ಶುಕ್ರವಾರ, ಏಪ್ರಿಲ್ 7, 2017

ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡ ಆರ್,ಬಿ,ಐ

ರೆಪೊ ದರದ ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿಐ; ರಿವರ್ಸ್ ರೆಪೊ ದರ ಶೇಕಡಾ 0.25 ಹೆಚ್ಚಳ

ನವದೆಹಲಿ: ಮಾರುಕಟ್ಟೆ ಮತ್ತು ಆರ್ಥಿಕ ತಜ್ಞರು ನಿರೀಕ್ಷಿಸಿದಂತೆಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು ಶೇಕಡಾ 6.25ರ ಯಥಾ ಸ್ಥಿತಿ ಕಾಯ್ದುಕೊಂಡಿದೆ. ಆದರೆ ರಿವರ್ಸ್ ರೆಪೊ ದರವನ್ನು ಶೇಕಡಾ 5.75ರಿಂದ ಶೇಕಡಾ 6ಕ್ಕೆ ಹೆಚ್ಚಿಸಿದೆ.

2017-18ನೇ ಸಾಲಿನ ಮೊದಲ ದ್ವಿ ಮಾಸಿಕ ವಿಮರ್ಶೆ ಸಭೆಯಲ್ಲಿ ಈ ಪ್ರಕಟಣೆಯನ್ನು ಆರ್ ಬಿಐ ಹೊರಡಿಸಿದೆ. ಕಳೆದ ಫೆಬ್ರವರಿ 8ರಂದು ನಡೆದ ಯೋಜನಾ ವಿಮರ್ಶಾ ಸಭೆಯಲ್ಲಿ  ಆರ್ ಬಿಐ ರೆಪೊ ದರದಲ್ಲಿ ಯಾವುದೇ ವ್ಯತ್ಯಾಸ ಮಾಡದೆ ಶೇಕಡಾ 6.25ರಷ್ಟು ಕಾಯ್ದುಕೊಂಡಿತ್ತು. ದೇಶದ ಆರ್ಥಿಕತೆ ಮೇಲೆ ಹಣದುಬ್ಬರ ಮತ್ತು ನೋಟುಗಳ ಅಮಾನ್ಯತೆಯ ಪರಿಣಾಮವನ್ನು ಸ್ಪಷ್ಟವಾಗಿ ತಿಳಿದುಕೊಂಡ ನಂತರ ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ವ್ಯತ್ಯಾಸ ಮಾಡುವುದಾಗಿ ಪ್ರಕಟಿಸಿತ್ತು.

ಆರ್ ಬಿಐ ಮುಖ್ಯಸ್ಥ ಊರ್ಜಿತ್ ಪಟೇಲ್ ನೇತೃತ್ವದ 6 ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿ ರೆಪೊ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ.

ಇಂದು ಬೆಳಗಿನ ಷೇರು ವಹಿವಾಟು ಆರಂಭಕ್ಕೆ ಸಂವೇದಿ ಸೂಚ್ಯಂಕ 122 ಅಂಕಗಳಷ್ಟು ಕುಸಿದಿತ್ತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ಕೂಡ 38.25 ಅಂಕಗಳಷ್ಟು ಇಳಿಕೆ ಕಂಡುಬಂದಿತ್ತು.

ರೆಪೊ ದರ: ವಾಣಿಜ್ಯ ಬ್ಯಾಂಕ್ ಗಳಲ್ಲಿ ಹಣಕ್ಕೆ ಕೊರತೆಯುಂಟಾದರೆ ಆ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಹಣ ನೀಡಿ ಅದಕ್ಕೆ ವಿಧಿಸುವ ಬಡ್ಡಿದರ ರೆಪೊ ದರವಾಗಿದೆ. ಹಣದುಬ್ಬರವನ್ನು ಹತೋಟಿಯಲ್ಲಿಡಲು ಹಣಕಾಸಿನ ಅಧಿಕಾರಿಗಳು ಇದನ್ನು ಬಳಸುತ್ತಾರೆ.

ಹಣದುಬ್ಬರ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಹೆಚ್ಚಿಸುತ್ತದೆ. ಬ್ಯಾಂಕುಗಳಿಗೆ ಆರ್ ಬಿಐನಿಂದ ತೆಗೆದುಕೊಂಡ ಹಣಕ್ಕೆ ಬಡ್ಡಿ ಕೊಡಲು ತೊಂದರೆಯಾಗುತ್ತದೆ. ಇದರಿಂದ ಹಣ ಪೂರೈಕೆ ಕುಂಠಿತವಾಗಿ ಹಣದುಬ್ಬರವನ್ನು ನಿಯಂತ್ರಿಸುತ್ತದೆ.

ಹಣದುಬ್ಬರದ ಒತ್ತಡ ಇಳಿತದ ಸಂದರ್ಭದಲ್ಲಿ ವಿರುದ್ಧವಾದ ಸ್ಥಾನವನ್ನು ಕೇಂದ್ರೀಯ ಬ್ಯಾಂಕ್ (ಆರ್ ಬಿಐ) ತೆಗೆದುಕೊಳ್ಳುತ್ತದೆ. ದ್ರವ್ಯತೆ ಹೊಂದಾಣಿಕೆ ಸೌಲಭ್ಯವನ್ನು ರೆಪೊ ಮತ್ತು ರಿವರ್ಸ್ ರೆಪೊ ದರ ರಚಿಸುತ್ತದೆ.

ರಿವರ್ಸ್ ರೆಪೊ ದರ: ದೇಶದ ವಾಣಿಜ್ಯ ಬ್ಯಾಂಕುಗಳಿಂದ ರಿಸರ್ವ್ ಬ್ಯಾಂಕ್ ಪಡೆಯುವ ಹಣವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ. ಹಣದ ಪೂರೈಕೆಯನ್ನು ದೇಶದಲ್ಲಿ ಹತೋಟಿಯಲ್ಲಿಡಲು ಬಳಸುವ ಹಣಕಾಸು ನೀತಿ ಇದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ