ಗುರುವಾರ, ಏಪ್ರಿಲ್ 6, 2017

ಚಿರನಿದ್ರೆಗೆ ಜಾರಿದ ಗಾನಕೋಗಿಲೆ ಕಿಶೋರಿ ಅಮೋನ್ಕರ್

ಚಿರನಿದ್ರೆಗೆ ಜಾರಿದ ಗಾನಕೋಗಿಲೆ ಕಿಶೋರಿ ಅಮೋನ್ಕರ್

ಮುಂಬೈ, ಏಪ್ರಿಲ್ 4: ಅದು ಹಿಂದೂಸ್ತಾನಿ ಸಂಗೀತ ಕ್ಷೇತ್ರ ಒಂದು ಕ್ಷಣ ಸ್ತಬ್ಧಗೊಂಡ ದಿನ. ರಾಗರಸದಿಂದ ಮಾಂತ್ರಿಕ ಪ್ರಪಂಚವನ್ನೇ ಸೃಷ್ಟಿಸುತ್ತಿದ್ದ ಗಾನಕೋಗಿಲೆ ಮೌನವಾದ ದಿನ.

ಹೌದು, ಹಿಂದೂಸ್ತಾನಿ ಸಂಗೀತದ ದಂತಕತೆ ಎಂದೇ ಖ್ಯಾತರಾಗಿದ್ದ ಪದ್ಮವಿಭೂಷಣ ಕಿಶೋರಿ ಅಮೋನ್ಕರ್(84) ಸೋಮವಾರದಂದು (ಏಪ್ರಿಲ್ 3) ಮುಂಬೈಯ ಸ್ವಗೃಹದಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ನಿಧನ ಸಂಗೀತ ಕ್ಷೇತ್ರದಲ್ಲಿ ನೀರವತೆ ಸೃಷ್ಟಿಸಿದೆ.

1932, ಏಪ್ರಿಲ್ 10 ರಂದು ಮುಂಬೈಯಲ್ಲಿ ಜನಿಸಿದ ಕಿಶೋರಿ ಅವರು ಹಿಂದೂಸ್ತಾನಿ ಸಂಗೀತ ಪ್ರಕಾರದಲ್ಲಿ ಮಹೋನ್ನತ ಸಾಧನೆ ಮಾಡಿದ್ದಲ್ಲದೆ, ಬೇರೆ ಬೇರೆ ಸಂಗೀತ ಪ್ರಕಾರಗಳಿಗೆ ವೇದಿಕೆ ನೀಡುವುದಕ್ಕಾಗಿ ಜೈಪುರ ಘರಾನಾ ಎಂಬ ಪರಿಕಲ್ಪನೆಯನ್ನೂ ಪರಿಚಯಿಸಿದರು.

ಸಂಗೀತದ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ, ಕಲೆಗೆ ಸದಾ ಹೊಸತನ ಬೇಕು ಎಂದ ಅವರು ಕೆಲವರ ಟೀಕೆಗೂ ಗುರಿಯಾದದ್ದಿದೆ.
ಆದರೂ ಸಂಗೀತದ ಬೇರೆ ಬೇರೆ ಪ್ರಕಾರಗಳ ಪ್ರಯೋಗದಲ್ಲೇ ಬದುಕಿನ ಸಾರ್ಥಕತೆ ಕಾಣುತ್ತಿದ್ದ ಕಿಶೋರಿ ಅವರು ತಮ್ಮ ಶಿಷ್ಯರಿಗಾಗಲಿ, ಅಭಿಮಾನಿಗಳಿಗಾಗಲಿ, ಹೊಸತನವನ್ನು ಆವಿಷ್ಕರಿಸುವ ಪಾಠವನ್ನೇ ಹೇಳುತ್ತಿದ್ದರು.

ರಾಗ್ ಕೇದಾರ್, ರಾಗ್ ಭೂಪ್ ಎಲ್ಲವೂ ಆಕೆಯ ಸ್ವರದ ಅಲೆಯಲ್ಲಿ ಮೋಡಿಯನ್ನೇ ಮಾಡುತ್ತಿದ್ದವು. ಆಕೆಯ ಸ್ವರದೊಂದಿಗೆ ಬೆರೆವ ರಾಗ ಸಂಗೀತ ಸುಧೆಯನ್ನೇ ಹರಿಸುತ್ತಿತ್ತು. 84ರ ಇಳಿವಯಸ್ಸಿನಲ್ಲೂ ಆಕೆ ವೇದಿಕೆಯ ಮೇಲೆ ಬಂದರೆ, ವೇದಿಕೆಗೇ ಯೌವನ ಬಂತೇನೋ ಅನ್ನಿಸುತ್ತಿತ್ತು. ಆ ಧ್ವನಿಯಲ್ಲಾಗಲಿ, ಅವರ ನಡೆ-ನುಡಿಯಲ್ಲಾಗಲಿ ವಯೋಸಹಜ ದಣಿವಿನ ಕುರುಹೂ ಕಾಣುತ್ತಿರಲಿಲ್ಲ.

ಅವರ ಸಂಗೀತ ಸೇವೆಯನ್ನು ಪರಿಗಣಿಸಿದ ಭಾರತ ಸರ್ಕಾರ, ಪದ್ಮಭೂಷಣ (1987) ಮತ್ತು ಪದ್ಮವಿಭೂಷಣ(2002) ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಇನ್ನೊಂದು ವಾರದಲ್ಲಿ (ಏಪ್ರಿಲ್ 10) ತಮ್ಮ 85 ವರ್ಷದ ಹುಟ್ಟಿದ ದಿನವನ್ನು ಆಚರಿಸಿಕೊಳ್ಳಲಿದ್ದ ಕಿಶೋರಿ ನಿದ್ದೆಯಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಇಬ್ಬರು ಮಕ್ಕಳು ಮತ್ತು ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ