ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಧಾನಿ ಮೋದಿಯ 'ಬಾಹ್ಯಾಕಾಶ ರಾಜತಾಂತ್ರಿಕತೆ'
ನವದೆಹಲಿ: ಮೇ.5 ರಂದು ಶ್ರೀಹರಿಕೋಟಾದಿಂದ ಸಂವಹನ ಉಪಗ್ರಹ (ಜಿಎಸ್ಎಟಿ-9) ಉಡಾವಣೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಂವಹನ ಉಪಗ್ರಹ ಉಡಾವಣೆಯಾಗಲಿದ್ದು, ನೆರೆ ರಾಷ್ಟ್ರಗಳಿಗೆ ಭಾರತ ಗಿಫ್ಟ್ ನೀಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಿಂದೆಂದೂ ಮಾಡಿರದ ಸಾಧನೆಗೆ ಸಜ್ಜುಗೊಂಡಿದೆ. ಈ ಬಗ್ಗೆ ವಿದೇಶಾಂಗ ಇಲಾಖೆಯ ವಕ್ತಾರ ಗೋಪಾಲ್ ಬಗ್ಲೆ ಪ್ರತಿಕ್ರಿಯೆ ನೀಡಿದ್ದು, ನೆರೆಹೊರೆ ಮೊದಲು (ನೈಬರ್ ಹುಡ್ ಫಸ್ಟ್) ಎಂಬ ತತ್ವವನ್ನು ವಾಯುಮಂಡಲವನ್ನೂ ಮೀರಿ ವಿಸ್ತರಿಸಲಾಗಿದೆ. ನೆರೆಯ ರಾಷ್ಟ್ರಗಳಿಗೆ ಉಚಿತವಾಗಿ ಸಂವಹನ ಉಪಗ್ರಹ ಬಳಕೆ ಮಾಡಲು ಅವಕಾಶ ನೀಡಿರುವುದಕ್ಕೆ ಬಾಹ್ಯಾಕಾಶ ಜಗತ್ತಿನಲ್ಲಿ ಪರ್ಯಾಯ ಯಾವುದೂ ಇಲ್ಲ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2014ರಲ್ಲಿ ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಸಮ್ಮೇಳನದಲ್ಲಿ ಸಾರ್ಕ್ ರಾಷ್ಟ್ರಗಳಿಗಾಗಿಯೇ ಪ್ರತ್ಯೇಕ ಉಪಗ್ರಹವನ್ನು ಉಡಾವಣೆ ಮಾಡುವುದರ ಬಗ್ಗೆ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಂವಹನ ಉಪಗ್ರಹ ನೆರೆ ರಾಷ್ಟ್ರಗಳಿಗೆ ಭಾರತ ನೀಡುತ್ತಿರುವ ಉಡುಗೊರೆ ಎಂದಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ