ಹೊ.ಶ್ರೀನಿವಾಸಯ್ಯ ನಿಧನದಿಂದ ದೇಶ ಸಮಾಜಮುಖಿ ಶ್ರೇಷ್ಠ ವ್ಯಕ್ತಿ ಕಳೆದುಕೊಂಡಂತಾಗಿದೆ : ಕುಮಾರಸ್ವಾಮಿ
ಬೆಂಗಳೂರು, ಏ.7-ಕನ್ನಡ ನಾಡು ಕಂಡ ಒಬ್ಬ ಅಪ್ಪಟ ಗಾಂಧಿವಾದಿ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ ಹೊ. ಶ್ರೀನಿವಾಸಯ್ಯ ಅವರ ನಿಧನದಿಂದ ನಮ್ಮ ದೇಶ ಅಪ್ರತಿಮ ಸಮಾಜ ಮುಖಿ ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಷಾದಿಸಿದ್ದಾರೆ. ಶ್ರೀನಿವಾಸಯ್ಯ ಅವರು ಇನ್ನಿಲ್ಲ ಎನ್ನುವ ಸುದ್ದಿ ನನಗೆ ಅಪಾರ ನೋವನ್ನುಂಟು ಮಾಡಿದೆ ಎಂದು ಶೋಕ ಸಂದೇಶದಲ್ಲಿ ಕುಮಾರಸ್ವಾಮಿ ತಿಳಿಸಿದ್ದಾರೆ. ತಮ್ಮ ಕೃತಿ ಹಾಗೂ ವಿಚಾರಗಳ ಮೂಲಕ ಜನಪ್ರಿಯವಾಗಿದ್ದ ಶ್ರೀನಿವಾಸಯ್ಯ ಅವರು, ಮಹಾತ್ಮ ಗಾಂಧಿ ವಿಚಾರಧಾರೆಗಳ ಪ್ರಚಾರಕ್ಕೆ ತಮ್ಮನ್ನು ತೊಡಗಿಸಿಕೊಂಡರು.
ಕೊನೆಯ ಉಸಿರುವವರೆಗೂ ಗಾಂಧೀ ತತ್ವಗಳನ್ನು ಜಾರಿಗೆ ತರಲು ಮತ್ತು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶ್ರೀನಿವಾಸಯ್ಯ ಅವರ ಮನವಿ ಮೇರೆಗೆ ಗಾಂಧಿ ಸ್ಮಾರಕ ನಿಧಿಗೆ ಒಂದು ಕೋಟಿ ರೂ ಬಿಡುಗಡೆ ಮಾಡಲಾಯಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಗಾಂಧಿ ಭವನವನ್ನು ಒಂದು ಉತ್ತಮ ವೈಚಾರಿಕ ಕೇಂದ್ರವನ್ನಾಗಿ ಮಾಡಲಾಯಿತು ಎಂದು ಕುಮಾರಸ್ವಾಮಿ ಗುಣಗಾನ ಮಾಡಿದ್ದಾರೆ. ಗಾಂಧೀಜಿ ಅವರನ್ನು ಭೇಟಿ ಮಾಡಿದ ನಂತರ ಶ್ರೀನಿವಾಸಯ್ಯ ಅವರು ಸಂಪೂರ್ಣವಾಗಿ ಗಾಂಧೀಜಿ ತತ್ವ ಪ್ರಚಾರಕ್ಕೆ ದುಡಿದರು. ಶ್ರೀನಿವಾಸಯ್ಯ ಅವರ ರೈತಪರ ಕಾಳಜಿಯಿಂದಾಗಿ ನಾನು ಅವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳಲು ಕಾರಣವಾಗಿತ್ತು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಯಾಗಿದ್ದ ಶ್ರೀನಿವಾಸಯ್ಯ ಅವರು, ನಿಸ್ವಾರ್ಥ ಸೇವೆ ಮೂಲಕ ಆ ಸಂಸ್ಥೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಪ್ರಕೃತಿ ಚಿಕಿತ್ಸೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶ್ರೀನಿವಾಸಯ್ಯ ಅವರು ಈ ಸಂಬಂಧ ರೂಪಿಸಿದ ಯೋಜನೆಗಳಿಗೆ 30 ಎಕರೆ ಜಾಗವನ್ನು ಮಂಜೂರು ಮಾಡಿದ್ದೆ. ಅವರ ಊರಾದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಚೌದರಿಕೊಪ್ಪಲಿನ ಜೊತೆ ಶ್ರೀನಿವಾಸಯ್ಯ ಕರುಳುಬಳ್ಳಿ ಸಂಬಂಧವನ್ನು ಹೊಂದಿದ್ದರು.
ಶ್ರೀನಿವಾಸಯ್ಯ ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ನೀಡಲಿ ಎಂದು ಕುಮಾರಸ್ವಾಮಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ