ಶನಿವಾರ, ಫೆಬ್ರವರಿ 18, 2017

ಭಾರತದಲ್ಲಿ ಚುನಾವಣೆ ಮತ್ತು ಪಕ್ಷಪದ್ದತಿ

ಅಧ್ಯಾಯ ೨:
ಭಾರತದಲ್ಲಿ ಚುನಾವಣೆ ಮತ್ತು ಪಕ್ಷಪದ್ಧತಿ:

ಒಂದು ಅಥವ ಎರಡು ಅಂಕಗಳ ಪ್ರಶ್ನೋತ್ತರಗಳು:

1. ಚುನಾವಣೆ ಪದದ ಮೂಲ ಪದ ಯಾವುದು?
ಉ: ಚುನಾವಣೆ ಪದದ ಮೂಲ ಪದ ಎಲಿಗೆರೆ{eligere}
2. ಚುನಾವಣೆ ಎಂದರೇನು?
ಉ: ಮತದಾರರು ಮತ ನೀಡುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಚುನಾವಣೆ ಎನ್ನುವರು.
3. ಸಾರ್ವತ್ರಿಕ ಚುನಾವಣೆ ಎಂದರೇನು?
ಉ: ದೇಶದ ಅರ್ಹ ಪ್ರಜೆಗಳು ಯಾವುದೇ ತಾರತಮ್ಯವಿಲ್ಲದೆ ನಿಗದಿತ ಕಾಲಕ್ಕೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ಸಾರ್ವತ್ರಿಕ ಚುನಾವಣೆ ಎನ್ನುವರು.ಉದಾ:2014ರ ಏಪ್ರಿಲ್ ಹಾಗು ಮೇನಲ್ಲಿ ನಡೆದ ಭಾರತದಲ್ಲಿನ ಚುನಾವಣೆಗಳು.
4. ಉಪ ಚುನಾವಣೆ ಎಂದರೇನು?ಉದಾಹರಣೆ ನೀಡಿ?
ಉ: ಒಬ್ಬ ಚುನಾಯಿತ ಪ್ರತಿನಿಧಿಯ ರಾಜೀನಾಮೆ,ಮರಣ ಅಥವ ಅನರ್ಹತೆಯಿಂದ ತೆರವಾಗುವ ಸ್ಥಾನಕ್ಕೆ ಆರು ತಿಂಗಳೊಳಗೆ ಜರುಗುವ ಚುನಾವಣೆಗೆ ಉಪ ಚುನಾವಣೆ ಎನ್ನುವರು.ಉದಾ:ಬಿ.ಶ್ರೀರಾಮುಲು ರಾಜೀನಾಮೆಯಿಂದ ತೆರವಾದ ಬಳ್ಳಾರಿ ಗ್ರಾಮಾಂತರ ಮತಕ್ಷೇತ್ರಕ್ಕೆ ನಡೆದ ಚುನಾವಣೆ.
5. ಮರು ಚುನಾವಣೆ ಎಂದರೇನು?
ಉ: ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತಗಟ್ಟೆಯ ವಶ, ಮತ ಯಂತ್ರದಲ್ಲಿನ ತೊಂದರೆ, ಮತ ಪಟ್ಟಿಯಲ್ಲಿನ ದೋಷಗಳಿಂದ ನಿರ್ದಿಷ್ಟ ಮತಗಟ್ಟೆಯ ಚುನಾವಣೆಯನ್ನು ಮುಂದೂಡಿ ನಡೆಸಲಾಗುವ ಚುನಾವಣೆಗೆ ಮರು ಚುನಾವಣೆ ಎನ್ನುವರು.
6. ಮಧ್ಯಂತರ ಚುನಾವಣೆ ಎಂದರೇನು?
ಉ: ದೇಶದ ಅರ್ಹ ಪ್ರಜೆಗಳು ಯಾವುದೇ ತಾರತಮ್ಯವಿಲ್ಲದೆ ನಿಗದಿತ ಕಾಲಕ್ಕಿಂತ ಮೊದಲೇ ಜರುಗುವ ಚುನಾವಣೆಯಲ್ಲಿ ಮತ ನೀಡುವುದನ್ನು ಮಧ್ಯಂತರ ಚುನಾವಣೆ ಎನ್ನುವರು.ಉದಾ:2004ರಲ್ಲಿ ಐದು ವರ್ಷ ಅವಧಿ ಮುಗಿಯುವುದಕ್ಕಿಂತ ಮೊದಲೇ ಜರುಗಿದ ಲೋಕಸಭೆಯ ಚುನಾವಣೆಗಳು.
7. ಪ್ರತ್ಯಕ್ಷ ಚುನಾವಣೆ ಎಂದರೇನು?
ಉ: ಮತದಾರರು ಮಧ್ಯವರ್ತಿಗಳ ನೆರವಿಲ್ಲದೆ ತಾವೇ ನೇರವಾಗಿ ಮತ ನೀಡುವ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕೆ ಪ್ರತ್ಯಕ್ಷ ಚುನಾವಣೆ ಎನ್ನುವರು.
8. ಪ್ರತ್ಯಕ್ಷ ಚುನಾವಣೆಗೆ ಉದಾಹರಣೆ ಕೊಡಿ.
ಉ: ಭಾರತದಲ್ಲಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳು.
9. ಪರೋಕ್ಷ ಚುನಾವಣೆ ಎಂದರೇನು?
ಉ: ದ್ದೇಶದ ಮುಖ್ಯಸ್ಥ ಜನರಿಂದ ನೇರವಾಗಿ ಮತ ಪಡೆಯದೇ ಜನರ ಪ್ರತಿನಿಧಿಗಳಿಂದ ಮತ ಪಡೆಯುವುದನ್ನು ಪರೋಕ್ಷ ಚುನಾವಣೆ ಎನ್ನುವರು.
10. ಪರೋಕ್ಷ ಚುನಾವಣೆಗೆ ಉದಾಹರಣೆ ಕೊಡಿ.
ಉ: ರಾಷ್ಟ್ರಪತಿ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ.
11. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು?
ಉ: ಜಾತಿ,ಲಿಂಗ,ಧರ್ಮ,ವರ್ಣ ಮುಂತಾದವುಗಳ ಆಧಾರದ ಮೇಲೆ ತಾರತಮ್ಯ ಮಾಡದೇ ನಿರ್ದಿಷ್ಟ ವಯೋಮಿತಿ ದಾಟಿದ ದೇಶದ ಅರ್ಹ ಪ್ರಜೆಗಳಿಗೆಲ್ಲ ಮತ ನೀಡಲು ಅವಕಾಶವಿರುವ ಚುನಾವಣೆಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎನ್ನುವರು.
12. ಭಾರತದಲ್ಲಿ ಮತ ಚಲಾಯಿಸಲು ಕನಿಷ್ಟ ವಯೋಮಿತಿ ಎಷ್ಟು?
ಉ: ಭಾರತದಲ್ಲಿ ಮತ ಚಲಾಯಿಸಲು ಮತದಾರನಿಗೆ ಕನಿಷ್ಟ ವಯೋಮಿತಿ 18 ವರ್ಷಗಳು.
13. ಭಾರತ ಚುನಾವಣಾ ಆಯೋಗದಲ್ಲಿ ಎಷ್ಟು ಸದಸ್ಯರಿದ್ದಾರೆ?
ಉ: ಭಾರತ ಚುನಾವಣಾ ಆಯೋಗದಲ್ಲಿ ಮೂವರು ಸದಸ್ಯರಿದ್ದಾರೆ.
14. ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ಯಾರು ನೇಮಿಸುತ್ತಾರೆ?
ಉ: ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ರಾಷ್ಟ್ರಪತಿ ನೇಮಿಸುತ್ತಾರೆ
15. ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರವಧಿ ಎಷ್ಟು?
ಉ: ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರವಧಿ 6 ವರ್ಷಗಳು.
16. EVM ಅನ್ನು ವಿಸ್ತರಿಸಿ.
ಉ: EVM ಅನ್ನು ವಿಸ್ತರಿಸಿದರೆ ವಿದ್ಯುನ್ಮಾನ ಮತ ಯಂತ್ರ [ELECTRONIC VOTING MASSION] ಎಂದಾಗುತ್ತದೆ.
17. EPIC ಅನ್ನು ವಿಸ್ತರಿಸಿ.
ಉ: EPIC ಅನ್ನು ವಿಸ್ತರಿಸಿದರೆ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ [ELECTORS PHOTO IDENTITY CARD] ಎಂದಾಗುತ್ತದೆ.
18. ಮತದಾರನ ಗುರುತಿನ ಚೀಟಿ ಎಂದರೇನು?
ಉ: ಮತದಾರನ ಭಾವಚಿತ್ರ,ವಿಳಾಸ,ಮತಕ್ಷೇತ್ರ ಸಂಖೆ ಇತ್ಯಾದಿಗಳನ್ನುಳ್ಳ ಚುನಾವಣಾ ಆಯೋಗ ಹಂಚಿದ ಪತ್ರವೇ ಮತದಾರನ ಗುರುತಿನ ಚೀಟಿಯಾಗಿದೆ.
19. ವಿದ್ಯುನ್ಮಾನ ಮತ ಯಂತ್ರ ಎಂದರೇನು?
ಉ: ಮತದಾರ ಸುಲಭವಾಗಿ ಮತ ನೀಡಲು ನೆರವಾಗುವ ವಿದ್ಯುತ್ ಚಾಲಿತ ಯಂತ್ರವೇ ವಿದ್ಯುನ್ಮಾನ ಮತ ಯಂತ್ರವಾಗಿದೆ.
20. ರಾಜಕೀಯ ಪಕ್ಷ ಎಂದರೇನು?
ಉ: ರಾಜಕೀಯವಾಗಿ ಏಕಾಭಿಪ್ರಾಯ ಹೊಂದಿದ್ದು,ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸರ್ಕಾರವನ್ನು ನಿಯಂತ್ರಿಸಲು  ಸಂಘಟಿತವಾದ ಜನರ ಗುಂಪಿಗೆ ರಾಜಕೀಯ ಪಕ್ಷ ಎನ್ನಬಹುದು.
21. ಭಾರತದಲ್ಲಿ ಎಂತಹ ಪಕ್ಷಪದ್ಧತಿ ಇದೆ?
ಉ:ಭಾರತದಲ್ಲಿ ಬಹು ಪಕ್ಷಪದ್ಧತಿ ಇದೆ.
22. ರಾಷ್ಟ್ರೀಯ ಪಕ್ಷ ಎಂದರೇನು?
ಉ: ರಾಷ್ಟ್ರದ ಹಿತಾಸಕ್ತಿ ಕಾಪಾಡಲು ರಾಷ್ಟ್ರದಾದ್ಯಂತ ಅಸ್ತಿತ್ವದಲ್ಲಿರುವ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಎನ್ನುವರು.
23. ಪ್ರಾದೇಶಿಕ ಪಕ್ಷ ಎಂದರೇನು?
ಉ: ನಿರ್ದಿಷ್ಟ ಪ್ರದೇಶದ ನೆಲ.ಜಲ.ಭಾಷೆಯಂತಹ ಹಿತಾಸಕ್ತಿಗಳನ್ನು ಕಾಪಾಡಲು ಬದ್ಧವಾಗಿರುವ ರಾಜಕೀಯ ಪಕ್ಷವೇ ಪ್ರಾದೇಶಿಕ ಪಕ್ಷವಾಗಿದೆ.
24. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು ಯಾರು?
ಉ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು A O ಹ್ಯೂಮ್.
25. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಸ್ಥಾಪನೆಯಾಯಿತು?
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1885ರಲ್ಲಿ ಸ್ಥಾಪನೆಯಾಯಿತು.
26. NDA ಅನ್ನು ವಿಸ್ತರಿಸಿ.
ಉ: NDA ಅನ್ನು ವಿಸ್ತರಿಸಿದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ [NATIONAL DEMOCRATIC ALLIANCE] ಎಂದಾಗುತ್ತದೆ.
27. UPA ವಿಸ್ತರಿಸಿ.
ಉ: UPA ವಿಸ್ತರಿಸಿದರೆ ಸಂಯುಕ್ತ ಪ್ರಗತಿಪರ ಒಕ್ಕೂಟ [UNITED PROGRESSIVE ALLIANCE] ಎಂದಾಗುತ್ತದೆ.
28. BJP ಪಕ್ಷ ಯಾವಾಗ ಅಸ್ಥಿತ್ವಕ್ಕೆ ಬಂದಿತು?
ಉ: BJP ಪಕ್ಷ 1980ರಲ್ಲಿ ಅಸ್ಥಿತ್ವಕ್ಕೆ ಬಂದಿತು.
29. ಭಾರತೀಯ ಕಮ್ಯುನಿಷ್ಟ್ ಪಕ್ಷ ಯಾವಾಗ ಅಸ್ಥಿತ್ವಕ್ಕೆ ಬಂದಿತು?
ಉ: ಭಾರತೀಯ ಕಮ್ಯುನಿಷ್ಟ್ ಪಕ್ಷ 1924ರಲ್ಲಿ ಅಸ್ಥಿತ್ವಕ್ಕೆ ಬಂದಿತು.
30. ಪಕ್ಷಾಂತರ ಎಂದರೇನು?
ಉ: ಒಬ್ಬ ಚುನಾಯಿತ ಪ್ರತಿನಿಧಿಯು ತನ್ನ ಪಕ್ಷಕ್ಕೆ ರಾಜೀನಾಮೆ ನೀಡದೇ ಬೇರೊಂದು ಪಕ್ಷ ಸೇರುವುದನ್ನು ಪಕ್ಷಾಂತರ ಎನ್ನುವರು.
31. ಪಕ್ಷಾಂತರ ನಿಷೇಧ ಕಾಯಿದೆಯು ಯಾವಾಗ ಜಾರಿಗೊಂಡಿತು?
ಉ: ಪಕ್ಷಾಂತರ ನಿಷೇಧ ಕಾಯಿದೆಯು 1985ರಲ್ಲಿ ಜಾರಿಗೊಂಡಿತು.
32. ಪಕ್ಷಾಂತರ ನಿಷೇಧ ಕಾಯಿದೆ ಎಂದರೇನು?
ಉ: ಚುನಾಯಿತ ಪ್ರತಿನಿಧಿಗಳ ಪಕ್ಷಾಂತರದ ಚಟುವಟಿಕೆಗಳನ್ನು ತಡೆಯಲು ಜಾರಿಗೊಂಡ ಕಾನೂನೇ ಪಕ್ಷಾಂತರ ನಿಷೇಧ ಕಾಯಿದೆಯಾಗಿದೆ.
33. ಪಕ್ಷಾಂತರಕ್ಕಿರುವ ಇತರ ಹೆಸರುಗಳಾವುವು?
ಉ: ಫ಼್ಲೋರ್ ಕ್ರಾಸಿಂಗ್ ಹಾಗು ಕಾರ್ಪೇಟ್ ಕ್ರಾಸಿಂಗ್ ಎಂಬುವು ಪಕ್ಷಾಂತರಕ್ಕಿರುವ ಇತರ ಹೆಸರುಗಳಾಗಿವೆ.
34. ಪಕ್ಷಾಂತರ ನಿಷೇಧ ಕಾಯಿದೆಯನ್ನು ಯಾರು ಜಾರಿಗೆ ತಂದರು?
ಉ: ಪಕ್ಷಾಂತರ ನಿಷೇಧ ಕಾಯಿದೆಯನ್ನು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಜಾರಿಗೆ ತಂದರು.
35. NOTA ಅನ್ನು ವಿಸ್ತರಿಸಿ.
ಉ: NOTA ಅನ್ನು ವಿಸ್ತರಿಸಿದರೆ ಮೇಲಿನ ಯಾರೂ ನನ್ನ ಆಯ್ಕೆಯಲ್ಲ [NON OF THE ABOVE] ಎಂದಾಗುತ್ತದೆ.
36. ಭಾರತದ ಮೊದಲ ಪ್ರಧಾನಿ  ಯಾರು?
ಉ: ಭಾರತದ ಮೊದಲ ಪ್ರಧಾನಿ ಕಾಂಗ್ರೆಸ್ ಪಕ್ಷದ ಜವಾಹರಲಾಲ್ ನೆಹರು.
37. ಭಾರತದ ಮೊದಲ ಮಹಿಳಾ ಪ್ರಧಾನಿ ಯಾರು?
ಉ: ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ.
38. ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಯಾರು?
ಉ: ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಮುರಾರ್ಜಿ ದೇಸಾಯಿ.
39. ಭಾರತದ ಮೊದಲ ಕನ್ನಡಿಗ ಪ್ರಧಾನಿ ಯಾರು?
ಉ: ಭಾರತದ ಮೊದಲ ಕನ್ನಡಿಗ ಪ್ರಧಾನಿ H.D. ದೇವೇಗೌಡ
40. ಭಾರತದ ಮೊದಲ ದಲಿತ ಮುಖ್ಯಮಂತ್ರಿ ಯಾರು?
ಉ: ಭಾರತದ ಮೊದಲ ದಲಿತ ಮುಖ್ಯಮಂತ್ರಿ ಉತ್ತರ ಪ್ರದೇಶದ ಮಾಯಾವತಿ.

ಎರಡು ಅಂಕಗಳ ಪ್ರಶ್ನೋತ್ತರಗಳು:

1. ಪ್ರತ್ಯಕ್ಷ ಚುನಾವಣೆ ಎಂದರೇನು? ಉದಾಹರಣೆ ನೀಡಿ
ಉ: ದೇಶದ ಮತದಾರರು ಮಧ್ಯವರ್ತಿಗಳ ನೆರವಿಲ್ಲದೆ ತಾವೇ ನೇರವಾಗಿ ಮತ ನೀಡುವ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕೆ ಪ್ರತ್ಯಕ್ಷ ಚುನಾವಣೆ ಎನ್ನುವರು.ಇದನ್ನು ನೇರ ಚುನಾವಣೆ ಎಂದೂ ಕರೆಯುತ್ತಾರೆ.ಉದಾ:ಭಾರತದಲ್ಲಿ ವಿಧಾನಸಭಾ ಹಾಗು ಲೋಕಸಭಾ ಚುನಾವಣೆಗಳು.
2. ಪರೋಕ್ಷ ಚುನಾವಣೆ ಎಂದರೇನು? ಉದಾಹರಣೆ ನೀಡಿ
ಉ: ದ್ದೇಶದ ಮುಖ್ಯಸ್ಥ ಜನರಿಂದ ನೇರವಾಗಿ ಮತ ಪಡೆಯದೇ ಜನರ ಪ್ರತಿನಿಧಿಗಳಿಂದ ಮತ ಪಡೆಯುವುದನ್ನು ಪರೋಕ್ಷ ಚುನಾವಣೆ ಎನ್ನುವರು.ಉದಾ:ಭಾರತದಲ್ಲಿ ಜನರಿಂದ ಆಯ್ಕೆಯಾದ ಲೋಕಸಭಾ ಹಾಗು ವಿಧಾನಸಭಾ ಸದಸ್ಯರು ಮತ ನೀಡುವ ರಾಷ್ಟ್ರಪತಿಯ ಚುನಾವಣೆ.
3. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು? ಉದಾಹರಣೆ ಕೊಡಿ.
ಉ: ಜಾತಿ,ಲಿಂಗ,ಧರ್ಮ,ವರ್ಣ ಮುಂತಾದವುಗಳ ಆಧಾರದ ಮೇಲೆ ತಾರತಮ್ಯ ಮಾಡದೇ ನಿರ್ದಿಷ್ಟ ವಯೋಮಿತಿ ದಾಟಿದ ದೇಶದ ಅರ್ಹ ಪ್ರಜೆಗಳಿಗೆಲ್ಲ ಮತ ನೀಡಲು ಅವಕಾಶವಿರುವ ಚುನಾವಣೆಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎನ್ನುವರು. ಮತದಾನದ ವಯೋಮಿತಿ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಉದಾ: ಭಾರತ, ಅಮೇರಿಕ
4. ಚುನಾವಣಾ ಆಯೋಗ ಎಂದರೇನು?
ಉ:ಭಾರತದ ವಿವಿಧ ಚುನಾವಣೆಗಳನ್ನು ನಿರ್ದೇಶಿಸಿ,ನಿಯಂತ್ರಿಸಿ,ನಿರ್ವಹಿಸಲು ಅಸ್ತಿತ್ವಕ್ಕೆ ಬಂದಿರುವ ಆಯೋಗವೇ ಚುನಾವಣಾ ಆಯೋಗವಾಗಿದೆ.ದೇಶದ ವಿವಿಧ ಚುನಾವಣೆಗಳನ್ನು ನಿಶ್ಪಕ್ಷಪಾತವಾಗಿ ನಡೆಸುವುದು ಇದರ ಕಾರ್ಯವಾಗಿದೆ.
5. ಚುನಾವಣಾ ಆಯೋಗದ ಎರಡು ಕಾರ್ಯಗಳನ್ನು ಬರೆಯಿರಿ?
ಉ: ಚುನಾವಣಾ ಆಯೋಗದ ಎರಡು ಕಾರ್ಯಗಳೆಂದರೆ
a.ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಹಾಗು ಕಾಲಕಾಲಕ್ಕೆ ಅದನ್ನು ಪರಿಷ್ಕರಿಸುವುದು.
b.ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು ಹಾಗು ಚಿನ್ಹೆಗಳನ್ನು ನೀಡುವುದು.
c.ರಾಷ್ಟ್ರಪತಿ,ಉಪ ರಾಷ್ಟ್ರಪತಿ,ಸಂಸತ್ ಸದಸ್ಯ,ವಿಧಾನಸಭಾ ಸದಸ್ಯ ಮುಂತಾದ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು.
6. ಚುನಾವಣಾ ಸಮಯದಲ್ಲಿ ಅಭ್ಯರ್ಥಿಯು ನಾಮಪತ್ರದೊಡನೆ ಕಡ್ಡಾಯವಾಗಿ ಸಲ್ಲಿಸಬೇಕಾದ ಎರಡು ಅಂಶಗಳನ್ನು ತಿಳಿಸಿ.
ಉ: ಚುನಾವಣಾ ಸಮಯದಲ್ಲಿ ಅಭ್ಯರ್ಥಿಯು ನಾಮಪತ್ರದೊಡನೆ ಕಡ್ಡಾಯವಾಗಿ ಅಪರಾಧ,ಆಸ್ತಿ ಹಾಗು ಶೈಕ್ಷಣಿಕ ಅಂಶಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.
7. ವಿದ್ಯುನ್ಮಾನ ಮತ ಯಂತ್ರದಿಂದಾಗುವ ಎರಡು ಅನುಕೂಲಗಳನ್ನು ತಿಳಿಸಿ?
ಉ:ಸುಲಭ ಬಳಕೆ,ಆರ್ಥಿಕ ಮಿತವ್ಯಯ,ಶೀಘ್ರ ಫಲಿತಾಂಶ,ಸಮಯದ ಉಳಿತಾಯ,ಪರಿಸರ ಸ್ನೇಹಿ  ಮುಂತಾದವು ವಿದ್ಯೂನ್ಮಾನ ಮತ ಯಂತ್ರದ ಅನುಕೂಲಗಳಾಗಿವೆ.
8. ಮತದಾರನ ಗುರುತಿನ ಚೀಟಿಯ ಎರಡು ಪ್ರಯೋಜನಗಳಾವುವು?
ಉ: A. ನಕಲೀ ಮತದಾನವನ್ನು ತಡೆಯಬಹುದು.
B. ರಾಜಕೀಯ ಪಕ್ಷಗಳ ಅಕ್ರಮಗಳನ್ನು ಇದರಲ್ಲಿನ ವಿವರಗಳಿಂದ ನಿಯಂತ್ರಿಸಬಹುದು.
C. ಸರ್ಕಾರದ ಯೋಜನೆಗಳನ್ನು ಸುಲಭವಾಗಿ ಪಡೆಯಬಹುದು.
9. ರಾಜ್ಯವೇ ಚುನಾವಣಾ ವೆಚ್ಚವನ್ನು ಭರಿಸುವ ಸುಧಾರಣೆ ಕುರಿತು ಬರೆಯಿರಿ.
ಉ: ಕಪ್ಪು ಹಣದ ಹಾವಳಿಯನ್ನು ತಪ್ಪಿಸಲು, ದೊಡ್ಡ ಪಕ್ಷಗಳೊಡನೆ ಚಿಕ್ಕ ಪಕ್ಷಗಳು ಸ್ಪರ್ಧಿಸುವಂತಾಗಲು ಹಾಗು ಸಾಮಾನ್ಯರೂ ಚುನಾವಣೆಗೆ ನಿಲ್ಲುವಂತಾಗಲು ಸರ್ಕಾರವೇ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ನೀಡುವುದನ್ನು ರಾಜ್ಯವೇ ಚುನಾವಣಾ ವೆಚ್ಚವನ್ನು ಭರಿಸುವ ಸುಧಾರಣೆ ಎನ್ನುವರು.
10. ಚುನಾವಣಾ ಸುಧಾರಣೆಗಳಿಗೆ ಶಿಫ಼ಾರಸು ಮಾಡಿದ ಎರಡು ಸಮೀತಿಗಳನ್ನು ಹೆಸರಿಸಿ.
ಉ: ಚುನಾವಣಾ ಸುಧಾರಣೆಗಳಿಗೆ ಶಿಫ಼ಾರಸು ಮಾಡಿದ ಸಮೀತಿಗಳೆಂದರೆ ವಾಂಚೂ ಸಮೀತಿ,1974ರ V.K ತಾರ್ಕುಂಡೆ ಸಮೀತಿ, 1990ರ ದಿನೇಶ್ ಗೋಸ್ವಾಮಿ ಸಮೀತಿ, 1994ರ B.R ಕ್ರುಷ್ಣ ಅಯ್ಯರ್ ಸಮೀತಿ, 1998ರ ಇಂದ್ರಜಿತ್ ಗುಪ್ತಾ ಸಮೀತಿ ಹಾಗು 2002ರ ಕುಲ್ದೀಪ್ಸಿಂಗ್ ಸಮೀತಿ..
11. ರಾಜ್ಯವೇ ಚುನಾವಣಾ ವೆಚ್ಚವನ್ನು ಭರಿಸುವ ಕುರಿತು ಶಿಫ಼ಾರಸು ಮಾಡಿದ ಸಮೀತಿಗಳಾವುವು?
ಉ: ರಾಜ್ಯವೇ ಚುನಾವಣಾ ವೆಚ್ಚವನ್ನು ಭರಿಸುವ ಕುರಿತು ಶಿಫ಼ಾರಸು ಮಾಡಿದ ಸಮೀತಿಗಳೆಂದರೆ ವಾಂಚೂ ಸಮೀತಿ,1974ರ V.K ತಾರ್ಕುಂಡೆ ಸಮೀತಿ ಮತ್ತು 1998ರ ಇಂದ್ರಜಿತ್ ಗುಪ್ತಾ ಸಮೀತಿ.
12.ರಾಜಕೀಯ ಪಕ್ಷವನ್ನು ವ್ಯಾಖ್ಯಾನಿಸಿರಿ?
ಉ: ಎಡ್ಮಂಡ್ ಬರ್ಕ್ ಪ್ರಕಾರ [ಕೆಲವು ಸಾಮಾನ್ಯ ತತ್ವಗಳ ಆಧಾರದ ಮೇಲೆ ರಾಷ್ಟ್ರೀಯ ಹಿತಾಸಕ್ತಿಯನ್ನು ಸಾಧಿಸಲು ಶ್ರಮಿಸುವ ಸಂಘಟಿತ ಜನ ಸಮೂಹವನ್ನು ರಾಜಕೀಯ ಪಕ್ಷ ಎನ್ನಬಹುದು]
13. ಏಕ ಪಕ್ಷ ಪದ್ಧತಿ ಎಂದರೇನು? ಉದಾಹರಣೆ ನೀಡಿ
ಉ: ಒಂದು ದೇಶದ ರಾಜಕೀಯ ವ್ಯವಸ್ಥೆಯಲ್ಲಿ  ಒಂದೇ ರಾಜಕೀಯ ಪಕ್ಷವು ಪ್ರಭಾವ ಹೊಂದಿದ್ದರೆ ಅದನ್ನು ಏಕ ಪಕ್ಷ ಪದ್ಧತಿ ಎನ್ನುವರು.ಉದಾ:ಚೀನಾ ಹಾಗು ರಷ್ಯಾದಲ್ಲಿನ ಕಮ್ಯೂನಿಷ್ಟ್ ಪಕ್ಷದ ಪ್ರಭಾವ.
14. ದ್ವೀ ಪಕ್ಷ ಪದ್ಧತಿ ಎಂದರೇನು? ಉದಾಹರಣೆ ನೀಡಿ
ಉ: ಒಂದು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಎರಡು ಪಕ್ಷಗಳು ಮಾತ್ರ ಪ್ರಭಾವ ಹೊಂದಿದ್ದರೆ ಅದನ್ನು ದ್ವೀ ಪಕ್ಷ ಪದ್ಧತಿ ಎನ್ನುವರು.ಉದಾ:ಇಂಗ್ಲೆಂಡಿನಲ್ಲಿಲೇಬರ್ ಹಾಗು ಕಂಜರ್ವೇಟಿವ್ ಪಕ್ಷಗಳ ಪ್ರಭಾವ ಮತ್ತು ಅಮೇರಿಕದಲ್ಲಿ ಡೆಮಾಕ್ರೇಟಿಕ್ ಹಾಗು ರಿಪಬ್ಲೀಕ್ ಪಕ್ಷಗಳ ಪ್ರಭಾವ.
15. ಬಹು ಪಕ್ಷಪದ್ಧತಿ ಎಂದರೇನು? ಉದಾಹರಣೆ ನೀಡಿ.
ಉ:ಒಂದು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಎರಡಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳು ಪ್ರಭಾವ ಹೊಂದಿದ್ದರೆ ಅದನ್ನು ಬಹು ಪಕ್ಷ ಪದ್ಧತಿ ಎನ್ನುವರು.ಉದಾ:ಭಾರತ ಹಾಗು ಫ಼್ರಾನ್ಸ್ನಲ್ಲಿ ಎರಡಕ್ಕಿಂತ ಹೆಚ್ಚಿನ ರಾಜಕೀಯ ಪಕ್ಷಗಳ ಪ್ರಭಾವವಿದೆ.
16. ರಾಜಕೀಯ ಪಕ್ಷಗಳ ಎರಡು ಕಾರ್ಯಗಳನ್ನು ತಿಳಿಸಿ?
ಉ:ಪ್ರನಾಳಿಕೆ ಸಿದ್ಧಪಡಿಸುವುದು,ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು,ಚುನಾವಣೆಗೆ ಸ್ಪರ್ಧಿಸುವುದು,ಸರ್ಕಾರವನ್ನು ರಚಿಸುವುದು ಇತ್ಯಾದಿಗಳು ರಾಜಕೀಯ ಪಕ್ಷಗಳ ಕಾರ್ಯಗಳಾಗಿವೆ.
17. ಸಂಮಿಶ್ರ ಸರ್ಕಾರ ಎಂದರೇನು? ಉದಾಹರಣೆ ನೀಡಿ.
ಉ:ಯಾವುದೇ ಒಂದು ರಾಜಕೀಯ ಪಕ್ಷವು ಬಹುಮತ ಪಡೆಯದಿದ್ದಾಗ ಒಂದಕ್ಕಿಂತ ಹೆಚ್ಚು ಸಮಾನಮನಸ್ಕ ರಾಜಕೀಯ ಪಕ್ಷಗಳು ಸೇರಿ ಸರ್ಕಾರವನ್ನು ರಚಿಸಿದರೆ ಅದನ್ನು ಸಂಮಿಶ್ರ ಸರ್ಕಾರ ಎನ್ನುವರು.ಉದಾ:ಮನಮೋಹನ್ ಸಿಂಗ್ ನಾಯಕತ್ವದ u.p.a ಸರ್ಕಾರ.
18. ಸಂಮಿಶ್ರ ಸರ್ಕಾರವು ಯಾವ ಸಂದರ್ಭದಲ್ಲಿ ರಚನೆಯಾಗುತ್ತದೆ?
ಉ:ಸಾರ್ವತ್ರಿಕ ಚುನಾವಣೆಗಳ ಬಳಿಕ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಬಹುಮತ ದೊರೆಯದಿದ್ದಾಗ ಮತ್ತು ಸಮಾನ ಮನಸ್ಕ ಪಕ್ಷಗಳು ಸರ್ಕಾರವನ್ನು ರಚಿಸಲು ಮುಂದಾದಾಗ ಸಂಮಿಶ್ರ ಸರ್ಕಾರ ರಚನೆಯಾಗುತ್ತದೆ.
19. ಯಾವುದಾದರೂ ಮೂರು ರಾಷ್ಟ್ರೀಯ ಪಕ್ಷಗಳನ್ನು ಹೆಸರಿಸಿ.
ಉ: ಭಾರತೀಯ ಜನತಾ ಪಕ್ಷ[b.j.p], ಭಾರತೀಯ ಕಾಂಗ್ರೆಸ್ ಪಕ್ಷ[I.N.C], ಭಾರತೀಯ ಕಮ್ಯೂನಿಷ್ಟ್ ಪಕ್ಷ[c.p.i], ಭಾರತೀಯ ಮಾರ್ಕ್ಸ್ವಾದಿ ಕಮ್ಯೂನಿಷ್ಟ್ ಪಕ್ಷ[c.p.i.m] ಮುಂತಾದವು ಭಾರತದಲ್ಲಿನ ಪ್ರಮುಖ ರಾಷ್ಟ್ರೀಯ ಪಕ್ಷಗಳಾಗಿವೆ.
20. ಯಾವುದಾದರೂ ನಾಲ್ಕು ಪ್ರಾದೇಶಿಕ ರಾಜಕೀಯ ಪಕ್ಷಗಳನ್ನು ಹೆಸರಿಸಿ?
ಉ: ತೆಲುಗು ದೇಶಂ ಪಕ್ಷ[t.d.p], ತೆಲಂಗಾಣ ರಾಷ್ಟ್ರ ಸಮೀತಿ[t.r.s], ದ್ರಾವಿಡ ಮುನ್ನೆತ್ರ ಕಜಗಂ[d.m.k], ತ್ರುಣ ಮೂಲ ಕಾಂಗ್ರೆಸ್[t.m.c] ಮುಂತಾದವು ಭಾರತದಲ್ಲಿನ ಪ್ರಮುಖ ಪ್ರಾದೇಶಿಕ ಪಕ್ಷಗಳಾಗಿವೆ.
21. ವಯಸ್ಕ ಮತದಾನ ಪದ್ಧತಿ ಎಂದರೇನು? ಉದಾಹರಣೆ ನೀಡಿ.
ಉ: ನಿರ್ದಿಷ್ಟ ವಯೋಮಿತಿ ದಾಟಿದ ದೇಶದ ಅರ್ಹ ಪ್ರಜೆಗಳಿಗೆಲ್ಲ ಮತ ನೀಡಲು ಅವಕಾಶವಿರುವ ವ್ಯವಸ್ಥೆಗೆ ವಯಸ್ಕ ಮತದಾನ ಪದ್ಧತಿ ಎನ್ನುವರು.ಮತದಾರರ ವಯೋಮಿತಿ ದೇಶದಿಂದ ದೇಶಕ್ಕೆ ವ್ಯತ್ಯಾಸವಾಗುತ್ತದೆ.ಉದಾ:ಭಾರತದಲ್ಲಿ ವಯೋಮಿತಿಯು 18 ವರ್ಷವಾಗಿದೆ.
22. ಭಾರತೀಯ ಕಮ್ಯೂನಿಷ್ಟ್ ಪಕ್ಷವು ಯಾವಾಗ ಸ್ಥಾಪನೆಯಾಯಿತು? ಅದರ ವಿಭಜನೆಯಿಂದ ಉದಯಿಸಿದ ಪಕ್ಷಗಳಾವುವು?
ಉ: ಭಾರತೀಯ ಕಮ್ಯೂನಿಷ್ಟ್ ಪಕ್ಷವು 1924ರಲ್ಲಿ ಸ್ಥಾಪನೆಯಾಯಿತು.ಇದು 1964ರಲ್ಲಿ ಭಾರತೀಯ ಕಮ್ಯೂನಿಷ್ಟ್ ಪಕ್ಷ{c.p.i}ಹಾಗು ಭಾರತೀಯ ಮಾರ್ಕ್ಸವಾದಿ ಕಮ್ಯೂನಿಷ್ಟ್ ಪಕ್ಷ{c.p.i.m}ಎಂಬುದಾಗಿ ವಿಭಜನೆಯಾಯಿತು.
23. ಭಾರತದಲ್ಲಿ ಮತದಾರನಾಗಲು ಇರಬೇಕಾದ ಅರ್ಹತೆಗಳಾವುವು?
ಉ: ಭಾರತದಲ್ಲಿ ಮತದಾರನಾಗಲು ಇರಬೇಕಾದ ಅರ್ಹತೆಗಳೆಂದರೆ
A. ಭಾರತದ ಪ್ರಜೆಯಾಗಿರಬೇಕು.
B. 18 ವರ್ಷ ವಯಸ್ಸಾಗಿರಬೇಕು.
C. ಅಪರಾಧಿ,ಮತಿವಿಕಲ ಅಥವ ದಿವಾಳಿಯಾಗಿರಬಾರದು.
24. ಮತದಾನದ ಹಕ್ಕನ್ನು ಯಾರುಯಾರಿಗೆ ನಿರಾಕರಿಸಲಾಗುತ್ತದೆ?
ಉ: ಮಕ್ಕಳು,ವಿದೇಶಿಯರು,ಅಪರಾಧಿಗಳು,ಮತಿವಿಕಲರು ಹಾಗು ದಿವಾಳಿಗಳಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗುತ್ತದೆ.
25. ಪ್ರಜಾಪ್ರತಿನಿಧಿ ಕಾಯಿದೆ ಕುರಿತು ಬರೆಯಿರಿ.
ಉ: ಪ್ರಜಾ ಪ್ರತಿನಿಧಿ ಕಾಯಿದೆಯು 1950ರಲ್ಲಿ ಜಾರಿಗೊಂಡಿತು. ಇದೇ ಹೆಸರಿನ ಇನ್ನೊಂದು ಕಾಯಿದೆ 1951 ರಲ್ಲಿ ಜಾರಿಗೊಂಡಿದೆ.ಇವೆರಡರ ಅಗತ್ಯ ಚುನಾವಣಾ ಆಯೋಗಕ್ಕಿದ್ದು ಎರಡೂ ಕಾಯಿದೆಗಳು ಚುನಾವಣೆಗೆ ಸಂಬಂಧಿಸಿದ ಬೇರೆಬೇರೆ ವಿಷಯಗಳನ್ನು ವಿವರಿಸುತ್ತವೆ.
26. ಪ್ರತ್ಯಕ್ಷ ಚುನಾವಣೆಯ ಲಕ್ಷಣ ಅಥವ ಅನುಕೂಲಗಳನ್ನು ತಿಳಿಸಿ?
ಉ: ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ, ಜನ ಪ್ರತಿನಿಧಿಗಳ ಮೇಲೆ ನಿಯಂತ್ರಣ, ರಾಜಕೀಯ ಜಾಗ್ರುತಿ ಮೂಡಿಸುತ್ತದೆ, ಯೋಗ್ಯ ಅಭ್ಯರ್ಥಿಗಳ ಆಯ್ಕೆ, ಸಾರ್ವಜನಿಕ ಸಂಪರ್ಕ ಎಂಬುವು ಪ್ರತ್ಯಕ್ಷ ಚುನಾವಣೆಯ ಲಕ್ಷಣಗಳಾಗಿವೆ.
27. ಪರೋಕ್ಷ ಚುನಾವಣೆಯ ಲಕ್ಷಣ ಅಥವ ಅನುಕೂಲಗಳನ್ನು ತಿಳಿಸಿ?
ಉ: ಸಮರ್ಥ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಆರ್ಭಟವಿಲ್ಲ, ಶಾಂತಿಯುತ ಮತದಾನ, ಭಾವೊದ್ವೇಗಕ್ಕೆ ಅವಕಾಶವಿಲ್ಲ, ಹಿಂದುಳಿದ ರಾಷ್ಟ್ರಗಳಿಗೆ ಸೂಕ್ತ ಎಂಬುವು ಪರೋಕ್ಷ ಚುನಾವಣೆಯ ಲಕ್ಷಣಗಳಾಗಿವೆ.





ಸಂಭವನೀಯ ಐದು ಅಥವ ಹತ್ತು ಅಂಕಗಳ ಪ್ರಶ್ನೆಗಳು
1. ಚುನಾವಣೆಯ ಅರ್ಥ ಮತ್ತು ಮಹತ್ವವನ್ನು ವಿವರಿಸಿ?
ಉ: ಚುನಾವಣೆ ಪದದ ಮೂಲ ಪದ ಎಲಿಗೆರೆ{eligere}. ಮತದಾರರು ಮತ ನೀಡುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಚುನಾವಣೆ ಎನ್ನುವರು. ಸಾರ್ವತ್ರಿಕ ಚುನಾವಣೆ, ಮಧ್ಯಂತರ ಚುನಾವಣೆ, ಉಪ ಚುನಾವಣೆ, ಮರು ಚುನಾವಣೆ ಎಂಬ ವಿವಿಧ ರೂಪದ ಚುನಾವಣೆಗಳನ್ನು ಕಾಣಬಹುದಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಚುನಾವಣೆಗಳು ಮಾನವನಿಗೆ ಆಮ್ಲಜನಿಕವಿದ್ದಂತೆ. ಪ್ರಜೆಗಳು ಚುನಾವಣೆಗಳನ್ನು ಪ್ರಜಾಪ್ರಭುತ್ವದಲ್ಲಿ ಒಂದು ಉತ್ಸವದಂತೆ ಕಾಣುತ್ತಾರೆ. ಮತಪತ್ರವು ಬಂದೂಕಿನ ನಳಿಕೆಗಿಂತ ಬಲಶಾಲಿ [BALLET IS MIGHTIER THAN BULLET] ಎಂಬ ನುಡಿಯು ಚುನಾವಣೆಯ ಮಹತ್ವವನ್ನು ತಿಳಿಸುತ್ತದೆ. ಚುನಾವಣೆಗಳು ಹೊಂದಿರುವ ಮಹತ್ವವನ್ನು ಈ ಕೆಳಗಿನ ಅಂಶಗಳಿಂದ ಅರಿಯಬಹುದು.
A ಚುನಾವಣೆಗಳು ಪ್ರಜಾಪರ ಆಡಳಿತಕ್ಕೆ ತಳಹದಿಯಾಗಿವೆ.
B ಚುನಾವಣೆಗಳು ದೇಶದ ಎಲ್ಲ ಪ್ರಜೆಗಳಿಗೆ ತಾರತಮ್ಯ ಮಾಡದೇ ಸಮಾನವಾದ ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸುವ ಸಾಧನಗಳಾಗಿವೆ.
C ಚುನಾವಣೆಗಳು ರಾಜಕೀಯ ಪಕ್ಷಗಳಿಗೆ ಸರ್ಕಾರ ನಡೆಸಲು ಅಧಿಕಾರ ಪಡೆದು ಪ್ರಜೆಗಳ ಹಿತ ಕಾಪಾಡಲು ನೆರವಾಗಿವೆ.
D ಚುನಾವಣೆಗಳು ಸಾಮಾನ್ಯ ಪ್ರಜೆಗಳಿಗೆ ಬೇಕಾದವರನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ ಅವರಲ್ಲಿ ಆತ್ಮ ಗೌರವ ಮತ್ತು ಸರ್ಕಾರದಲ್ಲಿ ತಮ್ಮ ಪಾತ್ರವನ್ನು ಅರಿಯಲು ಸಹಾಯಕವಾಗಿವೆ.
E ಚುನಾವಣೆಗಳು ಸಾರ್ವಜನಿಕ ಹಿತಾಸಕ್ತಿಯನ್ನು ಚರ್ಚಿಸಲು ಹಾಗು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ವೇದಿಕೆಯಾಗಿ ಪ್ರಜಾಪ್ರಭುತ್ವದ ಅಳತೆಗೋಲಾಗಿವೆ.
F ಚುನಾವಣೆಗಳು ಪ್ರಜೆಗಳಿಗೆ ರಾಜಕೀಯ ಜಾಗ್ರುತಿ ಮೂಡಿಸಿ ರಾಷ್ಟ್ರ ನಿರ್ಮಾಣಕ್ಕೆ ಸಿದ್ಧರಾಗಲು ನೆರವಾಗಿವೆ.
G ಚುನಾವಣೆಗಳು ಶಾಸಕಾಂಗದಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಕಲ್ಪಿಸಿ ಅವರು ತಮ್ಮ ಹಿತಾಸಕ್ತಿ ರಕ್ಷಿಸಿಕೊಳ್ಳಲು ಸಹಾಯಕವಾಗಿವೆ.
H ಚುನಾವಣೆಗಳು ಪ್ರಜೆಗಳು ಮತ್ತು ಪ್ರತಿನಿಧಿಗಳ ನಡುವೆ ಸಂಪರ್ಕ ಕೊಂಡಿಯಾಗಿವೆ.
I ಚುನಾವಣೆಗಳು ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಜನಸೇವೆ ಮಾಡಲು ಪ್ರೋತ್ಸಾಹಿಸುತ್ತವೆ.
J ಚುನಾವಣೆಗಳು ಪಕ್ಷದಿಂದ ಪಕ್ಷಕ್ಕೆ ಅಧಿಕಾರ ಶಾಂತಿಯುತವಾಗಿ ವರ್ಗಾವಣೆಯಾಗಲು ಮತ್ತು ಪ್ರಜಾಪ್ರಭುತ್ವ ಮುಂದುವರೆಯಲು ನೆರವಾಗಿವೆ.

2. ಪ್ರತ್ಯಕ್ಷ ಚುನಾವಣೆಯ ಲಕ್ಷಣಗಳನ್ನು ಚರ್ಚಿಸಿರಿ?
ಉ: ದೇಶದ ಮತದಾರರು ಮಧ್ಯವರ್ತಿಗಳ ನೆರವಿಲ್ಲದೆ ತಾವೇ ನೇರವಾಗಿ ರಹಸ್ಯವಾಗಿ ಮತಗಟ್ಟೆಯಲ್ಲಿ ಮತ ನೀಡುವ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕೆ ಪ್ರತ್ಯಕ್ಷ ಚುನಾವಣೆ ಎನ್ನುವರು.ಇದನ್ನು ನೇರ ಚುನಾವಣೆ ಎಂದೂ ಕರೆಯುತ್ತಾರೆ.ಉದಾ:ಭಾರತದಲ್ಲಿ ಗ್ರಾಪಂ,ತಾಪಂ,ಜಿಪಂ,ವಿಧಾನಸಭಾ ಹಾಗು ಲೋಕಸಭಾ ಸದಸ್ಯರನ್ನು ಚುನಾಯಿಸುವುದು. ಜೊತೆಗೆ ಅಮೇರಿಕದ ಕಾಂಗ್ರೆಸ್ಸಿನ ಕೆಳಮನೆಯಾದ ಪ್ರತಿನಿಧಿ ಸಭೆಗೆ ಮತ್ತು ಇಂಗ್ಲೆಂಡಿನ ಪಾರ್ಲಿಮೆಂಟಿನ ಕೆಳಮನೆಯಾದ ಸಾಮಾನ್ಯರ ಸಭೆಗೆ ಪ್ರತ್ಯಕ್ಷ ಚುನಾವಣೆ ನಡೆಯುತ್ತದೆ. ಈ ಪದ್ಧತಿಯ ಪ್ರಮುಖ ಲಕ್ಷಣಗಳೆಂದರೆ
A ಹೆಚ್ಚು ಪ್ರಜಾಸತ್ತಾತ್ಮಕ: ಇಲ್ಲಿ ಪ್ರಜೆಗಳು ತಮಗೆ ಯೋಗ್ಯವೆನಿಸುವ ಅಭ್ಯರ್ಥಿಯನ್ನು ರಹಸ್ಯವಾಗಿ ಮತ ನೀಡಿ ಚುನಾಯಿಸಬಹುದು. ತಮ್ಮ ಹಿತವನ್ನು ಕಾಪಾಡದ ಪ್ರತಿನಿಧಿಯನ್ನು ಅಧಿಕಾರದಿಂದ ದೂರವಿಡಬಹುದು. ಹೀಗಾಗಿ ಪ್ರತಿನಿಧಿಗಳು ಸದಾ ಪ್ರಜಾಪರ ಚಟುವಟಿಕೆಯಲ್ಲಿ ತೊಡಗಿ ಅವರ ಮತ ಪಡೆಯಲು ಶ್ರಮಿಸುತ್ತಾರೆ.
B ಪ್ರತಿನಿಧಿಗಳ ಮೇಲೆ ನಿಯಂತ್ರಣ: ಇಲ್ಲಿ ಪ್ರತಿನಿಧಿಗಳು ಪ್ರಜೆಗಳೊಡನೆ ಸದಾ ಸಂಪರ್ಕದಲ್ಲಿರುತ್ತಾರೆ. ಜನರ ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಕೂಡಲೇ ಸ್ಪಂದಿಸುತ್ತಾರೆ. ಪ್ರತಿನಿಧಿಗಳನ್ನು ಗಮನಿಸುತ್ತಿರುವ ಪ್ರಜೆಗಳು ತಮ್ಮ ಹಿತ ಕಾಪಾಡದಿರುವ ಪ್ರತಿನಿಧಿ ಪುನರಾಯ್ಕೆಗೊಳ್ಳದಂತೆ ಚುನಾವಣೆಯಲ್ಲಿ ಸೋಲಿಸುತ್ತಾರೆ. ಈ ಮೂಲಕ ಪ್ರತಿನಿಧಿಗಳನ್ನು ಅಧಿಕಾರಕ್ಕೆ ಬಾರದಂತೆ ನಿಯಂತ್ರಿಸುತ್ತಾರೆ.
C ರಾಜಕೀಯ ಜಾಗ್ರುತಿ ಮೂಡಿಸುವಿಕೆ: ಇಲ್ಲಿ ವಿವಿಧ ರಾಜಕೀಯ ಪಕ್ಷಗಳು ಜನರ ಮತ ಗಳಿಸಲು ಪ್ರಯತ್ನಿಸುತ್ತವೆ. ಚುನಾವಣೆ ವೇಳೆಯಲ್ಲಿ ಪ್ರನಾಳಿಕೆ ಮೂಲಕ ದೇಶದ ಸಮಸ್ಯೆಗಳ ಮೇಲೆ ಜನರು ಗಮನ ಹರಿಸುವಂತೆ ಮಾಡುತ್ತವೆ. ಜೊತೆಗೆ ಪ್ರಚಾರದ ಸಮಯದಲ್ಲಿ ತಮ್ಮ ಪಕ್ಷದ ಸಧನೆಗಳು ಹಾಗು ಇತರ ಪಕ್ಷಗಳ ದೋಷಗಳನ್ನು ಜನರ ಮುಂದಿಟ್ಟು ಮತ ಕೇಳುತ್ತವೆ. ಇದರಿಂದ ಸಾಮಾನ್ಯ ಪ್ರಜೆಗಳು ರಾಜಕೀಯ ಅರಿವು ಪಡೆದುಕೊಳ್ಳುವರು.
D ಯೋಗ್ಯ ಅಭ್ಯರ್ಥಿಗಳ ಆಯ್ಕೆ: ಇಲ್ಲಿ ಚುನಾವಣೆಯ ಕಣದಲ್ಲಿ ಬೇರೆಬೇರೆ ರಾಜಕೀಯ ಪಕ್ಷಗಳಿರುತ್ತವೆ. ಅವು ತಮ್ಮದೇ ಕಾರ್ಯಕ್ರಮ ಹಾಗು ಸಿದ್ಧಾಂತಗಳ ಆಧಾರದ ಮೇಲೆ ಜನರ ಮತ ಗಳಿಸಲು ಪ್ರಯತ್ನಿಸುತ್ತವೆ. ಇದರಿಂದ ಪ್ರಜೆಗಳ ಆಯ್ಕೆ ಸ್ವಾತಂತ್ರ್ಯ ವಿಶಾಲಗೊಂಡು ತಮ್ಮ ಹಿತಾಸಕ್ತಿಗೆ ಶ್ರಮಿಸುವ ಬರವಸೆಯುಳ್ಳ ಪ್ರತಿನಿಧಿಯನ್ನು ಚುನಾಯಿಸಲು ಮುಂದಾಗುತ್ತಾರೆ. ಇದರಿಂದ ಯೋಗ್ಯರು ಅಧಿಕಾರ ಪಡೆಯುವರು.
E ಸಾರ್ವಜನಿಕರೊಡನೆ ಸಂಪರ್ಕ: ಇಲ್ಲಿ ಪ್ರಜೆಗಳು ಚುನಾವಣೆಯಲ್ಲಿ ಪ್ರಭುಗಳಾಗಿರುತ್ತಾರೆ. ಹೀಗಾಗಿ ಪ್ರತಿನಿಧಿಗಳು ತಮ್ಮ ಪ್ರಜೆಗಳೊಡನೆ ಸದಾ ಸಂಪರ್ಕದಲ್ಲಿರುತ್ತಾರೆ. ಸರ್ಕಾರದ ಯೋಜನೆಗಳ ಲಾಭ ತಮ್ಮ ಪ್ರಜೆಗಳಿಗೆ ತಲುಪುವಂತೆ ಶ್ರಮಿಸುವರು. ಎಲ್ಲ ವೇಳೆಯಲ್ಲಿ ಜನರ ಜೊತೆಗಿರುತ್ತಾರೆ. ಸುಲಭವಾಗಿ ಪ್ರಜೆಗಳ ಸಂಪರ್ಕಕ್ಕೆ ಬಂದು ಅವರ ಕಷ್ಟ ಪರಿಹರಿಸುತ್ತಾರೆ.

3. ಪರೋಕ್ಷ ಚುನಾವಣೆಯ ಲಕ್ಷಣಗಳನ್ನು ವಿವರಿಸಿ?
ಉ: ದ್ದೇಶದ ಮುಖ್ಯಸ್ಥ ಜನರಿಂದ ನೇರವಾಗಿ ಮತ ಪಡೆಯದೇ ಜನರ ಪ್ರತಿನಿಧಿಗಳಿಂದ ಮತ ಪಡೆದು ಆಯ್ಕೆಯಾಗುವುದನ್ನು  ಪರೋಕ್ಷ ಚುನಾವಣೆ ಎನ್ನುವರು.ಉದಾ:ಭಾರತದ ರಾಷ್ಟ್ರಪತಿಯ ಚುನಾವಣೆಯಲ್ಲಿ ಜನರಿಂದ ಆಯ್ಕೆಯಾದ ಲೋಕಸಭಾ ಹಾಗು ವಿಧಾನಸಭಾ ಸದಸ್ಯರು ಮತ ನೀಡುತ್ತಾರೆ. ಅದೇ ರೀತಿ ಗ್ರಾಮ ಪಂಚಾಯಿತಿ ಸದಸ್ಯರು ಮತ ನೀಡಿ ಅಧ್ಯಕ್ಷನನ್ನು ಆಯ್ಕೆ ಮಾಡುತ್ತಾರೆ. ಇಲ್ಲಿ ಜನರು ಮತದಾರರಾಗಿರದೇ ಜನಪ್ರತಿನಿಧಿಗಳು ಮತದಾರರಾಗಿರುತ್ತಾರೆ. ಈ ಪದ್ಧತಿಯ ಮುಖ್ಯ ಲಕ್ಷಣಗಳೆಂದರೆ
A ಸಮರ್ಥ ಅಭ್ಯರ್ಥಿಗಳ ಆಯ್ಕೆ: ಇಲ್ಲಿ ಸಾಮಾನ್ಯ ಜನರು ಮತದಾನ ಮಾಡುವುದಿಲ್ಲ. ಬದಲಾಗಿ ತಿಳುವಳಿಕೆಯುಳ್ಳ ಜನಪ್ರತಿನಿಧಿಗಳು ಮತದಾರರಾಗಿರುತ್ತಾರೆ. ಮೊದಲು ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಉತ್ತಮರಾಗಿದ್ದು ಅವರಿಂದ ಮತ ಪಡೆದು ಆಯ್ಕೆಯಾಗುವವರು ಸಮರ್ಥರಾಗಿರುತ್ತಾರೆ.
B ಪ್ರಚಾರದ ಆರ್ಭಟವಿಲ್ಲ: ಇಲ್ಲಿ ಚುನಾವಣೆಯ ಪ್ರಚಾರ ಸದ್ದು ಗದ್ದಲವಿಲ್ಲದೇ ನಡೆಯುತ್ತದೆ. ಮೆರವಣಿಗೆ, ರ್ಯಾಲಿ, ಸಭೆ ಸಮಾರಂಭಗಳು ಜರುಗುವುದಿಲ್ಲ. ಪ್ರತ್ಯಕ್ಷ ಚುನಾವಣೆಯಲ್ಲಿ ಕಾಣುವ ಅಬ್ಬರ, ತಂತ್ರಗಾರಿಕೆ, ಆಮಿಷ್ಯಗಳು ಇಲ್ಲಿ ಕಂಡು ಬರುವುದಿಲ್ಲ.ಕಾರಣ ತಿಳುವಳಿಕೆಯುಳ್ಳ ಪ್ರತಿನಿಧಿಗಳು ಮತದಾರರಾಗಿರುತ್ತಾರೆ.
C ಶಾಂತಿಯುತ ಮತದಾನ: ಇಲ್ಲಿ ಮತದಾನ ಶಾಂತಿಯುತವಾಗಿರುತ್ತದೆ. ರಾಜಕೀಯ ಪಕ್ಷಗಳ ಮೇಲಾಟದಿಂದ ಪ್ರತ್ಯಕ್ಷ ಚುನಾವಣೆಯಲ್ಲಿ ಜರುಗುವ ಗರ್ಷಣೆ, ಹಿಂಸಾಚಾರ, ದಬ್ಬಾಳಿಕೆಗಳು ಕಂಡು ಬರುವುದಿಲ್ಲ. ಸರಳವಾಗಿ ಇಲ್ಲಿ ಸುಗಮ ಮತದಾನ ಕಂಡು ಬರುವುದು.
D ಭಾವೋದ್ವೇಗಕ್ಕೆ ಅವಕಾಶವಿಲ್ಲ: ಇಲ್ಲಿ ಮತದಾರರು ಅಲ್ಪ ಸಂಖೆಯಲ್ಲಿದ್ದು ಅನುಭವಿಗಳಾಗಿರುತ್ತಾರೆ. ಹೀಗಾಗಿ ಅವರನ್ನು ಜಾತಿ, ಧರ್ಮ, ಪ್ರದೇಶಗಳ ಆಧಾರದ ಮೇಲೆ ಆಕರ್ಷಿಸಲು ಸಾಧ್ಯವಿಲ್ಲ. ಮತದಾರರು ಇಲ್ಲಿ ಭಾವಾವೇಶಕ್ಕೊಳಗಾಗದೇ ಉತ್ತಮರನ್ನು ಚುನಾಯಿಸುವರು.
E ಹಿಂದುಳಿದ ರಾಷ್ಟ್ರಗಳಿಗೆ ಸೂಕ್ತ: ಬಡತನ ಹಾಗು ಅನಕ್ಷರತೆ ಕಂಡು ಬರುವ ಹಿಂದುಳಿದ ದೇಶಗಳಲ್ಲಿ ಪ್ರಜೆಗಳು ಯೋಗ್ಯರನ್ನು ಆಯ್ಕೆ ಮಾಡಲಾರರು. ಸಮರ್ಥರನ್ನು ಆಯ್ಕೆ ಮಾಡಲು ತಿಳುವಳಿಕೆಯುಳ್ಳ ಪ್ರತಿನಿಧಿಗಳಿಂದ ಮಾತ್ರ ಸಾಧ್ಯವಾಗುತ್ತದೆ. ಹೀಗಾಗಿ ಅಲ್ಲಿ ಪರೋಕ್ಷ ಚುನಾವಣೆಯನ್ನೇ ಅಳವಡಿಸುವುದು ಸೂಕ್ತವಾಗಿರುತ್ತದೆ.

4. ಚುನಾವಣಾ ಆಯೋಗದ ರಚನೆಯನ್ನು ಕುರಿತು ಟಿಪ್ಪಣಿ ಬರೆಯಿರಿ?
ಉ: ಭಾರತವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ. ಪ್ರಜಾಪ್ರಭುತ್ವದ ಯಶಸ್ಸು ಮುಕ್ತ ಹಾಗು ನ್ಯಾಯಸಮ್ಮತ ಚುನಾವಣೆಗಳನ್ನು ಅವಲಂಬಿಸಿದೆ. ಹೀಗಾಗಿ ನಮ್ಮ ಸಂವಿಧಾನ ರಚನಾಕಾರರು ಸಂವಿಧಾನದ 15ನೆಯ ಭಾಗದ 324ನೆಯ ವಿಧಿಯಲ್ಲಿ ಸ್ವತಂತ್ರ ಚುನಾವಣಾ ಆಯೋಗಕ್ಕೆ ಅವಕಾಶ ನೀಡಿದ್ದಾರೆ. 25 ಜನೇವರಿ 1950ರಂದು ಚುನಾವಣಾ ಆಯೋಗ ಜಾರಿಗೊಂಡಿದ್ದು ಅದಕ್ಕಾಗಿ ಪ್ರತಿ ಜನೇವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಇದರ ರಚನೆಯನ್ನು ಕೆಳಗಿನ ಅಂಶಗಳು ಸ್ಪಷ್ಟ ಪಡಿಸುತ್ತವೆ.

* ಒಟ್ಟು ಸದಸ್ಯರ ಸಂಖೆ: ಚುನಾವಣಾ ಆಯೋಗವು ಆರಂಭದಲ್ಲಿ ಏಕ ಸದಸ್ಯ ಆಯೋಗವಾಗಿದ್ದು ಸುಕುಮಾರ ಸೇನ್ ಇದರ ಮೊದಲ ಆಯುಕ್ತನಾಗಿದ್ದರು. ಮುಂದೆ 1990ರ ಹೊತ್ತಿಗೆ ದಿನೇಶ್ ಗೋಸ್ವಾಮಿ ಸಮೀತಿ ಹಾಗು ಸರ್ವೋಚ್ಚ ನ್ಯಾಯಾಲಯದಿಂದ ಆಯೋಗವು ಬಹು ಸದಸ್ಯರಿಂದ ಕೂಡಿರಬೇಕೆಂಬ ಒತ್ತಡ ಹೆಚ್ಚಾಯಿತು. ಹೀಗಾಗಿ 1993ರಿಂದ ಚುನಾವಣಾ ಆಯೋಗ ತ್ರಿ ಸದಸ್ಯ ಆಯೋಗವಾಗಿದೆ.

* ನೇಮಕ: ಚುನಾವಣಾ ಆಯೋಗದ ಮುಖ್ಯ ಹಾಗು ಉಪ ಆಯುಕ್ತರನ್ನು ರಾಷ್ಟ್ರಪತಿ ನೇಮಿಸುತ್ತಾರೆ. ಈ ಕಾರ್ಯಕ್ಕೆ ಸಂವಿಧಾನದ 324 [2]ನೆ ಉಪ ವಿಧಿಯಂತೆ ಕೇಂದ್ರ ಮಂತ್ರಿ ಮಂಡಲದ ಸಲಹೆ ಕಡ್ಡಾಯವಾಗಿರುತ್ತದೆ.

* ಅಧಿಕಾರ ಅವಧಿ: ಚುನಾವಣಾ ಆಯೋಗದ ಮುಖ್ಯ ಹಾಗು ಇತರ ಆಯುಕ್ತರ ಅಧಿಕಾರವಧಿಯು 6 ವರ್ಷ ಅಥವ 65 ವರ್ಷ ವಯಸ್ಸಾಗುವವರೆಗೆ. ಇವುಗಳಲ್ಲಿ ಯಾವುದು ಮೊದಲು ಬರುತ್ತದೊ ಅದನ್ನು ಪಾಲಿಸಲಾಗುತ್ತದೆ. ಅಂದರೆ 6 ವರ್ಷಕ್ಕಿಂತ ಮೊದಲೇ ಆಯುಕ್ತರಿಗೆ 65 ವಯಸ್ಸಾದರೆ ಆತ ಅಧಿಕಾರ ಕಳೆದುಕೊಳ್ಳುತ್ತಾನೆ.

* ವೇತನ ಮತ್ತು ಸೌಲಭ್ಯಗಳು: 1991ರ ಸಂಸತ್ತಿನ ಕಾಯಿದೆಯಂತೆ ಚುನಾವಣಾ ಆಯೋಗದ ಮುಖ್ಯ ಹಾಗು ಉಪ ಆಯುಕ್ತರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಸಮನಾದ ಸ್ಥಾನಮಾನ ಹಾಗು ಸೌಲಭ್ಯ ಪಡೆಯುತ್ತಾರೆ. ಸಂವಿಧಾನದ 324 [6]ನೆ ಉಪ ವಿಧಿಯಂತೆ ಆಯೋಗವು ತನ್ನ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಆಯೋಗದ ಸದಸ್ಯರ ವೇತನವನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುತ್ತಿದ್ದು ಅವರಿಗೆ ಅನಾನುಕೂಲವಾಗುವಂತೆ ಬದಲಾಯಿಸಲು ಸಂಸತ್ತಿಗೆ ಅಧಿಕಾರವಿಲ್ಲ.

* ಪದಚ್ಯುತಿ ವಿಧಾನ: ಸಂವಿಧಾನದ 324 [5]ನೆ ಉಪ ವಿಧಿಯಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವಂತೆ ಸಂಸತ್ತಿನ ವಿಶೇಷ ಬಹುಮತದೊಡನೆ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ತೆಗೆದು ಹಾಕಲಾಗುತ್ತದೆ. ಮುಖ್ಯ ಆಯುಕ್ತನ ಸಲಹೆಯಂತೆ ರಾಷ್ಟ್ರಪತಿ ಉಪ ಆಯುಕ್ತರನ್ನು ಅಥವ ಪ್ರಾದೇಶಿಕ ಆಯುಕ್ತರನ್ನು ತೆಗೆದು ಹಾಕುತ್ತಾರೆ.

ಒಟ್ಟಿನಲ್ಲಿ ಭಾರತದಲ್ಲಿನ ವಿವಿಧ ಚುನಾವಣೆಗಳನ್ನು ವ್ಯವಸ್ಥಿತವಾಗಿ ನಡೆಸಲು ಸ್ವತಂತ್ರ ಆಯೋಗವನ್ನು ಸಂವಿಧಾನ ರಚನಾಕಾರರು ಸ್ಥಾಪಿಸಿದ್ದಾರೆ. ಈ ಆಯೋಗವು ಕಾಲಕಾಲಕ್ಕೆ ಅಗತ್ಯ ಸುಧಾರಣೆ ಮಾಡಿಕೊಂಡು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಮುಂದುವರೆಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ.

5. ಚುನಾವಣಾ ಆಯೋಗದ ಕಾರ್ಯಗಳನ್ನು ಪಟ್ಟಿ ಮಾಡಿರಿ?
ಉ: ಭಾರತದಲ್ಲಿ ಚುನಾವಣೆಗಳನ್ನು ನಿರ್ದೇಶಿಸಲು, ನಿರ್ವಹಿಸಲು ಹಾಗು ನಿಯಂತ್ರಿಸಲು ಜಾರಿಗೊಂಡಿರುವ ಸ್ವತಂತ್ರ ಆಯೋಗವೇ ಚುನಾವಣಾ ಆಯೋಗವಾಗಿದೆ. ನಿರ್ಭೀತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಲು ಆಯೋಗ ಅನೇಕ ಅಧಿಕಾರ ಕಾರ್ಯಗಳನ್ನು ಪಡೆದುಕೊಂಡಿದೆ. ಸಂವಿಧಾನದ 324 [1]ನೆ ಉಪ ವಿಧಿ ಮತ್ತು 1950/51ರ ಪ್ರಜಾಪ್ರತಿನಿಧಿ ಕಾಯಿದೆಗಳ ಪ್ರಕಾರ ಚುನಾವಣಾ ಆಯೋಗದ ಕಾರ್ಯಗಳೆಂದರೆ
A ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಹಾಗು ಕಾಲಕಾಲಕ್ಕೆ ಅದನ್ನು ಪರಿಷ್ಕರಿಸುವುದು.
B ರಾಷ್ಟ್ರಪತಿ,ಉಪ ರಾಷ್ಟ್ರಪತಿ,ಸಂಸತ್ ಸದಸ್ಯ,ವಿಧಾನಸಭಾ ಸದಸ್ಯ ಮುಂತಾದ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು.
C ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು ಹಾಗು ಚಿನ್ಹೆಗಳನ್ನು ಹಂಚುವುದು.
D ರಾಜಕೀಯ ಪಕ್ಷಗಳ ಚಿನ್ಹೆಗಳನ್ನು ಕುರಿತಾದ ವಿವಾದಗಳನ್ನು ಬಗೆ ಹರಿಸುವುದು.
E ಕೇಂದ್ರ ಶಾಸಕಾಂಗ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಕಾಲಕಾಲಕ್ಕೆ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದವರಿಗೆ ಮೀಸಲು ಸ್ಥಾನಗಳನ್ನು ನಿಗಧಿಪಡಿಸುವುದು.
F ವಿವಿಧ ಚುನಾವಣೆಗಳ ವೇಳಾಪಟ್ಟಿ ಸಿದ್ಧಪಡಿಸಿ ಪ್ರಕಟಿಸುವುದು.
G ಚುನಾವಣೆಯ ಪ್ರಚಾರ ಸಮಯದಲ್ಲಿ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸುವುದು ಮತ್ತು ಉಲ್ಲಂಘಿಸಿದವರನ್ನು ಶಿಕ್ಷಿಸುವುದು.
H ನಾನಾ ಕಾರಣಗಳಿಂದ ಅಗತ್ಯವಿದ್ದ ಮತಗಟ್ಟೆಗಳಲ್ಲಿ ಮರು ಚುನಾವಣೆಯನ್ನು ಕೈಗೊಳ್ಳುವುದು.
I ಮತಗಳ ಎಣಿಕೆ ನಂತರ ಫಲಿತಾಂಶ ಘೋಷಿಸಿ ಶಾಸನಸಭೆಯ ರಚನೆಗೆ ಪ್ರಕಟಣೆ ಹೊರಡಿಸುವುದು.
J ಅನಿವಾರ್ಯ ಸಮಯದಲ್ಲಿ ಚುನಾವಣೆ ಮುಂದೂಡುವ ಅಥವ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳುವುದು.
K ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡಿದ ವೆಚ್ಚವನ್ನು ಪರಿಶೀಲಿಸುವುದು.
L ಚುನಾವಣಾ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದು.
M ಐದು ವರ್ಷಗಳ ಮೊದಲೇ ತೆರವಾಗುವ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವುದು.

ಒಟ್ಟಿನಲ್ಲಿ ಚುನಾವಣೆಗೆ ಚುನಾವಣಾ ಆಯೋಗವು ಸಮರ ಸಿದ್ಧತೆ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಯೋಗ ಹಲವು ಬದಲಾವಣೆಗಳನ್ನು ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ತನ್ನ ಕಾರ್ಯಗಳನ್ನು ಕಡಿಮೆಗೊಳಿಸಲು ಐದು ವರ್ಷಕ್ಕೊಮ್ಮೆ ದೇಶದಾದ್ಯಂತ ವಿವಿಧ ಸ್ಥಾನಗಳಿಗೆ ಒಂದೇ ಚುನಾವಣೆ ನಡೆಸಲು ಚರ್ಚಿಸಲಾಗುತ್ತಿದೆ.

6. ಭಾರತದಲ್ಲಿನ ಪ್ರಮುಖ ಚುನಾವಣಾ ಸುಧಾರಣೆಗಳನ್ನು ಚರ್ಚಿಸಿರಿ?
ಉ: ಪ್ರಜಾಪ್ರಭುತ್ವದ ಯಶಸ್ಸು ರಾಜಕೀಯ ಸ್ಥಿರತೆಯನ್ನು ಆಧರಿಸಿದೆ. ಇದಕ್ಕೆ ಪಾರದರ್ಶಕ, ಶುದ್ಧ, ನಿಷ್ಪಕ್ಷಪಾತ ಚುನಾವಣೆಗಳು ಅಗತ್ಯ. ಆದರೆ ಭಾರತದಲ್ಲಿ ಇಂದು ರಾಜಕೀಯ ಪಕ್ಷಗಳು ಕೋಮು ಭಾವನೆ, ಅಪರಾಧ ಚಟುವಟಿಕೆ, ನಕಲಿ ಮತದಾನ ಮೂಲಕ ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಚುನಾವಣೆಗಳನ್ನು ಹಾಳುಗೆಡವುತ್ತಿವೆ. ಹೀಗಾಗಿ ಕಾಲಕಾಲಕ್ಕೆ ವಿವಿಧ ಸಮೀತಿಗಳು ರಚನೆಗೊಂಡು ಅನೇಕ ಚುನಾವಣಾ ಸುಧಾರಣೆಗಳು ಜಾರಿಗೊಳ್ಳುವಂತೆ ಮಾಡಿವೆ. ಇಂತಹ ಪ್ರಮುಖ ಸುಧಾರಣೆಗಳು ಕೆಳಗಿನಂತಿವೆ.
A ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ ಹಂಚಿಕೆ: ಇದನ್ನು EPIC ಎನ್ನುವರು. ಮತದಾರನ ಹೆಸರು, ವಯಸ್ಸು, ಲಿಂಗ, ವಿಳಾಸ, ಭಾವಚಿತ್ರವನ್ನು ಹೊಂದಿದ ಚೀಟಿಗೆ ಮತದಾರರ ಗುರುತಿನ ಚೀಟಿ ಎನ್ನುವರು. ಇದನ್ನು ಮೊದಲು ಟಿ. ಎನ್. ಶೇಷನ್ ಆಯುಕ್ತರಾಗಿದ್ದಾಗ 1993ರಲ್ಲಿ ಜಾರಿಗೊಳಿಸಲಾಗಿತ್ತು. ಆರಂಭದಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಇದನ್ನು ಎಲ್ಲರಿಗೂ ಹಂಚಲು ಸಾಧ್ಯವಾಗಲಿಲ್ಲ. ಮುಂದೆ ಎಂ. ಎಸ್. ಗಿಲ್ ಆಯುಕ್ತರಾದಾಗ ಕಡ್ಡಾಯವಾಗಿ ಇದನ್ನು ಹೊಂದಲು ತಿಳಿಸಲಾಯಿತು. ಈ ಗುರುತಿನ ಚೀಟಿಯ ಅನುಕೂಲಗಳೆಂದರೆ
A. ನಕಲೀ ಮತದಾನವನ್ನು ತಡೆಯಬಹುದು.
B. ರಾಜಕೀಯ ಪಕ್ಷಗಳ ಅಕ್ರಮಗಳನ್ನು ಇದರಲ್ಲಿನ ವಿವರಗಳಿಂದ ನಿಯಂತ್ರಿಸಬಹುದು.
C. ಸರ್ಕಾರದ ಯೋಜನೆಗಳನ್ನು ಸುಲಭವಾಗಿ ಪಡೆಯಬಹುದು.

B ವಿದ್ಯುನ್ಮಾನ ಮತಯಂತ್ರಗಳ ಬಳಕೆ: ಜನಸಂಖೆಯ ಹೆಚ್ಚಳ ಹಾಗು ಮತದಾರರ ವಯೋಮಿತಿಯ ಇಳಿಕೆ ಕಾರಣದಿಂದ ಭಾರತದ ಚುನಾವಣೆ ಕಠಿಣವಾದಾಗ ಚುನಾವಣಾ ಆಯೋಗ ತಾಂತ್ರಿಕತೆ ಬಳಸಲು ಮುಂದಾಯಿತು. ಬೆಂಗಳೂರಿನ B E L ಹಾಗು ಹೈದರಾಬಾದಿನ E C I ಸಹಕಾರದಿಂದ ಮತ ದಾಖಲಿಸುವ ವಿದ್ಯುತ್ ಚಾಲಿತ ವಿದ್ಯುನ್ಮಾನ ಮತ ಯಂತ್ರ ರಚನೆಗೊಂಡಿತು. ಇದನ್ನು ಇ. ವಿ. ಎಂ. ಎನ್ನುವರು.

ವಿದ್ಯುನ್ಮಾನ ಮತ ಯಂತ್ರವು ಮತ ಘಟಕ ಹಾಗು ನಿಯಂತ್ರಣ ಘಟಕ ಎಂಬ ಎರಡು ಯಂತ್ರ ಹೊಂದಿರುತ್ತದೆ. ಈ ಯಂತ್ರಗಳ ನಡುವೆ ಐದು ಮೀಟರಿನ ಕೇಬಲ್ ಜೋಡಣೆ ಕಾಣಬಹುದು. ಮತ ಘಟಕವು ಮತದಾನದ ಸ್ಥಳದಲ್ಲಿದ್ದು 16 ಅಭ್ಯರ್ಥಿಗಳ ಹೆಸರು ಮತ್ತು ಚಿನ್ಹೆ ಹೊಂದಿರುತ್ತದೆ. ತನ್ನ ಅಭ್ಯರ್ಥಿಯ ಹೆಸರಿನ ಮುಂದಿರುವ ಗುಂಡಿಯನ್ನು ಮತದಾರ ಒತ್ತಿ ಮತ ದಾಖಲಿಸಬಹುದು. ಒಂದು ಮತ ಯಂತ್ರ 3840 ಮತಗಳನ್ನು ಸಂಗ್ರಹಿಸಿಟ್ಟುಕೊಳ್ಳಬಲ್ಲದು. ನಿಯಂತ್ರಣ ಘಟಕವು ಚುನಾವಣಾ ಅಧಿಕಾರಿಯ ಹತ್ತಿರವಿದ್ದು ಮತದಾರನ ವಿವಿಧ ಪರಿಶೀಲನೆಯ ಬಳಿಕ ಮತ ನೀಡಲು ಅನುಮತಿಸುವ ಗುಂಡಿಯನ್ನು ಅದರಿಂದ ಅಧಿಕಾರಿ ಒತ್ತುವನು. ಇದಕ್ಕೆ 5500 ರೂಪಾಯಿಗಳ ತಯಾರಿಕಾ ವೆಚ್ಚವಾಗುತ್ತದೆ. ಈ ಯಂತ್ರಗಳನ್ನು ಮೊದಲ ಬಾರಿ 1998ರ ಕೆಲ ಚುನಾವಣೆಗಳಲ್ಲಿ ಬಳಸಲಾಯಿತು. ಮುಂದೆ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಸಂಪೂರ್ಣವಾಗಿ ಉಪಯೋಗಿಸಲಾಯಿತು. ಈ ಯಂತ್ರಗಳ ಉಪಯೋಗಗಳೆಂದರೆ ಸುಲಭ ಬಳಕೆ, ಶೀಗ್ರ ಫಲಿತಾಂಶ, ಆರ್ಥಿಕ ಮಿತವ್ಯಯ, ಪರಿಸರ ಸ್ನೇಹಿ, ಇತ್ಯಾದಿ.

C ಅಭ್ಯರ್ಥಿಗಳ ಕಡ್ಡಾಯ ವಿವರಗಳ ಘೋಷಣೆ: ಚುನಾವಣೆಗಳು ಉತ್ತಮವಾಗಿ ನಡೆಯಲು ಚುನಾವಣೆಯಲ್ಲಿ ಸ್ಪರ್ಧಿಸಿರುವವನ ಕುರಿತು ಮತದಾರರು ಕೆಲ ವಿವರಗಳನ್ನು ತಿಳಿದಿರಬೇಕೆಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ಸೂಚಿಸಿತು. ಹೀಗಾಗಿ ಈ ಕೆಳಗಿನ ವಿವರಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ನಾಮಪತ್ರದೊಡನೆ ಸಲ್ಲಿಸುವಂತಾಗಿದೆ.
* ಅಪರಾಧ ಹಿನ್ನೆಲೆಯ ಘೋಷಣೆ: ಇತ್ತೀಚೆಗೆ ಕೊಲೆ, ದೌರ್ಜನ್ಯ, ವಂಚನೆ, ಮುಂತಾದ ಅಪರಾಧ ಹಿನ್ನೆಲೆಯುಳ್ಳವರು ಚುನಾವಣೆಯಲ್ಲಿ ಗೆದ್ದು ರಾಜಕಾರಣಕ್ಕೆ ಬರುತ್ತಿದ್ದಾರೆ. ದೇಶವನ್ನು ನಡೆಸುವ ಪ್ರತಿನಿಧಿಗಳು ಉತ್ತಮ ಚಾರಿತ್ರ್ಯ ಹೊಂದಿರುವುದು ಅಗತ್ಯ. ಹೀಗಾಗಿ ನ್ಯಾಯಾಲಯದ ನಿರ್ದೇಶನದಂತೆ ಚುನಾವಣೆಯಲ್ಲಿ ಅಭ್ಯರ್ಥಿಗಳು ತಮ್ಮ ನಾಮಪತ್ರದೊಡನೆ ಅವರ ಅಪರಾಧ ಹಿನ್ನೆಲೆಯ ವಿವರಗಳನ್ನು ಕಡ್ಡಾಯವಾಗಿ ಘೋಷಿಸುವಂತಾಗಿದೆ. ಜೊತೆಗೆ ಸಾರ್ವಜನಿಕವಾಗಿ ಆ ವಿವರಗಳನ್ನು ಪ್ರಕಟಿಸಲಾಗುತ್ತದೆ. ಇದರಿಂದ ಮತದಾರ ಅಭ್ಯರ್ಥಿಗಳ ಹಿನ್ನೆಲೆ ಅರಿತು ಮತದಾನದ ವೇಳೆ ಸೂಕ್ತ ತೀರ್ಮಾನ ಕೈಗೊಳ್ಳಲು ನೆರವಾಗುತ್ತದೆ. ಎರಡು ವರ್ಷಕ್ಕಿಂತ ಹೆಚ್ಚು ಜೈಲು ವಾಸ ಅನುಭವಿಸಿದರೆ ಆತನ ಪ್ರತಿನಿಧಿ ಸ್ಥಾನ ಕಳೆದುಕೊಳ್ಳುತ್ತಾನೆ. ಜೊತೆಗೆ ಮುಂದಿನ ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಒಂದು ವೇಳೆ ಅಭ್ಯರ್ಥಿಯು ಈ ವಿವರಗಳನ್ನು ನಾಮಪತ್ರದೊಡನೆ ಘೋಷಿಸದಿದ್ದರೆ ಆತನ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಬಹುದು.

* ಶಿಕ್ಷಣ ಹಿನ್ನೆಲೆಯ ಘೋಷಣೆ: ಪ್ರತಿನಿಧಿಗಳು ಕಾನೂನು ರಚಿಸುವಲ್ಲಿ ಭಾಗವಹಿಸಲು ಮುಂದಾಗಬೇಕು. ದೇಶದ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಕುರಿತು ಚಿಂತಿಸಬೇಕು. ಇದಕ್ಕೆಲ್ಲ ಆತನು ಸುಶಿಕ್ಶಿತನಾಗಿರಬೇಕು. ಆದರೆ ನಮ್ಮ ಸಂವಿಧಾನ ಯಾವುದೇ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಿಲ್ಲ. ಚುನಾವಣಾ ಆಯೋಗ ಪ್ರತಿನಿಧಿಗಳಿಗೆ ಕನಿಷ್ಟ ವಿದ್ಯಾರ್ಹತೆ ನಿಗದಿಪಡಿಸಿ ಕಾನೂನು ರಚಿಸಲು ತಿಳಿಸಿದರೂ ಅಂತಹ ಕಾನೂನು ಇಂದಿಗೂ ಜಾರಿಯಾಗಿಲ್ಲ. ಹೀಗಾಗಿ ಅಭ್ಯರ್ಥಿಗಳು ನಾಮಪತ್ರದೊಡನೆ ತಮ್ಮ ಶೈಕ್ಷಣಿಕ ವಿವರಗಳನ್ನು ಘೋಷಿಸುವಂತೆ ಸೂಚಿಸಿದೆ. ಇದರಿಂದ ಸಾರ್ವಜನಿಕವಾಗಿ ಅಭ್ಯರ್ಥಿಗಳ ಶಿಕ್ಷಣದ ವಿವರ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತವೆ. ಆಗ ಮತದಾರ ಕಣದಲ್ಲಿರುವ ಸಮರ್ಥರನ್ನು ಆಯ್ಕೆ ಮಾಡಿಕೊಂಡು ತಮ್ಮ ಹಿತ ಕಾಪಾಡಿಕೊಳ್ಳುವಂತಾಗುತ್ತದೆ.

* ಆಸ್ತಿ ಹಿನ್ನೆಲೆಯ ಘೋಷಣೆ: ಇಂದು ಚುನಾವಣೆಗಳಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಅಭ್ಯರ್ಥಿಗಳು ಚುನಾವಣೆಯನ್ನು ಹಣ ಹಾಕಿ ಹಣ ಗಳಿಸುವ ವ್ಯಾಪಾರವೆಂದು ಭಾವಿಸಿದ್ದಾರೆ. ಒಮ್ಮೆ ಆಯ್ಕೆಯಾದ ಪ್ರತಿನಿಧಿ ಮೂರು ತಲೆಮಾರು ಅನುಭವಿಸುವಷ್ಟು ಗಳಿಸುತ್ತಾನೆ. ಹ್ಈಗಾಗಿ ಚುನಾವಣಾ ಆಯೋಗ ನಾಮಪತ್ರದೊಡನೆ ಅಭ್ಯರ್ಥಿಯ ಹಾಗು ಕುಟುಂಬದ ಸ್ಥಿರ ಮತ್ತು ಚರಆಸ್ತಿಗಳ ವಿವರಗಳನ್ನು ಘೋಷಿಸಲು ಸೂಚಿಸಿದೆ. ಇದರಿಂದ ಮತದಾರರು ಅಭ್ಯರ್ಥಿಗಳ ಪ್ರಾಮಾಣಿಕತೆ ಅರಿತು ಮತದಾನ ಮಾಡಲು ಸಾಧ್ಯವಾಗುತ್ತದೆ. ಆದಾಯಕ್ಕೆ ಮೀರಿದ ಆಸ್ತಿ ಸಂಪಾದಿಸಿದರೆ ಅವರನ್ನು ಮತದಾರ ಅಧಿಕಾರದಿಂದ ದೂರವಿಡಲು ಈ ಕ್ರಮ ನೆರವಾಗುತ್ತದೆ.

D ರಾಜ್ಯವೇ ಚುನಾವಣಾ ವೆಚ್ಚವನ್ನು ಭರಿಸುವ ಸುಧಾರಣೆ: ಭಾರತದ ಚುನಾವಣೆಗಳಲ್ಲಿ ಇಂದು ಹಣದ ಪ್ರಭಾವ ಹೆಚ್ಚಾಗಿದೆ. ಖಾಸಗಿ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಚುನಾವಣೆ ಎದುರಿಸಲು ಹಣ ನೀಡಿ ಆ ಪಕ್ಷ ಅಧಿಕಾರಕ್ಕೆ ಬಂದಾಗ ಲಾಭ ಪಡೆಯುವ ಕಾರ್ಯದಲ್ಲಿ ತೊಡಗಿವೆ. ಇದರಿಂದ ಬಡ ಪಕ್ಷಗಳು ಮತ್ತು ನಿಸ್ವಾರ್ಥ ವ್ಯಕ್ತಿಗಳು ಚುನಾವಣೆ ಗೆಲ್ಲಲು ಅಸಾಧ್ಯವಾಗಿದೆ. ಕಪ್ಪು ಹಣದ ಹಾವಳಿಯನ್ನು ತಪ್ಪಿಸಲು, ದೊಡ್ಡ ಪಕ್ಷಗಳೊಡನೆ ಚಿಕ್ಕ ಪಕ್ಷಗಳು ಸ್ಪರ್ಧಿಸುವಂತಾಗಲು ಹಾಗು ಸಾಮಾನ್ಯರೂ ಚುನಾವಣೆಗೆ ನಿಲ್ಲುವಂತಾಗಲು ಸರ್ಕಾರವೇ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ನೀಡಲು ಮುಂದಾಗಬೇಕೆಂದು ವಾಂಚೂ ಸಮೀತಿ ಹಾಗು ತಾರ್ಕುಂಡೆ ಸಮೀತಿ ಸೂಚಿಸಿದವು. ಇದನ್ನು ರಾಜ್ಯವೇ ಚುನಾವಣಾ ವೆಚ್ಚವನ್ನು ಭರಿಸುವ ಸುಧಾರಣೆ ಎನ್ನುವರು. ಈ ಸುಧಾರಣೆಯನ್ನು ಕುರಿತು ವರದಿ ನೀಡಲು 1998ರಲ್ಲಿ ಇಂದ್ರಜಿತ್ ಗುಪ್ತಾ ಸಮೀತಿ ರಚಿಸಲಾಯಿತು. ಸರ್ವ ಪಕ್ಷಗಳ ಸದಸ್ಯರಿಂದ ಕೂಡಿದ್ದ ಈ ಸಮೀತಿ ಕೆಳಗಿನ ಅಂಶಗಳನ್ನು ಶಿಫಾರಸು ಮಾಡಿತು.
A ರಾಜ್ಯವೇ ಚುನಾವಣಾ ವೆಚ್ಚ ಭರಿಸಿದರೆ ರಾಜಕೀಯ ಪಕ್ಷಗಳ ವೆಚ್ಚ ಕಡಿಮೆಯಾಗುತ್ತದೆ.
B ಚುನಾವಣಾ ನಿಧಿ ಸ್ಥಾಪಿಸಿ ಕೇಂದ್ರ ಸರ್ಕಾರ 600 ಕೋಟಿ ಮತ್ತು ಎಲ್ಲ ರಾಜ್ಯ ಸರ್ಕಾರಗಳು 600 ಕೋಟಿ ಸಂಗ್ರಹಿಸಬೇಕು.
C ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದಿರುವ ಪಕ್ಷಗಳಿಗೆ ಮಾತ್ರ ಆರ್ಥಿಕ ನೆರವು ನೀಡಬೇಕು.
D ಚುನಾವಣಾ ವೆಚ್ಚವನ್ನು ನಗದು ರೂಪದಲ್ಲಿ ನೀಡದೇ ವಸ್ತುಗಳ ರೂಪದಲ್ಲಿ ಒದಗಿಸಬೇಕು.
E ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ಪಕ್ಷಗಳಿಗೆ ಸರ್ಕಾರದ ಆಕಾಶವಾಣಿ ಹಾಗು ದೂರದರ್ಶನದಲ್ಲಿ ಪ್ರಚಾರಕ್ಕೆ ಅವಕಾಶ ನೀಡಬೇಕು.
F ಆದಾಯ ತೆರಿಗೆ ಇಲಾಖೆಗೆ ಲೆಕ್ಕಪತ್ರ ನೀಡಿದ ಪಕ್ಷಗಳಿಗೆ ಮಾತ್ರ ಚುನಾವಣಾ ವೆಚ್ಚಕ್ಕೆ ಆರ್ಥಿಕ ನೆರವು ನೀಡಬೇಕು.
G ಚುನಾವಣೆ ನಡೆದ ಒಂದು ತಿಂಗಳೊಳಗೆ ಪಕ್ಷಗಳು ತಮ್ಮ ವೆಚ್ಚದ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು.
H ಚುನಾವಣಾ ಸಮಯದಲ್ಲಿ ಪಕ್ಷಗಳು ಬ್ಯಾನರ್, ಗೋಡೆ ಬರಹ, ಧ್ವನಿ ವರ್ಧಕ, ವಾಹನ ಮುಂತಾದವುಗಳ ಬಳಕೆಯನ್ನು ಎಲ್ಲಿ, ಎಷ್ಟು ಪ್ರಮಾಣದಲ್ಲಿ ಮತ್ತು ಯಾವ ಸಮಯದಲ್ಲಿ ಬಳಸಬೇಕೆಂಬ ನಿರ್ಬಂಧ ಹೇರಬೇಕು.

ಈ ಮೇಲಿನ ಅಂಶಗಳನ್ನು ಜಾರಿಗೊಳಿಸಿದಲ್ಲಿ ಪ್ರಾಮಾಣಿಕ ಪ್ರತಿನಿಧಿಗಳು ಆಯ್ಕೆಯಾಗುವರು. ಜೊತೆಗೆ ಚುನಾವಣೆಯ ಪಾವಿತ್ರ್ಯತೆ ಕಾಪಾಡಬಹುದಾಗಿದೆ.

E ನೋಟಾ ಬಳಸಲು ಅವಕಾಶ: ಚುನಾವಣೆಯ ಕಣದಲ್ಲಿರುವ ಯಾವುದೇ ಅಭ್ಯರ್ಥಿ ಉತ್ತಮನಾಗಿಲ್ಲದಿದ್ದರೆ ಮೇಲಿನ ಯಾರೂ ನನ್ನ ಆಯ್ಕೆಯಲ್ಲ ಎಂದು ತೀರ್ಮಾನಿಸುವ ಅವಕಾಶವನ್ನು ಈ ಸುಧಾರಣೆ ಮತದಾರನಿಗೆ ನೀಡಿದೆ. 2013ರಿಂದ ಈ ಸುಧಾರಣೆಯನ್ನು ಭಾರತದಲ್ಲಿ ಚುನಾವಣಾ ಆಯೋಗ ಅಳವಡಿಸಿದೆ. ಇದರಿಂದ ಮತದಾರನ ಆಯ್ಕೆಯು ವಿಶಾಲವಾಗಿದೆ.

ಒಟ್ಟಿನಲ್ಲಿ ಚುನಾವಣಾ ಆಯೋಗ ಭಾರತದಲ್ಲಿ ಚುನಾವಣೆಗಳನ್ನು ನಿರ್ಭೀತಿಯಿಂದ ಮತ್ತು ನಿಷ್ಪಕ್ಷಪಾತವಾಗಿ ನಡೆಸಲು ಕಾಲಕಾಲಕ್ಕೆ ವಿವಿಧ ಬದಲಾವಣೆ ಮಾಡಿಕೊಂಡು ಬಂದಿದೆ. ವಯೋಮಿತಿ ಇಳಿಕೆ, ರಜೆ ನೀಡಿಕೆ, ವೀಕ್ಷಕರ ನೇಮಕ ಮುಂತಾದ ಇನ್ನೂ ಹಲವು ಸುಧಾರಣೆಗಳು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಜಾರಿಯಾಗಿವೆ. ಆದರೆ ಇಂದಿಗೂ ಚುನಾವಣೆಯಲ್ಲಿ ಇತರ ಸಮಸ್ಯೆಗಳು ಕಾಣಿಸಿಕೊಂಡಿದ್ದು ಆಯೋಗಕ್ಕೆ ಸವಾಲಾಗಿದೆ.


7. ವಿದ್ಯುನ್ಮಾನ ಮತ ಯಂತ್ರದ ಉಪಯೋಗಗಳನ್ನು ಚರ್ಚಿಸಿರಿ ಅಥವ ವಿದ್ಯುನ್ಮಾನ ಮತಯಂತ್ರ ಕುರಿತು ಟಿಪ್ಪಣಿ ಬರೆಯಿರಿ?
ಉ: ಜನಸಂಖೆಯ ಹೆಚ್ಚಳ ಹಾಗು ಮತದಾರರ ವಯೋಮಿತಿಯ ಇಳಿಕೆ ಕಾರಣದಿಂದ ಭಾರತದ ಚುನಾವಣೆ ಕಠಿಣವಾದಾಗ ಚುನಾವಣಾ ಆಯೋಗ ತಾಂತ್ರಿಕತೆ ಬಳಸಲು ಮುಂದಾಯಿತು. ಬೆಂಗಳೂರಿನ B E L ಹಾಗು ಹೈದರಾಬಾದಿನ E C I ಸಹಕಾರದಿಂದ ಮತ ದಾಖಲಿಸುವ ವಿದ್ಯುತ್ ಚಾಲಿತ ವಿದ್ಯುನ್ಮಾನ ಮತ ಯಂತ್ರ ರಚನೆಗೊಂಡಿತು. ಇದನ್ನು ಇ. ವಿ. ಎಂ. ಎನ್ನುವರು.

ವಿದ್ಯುನ್ಮಾನ ಮತ ಯಂತ್ರವು ಮತ ಘಟಕ ಹಾಗು ನಿಯಂತ್ರಣ ಘಟಕ ಎಂಬ ಎರಡು ಯಂತ್ರ ಹೊಂದಿರುತ್ತದೆ. ಈ ಯಂತ್ರಗಳ ನಡುವೆ ಐದು ಮೀಟರಿನ ಕೇಬಲ್ ಜೋಡಣೆ ಕಾಣಬಹುದು. ಮತ ಘಟಕವು ಮತದಾನದ ಸ್ಥಳದಲ್ಲಿದ್ದು 16 ಅಭ್ಯರ್ಥಿಗಳ ಹೆಸರು ಮತ್ತು ಚಿನ್ಹೆ ಹೊಂದಿರುತ್ತದೆ. ತನ್ನ ಅಭ್ಯರ್ಥಿಯ ಹೆಸರಿನ ಮುಂದಿರುವ ಗುಂಡಿಯನ್ನು ಮತದಾರ ಒತ್ತಿ ಮತ ದಾಖಲಿಸಬಹುದು. ಒಂದು ಮತ ಯಂತ್ರ 3840 ಮತಗಳನ್ನು ಸಂಗ್ರಹಿಸಿಟ್ಟುಕೊಳ್ಳಬಲ್ಲದು. ನಿಯಂತ್ರಣ ಘಟಕವು ಚುನಾವಣಾ ಅಧಿಕಾರಿಯ ಹತ್ತಿರವಿದ್ದು ಮತದಾರನ ವಿವಿಧ ಪರಿಶೀಲನೆಯ ಬಳಿಕ ಮತ ನೀಡಲು ಅನುಮತಿಸುವ ಗುಂಡಿಯನ್ನು ಅದರಿಂದ ಅಧಿಕಾರಿ ಒತ್ತುವನು. ಇದಕ್ಕೆ 5500 ರೂಪಾಯಿಗಳ ತಯಾರಿಕಾ ವೆಚ್ಚವಾಗುತ್ತದೆ. ಈ ಯಂತ್ರಗಳನ್ನು ಮೊದಲ ಬಾರಿ 1998ರ ಕೆಲ ಚುನಾವಣೆಗಳಲ್ಲಿ ಬಳಸಲಾಯಿತು. ಮುಂದೆ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಸಂಪೂರ್ಣವಾಗಿ ಉಪಯೋಗಿಸಲಾಯಿತು. ಈ ಯಂತ್ರಗಳ ಉಪಯೋಗಗಳನ್ನು ಕೆಳಗಿನಂತೆ ಗುರುತಿಸಬಹುದು.
* ಸುಲಭ ಬಳಕೆ: ಅಶಕ್ತರು, ಅವಿದ್ಯಾವಂತರು ಕೇವಲ ಗುಂಡಿ ಒತ್ತುವ ಮೂಲಕ ಸರಳವಾಗಿ ಮತ ಚಲಾವಣೆ ಮಾಡಬಹುದಾಗಿದೆ.
* ಆರ್ಥಿಕ ಮಿತವ್ಯಯ: ಆರಂಭದಲ್ಲಿ ಮತಪತ್ರ, ಶಾಯಿ, ಮರದ ಪೆಟ್ಟಿಗೆ ಮುಂತಾದವುಗಳಿಗೆ ಹಣದ ವೆಚ್ಚ ಅಧಿಕವಾಗಿತ್ತು. ಆ ವಸ್ತುಗಳು ಮರು ಬಳಕೆಗೆ ಬರುತ್ತಿರಲಿಲ್ಲ. ಆದರೆ ಮತ ಯಂತ್ರ ಮೊದಲು ದುಬಾರಿಯಾದರೂ ಪುನರ್ಬಳಕೆಗೆ ಬರುತ್ತವೆ.
* ಶೀಘ್ರ ಫಲಿತಾಂಶ: ಕೇವಲ ಯಂತ್ರದಲ್ಲಿನ ಟೊಟಲ್ ಗುಂಡಿ ಒತ್ತಿ ದಾಖಲಾದ ಮತವನ್ನು ಪಡೆಯಬಹುದು. ಇದರಿಂದ ಕೆಲವೇ ಗಂಟೆಗಳಲ್ಲಿ ಎಣಿಕೆ ಕಾರ್ಯ ಅಂತ್ಯವಾಗುತ್ತದೆ.
* ಏಕವ್ಯಕ್ತಿ ಏಕಮತ ತತ್ವದ ಪಾಲನೆ: ಮತದಾರ ಮೊದಲು ಒತ್ತಿದ ಗುಂಡಿಯ ಮತ ಮಾತ್ರ ದಾಖಲಾಗುತ್ತದೆ. ಮತ ಪತ್ರಗಳಿದ್ದಾಗ ಒಬ್ಬ ಒಂದಕ್ಕಿಂತ ಹೆಚ್ಚು ಮತ ಗುರುತಿಸಿ ಆ ಮತ ಕುಲಗೆಟ್ಟು ಹೋಗುತ್ತಿದ್ದವು.
* ಸಮಯದ ಉಳಿತಾಯ: ಮತ ಚಲಾವಣೆ ಸಮಯದಲ್ಲಿ ಮತಪತ್ರ ಮಡಿಚಿ ಹಾಕಲು ಹಾಗು ಮತ ಎಣಿಕೆಯ ವೇಳೆ ಮತಪತ್ರ ಜೋಡಿಸುವ ಈ ಯಂತ್ರದಿಂದ ಅಗತ್ಯವಿಲ್ಲ. ಹೀಗಾಗಿ ಸಮಯವು ಉಳಿತಾಯವಾಗುತ್ತದೆ.
* ಪರಿಸರ ಸ್ನೇಹಿ: ಮತಯಂತ್ರಗಳು ಪುನರ್ಬಳಕೆಗೆ ಯೋಗ್ಯವಾಗಿದ್ದು ಕಾಗದಕ್ಕೆ ಮರಗಳ ನಾಶವಿಲ್ಲ.

ಈ ಮೇಲಿನವು ವಿದ್ಯೂನ್ಮಾನ ಮತ ಯಂತ್ರದ ಅನುಕೂಲಗಳಾಗಿವೆ. ಆದರೆ ಇಂದಿಗೂ ನಮ್ಮ ದೇಶದಲ್ಲಿ ಕೆಲವು ಚುನಾವಣೆಗಳಲ್ಲಿ ಮತ ಪತ್ರಗಳ ಬಳಕೆ ಕಾಣಬಹುದಾಗಿದೆ. ಈ ಯಂತ್ರಗಳಲ್ಲಿ ಕಾಲಕಾಲಕ್ಕೆ ಹಲವು ಮಾರ್ಪಾಡು ಮಾಡಲಾಗುತ್ತಿದ್ದು ಸಂತಸದ ವಿಷಯ ಉ: ನೊಟಾ ಗುಂಡಿಯ ಅಳವಡಿಕೆ.

8. ಭಾರತದ ಪಕ್ಷಪದ್ಧತಿಯ ಪ್ರಮುಖ ಲಕ್ಷಣಗಳನ್ನು ವಿವರಿಸಿ ಅಥವ ಭಾರತದ ಪಕ್ಷಪದ್ಧತಿಯ ಸ್ವರೂಪವನ್ನು ಚರ್ಚಿಸಿರಿ?
ಉ: ಭಾರತವು ವೈವಿಧ್ಯಮಯ ದೇಶವಾಗಿದೆ. ಪ್ರತಿ ಜನಾಂಗ, ಭಾಷೆ, ಧರ್ಮ, ಪ್ರದೇಶಕ್ಕೆ ಸೇರಿದವರ ಬೇಡಿಕೆಗಳು ಬೇರೆಬೇರೆಯಾಗಿರುತ್ತವೆ. ಹೀಗಾಗಿ ತಮ್ಮ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ನಾನಾ ಪಕ್ಷಗಳು ಬೆಳೆದು ಬಂದಿವೆ. ಸ್ವತಂತ್ರ ಪೂರ್ವದಿಂದಲೇ ರಾಜಕೀಯ ಪಕ್ಷಗಳು ಭಾರತದಲ್ಲಿವೆ. ಇಂದು ಭಾರತವು ಜಗತ್ತಿನ ಬಹು ಪಕ್ಷ ಪದ್ಧತಿಗೆ ಉತ್ತಮ ಉದಾಹರಣೆಯಾಗಿದೆ. ನಮ್ಮ ಪಕ್ಷ ಪದ್ಧತಿಯ ಮುಖ್ಯವಾದ ಲಕ್ಷಣಗಳೆಂದರೆ
A. ಸಂವಿಧಾನಿಕ ಅಸ್ತಿತ್ವವಿಲ್ಲ: ಭಾರತ ಜಗತ್ತಿನ ದೊಡ್ಡ ಸಂವಿಧಾನ ಹೊಂದಿದೆ. ವಿವಿಧ ವಿಚಾರಗಳನ್ನು ಕುರಿತು ನಿಯಮಗಳಿದ್ದರೂ ಇದರಲ್ಲಿ ರಾಜಕೀಯ ಪಕ್ಷಗಳ ಬಗ್ಗೆ ಯಾವುದೇ ವಿವರಣೆಯಿಲ್ಲ. 19 ನೆಯ ವಿಧಿಯ ಸಂಘ ಸ್ಥಾಪಿಸುವ ಅವಕಾಶ ಹಾಗು 1951ರ ಪ್ರಜಾಪ್ರತಿನಿಧಿ ಕಾಯಿದೆಯ ಆಧಾರದ ಮೇಲೆ ಭಾರತದ ಪಕ್ಷಗಳು ರಚನೆಗೊಂಡಿವೆ.
B. ಬಹು ಪಕ್ಷ ಪದ್ಧತಿಯ ಅಸ್ತಿತ್ವ: ಭಾರತದಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಹಾಗು ಮಣ್ಣಿನ ಮಗ ಸಿದ್ಧಾಂತ ಆಧಾರದ ಅಸಂಖ್ಯಾತ ಪಕ್ಷಗಳು ಜಾರಿಯಲ್ಲಿವೆ. ಕೆಲ ರಾಜಕೀಯ ಪಕ್ಷಗಳು ಜಾತಿ, ಧರ್ಮ, ಬುಡಕಟ್ಟುಗಳ ಆಧಾರದ ಮೇಲೆ ರಚನೆಗೊಂಡಿವೆ. ಜಗತ್ತಿನಲ್ಲೇ ಹೆಚ್ಚು ಅಂದರೆ ಸುಮಾರು 400ಕ್ಕೂ ಹೆಚ್ಚು ಪಕ್ಷಗಳು ಭಾರತದಲ್ಲಿವೆ. ನಾಲ್ಕಾರು ರಾಷ್ಟ್ರೀಯ, 36 ಪ್ರಾದೇಶಿಕ, 200ಕ್ಕೂ ಹೆಚ್ಚು ಮಾನ್ಯತೆ ಪಡೆದ ನೊಂದಾಯಿತ ಪಕ್ಷಗಳು ಭಾರತದಲ್ಲಿದ್ದು ಬಹು ಪಕ್ಷಪದ್ಧತಿಗೆ ಉತ್ತಮ ಉದಾಹರಣೆಯಾಗಿದೆ.
C. ಪಕ್ಷಗಳಲ್ಲಿ ಒಡಕು ಮತ್ತು  ವಿಲೀನ: ಭಾರತದ ಪಕ್ಷಗಳಲ್ಲಿ ನಾಯಕರ ಅಧಿಕಾರ ದಾಹ, ಸ್ವಾರ್ಥ, ಸ್ಥಾನಮಾನ, ಪ್ರತಿಷ್ಠೆಗಳ ಕಾರಣಕ್ಕೆ ಪಕ್ಷಗಳ ಒಡಕು ನಡೆಯುವುದು ಸ್ವಾಬಾವಿಕ ಪ್ರಕ್ರಿಯೆಯಾಗಿದೆ. ಮರಳಿ ಅದೇ ಕಾರಣಗಳಿಗೆ ಬೇರೆ ಬೇರೆ ಪಕ್ಷಗಳು ವಿಲೀನಗೊಳ್ಳುತ್ತವೆ. ಇದಕ್ಕೆಲ್ಲ ನಾಯಕರ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆ ಕಾರಣವೆನ್ನಬಹುದು.ಉ: BJP ಯಿಂದ ವಿಭಜನೆಯಾದ ಯಡೆಯೂರಪ್ಪ KJP ರಚಿಸಿದರು. ಮುಂದೆ BSR ಹಾಗು KJP ಪಕ್ಷಗಳು BJP ಜೊತೆ ವಿಲೀನವಾದವು. ಅದೇ ರೀತಿ ಪ್ರಜಾ ರಾಜ್ಯಂ ಪಕ್ಷ ಕಾಂಗ್ರೆಸ್ಸಿನೊಡನೆ ವಿಲೀನವಾಯಿತು.
D. ಏಕಪಕ್ಷದ ಪ್ರಾಬಲ್ಯ ಕ್ಷೀಣತೆ: ಭಾರತದಲ್ಲಿ ಬಹು ಪಕ್ಷಗಳಿದ್ದರೂ ಕಾಂಗ್ರೆಸ್ಸು 1947 ರಿಂದ 1977ರವರೆಗೆ ಪ್ರಬಲ ಏಕಪಕ್ಷವಾಗಿ ಆಡಳಿತ ನಡೆಸಿತು. ಆದರೆ ಜನತಾ ಪಕ್ಷವು ಕಾಂಗ್ರೆಸ್ಸನ್ನು ಮಣಿಸಿ 1977ರಲ್ಲಿ ಅಧಿಕಾರ ಪಡೆಯಿತು. ನಂತರ 1980 ರಿಂದ 1989ರವರೆಗೆ ಮರಳಿ ಕಾಂಗ್ರೆಸ್ಸು ಪ್ರಬಲವಾಯಿತು. ಆದರೆ 1989 ರಿಂದ 2014ರವರೆಗೆ ಸಂಯುಕ್ತ ರಂಗ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ, ಸಂಯುಕ್ತ ಪ್ರಗತಿಪರ ಒಕ್ಕೂಟ ಎಂಬ ಸಂಮಿಶ್ರ ಸರ್ಕಾರಗಳು ಅಧಿಕಾರಕ್ಕೆ ಬಂದು ಏಕಪಕ್ಷ ಪ್ರಾಬಲ್ಯ ಕ್ಶೀಣಿಸಿತು. ಪ್ರಸ್ತುತ ಬಿ. ಜೆ. ಪಿ ಪ್ರಬಲ ಏಕಪಕ್ಷವಾಗಿದ್ದರೂ ಸಂಮಿಶ್ರ ಸರ್ಕಾರವೇ ಆಡಳಿತ ನಡೆಸಿವೆ.
E. ಭಿನ್ನಮತೀಯತೆ: ಭಾರತದ ಪಕ್ಷಗಳಲ್ಲಿ ಭಿನ್ನಮತೀಯತೆ ಸಾಮಾನ್ಯ ಸಂಗತಿಯಾಗಿದೆ. ಸ್ವಾರ್ಥ, ಸ್ಥಾನಮಾನ, ಪ್ರತಿಷ್ಠೆಗಳ ಹಿನ್ನೆಲೆಯಲ್ಲಿ ಗುಂಪುಗಾರಿಕೆ ನಡೆದು ರಾಜಕೀಯ ಅಸ್ಥಿರತೆ ಉಂಟಾಗುತ್ತದೆ. ಇಂತಹ ಗುಂಪುಗಾರಿಕೆಯಿಂದ ಪಕ್ಷಗಳ ಜನಪ್ರೀಯತೆ ನಾಶವಾಗುತ್ತದೆ. ಜೊತೆಗೆ ಅನಗತ್ಯ ಅವಧಿ ಪೂರ್ವ ಚುನಾವಣೆಗೆ ಹಾದಿಯಾಗುತ್ತದೆ. ಉ: ಇತ್ತೀಚೆಗೆ ಜಾತ್ಯಾತೀತ ಜನತಾ ದಳದಲ್ಲಿನ ಜಮೀರ್ ಅಹಮದ್ ನೇತ್ರುತ್ವದ ಭಿನ್ನಮತೀಯತೆ.
F. ಪಕ್ಷಾಂತರ ಪಿಡುಗು: ಒಂದು ರಾಜಕೀಯ ಪಕ್ಷದ ಚುನಾಯಿತ ಪ್ರತಿನಿಧಿಯು ತನ್ನ ಪಕ್ಷಕ್ಕೆ ರಾಜೀನಾಮೆ ನೀಡದೇ ಬೇರೊಂದು ಪಕ್ಷವನ್ನು ಸೇರುವುದಕ್ಕೆ ಪಕ್ಷಾಂತರ ಎನ್ನುವರು. ಅಧಿಕಾರ ದಾಹ,ಸ್ವಾರ್ಥ,ದುರಾಸೆ ಈ ಚಟುವಟಿಕೆಗೆ ಕಾರಣವಾಗಿರುತ್ತದೆ. ಇದರ ತಡೆಗೆ ಕಾಯಿದೆ ತರಲಾಗಿದ್ದರೂ ನಾನಾ ರೀತಿಯಲ್ಲಿ ಇಂದಿಗೂ ಜಾರಿಯಲ್ಲಿದ್ದು ಚುನಾವಣೆಯ ಸಮಯದಲ್ಲಿ ಸರ್ವೇ ಸಾಮಾನ್ಯವಾಗಿದೆ.
G. ನಾಯಕತ್ವದ ವರ್ಚಸ್ಸು: ಭಾರತದ ಪಕ್ಷಗಳು ಸಮಾನತೆ, ಸ್ವಾತಂತ್ರ, ಸಹೋದರತೆ, ಸಮಾಜವಾದ, ಜಾತ್ಯಾತೀತತೆ ಮುಂತಾದ ಮೌಲ್ಯಗಳ ಬದಲು ತಮ್ಮ ಪಕ್ಷದ ನಾಯಕರ ಜನಪ್ರೀಯತೆಯ ಮೇಲೆ ಆಧಾರವಾಗಿವೆ. ಪಕ್ಷದ ಉಳಿವು ಅಥವ ಅಳಿವು ಆ ಪಕ್ಷದ ನಾಯಕರ ಆಕರ್ಷಕ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ನಾಯಕರ ನಿರ್ಧಾರಗಳನ್ನು ಆಯಾ ಪಕ್ಷಗಳ ಬೆಂಬಲಿಗರು ಅಂಧಾನುಕರಣೆ ಮಾಡುತ್ತಾರೆ. ಉ: ಸೋನಿಯಾ ಕಾಂಗ್ರೆಸ್ಸಿಗೆ, ಮೋದಿ ಬಿ ಜೆ ಪಿಗೆ, ದೇವೆಗೌಡ ಜೆ ಡಿ ಎಸ್ಗೆ ಅನಿವಾರ್ಯವಾದ ನಾಯಕರಾಗಿದ್ದಾರೆ.
H. ತತ್ವ ರಹಿತ ರಾಜಕೀಯ ಪಕ್ಷಗಳು: ಚುನಾವಣೆಯ ಮೊದಲು ಬೇರೆ ಬೇರೆ ತತ್ವಗಳನ್ನು ಪ್ರತಿ ರಾಜಕೀಯ ಪಕ್ಷಗಳು ಜನರ ಮುಂದಿಟ್ಟು ಮತ ಪಡೆಯುತ್ತವೆ. ಒಂದನ್ನೊಂದು ವಿರೋಧಿಸುವ ಪಕ್ಷಗಳೇ ಅಧಿಕಾರಕ್ಕಾಗಿ ಚುನಾವಣೆ ಬಳಿಕ ಒಂದಾಗುತ್ತವೆ. ಇದಕ್ಕೆ ಜನರ ಪ್ರಗತಿ ಹಾಗು ಸಮಾಜದ ಅಭಿವ್ರುದ್ಧಿಯ ಸಮಜಾಯಿಶಿ ನೀಡುತ್ತವೆ. ಉ: ಮಹರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿ ಜೆ ಪಿ ವರ್ತನೆ.
I. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ: ನಿರ್ದಿಷ್ಟ ಪ್ರದೇಶದ ಪ್ರಗತಿಗಾಗಿ ಪ್ರಾದೇಶಿಕ ಪಕ್ಷಗಳು ರಚನೆಯಾಗುತ್ತವೆ. ಆ ಪ್ರದೇಶದ ಮತ ಪಡೆದು ಜಯಶಾಲಿಯಾಗಿ ಕೇಂದ್ರದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸಿ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಪ್ರಯತ್ನಿಸಿ ಪ್ರಾಬಲ್ಯ ಹೊಂದುತ್ತಿವೆ. ಸಂಮಿಶ್ರ ಸರ್ಕಾರದಲ್ಲಿ ಸೇರುವ ಇವು ಇಂದು ಪ್ರಬಲಗೊಂಡಿವೆ. ಉ: JMM ಪಕ್ಷವು ನರಸಿಂಹರಾವ್ ಸರ್ಕಾರದಲ್ಲಿ, DMK ಪಕ್ಷವು ವಾಜಪೇಯಿ ಸರ್ಕಾರದಲ್ಲಿ, TMC ಪಕ್ಷವು ಮನಮೋಹನ್ಸಿಂಗ್ ಸರ್ಕಾರದಲ್ಲಿ ಬೆಂಬಲ ನೀಡಿ ಪ್ರಾಬಲ್ಯ ಮೆರೆದವು.
J ಧಾರ್ಮಿಕ ಮತ್ತು ಭಾಷಾವಾರು ಪಕ್ಷಗಳು: ಭಾರತದಲ್ಲಿ ವಿವಿಧ ಧರ್ಮ ಹಾಗು ಭಾಶೆಯ ಜನರಿದ್ದಾರೆ. ಆಯಾ ಗುಂಪಿನ ಹಿತಕ್ಕಾಗಿ ನಾನಾ ಪಕ್ಷಗಳು ರಚನೆಗೊಂಡಿವೆ. ಹಿಂದಿ ವಿರೋಧಿಸಿ ತಮಿಳನ್ನು ರಕ್ಷಿಸಲು DMK, ತೆಲಗು ಭಾಶೆ ರಕ್ಷಣೆಗೆ TDP, ಸಿಕ್ಕ್ ಧರ್ಮದ ಉಳಿವಿಗೆ ಅಕಾಲಿ ದಳ, ಮುಸಲ್ಮಾನರ ಹಿತಕ್ಕೆ ಮುಸ್ಲಿಮ್ ಲೀಗ್ ರಚನೆಗೊಂಡಿವೆ.
K ಎಡ ಮತ್ತು ಬಲ ಪಂಥದ ಪಕ್ಷಗಳು: ಭಾರತದಲ್ಲಿ ಪ್ರಗತಿ ಸಾಧಿಸಲು ಎಲ್ಲ ಪಕ್ಷಗಳು ಒಂದೇ ಮಾರ್ಗವನ್ನು ಅನುಸರಿಸುತ್ತಿಲ್ಲ. ಕಡಿಮೆ ಸಮಯದಲ್ಲಿ ಹೆಚ್ಚಿನ ಸುಧಾರಣೆ ತರಲು ಪ್ರಯತ್ನಿಸುವ ಪಕ್ಷಗಳಿಗೆ ಎಡ ಪಂಥೀಯ ಪಕ್ಷ ಎನ್ನಲಾಗುತ್ತದೆ. ಉ: CPI, CPIM ಇತ್ಯಾದಿ. ಹಾಗೆಯೇ ನಿಧಾನವಾಗಿ ಉತ್ತಮ ಸುಧಾರಣೆ ತರಲು ಪ್ರಯತ್ನಿಸುವ ಪಕ್ಷಗಳಿಗೆ ಬಲ ಪಂಥೀಯ ಪಕ್ಷ ಎನ್ನಲಾಗುತ್ತದೆ. ಉ: BJP, ಕಾಂಗ್ರೆಸ್ಸು ಇತ್ಯಾದಿ.
L ಸಂಮಿಶ್ರ ಸರ್ಕಾರಕ್ಕೆ ಒಲವು: ಚುನಾವಣೆಯಲ್ಲಿ ಒಂದೇ ರಾಜಕೀಯ ಪಕ್ಷವು ಬಹುಮತ ಪಡೆಯದಿದ್ದಾಗ ಎರಡಕ್ಕಿಂತ ಹೆಚ್ಚು ಪಕ್ಷಗಳು ಸೇರಿ ಸರ್ಕಾರ ರಚಿಸುವುದಕ್ಕೆ ಸಂಮಿಶ್ರ ಸರ್ಕಾರ ಎನ್ನುವರು. 1989ರಿಂದ ಈಚೆಗೆ ಭಾರತದಲ್ಲಿ ಬೇರೆ ಬೇರೆ ಉದ್ದೇಶದ ಪಕ್ಷಗಳು ಸಾಮಾನ್ಯ ಕನಿಷ್ಟ ಕಾರ್ಯಕ್ರಮದ ಆಧಾರದ ಮೇಲೆ ಇಂತಹ ಸರ್ಕಾರಗಳ ರಚನೆಗೆ ಒಲವು ಹೊಂದಿವೆ. ಉ: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ [N D A] ಸರ್ಕಾರ ಹಾಗು ಸಂಯುಕ್ತ ಪ್ರಗತಿಪರ ಒಕ್ಕೂಟ [U P A] ಸರ್ಕಾರ

ಒಟ್ಟಿನಲ್ಲಿ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ರಾಜಕೀಯ ಪಕ್ಷಗಳ ಪಾತ್ರ ಅಪಾರ. ಇಲ್ಲಿನ ಪಕ್ಷಪದ್ಧತಿಯು ಸ್ವತಂತ್ರ್ಯ ಪೂರ್ವದ ಬೆಳವಣಿಗೆಯಾಗಿದ್ದು ಧರ್ಮ, ಪ್ರದೇಶ, ವ್ಯಕ್ತಿ ಕೇಂದ್ರಿತ ಪಕ್ಷಗಳಿಗೆ ಅವಕಾಶ ನೀಡಿದೆ.ವೈವಿಧ್ಯತೆಯು ಬಹು ಪಕ್ಷಪದ್ಧತಿಯ ಅಸ್ತಿತ್ವಕ್ಕೆ ಭಾರತದಲ್ಲಿ ಕಾರಣವಾಗಿದೆ.

9. ರಾಜಕೀಯ ಪಕ್ಷಗಳ ಕಾರ್ಯಗಳನ್ನು ಅಥವ ಜವಾಬ್ದಾರಿಗಳನ್ನು ಚರ್ಚಿಸಿರಿ?
ಉ: ರಾಜಕೀಯ ಪಕ್ಷಗಳ ಉದ್ದೇಶ ಅಧಿಕಾರವನ್ನು ಪಡೆದು ಆಡಳಿತ ನಡೆಸುವುದಾಗಿದ್ದು ಇದಕ್ಕಾಗಿ ಅವು ಹಗಲಿರುಳು ಪ್ರಯತ್ನಿಸುತ್ತಾ ಇರುತ್ತವೆ. ದೇಶದ ವಿವಿಧ ಗುಂಪಿನ ಜನರನ್ನು ತನ್ನೆಡೆ ಸೆಳೆದು ಚುನಾವಣೆಗಳಲ್ಲಿ ಜಯಶಾಲಿಯಾಗಲು ಬಯಸುತ್ತವೆ. ಹೀಗಾಗಿ ರಾಜಕೀಯ ಪಕ್ಷಗಳು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತವೆ.
A. ಪ್ರನಾಳಿಕೆ ಸಿದ್ಧಪಡಿಸುವುದು: ಒಂದು ಪಕ್ಷ ತಾನು ಅಧಿಕಾರಕ್ಕೆ ಬಂದರೆ ಯಾವ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತದೆ ಎಂಬುದನ್ನು ಘೋಷಿಸುವುದಕ್ಕೆ ಪ್ರನಾಳಿಕೆ ಎನ್ನುವರು. ಎಲ್ಲ ರಾಜಕೀಯ ಪಕ್ಷಗಳು ಜನಪ್ರೀಯ ಯೋಜನೆಗಳ ಭರವಸೆಯನ್ನು ತಮ್ಮ ಪ್ರನಾಳಿಕೆಯಲ್ಲಿ ಮತದಾರರಿಗೆ ನೀಡುತ್ತವೆ. ಉ: ಸಿದ್ಧರಾಮಯ್ಯನವರ 1 ರೂಗೆ 1 ಕೆ ಜಿ ಅಕ್ಕಿ, ಜಯಲಲಿತಾರವರ ಬಡ ವಧುವಿಗೆ ಚಿನ್ನದ ಹಂಚಿಕೆ ಇತ್ಯಾದಿ.
B. ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು: ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಹತ್ತಿರವಾದಂತೆ ಗೆಲ್ಲುವ ವ್ಯಕ್ತಿಗಳನ್ನು ಹುಡುಕತೊಡಗುತ್ತವೆ. ಜನ ಬಲ, ಹಣ ಬಲ, ಜಾತಿ ಬಲವುಳ್ಳ ವ್ಯಕ್ತಿಗಳಿಗೆ ಪಕ್ಷಗಳು ಟಿಕೇಟ್ ಹಂಚಲು ಪ್ರಯತ್ನಿಸುತ್ತವೆ. ಪಕ್ಷಗಳ ಅಂತಿಮ ಗುರಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಪಡೆಯುವುದಾಗಿದ್ದು ಗೆಲ್ಲುವ ಅಭ್ಯರ್ಥಿಗಳನ್ನು ತೂಗಿ ಅಳೆದು ಆಯ್ಕೆ ಮಾಡುತ್ತವೆ.
C. ರಾಜಕೀಯ ಶಿಕ್ಷಣ ನೀಡುವುದು: ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ಸಮಯದಲ್ಲಿ ಸಭೆ, ಸಂವಾದ, ಮೆರವಣಿಗೆ ಮೂಲಕ ಜನರ ಬಳಿಗೆ ಹೋಗುತ್ತವೆ. ತಮ್ಮ ಪಕ್ಷದ ಸಾಧನೆ ಮತ್ತು ಇತರ ಪಕ್ಷಗಳ ವಿಫಲತೆಗಳನ್ನು ಜನರಿಗೆ ಮನದಟ್ಟು ಮಾಡುತ್ತವೆ. ದೇಶದ ಸಮಸ್ಯೆ ಹಾಗು ಸ್ಥಳೀಯ ತೊಂದರೆಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸಲು ಪ್ರಯತ್ನಿಸುತ್ತವೆ. ಇದರಿಂದ ರಾಜಕೀಯವಾಗಿ ಜನರು ಜಾಗ್ರುತರಾಗುತ್ತಾರೆ.
D. ಚುನಾವಣೆಗೆ ಸ್ಪರ್ಧಿಸುವುದು: ಬಹುಮತ ಪಡೆದು ಅಧಿಕಾರ ಹಿಡಿಯುವುದು ಮುಖ್ಯ ಉದ್ದೇಶವಾದ್ದರಿಂದ ರಾಜಕೀಯ ಪಕ್ಷಗಳು ಮೆರವಣಿಗೆ, ರ್ಯಾಲಿ, ಜಾಹೀರಾತುಗಳು, ಪ್ರಲೋಭನೆಗಳ ಮೂಲಕ ಜನರ ಮನ ಗೆಲ್ಲಲು ಶ್ರಮಿಸುತ್ತವೆ. ಜೊತೆಗೆ ಪ್ರಚಾರಕ್ಕೆ ಪ್ರಭಾವಿ ನಾಯಕರನ್ನು ಬಳಸಿಕೊಳ್ಳುತ್ತವೆ. ತಮ್ಮ ಬಲ ಕಡಿಮೆ ಇರುವಲ್ಲಿ ಬೇರೆ ಪಕ್ಷಗಳೊಡನೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತವೆ.
E. ಸರ್ಕಾರವನ್ನು ರಚಿಸುವುದುಮತ್ತು ನಿರ್ವಹಿಸುವುದು: ರಾಜಕೀಯ ಪಕ್ಷ ಬಹುಮತ ಪಡೆದಿದ್ದರೆ ಒಂಟಿಯಾಗಿ ಸರ್ಕಾರವನ್ನು ರಚಿಸುತ್ತವೆ. ಬಹುಮತ ಪಡೆಯದಿದ್ದಾಗ ಹೆಚ್ಚು ಸ್ಥಾನ ಪಡೆದವರೊಡನೆ ಸೇರಿ ಅಥವ ಹಲವು ಪಕ್ಷಗಳು ಕೂಡಿಕೊಂಡು ಸರ್ಕಾರ ರಚಿಸಲು ಮುಂದಾಗುತ್ತವೆ. ಅಧಿಕಾರ ಪಡೆದ ಬಳಿಕ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಜಾರಿಗೊಳಿಸಲು ಹಾಗು ದೇಶದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತವೆ.
F. ವಿರೋಧ ಪಕ್ಷವಾಗಿ ಕಾರ್ಯ ಮಾಡುವುದು: ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾದ ಪಕ್ಷವನ್ನು ವಿರೋಧ ಪಕ್ಷ ಎನ್ನುವರು. ಇಂತಹ ಪಕ್ಷಗಳು  ಸರ್ಕಾರದ ನೀತಿ ನಿರ್ಧಾರಗಳನ್ನು ರಚನಾತ್ಮಕವಾಗಿ ಟೀಕಿಸುತ್ತದೆ. ಜೊತೆಗೆ ಆಡಳಿತ ಪಕ್ಷದ ತಪ್ಪುಗಳನ್ನು ಕುರಿತು ಜನಜಾಗ್ರುತಿ ಮೂಡಿಸುತ್ತವೆ.ಆಡಳಿತ ಪಕ್ಷ ಬಹುಮತ ಕಳೆದುಕೊಂಡರೆ ವಿರೋಧ ಪಕ್ಷ ಸರ್ಕಾರ ರಚಿಸಲು ಮುಂದಾಗುತ್ತದೆ. ಉ: 2006ರಲ್ಲಿ ವಿರೋಧ ಪಕ್ಷವಾಗಿದ್ದ ಬಿ. ಜೆ. ಪಿ. ಕರ್ನಾಟಕದಲ್ಲಿ ಜೆ. ಡಿ. ಎಸ್. ಬೆಂಬಲದೊಡನೆ ಸರ್ಕಾರ ರಚಿಸಿತು.
G. ಸಾರ್ವಜನಿಕ ಅಭಿಪ್ರಾಯ ಉಂಟು ಮಾಡುವುದು: ಭಾರತ ವೈವಿಧ್ಯಮಯ ದೇಶವಾಗಿದ್ದು ನಾನಾ ಸಮಸ್ಯೆಗಳಿಂದ ಕೂಡಿದೆ. ರಾಜಕೀಯ ಪಕ್ಷಗಳು ಬ್ರಷ್ಟಾಚಾರ, ರೈತರ ಆತ್ಮಹತ್ಯೆ, ಕೋಮು ಗಲಭೆ ಮುಂತಾದ ಮಹತ್ವದ ವಿಚಾರದಲ್ಲಿ ಪರ ಮತ್ತು ವಿರೋಧ ನಿಲುವುಗಳನ್ನು ವ್ಯಕ್ತಪಡಿಸುತ್ತವೆ. ಆಗ ನಿರ್ಧಿಷ್ಟ ಸಮಸ್ಯೆ ಅಥವ ವಿಚಾರ ಕುರಿತು ಜನರಲ್ಲಿ ಏಕಾಭಿಪ್ರಾಯ ಮೂಡುತ್ತದೆ.
H ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಏರ್ಪಡಿಸುವುದು: ಪಕ್ಷಗಳ ನಾಯಕರು ಸರ್ಕಾರ ಹಮ್ಮಿಕೊಂಡ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಾರೆ. ಸರ್ಕಾರದ ಯೋಜನೆಗಳ ಅನುಕೂಲ ಪಡೆಯಲು ಸೂಚಿಸುತ್ತಾರೆ. ಜನರು ತಮ್ಮ ನಾಯಕರ ಮೂಲಕ ಯೋಜನೆಗಳ ತಪ್ಪು ತಡೆಗಳನ್ನು ಸರ್ಕಾರದ ಗಮನಕ್ಕೆ ತರುತ್ತಾರೆ. ಹೀಗೆ ಸರ್ಕಾರ ಹಾಗು ಪ್ರಜೆಗಳ ನಡುವೆ ಪಕ್ಷಗಳ ನಾಯಕರು ಸೇತುವೆಯಂತೆ ಕಾರ್ಯ ನಿರ್ವಹಿಸುವರು.
I ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವೆ ಹೊಂದಾಣಿಕೆ ತರುತ್ತವೆ: ಪಕ್ಷಗಳು ಸರ್ಕಾರದ ಈ ಎರಡು ಅಂಗಗಳ ನಡುವೆ ಹೊಂದಾಣಿಕೆ ತರುತ್ತವೆ. ಇದರಿಂದ ಶಾಸಕಾಂಗ ಸೂಚಿಸಿದ ಹಾಗು ತೀರ್ಮಾನಿಸಿದ ಕಾರ್ಯಗಳು ಕಾರ್ಯಾಂಗದ ಮೂಲಕ ಜಾರಿಗೊಂಡು ಜನರಿಗೆ ಅನುಕೂಲವಾಗುತ್ತದೆ. ಪಕ್ಷಗಳ ನಾಯಕರು ಇವೆರಡರ ನಡುವೆ ಸಮನ್ವಯ ತರಲು ಸದಾ ಶ್ರಮಿಸುತ್ತಾರೆ.
J ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವುದು: ರಾಜಕೀಯ ಪಕ್ಷಗಳು ಬೇರೆ ಬೇರೆ ಸಿದ್ಧಾಂತಗಳಿಗೆ ಬದ್ಧವಾಗಿದ್ದರೂ ದೇಶದ ಹಿತಕ್ಕೆ ಪೂರಕವಾಗಿ ಕಾರ್ಯ ಮಾಡುತ್ತಿರುತ್ತವೆ. ರಾಷ್ಟ್ರಕ್ಕೆ ಹಾನಿಯಾಗುವ ಬೆಳವಣಿಗೆಯನ್ನು ಖಂಡಿಸುತ್ತವೆ. ರಾಷ್ಟ್ರಕ್ಕೆ ತೊಂದರೆ ಒದಗಿದಾಗ ತಮ್ಮ ಬಿನ್ನಾಭಿಪ್ರಾಯ ಮರೆತು ಎದುರಿಸುತ್ತವೆ. ಉ: 1998ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಎಲ್ಲ ಪಕ್ಷಗಳು ದೇಶಕ್ಕಾಗಿ ಶ್ರಮಿಸಿದವು.

ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಯಶಸ್ಸು ರಾಜಕೀಯ ಪಕ್ಷಗಳ ಕಾರ್ಯಗಳ ಪ್ರಮಾಣವನ್ನು ಆಧರಿಸಿದೆ. ಪಕ್ಷಗಳು ತಮ್ಮ ಜವಾಬ್ದಾರಿ ಮರೆತರೆ ಅಲ್ಲಿ ಸರ್ವಾಧಿಕಾರ ನೆಲೆಗೊಂಡು ಪ್ರಜಾಪ್ರಭುತ್ವ ನಾಶವಾಗುತ್ತದೆ. ಹೀಗಾಗಿ ಜನರು ಪಕ್ಷಗಳನ್ನು ಬೆಂಬಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಚೈತನ್ಯಶೀಲವಾಗಿಡಬೇಕಾಗಿದೆ.

10. ಪಕ್ಷಾಂತರ ನಿಷೇಧ ಕಾಯಿದೆಯ ಮುಖ್ಯಾಂಶಗಳನ್ನು ಬರೆಯಿರಿ?
ಉ: ಒಂದು ಪಕ್ಷದ ಚುನಾಯಿತ ಪ್ರತಿನಿಧಿಯು ತನ್ನ ಪಕ್ಷಕ್ಕೆ ರಾಜೀನಾಮೆ ನೀಡದೇ ಬೇರೊಂದು ಪಕ್ಷಕ್ಕೆ ಸೇರುವುದನ್ನು ಪಕ್ಷಾಂತರ ಎನ್ನುವರು. ಫ಼್ಲೋರ್ ಕ್ರಾಸಿಂಗ್, ಕಾರ್ಪೇಟ್ ಕ್ರಾಸಿಂಗ್ ಹಾಗು ಡಿಫೆಕ್ಷನ್ ಎಂಬುವು ಪಕ್ಷಾಂತರಕ್ಕಿರುವ ಇತರ ಹೆಸರುಗಳಾಗಿವೆ. ಅಧಿಕಾರದ ದಾಹ, ಪ್ರತಿಷ್ಟೆ, ನಾಯಕರ ಬಿನ್ನಾಭಿಪ್ರಾಯ, ಗುಂಪುಗಾರಿಕೆಗಳು ಪಕ್ಷಾಂತರಕ್ಕೆ ಪ್ರಮುಖ ಕಾರಣಗಳಾಗಿರುತ್ತವೆ. ಈ ಚಟುವಟಿಕೆಯು ರಾಜಕೀಯ ಅಸ್ಥಿರತೆ, ಅಧಿಕಾರ ದುರುಪಯೋಗ, ಬ್ರಷ್ಟಾಚಾರ, ಸರ್ಕಾರದ ಅಭದ್ರತೆಯಂತಹ ದುಷ್ಪರಿಣಾಮಗಳಿಗೆ ಕಾರಣವಾಗುತ್ತಿತ್ತು. ಆಗ ಪಕ್ಷಾಂತರ ನಿಷೇಧ ಕಾಯಿದೆಯನ್ನು ರಾಜೀವ್ ಗಾಂಧಿ ಸರ್ಕಾರ 1 ಎಪ್ರಿಲ್ 1985ರಲ್ಲಿ ಸಂವಿಧಾನಕ್ಕೆ 52ನೆಯ ತಿದ್ದುಪಡಿ ಮಾಡಿ ಜಾರಿಗೊಳಿಸಿತು. ಮುಂದೆ 2003ರಲ್ಲಿ ಸಂವಿಧಾನಕ್ಕೆ 91ನೆಯ ತಿದ್ದುಪಡಿ ಮಾಡಲಾಯಿತು. ಈ ಕಾಯಿದೆಯ ವಿವರಗಳನ್ನು ಸಂವಿಧಾನದ ಹತ್ತನೆಯ ಅನುಸೂಚಿಯಲ್ಲಿ ಕಾಣಬಹುದಾಗಿದ್ದು ಮುಖ್ಯಾಂಶಗಳೆಂದರೆ
A. ಕೇಂದ್ರ ಸಂಸತ್ತು ಅಥವ ರಾಜ್ಯ ವಿಧಾನಸಭೆಗಳ ಸದಸ್ಯರು ತಮ್ಮ ಪಕ್ಷಕ್ಕೆ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿದರೆ ಪ್ರತಿನಿಧಿಗಳು ತಮ್ಮ ಸ್ಥಾನ ಕಳೆದುಕೊಳ್ಳುತ್ತಾರೆ.
B. ತಮ್ಮ ಶಾಸನಸಭೆಯಲ್ಲಿ ತನ್ನ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ಮಾಡಿದ ಪ್ರತಿನಿಧಿಯು ಸದಸ್ಯತ್ವ ಕಳೆದುಕೊಳ್ಳುತ್ತಾನೆ.
C. ಕೇಂದ್ರ ಮತ್ತು ರಾಜ್ಯ ಶಾಸಕಾಂಗಕ್ಕೆ ನಾಮಕರಣಗೊಂಡ ಸದಸ್ಯರು ತಮ್ಮ ನೇಮಕದ ಆರು ತಿಂಗಳ ಬಳಿಕ ಯಾವುದಾದರೂ ಪಕ್ಷಕ್ಕೆ ಸೇರಿದರೆ ತಮ್ಮ ಸದಸ್ಯತ್ವ ಕಳೆದುಕೊಳ್ಳುತ್ತಾರೆ.
D. ಒಂದು ಪಕ್ಷದ ಮೂರನೇ ಒಂದಕ್ಕಿಂತ ಹೆಚ್ಚಿನ ಸದಸ್ಯರು ಪಕ್ಷ ಬಿಟ್ಟರೂ ಪಕ್ಷಾಂತರವಾಗುತ್ತದೆ.
E. ಈ ಕಾಯಿದೆಯಂತೆ ಅನರ್ಹನಾದ ಸದಸ್ಯ ಮಂತ್ರಿ ಸ್ಥಾನ ಅಥವ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಲಾಭದಾಯಕ ಹುದ್ದೆಯನ್ನು ಹೊಂದುವಂತಿಲ್ಲ.
F. ಈ ಕಾಯಿದೆಯಂತೆ ಕೇಂದ್ರ ಮತ್ತು ರಾಜ್ಯ ಮಂತ್ರಿ ಮಂಡಲದ ಗಾತ್ರವು ಶಾಸಕಾಂಗದ ಶೇಕಡಾ ಹದಿನೈದಕ್ಕೆ ಸೀಮಿತವಾಯಿತು.
G. ಈ ಕಾಯಿದೆಯಂತೆ ಪಕ್ಷಾಂತರ ಮಾಡಿದ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಸಭಾಧ್ಯಕ್ಷರಿಗೆ ಸೇರಿರುತ್ತದೆ.
H. ಒಂದು ಪಕ್ಷ ಬೇರೊಂದು ಪಕ್ಷದೊಡನೆ ವಿಲೀನವಾದರೆ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯವಾಗುವುದಿಲ್ಲ.
I. ಕೇಂದ್ರ ಹಾಗು ರಾಜ್ಯ ಶಾಸಕಾಂಗಗಳ ಸಭಾಧ್ಯಕ್ಷರು ತಮ್ಮ ಪಕ್ಷದ ವಿರುದ್ಧ ಮತ ಚಲಾಯಿಸಿದರೂ ಪಕ್ಷಾಂತರ ಎನಿಸಿಕೊಳ್ಳುವುದಿಲ್ಲ.
J. ತಮ್ಮ ಸದಸ್ಯತ್ವ ಕಳೆದುಕೊಂಡ ಸದಸ್ಯರು ಸಭಾಧ್ಯಕ್ಷರ ತೀರ್ಮಾನವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ನೀಡಲಾಯಿತು. ಉ: ಕರ್ನಾಟಕದಲ್ಲಿ ಬಾಲಚಂದ್ರ ಜಾರಕಿಹೊಳೆ ನಾಯಕತ್ವದ 11 ಸದಸ್ಯರು ನ್ಯಾಯಾಲಯದ ಮೂಲಕ ತಮ್ಮ ಶಾಸಕ ಸ್ಥಾನವನ್ನು ಮರಳಿ ಪಡೆದರು.

ಒಟ್ಟಿನಲ್ಲಿ ಪಕ್ಷಾಂತರ ಭಾರತದ ರಾಜಕೀಯಕ್ಕೆ ಕ್ಯಾನ್ಸರ್ ರೂಪದಲ್ಲಿದೆ. 2003ರಲ್ಲಿ ಕಾಯಿದೆಯ ದೋಷಗಳನ್ನು ನಿವಾರಿಸಲು ಪ್ರಯತ್ನಿಸಲಾಗಿದ್ದು ಇಂದಿಗೂ ಹೊಸ ರೂಪದಲ್ಲಿ ಪಕ್ಷಾಂತರ ಜಾರಿಯಲ್ಲಿದೆ. ರಾಜಕಾರಣಿಗಳಲ್ಲಿ ಮೌಲ್ಯಗಳು ಬಾರದ ಹೊರತು ಪಕ್ಷಾಂತರವನ್ನು ತಡೆಯುವುದು ಕಷ್ಟದ ಕೆಲಸ.


10 ಕಾಮೆಂಟ್‌ಗಳು:

  1. ಭಾರತದಲ್ಲಿ ಯಾವ ಕಾಯ್ದೆ ಚುನಾವಣೆ ನಡೆಸಲು ಅವಕಾಶ ,?

    ಪ್ರತ್ಯುತ್ತರಅಳಿಸಿ
  2. ಉತ್ತಮವಾದ ಶೈಕ್ಷಣಿಕ ಮಾಹಿತಿಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ