ಭಾನುವಾರ, ಏಪ್ರಿಲ್ 9, 2017

ಆಶ್ವಾಸನೆಗಳು ಕಾಗದಕ್ಕಷ್ಟೆ ಸೀಮಿತವೇ?: ನ್ಯಾ.ಖೇಹರ್

ಆಶ್ವಾಸನೆಗಳು ಕಾಗದಕ್ಕಷ್ಟೇ ಸೀಮಿತವೇ?: ನ್ಯಾ.ಖೆಹರ್‌

ನವದೆಹಲಿ: ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಆಶ್ವಾಸನೆಗಳು ಕೇವಲ ಕಡತದಲ್ಲಷ್ಟೇ ಉಳಿದುಕೊಳ್ಳುತ್ತಿವೆ. ಅವುಗಳನ್ನು ಈಡೇರಿಸುವ ಇಚ್ಛಾಶಕ್ತಿ ಪಕ್ಷಗಳಿಗಾಗಲೀ, ನಾಯಕರಿಗಾಗಲೀ ಇಲ್ಲ. ಇದಕ್ಕೆ ರಾಜಕೀಯ ಪಕ್ಷಗಳನ್ನೇ ಹೊಣೆಯಾಗಿಸಬೇಕು ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೆಹರ್‌ ಹೇಳಿದ್ದಾರೆ.

ಶುಕ್ರವಾರವಷ್ಟೇ ರಾಜ್ಯಸಭೆ ಯಲ್ಲಿ ಹೆದ್ದಾರಿಯಂಚಿನ ಮದ್ಯ ದಂಗಡಿ ನಿಷೇಧ, ರೈತರ ಸಾಲ ಮನ್ನಾ ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ್ದ ತೀರ್ಪುಗಳ ಕುರಿತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯಾಯಾಂಗವು ಕಾನೂನಿನ ವ್ಯಾಪ್ತಿ ಮೀರಿ ಆದೇಶ ನೀಡುತ್ತಿದೆ. ಸುಖಾಸುಮ್ಮನೆ ಹಸ್ತಕ್ಷೇಪ ಮಾಡುತ್ತಿದೆ ಎಂದು ಸಂಸದರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಿಜೆಐ ಖೆಹರ್‌ ಅವರು, ರಾಜಕಾರಣಿಗಳ ಹೊಣೆಗಾರಿಕೆಯನ್ನು ನೆನಪಿಸಿದ್ದಾರೆ.

ಶನಿವಾರ "ಚುನಾವಣಾ ಸಮಸ್ಯೆಗಳ ಮಧ್ಯೆ ಆರ್ಥಿಕ ಪ್ರಗತಿ' ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಸಮ್ಮುಖದಲ್ಲೇ ನ್ಯಾ. ಖೆಹರ್‌ ಈ ಮಾತುಗಳನ್ನಾಡಿದ್ದಾರೆ. "ಇತ್ತೀಚೆಗಿನ ದಿನಗಳಲ್ಲಿ ಪ್ರಣಾಳಿಕೆಯಲ್ಲಿನ ಬಹುತೇಕ ಆಶ್ವಾಸನೆಗಳು ಈಡೇರುವುದೇ ಇಲ್ಲ. ಎಲ್ಲವೂ ಪುಸ್ತಕದಲ್ಲಿಯೇ ಉಳಿದುಕೊಂಡಿರುತ್ತದೆ. ಇದರಿಂದಾಗುವ ಎಲ್ಲಾ ಪರಿಣಾಮಗಳಿಗೆ ಆಯಾ ಪಕ್ಷಗಳೇ ಹೊಣೆಹೊರಬೇಕು. ಜನ ಕೂಡ ಬೇಗ ಆಶ್ವಾಸನೆಗಳನ್ನೆಲ್ಲ ಮರೆಯುತ್ತಾರೆ. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳ ನಾಯಕರು ನಾಚಿಕೆ ಇಲ್ಲದವರಂತೆ ವರ್ತಿಸುತ್ತಾರೆ' ಎಂದಿದ್ದಾರೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಬಿಡು ಗಡೆ ಮಾಡಿರುವ ಪ್ರಣಾಳಿಕೆ ಯಲ್ಲಿ ಆರ್ಥಿಕ ಸುಧಾರಣೆಗಳ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲದೇ ಆಶ್ವಾಸನೆ ನೀಡಿರು ವುದನ್ನು ಗಮನಿಸಬಹು ದಾಗಿದೆ. ಈ ವಿಚಾರವಾಗಿ ಸುಪ್ರೀಂಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದ್ದು,  ಚುನಾವಣಾ ಆಯೋಗ ಸುಪ್ರೀಂ ಆದೇಶದಲ್ಲಿನ ಮಾರ್ಗಸೂಚಿಗಳನ್ನು ನಿರ್ದಾಕ್ಷಿಣ್ಯವಾಗಿ ನಿರ್ವಹಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಆದಲ್ಲಿ ಅಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದೂ ಹೇಳಿದ್ದಾರೆ.

ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರೂ ಸಂವಾದದಲ್ಲಿ ಪಾಲ್ಗೊಂಡಿದ್ದರು.ಇದೇ ವೇಳೆ ಮಾತನಾಡಿದ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, "ದೇಶದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಬಲಿಷ್ಠಗೊಳಿಸಲು ಚುನಾವಣಾ ಸುಧಾರಣೆ ಆಗಬೇಕಾದ ಅಗತ್ಯವಿದೆ,' ಎಂದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ