ಮಹಿಳಾ ವಿಶ್ವ ಹಾಕಿ ಲೀಗ್; ಭಾರತಕ್ಕೆ ಸತತ 2ನೇ ಜಯ: ಸೆಮಿಫೈನಲ್ ಪ್ರವೇಶ
ವೆಸ್ಟ್ ವಾಂಕೊವರ್: ಮಹಿಳೆಯರ ವಿಶ್ವ ಹಾಕಿ ಲೀಗ್'ನಲ್ಲಿ ಭಾರತೀಯ ವನಿತೆಯರ ತಂಡ ಸೋಮವಾರ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ಇಂದು ನಡೆದ ರೌಂಡ್-2 ಪಂದ್ಯದಲ್ಲಿ ವಂದನಾ ಕಟಾರಿಯಾ ಅವರ ಗೋಲಿನ ಸಹಾಯದಿಂದ ಭಾರತ ಮಹಿಳಾ ಹಾಕಿ ತಂಡ 1-0 ಗೋಲಿನಿಂದ ಬೆಲಾರಸ್ ಮಹಿಳೆಯರನ್ನು ಮಣಿಸಿತು. ಎ ಗುಂಪಿನ ಈ ಪಂದ್ಯದಲ್ಲಿ ವಂದನಾ 26ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಬೆಲಾರಸ್ ವನಿತೆಯರು ತೀವ್ರ ಪೈಪೋಟಿ ನೀಡಿದರಾದರೂ, ಭಾರತೀಯರು ಇಡೀ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದರು. ಮೂರ್ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳೂ ಭಾರತಕ್ಕೆ ಸಿಕ್ಕಿದ್ದವು. ಭಾರತದ ಗೋಲ್'ಕೀಪರ್ ಸವಿತಾ ಅವರ ಪ್ರದರ್ಶನವೂ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಶನಿವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಉರುಗ್ವೆ ವಿರುದ್ಧ ಶೂಟೌಟ್'ನಲ್ಲಿ 4-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು.
ಉಭಯ ತಂಡಗಳು ನಿಗದಿತ ಸಮಯದಲ್ಲಿ 2-2ರಿಂದ ಸಮಬಲ ಸಾಧಿಸಿದ್ದವು. ಹೀಗಾಗಿ ಪೆನಾಲ್ಟಿ ಶೂಟೌಟ್ ಅನ್ನು ನೀಡಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ನಾಯಕಿ ರಾಣಿ, ಮೋನಿಕಾ, ದೀಪಿಕಾ ಹಾಗೂ ನವಜೋತ್ ಕೌರ್ ತಲಾ ಒಂದು ಗೋಲು ಬಾರಿಸುವ ಮೂಲಕ 4-2ರಿಂದ ಉರುಗ್ವೆ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರು.
ಸತತ ಎರಡು ಗೆಲುವುಗಳ ಮೂಲಕ ನಾಕೌಟ್ ಹಂತ ಪ್ರವೇಶಿಸಿರುವ ಭಾರತ ತಂಡ ಏಪ್ರಿಲ್ 8ರಂದು ಸೆಮಿಫೈನಲ್ ಪಂದ್ಯವಾಡಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ