ವ್ಯುತ್ಪತ್ತಿ : ಒಂದು ಪರಿಕಲ್ಪನೆ
ಕಾವ್ಯನಿರ್ಮಿತಿಗೆ ಅಗತ್ಯವಾದ ಪರಿಕರಗಳನ್ನು ಪ್ರಸ್ತಾಪಿಸುವಾಗ ನಮ್ಮ ಆಲಂಕಾರಿಕರು ಪ್ರತಿಭೆ ಮತ್ತು ವ್ಯುತ್ಪತ್ತಿಗಳನ್ನು ಕುರಿತು ಹೇಳುತ್ತಾರೆ. ಪ್ರತಿಭೆ ಇಲ್ಲದಿದ್ದರೆ ಕಾವ್ಯವೇ ಹುಟ್ಟುವುದಿಲ್ಲ, ಅದು ಅತ್ಯಂತ ಅಗತ್ಯವಾದ ಕಾವ್ಯಕಲಾ ನಿರ್ಮಾಣ ಸಾಮರ್ಥ್ಯ. ಜತೆಗೆ ಅದು ಹೇಗೋ ಕವಿಗೆ ಹುಟ್ಟಿನೊಡನೆ ಸಹಜವಾಗಿ ಬಂದದ್ದು; ಅದು ಯಾರಿಂದಲೂ ಕಲಿತದ್ದಲ್ಲ, ಕಲಿಸಲು ಬರುವಂಥದೂ ಅಲ್ಲ. ಆದರೆ, ಈ ‘ಪ್ರತಿಭೆ’ಯೆಂಬ ಸಹಜ ಸಾಮರ್ಥ್ಯಕ್ಕೆ ಅಗತ್ಯವಾದ ಅನುಭವ ಸಾಮಗ್ರಿಯೆಂಬುದೊಂದು ಉಂಟಲ್ಲ? ಎಂದರೆ ಕವಿಗೆ ಅಗತ್ಯವಾದ ಆ ಲೋಕಾನುಭವ ಸಾಮಗ್ರಿ, ಅದು ಅನುಭವ ಹಾಗೂ ಅಧ್ಯಯನಗಳ ಮೂಲಕ ದೊರೆಯುವಂಥದ್ದು. ಈ ಅನುಭವ ಸಾಮಗ್ರಿಯನ್ನೆ ನಮ್ಮ ಆಲಂಕಾರಿಕರು ‘ವ್ಯುತ್ಪತ್ತಿ’ ಎಂದು ಕರೆದಿದ್ದಾರೆ. ಪ್ರತಿಭೆ ಮತ್ತು ವ್ಯುತ್ಪತ್ತಿಗಳಲ್ಲಿ ಒಂದು, ಕವಿಗೆ ಸಹಜವಾಗಿಯೇ ದತ್ತವಾದದ್ದು, ಮತ್ತೊಂದು ಕವಿ ಉದ್ದೇಶ ಪೂರ್ವಕವಾಗಿ ಸಂಪಾದಿಸಿಕೊಳ್ಳುವಂಥದು. ಈ ಎರಡನೆಯದು ಎಷ್ಟೆಷ್ಟು ಸಮೃದ್ಧವಾಗಿ ಕವಿಗೆ ಒದಗಿ ಬರುತ್ತದೆಯೋ ಅಷ್ಟರಮಟ್ಟಿಗೆ ಅವನ ಕೃತಿ ಗಟ್ಟಿಮುಟ್ಟದ್ದಾಗುತ್ತದೆ.
‘ವ್ಯುತ್ಪತ್ತಿ’ ಎಂದರೆ ಬಹುಜ್ಞತೆ ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗಿದೆ. ‘ಬಹುಜ್ಞತಾ ವ್ಯುತ್ಪತ್ತಿಃ ಇತ್ಯಾಚಾರ್ಯಾ’ (ಬಹುಜ್ಞತೆಯೆ ವುತ್ಪತ್ತಿ ಎಂದು ಪೂರ್ವಾಚಾರ್ಯರ ಅಭಿಪ್ರಾಯ)’[1] ಎಂಬ ರಾಜಶೇಖರನ ಸೂತ್ರ ಈ ಸಂಗತಿಯನ್ನೆ ಹೇಳುತ್ತದೆ. ‘ಬಹುಜ್ಞತೆ’ ಎಂದರೆ ಅನೇಕ ವಿಷಯಗಳನ್ನು ತಿಳಿದಿರುವಿಕೆ. ಈ ಮಾತನ್ನು ಕುರಿತ ವಿಸ್ಕೃತವಾದ ವಿವೇಚನೆ ನಡೆದದ್ದು ಮೊದಲು ವಾಮನನಲ್ಲಿ (ಕಾವ್ಯಾಲಂಕಾರ ಸೂತ್ರವೃತ್ತಿ ೧.೧೧. ೧-೧೫). ಇನ್ನೂ ಹಲವರು ‘ಬಹುಜ್ಞತೆ’ ಯನ್ನು ವಿಸ್ತಾರವಾಗಿಯೇ ವಿವರಿಸಿದ್ದಾರೆ. ಕವಿ ‘ಬಹುಜ್ಞತೆ’ಗಾಗಿ ಅನ್ವೇಷಿಸಬೇಕಾದ ಕ್ಷೇತ್ರಗಳ ಒಂದು ದೊಡ್ಡ ಪಟ್ಟಿಯನ್ನೇ ಕ್ಷೇಮೇಂದ್ರನು ತನ್ನ ಕವಿಕಂಠಾಭರಣದಲ್ಲಿ (ಎರಡನೆಯ ಸಂಧಿ : ೫-೧೧) ಕೊಟ್ಟಿದ್ದಾನೆ. ‘ಬಹುಜ್ಞತೆ’ಯ ಬಗೆಗೆ ಮಮ್ಮಟನ ವಿವರಣೆ ಈ ಸಂದರ್ಭದಲ್ಲಿ ಗಮನಿಸತಕ್ಕದ್ದಾಗಿದೆ. ಕವಿಗೆ ಒದಗುವ ವಿಶೇಷ ತಿಳಿವಳಿಕೆಯನ್ನು ಕುರಿತು “ಲೋಕ, ಶಾಸ್ತ್ರ ಕಾವ್ಯ ಮುಂತಾದವುಗಳ ವಿಶೇಷ ಪರಿಚಯದಿಂದ ಬಂದ ನೈಪುಣ್ಯ” (ನಿಪುಣತಾ ಲೋಕಶಾಸ್ತ್ರ ಕಾವ್ಯಾದ್ಯವೇಕ್ಷಣಾತ್)[2] ಎನ್ನುತ್ತಾನೆ, ಮಮ್ಮಟ. ಕವಿಗೆ ಒದಗುವ ತಿಳಿವಳಿಕೆ ಮುಖ್ಯವಾಗಿ ಮೂರು ದಿಕ್ಕಿನಿಂದ ಬರುವಂಥದ್ದು. ಅದು ಲೋಕ ಶಾಸ್ತ್ರ ಮತ್ತು ಕಾವ್ಯ – ಇವುಗಳ ಪರಿಶೀಲನೆಯಿಂದ ಬರುತ್ತದೆ. ಕವಿಯಾದವನು, ಮೊದಲು ಮಾಡಬೇಕಾದ ಕೆಲಸವೆಂದರೆ ತನ್ನ ಸುತ್ತಣ ಲೋಕವನ್ನು ಸೂಕ್ಷ ವಾಗಿ ಪರಿಶೀಲಿಸುವುದು. ಇದೇ ಕವಿಗೆ ಮೊದಲ ಸಿದ್ಧತೆ. ‘ಲೋಕ’ವೆಂದರೆ “ಚರಾಚರಗಳೆಲ್ಲವನ್ನೂ ಒಳಗೊಂಡ ವಿಶ್ವದ ನಡವಳಿಕೆ.”[3] ಸಾಹಿತ್ಯದ ಮೂಲದ್ರವ್ಯವೇ ಇದು. ಮಾನವ ಪ್ರಕೃತಿ ಹಾಗೂ ನಿಸರ್ಗ ಪ್ರಕೃತಿಗಳಲ್ಲಿಯ ಸಮಸ್ತ ನಡವಳಿಕೆಯನ್ನೂ ಕವಿಯಾದವನು ಕಣ್ಣು ತೆರೆದು ಕಾಣಬೇಕು; ಗುರುತಿಸಿಕೊಳ್ಳಬೇಕು. ಎರಡನೆಯದು, ಈ ದೈನಂದಿನ ವಾಸ್ತವಾನುಭವಗಳ ಜತೆಗೆ ಕವಿಯಾದವನ ತಿಳಿವಳಿಕೆಯನ್ನು ಖಚಿತಗೊಳಿಸುವ ಮತ್ತು ಅನುಭವಕ್ಕೆ ತಕ್ಕ ಅಭಿವ್ಯಕ್ತಿಯನ್ನು ಸಿದ್ಧಪಡಿಸಿಕೊಳ್ಳಲು ಅಗತ್ಯವಾದ ಇತರ ಶಾಸ್ತ್ರಗಳ ಅರಿವು. ಇಲ್ಲಿ ‘ಶಾಸ್ತ್ರ’ ಎಂದರೆ ಛಂದಸ್ಸು, ವ್ಯಾಕರಣ, ನಿಘಂಟು, ಕೋಶ, ಕಲೆಗಳ ಲಕ್ಷಣ, ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಕುರಿತ ಗ್ರಂಥಗಳು ಇತ್ಯಾದಿ – ಎಂದು ಅರ್ಥ. ಮೂರನೆಯದು ‘ಕಾವ್ಯ’ ಎಂದರೆ “ಮಹಾಕವಿಗಳ ಕೃತಿಗಳು”[4] -ಎಂದು ವಿವರಿಸಲಾಗಿದೆ. ವಾಮನನು ಇನ್ನೂ ಸ್ಪಷ್ಟವಾಗಿ “ಇತರರ ಕಾವ್ಯಗಳ ಪರಿಚಯವೇ ಲಕ್ಷ್ಯಪರಿಜ್ಞಾನ, ಅದರ ದೆಸೆಯಿಂದಲೇ ಕಾವ್ಯ ರಚನೆಗೆ ಅಗತ್ಯವಾದ ವ್ಯುತ್ಪತ್ತಿ ಯುಂಟಾಗುತ್ತದೆ”[5]-ಎನ್ನುತ್ತಾನೆ. ‘ನಿಪುಣತಾ ಲೋಕಶಾಸ್ತ್ರ ಕಾವ್ಯದ್ಯವೇಕ್ಷಣಾತ್’ ಎಂದು ವ್ಯುತ್ಪತ್ತಿಯನ್ನು ಸೂತ್ರೀಕರಿಸುವ ಈ ಮಾತು ಕವಿಗೆ ಅಗತ್ಯವಾದ ಅನುಭವ ಸಂಗ್ರಹ, ತಂತ್ರನಿರ್ಮಾಣ ಮತ್ತು ಸಾಹಿತ್ಯ ಪರಂಪರೆಯ ಪ್ರಜ್ಞೆ – ಈ ಮೂರನ್ನೂ ಅನುಕ್ರಮವಾಗಿ ಸೂಚಿಸುವಂತೆ ತೋರುತ್ತದೆ. ನಿಜವಾದ ಕವಿಗೆ ವರ್ತಮಾನದ ವಾಸ್ತವಾನುಭವ ಎಷ್ಟು ಮುಖ್ಯವೋ, ಪರಂಪರಾಗತವಾದ ಹಿಂದಿನ ಅನುಭವವೂ ಅಷ್ಟೇ ಮುಖ್ಯ. ಇವುಗಳಲ್ಲಿ ಪರಂಪರೆಯ ಅರಿವು ಕವಿಗೆ ಮೈಗೂಡುವುದು, ತನ್ನ ಪರಿಸರದ ಹಾಗೂ ಪೂರ್ವ ಕವಿಗಳ ಕೃತಿಗಳ ಅಧ್ಯಯನದ ಮೂಲಕವೇ. ಪಾಶ್ಚಿಮಾತ್ಯ ವಿಮರ್ಶಕರೂ ಕಾವ್ಯನಿರ್ಮಿತಿಯಲ್ಲಿ ಪರಂಪರೆಯ ಪಾತ್ರ ಅತ್ಯಂತ ಮುಖ್ಯವಾದದ್ದು ಎಂಬುದನ್ನು ಒತ್ತಿ ಹೇಳಿದ್ದಾರೆ. ಪ್ರಾಚೀನ ಗ್ರೀಕ್ ಕಾವ್ಯಮೀಮಾಂಸಕರು ಕವಿಯಾದವನು ಪ್ರಾಚೀನ ಕವಿ ಕೃತಿಗಳನ್ನು ಅನುಕರಿಸಬೇಕು ಎಂದು ಹೇಳಿದ್ದು ಬಹುಶಃ ಈ ಅರ್ಥದಲ್ಲಿಯೇ. “ಮಿತ್ರರೇ ನೀವು ಗ್ರೀಕರ ಕೃತಿಗಳನ್ನು ಹಗಲು ರಾತ್ರಿ ಶ್ರದ್ಧೆಯಿಂದ ತಿರುವಿ ಹಾಕಿ ವ್ಯಾಸಂಗಮಾಡಿ”[6] ಎಂದು ಹೊರೆಸನು ತನ್ನ ಕವಿ ಮಿತ್ರರಿಗೆ ಹೇಳುತ್ತಾನೆ. ಇಂಗ್ಲಿಷ್ ವಿಮರ್ಶಕ ಬೆನ್‌ಜಾನ್ಸ್‌ನ್ನನು- “ನಿಸರ್ಗದತ್ತವಾದ ಪ್ರತಿಭೆ, ಸತತ ಪರಿಶ್ರಮ, ಹಿಂದಿನ ಹಿರಿಯ ಕವಿಗಳಿಂದ ಪಡೆಯಬಹುದಾದ ಸಹಾಯ ಮತ್ತು ಮಾರ್ಗದರ್ಶನ, ವಿಸ್ತೃತವಾದ ವ್ಯಾಸಂಗ ಹಾಗೂ ತನ್ನ ಕಲೆಗೆ ಸಂಬಂಧಿಸಿದ ತಂತ್ರಜ್ಞಾನ”[7] -ಈ ಐದು ಅಗತ್ಯಗಳನ್ನು ಕುರಿತು ವಿವರವಾಗಿ ಬರೆಯುತ್ತಾನೆ. ನಿಜವಾದ ಸೃಜನಶೀಲ ಲೇಖಕನಿಗೆ ಪರಂಪರೆಯ ಪ್ರಜ್ಞೆ ಎಷ್ಟೊಂದು ಅಗತ್ಯವೆಂಬುದನ್ನು ಹೇಳುತ್ತಾ ಟಿ.ಎಸ್. ಇಲಿಯಟ್, ಈ ಪರಂಪರೆ ಎಂಬುದು ಪಿತ್ರಾರ್ಜಿತವೆಂಬಂತೆ ಅನಾಯಾಸವಾಗಿ ಬರುವಂಥದಲ್ಲ; ಅದು ಅತ್ಯಂತ ಶ್ರಮದಿಂದ ಮೈಗೂಡಿಸಿಕೊಳ್ಳುವಂಥದ್ದು ಎನ್ನುತ್ತಾ, ಹೋಮರ್‌ನಿಂದ ಹಿಡಿದು ಇಂದಿನವರೆಗೆ ಪ್ರಾಚೀನ ಕವಿಕೃತಿಗಳನ್ನು ಅಧ್ಯಯನ ಮಾಡುವುದರ ಮೂಲಕ ರಕ್ತಗತ ಮಾಡಿಕೊಳ್ಳಬೇಕಾದ ಸಾಂಸ್ಕೃತಿಕ ಸತ್ವವನ್ನು ‘ಚಾರಿತ್ರಿಕ ಪ್ರಜ್ಞೆ’ (Historical Sense) ಎಂದು ಕರೆಯುತ್ತಾನೆ.[8] ಅಷ್ಟೇ ಅಲ್ಲ ಕವಿಯಾದವನು ಒಂದು ಕಡೆಯಿಂದ ಪಡೆಯುವ ಅನುಭವದ್ರವ್ಯ (ಅದು ಲೋಕಾನುಭವ ಹಾಗೂ ಕಾವ್ಯಾಧ್ಯಯನದ ಪರಿಣಾಮರೂಪದ್ದು)ವನ್ನು, ತನ್ನ ನಿರಂತರ ಪ್ರಯೋಗಗಳಿಂದ ಸಿದ್ಧಪಡಿಸಿಕೊಳ್ಳುವ ಅಭಿವ್ಯಕ್ತಿಯ ಕೌಶಲ್ಯದ ಮೂಲಕ ಹಿಡಿದಿಡುವ ಕ್ರಿಯೆಯೇ ಕಾವ್ಯ ನಿರ್ಮಿತಿಯ ರಹಸ್ಯ ಎನ್ನುತ್ತಾನೆ. ಅವನ ಪ್ರಕಾರ ನಿಜವಾದ ಕವಿಕೃತಿಯ ನಿರ್ಮಾಣ ಎರಡು ಸಮಾನಾಂತರ ರೇಖೆಗಳಲ್ಲಿ, ಮೊದಲು ರೂಪಣಗೊಳ್ಳುತ್ತದೆ. ಒಂದು ಕಡೆ ಪ್ರಜ್ಞಾಪೂರ್ವಕವಾದ ನಿರಂತರ ಪ್ರಯತ್ನ ಹಾಗೂ ಪ್ರಯೋಗಗಳ ಮೂಲಕ ಸಿದ್ಧವಾಗುವ-ಯಾವಾಗ ಬೇಕೆಂದರೆ ಆಗ ಭಾವಾಭಿವ್ಯಕ್ತಿಗೆ ಒದಗುವ-ತಂತ್ರ ಕೌಶಲ; ಮತ್ತೊಂದು ಕಡೆ, ವ್ಯಕ್ತಿಯಾಗಿ ಅವನು ಪಡೆಯುವ ಸಮೃದ್ಧಾನುಭವ ಸಾಮಗ್ರಿ. ಈ ಎರಡೂ ಯವುದೋ ಒಂದು ಶಿಖರಬಿಂದುವಿನಲ್ಲಿ ಸಂಧಿಸಿದಾಗ ಒಂದು ಮಹಾಕೃತಿ ಮೈದಾಳುತ್ತದೆ.[9]ಭಾರತೀಯ ಲಾಕ್ಷಣಿಕರ ‘ವ್ಯುತ್ಪತ್ತಿ’ ಪರಿಕಲ್ಪನೆ, ಕವಿಯ ಅನುಭವದ್ರವ್ಯ, ಕೃತಿಗಳ ಅಭ್ಯಾಸ ಹಾಗೂ ಶಾಸ್ತ್ರಜ್ಞಾನಗಳಿಂದ ಒದಗುವ ಪೂರ್ವಸಿದ್ಧತೆ, ತತ್ಪರಿಣಾಮವಾದ ತಂತ್ರಪರಿಣತಿಗಳ ಸಂಗತಿಯನ್ನು ಒಳಗೊಳ್ಳುತ್ತದೆ ಎಂಬುದನ್ನು ನಾವು ಗುರುತಿಸಿಕೊಳ್ಳಬೇಕಾಗುತ್ತದೆ.
ಒಂದೆಡೆ ಲೋಕ ಶಾಸ್ತ್ರ ಕಾವ್ಯಗಳ ಮೂಲಕ ಬರುವ ‘ಬಹುಶ್ರುತಿ’ ಇನ್ನೊಂದೆಡೆಗೆ ಈ ಅನುಭವ ದ್ರವ್ಯವನ್ನು ಕಾವ್ಯವನ್ನಾಗಿ ಪರಿವರ್ತಿಸುವ ‘ಪ್ರತಿಭೆ’, ಈ ಎರಡರ ಜತೆಗೆ, ನಮ್ಮ ಲಾಕ್ಷಣಿಕರು ವ್ಯುತ್ಪತ್ತಿಯ ಪರಿಕಲ್ಪನೆಯನ್ನು ವಿವರಿಸುವ ಸಂದರ್ಭದಲ್ಲಿ ಇನ್ನೂ ಒಂದು ಮಹತ್ವದ ಅಂಶವನ್ನು ಗುರುತಿಸಿದ್ದಾರೆ. ಅದೆಂದರೆ ಕವಿಗೆ ಕಾವ್ಯನಿರ್ಮಿತಿಯ ಸಂದರ್ಭದಲ್ಲಿ ಎಚ್ಚರವಾಗಿರಬೇಕಾದ ‘ಉಚಿತಾನುಚಿತ ವಿವೇಕ’. ಇದೂ ಕೂಡ ವ್ಯುತ್ಪತ್ತಿಯ ಬಹು ಮುಖ್ಯವಾದ ಒಂದು ಅಂಗವಾಗಿದೆ. ರಾಜಶೇಖರನು ವ್ಯುತ್ಪತ್ತಿಯನ್ನು ಕುರಿತು ಹೇಳುವಾಗ ‘ಬಹುಜ್ಞತಾ ವ್ಯುತ್ಪತ್ತಿಃ’ ಎಂಬುದನ್ನು ಹೇಳುತ್ತಲೇ, “ಉಚಿತಾನುಚಿತ ವಿವೇಕೋ ವ್ಯುತ್ಪತ್ತಿಃ” (ಯಾವುದು ಉಚಿತ ಯಾವುದು ಅನುಚಿತ ಎಂಬುದರ ವಿವೇಚನೆಯೇ ವ್ಯುತ್ಪತ್ತಿ)[10] ಎನ್ನುತ್ತಾನೆ. ರುದ್ರಟನು ‘ಯುಕ್ತಾಯುಕ್ತ ವಿವೇಕವೇ ವ್ಯುತ್ಪತ್ತಿ”[11] ಎನ್ನುತ್ತಾನೆ. ‘ವ್ಯುತ್ಪತ್ತಿ’ಯ ಕಲ್ಪನೆ ಒಂದೆಡೆ ‘ಬಹುಜ್ಞತೆ’ಯನ್ನು ಹೇಳಿದರೆ, ಇನ್ನೊಂದಡೆ ‘ಉಚಿತಾನುಚಿತ ವಿವೇಕ’ವನ್ನು ತನ್ನ ಇನ್ನೊಂದು ಅಂಗವಾಗಿ ಹೇಳುತ್ತದೆ. ಕವಿಯ ಕಾವ್ಯನಿರ್ಮಿತಿಯಲ್ಲಿ ಕವಿಗೆ ಲೋಕ-ಶಾಸ್ತ್ರ-ಕಾವ್ಯಗಳ ಪರಿಶೀಲನೆಯಿಂದ ಒದಗುವ ಬಹುಶ್ರುತಿ ರೂಪದ ಅನುಭವದ್ರವ್ಯ ಮೂಲಸಾಮಗ್ರಿ ಎಂಬುದೇನೋ ನಿಜವೆ, ಆದರೆ ಅದನ್ನು ಕಾವ್ಯಾಭಿವ್ಯಕ್ತಿಗೆ ಒಡ್ಡಿಕೊಳ್ಳುವಾಗ ಕವಿಯಲ್ಲಿ ಇನ್ನೊಂದು ಬಹುಮುಖ್ಯವಾದ ಸಾಮರ್ಥ್ಯ ಕ್ರಿಯಾಭಿಮುಖವಾಗುತ್ತದೆ. ಅದೇ ‘ಉಚಿತಾನುಚಿತ ವಿವೇಕ’ ಅಥವಾ ವಿಮರ್ಶನ ಪ್ರಜ್ಞೆ. ತನಗೊದಗುವ ಅನುಭವಕ್ಕೆ ಅಭಿವ್ಯಕ್ತಿಯನ್ನು ಕೊಡುವಾಗ ಕವಿ ನಿರ್ವಹಿಸುವ ವಸ್ತು ಹಾಗೂ ಭಾವಕ್ಕೆ ಅನುಸಾರವಾಗುವಂತೆ ಯಾವುದನ್ನು ಹಾಗೂ ಎಷ್ಟನ್ನು ಅಭಿವ್ಯಕ್ತಿಗೆ ಒಳಗುಪಡಿಸಿಕೊಳ್ಳಬೇಕು ಎನ್ನುವ ‘ಉಚಿತಾನುಚಿತವಿವೇಕ’ವೇ ಇದು. ಅಭಿನವಗುಪ್ತರು ಕಾವ್ಯನಿರ್ಮಾಣ ಸಮರ್ಥವಾದ ಪ್ರತಿಭೆ ತನಗೆ ಉಪಯೋಗವಾಗುವ ಸಮಸ್ತ ವಸ್ತುಗಳ ಪೂರ್ವಾಪರಗಳನ್ನು ವಿಮರ್ಶಿಸುವ ವಿಚಕ್ಷಣತೆಯೇ ವ್ಯುತ್ಪತ್ತಿ[12] ಎಂದು ಹೇಳುವ ಮಾತನ್ನು ಇಲ್ಲಿ ಗಮನಿಸಬಹುದು. ಭಾರತೀಯ ಲಾಕ್ಷಣಿಕರ ಈ ಮಾತುಗಳು ಕವಿಯ ಸೃಜನ ಕ್ರಿಯೆಯ ಜತೆಜತೆಗೆ ಆ ಸಂದರ್ಭದಲ್ಲಿ ಎಚ್ಚರವಿರುವ ವಿಮರ್ಶನ ಪ್ರಜ್ಞೆಯ ಸಂಗತಿಯನ್ನು ಬಹು ಸ್ಪಷ್ಟವಾಗಿ ಹೇಳುತ್ತವೆ. ನವನವೋಲ್ಲೇಖಶಾಲಿನಿಯಾದ ಕವಿ ಪ್ರತಿಭೆ, ಅಭಿವ್ಯಕ್ತಿಯ ಸಂದರ್ಭದಲ್ಲಿ ‘ಬಹುಜ್ಞತೆ’ಯಿಂದ ದತ್ತವಾದ ‘ಅನುಭವದ್ರವ್ಯ’ವನ್ನು ಒಂದು ವ್ಯವಸ್ಥೆಗೆ ತರುತ್ತದೆ. ಹೀಗೆ ವ್ಯವಸ್ಥೆಗೆ ತರುವ ಕ್ರಿಯೆಯಲ್ಲಿ ಪ್ರವೃತ್ತವಾಗತಕ್ಕದ್ದು. ‘ಉಚಿತಾನುಚಿತ ವಿವೇಕ’ ರೂಪದ ವಿಮರ್ಶನ ಪ್ರಜ್ಞೆಯೇ.
ಕವಿಗೆ ಕೇವಲ ಪ್ರತಿಭೆ ಇದ್ದರೆ ಸಾಲದು. ವ್ಯುತ್ಪತ್ತಿಯೂ ಅತ್ಯಂತ ಅಗತ್ಯವಾದದ್ದು ಎಂಬುದನ್ನು ನಮ್ಮ ಆಲಂಕಾರಿಕರು ಹೇಳುತ್ತಾ ಬಂದಿದ್ದಾರೆ. ಒಂದೊಂದು ಸಲ ವ್ಯುತ್ಪತ್ತಿಯ ಬಗ್ಗೆ ಒತ್ತು ಬಿದ್ದ ಅಭಿಪ್ರಾಯಗಳು ವ್ಯಕ್ತವಾಗಿರುವುದುಂಟು. ಕವಿಗೆ ಅಗತ್ಯವಾದ ಶಾಸ್ತ್ರಜ್ಞಾನ ಇತ್ಯಾದಿಗಳ ದೊಡ್ಡ ಪಟ್ಟಿಯನ್ನೇ ಕೊಡುವ ಆಲಂಕಾರಿಕರ ನಿರ್ದೇಶನಗಳು ಎಷ್ಟೋ ವೇಳೆ ಕವಿಯನ್ನು ಕಾವ್ಯಯುದ್ಧಕ್ಕೆ ಸಜ್ಜುಗೊಳಿಸುವ ಪಾಂಡಿತ್ಯದ ಶಸ್ತ್ರಶಾಲೆಗಳಂತೆ ಭಾಸವಾಗುವುದುಂಟು. “ಕವಿಯಲ್ಲದವನಿಗೂ ಕವಿತ್ವ ಲಭಿಸುವ ಬಗೆ”[13]ಯನ್ನು …………?[14] ಉದ್ದೇಶಿಸುವ ಕೆಲವು ಶಿಕ್ಷಾಗ್ರಂಥಗಳು ಈ ಬಗೆಯ ಪಟ್ಟಿಯನ್ನು ಸೂಚಿಸುವುದು ಆಶ್ಚರ್ಯವೇನಲ್ಲ. ಜತೆಗೆ ಕಾವ್ಯದಲ್ಲಿ ಪಾಂಡಿತ್ಯದ ಪ್ರಕರ್ಷವನ್ನು ಮೆಚ್ಚುವ ಒಂದು ಪ್ರವೃತ್ತಿಯೂ, ‘ವ್ಯುತ್ಪತ್ತಿ’ಯನ್ನೇ ಎತ್ತಿ ಹಿಡಿಯುವವರೆಗೂ ಮುಂದುವರಿದಿರಬಹುದು. ಹೀಗಾಗಿ “ಪ್ರತಿಭೆಗಿಂತ ವ್ಯುತ್ಪತ್ತಿಯೇ ಹೆಚ್ಚಿನದು” ಎಂದು ಹೇಳುತ್ತಾ ಮಂಗಳನು “ಕವಿಯ ಅಶಕ್ತಿಯು ಕಾವ್ಯರಚನೆಯಲ್ಲಿ ಕಾಣುವ ವ್ಯುತ್ಪತ್ತಿಯ ಮಹಿಮೆಯಿಂದ, ವಿದ್ವಾಂಸರಾದ ವಿಮರ್ಶಕರ ಕಣ್ಣಿಂದ ಮರೆಯಾಗುತ್ತದೆ ಎನ್ನುತ್ತಾನೆ. ಈ ಹೇಳಿಕೆಯಲ್ಲಿ ಪೂರ್ವಾರ್ಧದ ಮಾತನ್ನು ಒಪ್ಪುವುದು ಕಷ್ಟ. ಆದರೆ ವ್ಯುತ್ಪತ್ತಿಯ ಮಹಿಮೆಯಿಂದ ಕವಿಯ ಅಶಕ್ತಿಯು ವಿದ್ವಾಂಸರಾದ ವಿಮರ್ಶಕರ ಕಣ್ಣಿಂದ ಮರೆಯಾಗುತ್ತದೆಂಬುದೇನೋ ನಿಜವಾದರೂ, ‘ವ್ಯುತ್ಪತ್ತಿ’ ಕವಿಯ ‘ಅಶಕ್ತಿ’ಯನ್ನು ಮರೆಮಾಡುವ ಒಂದು ತಾತ್ಕಾಲಿಕ ಸಾಧನ ಮಾತ್ರವಾದೀತೇ ಹೊರತು, ಅದರಿಂದ ಕಾವ್ಯವು ಉತ್ಕೃಷ್ಟವಾಗುತ್ತದೆಂದು, ಅರ್ಥವಾಗುವುದಿಲ್ಲ. ವಾಸ್ತವವಾಗಿ ರಾಜಶೇಖರನು ಹೇಳುವಂತೆ “ಪ್ರತಿಭೆ ವ್ಯುತ್ಪತ್ತಿ ಎರಡೂ ಕೂಡಿರುವಾತನೇ ಕವಿಯೆನಿಸುತ್ತಾನೆ.”[15]ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಕವಿಗೆ ‘ವ್ಯುತ್ಪತ್ತಿ’ಯಲ್ಲಿ ಒಂದು ವೇಳೆ ಕೊರತೆ ಇದ್ದರೂ ನಡೆಯುತ್ತದೆ; ಆದರೆ ‘ಪ್ರತಿಭೆ’ಯಲ್ಲಿನ ಕೊರತೆಯನ್ನು ಮತ್ತಾವುದೂ ತುಂಬಲಾರದು. ಆನಂದವರ್ಧನನು ದೋಷವನ್ನು ಕುರಿತು ಹೇಳುವಾಗ, ಈ ಮಾತನ್ನೇ ಖಚಿತಪಡಿಸುತ್ತಾನೆ. ಅವನ ಪ್ರಕಾರ ದೋಷಗಳಲ್ಲಿ ಎರಡು ಬಗೆ: ಒಂದು ಪ್ರತಿಭಾ ದೋಷ; ಮತ್ತೊಂದು ಅವ್ಯುತ್ಪತ್ತಿ ದೋಷ. ಮೊದಲನೆಯದು ಕವಿಯ ಪ್ರತಿಭಾಶಕ್ತಿಯ ಕೊರತೆಯಿಂದ ಸಂಭವಿಸತಕ್ಕದ್ದು, ಎರಡನೆಯದು ಲೋಕಶಾಸ್ತ್ರಾದಿಗಳಿಂದ ಲಭಿಸುವ ‘ಬಹುಶ್ರುತತ್ವ’ದ ಕೊರತೆಯಿಂದಲೋ, ಉಚಿತಾನುಚಿತ ವಿವೇಕದ ಅರಕೆಯಿಂದಲೋ ಸಂಭವಿಸುವಂಥದ್ದು. ಇವುಗಳಲ್ಲಿ “ಕವಿಯ ಅವ್ಯುತ್ಪತ್ತಿಯಿಂದಾದ ದೋಷವನ್ನು ಅವನ ಶಕ್ತಿ ಮುಚ್ಚುತ್ತದೆ; ಪ್ರತಿಭಾ ದಾರಿದ್ರ ದಿಂದ ಏನಾದರೂ ದೋಷವುಂಟಾದರೆ ಅದು ಥಟಕ್ಕನೆ ಕಣ್ಣಿಗೆ ಬೀಳುತ್ತದೆ”[16]ನಿಜವಾದ ಪ್ರತಿಭಾವಂತನಾದವನ ಕೃತಿಗಳಲ್ಲಿ ಒಮ್ಮೊಮ್ಮೆ ಕಾಣುವ ಅವ್ಯುತ್ಪತ್ತಿ ದೋಷಗಳೂ ‘ಮಹಾಕವಿ ಪ್ರಯೋಗ’ಗಳೆಂದು ಪರಿಗಣಿತವಾಗಿ ಬಿಡುತ್ತವೆ! ಆದರೆ ‘ವ್ಯುತ್ಪತ್ತಿ’ ಎಷ್ಟೇ ಇದ್ದೂ ಕವಿಯ ಪ್ರತಿಭೆಯ ಅರಕೆಯಿಂದ ಸಂಭವಿಸುವ ದೋಷಗಳು, ಕವಿಗೆ ಒಳ್ಳೆಯ ಹೆಸರನ್ನು ತರಲಾರವು. ಆದುದರಿಂದ ನಿಜವಾದ ದೋಷಗಳೆಂದರೆ ‘ಪ್ರತಿಭಾ ದೋಷ’ಗಳೇ.
ಕಾವ್ಯಾಸ್ವಾದ ಕಾಲದಲ್ಲಿ ಸಹೃದಯನಿಗೆ ಆಹ್ಲಾದದ ಜತೆಗೆ ಒದಗುವ ತಿಳಿವಳಿಕೆಯನ್ನೂ ನಮ್ಮ ಆಲಂಕಾರಿಕರು ‘ವ್ಯುತ್ಪತ್ತಿ’ ಎಂದು ಹೇಳಿರುವುದು ಗಮನಿಸಬೇಕಾದ ಮತ್ತೊಂದು ಅಂಶವಾಗಿದೆ. ‘ವ್ಯುತ್ಪತ್ತಿ ಎಂಬುದಕ್ಕೆ ಮೂಲ ಅರ್ಥ ‘ಬಹುಜ್ಞತೆ’ ಅಥವಾ ಅನೇಕ ವಿಷಯಗಳನ್ನು ಕುರಿತ ತಿಳಿವಳಿಕೆ ಎಂಬುದು ಸ್ಪಷ್ಟವಷ್ಟೆ? ಮತ್ತು ಕಾವ್ಯ-ನಾಟ್ಯಾದಿಗಳ ಸಂದರ್ಭದಲ್ಲಿ ಸಹೃದಯನಿಗೆ ಆಹ್ಲಾದವೊದಗುವುದರ, ಜತೆಗೆ, ಅನೇಕ ವಿಷಯಗಳನ್ನು ಕುರಿತ ತಿಳಿವಳಿಕೆಯೂ ದೊರೆಯುವುದರಿಂದ ‘ವ್ಯುತ್ಪತ್ತಿ’ ಎಂದರೆ ಸಹೃದಯನಿಗೆ ದೊರೆಯುವ ‘ಉಪದೇಶವೇ’ ಎಂದು ಕೆಲವು ಆಲಂಕಾರಿಕರು ಭಾವಿಸಿದ್ದಾರೆ. ಈ ವ್ಯುತ್ಪತ್ತಿ ಇತಿಹಾಸಾದಿಗಳಲ್ಲಿ ಬೇಕಾದರೆ ಇದ್ದುಕೊಳ್ಳಲಿ, ನಾಟಕ -ಕಾವ್ಯಗಳಲ್ಲಿ ಇದನ್ನು ಪ್ರಯೋಜನವೆಂದು ಯಾಕೆ ಎಣಿಸುತ್ತೀರಿ ಎಂದು ಪ್ರತಿಭಟಿಸಿದವರಲ್ಲಿ ಧನಂಜಯ ಮತ್ತು ಭಟ್ಟನಾಯಕ ಇವರು ಮುಖ್ಯರಾದವರು. “ಕಾವ್ಯದಲ್ಲಿ ಯಾರೇ ಪಡೆಯುವುದೂ ರಸಾಸ್ವಾದವೊಂದೇ; ಅವರಿಗೆ ಅದರಿಂದ ತಿಳಿವಳಿಕೆಯೂ ಬರಬೇಕಾಗಿಲ್ಲ, ವಿಧಿನಿಷೇಧಗಳೂ ಗೊತ್ತಾಗಬೇಕಾಗಿಲ್ಲ”[17] ಎಂದು ಘೋಷಿಸಿದ ಭಟ್ಟನಾಯಕನ ಮಾತನ್ನು ಗಮನಿಸಬಹುದು. ಆದರೆ ಅಭಿನವಗುಪ್ತರು ಕಾವ್ಯಪ್ರಯೋಜನಗಳಾದ ‘ಆನಂದ’ ‘ವ್ಯುತ್ಪತ್ತಿ’ಗಳನ್ನು ಬೇರೆ ಬೇರೆ ಎಂದು ಎಣಿಸಬೇಕಾಗಿಲ್ಲವೆಂದು ಸೂಚಿಸುತ್ತಾ, ಎರಡರ ವಿಷಯವೂ ಒಂದೇ, “ವಿಭಾವಾನುಭವಗಳನ್ನು ಉಚಿತವಾಗಿ ಹವಣಿಸಿ ಕಾವ್ಯ ಕಟ್ಟಿದ್ದರೆ ತಾನೇ ಆನಂದವೊದಗತಕ್ಕದ್ದು. ಈ ವಿಭಾವಾನುಭವಗಳ ಸ್ವರೂಪವನ್ನು ಸರಿಯಾಗಿ ಅರಿತುಕೊಳ್ಳುವಾಗ ಸಾಮಾಜಿಕನಿಗೆ ತನ್ನಷ್ಟಕ್ಕೆ ತಾನೆ ‘ವ್ಯುತ್ಪತ್ತಿ’ಯು ಲಭಿಸುವುದು. ಅದಕ್ಕಾಗಿ ಅವನು ಬೇರೆ ಪ್ರಯಾಸ ಪಡಬೇಕಾಗಿಲ್ಲ”[18] ಎನ್ನುತ್ತಾರೆ. ಕಾವ್ಯ ಮತ್ತು ತಿಳಿವಳಿಕೆ ಅಥವಾ ನೀತಿಬೋಧೆಗೆ ಸಂಬಂಧಪಟ್ಟ ಚರ್ಚೆಯ ಈ ಭಾಗದಲ್ಲಿ ‘ವ್ಯುತ್ಪತ್ತಿ’ ಎಂಬ ಪದ ಬೇರೊಂದು ಅರ್ಥದಲ್ಲಿ ಬಳಕೆಯಾಗಿರುವುದನ್ನು ಗಮನಕ್ಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ.
[1] ರಾಜಶೇಖರ ಕಾವ್ಯಮೀಮಾಂಸೆ. ಅನು : ಡಾ. ಕೆ. ಕೃಷ್ಣಮೂರ್ತಿ, ಪು. ೩೨.
[2] ಮಮ್ಮಟ ಕಾವ್ಯಪ್ರಕಾಶ, ಅನು : ಡಾ. ಕೆ. ಕೃಷ್ಣಮೂರ್ತಿ, ಪು. ೧-೩
[3] ಮಮ್ಮಟ ಕಾವ್ಯಪ್ರಕಾಶ, ಅನು : ಡಾ. ಕೆ. ಕೃಷ್ಣಮೂರ್ತಿ, ಪು. ೮.
[4] ಅಲ್ಲೇ, ಪು. ೮.
[5] ಅಲ್ಲೇ, ಪು. ೩೦.
[6] ಎನ್. ಬಾಲಸುಬ್ರಹ್ಮಣ್ಯ : ಹೊರೆಸನ ಸಾಹಿತ್ಯ ವಿಮರ್ಶೆ, ಪು. ೧೨೯.
[7] ವಿ.ಎಂ. ಇನಾಂದಾರ್ : ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ಸಂಪ್ರದಾಯ ಯುಗ, ಪು. ೭೫.
[8] T.S. Eliot : Selected prose, p. 23
[9] Ezra pound : Selected poems (introduction by T.S. Eliot) p. 17.
[10] ಕನ್ನಡ ಕಾವ್ಯಮೀಮಾಂಸೆ ಅನು : ಡಾ. ಕೆ. ಕೃಷ್ಣಮೂರ್ತಿ, ಪು. ೩೧ (೫ನೆಯ ಅಧ್ಯಾಯ)
[11] ಅಲ್ಲೇ, ಪು. ೩೧ (ಅಡಿಟಿಪ್ಪಣಿ)
[12] ಕನ್ನಡ ಧ್ವನ್ಯಾಲೋಕ ಮತ್ತು ಲೋಚನಸಾರ, ಅನು : ಡಾ. ಕೆ. ಕೃಷ್ಣಮೂರ್ತಿ ಪು. ೧೩೭ (ಅಡಿಟಿಪ್ಪಣಿ)
[13] ಕ್ಷೇಮೇಂದ್ರ : ಕವಿಕಂಠಾಭರಣ, ಅನು: ಡಾ. ಕೆ.ಕೃಷ್ಣಮೂರ್ತಿ, ಪು. ೧೪ (೧-೪)
[14] ರಾಜಶೇಖರ : ಕಾವ್ಯಮೀಮಾಂಸೆ, ಅನು : ಡಾ. ಕೆ. ಕೃಷ್ಣಮೂರ್ತಿ, ಪು. ೩೨.
[15] ಅಲ್ಲೇ, ಪು. ೩೪.
[16] ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ, ಪು. ೧೮೦.
[17] ತೀ.ನಂ. ಶ್ರೀಕಂಠಯ್ಯ: ಭಾರತೀಯ ಕಾವ್ಯಮೀಮಾಂಸೆ, ಪು. ೨೩೪.
[18] ಅಲ್ಲೇ, ಪು. ೨೪೩
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ