಳೆಯುವ ಪ್ರಮಾಣ ಕಡಿಮೆಯಾಗಿದೆ. ಅದೇ ಸಮಯದಲ್ಲಿ ವಿಶ್ವದೆಲ್ಲೆಡೆ ಜನರನ್ನು ಅಪೌಷ್ಠಿಕತೆ ಕಾಡುತ್ತಿದೆ. ಅಪೌಷ್ಠಿಕತೆ ತೊಡೆದುಹಾಕುವಲ್ಲಿ  ಬೇಳೆಕಾಳುಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ  ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ(ಎಫ್‌ಎಒ), 2016ನೆಯ ವರ್ಷವನ್ನು ಅಂತಾರಾಷ್ಟ್ರೀಯ ಬೇಳೆ ಕಾಳುಗಳ ವರ್ಷವೆಂದು ಘೋಷಣೆ ಮಾಡಿದೆ.

ಬೇಳೆಕಾಳುಗಳು ನಮಗೇಕೆ ಮುಖ್ಯ?

          ನಮ್ಮ ಆಹಾರದ ಪ್ರಮುಖ ಭಾಗವಾಗಿರುವ ಧಾನ್ಯಗಳನ್ನು ಮೂರು ಗುಂಪುಗಳಲ್ಲಿ ಗುರುತಿಸಲಾಗುತ್ತದೆ. ಅವುಗಳೆಂದರೆ ದ್ವಿದಳ ಬೇಳೆಕಾಳುಗಳು, ಏಕದಳ ಕಾಳುಗಳು ಮತ್ತು ಮಿಲೆಟ್‌  ಅಥವಾ ಸಣ್ಣಕಾಳುಗಳು. ವಿವಿಧ ಬಣ್ಣ ಹಾಗೂ ಗಾತ್ರಗಳಲ್ಲಿ ದ್ವಿದಳ ಧಾನ್ಯಗಳು ಲಭ್ಯ. ಲೆಗ್ಯುಮಿನೇಸಿ ಕುಟುಂಬದ ಸಸ್ಯಗಳ ಗುಂಪು, ಬೇಳೆಕಾಳುಗಳನ್ನು ಉತ್ಪಾದಿಸುತ್ತದೆ.

          ಸಸ್ಯಮೂಲದ ಪ್ರೊಟೀನ್, ಅಮೈನೋ ಆಮ್ಲ ಹಾಗೂ ಇತರ ಉಪಯುಕ್ತ ಪೋಷಕಾಂಶಗಳು ಬೇಳೆಕಾಳುಗಳಲ್ಲಿವೆ. ಬೇಳೆಕಾಳುಗಳಿಗೆ ಕೆಲವು ರೋಗಗಳನ್ನು ತಡೆಯುವ ನಿರೋಧಕ ಶಕ್ತಿ ಇದೆ ಹಾಗೂ  ಬೊಜ್ಜು ತಡೆಯಲು ಇವುಗಳ ಸೇವನೆ ಅಗತ್ಯವೆಂದು ವಿಜ್ಞಾನಿಗಳು ಮನಗಂಡಿದ್ದಾರೆ.

          ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಭೂಮಿಯ ಫಲವತ್ತತೆಯೂ ಉಳಿಯುತ್ತದೆ ಎನ್ನುವುದು ತಿಳಿದು ಬಂದಿದೆ.  ಲೆಗ್ಯುಮಿನೇಸಿ ಕುಟುಂಬದ ಸಸ್ಯಗಳ ಬೇರುಗಳಲ್ಲಿ ಆಶ್ರಯ ಪಡೆಯುವ ರೈಜೋಬಿಯಮ್ ಬ್ಯಾಕ್ಟೀರಿಯ, ಸಾರಜನಕ ಸ್ಥಿರೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.  ವಾತಾವರಣದಲ್ಲಿ ಮುಕ್ತವಾಗಿ ಸಿಗುವ ಸಾರಜನಕವನ್ನು ರೈಜೋಬಿಯಮ್ ಬ್ಯಾಕ್ಟೀರಿಯ ಹೀರಿಕೊಂಡು, ನೈಟ್ರೇಟ್ ರೂಪಕ್ಕೆ ಪರಿವರ್ತನೆ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ.

ಅಂತಾರಾಷ್ಟ್ರೀಯ ಬೇಳೆಕಾಳುಗಳ ವರ್ಷಾಚರಣೆಯ ಉದ್ದೇಶಗಳು

ಅಂತಾರಾಷ್ಟ್ರೀಯ ಬೇಳೆಕಾಳುಗಳ ವರ್ಷಾಚರಣೆಯ ಹಿಂದೆ ಅನೇಕ ಉದ್ದೇಶಗಳಿವೆ.

ಸುಸ್ಥಿರ ಆಹಾರ ಮತ್ತು ಪೌಷ್ಟಿಕತೆಯಲ್ಲಿ ಬೇಳೆಕಾಳುಗಳ ಪಾತ್ರದ ಕುರಿತು ಜಾಗೃತಿ ಮೂಡಿಸುವುದು.


ಜಾಗತಿಕ ಮಟ್ಟದಲ್ಲಿ ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ಉತ್ತೇಜಿಸುವುದು.


ಹೆಚ್ಚು ಇಳುವರಿ ನೀಡುವ ತಳಿ ಅಭಿವೃದ್ಧಿ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದು.


ಬೇಳೆಕಾಳುಗಳ ಇಳುವರಿ ಹೆಚ್ಚಿಸಿ, ಆ ಮೂಲಕ ಅವುಗಳ ಬಳಕೆ ಹೆಚ್ಚಿಸುವುದು.


          ಕಾಬೂಲುಕಡಲೆ ಪ್ರಪಂಚದಲ್ಲೇ ಪ್ರಸಿದ್ಧ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನಗಳಲ್ಲಿ ಮೊದಲಿನಿಂದಲೂ ದ್ವಿದಳ ಧಾನ್ಯದ ಬಳಕೆಗೆ ಒತ್ತು ಇದೆ. ನಮ್ಮ ದೇಶದಲ್ಲಿ ರುಚಿಕರ ದಾಲ್-ರೋಟಿ, ಹೆಸರುಬೇಳೆ ಪಾಯಸವೂ ಜನಪ್ರಿಯ.

ದ್ವಿದಳ ಧಾನ್ಯಗಳನ್ನು  ಬೆಳೆಯುವುದರಿಂದ ಅನೇಕ ಪ್ರಯೋಜನಗಳಿವೆ.

1.ಪ್ರೋಟೀನ್ ಆಕರ: ಸಾಮಾನ್ಯವಾಗಿ ಪ್ರೋಟೀನ್ ಆಕರಗಳಾಗಿ ಪ್ರಾಣಿ ಮೂಲದ ಮಾಂಸ, ಹಾಲಿನ ಉತ್ಪನ್ನಗಳು, ಮೀನು ಬಳಕೆಯಲ್ಲಿವೆ.  ಆಹಾರ ಧಾನ್ಯ ಹಾಗೂ ಬೇಳೆ ಕಾಳುಗಳನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸುದರಿಂದ ಕೂಡ ಶರೀರಕ್ಕೆ ಅಗತ್ಯ ಪ್ರಮಾಣದ ಪ್ರೋಟೀನ್ ದೊರೆಯುತ್ತದೆ. ಅಪೌಷ್ಠಿಕತೆಯಿಂದ ನರಳುವ ಮಕ್ಕಳಲ್ಲಿ ಪೋಷಣಾ ಮರಾಸ್ಮಸ್ (ಮೈಸವೆತ), ಕ್ವಾಷಿಯೋರಕರ್  ದಂತಹ  ರೋಗಗಳು ಕಂಡು  ಬರುತ್ತವೆ. ಬೆಳವಣಿಗೆಯಾಗದ ದೇಹ, ಬಡಕಲು ಕೈ ಕಾಲುಗಳು, ಜೋತು ಬಿದ್ದ ಚರ್ಮ ಇವೆಲ್ಲ ಲಕ್ಷಣಗಳು ಕಾಣತೊಡಗುತ್ತವೆ.

 ಮಾಂಸ,ಮೀನು,ಹಾಲಿನ ಉತ್ಪನ್ನಗಳನ್ನು ಹೆಚ್ಚು ದಿನ ಸಂಗ್ರಹಿಸಿಡಲು ಸಾಧ್ಯವಿಲ್ಲ. ಬೇಳೆಕಾಳುಗಳನ್ನು ಹಲವು ತಿಂಗಳುಗಳವರೆಗೆ ಸುಲಭವಾಗಿ ಸಂಗ್ರಹಿಸಿಡಬಹುದು. ಗಮನಿಸಬೇಕಾದ ಅಂಶವೆಂದರೆ, ಆ ಸಮಯದಲ್ಲಿ ಬೇಳೆಕಾಳುಗಳಲ್ಲಿನ ಪೋಷಕಾಂಶದ ಪ್ರಮಾಣ ನಾಶವಾಗುವುದಿಲ್ಲ ಎಂಬುದು.

ಪಶು ಆಹಾರ: ಒಣಗಿದ ಬೇಳೆಕಾಳುಗಳ ತೊಗಟೆ, ತವಡು ಇವುಗಳನ್ನು ಪಶು ಆಹಾರವನ್ನಾಗಿ ಉಪಯೋಗ ಮಾಡಲಾಗುತ್ತದೆ. ಇವು ಪ್ರಾಣಿಗಳ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ.


ಖನಿಜಾಂಶ: ಬೇಳೆಕಾಳುಗಳಲ್ಲಿ ಲಿಪಿಡ್ ಪ್ರಮಾಣ ತುಂಬಾ ಕಡಿಮೆ ಮತ್ತು ಕೊಲೆಸ್ಟ್ರಾಲ್ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ನಾರು ಇದೆ.ಹಾಗೆಯೇ ಪೊಟ್ಯಾಸಿಯಮ್,ರಂಜಕ,ಕ್ಯಾಲ್ಸಿಯಮ್,ಮೆಗ್ನೀಸಿಯಮ್,ಕಬ್ಬಿಣ ಮುಂತಾದ ಖನಿಜಾಂಶಗಳನ್ನು ಹೊಂದಿವೆ.


ಪರಿಸರ ಸ್ನೇಹಿ: ಕಡಿಮೆ ನೀರಿನ ಲಭ್ಯತೆ ಇರುವ ವಾತಾವರಣದಲ್ಲೂ ಚೆನ್ನಾಗಿ ಬೆಳೆಯಬಲ್ಲ ದ್ವಿದಳಧಾನ್ಯದ ತಳಿಗಳಿವೆ. ಒಂದು ಅಂದಾಜಿನಂತೆ ಒಂದು ವರ್ಷಕ್ಕೆ ಒಂದು ಹೆಕ್ಟೇರ್ ನಷ್ಟು ಪ್ರದೇಶದಲ್ಲಿನ ದ್ವಿದಳ ಧಾನ್ಯದ ಸಸ್ಯಗಳು 350 ಕಿಲೊಗ್ರಾಮಿನಷ್ಟು ಸಾರಜನಕವನ್ನು ಸಾರಜನಕ ಸ್ಥಿರೀಕರಣ ಕ್ರಿಯೆಗೆ ಒಳಪಡಿಸುತ್ತವೆ. ಇದರಿಂದಾಗಿ ರಾಸಾಯನಿಕ ಸಾರಜನಕಯುಕ್ತ ಗೊಬ್ಬರ ಬಳಕೆಯನ್ನು ಕಡಿಮೆಗೊಳಿಸಿದಂತಾಗುತ್ತದೆ. ಈ ರೀತಿ ಹಸಿರುಮನೆ ಪರಿಣಾಮವನ್ನು ತಗ್ಗಿಸಲು ಸಹಕಾರಿ.


ಸುಸ್ಥಿರ ಕೃಷಿ: ದ್ವಿದಳ ಧಾನ್ಯದ ಬೆಳೆಗಳು ಮಣ್ಣಿನಲ್ಲಿ ರಂಜಕಯುಕ್ತ ಮಣ್ಣು ಸವಕಳಿಯಾಗದಂತೆ ತಡೆಯುತ್ತವೆ. ಹುಲ್ಲು ಮತ್ತು ಇತರ ಏಕದಳ ಸಸ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.


ಸವಾಲುಗಳು

ರೈತರಿಗಿರುವ ಮಾಹಿತಿಯ ಕೊರತೆಯೇ, ದ್ವಿದಳಧಾನ್ಯಗಳನ್ನು ಬೆಳೆಯುವಲ್ಲಿ ನಿರಾಸಕ್ತಿ ತೋರಲು ಕಾರಣ ಇರಬಹುದು.


ಧಾನ್ಯಗಳಿಗೆ ಸಮಾಧಾನಕರ ಬೆಲೆ ಸಿಗದೇ ಇರುವುದು.


ಹೊಸ ಹೊಸ ತಳಿಗಳ ಅಭಿವೃದ್ಧಿಯೆಡೆಗೆ ನಡೆಯದ ಸಂಶೋಧನಾ ಕಾರ್ಯಗಳು.


ಬಂಡವಾಳದ ಕೊರತೆ.


ಸಾಧ್ಯತೆಗಳು..

ಬೇಳೆಕಾಳುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ರೈತರ ಅನುಭವಗಳನ್ನು ಕಡಿಮೆ ಉತ್ಪಾದನೆ ಇರುವ ರಾಷ್ಟ್ರಗಳ ರೈತರ ಜೊತೆ ಹಂಚಿಕೊಳ್ಳುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.


ಜಾಗತಿಕ ಮಟ್ಟದಲ್ಲಿ ದ್ವಿದಳಧಾನ್ಯಗಳನ್ನು ಬೆಳೆಯುವಂತೆ ಉತ್ತೇಜಿಸಲು ಹಣಕಾಸಿನ ನೆರವು ನೀಡುವುದು.


ದ್ವಿದಳ ಧಾನ್ಯಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು.


ಬೇಳೆಕಾಳುಗಳನ್ನು ಬಳಸಿ ಹೊಸ ಹೊಸ ತಿನಿಸುಗಳನ್ನು ತಯಾರಿಸುವುದು.


ಮುಗಿಸುವ ಮುನ್ನ

ಬೇಳೆಕಾಳುಗಳಿಂದ ಇಷ್ಟೆಲ್ಲ ಪ್ರಯೋಜನಗಳಿದ್ದರೂ, ಅವುಗಳ ಉತ್ಪಾದನೆ ಮಾತ್ರ ಸಮಾಧಾನಕರವಾಗಿಲ್ಲ. 171 ಕ್ಕಿಂತಲೂ ಹೆಚ್ಚು ರಾಷ್ಟ್ರಗಳಲ್ಲಿ ಬೇಳೆಕಾಳುಗಳನ್ನು ಬೆಳೆಯಲಾಗುತ್ತಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬೇಳೆಕಾಳುಗಳ ಉತ್ಪಾದನೆ ಅಷ್ಟಕ್ಕಷ್ಟೆ. ಮುಂದುವರೆದ ರಾಷ್ಟ್ರಗಳಲ್ಲಿ ಮಾತ್ರ ಉತ್ಪಾದನೆಯ ಪ್ರಮಾಣ ಗಣನೀಯವಾಗಿದೆ. ಫ್ರಾನ್ಸ್, ಕೆನಡಾ, ಅಮೇರಿಕಾ, ಭಾರತ ಮುಂತಾದ ದೇಶಗಳು ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಎಲ್ಲ ದೇಶಗಳಲ್ಲೂ ಈ ಬಗ್ಗೆ ಅರಿವು ಮೂಡಬೇಕೆಂಬುದೇ ಅಂತಾರಾಷ್ಟ್ರೀಯ ಬೇಳೆಕಾಳುಗಳ ವರ್ಷದ ಘೋಷಣೆಯ ಹಿಂದಿನ ಆಶಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ