ಗುರುವಾರ, ಫೆಬ್ರವರಿ 4, 2021

2021-22 ಕೇಂದ್ರ ಬಜೆಟ್ ಮಂಡನೆಯ ನಂತರ ಪ್ರಧಾನಮಂತ್ರಿ ಅವರ ಹೇಳಿಕೆ

2021-22 ಕೇಂದ್ರ ಬಜೆಟ್ ಮಂಡನೆಯ ನಂತರ ಪ್ರಧಾನಮಂತ್ರಿ ಅವರ ಹೇಳಿಕೆ

ನಮಸ್ಕಾರ,

ಅಸಾಧಾರಣ ಸಂದರ್ಭಗಳ ನಡುವೆಯೇ 2021ನೇ ಸಾಲಿನ ಬಜೆಟ್ ಮಂಡಿಸಲಾಗಿದೆ. ಇದರಲ್ಲಿ ವಾಸ್ತವತೆಯ ಪ್ರಜ್ಞೆಯ ಜೊತೆಗೆ ಅಭಿವೃದ್ಧಿಯ ವಿಶ್ವಾಸವೂ ಒಳಗೊಂಡಿದೆ. ಜಗತ್ತಿನಲ್ಲಿ ಕೊರೊನಾ ಸೃಷ್ಟಿಸಿರುವ ಪ್ರಭಾವ ಇಡೀ ಮನುಕುಲದ ಮೇಲಾಗಿದೆ. ಈ ಸಂದರ್ಭಗಳ ನಡುವೆಯೇ ಇಂದಿನ ಬಜೆಟ್ ಭಾರತದ ಆತ್ಮವಿಶ್ವಾಸದ ಮೇಲೆ ಬೆಳಕು ಚೆಲ್ಲುತ್ತಿದೆ. ಇದೇ ವೇಳೆ ಜಗತ್ತಿನಲ್ಲಿ ಇದು ಹೊಸ ವಿಶ್ವಾಸವನ್ನು ಹುಟ್ಟುಹಾಕಲಿದೆ.

ಇಂದಿನ ಬಜೆಟ್ ನಲ್ಲಿ ಸ್ವಾವಲಂನೆಯ ಮುನ್ನೋಟವಲ್ಲದೆ, ಪ್ರತಿಯೊಂದು ವರ್ಗ ಮತ್ತು ಪ್ರತಿಯೊಂದು ವ್ಯಕ್ತಿಯ ಒಳಗೊಳ್ಳುವಿಕೆ ಒಳಗೊಂಡಿದೆ. ಬಜೆಟ್ ನಲ್ಲಿ ಪ್ರಗತಿಗೆ ಹೊಸ ಅವಕಾಶಗಳ ತತ್ವಗಳಿವೆ. ಹೊಸ ಅವಕಾಶಗಳ ವಿಸ್ತರಣೆ, ಯುವಜನತೆಗೆ ಹೊಸ ಅವಕಾಶಗಳ ಸೃಷ್ಟಿ, ಮಾನವ ಸಂಪನ್ಮೂಲಕ್ಕೆ ಹೊಸ ಆಯಾಮ, ಮೂಲಸೌಕರ್ಯ ವಲಯದಲ್ಲಿ ಹೊಸ ಕ್ಷೇತ್ರಗಳ ಅಭಿವೃದ್ಧಿಯ ಜೊತೆಗೆ ಆಧುನಿಕತೆ ಹಾಗೂ ಹೊಸ ಸುಧಾರಣೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮುನ್ನಡೆಯುವ ಮಾರ್ಗವಿದೆ.

ಮಿತ್ರರೇ,

ಈ ಬಜೆಟ್, ನಿಯಮ ಮತ್ತು ನಿಬಂಧನೆಗಳನ್ನು ಸರಳೀಕರಣಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ಜೀವನವನ್ನು ಸುಗಮಗೊಳಿಸುವುದಕ್ಕೆ ಉತ್ತೇಜನ ನೀಡಲಾಗುವುದು. ಈ ಬಜೆಟ್ ಸಾರ್ವಜನಿಕರಲ್ಲಿ, ಹೂಡಿಕೆದಾರರಲ್ಲಿ, ಕೈಗಾರಿಕೆ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಅದಕ್ಕಾಗಿ ನಾನು ಹಣಕಾಸು ಸಚಿವೆ ನಿರ್ಮಲಾ ಜಿ ಮತ್ತು ಅವರ ಸಹೋದ್ಯೋಗಿ ಅನುರಾಗ್ ಜಿ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ.

ಮಿತ್ರರೇ,

ಈ ಅಪರೂಪದ ಬಜೆಟ್ ಭಾಷಣದ ಕುರಿತು ಒಂದೆರಡು ಗಂಟೆಗಳಲ್ಲೇ ತಜ್ಞರು ಹಲವು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಸಾಮಾನ್ಯ ಜನರ ಮೇಲೆ ಅಧಿಕ ಹೊರೆ ಹೊರಿಸಲಿದೆ ಎಂದು ಹಲವು ತಜ್ಞರು ಅಂದಾಜಿಸಿದ್ದರು. ಆದರೆ ವಿತ್ತೀಯ ಸ್ಥಿರತೆ ಕಾಯ್ದುಕ್ಕೊಳ್ಳುವ ನಿಬಂಧನೆಗೆ ಅನುಗುಣವಾಗಿ ಸರ್ಕಾರ ಬಜೆಟ್ ಗಾತ್ರವನ್ನು ಹೆಚ್ಚಳ ಮಾಡುವಲ್ಲಿ ಒತ್ತಡವನ್ನು ಪಾಲಿಸಿತು. ನಮ್ಮ ಸರ್ಕಾರ, ಬಜೆಟ್ ಅತ್ಯಂತ ಪಾರದರ್ಶಕವಾಗಿರಬೇಕು ಎಂದು ನಿರಂತರ ಪ್ರಯತ್ನಗಳನ್ನು ನಡೆಸಿತು. ಈ ಬಜೆಟ್ ನಲ್ಲಿ ಪಾರದರ್ಶಕತೆ ಕಾಯ್ದುಕೊಂಡಿರುವುದಕ್ಕೆ ಹಲವು ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ.

ಮಿತ್ರರೇ,

ಕೊರೊನಾ ವಿರುದ್ಧದ ಸಮರದಲ್ಲಿ ಭಾರತ, ಪ್ರತಿ ಸ್ಪಂದನೆಯ ಬದಲಿಗೆ ಸದಾ ಕ್ರಿಯಾಶೀಲವಾಗಿತ್ತು. ಅದು ಕೊರೊನಾ ಸಂದರ್ಭದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಲ್ಲಾಗಿರಬಹುದು ಅಥವಾ ಆತ್ಮನಿರ್ಭರ ಭಾರತ ಸಂಕಲ್ಪದಲ್ಲಾಗಿರಬಹುದು. ಈ ಸಕ್ರಿಯ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗುವ ಸಲುವಾಗಿ ಇಂದಿನ ಬಜೆಟ್ ನಲ್ಲಿ ಯಾವುದೇ ಪ್ರತಿಸ್ಪಂದನೆಗಳಿಗೆ ಜಾಗವಿಲ್ಲ. ಇದೇ ವೇಳೆ ನಾವು ಕೇವಲ ಸಕ್ರಿಯಕ್ಕೆ ಸೀಮಿತವಾಗದೆ, ನಾವು ಅತ್ಯಂತ ಸಕ್ರಿಯ ಬಜೆಟ್ ನೀಡುವ ಮೂಲಕ ದೇಶಕ್ಕೆ ಕ್ರಿಯಾಶೀಲತೆಯ ಸಂದೇಶವನ್ನು ನೀಡಿದ್ದೇವೆ. ಈ ಬಜೆಟ್ ನಲ್ಲಿ ವಿಶೇಷವಾಗಿ ಆರೋಗ್ಯ ಮತ್ತು ಯೋಗಕ್ಷೇಮ ಎರಡೂ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೀವವಿದ್ದರೆ ಪ್ರಗತಿಯಿರುತ್ತದೆ. ಬಜೆಟ್ ನಲ್ಲಿ ಎಂಎಸ್ಎಂಇಗಳು ಮತ್ತು ವಿಶೇಷವಾಗಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಅಂತೆಯೇ ಈ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹಿಂದೆಂದೂ ನಿರೀಕ್ಷಿಸಲಾಗದಷ್ಟು ಒತ್ತು ನೀಡಲಾಗಿದೆ. ಈ ಬಜೆಟ್ ದೇಶದ ಪ್ರತಿಯೊಂದು ವಲಯದ ಅಭವೃದ್ಧಿಗೆ ಅಂದರೆ ಸಮಗ್ರ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ವಿಶೇಷವಾಗಿ ನಮ್ಮ ದಕ್ಷಿಣದ ರಾಜ್ಯಗಳು, ಈಶಾನ್ಯ ರಾಜ್ಯಗಳು ಮತ್ತು ಉತ್ತರದ ಲೇಹ್-ಲಡಾಖ್ ಪ್ರಾಂತ್ಯದ ಅಭಿವೃದ್ಧಿಗೆ ವಿಶೇಷ ಗಮನ ನೀಡಿರುವುದು ನನಗೆ ಸಂತಸ ತಂದಿದೆ. ಬಜೆಟ್ ನಲ್ಲಿ ಕರಾವಳಿಯ ರಾಜ್ಯಗಳಾದ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳಗಳನ್ನು ವಾಣಿಜ್ಯ ಶಕ್ತಿ ಕೇಂದ್ರಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬಳಕೆ ಮಾಡಿಕೊಳ್ಳಲಾಗದ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಈ ಬಜೆಟ್ ನೆರವಾಗಲಿದೆ. ಈ ಬಜೆಟ್ ನಲ್ಲಿ ಸಂಶೋಧನೆ ಮತ್ತು ಆವಿಷ್ಕಾರ ಪೂರಕ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಜೊತೆಗೆ ನಮ್ಮ ಯುವಜನರನ್ನು ಸಬಲೀಕರಣಗೊಳಿಸುವ ಮತ್ತು ಉಜ್ವಲ ಭವಿಷ್ಯಕ್ಕೆ ಸಮಗ್ರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಭಾರತ ಮುನ್ನಡೆಯಲಿದೆ.

ಮಿತ್ರರೇ,

ಈ ಬಜೆಟ್ ನಲ್ಲಿ ಆರೋಗ್ಯ, ನೈರ್ಮಲೀಕರಣ, ಪೌಷ್ಠಿಕಾಂಶ, ಶುದ್ಧ ನೀರು ಒದಗಿಸುವಲ್ಲಿ ಸಮಾನತೆ ಮತ್ತು ದೇಶದ ಸಾಮಾನ್ಯ ಮಹಿಳೆಯರು ಮತ್ತು ಪುರುಷರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಬಜೆಟ್ ನಲ್ಲಿ ಮೂಲಸೌಕರ್ಯ ವೃದ್ಧಿಗೆ ಖರ್ಚು ಮಾಡುವ ಹಣವನ್ನು ನಿರೀಕ್ಷೆಗೂ ಮೀರಿ ಹೆಚ್ಚಳ ಮಾಡುವ ಜೊತೆಗೆ ಹಲವು ವ್ಯವಸ್ಥಿತ ಸುಧಾರಣೆಗಳನ್ನು ಪ್ರಸ್ತಾಪಿಸಲಾಗಿದ್ದು, ಇದರಿಂದಾಗಿ ಪ್ರಗತಿಗೆ ಹೆಚ್ಚಿನ ಪ್ರಯೋಜನವಾಗುವುದಲ್ಲದೆ, ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. ದೇಶದಲ್ಲಿ ಕೃಷಿ ವಲಯದ ಬಲವರ್ಧನೆಗೆ ವಿಶೇಷ ಒತ್ತು ನೀಡಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಬಜೆಟ್ ನಲ್ಲಿ ಹಲವು ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಕೃಷಿ ವಲಯದಲ್ಲಿ ರೈತರು ಸುಲಭವಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಲಗಳನ್ನು ಪಡೆಯಬಹುದಾಗಿದೆ. ಕೃಷಿ ಮೂಲಸೌಕರ್ಯ ನಿಧಿಯ ಮೂಲಕ ದೇಶದಲ್ಲಿ ಎಪಿಎಂಸಿಗಳು ಹಾಗು ಮಂಡಿಗಳ ಬಲವರ್ಧನೆಗೆ ನೆರವಾಗುವ ಹಲವು ಅಂಶಗಳು ಸೇರಿವೆ. ಈ ಎಲ್ಲ ನಿರ್ಧಾರಗಳು ಗ್ರಾಮಗಳು ಮತ್ತು ನಮ್ಮ ರೈತರು ಬಜೆಟ್ ನ ಹೃದಯವಾಗಿದೆ ಎಂಬುದನ್ನು ಪ್ರದರ್ಶಿಸುತ್ತದೆ. ಈ ಬಾರಿ ಎಂಎಸ್ಎಂಇ ವಲಯಕ್ಕೆ ನೀಡುತ್ತಿದ್ದ ಬಜೆಟ್ ಅನ್ನು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಎರಡುಪಟ್ಟು ಅಧಿಕ ಹಣ ನೀಡಲಾಗಿದೆ. ಇದರಿಂದಾಗಿ ಎಂಎಸ್ಎಂಇ ವಲಯಕ್ಕೆ ಭಾರೀ ಉತ್ತೇಜನ ಸಿಗುವುದಲ್ಲದೆ, ಉದ್ಯೋಗಾವಕಾಶಗಳು ಹೆಚ್ಚಾಗಲಿವೆ.

ಮಿತ್ರರೇ,

ಈ ಬಜೆಟ್ ಸ್ವಾವಲಂಬಿ ಮಾರ್ಗದಲ್ಲಿ ಮುನ್ನಡೆಸುವುದಾಗಿದ್ದು, ಇದರಲ್ಲಿ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯ ಪ್ರಗತಿಯೂ ಒಳಗೊಂಡಿದೆ. ಈ ದಶಕದ ಆರಂಭಕ್ಕೆ ಬಜೆಟ್ ಅತ್ಯಂತ ಭದ್ರ ಬುನಾದಿಯನ್ನು ಹಾಕಲಿದೆ. ಆತ್ಮನಿರ್ಭರ ಭಾರತದ ಅತ್ಯಂತ ಪ್ರಮುಖ ಬಜೆಟ್ ಗಾಗಿ ನಾನು ಎಲ್ಲ ದೇಶವಾಸಿಗಳಿಗೂ ಶುಭಾಶಯಗಳನ್ನು ಕೋರುತ್ತೇನೆ. ಮತ್ತೊಮ್ಮೆ ಹಣಕಾಸು ಸಚಿವರು ಹಾಗೂ ಅವರ ಇಡೀ ತಂಡಕ್ಕೆ ನಾನು ಅಭಿನಂದನೆ ಮತ್ತು ಧನ್ಯವಾದಗಳನ್ನು ಹೇಳುತ್ತೇನೆ.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲ,  ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

***

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ