ಭಾನುವಾರ, ಏಪ್ರಿಲ್ 9, 2017

ಇವಿಎಂ ಬಳಕೆ ಚರ್ಚೆ ಆಗಲಿ: ದೇವೇಗೌಡ

ಇವಿಎಂ ಬಳಕೆ ಚರ್ಚೆ ಆಗಲಿ: ದೇವೇಗೌಡ

ನವದೆಹಲಿ: ‘ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಬಳಕೆಯನ್ನು ಮುಂದುವರಿಸ ಬೇಕೇ, ಬೇಡವೇ ಎಂಬುದರ ಕುರಿತು ವಿಸ್ತೃತ ಚರ್ಚೆ ಆಗಬೇಕು’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ತಮ್ಮ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವಿಎಂ ಬಳಕೆ ಕುರಿತು ರಾಜಕೀಯ ಮುಖಂಡರು ಆರೋಪ ಮಾಡುತ್ತಿದ್ದಾರೆ. ಸೋತ ಕೂಡಲೇ ಇಂತಹ ಆರೋಪಗಳು ಕೇಳಿಬರುವುದು ಸಹಜ ಎಂದು ಹೇಳಿದರು.

‘ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಚಲಾವಣೆಯಾದ ಪ್ರತಿ ನಾಲ್ಕು ಮತಗಳ ಪೈಕಿ ಮೂರು ಮತಗಳು ಬಿಜೆಪಿಗೇ ಹೋಗುತ್ತಿದ್ದವು ಎಂಬ ಆರೋಪಗಳು ಕೇಳಿಬಂದಿವೆ. ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೊದಲು ಮತಯಂತ್ರಗಳ ಮಾದರಿ ಪರೀಕ್ಷೆ ನಡೆಸಿದಾಗಲೂ ಬಿಜೆಪಿಗೆ ಮತಗಳು ದಾಖಲಾಗಿದ್ದು ಕಂಡುಬಂದಿದೆ.
ನಾನು ಯಾವುದೇ ರೀತಿಯ ಆರೋಪ ಮಾಡುವುದಿಲ್ಲ. ಬದಲಿಗೆ, ಚರ್ಚೆ ಆಗಬೇಕು ಎಂದಷ್ಟೇ ಹೇಳಬಲ್ಲೆ’ ಎಂದರು.

1996ರಲ್ಲಿ ಬೆಳಗಾವಿ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಶಿವಾನಂದ ಕೌಜಲಗಿ ಅವರ ವಿರುದ್ಧ 267 ಜನ ಸ್ಪರ್ಧಿಸಿದ್ದರು. ಉದ್ದನೆಯ ಮತಪತ್ರದಲ್ಲಿ ಜನರು ಕೌಜಲಗಿ ಅವರ ಹೆಸರನ್ನು ಹುಡುಕಿ ಮತ ಹಾಕಿ ಗೆಲ್ಲಿಸಿದರು. ಈಗ ಜನರ ಸಾಕ್ಷರತಾ ಪ್ರಮಾಣ ಶೇ 70ರಷ್ಟಿದೆ. ದೇಶದಲ್ಲಿ ಮೊದಲಿನಂತೆಯೇ ಮತಪತ್ರಗಳ ಬಳಕೆ ಮಾಡಬಹುದೇ ಎಂಬುದರ ಕುರಿತೂ ತಜ್ಞರು ತಿಳಿಸಬೇಕು ಎಂದರು.

ಸೇರ್ಪಡೆ ನಂತರ ಉತ್ತರ: ‘ಜೆಡಿಎಸ್‌ ತೊರೆದಿರುವ 7 ಜನ ಶಾಸಕರು ಇದೇ 14ರಂದು ನಾಗಮಂಗಲದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅಂದೇ ಆ 7 ಜನ ನನ್ನ ಹಾಗೂ ಕುಮಾರಸ್ವಾಮಿ ಅವರ ಹಗರಣಗಳನ್ನು ಬಹಿರಂಗ ಪಡಿಸುವುದಾಗಿಯೂ ಹೇಳಿದ್ದಾರೆ. ಅವರು ಹೇಳಿದ ನಂತರ ನಾನೂ ಅದೇ ಜಾಗದಲ್ಲಿ ಸಭೆ ನಡೆಸಿ ತಕ್ಕ ಉತ್ತರ ನೀಡುತ್ತೇನೆ’ ಎಂದರು.

ಮೋದಿ ತಡೆಯಕ್ಕಾಗಲ್ಲ
ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯ ವಿಚಾರವಿಲ್ಲ. ಯಾರೇ ಒಂದಾಗಿ ಹೋರಾಡಿದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಡೆಯುವುದಕ್ಕೆ ಆಗುವುದಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಮೋದಿ ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದರ ಮೇಲೆ ಮಿಕ್ಕ ಪಕ್ಷಗಳ ಭವಿಷ್ಯ ನಿರ್ಧರಿತವಾಗಲಿದೆ ಎಂದು ಹೇಳಿದರು.

ಹಣ ಇಲ್ಲ.. ಸ್ಪರ್ಧೆ ಇಲ್ಲ
ಗುಂಡ್ಲುಪೇಟೆ ಮತ್ತು ನಂಜನ ಗೂಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಹಣದ ಹೊಳೆಯೇ ಹರಿಯುತ್ತಿದೆ. ಹಣ ಇಲ್ಲದ್ದರಿಂದ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಆದರೆ, ಮುಂಬರುವ ವಿಧಾನಸಭೆ ಚುನಾವಣೆಯ್ಲಿ ಎಲ್ಲ 224 ಕ್ಷೇತ್ರಗಳಿಂದ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಸ್ವಚ್ಛ ಭಾರತ, ಸ್ವಚ್ಛ ಚುನಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರಾದರೂ ನಿಯಂತ್ರಣ ಮಾಡುತ್ತಿಲ್ಲ. ಸ್ವಚ್ಛ ಚುನಾವಣೆ ಎಂದು ಅವರು ಹೇಳುತ್ತಿದ್ದರೂ ವೆಚ್ಚಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ದೇವೇಗೌಡ ವ್ಯಂಗ್ಯವಾಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ