ಗುರುವಾರ, ಏಪ್ರಿಲ್ 6, 2017

ಗಲ್ಫ್ ಕಂಫನಿಗೆ ಇದ್ದಕ್ಕಿದ್ದಂತೆ CEO ಆದ ಧೋನಿ

ಗಲ್ಫ್ ಕಂಪನಿಗೆ ಇದ್ದಕ್ಕಿದ್ದಂತೆ CEO ಆದ ಧೋನಿ!

ಮುಂಬೈ, ಏಪ್ರಿಲ್ 4: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೋಮವಾರ ಇದ್ದಕ್ಕಿದ್ದಂತೆ ಗಲ್ಫ್ ಆಯಿಲ್ ಇಂಡಿಯಾ ಕಂಪನಿಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕಗೊಂಡರು.

ಇದೇನು, ಧೋನಿ ಹೀಗೆ ಏಕಾಏಕಿ ತಮ್ಮ ವೃತ್ತಿಜೀವನ ಬದಲಿಸಿದರೇ ಅಥವಾ ಈ ವೃತ್ತಿ ಜೀವನ ಆಯ್ಕೆಗಾಗಿಯೇ ತಮ್ಮ ಕ್ರಿಕೆಟ್ ಬದುಕು ತೊರೆದರೇ ಎಂಬ ಗುಮಾನಿ ಎಲ್ಲರಲ್ಲಿ ಮೂಡುವುದು ಸಹಜ.

ಆದರೆ, ವಿಚಾರ ಅದಲ್ಲ. ತಮ್ಮ ಕಂಪನಿಯ ಉದ್ಯೋಗಿಗಳಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದಾಗಿಯೇ ಧೋನಿಯವರನ್ನು ತನ್ನ ಕಚೇರಿಗೆ ಕರೆಯಿಸಿಕೊಂಡಿದ್ದ ಕಂಪನಿಯ ಆಡಳಿತ ಮಂಡಳಿ, ಒಂದು ದಿನದ ಮಟ್ಟಿಗೆ ಅವರನ್ನು ಸಿಇಒ ಸ್ಥಾನಕ್ಕೆ ನೇಮಕ ಮಾಡಿತ್ತು.

ಧೋನಿ ಹೀಗೆ ಬರುತ್ತಾರೆಂದು ಕಂಪನಿಯ ನೌಕರರಿಗೆ ಗೊತ್ತೇ ಇರಲಿಲ್ಲವಂತೆ. ಇದ್ದಕ್ಕಿದ್ದಂತೆ, ಸೋಮವಾರ ಬೆಳಗ್ಗೆ ನೀಲಿ ಸೂಟ್ ಧರಿಸಿ ಮುಂಬೈನ ಅಂಧೇರಿಯಲ್ಲಿನ ಕಂಪನಿಗೆ ಆಗಮಿಸಿದ ಧೋನಿಯನ್ನು ಕಂಡ ಕೂಡಲೇ ಇಡೀ ಕಚೇರಿಯ ಸಿಬ್ಬಂದಿ ಅಚ್ಚರಿಗೊಂಡರಂತೆ.
ಅಷ್ಟೇ ಅಲ್ಲ, ಧೋನಿ ನಮ್ಮ ಕಂಪನಿ ಹೊಸ ಸಿಇಒ ಎಂಬ ವಿಚಾರ ತಿಳಿದ ಮೇಲಂತೂ ಮತ್ತಷ್ಟು ಥ್ರಿಲ್ ಆದರಂತೆ.

ಹಾಗೆ, ಎಲ್ಲರಿಗೂ ಅಚ್ಚರಿ ನೀಡಿದ ಧೋನಿ, ಕಂಪನಿಯ ವ್ಯವಸ್ಥಾಪಕರು ಮತ್ತಿತರನ್ನು ಪರಿಚಯ ಮಾಡಿಕೊಂಡ ನಂತರ, ಕೆಲವಾರು ಸಭೆಗಳನ್ನು ನಡೆಸಿದ್ದಾರೆ. ಆಡಳಿತಾತ್ಮಕವಾಗಿ ಕೆಲವು ಚಿಕ್ಕಪುಟ್ಟ ನಿರ್ಧಾರಗಳನ್ನೂ ಕೈಗೊಂಡಿದ್ದಾರೆಂದು ಅವರ ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಅರುಣ್ ಪಾಂಡೆ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ