ಮಂಗಳವಾರ, ಡಿಸೆಂಬರ್ 25, 2018

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ

ದೇಶ ವಿದೇಶಗಳಲ್ಲಿರುವ ಭಾರತೀಯರು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಮತ್ತು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯಲ್ಲಿ, ಕೆಲವುದರ ಪರಿಚಯವನ್ನು ಇಂದು ಮಾಡಿಕೊಳ್ಳೋಣ. ಭಾರತವೆಂದರೆ ಕಡುಬಡತನದ ಮತ್ತು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಹಿಂದುಳಿದ ದೇಶ. ಇಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು, ಸಾಧನೆಗಳು ಸಾಧ್ಯವಿಲ್ಲ ಎನ್ನುವ ಮನೋಭಾವವನ್ನು ಕೆಲವು ಭಾರತೀಯರೇ ಹೊಂದಿರುವುದು ಮತ್ತು ದೇಶ ವಿದೇಶಗಳಲ್ಲಿ ವಿವಿಧ ಮಾಧ್ಯಮಗಳ ಮೂಲಕ ತಮ್ಮ ಅಭಿಪ್ರಾಯವನ್ನು ಜನಸಾಮಾನ್ಯರ ಮೇಲೆ ಹೇರುತ್ತಿರುವುದು ವಿಷಾದನೀಯ.

1) ವಿಶ್ವಾದಂತ್ಯ ಅಸ್ತಮಾ ಸಮಸ್ಯೆ ಎದುರಿಸುತ್ತಿರುವವರಿಗೆ ನೆರವಾದ ಡಾ. ಯೋಗಿ ಗೋಸ್ವಾಮಿ.

ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಆಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ 2 ಕೋಟಿಗೂ ಅಧಿಕವಿದೆ.ವಿಶ್ವಾದಂತ್ಯ ಸುಮಾರು 20 ಕೋಟಿಗೂ ಹೆಚ್ಚು ಜನರು ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೆಹಲಿ, ಬೀಜಿಂಗ್, ಬೆಂಗಳೂರು ಮೊದಲಾದ ಮಹಾನಗರಗಳಿಂದ ಹಿಡಿದು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಹೆಚ್ಚಾಗುತ್ತಿರುವ ವಾಯುಮಾಲಿನ್ಯದಿಂದಾಗಿ, ಆಸ್ತಮಾ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಮತ್ತು ವಯಸ್ಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಸ್ತಮಾ ಸಮಸ್ಯೆ ಎದುರಿಸುತ್ತಿರುವವರಿಗೆ ಗಾಳಿಯನ್ನು ಶುದ್ಧೀಕರಿಸಿ ನೀಡುವುದಾಗಿ ಹೇಳುವ ಅನೇಕ ಏರ್ ಫ್ಯೂರಿಫೈಯರ್ಗಳು ವಿಶ್ವಾದಂತ್ಯ ಲಭ್ಯವಿದೆ.ಆದರೆ ಅವುಗಳ ಬಳಕೆಯಿಂದ, ನಿರೀಕ್ಷಿತ ಪ್ರಯೋಜನ ದೊರೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ.
1990ರ ದಶಕದಲ್ಲಿ ಹೆಚ್ಚಿನ ಉದ್ಯೋಗವಕಾಶಗಳನ್ನು ಅರಿಸಿ, ಭಾರತದಿಂದ ಅಮೇರಿಕಾಗೆ ಡಾ.ಯೋಗಿ ಗೋಸ್ವಾಮಿ, ತಮ್ಮ ಕುಟುಂಬದ ಜೊತೆ ವಲಸೆ ಹೋಗಿದ್ದರು.ಸೌರಶಕ್ತಿ ಕ್ಷೇತ್ರದಲ್ಲಿ ಅವರಿಗಿದ್ದ ಕೌಶಲ್ಯ ಮತ್ತು ಅನುಭವಕ್ಕೆ ಉತ್ತಮ ಅವಕಾಶಗಳು ಅಮೇರಿಕಾದಲ್ಲಿ ದೊರೆತರೂ, ಅವರು ನಿರೀಕ್ಷಿಸದ ಸಮಸ್ಯೆಯೊಂದು ಎದುರಾಗಿತ್ತು.ಅವರ ಪುಟ್ಟ ಮಗು ದಿಲೀಪ್ನನ್ನು ಆಸ್ತಮಾ ಸಮಸ್ಯೆ ಇನ್ನಿಲ್ಲದಂತೆ ಕಾಡತೊಡಗಿತು.ಈ ಮಗುವಿಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವುದು ಸಾಮಾನ್ಯವಾಯಿತು. ಆಸ್ತಮಾ ಸಮಸ್ಯೆ ಎದುರಿಸುವವರಿಗೆ ನೆರವಾಗುತ್ತವೆ ಎಂದು ಹೇಳಲಾದ ಹಲವಾರು ರೀತಿಯ ಏರ್ ಪ್ಯೂರಿಫೈಯರ್ಗಳನ್ನು ಡಾ.ಯೋಗಿ ಗೋಸ್ವಾಮಿ ಖರೀದಿಸಿ, ಬಳಸತೊಡಗಿದರೂ, ಮಗುವಿಗೆ ಏನೂ ಪ್ರಯೋಜನವಾಗಲಿಲ್ಲ. ಆಗ ಈ ಏರ್ ಪ್ಯೂರಿಫೈಯರ್ಗಳಿಂದ ತಮ್ಮ ಮಗುವಿಗೆ ಏಕೆ ಪ್ರಯೋಜನವಾಗುತ್ತಿಲ್ಲ ಎಂದು ತಿಳಿದುಕೊಳ್ಳಲು ಡಾ.ಯೋಗಿ ಗೋಸ್ವಾಮಿ ಮುಂದಾದರು. ಇಂತಹ ಅನೇಕ ಏರ್ ಫಿಲ್ಟರ್ಗಳಲ್ಲಿ 1940ರ ದಶಕದಲ್ಲಿ ಅಭಿವೃದ್ಧಿಯಾದ ಹೆಚ್ಇಪಿಎ ತಂತ್ರಜ್ಞಾನವನ್ನು ಬಳಸುತ್ತಿರುವುದನ್ನು ಡಾ.ಗೋಸ್ವಾಮಿ ಅರಿತುಕೊಂಡರು. ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳಲ್ಲಿ ಅಧಿಕ ಸಂಖ್ಯೆಯನ್ನು ಈ ಪ್ಯೂರಿಫೈಯರ್ಗಳು ಸರೆಹಿಡಿಯುತ್ತಿದ್ದರೂ, ಈ ಕಣಗಳನ್ನು ಪೂರ್ಣವಾಗಿ ನಾಶಪಡಿಸುತ್ತಿರಲಿಲ್ಲ. ಹೀಗಾಗಿ ಆಸ್ತಮಾ ಸಮಸ್ಯೆ ಎದುರಿಸುವವರಿಗೆ ಈ ಪ್ಯೂರಿಫೈಯರ್ಗಳಿಂದ ನಿರೀಕ್ಷಿತ ಪ್ರಯೋಜನವಾಗುತ್ತಿಲ್ಲವೆಂದು ಡಾ.ಗೋಸ್ವಾಮಿ ಗಮನಿಸಿದರು.

20 ವರ್ಷಗಳ ಕಾಲ ನಿರಂತರವಾಗಿ ಡಾ.ಗೋಸ್ವಾಮಿ ಮಾಡಿದ ಸಂಶೋಧನೆ ಮತ್ತು ಅಭಿವೃದ್ಧಿಯ ಕೆಲಸದ ಫಲವಾಗಿ ಪಿಇಸಿಓ (ಫೋಟೋ ಎಲ್ಕಟ್ರೋಕೆಮಿಕಲ್ ಆಕ್ಸಿಡೇಷನ್) ಎನ್ನುವ ಅಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿದೆ. ಈ ತಂತ್ರಜ್ಞಾನದ ಪೇಟೆಂಟ್ ಪಡೆದಿರುವ ಡಾ.ಗೋಸ್ವಾಮಿ, ಈ ತಂತ್ರಜ್ಞಾನವನ್ನು ಬಳಸಿ ಮಾಲಿಕ್ಕೂಲ್ ಹೆಸರಿನ ಏರ್ ಪ್ಯೂರಿಫೈಯರ್ ಉಪಕರಣವನ್ನು ಉತ್ಪಾದನೆ ಮಾಡಿ, ಮಾರಾಟ ಮಾಡುತ್ತಿದ್ದಾರೆ.ನ್ಯಾನೋ ಕಣಗಳ ಲೇಪನ ಮಾಡಿರುವ ಫಿಲ್ಟರ್ ಮೆಂಬ್ರೇನ್ ಮೇಲೆ ಬೆಳಕಿನ ಕಿರಣಗಳನ್ನು ಹಾಯಿಸುವ ತಂತ್ರಜ್ಞಾನವನ್ನು ಡಾ.ಗೋಸ್ವಾಮಿ ಬಳಸುತ್ತಾರೆ.ಇದರಿಂದಾಗಿ ಮಾಲಿಕ್ಕೂಲ್ ಏರ್ ಪ್ಯೂರಿಫೈಯರ್ ಉಪಕರಣದ ಮೂಲಕ ಪ್ರವಹಿಸುವ ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳನ್ನು ನಾಶ ಪಡಿಸುವುದು ಸಾಧ್ಯವಾಗುತ್ತದೆ. ಸಾಂಪ್ರದಾಯಿಕ ಹೆಚ್ಇಪಿಎ ತಂತ್ರಜ್ಞಾನ ಆಧಾರಿತ ಏರ್ ಪ್ಯೂರಿಫೈಯರ್ ಉಪಕರಣಗಳಿಗಿಂತ 1000 ಪಟ್ಟು ಚಿಕ್ಕದಾದ ವಾಯು ಮಾಲಿನ್ಯ ಕಣಗಳನ್ನು ಡಾ.ಗೋಸ್ವಾಮಿಯವರು ಅಭಿವೃದ್ಧಿಪಡಿಸಿರುವ ಮಾಲಿಕ್ಕೂಲ್ ಏರ್ ಪ್ಯೂರಿಫೈಯರ್ ಸೆರೆಹಿಡಿದು, ನಾಶ ಮಾಡುತ್ತಿರುವುದು ಸಾಬೀತಾಗಿದೆ.

ಅಮೇರಿಕಾದ ದಕ್ಷಿಣ ಫ್ಲಾರಿಡಾ ವಿಶ್ವವಿದ್ಯಾಲಯದಲ್ಲಿ ಫ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವ ಡಾ.ಯೋಗಿ ಗೋಸ್ವಾಮಿಯವರು ಅಭಿವೃದ್ಧಿ ಪಡಿಸಿರುವ ಮಾಲಿಕ್ಕೂರ್ ಏರ್ ಪ್ಯೂರಿಫೈಯರ್ ಉಪಕರಣವನ್ನು ವಿಶ್ವವಿಖ್ಯಾತ ಟೈಮ್ಸ್ ನಿಯತಾಲಿಕೆಯು, ವರ್ಷ 2017ರ 25 ಶ್ರೇಷ್ಟ ಆವಿಷ್ಕಾರಗಳಲ್ಲಿ ಒಂದು ಎಂದು ಗುರುತಿಸಿ ಗೌರವಿಸಿದೆ. ತಮ್ಮ ಮಗುವಿಗೆ ಪ್ರಯೋಜನವಾದ ಈ ಏರ್ ಪ್ಯೂರಿಫೈಯರ್ ವಿಶ್ವಾದಂತ್ಯ ಆಸ್ತಮಾ ಸಮಸ್ಯೆ ಎದುರಿಸುತ್ತಿರುವವರಿಗೆ ದೊರೆಯ ಬೇಕು ಮತ್ತು ಅವರಿಗೂ ಪ್ರಯೋಜನವಾಗ ಬೇಕು ಎನ್ನುವ ಉದ್ದೇಶದಿಂದ ಡಾ.ಯೋಗಿ ಗೋಸ್ವಾಮಿ ದಂಪತಿ ಕೆಲಸ ಮಾಡುತ್ತಿದ್ದಾರೆ. ಭಾರತದ ಡಾ.ಗೋಸ್ವಾಮಿಯವರ ಈ ತಂತ್ರಜ್ಞಾನದ ಕೊಡುಗೆ ವಿಶ್ವಾದಂತ್ಯ ಆಸ್ತಮಾ ಸಮಸ್ಯೆ ಎದುರಿಸುತ್ತಿರುವ ಕೋಟ್ಯಾಂತರ ಜನರಿಗೆ ಹೊಸ ಆಶಾಕಿರಣವನ್ನು ಮೂಡಿಸಿದೆ ಎನ್ನುವುದು ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ವಿಷಯವಾಗಿದೆ.

2) ಭಾರತದಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಲು ಮುಂದಾದ ಐಐಟಿ-ಮುಂಬೈನ ಯುವ ಫ್ರೊಪೆಸರ್ ಡಾ.ವಿಕ್ರಮ್ ವಿಶಾಲ್.

ವರ್ಷ 2014ರಲ್ಲಿ ನೆಡೆದ ಅಧ್ಯಯನವೊಂದರ ಪ್ರಕಾರ ಪ್ರತಿ ವರ್ಷ 260 ಕೋಟಿ ಟನ್ಗಳಷ್ಟು ಕಾರ್ಬನ್ ಡೈಯಾಕ್ಸೈಡ್ ಉತ್ಪತ್ತಿ ಮಾಡುವ ಭಾರತ.ಈ ರೀತಿ ಬೃಹತ್ ಪ್ರಮಾಣದ ಇಂಗಾಲ ಡೈಯಾಕ್ಸೈಡ್ ಮಾಲಿನ್ಯ ಉಂಟು ಮಾಡುವ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ 4ನೆ ಸ್ಥಾನಗಳಿಸಿದ ಕುಖ್ಯಾತಿಯನ್ನು ಪಡೆಯಿತು. ವರ್ಷ 2016ರಲ್ಲಿ ನೆಡೆದ ಮತ್ತೊಂದು ಅಧ್ಯಯನದಲ್ಲಿ ವಿಶ್ವದಲ್ಲಿ ಹೆಚ್ಚಾಗುತ್ತಿರುವ ಕಾರ್ಬನ್ ಡೈಯಾಕ್ಸೈಡ್ ಮಾಲಿನ್ಯಕ್ಕೆ ಅತ್ಯಧಿಕ ಕೊಡುಗೆಯನ್ನು ನೀಡುವ ದೇಶ ಭಾರತವಾಗಲಿದೆ ಎಂದು ಎಚ್ಚರಿಸಲಾಗಿದೆ.

ದೇಶಾದಂತ್ಯ ಹೆಚ್ಚಾಗುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಭಾರತ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.ಈ ನಿಟ್ಟಿನಲ್ಲಿ ಡಾ.ವಿಕ್ರಮ ವಿಶಾಲ್, ತಮ್ಮ ಮುಂಬೈ ಐಐಟಿಯ ಪ್ರಯೋಗಾಲಯದಲ್ಲಿ ಮಾಡಿರುವ ಸಂಶೋಧನೆ ಕ್ರಾಂತಿಕಾರಕ ಕೊಡುಗೆಯನ್ನು ನೀಡಲು ಸಾಧ್ಯವಿದೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.

ಉದ್ಯಮಗಳು ಮೊದಲಾದ ಮೂಲಗಳಿಂದ ಉತ್ಪತ್ತಿಯಾಗುವ ಕಾರ್ಬನ್ ಡೈಯಾಕ್ಸೈಡ್, ಸುಮಾರು 100 ವರ್ಷಗಳ ಕಾಲ ವಾಯು ಮಂಡಲದಲ್ಲಿರುತ್ತದೆ ಎನ್ನುವ ಅಭಿಪ್ರಾಯ ಸರಿಯಲ್ಲ. ನೆಲ, ಜಲ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗುವ ಕಾರ್ಬನ್ ಡೈಯಾಕ್ಸೈಡ್, ಸಾವಿರಾರು ವರ್ಷಗಳ ಕಾಲ ಸಮಸ್ಯೆಯನ್ನುಂಟು ಮಾಡಬಲ್ಲದು ಎಂದು ಡಾ.ವಿಶಾಲ್ ವಿವರಿಸುತ್ತಾರೆ. ವಾತಾವರಣದಲ್ಲಿ ಮಾಲಿನ್ಯವುಂಟು ಮಾಡುತ್ತಿರುವ ಕಾರ್ಬನ್ ಡೈಯಾಕ್ಸೈಡ್ನ್ನು ಸೂಕ್ತ ಒತ್ತಡದಲ್ಲಿ, ನಮ್ಮ ದೇಶದಲ್ಲಿರುವ ಕಲ್ಲಿದ್ದಲು ಗಣಿಗಳಲ್ಲಿ ಆಳವಾದ ಪ್ರದೇಶದಲ್ಲಿ ಪಂಪ್ ಮಾಡಿದಾಗ, ಮೀಥೇನ್ ಉತ್ಪಾದನೆಯಾಗುತ್ತದೆ. ಈ ಮೀಥೇನ್ನ್ನು ಸಂಗ್ರಹಿಸಿ, ನಮ್ಮ ದೇಶದ ಇಂಧನ ಅಗತ್ಯಗಳಿಗೆ ಬಳಸಬಹುದು ಎನ್ನುವುದು ಡಾ.ವಿಶಾಲ್ ಮಾಡಿರುವ ಸಂಶೋಧನೆಯ ಸಾರಾಂಶವಾಗಿದೆ.

ಸಾಂಪ್ರದಾಯಿಕ ಪದ್ಧತಿಯಲ್ಲಿ ಶೇಕಡಾ 40ರಷ್ಟು ಮೀಥೇನ್ ಮಾತ್ರ ಪಡೆಯಲು ಸಾಧ್ಯವಾದರೆ, ಡಾ.ವಿಶಾಲ್ರ ವಿಧಾನದಲ್ಲಿ ಶೇಕಡಾ 70ರಿಂದ 75ರಷ್ಟು ಮೀಥೇನ್ ಪಡೆಯಲು ಸಾಧ್ಯವಿದೆ ಎನ್ನಲಾಗಿದೆ. ವಿಶ್ವಾದಂತ್ಯ ಕಾರ್ಬನ್ ಡೈಯಾಕ್ಸೈಡ್ ಮಾಲಿನ್ಯ ಉಂಟಾಗಲು ಪ್ರಮುಖ ಕೊಡುಗೆ ನೀಡುವ ದೇಶ ಭಾರತವೆನ್ನುವ ಕುಖ್ಯಾತಿಯಿಂದ ಪಾರಾಗಲು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಇಂಧನದ ಅಗತ್ಯವನ್ನು ಭಾಗಶಃವಾದರೂ ಫೂರೈಸಲು ಮೀಥೇನ್ ಪಡೆಯಲು ಸಾಧ್ಯವಿದೆ ಎಂದು ಪ್ರತಿಪಾದಿಸುವ ಡಾ.ವಿಕ್ರಮ್ ವಿಶಾಲ್ರವರ ಸಂಶೋಧನೆಯನ್ನು ಗುರುತಿಸಿ, ದೇಶದ ಪ್ರತಿಷ್ಠಿತ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ, ವರ್ಷ 2017ರ ಯುವ ವಿಜ್ಞಾನಿ ಪದಕವನ್ನು ಡಾ.ವಿಶಾಲ್ಗೆ ನೀಡಿ ಗೌರವಿಸಿದೆ.

3) ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಹಳ್ಳಿಗೆ ನೆರವಾದ ಶ್ರೀ ಅಜಯ ಕುಮಾರ

ಬೇಸಿಗೆಯಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಎದುರಿಸುವ ಸಾವಿರಾರು ಹಳ್ಳಿಗಳು ಭಾರತದಲ್ಲಿವೆ.ಕೇರಳದ ಕೊಟ್ಟಾಯಂ ಜಿಲ್ಲೆಯ ಪಲ್ಲಿಕತ್ತೋಡು ಹೆಸರಿನ ಹಳ್ಳಿಯಲ್ಲಿರುವ 40 ಕುಟುಂಬಗಳ ಜನ ಕೂಡಾ ಇಂತಹ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದ್ದರು.ಹೀಗಾಗಿ ಹೆಚ್ಚು ಹಣ ಕೊಟ್ಟು ಪ್ರತಿವಾರವು ಖಾಸಗಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವುದು ಈ ಹಳ್ಳಿಯ ಜನರಿಗೆ ಅನಿವಾರ್ಯವಾಗಿತ್ತು.

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಗ್ರಾಮಸ್ಥರಲ್ಲಿ ಒಬ್ಬರಾದ ಶ್ರೀ ಅಜಯ ಕುಮಾರ ಒಂದು ಯೋಜನೆಯನ್ನು ರೂಪಿಸಿದರು.ಇದರಂತೆ, ಕುಡಿಯುವ ನೀರಿಗಾಗಿ ಒಂದು ಭಾವಿ ಮತ್ತು ಪಂಪ್ಹೌಸ್ ನಿರ್ಮಿಸಲು ಸ್ಥಳೀಯರೊಬ್ಬರು ಭೂಮಿ ನೀಡಿದರು.ಭಾವಿ ಮತ್ತು ಪಂಪ್ಸೆಟ್, ಪಂಪ್ಹೌಸ್ ನಿರ್ಮಾಣಕ್ಕಾಗಿ ಗ್ರಾಮದ ಪ್ರತಿಯೊಂದು ಕುಟುಂಬಕ್ಕೆ ನಾಲ್ವತ್ತು ಸಾವಿರ ರೂಪಾಯಿನಂತೆ ದೇಣಿಗೆ ಸಂಗ್ರಹಿಸಲಾಯಿತು.

ಪಂಪ್ಹೌಸ್ನಲ್ಲಿರುವ ಮೋಟರ್ಗಳ ಚಲನೆಯನ್ನು ನಿಯಂತ್ರಿಸಲು ಸೂಕ್ತವಾಗುವಂತೆ ಮೊಬೈಲ್ ಫೋನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಅನುಷ್ಠಾನಕ್ಕೆ ತರಲಾಗಿದೆ.ಗ್ರಾಮದಲ್ಲಿರುವ ಯಾವುದೇ ಮನೆಯವರಿಗೆ ನೀರು ಬೇಕಾದಾಗ, ಅವರು ತಮ್ಮಲ್ಲಿರುವ ಮೊಬೈಲ್ ಫೋನ್ನಿಂದ ಪಂಪ್ಹೌಸ್ನಲ್ಲಿ ಅಳವಡಿಸಲಾಗಿರುವ ಮೊಬೈಲ್ ಫೋನ್ಗೆ ಮಿಸ್ಡ್ ಕಾಲ್ ಕರೆ ಮಾಡುತ್ತಾರೆ.ಆಗ ಪಂಪ್ಹೌಸ್ನಲ್ಲಿರುವ ಮೋಟರ್ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮತ್ತು ಭಾವಿಯಿಂದ ನೀರು ಪಂಪ್ ಮಾಡಿ, ಆ ಮನೆಯವರ ನೀರಿನ ಅಗತ್ಯವನ್ನು ಪೂರೈಸುತ್ತದೆ.ತಮಗೆ ಅಗತ್ಯವಿರುವಷ್ಟು ನೀರು ದೊರೆತ ನಂತರ, ಆ ಮನೆಯವರು ತಮ್ಮ ಮೊಬೈಲ್ ಫೋನ್ ಬಳಸಿ ಮತ್ತೊಮ್ಮೆ ಪಂಪ್ಹೌಸ್ನಲ್ಲಿರುವ ಮೊಬೈಲ್ ಫೋನ್ಗೆ ಮಿಸ್ಡ್ ಕಾಲ್ ಕರೆ ಮಾಡುತ್ತಾರೆ.ಆಗ ಮೋಟರ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

ಸುಮಾರು 3 ಕಿಲೋಮೀಟರ್ ಸುತ್ತಳತೆಯಲ್ಲಿರುವ ಜನರಿಗೆ ಈ ಮೊಬೈಲ್ ಫೋನ್ ಆಧಾರಿತ ಪಂಪ್ ಹೌಸ್ ನಿರ್ವಹಣೆಯಿಂದ ಅನುಕೂಲವಾಗುತ್ತಿದೆ.ಭಾವಿಯ ನೀರು ಪಂಪ್ ಮಾಡಲೆಂದು ಪ್ರತ್ಯೇಕ ಸಿಬ್ಬಂದಿ ನೇಮಿಸುವುದು ತಪ್ಪಿದೆ. ಯಾವ ಮನೆಯವರು ಯಾವ ದಿನ ಭಾವಿಯಿಂದ ಎಷ್ಟು ನೀರು ಬಳಸಿದರು ಎಂದು ಲೆಕ್ಕ ಮಾಡುವುದು ಸುಲಭವಾಗಿದೆ ಮತ್ತು ನೀರು ಪೋಲಾಗುವುದಿಲ್ಲ. ಪಲ್ಲಿಕತ್ತೋಡು ಗ್ರಾಮದಲ್ಲಿ ಯಶಸ್ವಿಯಾಗಿರುವ ಈ ಯೋಜನೆಯನ್ನು ಈ ರೀತಿ ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಬೇರೆ ಗ್ರಾಮಗಳು ಅನುಷ್ಠಾನಕ್ಕೆ ತರಲು ಚಿಂತನೆ ನೆಡೆಸಿವೆ.

4) ಮಹಾನಗರಗಳಲ್ಲಿ ಅಪಾರ್ಟ್ಮೆಂಟ್ ಸಮುಚ್ಛಯಗಳಲ್ಲಿ ನೀರಿನ ಉಳಿತಾಯಕ್ಕೆ ಕಾರಣವಾದ ಐಓಟಿ

ವಿಶ್ವದೆಲ್ಲಡೆ, ಶುದ್ಧ ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದೆ.ಕಾವೇರಿ, ಕೃಷ್ಣೆ, ಮಹಾದಾಯಿ ಜಲವಿವಾದಗಳು ಲಕ್ಷಾಂತರ ಜನ ಕನ್ನಡಿಗರ ಮೇಲೆ ಪರಿಣಾಮ ಬೀರುತ್ತಿವೆ.ಇನ್ನು ಮಲಿನವಾದ ನೀರನ್ನು ಬಳಸುವುದು ಅನಿವಾರ್ಯವಾದ ಪ್ರದೇಶಗಳಲ್ಲಿರುವ ಜನತೆ, ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಆತಂಕದ ವಿಷಯವಾಗಿದೆ. ನೀರು ಸಂರಕ್ಷಣೆ ಮಾಡಿ, ನೀರು ಪೋಲು ಮಾಡಬೇಡಿ ಎಂದು ಜನಜಾಗೃತಿ ಮೂಡಿಸಲು ಪ್ರಯತ್ನಗಳು ನೆಡೆದಿವೆಯಾದರೂ ನೀರಿನ ಸಮರ್ಪಕ ಬಳಕೆ ಎಲ್ಲಾ ಕಡೆಯಲ್ಲೂ ಆಗುತ್ತಿಲ್ಲ. ನಗರದ ಜಲಮಂಡಳಿ ಕುಡಿಯುವ ನೀರು ಪೂರೈಸಿದರೆ ಅದನ್ನು ಮನೆ ಮತ್ತು ವಾಹನಗಳನ್ನು ತೊಳೆಯಲು ಬಳಸುವ ಸುಶಿಕ್ಷಿತರ ಸಂಖ್ಯೆ ಕಡಿಮೆ ಇಲ್ಲ..

ಮಹಾನಗರ ಪ್ರದೇಶಗಳಲ್ಲಿ ನೂರಾರು ಅಪಾರ್ಟ್ಮೆಂಟ್ಗಳಿರುವ ಬೃಹತ್ ವಸತಿ ಸಮುಚ್ಛಯದಲ್ಲಿರುವ ಜನರ ಕುಡಿಯುವ ನೀರಿನ ನಿರ್ವಹಣೆಗೆಂದು ಐಓಟಿ ಆಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ನೀರು ಪೋಲಾಗುವುದನ್ನು ತಪ್ಪಿಸಲು ಯಶಸ್ವಿಯಾಗಿರುವ ಈ ತಂತ್ರಜ್ಞಾನವನ್ನು ನೀರು ಹೆಚ್ಚಾಗಿ ಬಳಸುವ ಆಸ್ಪತ್ರೆಗಳು, ಹೋಟಲ್ಗಳು, ರಿಸಾರ್ಟ್ಗಳು ಮತ್ತು ಉದ್ಯಮಗಳು ಕೂಡಾ ಬಳಸಿಕೊಳ್ಳಲು ಆಸಕ್ತಿ ತೋರಿಸುತ್ತಿವೆ.
ಸಾಮಾನ್ಯವಾಗಿ ಬೃಹತ್ ವಸತಿ ಸಮುಚ್ಛಯಗಳಲ್ಲಿ ಒಂದು ಅಪಾರ್ಟ್ಮೆಂಟ್ನವರು ನೀರು ಪೂರೈಕೆಗೆಂದು ತಿಂಗಳಿಗೆ ಇಷ್ಟು ಹಣ ನೀಡಬೇಕು ಎಂದು ನಿಗದಿ ಪಡಿಸಲಾಗುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ಪ್ರತಿದಿನ ಯಾವ ಅಪಾರ್ಟ್ಮೆಂಟ್ನವರು ಹೆಚ್ಚು ನೀರು ಬಳಸಿದರು, ಯಾರು ಕಡಿಮೆ ನೀರು ಬಳಸಿದರು, ಎಲ್ಲಿ ನೀರು ಪೋಲಾಗುತ್ತಿದೆ ಎನ್ನುವ ವಿವರಗಳು ದೊರೆಯುವುದಿಲ್ಲ. ಹೀಗಾಗಿ ನೀರಿನ ಮಿತವ್ಯಯ ಮಾಡಿದ ಅಪಾರ್ಟ್ಮೆಂಟ್ನ ಜನರು, ನೀರಿನ ಅಪವ್ಯಯ ಮಾಡಿದ ಅಪಾರ್ಟ್ಮೆಂಟಿನ ಜನರು ನೀಡಿದಷ್ಟೇ ಮಾಸಿಕ ನೀರಿನ ಶುಲ್ಕ ನೀಡುವುದು ಅನಿವಾರ್ಯವಾಗುತ್ತಿದೆ. ನೂರಾರು ಅಪಾರ್ಟ್ಮೆಂಟ್ಗಳು ಇರುವ ಬೃಹತ್ ವಸತಿ ಸಮುಚ್ಛಯಗಳಲ್ಲಿ ಪ್ರತಿಯೊಂದು ಅಪಾರ್ಟಾಮೆಂಟ್ಗೆ ನೀರಿನ ಬಳಕೆಯ ಮೀಟರ್ ಅಳವಡಿಸುವುದು, ಪ್ರತಿ ತಿಂಗಳು ಈ ನೀರಿನ ಮೀಟರ್ ನೋಡಿ ಎಷ್ಟು ನೀರು ಖರ್ಚಾಗಿದೆ ಎಂದು ತಿಳಿದು ಲೆಕ್ಕ ಮಾಡುವುದು ಸುಲಭದ ವಿಷಯವಲ್ಲ.

ಮೊದಲು, ಪ್ರತಿಯೊಂದು ಅಪಾರ್ಟ್ಮೆಂಟ್ಗೆ ನೀರು ಸರಬರಾಜು ಮಾಡುವ ನೀರಿನ ಕೊಳವೆಗೆ ವಿಶೇಷವಾದ ಸೆನ್ಸರ್ (ಸೂಕ್ಷ್ಮ ಗ್ರಾಹಕ) ಉಪಕರಣಗಳನ್ನು ಅಳವಡಿಸಲಾಗುತ್ತದೆ. ನೀರಿನ ಕೊಳವೆಯಲ್ಲಿ ನೀರು ಹರಿಯುವಾಗ ಸಕ್ರೀಯಗೊಳ್ಳುವ ಈ ಸೆನ್ಸ್ರ್ಗಳು ಅಪಾರ್ಟ್ಮೆಂಟ್ಗೆ ದಿನದ ಯಾವ ಹೊತ್ತಿನಲ್ಲಿ ಎಷ್ಟು ಪ್ರಮಾಣದ ನೀರು ಪೂರೈಕೆಯಾಗಿದೆ ಎನ್ನುವ ಮಾಹಿತಿಯನ್ನು ಗ್ರಹಿಸಿ, ವೈರ್ಲೆಸ್ ಇಂಟರ್ನೆಟ್ ಮೂಲಕ ಕೇಂದ್ರ ಕಂಪ್ಯೂಟರ್ಗೆ ಕಳುಹಿಸುತ್ತವೆ. ಇದರಿಂದಾಗಿ ಪ್ರತಿದಿನ ಯಾವ ಅಪಾರ್ಟ್ಮೆಂಟ್ಗೆ ಎಷ್ಟು ನೀರು ಪೂರೈಕೆಯಾಗಿದೆ ಎನ್ನುವ ನಿಖರವಾದ ಲೆಕ್ಕ ಸಿಗುತ್ತದೆ ಮತ್ತು ಪ್ರತಿ ತಿಂಗಳು ಎಷ್ಟು ನೀರು ಬಳಕೆಯಾಗಿದೆ ಎನ್ನುವುದರ ಆಧಾರದ ಮೇಲೆ ಅಪಾರ್ಟ್ಮೆಂಟ್ನವರು ಮಾಸಿಕ ನೀರಿನ ಶುಲ್ಕ ಪಾವತಿಸುತ್ತಾರೆ.

ಈ ತಂತ್ರಜ್ಞಾನ ಆಧಾರಿತ ನೀರು ನಿರ್ವಹಣೆ ವ್ಯವಸ್ಥೆಯನ್ನು ಭಾರತದ ವಿವಿಧ ನಗರಗಳಲ್ಲಿರುವ ಸುಮಾರು 5000 ಅಪಾರ್ಟ್ಮೆಂಟ್ಗಳು ಮತ್ತು ಮನೆಗಳಲ್ಲಿ ಅಳವಡಿಸಲಾಗಿದೆ.ಈ ವ್ಯವಸ್ಥೆ ಅಳವಡಿಸಿದ ನಂತರ ಪ್ರತಿಯೊಂದು ಅಪಾರ್ಟ್ಮೆಂಟ್ ಪ್ರತಿ ತಿಂಗಳು ಬಳಸುವ ನೀರಿನಲ್ಲಿ ಶೇಕಡಾ 30ರಷ್ಟು ಕಡಿಮೆಯಾಗಿದೆ ಎನ್ನಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ