ಭಾನುವಾರ, ಏಪ್ರಿಲ್ 9, 2017

ಚನ್ನಕೇಶವ ದೇವಾಲಯದ ಪರವಾಗಿ ನ್ಯಾಯಾಲಯದ ತೀರ್ಪು

ಚನ್ನಕೇಶವ ದೇವಾಲಯದ ಪರವಾಗಿ ನ್ಯಾಯಾಲಯದ ತೀರ್ಪು

ಬೇಲೂರು, ಏ.7- ಚನ್ನಕೇಶವ ದೇವಾಲಯ ಆಸ್ತಿಯ ನಕಲಿ ದಾಖಲೆ ಸೃಷ್ಠಿಸಿ ಪ್ರವಾಸೋಧ್ಯಮ ಇಲಾಖೆಗೆ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ನ್ಯಾಯಾಲಯವು ದೇವಾಲಯದ ಪರವಾಗಿ ತೀರ್ಪು ನೀಡಿದೆ ಎಂದು ಚನ್ನಕೇಶವ ದೇವಾಲಯ ಆಸ್ತಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಕೆ.ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಾಲಯಕ್ಕೆ ಸೇರಿದ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಪ್ರವಾಸೋಧ್ಯಮ ಇಲಾಖೆಗೆ ಮಾರಾಟ ಮಾಡಿದ್ದವರ ವಿರುದ್ದ ಆಸ್ತಿಯೂ ದೇವಾಲಯಕ್ಕೆ ಸೇರಿದ್ದೆಂದು ದೇವಾಲಯ ವ್ಯವಸ್ಥಾಪನ ಸಮಿತಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.ಆದರಂತೆ ನ್ಯಾಯಾಲಯದಲ್ಲಿ ಆಸ್ತಿಯೂ ದೇವಾಲಯಕ್ಕೆ ಸೇರಿದ್ದೆಂದು ತೀರ್ಪು ಬಂದಿರುವುದರಿಂದ ಆಸ್ತಿಯ ನಕಲಿ ದಾಖಲೆ ಸೃಷ್ಠಿಸಿದ್ದ ಪ್ರತಿವಾದಿಗಳಿಗೆ ನ್ಯಾಯಾಲಯ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದರು.

ಚನ್ನಕೇಶವ ದೇವಾಲಯದ ಆಸ್ತಿಯನ್ನು ಯಾವುದೆ ಕಾರಣಕ್ಕೂ ಮಾರಾಟವಾಗಲಿ ಅಥವಾ ಪರ ಬಾರೆಯಾಗಲಿ ಮಾಡಬಾರದು. ಆ ರೀತಿ ಮಾಡಲು ಮುಂದಾದಲ್ಲಿ ಚನ್ನಕೇಶವ ದೇವಾಲಯ ಆಸ್ತಿ ಹಿತ ರಕ್ಷಣಾ ಸಮಿತಿಯಿಂದ ಉಗ್ರವಾದ ಹೊರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸಮಿತಿ ಗೌರವಧ್ಯಕ್ಷ ಕೆ.ಎಸ್.ಪೂರ್ಣೇಶ್  ಮಾತನಾಡಿ, ಈಗಾಗಲೆ ದೇವಾಲಯದ ಆಸ್ತಿಯನ್ನು ಕಬಳಿಸುತ್ತಿರುವವರ ಗುಂಪು ಮತ್ತಷ್ಟು ನಕಲಿ ದಾಖಲೆಗಳನ್ನು ಸೃಷಿಸಿ ಸರ್ಕಾರಿ ಮತ್ತು ಇತರೆ ಆಸ್ತಿಯನ್ನು ಕಬ್ಬಳಿಸುತ್ತಿರುವುದು ಕಂಡು ಬಂದಿದ್ದು, ಇವರಿಗೆ ಉನ್ನತ ಹುದ್ದೆಗಳಲ್ಲಿರುವ ಜನಪ್ರತಿನಿಧಿಗಳೆ ಬೆಂಬಲ ನೀಡುತಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯ ಆಸ್ತಿ ಹಿತರಕ್ಷಣಾ ಸಮಿತಿಯ ಗಂಗೇಶ್. ಕೆ.ಸುದರ್ಶನ್. ರಂಗನಾಥ್ ಇದ್ದರು.

ಬೇಲೂರಿನ ಚನ್ನಕೇಶವ ದೇಗುಲಕ್ಕೆ 900 ವರ್ಷ ಇತಿಹಾಸ

ಬೇಲೂರು, ಮಾ.14- ಶಿಲ್ಪಕಲೆಯ ತವರೂರೆಂದೇ ಪ್ರಸಿದ್ಧಿ ಪಡೆದಿರುವ ವಿಶ್ವ ಪ್ರವಾಸಿ ತಾಣ ಹಾಸನ ಜಿಲ್ಲೆಯ ಬೇಲೂರು ಚನ್ನಕೇಶವ ದೇವಾಲಯ ನಿರ್ಮಾಣವಾಗಿ 900 ವರ್ಷಗಳು ಕಳೆದಿದೆ..! ಇತಿಹಾಸದ ಪುಟಗಳಲ್ಲಿ ಬರೆಯಲ್ಪಟ್ಟ ಬೇಲೂರು-ಹಳೇಬೀಡುಗಳ ದೇವಾಲಯಗಳ ಸೊಬಗನ್ನು ನೋಡಲು ಕಲಾ ರಸಿಕರ, ಪ್ರವಾಸಿಗರ ಪ್ರತಿ ದಿನ ಕೈ ಬೀಸಿ ಕರೆಯುತ್ತಿದೆ.  ವಾಸ್ತುಶಿಲ್ಪಗಳಿಂದ ನಾಡಿನ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಹೊಯ್ಸಳ ರಾಜ ವಿಷ್ಣುವರ್ಧನರ ಕನಸಿನ ಕಲಾಪೂರ್ಣತೆ ಶಿಲ್ಪಕಲೆ, ವಾಸ್ತುಶಿಲ್ಪಗಳು ಅಧುನಿಕ ಜಗತ್ತಿಗೆ ಸವಾಲು ಹಾಕಿವೆ. ಇದು ನಿರ್ಮಾಣಗೊಂಡು 900 ವರ್ಷ ಕಳೆದಿದ್ದರೂ ಕೀರ್ತಿ ಮಾತ್ರ ಕಳೆಗುಂದದೆ ಇರುವುದು ವಿಶೇಷ. ನಾಡಿನಲ್ಲಿ ಶಿಲ್ಪಕಲೆಗಳಿಗೆ ಹೊಯ್ಸಳರ ಕಾಲವು ತಮ್ಮದೆ ಆದ ಕಾಣಿಕೆಯನ್ನೂ ನೀಡಿದೆ. ಪ್ರವಾಸಿ ತಾಣ ಎಂದಾಕ್ಷಣ ಬೇಲೂರು ಹಾಗೂ ಹಳೇಬೀಡು ಕಣ್ಮುಂದೆ ಬರುತ್ತದೆ.
ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ವಿಶ್ವದ ಭೂಪಟದಲ್ಲಿ ತಮ್ಮದೆ ಆದದ ಛಾಪನ್ನು ಮೂಡಿಸಿದ್ದು, ಇಂದಿಗೂ ತಮ್ಮ ನೈಜತೆಯಿಂದ ಕಂಗೊಳಿಸುತ್ತಿವೆ. ಹೊಯ್ಸಳರ ದೊರೆ ವಿಷ್ಣುವರ್ಧನ, ಬೇರೆ ಬೇರೆ ರಾಜರುಗಳ ವಿರುದ್ದ ಯುದ್ದಗಳಲ್ಲಿ ಜಯ ಗಳಿಸಿದ ನೆನಪಿಗಾಗಿ ದೇವಾಲಯವನ್ನು ಕಟ್ಟಿಸಿದ ಎನ್ನಲಾಗಿದೆ. ಬೇಲೂರು ದೇವಾಲಯವು ಬೇರೆ ದೇವಾಲಯಕ್ಕಿಂತ ಶ್ರೇಷ್ಠ ಶಿಲ್ಪಕಲೆಗಳಿಗಿಂತ ವಿಭಿನ್ನವಾಗಿರುವುದಕ್ಕೆ ಸಾಕ್ಷಿಯಾಗಿದೆ.

ರಾಜ ವಿಷ್ಣುವರ್ಧನನು ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯದ ನಿರ್ಮಾಣವನ್ನು ಶಾಸನದಲ್ಲಿರುವಂತೆ ಕಟ್ಟಿಸಿ ಶಕ 1039ರ ಹೇಮಲಂಬಿ ಸಂವತ್ಸರದ ಚೈತ್ರ ಶುದ್ದ ಪಂಚಮಿ ವಡ್ಡವಾರದಂದು(ಮಂಗಳವಾರ)ನೀಡಿದ್ದಾರೆ. ಕ್ರಿ.ಶ. ಪ್ರಕಾರ ಇದು 1117ರ ಮಾ.10 ಶನಿವಾರ ಆಗುತ್ತದೆ. ಈ ಪ್ರಕಾರದಲ್ಲಿ 2017ರ ಮಾ.10ಕ್ಕೆ 900 ವರ್ಷಗಳು ಪೂರ್ಣವಾಗಿದೆ.  ಇತಿಹಾಸವನ್ನು ಮೆಲುಕು ಹಾಕಿದರೆ ಈಗಿರುವ ಬೇಲೂರಿನ ಮೂಲ ಹೆಸರು ಬೆಲಹೂರು ಕಾಲ ಕ್ರಮೇಣ ಬೆಲವೂರು, ಬೇಲೂರು ಆಗಿರಬಹದು. ಚನ್ನಕೇಶವ ದೇವಾಲಯವು ಪ್ರತಿಷ್ಠಾಪನೆಯ ಕಾಲಕ್ಕೆ ಸಂಸ್ಕøತ ಶಾಸನಗಳಲ್ಲಿ ಬೇಲಪುರ ಎಂಬುದನ್ನು ವೇಲಾಪುರಿ ಎಂದು ಕರೆಯಲಾಗಿದೆ. ವೇಲಾಪುರಿಯಿಂದ ಬೇಲೂರು ಪದ ಹುಟ್ಟಿದೆ ಎಂದು ಕೆಲವರ ಭಾವನೆಯಿದೆ. ಆದರೆ ವೇಲಾಪುರ ಎಂಬ ನಾಮರೂಪ ಕ್ರಿ.ಶ.1117 ಕ್ಕಿಂತ ಮೊದಲು ಕಾಣುವುದಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಬೇಲೂರು ದೇವಾಲಯದ ಬಗ್ಗೆ ಕೆಲ ಐತಿಹ್ಯಗಳಿವೆ. ಬೇಲೂರು ದೇವಾಲಯ ನಿರ್ಮಿಸಿಬೇಕು ಎಂದು ಚನ್ನಕೇಶವನೇ ಆದೇಶ ನೀಡಿದ್ದ ಎಂಬ ನಿಟ್ಟಿನಲ್ಲಿ ರಾಜ ವಿಷ್ಣುವರ್ಧನನು ಬೇಲೂರು ದೇವಾಲಯವನ್ನು ಜಕಣಾಚಾರಿ ಮತ್ತು ಡಂಕಣಾಚಾರಿ ಎಂಬ ಶಿಲ್ಪಿಗಳಿಂದ ನಿರ್ಮಿಸಿದ್ದಾನೆ ಎಂಬ ಕೆಲವು ಐತಿಹ್ಯಗಳು ಹೇಳುತ್ತವೆ. ಇಂದಿನ ಹಳೇಬೀಡು ಅಂದಿನ ದ್ವಾರಸಮುದ್ರ ಹೊಯ್ಸಳರ ರಾಜಧಾನಿಯಾಗಿತ್ತು. ಅದಕ್ಕೂ ಮುನ್ನ ಬೇಲೂರನ್ನು ಹೊಯ್ಸಳರು ರಾಜಧಾನಿಯಾಗಿ ಮಾಡಿಕೊಂಡಿರುವ ಊರಿನ ಸುತ್ತ ಮಣ್ಣಿನ ಕಂದಕ ಸೇರಿದಂತೆ ಮುಂತಾದವುಗಳು ಕಾಣಬಹುದಾಗಿದೆ. ಅಲ್ಲದೆ ಹೊಯ್ಸಳರ ಶಿಲ್ಪಕಲೆಯ ವೈಶಿಷ್ಟ್ಯತೆ ಹಾಗೂ ಸೃಜನಶೀಲತೆಯೂ ಇಂದಿಗೂ ಜೀವಂತವಾಗಿದೆ. ಅಂದು ಬಾದಾಮಿ, ಚಾಲುಕ್ಯರು, ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪಗಳ ಪ್ರಯೋಗಗಳು ಹಾಗೂ ಹೊಯ್ಸಳರ ವಾಸ್ತುಶಿಲ್ಪಗಳಲ್ಲಿ ವಿಭಿನ್ನತೆಯನ್ನು ಕಾಣಬಹುದಾಗಿದೆ.

ಚನ್ನಕೇಶವ ದೇವಾಲಯದ ನಿರ್ಮಾಣವು 103 ವರ್ಷಗಳ ಸತತ ಪ್ರತಿಫಲವಾಗಿದೆ. ಇಂತಹ ಅಪರೂಪದ ಶಿಲ್ಪಕಲೆಗಳು ನೋಡುಗರನ್ನು ಕೈಬೀಸಿ ಕರೆಯುತ್ತವೆ. ಆದರೆ ಬೇಲೂರು ಶ್ರೀ ಚನ್ನಕೇಶವ ದೇವಾಲಯಕ್ಕೆ ಸೂಕ್ತವಾದ ಭದ್ರತೆ ಇಲ್ಲವಾಗಿದೆ. ಹಾಗೂ ಈ ದೇವಾಲಯವು ಉಗ್ರರ ಪಟ್ಟಿಯಲ್ಲಿರುವ ಬಗ್ಗೆ ಇಂಟಲಿಜೆನ್ಸಿ ರಿಪೋರ್ಟ್  ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ದೇವಾಲಯಕ್ಕೆ ಕೇಂದ್ರ ಪುರಾತತ್ವ ಇಲಾಖೆಯೂ ಹೆಚ್ಚಿನ ಭದ್ರತೆ ನೀಡುವುದಕ್ಕೆ ಮುಂದಾಗಬೇಕು. ಕಾರಣ 900 ವರ್ಷದ ಇತಿಹಾಸವನ್ನು ಸಾರುತ್ತಿರುವ ದೇವಾಲಯವನ್ನು ಕಾಪಾಡಿ ಕೊಳ್ಳವತ್ತ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವ ಮೂಲಕ ಈ ದೇವಾಲಯವು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವುದಕ್ಕೆ ಮುಂದಾಗಬೇಕು. ಇದನ್ನು ಸರ್ಕಾರಗಳು ಹಾಗೂ ಜನ ಪ್ರತಿನಿಗಳು ಮುಂದಾಗುವರೆ ಎಂಬುದನ್ನು ಕಾದು ನೋಡಬೇಕಿದೆ.

1 ಕಾಮೆಂಟ್‌:

  1. ಬೇಲೂರು ಚೆನ್ನಕೇಶವ ದೇವಾಲಯದ ಚೆನ್ನಕೇಶವಸ್ವಾಮಿಯ ಎತ್ತರ ಎಷ್ಟು ದಯವಿಟ್ಟು ತಿಳಿಸಿ ಕೊಡುವಿರಾ

    ಪ್ರತ್ಯುತ್ತರಅಳಿಸಿ