*ಗಾಯತ್ರಿ ಮಂತ್ರ* ವಿಶ್ವಾಮಿತ್ರ ಋಷಿಗಳು ಹೇಳುವಂತೆ 'ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ ವೇದದಲ್ಲಿಯೇ ಮತ್ತೊಂದಿಲ್ಲ'. ಭಗವಾನ್ ಮನು ಹೇಳುತ್ತಾನೆ, 'ಬ್ರಹ್ಮದೇವರು ಮೂರು ವೇದದ ಸಾರವನ್ನು ಗಾಯತ್ರಿ ಮಂತ್ರದ ಮೂರು ಚರಣಗಳಲ್ಲಿ ತುಂಬಿಸಿಕೊಟ್ಟಿರುವವರು' ಗಾಯತ್ರಿಯಿಂದ ಸರ್ವ ರೀತಿಯ ಸಿದ್ಧಿಪ್ರಾಪ್ತಿಯಾಗುತ್ತದೆ...
ಉಪನಯನವೆಂಬ ಸಂಸ್ಕಾರದ ಮೂಲಕ ಏಳು ವರ್ಷ ಪೂರ್ತಿಯಾಗಿ ಎಂಟನೇ ವರ್ಷಕ್ಕೆ ಕಾಲಿಡುವಾಗ ದ್ವಿಜ ಅಥವಾ ಬ್ರಾಹ್ಮಣನೆನಿಸಿ ಬ್ರಹ್ಮಜ್ಞಾನವನ್ನು ಪಡೆಯುವ ಅರ್ಹತೆಯನ್ನು ಒಬ್ಬ ಹುಡುಗ ಪಡೆಯುತ್ತಾನೆ. ಈ ಮೂಲಕ ಗಾಯತ್ರಿ ಮಂತ್ರದ ಉಪದೇಶ ಪಡೆಯುತ್ತಾನೆ.
ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ.
ಉಪನಯನ ಸಂಸ್ಕಾರದ ನಂತರದ ಕ್ಷಣವೇ ಬ್ರಾಹ್ಮಣನೆನಿಸಿಕೊಂಡ ಯಾವನೇ ವ್ಯಕ್ತಿ ಬ್ರಹ್ಮಜ್ಞಾನವನ್ನು ಕ್ರಮೇಣ ಪಡೆಯುತ್ತಾ, ಸಾತ್ವಿಕ ಬುದ್ಧಿ ಹೊಂದಿ ಸದಾ ಇನ್ನೊಬ್ಬರ ಒಳ್ಳೆಯದನ್ನೇ ಹಾರೈಸುತ್ತಾನೆ. ಎಲ್ಲರಿಗೂ ಸನ್ಮಾರ್ಗದಲ್ಲಿ ಹೋಗುವ ದಾರಿ ತೋರಿಸುತ್ತಾನೆ. ಅವನೇ ನಿಜವಾದ ಬ್ರಾಹ್ಮಣ.
ಪದ್ಮಪುರಾಣದಲ್ಲಿ ಬ್ರಹ್ಮನೇ ನಾರದರಿಗೆ ನಿಜವಾದ ಬ್ರಾಹ್ಮಣ ಎಂದರೆ ಯಾರು? ಎಂಬ ವಿವರಣೆಯನ್ನು ವಿವರಿಸಿದ್ದಾರೆ.
'ಜನ್ಮನಾ ಚಾಯತೇ ಜಂತುಃ ಸಂಸ್ಕಾರಾತ್ ದ್ವಿಜ ಉಚ್ಯತೆ'- ಅಂದರೆ ಹುಟ್ಟಿನಿಂದ ಎಲ್ಲರೂ ಶ್ರೀಸಾಮಾನ್ಯರೇ, ಸಂಸ್ಕಾರ ಬಲದಿಂದ ದ್ವಿಜನಾಗಿ ಬ್ರಹ್ಮಜ್ಞಾನ ಪಡೆಯಲು ಅರ್ಹನಾಗುತ್ತಾನೆ.
ಸಂಧ್ಯಾವಂದನೆ ಮಾಡುವುದು ಬ್ರಾಹ್ಮಣನೆನಿಸಿಕೊಂಡವನ ಆದ್ಯ ಕರ್ತವ್ಯ. ಏಕೆಂದರೆ ಈ ಮೂಲಕ ಪ್ರತಿಯೊಬ್ಬರಿಗೂ ತನ್ನ ಪ್ರವರ ಮತ್ತು ಗೋತ್ರದ ತಿಳಿವಳಿಕೆ ಬರುತ್ತದೆ. ಇದರಿಂದ ಮುಂದಕ್ಕೆ ವಿವಾಹದ ಸಂದರ್ಭದಲ್ಲಿ ಸಗೋತ್ರ ವಿವಾಹದಿಂದ ತಪ್ಪಿಸಿಕೊಳ್ಳಬಹುದು. ಸಗೋತ್ರ ವಿವಾಹ ಮತ್ತು ಹತ್ತಿರದ ಸಂಬಂಧಿಗಳ ವಿವಾಹ ಆರೋಗ್ಯಕರವಲ್ಲ. ಒಂದೇ ರಕ್ತಗುಂಪು ಇರುವ ಗಂಡು ಹೆಣ್ಣು ವಿವಾಹವಾದರೆ ಯಾವ ಸಮಸ್ಯೆಗಳು ಬರುತ್ತವೆ ಎಂಬುದನ್ನು ನಮ್ಮ ಮಹರ್ಷಿಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ.
ಒಬ್ಬ ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ಉನ್ನತ ಹುದ್ದೆಯಲ್ಲಿರಲಿ ಗಾಯತ್ರಿ ಮಂತ್ರದ ಉಪದೇಶವನ್ನು ಪಡೆದ ನಂತರ ನಿರಂತರ ಪ್ರತಿದಿನ ತಪ್ಪದೇ ತನ್ನ ಜೀವನದುದ್ದಕ್ಕೂ ಉಚ್ಚರಿಸತಕ್ಕದ್ದು. ಏಕಂದರೆ ಎಲ್ಲಾ ಮಂತ್ರ, ಪೂಜೆ, ಪುನಸ್ಕಾರಗಳಿಗೂ ಅತೀ ಎತ್ತರದಲ್ಲಿ ರಾರಾಜಿಸುವುದು ಗಾಯತ್ರಿ ಮಹಾಮಂತ್ರ. ಗಾಯತ್ರಿ ಕಾಮಧೇನು ಅಥರ್ವವೇದದಲ್ಲಿ ಗಾಯತ್ರಿ ಮಂತ್ರ-ಶಕ್ತಿ, ಧನ ಸಂಪತ್ತು ಮತ್ತು ಬ್ರಹ್ಮತೇಜಸ್ಸನ್ನು ನೀಡುವ ಮಹಾಮಾತೆ ಎಂದಿದ್ದಾರೆ.
ವಿಶ್ವಾಮಿತ್ರ ಋಷಿಗಳು ಹೇಳುವಂತೆ 'ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ ವೇದದಲ್ಲಿಯೇ ಮತ್ತೊಂದಿಲ್ಲ'. ಭಗವಾನ್ ಮನು ಹೇಳುತ್ತಾನೆ, 'ಬ್ರಹ್ಮದೇವರು ಮೂರು ವೇದದ ಸಾರವನ್ನು ಗಾಯತ್ರಿ ಮಂತ್ರದ ಮೂರು ಚರಣಗಳಲ್ಲಿ ತುಂಬಿಸಿಕೊಟ್ಟಿರುವವರು' ಗಾಯತ್ರಿಯಿಂದ ಸರ್ವ ರೀತಿಯ ಸಿದ್ಧಿಪ್ರಾಪ್ತಿಯಾಗುತ್ತದೆ.
ಮಹರ್ಷಿ ವ್ಯಾಸರು ಹೇಳುವಂತೆ ಗಾಯತ್ರಿಯನ್ನು ಅಲ್ಲಗಳೆದು ಅನ್ಯ ಉಪಾಸನೆ ಮಾಡುವಂಥ ವ್ಯಕ್ತಿ ಪಕ್ವಾನ್ನವನ್ನು ತೊರೆದು ಭಿಕ್ಷಾನ್ನವನ್ನು ಸ್ವೀಕರಿಸುವ ಮೂರ್ಖರಿಗೆ ಸಮ. ಮಂದ ಬುದ್ಧಿಯ ಸ್ಮರಣ ಶಕ್ತಿ ಕಡಿಮೆ ಇರುವ ವಿದ್ಯಾರ್ಥಿಗಳು 108 (ನೂರ ಎಂಟು) ಬಾರಿ ಜಪಿಸಬೇಕು. *ಗಾಯತ್ರಿ ತ್ರಿಗುಣಾತ್ಮಕ*, *ಗಾಯತ್ರಿ ಮಂತ್ರ ಪಠಿಸುತ್ತಿರುವಾಗ ತುಟಿ ಅಲುಗಾಡಬೇಕಲ್ಲದೆ ಇತರರಿಗೆ ಕೇಳಬಾರದು.*
ಐಶ್ವರ್ಯ ಹಾಗೂ ಶೋಭೆಯಿಂದ ಕೂಡಿದ ಗಾಯತ್ರಿಯು ಲೋಕಕ್ಕೆ ತಾಯಿ. ಪರಬ್ರಹ್ಮನ ಸ್ವರೂಪವುಳ್ಳವಳು, ಶ್ರೇಷ್ಠ ಸಂಪತ್ತನ್ನು ಕೊಡುವವಳು, ಜಪಿಸಲು ಯೋಗ್ಯಳು, ಬ್ರಹ್ಮತೇಜಸ್ಸನ್ನು ಹೆಚ್ಚಿಸುವವಳು ಆಗಿದ್ದಾಳೆ.
*ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹೀ*
*ಧಿಯೋ ಯೋನಃ ಪ್ರಚೋದಯಾತ್*॥
ಈ ಮಂತ್ರ ಗಾಯತ್ರಿ ಛಂದಸ್ಸಿನಲ್ಲಿದೆ. ಆದುದರಿಂದ ಇದು ಗಾಯತ್ರಿ, ಇದು ಸಾವಿತ್ರಿಯೂ ಹೌದು.
ಸರ್ವೇಷಾಂ ಜಪ ಸೂಕ್ತಾನಾಂ ಗಾಯತ್ರೀ ಪರಮೋ ಜಪ॥
ದುರ್ಲಭಾ ಸರ್ವ ಮಂತ್ರೇಷು, ಗಾಯತ್ರೀ ಪ್ರಣವಾನ್ವಿತಾ॥ (ಬೃಹತ್ ಪರಾಶರ ಸಂಧ್ಯಾ ಭಾಷ್ಯ)
*ಎಲ್ಲ ಜಪಸೂಕ್ತಗಳ ಪೈಕಿ ಗಾಯತ್ರಿಯೇ ಶ್ರೇಷ್ಠ.* ಗಾಯತ್ರಿ ಮಂಜರಿಯಲ್ಲಿ ಶಿವನು ಪಾರ್ವತಿಗೆ ಹೇಳುತ್ತಾನೆ - ಗಾಯತ್ರಿಯು ವೇದಗಳ ಮಾತೆ ಅವಳೇ ಭೂಮಿಯ ಮೇಲಿನ ಮೊತ್ತ ಮೊದಲ ಶಕ್ತಿ, ಎಲ್ಲಾ ಬ್ರಾಹ್ಮಣರು ಆದಿ ಶಕ್ತಿ ಹಾಗೂ ವೇದಮಾತೆಯಾದ ಗಾಯತ್ರಿಯನ್ನು ಉಪಾಸಿಸುತ್ತಾರೆ. ಆದ್ದರಿಂದ ಅವರೆಲ್ಲರೂ ಶಾಕ್ತರೇ ಹೊರತು ಶೈವರೂ ಅಲ್ಲ ವೈಷ್ಣವರೂ ಅಲ್ಲ.
ಗಾಯತ್ರಿ ಮಂತ್ರದ ಅರ್ಥ
ಅನಂತ ಸ್ವರೂಪನಾದ ಭೂಮಿ, ಅಂತರಿಕ್ಷ ಹಾಗೂ ಸ್ವರ್ಗ ಲೋಕಗಳಲ್ಲಿ ಮೂರು ವೇದಗಳಲ್ಲಿ ಹಾಗೂ ಮೂರು ಕಾಲಗಳಲ್ಲಿ ವ್ಯಾಪಿಸಿರುವ ಯಾವ ಪರಮಾತ್ಮನನ್ನು ಬುದ್ಧಿ, ಮಾತು ಹಾಗೂ ಕರ್ಮಗಳನ್ನು ಪ್ರೇರೇಪಿಸುತ್ತಾನೋ ಅಂಥ ಪ್ರಕಾಶ ಮಾನವಾದ ಜಗತ್ತಿನ ಸೃಷ್ಟಿಗೆ ಕಾರಣನಾದ ಸವಿತೃ ದೇವನ ಶ್ರೇಷ್ಠವಾದ ತೇಜಸ್ಸನ್ನು ಧ್ಯಾನಿಸುತ್ತೇವೆ.
- ಕೆ. ಸುಬ್ರಹ್ಮಣ್ಯ ಆಚಾರ್ಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ