ಎಲೆಕ್ಟ್ರಾನಿಕ್ ಮತಯಂತ್ರ ಬೇಡವೇ ಬೇಡ
ನವದೆಹಲಿ: ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುವಂತೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಮಾರ್ಪಡಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್, ಎಸ್‌ಪಿ ಮತ್ತು ಬಿಎಸ್‌ಪಿ ರಾಜ್ಯಸಭೆಯಲ್ಲಿ ಗದ್ದಲ ನಡೆಸಿದವು. ಮುಂದೆ ನಡೆಯುವ ಚುನಾವಣೆಗಳಲ್ಲಿ ಮತಯಂತ್ರಗಳನ್ನು ಬಳಸಲೇಬಾರದು ಎಂದು ಒತ್ತಾಯಿಸಿದವು. ಪರಿಣಾಮವಾಗಿ ಅಲ್ಪಕಾಲ ಸದನವನ್ನು ಮುಂದೂಡಬೇಕಾಯಿತು.
‘ಸರ್ಕಾರ ವಂಚಕ’ ಎಂದು ಘೋಷಣೆ ಕೂಗುತ್ತಾ ವಿರೋಧ ಪಕ್ಷಗಳ ಸದಸ್ಯರು ಸಭಾಪತಿ ಪೀಠದ ಮುಂದೆ ಜಮಾಯಿಸಿದರು. ಉಪಸಭಾಪತಿ ಪಿ.ಜೆ. ಕುರಿಯನ್ ಅವರು ಸದನವನ್ನು ಏಳು ನಿಮಿಷ ಮುಂದೂಡಿದರು.
ವಿರೋಧ ಪಕ್ಷಗಳ ಆರೋಪವನ್ನು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಅಷ್ಟೇ ಬಲವಾಗಿ ವಿರೋಧಿಸಿದರು. ಮತಯಂತ್ರಗಳ ಬಗ್ಗೆ ಯಾರಿಗಾದರೂ ಅನುಮಾನ ಇದ್ದರೆ ಆ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಬೇಕು.
ಈ ವಿಚಾರದಲ್ಲಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಬಾರದು ಎಂದರು.
ಕೆಲವು ರಾಜಕೀಯ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟೀಕರಣ ನೀಡಿದೆ ಎಂದೂ ಅವರು ತಿಳಿಸಿದರು.
ಸರ್ಕಾರವನ್ನು ‘ವಂಚಕ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಕರೆದದ್ದು ಗದ್ದಲಕ್ಕೆ ಕಾರಣವಾಯಿತು. ಜನರು ಹಾಗೂ ಪ್ರಜಾಪ್ರಭುತ್ವವನ್ನು ಮಾಯಾವತಿ ಅವರು ಅವಮಾನಿಸಿದ್ದಾರೆ ಎಂದು ನಖ್ವಿ ಹೇಳಿದರು.
ಮಾಯಾವತಿ ಅವರ ಹೇಳಿಕೆ ಬಿಜೆಪಿಯನ್ನು ಕುರಿತೇ ಹೊರತು ಜನರ ಬಗ್ಗೆ ಅಲ್ಲ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿದವು. 2004 ಮತ್ತು 2009ರಲ್ಲಿ ಬಿಹಾರ ಮತ್ತು ದೆಹಲಿ ಹಾಗೂ ಈ ಬಾರಿ ಪಂಜಾಬ್‌ನಲ್ಲಿ ನಡೆದ ಚುನಾವಣೆಗಳಲ್ಲಿಯೂ ಇವೇ ಮತಯಂತ್ರಗಳನ್ನು ಬಳಸಲಾಗಿತ್ತು. ಅಲ್ಲೆಲ್ಲ ಬಿಜೆಪಿ ಸೋತಿದೆ. ಆಗ ಕಾಂಗ್ರೆಸ್ ಯಾವುದೇ ವಿರೋಧ ಮಾಡಿಲ್ಲ ಎಂದು ನಖ್ವಿ ಹೇಳಿದರು.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಗುಲಾಂ ನಬಿ ಆಜಾದ್ ಅವರು ಅದಕ್ಕೆ ತಿರುಗೇಟು ನೀಡಿ, ಆಗ ಆಡಳಿತದಲ್ಲಿದ್ದ ಕಾಂಗ್ರೆಸ್ ಮತಯಂತ್ರಕ್ಕೆ ಕನ್ನ ಹಾಕಿಲ್ಲ ಎಂದರು. ಆದರೆ ಈಗ ಅಂತಹ ಪ್ರವೃತ್ತಿ ಆರಂಭವಾಗಿದೆ ಎಂದು ಆರೋಪಿಸಿದರು.
ಮುಂದೆ ನಡೆಯಲಿರುವ ಚುನಾವಣೆ ಗಳು ಮತ್ತು ಉಪ ಚುನಾವಣೆಗಳಲ್ಲಿ ಮತಯಂತ್ರಗಳ ಬದಲಿಗೆ ಮತಪತ್ರಗಳನ್ನೇ ಬಳಸಬೇಕು ಎಂದು ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್, ಎಸ್‌ಪಿಯ ರಾಮ್‌ಗೋಪಾಲ್ ಯಾದವ್ ಆಗ್ರಹಿಸಿದರು.
ಮಧ್ಯಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಡೆದ ಮತಯಂತ್ರ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಯಾವ ಗುಂಡಿ ಒತ್ತಿದರೂ ಮತ ಬಿಜೆಪಿಗೇ ಚಲಾವಣೆಯಾದ ಪ್ರಸಂಗವನ್ನು ವಿರೋಧ ಪಕ್ಷಗಳ ಸದಸ್ಯರು ಉಲ್ಲೇಖಿಸಿದರು.
ಮುಕ್ತ ಮತ್ತು ನ್ಯಾಯಬದ್ಧ ಚುನಾವಣೆಯೇ ಭಾರತೀಯ ಪ್ರಜಾಪ್ರಭುತ್ವದ ತಳಹದಿ. ಆದರೆ ಇದೇ ಮೊದಲ ಬಾರಿ ಚುನಾವಣೆ ಬಗ್ಗೆ ಪ್ರಶ್ನೆಗಳು ಮೂಡಿವೆ ಎಂದು ಆಜಾದ್ ಹೇಳಿದರು.
ಇವಿಎಂ ಸರಿಯಿಲ್ಲ ಎಂದವರ ಬಗ್ಗೆ ನಾಯ್ಡು ವ್ಯಂಗ್ಯ: ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂ) ಸರಿಯಿಲ್ಲ ಎನ್ನುತ್ತಿರುವ ರಾಜಕೀಯ ಎದುರಾಳಿಗಳ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು, ‘ಹೀಗೆ ಹೇಳುವವರ ಪಾಲಿಗೆ ಇವಿಎಂಗಳು ಎವೆರಿ ವೋಟ್ ಮೋದಿ (ಪ್ರತಿ ಮತವೂ ಮೋದಿಗೆ) ಎಂಬಂತಾಗಿವೆ’ ಎಂದರು. ಅಭಿವೃದ್ಧಿ ಪರ ಇರುವ ಜನರ ಮನಸ್ಸಿನಲ್ಲಿ ಒಂದು ಬದಲಾವಣೆ ಕಂಡುಬಂತು. ಅಭಿವೃದ್ಧಿಪರ ಕೆಲಸಗಳನ್ನು ಬಿಜೆಪಿ ಮಾಡಬಲ್ಲದು ಎಂದರು.
ಗಾಯಕ್‌ವಾಡ್‌ಗೆ ನಿಷೇಧ: ನಿಲುವಳಿ ನೋಟಿಸ್
ಸಂಸದ ರವೀಂದ್ರ ಗಾಯಕ್‌ವಾಡ್ ಮೇಲೆ ದೇಶದ ವಿಮಾನ ಯಾನ ಸಂಸ್ಥೆಗಳು ಹೇರಿರುವ ನಿಷೇಧದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಶಿವಸೇನಾ ಸಜ್ಜಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ನಿಲುವಳಿ ಸೂಚನೆ ಮಂಡಿಸಲು ನೋಟಿಸ್ ನೀಡಲಾಗಿದೆ.
ಏರ್ ಇಂಡಿಯಾ ವ್ಯವಸ್ಥಾಪಕರೊಬ್ಬರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿರುವ ಗಾಯಕ್‌ವಾಡ್ ಮೇಲೆ ದೇಶದ ಎಲ್ಲ ಪ್ರಮುಖ ವಿಮಾನ ಯಾನ ಸಂಸ್ಥೆಗಳು ನಿಷೇಧ ಹೇರಿವೆ.
ಹಲ್ಲೆ ಬಗ್ಗೆ ಗಾಯಕ್‌ವಾಡ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ವಿಮಾನ ಪ್ರಯಾಣ ನಿಷೇಧ ಹಿಂದೆಗೆಯಲು ನಾಗರಿಕ ವಾಯುಯಾನ ಸಚಿವಾಲಯ ಮುಂದಾಗಿಲ್ಲ ಎಂಬುದು ಶಿವಸೇನಾದ ಅತೃಪ್ತಿ. ಹಾಗಾಗಿ ಸೇನಾದ ಸಂಸದೀಯ ಪಕ್ಷ ಬುಧವಾರ ಹಲವು ಬಾರಿ ಸಭೆ ಸೇರಿ ಚರ್ಚೆ ನಡೆದಿದೆ.
ಲೋಕಸಭೆ ಕಲಾಪದಲ್ಲಿ ಭಾಗವಹಿಸಲು ಗುರುವಾರ ದೆಹಲಿಗೆ ತೆರಳುವುದಕ್ಕಾಗಿ ಗಾಯಕ್‌ವಾಡ್ ಅವರಿಗೆ ಸೇನಾ ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ ಎಂದು ತಿಳಿದು ಬಂದಿದೆ.
‘ಸದನದ ಹಕ್ಕನ್ನು ರಕ್ಷಿಸುವುದು ಸ್ಪೀಕರ್ ಕರ್ತವ್ಯ. ಆದರೆ ನಮ್ಮ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಸಮಸ್ಯೆ ಪರಿಹಾರ ಆಗದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ. ಸರ್ಕಾರದ ಭಾಗವಾಗಿರುವ ನಾವು ಪ್ರತಿಭಟನೆ ನಡೆಸಲು ಬಯಸುವುದಿಲ್ಲ’ ಎಂದು ಸೇನಾ ಸಂಸದ ಆನಂದರಾವ್ ಅಡ್ಸುಲ್ ಹೇಳಿದ್ದಾರೆ.
ಗಾಯಕ್‌ವಾಡ್ ಎದುರಿಸಿದಂತಹ ಸಮಸ್ಯೆಯನ್ನು ಇತರ ಸಂಸದರೂ ಎದುರಿಸಿದ್ದಾರೆ. ಖಾಸಗಿ ವಿಮಾನ ಯಾನ ಸಂಸ್ಥೆಗಳು ದೌರ್ಜನ್ಯ ನಡೆಸಲು ಯತ್ನಿಸುತ್ತಿವೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಅಡ್ಸುಲ್ ಹೇಳಿದ್ದಾರೆ.
₹2,000 ನೋಟು ರದ್ದು ಇಲ್ಲ
ಹೊಸ ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆಯುವುದಿಲ್ಲ ಎಂದು ರಾಜ್ಯಸಭೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ. ‘ನಾವು ನಕಲಿ ನೋಟುಗಳನ್ನು ಜಪ್ತಿ ಮಾಡುತ್ತಿದ್ದೇವೆ. ₹2,000ದ ನೋಟು ರದ್ದಾಗಲಿದೆ ಎಂಬ ವದಂತಿಗಳು ಹೊರಗೆ ಇವೆ. ಆದರೆ ವದಂತಿ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ