ಪನಾಮಾ ಹಗರಣ : ಸದ್ಯಕ್ಕೆ ನವಾಜ್ ಷರೀಫ್ ಬಜಾವ್
ಇಸ್ಲಾಮಾಬಾದ್ :
ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಅಕ್ರಮ ವಿದೇಶಿ ಹೂಡಿಕೆ ಪ್ರಕರಣದಲ್ಲಿ ಪ್ರಧಾನಿ ಪಟ್ಟ ಕಳೆದುಕೊಳ್ಳುವ ಆಪತ್ತಿಗೆ ಸಿಲುಕಿದ್ದ ಅವರು ಸದ್ಯಕ್ಕೆ ಬಚಾವಾಗಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಲ್ಲಿನ ಸುಪ್ರೀಂಕೋರ್ಟ್ ಸಾಕ್ಷ್ಯಾಧಾರ ಕೊರತೆಯ ಕಾರಣ ನೀಡಿ ಹೆಚ್ಚಿನ ಮಾಹಿತಿಗೆ ಜಂಟಿ ತನಿಖೆ ನಡೆಸುವಂತೆ ಆದೇಶ ನೀಡಿದೆ.
ಪನಾಮಾ ಪೇಪರ್ ಸೋರಿಕೆಯಿಂದ ಷರೀಫ್ ಅವರ ಕುಟುಂಬದ ವಿದೇಶಿ ಹೂಡಿಕೆಯ ಬಾನಗಡಿಯು ಅವರ ಪ್ರಧಾನಿ ಹುದ್ದೆಗೆ ಕುತ್ತು ತರಲಿದೆ ಎಂದೇ ಭಾವಿಸಲಾಗಿದೆ. ಆದರೆ ಸುಪ್ರೀಂಕೋರ್ಟ್ ನ ಗುರುವಾರದ ತೀರ್ಪು ಷರೀಫ್ ಅವರಿಗೆ ಇನ್ನಷ್ಟು ಕಾಲ ನಿರುಮ್ಮಳವಾಗಿರಲು ಅವಕಾಶ ನೀಡಿತ್ತು. ತತ್ಕಾಲಕ್ಕೆ ಅವರ ಪ್ರಧಾನಿ ಹುದ್ದೆ ಸುರಕ್ಷಿತವಾಗಿದ್ದರೂ 60 ದಿನಗಳೊಳಗೆ ಜಂಟಿ ತನಿಖೆಗೆ ಒಳಪಡಬೇಕಾದ ಒತ್ತಡ ಇದೆ.
ತನಿಖೆಗೆ 60 ದಿನಗಳ ಕಾಲಾವಕಾಶ ನೀಡಿರುವ ಸುಪ್ರೀಂ ಕೋರ್ಟ್, ಪ್ರತಿ ಎರಡು ವಾರಗಳಿಗೆ ಒಮ್ಮೆ ತನಿಖಾ ಪ್ರಗತಿಯ ವರದಿ ಸಲ್ಲಿಸುವಂತೆ ಆದೇಶಿಸಿದೆ.
ಲಂಡನ್ ನಗರದಲ್ಲಿ ನಾಲ್ಕು ಐಷಾರಾಮಿ ಅಪಾರ್ಟ್ ಮೆಂಟ್ ಗಳನ್ನು ಷರೀಫ್ ತಮ್ಮ ಮಕ್ಕಳ ಹೆಸರಿನಲ್ಲಿ ಖರೀದಿಸಿದ್ದಾರೆ.,ಜತೆಗೆ ಖತಾರ್ ನ ಉದ್ಯಮ ವಲಯದಲ್ಲಿಯೂ ಅಪಾರ ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ ಎನ್ನುವುದು ಪನಾಮಾ ಪೇಪರ್ ಗಳ ಮೂಲಕ ತಿಳಿದುಬಂದಿತ್ತು.