ಶುಕ್ರವಾರ, ಫೆಬ್ರವರಿ 5, 2021

Union Budget 2021: ಕೋವಿಡ್‌ ಲಸಿಕೆಗೆ ₹35 ಸಾವಿರ ಕೋಟಿ

Union Budget 2021: ಕೋವಿಡ್‌ ಲಸಿಕೆಗೆ 35 ಸಾವಿರ ಕೋಟಿ

ಪ್ರಜಾವಾಣಿ ವಾರ್ತೆ Updated: 
prajavani

ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್‌ –19 ಲಸಿಕೆ ಅಭಿಯಾನಕ್ಕೆ 35 ಸಾವಿರ ಕೋಟಿ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಆರೋಗ್ಯ ಸಚಿವಾಲಯಕ್ಕೆ ನಿಗದಿ ಮಾಡಲಾದ ಅನುದಾನಕ್ಕೆ ಹೊರತಾದ ಮೊತ್ತ.

ಆರೋಗ್ಯ ಮತ್ತು ಯೋಗ ಕ್ಷೇಮಕ್ಕಾಗಿ ಭಾರಿ ಮೊತ್ತವನ್ನು ನೀಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿಕೊಂಡಿದ್ದಾರೆ. ಆದರೆ, ಇದರ ವಿವರಗಳು ಈ ಹೇಳಿಕೆಗಿಂತ ಭಿನ್ನವಾಗಿ ಕಾಣಿಸುತ್ತಿವೆ.

‘ಆರೋಗ್ಯ ಮತ್ತು ಯೋಗಕ್ಷೇಮ’ಕ್ಕೆ ಮೀಸಲು ಇರಿಸಿದ ಮೊತ್ತವು ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಶೇ 137ರಷ್ಟು ಏರಿಕೆಯಾಗಿದೆ ಎಂದು ಬಜೆಟ್‌ ಭಾಷಣದಲ್ಲಿ ವಿವರಿಸಲಾಗಿದೆ. ಆದರೆ, ಆರೋಗ್ಯ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಹಣಕಾಸು ಆಯೋಗಕ್ಕೆ ನಿಗದಿ ಮಾಡಿದ ಮೊತ್ತವನ್ನೂ ಒಟ್ಟು ಸೇರಿಸಿ ಶೇ 137ರಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

 2021–22ನೇ ಸಾಲಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿರಿಸಿದ ಅನುದಾನದಲ್ಲಿ ಶೇ 9ರಷ್ಟು ಮಾತ್ರ ಏರಿಕೆಯಾಗಿದೆ. 2020–21ನೇ ಸಾಲಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ 65,012 ಕೋಟಿ ಮೀಸಲಿರಿಸಲಾಗಿತ್ತು, ಇದು ಈ ಬಾರಿ 71,269 ಕೋಟಿಗೆ ಏರಿಕೆಯಾಗಿದೆ. ಕುಡಿಯುವ ನೀರಿನ ಇಲಾಖೆಗೆ ಈ ಬಾರಿ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದ್ದು, ಪ್ರತಿ ಕುಟುಂಬಕ್ಕೂ ಕುಡಿಯುವ ನೀರಿನ ಸಂಪರ್ಕ ದೊರಕಿಸುವ ಯೋಜನೆಗೆ 40 ಸಾವಿರ ಕೋಟಿ ಮೀಸಲಿರಿಸಲಾಗಿದೆ. 

ಪಿಎಂ ಆತ್ಮನಿರ್ಭರ್ ಸ್ವಸ್ಥ ಭಾರತ್‌ ಯೋಜನೆ: ಕೋವಿಡ್‌–19 ಪಿಡುಗಿನ ಬೆನ್ನಲ್ಲೇ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಸ್ತುತ ಇರುವ ಪ್ರಾಥಮಿಕ ಮತ್ತು ಇತರೆ ಆರೋಗ್ಯ ಕೇಂದ್ರಗಳ ಸಾಮರ್ಥ್ಯ ಹೆಚ್ಚಳ, ಹೊಸ ರೋಗಗಳ ಪತ್ತೆ ಮತ್ತು ಅದಕ್ಕಿರುವ ಚಿಕಿತ್ಸೆ ಹಾಗೂ ನೂತನ ಆರೋಗ್ಯ ಸಂಸ್ಥೆಗಳ ಸ್ಥಾಪನೆಗಾಗಿ ಬಜೆಟ್‌ನಲ್ಲಿ ‘ಪ್ರಧಾನ ಮಂತ್ರಿ ಆತ್ಮನಿರ್ಭರ್‌ ಸ್ವಸ್ಥ ಭಾರತ’ ಹೆಸರಿನಲ್ಲಿ ಹೊಸ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಗೆ ಮುಂದಿನ ಆರು ವರ್ಷಗಳಲ್ಲಿ 64,180 ಕೋಟಿ ಮೀಸಲಿರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ