ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರದ ಚಿಂತನೆ
ನವದೆಹಲಿ, ಏಪ್ರಿಲ್ 3: ಕಾನೂನು ಬಾಹಿರವಾಗಿ ಭಾರತದೊಳಕ್ಕೆ ನುಸುಳಿ, ಇಲ್ಲೇ ನೆಲೆಸಿರುವ ಮಿಯಾಮ್ನಾರ್ (ಬರ್ಮಾ) ಮೂಲದ ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರದೂಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈವರೆಗೆ, ಅವರು ಯಾವುದೇ ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವ ಬಗ್ಗೆ ಮಾಹಿತಿ ಇಲ್ಲವಾದರೂ, ನಿರಾಶ್ರಿತರಂತೆ ಆಗಮಿಸಿರುವ ಅವರನ್ನು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವ ಸಂಘಟನೆಗಳು, ವ್ಯಕ್ತಿಗಳು ಹಣದ ಆಮಿಷ ನೀಡಿ ಉಪಯೋಗಿಸಿಕೊಳ್ಳುವ ಸಾಧ್ಯತೆಗಳಿವೆ.
ಹಾಗಾದಲ್ಲಿ, ಈ ನಿರಾಶ್ರಿತರ ಗುಂಪುಗಳು ಸಂಘಟಿತ ಸ್ವರೂಪ ಪಡೆದುಕೊಂಡು ಭವಿಷ್ಯದಲ್ಲಿ ದೇಶಕ್ಕೆ ಮಾರಕವಾಗಬಹುದು ಎಂಬ ಬಗ್ಗೆ ಅನುಮಾನಗಳಿರುವುದರಿಂದ ಅವರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ.
ಮೂಲಗಳ ಪ್ರಕಾರ, ಭಾರತದಲ್ಲಿ ಬೀಡುಬಿಟ್ಟಿರುವ ಈ ನಿರಾಶ್ರಿತರು ಮೂಲತಃ ಬರ್ಮಾದ ರೋಹಿಂಗ್ಯಾ ಪ್ರಾಂತ್ಯದವರು. ಭಾರತ ಹಾಗೂ ಮಿಯಾಮ್ನಾರ್- ಬಾಂಗ್ಲಾ ದೇಶ ಗಡಿಗಳ ಮೂಲಕ ಅಕ್ರಮವಾಗಿ ನುಸುಳಿಕೊಂಡು ಭಾರತದೊಳಗ್ಗೆ ಇವರು ಬಂದು ನೆಲೆಸಿದ್ದಾರೆ ಹಾಗೂ ನೆಲೆಸುತ್ತಲೇ ಇದ್ದಾರೆ.
ಈ ಮೊದಲು ಇವರನ್ನು ನಿರಾಶ್ರಿತರೆಂದು ಪರಿಗಣಿಸಿದ್ದ ಕೇಂದ್ರ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ, ಮಾನವ ಕಳ್ಳಸಾಗಣೆಗೆ ನೆರವಾಗುತ್ತಿರುವ ಬಗ್ಗೆ ಆರೋಪಗಳಿವೆ.
ಭಾರತದಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಲು ಸದಾ ಹಪಹಪಿಸುವ ಭಯೋತ್ಪಾದಕರು ಇಂಥ ನಿರಾಶ್ರಿತರಿಗೆ ಹಣ ಇನ್ನಿತರ ಸೌಲಭ್ಯಗಳ ಆಸೆ ತೋರಿಸಿ ಅವರನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲು ಆರಂಭಿಸಿದ್ದಾರೆಂದೂ ಹೇಳಲಾಗುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರವು ಈ ಬಗ್ಗೆ ಎಚ್ಚೆತ್ತುಕೊಂಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ