ಭಾನುವಾರ, ಏಪ್ರಿಲ್ 30, 2017

ವಿಶ್ವದ ದೈತ್ಯ ಗಾತ್ರದ ಮೊಲ ವಿಧಿವಶ

ವಿಶ್ವದ ದೈತ್ಯ ಗಾತ್ರದ ಮೊಲ ವಿಧಿವಶ

  ಲಂಡನ್, ಎ.27: ವಿಶ್ವದ ದೈತ್ಯಗಾತ್ರದ ಮೊಲವೊಂದು ಅಮೆರಿಕ ಏರ್‌ಲೈನ್ಸ್‌ಗೆ ಸೇರಿದ ಚಿಕಾಗೊದಲ್ಲಿರುವ ಪ್ರಾಣಿ ಪಾಲನಾ ಕೇಂದ್ರದಲ್ಲಿ ಸಾವನ್ನಪ್ಪಿದೆ. ಇತ್ತೀಚೆಗಷ್ಟೇ ಪ್ರಯಾಣಿಕರೊಬ್ಬರನ್ನು ಆಸನದಿಂದ ಹೊರಗೆಳೆದು ಅವಮಾನಿಸಿದ್ದ ಅಮೆರಿಕದ ಏರ್‌ಲೈನ್ಸ್ ಈಗ ಮತ್ತೊಂದು ಮುಜುಗರ ಅನುಭವಿಸಿದೆ.

10 ತಿಂಗಳ ಪ್ರಾಯದ ವಿಶೇಷ ತಳಿಗೆ ಸೇರಿದ ಮೂರು ಅಡಿ ಉದ್ದದ ಸಿಮೊನ್ ಹೆಸರಿನ ಈ ದೊಡ್ಡ ಗಾತ್ರದ ಮೊಲವನ್ನು ಲಂಡನ್‌ನಿಂದ ಅಮೆರಿಕಕ್ಕೆ ವಿಮಾನದ ಮೂಲಕ ಕರೆ ತರಲಾಗಿತ್ತು. ವಿಮಾನದಲ್ಲಿ ಪ್ರಯಾಣಿಸುವ ಮೂರು ಗಂಟೆ ಮೊದಲು ಮೊಲದ ಆರೋಗ್ಯವನ್ನು ಪರೀಕ್ಷಿಸಲಾಗಿತ್ತು. ಚಿಕಾಗೊ ಏರ್‌ಪೋರ್ಟ್‌ಗೆ ಸೇರಿದ ಪ್ರಾಣಿ ಪಾಲನಾ ಕೇಂದ್ರಕ್ಕೆ ಕರೆ ಬಂದಾಗ ಮೊಲದ ಆರೋಗ್ಯದ ಸ್ಥಿತಿ ಚೆನ್ನಾಗಿತ್ತು. ಆದರೆ, ಕೆಲವೇ ಸಮಯದ ಬಳಿಕ ಅದು ಸಾವನ್ನಪ್ಪಿದೆ. ಸಿಮೊನ್ ಹೆಸರಿನ ಈ ಮೊಲ ಸೆಲೆಬ್ರಿಟಿಯೊಬ್ಬರಿಗೆ ಸೇರಿದ್ದಾಗಿದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

‘‘ಇಂತಹ ಘಟನೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಇದು ತುಂಬಾ ಬೇಸರದ ವಿಷಯ. ನಮ್ಮ ಕೇರ್ ಸೆಂಟರ್‌ನಲ್ಲಿ ಪ್ರಾಣಿಯೊಂದು ಸಾವನ್ನಪ್ಪಿರುವುದು ತುಂಬಾ ದುಃಖ ತಂದಿದೆ’’ ಎಂದು ಏರ್‌ಲೈನ್ ವಕ್ತಾರರಾದ ಹೊಬರ್ಟ್ ಹೇಳಿದ್ದಾರೆ.

‘‘ಮೊಲ ಸಾಯಲು ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಮೊಲದ ಸಾವಿಗೆ ಕಾರಣವೇನೆಂದು ಪತ್ತೆಹಚ್ಚಲು ಪೋಸ್ಟ್ ಮಾರ್ಟಂ ನಡೆಸಲಾಗುವುದು. ಮೊಲದ ಮಾಲಕರಿಗೆ ಪರಿಹಾರವನ್ನು ನೀಡಲಾಗುವುದು’’ಎಂದು ಹೊಬರ್ಟ್ ತಿಳಿಸಿದ್ದಾರೆ.

ಈ ಘಟನೆಯು ಎ.20 ರಂದು ನಡೆದಿದ್ದು, ‘ದಿ ಸನ್’ ನ್ಯೂಸ್ ಪೇಪರ್ ಬುಧವಾರ ಮೊದಲ ಬಾರಿ ವರದಿ ಮಾಡಿತ್ತು. ‘‘ನಾನು ಮೊಲಗಳನ್ನು ವಿಶ್ವದೆಲ್ಲೆಡೆ ಕೊಂಡೊಯ್ದಿದ್ದೇನೆ. ಈರೀತಿ ಈತನಕ ನಡೆದಿಲ್ಲ. ಸಿಮೊನ್ ಹೆಸರಿನ ಮೊಲವನ್ನು ಖರೀದಿಸಿದ ವ್ಯಕ್ತಿ ತುಂಬಾ ಪ್ರಸಿದ್ಧರಾಗಿದ್ದರು’’ ಎಂದು ಎಡ್ವರ್ಡ್ ಹೇಳಿದ್ದಾರೆ.

ಈ ತಿಂಗಳಾರಂಭದಲ್ಲಿ ಅಮೆರಿಕದ ಪ್ರಯಾಣಿಕ ಡಾ. ಡೇವಿಡ್‌ರೊಂದಿಗೆ ಅಮೆರಿಕದ ಏರ್‌ಲೈನ್ಸ್‌ಗೆ ಸೇರಿದ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿತ್ತು. ವಿಮಾನದ ಸಿಬ್ಬಂದಿಗೆ ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಪ್ರಯಾಣಿಕ ಡೇವಿಡ್‌ರನ್ನು ಸೀಟಿನಿಂದ ಎಬ್ಬಿಸಲಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ