ಶುಕ್ರವಾರ, ಫೆಬ್ರವರಿ 5, 2021

Union Budget 2021: ಕೃಷಿ ಸಾಲದ ಗುರಿ ಶೇ 10ರಷ್ಟು ಹೆಚ್ಚಳ

Union Budget 2021: ಕೃಷಿ ಸಾಲದ ಗುರಿ ಶೇ 10ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated: 
prajavani

ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರದಾದ್ಯಂತ ತೀವ್ರಸ್ವರೂಪದ ಹೋರಾಟಗಳು ನಡೆಯುತ್ತಿರುವುದರಿಂದ, 2021–22ನೇ ಸಾಲಿನ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ಸರ್ಕಾರ ಯಾವ ಘೋಷಣೆಗಳನ್ನು ಮಾಡುತ್ತದೆ ಎಂಬ ಬಗ್ಗೆ ವಿಶೇಷವಾದ ಕುತೂಹಲವಿತ್ತು.

‘ನಮ್ಮ ಸರ್ಕಾರವು ರೈತರ ಏಳಿಗೆಗೆ ಬದ್ಧವಾಗಿದೆ’ ಎನ್ನುತ್ತಲೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಮುಂದಿಟ್ಟ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌, ಕೃಷಿ ಸಾಲ ವಿತರಣೆಯ ಗುರಿಯನ್ನು 16.5 ಲಕ್ಷ ಕೋಟಿಗೆ (ಶೇ 10ರಷ್ಟು) ಹೆಚ್ಚಿಸಿದ್ದಲ್ಲದೆ, ಬೆಳೆ ಕಟಾವಿನ ನಂತರದ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ ಶೇ 2.5ರಿಂದ ಆರಂಭಿಸಿ ಕೆಲವು ಉತ್ಪನ್ನಗಳ ಮೇಲೆ ಶೇ 100ರಷ್ಟು ‘ಕೃಷಿ ಮೂಲಸೌಲಭ್ಯ ಮತ್ತು ಅಭಿವೃದ್ಧಿ ಸೆಸ್‌’ (ಎಐಡಿಸಿ) ಜಾರಿ ಮಾಡುವುದಾಗಿಯೂ ತಿಳಿಸಿದರು. ಈ ಸೆಸ್‌ ಸಾಮಾನ್ಯ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದೂ ಸಚಿವೆ ಹೇಳಿದರು.

‘ರೈತರು ಬೆಳೆಗೆ ಮಾಡುವ ವೆಚ್ಚದ 1.5ರಷ್ಟು ಪಟ್ಟು ಆದಾಯ ಬರಬೇಕೆಂಬ ಉದ್ದೇಶದಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ಎಂಎಸ್‌ಪಿ ಅಡಿ ಖರೀದಿ ಮಾಡುವ ಧಾನ್ಯಗಳ ಪ್ರಮಾಣವು ಕಳೆದ ಕೆಲವು ವರ್ಷಗಳಲ್ಲಿ ಸತತವಾಗಿ ಏರಿಕೆಯಾಗುತ್ತಿದೆ’ ಎಂದರು. 2013–14ನೇ ಸಾಲಿನಲ್ಲಿ ಭತ್ತ, ಗೋಧಿ, ಹತ್ತಿ ಮುಂತಾದ ಉತ್ಪನ್ನಗಳ ಖರೀದಿಗಾಗಿ ಮಾಡಿದ್ದ ವೆಚ್ಚ ಹಾಗೂ 2020–21ನೇ ಸಾಲಿನಲ್ಲಿ ಮಾಡಿರುವ ವೆಚ್ಚಗಳ ಅಂಕಿಅಂಶಗಳನ್ನು ನೀಡಿದರು.

‘ಕಳೆದ ಆರು ವರ್ಷಗಳಲ್ಲಿ ಗೋಧಿ, ಧಾನ್ಯಗಳು ಹಾಗೂ ಹತ್ತಿಯ ಖರೀದಿ ಪ್ರಮಾಣವು ಹಲವು ಪಟ್ಟು ಹೆಚ್ಚಾಗಿದೆ. 43.66 ಲಕ್ಷ ರೈತರು ಕನಿಷ್ಠ ಬೆಂಬಲ ಬೆಲೆಯ ಲಾಭಗಳನ್ನು ಪಡೆದಿದ್ದಾರೆ ಎಂದು ನಿರ್ಮಲಾ ತಿಳಿಸಿದರು.

ಶೇ 5.63ರಷ್ಟು ಹೆಚ್ಚು ಹಂಚಿಕೆ
ಕೃಷಿ ಹಾಗೂ ರೈತರ ಅಭಿವೃದ್ಧಿ ಸಚಿವಾಲಯಕ್ಕೆ ಕಳೆದ ಸಾಲಿಗಿಂತ ಶೇ 5.63ರಷ್ಟು ಹೆಚ್ಚು ಹಣವನ್ನು (1,31,531 ಕೋಟಿ) ಹಂಚಿಕೆ ಮಾಡಲಾಗಿದೆ. ಇದರಲ್ಲಿ ದೊಡ್ಡ ಮೊತ್ತವನ್ನು ‘ಪಿಎಂ–ಕಿಸಾನ್‌’ ಯೋಜನೆಯ ಮೂಲಕ ವೆಚ್ಚ ಮಾಡಲಾಗುವುದು. ಕೃಷಿ ಮೂಲಸೌಲಭ್ಯ ಹಾಗೂ ನೀರಾವರಿ ಯೋಜನೆಗಳಿಗೂ ಕಳೆದ ವರ್ಷಕ್ಕಿಂತ ಹೆಚ್ಚು ಹಣವನ್ನು ಒದಗಿಸಲಾಗಿದೆ.

ಒಟ್ಟು ಹಂಚಿಕೆಯಲ್ಲಿ 1,23,017.57 ಕೋಟಿಯನ್ನು ವಿವಿಧ ಯೋಜನೆಗಳಿಗೆ ಹಾಗೂ 8,513.62 ಕೋಟಿಯನ್ನು ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗಕ್ಕೆ ನೀಡಲಾಗಿದೆ. ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಡೇರಿ ಸಚಿವಾಲಯಕ್ಕೆ 4,820.82 ಕೋಟಿ ಹಂಚಿಕೆ ಮಾಡಲಾಗಿದೆ.

ಸಬ್ಸಿಡಿ ವೆಚ್ಚ ಹೆಚ್ಚಳ
ಕೋವಿಡ್‌ ಕಾರಣದಿಂದ ಆಹಾರ ಹಾಗೂ ರಸಗೊಬ್ಬರಗಳಿಗೆ ನೀಡಿದ ಸಬ್ಸಿಡಿ ಪ್ರಮಾಣವು ಹೆಚ್ಚಾಗಿರುವುದರಿಂದ 2021–22ನೇ ಸಾಲಿನಲ್ಲಿ ಸರ್ಕಾರದ ಮೇಲೆ ಸಬ್ಸಿಡಿಯ ಹೊರೆ ಹೆಚ್ಚಾಗಿದೆ.

2020–21ನೇ ಸಾಲಿನಲ್ಲಿ 2.62 ಲಕ್ಷ ಕೋಟಿಯಷ್ಟಿದ್ದ ಸಬ್ಸಿಡಿ, 2021–22ನೇ ಸಾಲಿನಲ್ಲಿ ಶೇ 147ರಷ್ಟು ಏರಿಕೆಯಾಗಿ 6.48 ಲಕ್ಷ ಕೋಟಿಗೆ ತಲುಪಲಿದೆ. ಆಹಾರ ಮತ್ತು ರಸಗೊಬ್ಬರ ಸಬ್ಸಿಡಿಯಲ್ಲದೆ, 3.69 ಲಕ್ಷ ಕೋಟಿ ಮೊತ್ತವನ್ನು ಬೇರೆ ಸಬ್ಸಿಡಿಗಾಗಿ ತೆಗೆದಿರಿಸಿದೆ.

ಪ್ರಸಕ್ತ ಸಾಲಿನಲ್ಲಿ ಆಹಾರ ಸಬ್ಸಿಡಿಗಾಗಿ 1.15 ಲಕ್ಷ ಕೋಟಿ ಹಂಚಿಕೆ ಮಾಡಲಾಗಿತ್ತು. ಆದರೆ, ಕೋವಿಡ್‌ ಸಂದರ್ಭದಲ್ಲಿ ಬಡವರು ಮತ್ತು ಅಂಚಿನಲ್ಲಿರುವವರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲು ನಿರ್ಧರಿಸಿದ್ದರಿಂದ ಸಬ್ಸಿಡಿಗಾಗಿ ಮಾಡಿರುವ ವೆಚ್ಚ 4.22 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಅದರಂತೆ ರಸಗೊಬ್ಬರದ ಸಬ್ಸಿಡಿಯೂ ಮೊದಲೇ ಅಂದಾಜಿಸಿದ್ದ 71,309 ಕೋಟಿಯಿಂದ, 1.33 ಲಕ್ಷ ಕೋಟಿಗೆ ಏರಿಕೆಯಾಗಿತ್ತು. 2020–21ನೇ ಸಾಲಿನಲ್ಲಿ ಸಬ್ಸಿಡಿಗಾಗಿ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಕೋವಿಡ್‌ ಪಿಡುಗು ಸರ್ಕಾರದ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.

ಕೃಷಿ ಕ್ಷೇತ್ರ: ಪ್ರಮುಖ ಅಂಶಗಳು

* ಪ್ರಸಕ್ತ ಟೊಮೆಟೊ, ಈರುಳ್ಳಿ ಹಾಗೂ ಆಲುಗಡ್ಡೆಗಳಿಗೆ ಮಾತ್ರ ಸೀಮಿತವಾಗಿರುವ ‘ಆಪರೇಷನ್‌ ಗ್ರೀನ್‌’ ಯೋಜನೆಯು ಶೀಘ್ರದಲ್ಲಿ ಹಾಳಾಗುವ ಇನ್ನೂ 22 ಸರಕುಗಳಿಗೆ ವಿಸ್ತರಣೆ

* ಕೊಚ್ಚಿ, ಚೆನ್ನೈ, ವಿಶಾಖಪಟ್ಟಣ, ಪರದೀಪ್‌ (ಅಸ್ಸಾಂ) ಹಾಗೂ ಪೆಟುವಾಘಾಟ್‌ (ಪಶ್ಚಿಮ ಬಂಗಾಳ) ಮೀನುಗಾರಿಕಾ ಬಂದರುಗಳ ಅಭಿವೃದ್ಧಿ. ಇವುಗಳನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿ ರೂಪಿಸಲು ಪ್ರಸ್ತಾವನೆ. ಕಡಲ ಕೃಷಿ ಉತ್ತೇಜನಕ್ಕೆ ಹೆಚ್ಚಿನ ಅನುದಾನ

* ಒಳನಾಡು ಮೀನುಗಾರಿಕೆಯ ಉತ್ತೇಜನಕ್ಕೂ ಅಗತ್ಯ ಕ್ರಮ

* ಎಪಿಎಂಸಿಯ ಇನ್ನೂ 1,000 ಮಂಡಿಗಳನ್ನು ಎಲೆಕ್ಟ್ರಾನಿಕ್‌ ರಾಷ್ಟ್ರೀಯ ಮಾರುಕಟ್ಟೆಯ (ಇ–ನಾಮ್‌) ಜತೆ ಸಂಯೋಜಿಸಲು ಕ್ರಮ

* ಎಪಿಎಂಸಿಗಳ ಮೂಲಸೌಲಭ್ಯ ಅಭಿವೃದ್ಧಿಗೂ ಕೃಷಿ ಮೂಲಸೌಲಭ್ಯ ಅಭಿವೃದ್ಧಿ ನಿಧಿ ಬಳಕೆಗೆ ಒಪ್ಪಿಗೆ

* ಪಶುಸಂಗೋಪನೆ, ಡೇರಿ ಹಾಗೂ ಮೀನುಗಾರಿಕಾ ಕ್ಷೇತ್ರಗಳಿಗೆ ಹೆಚ್ಚಿನ ಸಾಲ ಸೌಲಭ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ