ಭಾನುವಾರ, ಏಪ್ರಿಲ್ 9, 2017

2018 ರೊಳಗೆ ಗಂಗಾ ನೈರ್ಮಲ್ಯಿಕರಣ ಅಸಾಧ್ಯ: ಎನ್ಎಂಸಿಜಿ

2018ರೊಳಗೆ ಗಂಗಾ ನೈರ್ಮಲ್ಯೀಕರಣ ಅಸಾಧ್ಯ: ಎನ್ ಎಂಸಿಜಿ

ನವದೆಹಲಿ, ಏಪ್ರಿಲ್ 6: ಕಲುಷಿತವಾಗಿರುವ ಗಂಗಾ ನದಿಯನ್ನು ಈಗ ನಿಗದಿಗೊಳಿಸಲಾಗಿರುವಂತೆ 2018ರೊಳಗೆ ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್‌ಎಂಸಿಜಿ) ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಗಂಗಾ ನದಿ ಶುದ್ಧೀಕರಣದ ಗುರಿಯನ್ನು 2019ಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಹುಕೋಟಿ ವೆಚ್ಛದ ಗಂಗಾ ನದಿ ಶುದ್ಧೀಕರಣ ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಎನ್‌ಎಂಸಿಜಿ ಅಧಿಕಾರಿಗಳ ಸಭೆ ಕರೆದಿದ್ದರು.

ಈ ಸಭೆಯಲ್ಲಿ, ಪ್ರಧಾನಿ ಮೋದಿಯವರಿಗೆ ಅಂಕಿ-ಅಂಶಗಳ ಸಹಿತ ವಿವರಗಳನ್ನು ನೀಡಿದ ಅಧಿಕಾರಿಗಳು, ಗಂಗಾ ನದಿಯನ್ನು ಇನ್ನೊಂದೇ ವರ್ಷದಲ್ಲಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಗಂಗಾ ನದಿಯ ಜನ ಬಳಕೆ ಇಲ್ಲದ ಜಾಗಗಳಲ್ಲಿ ಒಟ್ಟಾರೆ ಅಂದಾಜು 2,525 ಕಿ.ಮೀ.ವರೆಗೂ ಕೊಳಚೆ ತುಂಬಿಕೊಂಡಿದೆ. ಇದನ್ನು ಗುರುತಿಸಲೇ ಇಷ್ಟು ದಿನ ಬೇಕಾಯಿತು.

ಅಲ್ಲದೆ, ಶುದ್ಧೀಕರಣ ಪ್ರಕ್ರಿಯೆ ಆರಂಭಕ್ಕೂ ಮೊದಲು ತ್ಯಾಜ್ಯ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಬೇಕಿದೆ. ಆದರೆ, ಈ ಘಟಕಗಳನ್ನು ಎಲ್ಲಿ ಸ್ಥಾಪಿಸಬೇಕೆಂಬುದೇ ದೊಡ್ಡ ಸಮಸ್ಯೆಯಾಗಿದೆ. ಗಂಗಾ ನದಿಯ ಇಕ್ಕೆಲಗಳಲ್ಲಿ ಸಮತಟ್ಟಾದ ಪ್ರದೇಶಗಳೆಲ್ಲವೂ ಜನ ವಸತಿಯಿಂದ ತುಂಬಿ ಹೋಗಿವೆ. ಬಹುತೇಕ ಕಡೆ ನದಿಯ ಪಾತ್ರಗಳಲ್ಲಿ ಬೆಟ್ಟ ಗುಡ್ಡ, ಕಾಡು, ಕಣಿವೆ ಕಂದರಗಳಿವೆ.

ಹಾಗಾಗಿ, ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಸ್ಥಳ ಗುರುತಿಸುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಪ್ರಧಾನಿಗೆ ಬುಧವಾರದ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರು.

ಸಭೆಯ ಅಂತಿಮ ನಿಮಿಷಗಳಲ್ಲಿ ಮಾತನಾಡಿದ ಪ್ರಧಾನಿ, ಈ ಬಗ್ಗೆ ವಿವರವಾಗಿ ಚರ್ಚಿಸಿ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

2014ರ ಲೋಕಸಭಾ ಚುನಾವಣೆ ವೇಳೆ, ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಯೋಜನೆಗಳಲ್ಲಿ ಗಂಗಾ ನದಿ ನೈರ್ಮಲ್ಯೀಕರಣವೂ ಒಂದು. ಹಾಗಾಗಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಸುಮಾರು 20,000 ಕೋಟಿ ವೆಚ್ಛದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ