ಮಂಗಳವಾರ, ಏಪ್ರಿಲ್ 11, 2017

ವಿಶ್ವ ಹಾಕಿ ಲೀಗ್ ರೌಂಡ್-2: ಭಾರತದ ವನಿತೆಯರ ಮುಡಿಗೆ ಪ್ರಶಸ್ತಿ

ವಿಶ್ವ ಹಾಕಿ ಲೀಗ್ ರೌಂಡ್-2 : ಭಾರತದ ವನಿತೆಯರ ಮುಡಿಗೆ ಪ್ರಶಸ್ತಿ

ವೆಸ್ಟ್ ವ್ಯಾಂಕೊವರ್, ಏಪ್ರಿಲ್ 11 : ಸವಿತಾ ಪೂನಿಯಾ ಅವರ ಮನಮೋಹಕ ಆಟದಿಂದ ಭಾರತ ಮಹಿಳಾ ತಂಡ ವಿಶ್ವ ಹಾಕಿ ಲೀಗ್ ರೌಂಡ್-2 ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿಯಿತು.

ಸೋಮವಾರ ನಡೆದ ಫೈನಲ್ ಹಣಾಹಣಿಯ ಶೂಟೌಟ್ ನಲ್ಲಿ ಭಾರತ ತಂಡ 3-1 ಗೋಲುಗಳಿಂದ ಬಲಿಷ್ಠ ಚಿಲಿ ತಂಡದ ಗೆಲುವಿನ ನಗೆ ಬೀರಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದರಿಂದ ಶೂಟೌಟ್ ಮೊರೆ ಹೋಗಲಾಗಿತ್ತು. ಈ ಅವಕಾಶದಲ್ಲಿ ಭಾರತದ ವನಿತೆಯರು ಪ್ರಾಬಲ್ಯ ಮೆರೆದರು.

ಈ ಗೆಲುವಿನೊಂದಿಗೆ ರಾಣಿ ರಾಂಪಾಲ್ ಪಡೆ ಮುಂಬರುವ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಗೆ ಅರ್ಹತೆ ಗಳಿಸಿದೆ. ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬೆಲಾರಸ್ ತಂಡವನ್ನು ಮಣಿಸಿ ವಿಶ್ವಾಸದಿಂದ ಬೀಗುತ್ತಿದ್ದ ಭಾರತದ ಆಟಗಾರ್ತಿಯರು ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ಆರಂಭ ಪಡೆಯಲು ವಿಫಲರಾದರು.[ ಚಕ್ ದೇ ಇಂಡಿಯಾ : ಭಾರತದ ವನಿತೆಯರು ಏಷ್ಯನ್ ಚಾಂಪಿಯನ್ಸ್ ]

ಬಲಿಷ್ಠ ಆಟಗಾರ್ತಿಯರ ಕಣಜ ಅನಿಸಿದ್ದ ಚಿಲಿ ತಂಡ ಐದನೇ ನಿಮಿಷದಲ್ಲೇ ಖಾತೆ ತೆರೆದು ಸುಲಭ ಗೆಲುವಿನ ಕನಸು ಕಂಡಿತ್ತು.
ಮರಿಯಾ ಮಲ್ಡೊ ನಾಡೊ ಚೆಂಡನ್ನು ಗುರಿ ಮುಟ್ಟಿಸಿ ಚಿಲಿ ಸಂಭ್ರಮಕ್ಕೆ ಕಾರಣರಾದರು.

ಸಮಬಲದ ಗೋಲಿಗಾಗಿ ಹೋರಾಟ ಮುಂದುವರಿಸಿದ ಭಾರತ ತಂಡ 22ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಆದರೆ ಈ ಅವಕಾಶದಲ್ಲಿ ಭಾರತದ ಆಟಗಾರ್ತಿ ಬಾರಿಸಿದ ಚೆಂಡನ್ನು ಚಿಲಿ ತಂಡದ ಗೋಲ್ ಕೀಪರ್ ಕ್ಲಾಡಿಯಾ ಶುಲರ್ ಚೆಂಡನ್ನು ಗೋಲಿನತ್ತ ಬಿಡದೆ ತಡೆದರು.

ಹೀಗಾಗಿ 40ನೇ ನಿಮಿಷದವರೆಗೂ ಚಿಲಿ ತಂಡ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 41ನೇ ನಿಮಿಷ ದಲ್ಲಿ ಅನುಪಾ ಬಾರ್ಲಾ ಮೋಡಿ ಮಾಡಿದರು.

ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸುತ್ತಿದ್ದಂತೆ ಭಾರತದ ಪಾಳಯದಲ್ಲಿ ಹರ್ಷದ ಹೊನಲು ಹರಿಯಿತು.

ಮೂರನೇ ಕ್ವಾರ್ಟರ್ ನ ಅಂತ್ಯಕ್ಕೆ ಪಂದ್ಯ 1-1ರಲ್ಲಿ ಸಮಬಲವಾಗಿದ್ದರಿಂದ ನಾಲ್ಕನೇ ಕ್ವಾರ್ಟರ್ ನ ಆಟ ಉಭಯ ತಂಡಗಳ ಪಾಲಿಗೂ ಮಹತ್ವದ್ದೆನಿಸಿತ್ತು.

ಈ ಕ್ವಾರ್ಟರ್ ನಲ್ಲಿ ಭಾರತದ ಸ್ಟ್ರೈಕರ್ ರಾಣಿ ಬಾರಿಸಿದ ಬ್ಯಾಕ್ ಹ್ಯಾಂಡ್ ಹೊಡೆತ ವನ್ನು ಚಿಲಿ ಗೋಲ್ಕೀಪರ್ ಕ್ಲಾಡಿಯಾ ಮನಮೋಹಕ ರೀತಿಯಲ್ಲಿ ತಡೆದು ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ