ಗುರುವಾರ, ಏಪ್ರಿಲ್ 6, 2017

ನರ ನಿಷ್ಕ್ರಿಯಗೊಳಿಸುವ ವಿಷ ಬಳಕೆ:ವಿಶ್ವ ಆರೊಗ್ಯ ಸಂಸ್ಥೆ

ನರ ನಿಷ್ಕ್ರಿಯಗೊಳಿಸುವ ವಿಷ ಬಳಕೆ: ವಿಶ್ವ ಆರೋಗ್ಯ ಸಂಸ್ಥೆ

ಖಾನ್‌ ಶೇಕ್‌ಹೌನ್, ಸಿರಿಯಾ: ರಾಸಾಯನಿಕ ದಾಳಿಗೆ ಒಳಗಾದವರ ಲಕ್ಷಣಗಳನ್ನು ಗಮನಿಸಿದರೆ ನರಮಂಡಲವನ್ನು ನಿಷ್ಕ್ರಿಯಗೊಳಿಸುವ  ಸಾಮರ್ಥ್ಯದ ವಿಷ (ನರ್ವ್ ಏಜೆಂಟ್) ಬಳಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ನರ್ವ್ ಏಜೆಂಟ್ ವಿಷದಿಂದ ದೇಹದ ಹೊರಭಾಗದಲ್ಲಿ ಗಾಯಗಳಾಗಿರುವ ಪ್ರಕರಣ ಹೆಚ್ಚು ಕಂಡುಬಂದಿಲ್ಲ. ಬಹುತೇಕರಿಗೆ ತೀವ್ರತರವಾದ ಉಸಿರಾಟದ ಸಮಸ್ಯೆ ಎದುರಾಗಿದೆ. ಇದು ಸಾವನ್ನು ತರುತ್ತದೆ ಎಂದು ಸಂಸ್ಥೆ ಹೇಳಿದೆ. ನರ್ವ್ ಏಜೆಂಟ್ ಸೇರಿರುವ ಆರ್ಗನೋಫೋರಸ್ ರಾಸಾಯನಿಕ ಸೇವಿಸಿದಾಗ ಕಾಣುವ ಲಕ್ಷಣಗಳು ಕೆಲವರಲ್ಲಿ ಕಂಡಬಂದಿವೆ ಎಂದೂ ಹೇಳಿದೆ.

ಅಮೆರಿಕ, ಬ್ರಿಟನ್ ಖಂಡನೆ: ಬಷಲ್ ಅಲ್ ಅಸದ್ ನೇತೃತ್ವದ ಸಿರಿಯಾ ಸರ್ಕಾರದತ್ತ ಅಮೆರಿಕ ಹಾಗೂ ಬ್ರಿಟನ್ ಬೊಟ್ಟು ಮಾಡಿವೆ. ಸಿರಿಯಾ ಮಿತ್ರದೇಶಗಳಾದ ರಷ್ಯಾ, ಇರಾನ್‌ ಅಮಾಯಕರ ಸಾವಿನ ನೈತಿಕ ಹೊಣೆ ಹೊರಬೇಕು ಎಂದು ಅಮೆರಿಕ ಹೇಳಿದೆ.
ಬಷರ್ ಅಲ್ ಅಸದ್ ಅವರ ಆಡಳಿತದ ಕ್ರೌರ್ಯವನ್ನು ಇದು ತೋರಿಸುತ್ತದೆ ಎಂದು ಬ್ರಿಟನ್ ವಿದೇಶಾಂಗ ಸಚಿವ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಸಿರಿಯಾ ಬೆಂಬಲಕ್ಕೆ ನಿಂತ ರಷ್ಯಾ: ಶಂಕಿತ ರಾಸಾಯನಿಕ ದಾಳಿ ಬಗ್ಗೆ ಜಾಗತಿಕವಾಗಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ತನ್ನ ಮಿತ್ರದೇಶ ಸಿರಿಯಾ ಬೆಂಬಲಕ್ಕೆ ರಷ್ಯಾ ನಿಂತಿದೆ. ಭಯೋತ್ಪಾದಕರ ಶಸ್ತ್ರಾಸ್ತ್ರ ಗೋದಾಮಿನ ಮೇಲೆ ಸಿರಿಯಾ ವಾಯುದಾಳಿ ನಡೆಸಿದೆ  ಎಂದು ಅದು ಸಮರ್ಥಿಸಿಕೊಂಡಿದೆ.

ಬಂಡುಕೋರರ ಶಸ್ತ್ರಾಸ್ತ್ರ ಉಗ್ರಾಣದ  ಮೇಲೆ ಸಿರಿಯಾ ಪಡೆ  ದಾಳಿ ನಡೆಸಿದಾಗ ವಿಷಕಾರಿ ಅನಿಲ ಬಿಡುಗಡೆಯಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

‘ಈ ಉಗ್ರಾಣದಲ್ಲಿ ವಿಷಕಾರಿ ವಸ್ತುಗಳಿಂದ ಕೂಡಿದ ಬಾಂಬ್ ತಯಾರಿಸಲಾಗುತ್ತಿತ್ತು’ ಎಂದಿರುವ ಸಚಿವಾಲಯವು, ಈ ದಾಳಿ ಆಕಸ್ಮಿಕವೇ ಅಥವಾ  ಪೂರ್ವನಿಯೋಜಿತವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಇರಾಕ್‌ ಬಂಡುಕೋರರ ಬಳಕೆಗಾಗಿ ವಿಷಕಾರಿ ರಾಸಾಯನಿಕ ಅಸ್ತ್ರಗಳನ್ನು ತಯಾರಿಸಲಾಗುತ್ತಿತ್ತು. ಈ ಬಗ್ಗೆ ವಿಶ್ವಾಸಾರ್ಹ ಹಾಗೂ ವಸ್ತುನಿಷ್ಠ ಮಾಹಿತಿಗಳಿವೆ ಎಂದು ರಷ್ಯಾ ಹೇಳಿಕೊಂಡಿದೆ.

ಆದರೆ ದಾಳಿಯನ್ನು ಸಿರಿಯಾ ಅಲ್ಲಗಳೆದಿದೆ. ತಾನು ರಾಸಾಯನಿಕ ಅಸ್ತ್ರ ಬಳಸಿಲ್ಲ ಎಂದು ಈ ಮೊದಲೂ ಸ್ಪಷ್ಟಪಡಿಸಿದ್ದ ಸಿರಿಯಾ, ಎಂದಿಗೂ ಇಂತಹ ಕೃತ್ಯ ಎಸಗುವುದಿಲ್ಲ ಎಂದಿದೆ.

ಈ ಭೀಕರ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ಅಡಗಿಕೊಂಡಿದ್ದ ಕೆಲವರು  ಅಚ್ಚರಿಯೆಂಬಂತೆ ಬದುಕುಳಿದಿರುವುದನ್ನು ರಕ್ಷಣಾ ಕಾರ್ಯಕರ್ತರು ಪತ್ತೆಹಚ್ಚಿದ್ದಾರೆ. ದಾಳಿಗೆ ಒಳಗಾಗಿದ್ದ ಖಾನ್‌ಶೇಕ್‌ಹೌನ್ ಪಟ್ಟಣದ ಮೇಲೆ  ಮತ್ತೆ ವಾಯುದಾಳಿ ನಡೆದಿದೆ.

ಮೃತರ ಸಂಖ್ಯೆ 72: ಬಂಡುಕೋರರ ನೆಲೆ ಖಾನ್‌ ಶೇಕ್‌ಹೌನ್‌ ಪಟ್ಟಣದ ಮೇಲೆ ಮಂಗಳವಾರ ಶಂಕಿತ ರಾಸಾಯನಿಕ ದಾಳಿ ನಡೆದಿತ್ತು. ಮೃತರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ