ಶುಕ್ರವಾರ, ಫೆಬ್ರವರಿ 5, 2021

Union Budget 2021: ಅಪೌಷ್ಟಿಕತೆ ನಿವಾರಣೆಗೆ ‘ಮಿಷನ್ ಪೋಷಣ್ 2.0’

Union Budget 2021: ಅಪೌಷ್ಟಿಕತೆ ನಿವಾರಣೆಗೆ ‘ಮಿಷನ್ ಪೋಷಣ್ 2.0’

ಪಿಟಿಐ Updated: 
prajavani

ಸಾಂದರ್ಭಿಕ ಚಿತ್ರ

ನವದೆಹಲಿ: ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ ಮತ್ತು ಪೋಷಣ್ ಅಭಿಯಾನವನ್ನು ವಿಲೀನಗೊಳಿಸಿ ‘ಮಿಷನ್ ಪೋಷಣ್‌ 2.0’ ಹೆಸರಿನಲ್ಲಿ ಯೋಜನೆ ಪ್ರಾರಂಭಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

‘ಪೌಷ್ಟಿಕಾಂಶ ಕುರಿತು ಜಾಗೃತಿ ಮೂಡಿಸಿ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮವನ್ನು ಬಲಪಡಿಸಲು ಈಗಾಗಲೇ ಆರಂಭಿಸಿರುವ ಪೋಷಣ್ ಅಭಿಯಾನ ಹಾಗೂ ಪೌಷ್ಟಿಕಾಂಶ ಕುರಿತು ಕಾರ್ಯಕ್ರಮಗಳನ್ನು ‘ಮಿಷನ್ ಪೋಷಣ್‌ 2.0’ ಯೋಜನೆಯಡಿ ವಿಲೀನಗೊಳಿಸಲಾಗುವುದು. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 112 ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಆ ಜಿಲ್ಲೆಗಳಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲಾಗುವುದು’ ಎಂದು ನಿರ್ಮಲಾ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌), ಅಂಗನವಾಡಿ ಸೇವೆಗಳು, ಪೋಷಣ್ ಅಭಿಯಾನ, ಹದಿಹರೆಯದ ಬಾಲಕಿಯರ ಯೋಜನೆಗಳು ಇನ್ನು ಮುಂದೆ ‘ಮಿಷನ್ ಪೋಷಣ್ 2.0’ ಯೋಜನೆ ಅಡಿ ಒಂದೇ ಛಾವಣಿಯಡಿ ಸೇರ್ಪಡೆಗೊಳ್ಳಲಿವೆ.

ಅನುದಾನ ಶೇ 16ರಷ್ಟು ಏರಿಕೆ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಕೇಂದ್ರ ಸರ್ಕಾರವು 24,435 ಕೋಟಿ ಮೀಸಲಿರಿಸಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೀಸಲಿರಿಸಿರುವ ಮೊತ್ತದಲ್ಲಿ ಶೇ 16.31ರಷ್ಟು ಏರಿಕೆಯಾಗಿದೆ.

24,435 ಕೋಟಿ ಮೊತ್ತದಲ್ಲಿ 20,105 ಕೋಟಿಯನ್ನು ‘ಸಕ್ಷಮ್ ಅಂಗನವಾಡಿ’ ಯೋಜನೆ ಮತ್ತು ‘ಮಿಷನ್ ಪೋಷಣ್ 2.0’ಗೆ ಮೀಸಲಿರಿಸಲಾಗಿದೆ. ಭೇಟಿ ಬಚಾವೋ ಭೇಟಿ ಪಢಾವೋ, ಒನ್ ಸ್ಟಾಪ್ ಸೆಂಟರ್‌, ಸ್ವಾಧಾರ ಗೃಹ, ಮಕ್ಕಳ ರಕ್ಷಣೆ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಹದಿಹರೆಯದ ಬಾಲಕಿಯರ ಯೋಜನೆ ಮತ್ತು ಉಜ್ವಲ ಅಡುಗೆ ಅನಿಲ ಯೋಜನೆ ಸೇರಿದಂತೆ ಇತರ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಏನೂ ಹಂಚಿಕೆ ಮಾಡಿಲ್ಲ.

ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಸಚಿವಾಲಯದ ಸ್ವಾಯತ್ತ ಸಂಸ್ಥೆಗಳಾದ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (ಎನ್‌ಐಪಿಸಿಸಿಡಿ), ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆ (ಕಾರಾ), ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್), ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಕೇಂದ್ರ ಸಮಾಜ ಕಲ್ಯಾಣ ಮಂಡಳಿಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಹಿಂದಿಗಿಂತ ಹೆಚ್ಚಿನ ಮೊತ್ತದ ಹಣ ಮೀಸಲಿರಿಸಲಾಗಿದೆ. ಆದರೆ, ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣದ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ‌ 726 ಕೋಟಿ ಮೊತ್ತವನ್ನು 48 ಕೋಟಿಗೆ ಇಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ