ಭಾನುವಾರ, ಏಪ್ರಿಲ್ 30, 2017

ಆಸ್ಟ್ರೇಲಿಯ ಪೌರತ್ವ ಬಯಸಿದ್ದಿರಾ? ನಿಮಗಿದು ತಿಳಿದಿರಲಿ

ಆಸ್ಟ್ರೇಲಿಯ ಪೌರತ್ವ ಬಯಸಿದ್ದೀರಾ ? ಹಾಗಿದ್ದರೆ ನಿಮಗಿದು ತಿಳಿದಿರಲಿ

ಸಿಡ್ನಿ: ನೀವು ಆಸ್ಟ್ರೇಲಿಯದ ಪೌರತ್ವ ಪಡೆದು ಅಲ್ಲೇ ಉದ್ಯೋಗನಿರತರಾಗಿ ಬಾಳಲು ಬಯಸಿದ್ದೀರಾ ? ಹಾಗಿದ್ದರೆ ನೀವಿಗ ಆಸ್ಟ್ರೇಲಿಯನ್‌ ಮೌಲ್ಯಗಳ ಮತ್ತು ಅಲ್ಲಿನ ಇಂಗ್ಲಿಷ್‌ ಭಾಷಾ ಶೈಲಿಯ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸು ಮಾಡಿಕೊಳ್ಳಬೇಕಾಗುತ್ತದೆ.

ಅಂದ ಹಾಗೆ ಆಸ್ಟ್ರೇಲಿಯ ಸರಕಾರ ಈ ನಿಮಯಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ಉದ್ದೇಶಿಸಿರುವುದು ಯಾಕೆ ಗೊತ್ತಾ ? ಆಸ್ಟ್ರೇಲಿಯಕ್ಕೆ ಬರುವ ವಲಸಿಗರ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಇಲ್ಲಿಗೆ ಬರುವವರ ಕಾಯುವಿಕೆಯನ್ನು ಇನ್ನಷ್ಟು ದೀರ್ಘ‌ಗೊಳಿಸಲು ಅದು ಮಾಡಿರುವ ಉಪಾಯ ಇದಾಗಿದೆ.

ಆಸ್ಟ್ರೇಲಿಯದ ಪ್ರಧಾನಿ ಮಾಲ್ಕಂ ಟರ್ನ್ಬುಲ್‌ ಅವರ ಸರಕಾರ ಈಗಾಗಲೇ ತಾತ್ಕಾಲಿಕ ಉದ್ಯೋಗಗಳ 457 ವೀಸಾವನ್ನು ರದ್ದು ಪಡಿಸಿದ್ದು ಅದರಿಂದ ಏಶ್ಯನರು ವಿಶೇಷವಾಗಿ ಭಾರತೀಯರು ಭಾರೀ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ರದ್ದುಪಡಿಸಲಾಗಿರುವ ಈ ವೀಸಾ ಯೋಜನೆಯ ಬದಲಿಗೆ ಕಠಿನ ನಿಯಮಗಳ ಹೊಸ ಯೋಜನೆಯನ್ನು ಜಾರಿಗೆ ತರಲು ಆಸೀಸ್‌ ಸರಕಾರ ಮುಂದಾಗಿದೆ.
ಅಂತೆಯೇ ಅದು ಆಸ್ಟ್ರೇಲಿಯನ್‌ ಮೌಲ್ಯ ಹಾಗೂ ಇಂಗ್ಲಿಷ್‌ ಭಾಷಾ ಕೌಶಲ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಎಚ್‌1ಬಿ ವೀಸಾ ನಿಯಮವನ್ನು ಕಠಿನಗೊಳಿಸಿದ್ದು ಆಮೆರಿಕನ್ನರೇ ಮೊದಲು ಎಂಬ ನೀತಿಯನ್ನು ಜಾರಿಗೆ ತಂದಿರುವ ಹಾಗೆ ಆಸ್ಟ್ರೇಲಿಯ ಕೂಡ ಈಗ ಅದೇ ಹಾದಿಯನ್ನು ತುಳಿದಿದೆ. ಆಸ್ಟ್ರೇಲಿಯ ಫ‌ಸ್ಟ್‌ ಎಂಬುದೇ ಅದರ ಕಠಿನ ವೀಸಾ ನಿಯಮಗಳ ಹಿಂದು ಮೂಲ ಉದ್ದೇಶವಾಗಿದೆ.

ಆಸ್ಟ್ರೇಲಿಯ ಸರಕಾರದ ಹೊಸ ಪೌರತ್ವ ನಿಯಮಗಳು ಈಗಿನ್ನು ಅಲ್ಲಿನ ಸಂಸತ್ತಿನಲ್ಲಿ ಪಾಸಾಗಬೇಕಾಗಿವೆ. ಅದಕ್ಕೆ ಬಲಪಂಥೀಯ ಸೆನೆಟರ್‌ಗಳ ಬೆಂಬಲವೂ ಬೇಕಿದೆ.

ಆಸ್ಟ್ರೇಲಿಯ ಪೌರತ್ವ ಪಡೆಯಲು ಕೇವಲ ಇಂಗ್ಲಿಷ್‌ ಭಾಷಾ ಪ್ರಭುತ್ವದ ಪರೀಕ್ಷೆ ಮಾತ್ರವೇ ಸಾಲದು; ಇಲ್ಲಿನ ಮೌಲ್ಯಗಳನ್ನು ಕೂಡ ವಲಸಿಗರು ತಿಳಿದಿರುವುದು ಕಡ್ಡಾಯ ಎಂದು ಪ್ರಧಾನಿ ಟರ್ನ್ಬುಲ್‌ ಹೇಳಿದ್ದಾರೆ.

ಆಸೀಸ್‌ ಪೌರತ್ವ ಪಡೆಯಬಯಸುವವರು ಇಂಗ್ಲೀಷ್‌ ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 6.0 ಮಟ್ಟವನ್ನು ಪೂರೈಸಿರಬೇಕು. ಆಸೀಸ್‌ ಪೌರತ್ವ ಪಡೆಯಲು ಈ ತನಕ 1 ವರ್ಷದ ಶಾಶ್ವತ ವಾಸ್ತವ್ಯ ಅಗತ್ಯವಿತ್ತು; ಆದರೆ ಈಗ ಅದನ್ನು 4 ವರ್ಷಕ್ಕೆ ಏರಿಸಲಾಗಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ