ಬುಧವಾರ, ಏಪ್ರಿಲ್ 5, 2017

ಮಂಜುನಾಥ್ ಸಾಗರ್ ಗೆ ಗುಲ್ವಾಡಿ ಪ್ರಶಸ್ತಿ

ಸಾಧಕ ಮಂಜುನಾಥ್ ಸಾಗರ್ ಗೆ ಗುಲ್ವಾಡಿ ಪ್ರಶಸ್ತಿ

ಕುಂದಾಪುರ, ಏಪ್ರಿಲ್ 3: ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಮಾಧ್ಯಮ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆಗೈದವರಿಗೆ ನೀಡಲಾಗುವ 2016 ನೇ ಸಾಲಿನ ಸಂತೋಷ್ ಕುಮಾರ್ ಗುಲ್ವಾಡಿ ಗೌರವ ಪುರಸ್ಕಾರಕ್ಕೆ ಕೆ.ಪಿ.ಮಂಜುನಾಥ್ ಸಾಗರ್ ಆಯ್ಕೆಯಾಗಿದ್ದಾರೆ.

ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಗಳ ಮೂಲಕ ಕನ್ನಡ ಭಾಷೆಗೆ, ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ ಮಂಜುನಾಥ್ ಸಾಗರ್ ಅವರಿಗೆ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ತೋಟದ ಮನೆಯಲ್ಲಿ ಏಪ್ರಿಲ್ 9 ರ ಸಂಜೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನ ತಿಳಿಸಿದೆ.[ಅಂತರಂಗ ಬಹಿರಂಗ ಖ್ಯಾತಿ ಗುಲ್ವಾಡಿ ಇನ್ನಿಲ್ಲ]

ಹತ್ತು ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನು ಹೊಂದಿರುವ ಈ ಪ್ರಶಸ್ತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಗುಲ್ವಾಡಿ ಟಾಕೀಸ್ ನಿರ್ಮಾಣದ ಕಲಾತ್ಮಕ ಚಿತ್ರ 'ರಿಸರ್ವೇಶನ್' ನ ಟ್ರೈಲರ್ ಮತ್ತು ಪೋಸ್ಟರ್ ಬಿಡುಗಡೆಗೊಳ್ಳಲಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.

ಗುಲ್ವಾಡಿ ಪ್ರತಿಷ್ಠಾನವು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ, ಮಾಧ್ಯಮ, ಸಿನೆಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಳೆದ ನಾಲ್ಕು ವರ್ಷಗಳಿಂದ ಈ ಪ್ರಶಸ್ತಿ ನೀಡುತ್ತಿದೆ.

ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ತರ ಸಾಧನೆ ಮಾಡಿದ ಸಂತೋಷ್ ಕುಮಾರ್ ಗುಲ್ವಾಡಿ ಅವರ ಸ್ಮರಣೆಗಾಗಿ ಪ್ರತಿಷ್ಠಾನ ಈ ಪ್ರಶಸ್ತಿ ಪ್ರದಾನ ಮಾಡುತ್ತಿದೆ ಎಂದು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾದರ್ ಗುಲ್ವಾಡಿ ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ