Union Budget 2021: 15 ಸಾವಿರ ಮಾದರಿ ಶಾಲೆ
ನವದೆಹಲಿ: ದೇಶದಾದ್ಯಂತ 15 ಸಾವಿರ ಶಾಲೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಅಂಶಗಳಡಿಯಲ್ಲಿ ಗುಣಾತ್ಮಕವಾಗಿ ಸದೃಢಗೊಳಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದ್ದು, ಆಯಾ ಪ್ರದೇಶಗಳಲ್ಲಿ ಅವುಗಳು ನೀತಿಯಲ್ಲಿನ ಧ್ಯೇಯವನ್ನು ಸಾಧಿಸಲು ಇತರೆ ಶಾಲೆಗಳಿಗೆ ಮಾದರಿ ಶಾಲೆಗಳಾಗಿ ಹೊರಹೊಮ್ಮಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ನೂತನ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಲೇಹ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ಬುಡಕಟ್ಟು ಪ್ರದೇಶಗಳಲ್ಲಿ 750 ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣ ಮಾಡುವುದಾಗಿ ಘೋಷಿಸಿದರು. ಈ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಮೂಲಸೌಕರ್ಯ ವ್ಯವಸ್ಥೆ ದೊರೆಯಲು, ಪ್ರತಿ ಶಾಲೆಗೆ ₹20 ಕೋಟಿಯ ಬದಲಾಗಿ ₹38 ಕೋಟಿ ನೀಡಲಾಗುವುದು, ಗುಡ್ಡಗಾಡು ಪ್ರದೇಶಗಳಲ್ಲಿ ನಿರ್ಮಾಣವಾಗಲಿರುವ ಶಾಲೆಗಳಿಗೆ ₹48 ಕೋಟಿ ನೀಡಲಾಗುವುದು ಎಂದರು.
ಎನ್‌ಇಪಿಯ ಭಾಗವಾಗಿ ಶಿಕ್ಷಣ ಕ್ಷೇತ್ರದ ಯೋಜನೆಗಳು
*ಎನ್‌ಇಪಿಯಡಿ ಶಿಕ್ಷಕರ ಗುಣಮಟ್ಟ ಹೆಚ್ಚಳಕ್ಕೆ ‘ನ್ಯಾಷನಲ್ ಪ್ರೊಫೆಷನಲ್ ಸ್ಟ್ಯಾಂಡರ್ಡ್ಸ್ ಫಾರ್ ಟೀಚರ್ಚ್(ಎನ್‌ಪಿಎಸ್‌ಟಿ) ಅಭಿವೃದ್ಧಿ.
*ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಲು ‘ನ್ಯಾಷನಲ್ ಡಿಜಿಟಲ್ ಎಜುಕೇಷನಲ್ ಆರ್ಕಿಟೆಕ್ಚರ್(ಎನ್‌ಡಿಇಎಆರ್) ಸ್ಥಾಪನೆ.
*ಕಿವಿ ಕೇಳದ ಮಕ್ಕಳಿಗಾಗಿ ಆಂಗಿಕ ಭಾಷೆಯ ಮಾನಕೀಕರಣ ಹಾಗೂ ಅವರ ಬಳಕೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪಠ್ಯಕ್ರಮ ಅಭಿವೃದ್ಧಿ
*ಶಾಲಾ ಶಿಕ್ಷಕರಿಗೆ ಪಠ್ಯವಿಷಯಗಳ ಕುರಿತು ಸಲಹೆ ಸೂಚನೆ ನೀಡಲು ನಿವೃತ್ತ ಹಾಗೂ ಹಿರಿಯ ಶಿಕ್ಷಕರ ಬಳಕೆಯನ್ನು ಕೇಂದ್ರವು ಘೋಷಿಸಿದೆ.
*ಆಟಿಕೆಗಳು ಮನರಂಜನೆ ಹಾಗೂ ಕಲಿಕೆಯ ಅಭಿವ್ಯಕ್ತಿಯಾಗಿದೆ. ಎಲ್ಲ ಹಂತದ ಶಾಲಾ ಶಿಕ್ಷಣಕ್ಕೆ ಆಟಿಕೆ ಆಧಾರಿತ ಕಲಿಕೆಯ ಅಭಿವೃದ್ಧಿ. ಇದರಿಂದ ಮಕ್ಕಳಲ್ಲಿ ಕಲಿಕೆಯಲ್ಲಿ ಆಸಕ್ತಿ ಹೆಚ್ಚಲಿದ್ದು, ತರಗತಿ ಪಾಠದ ವಾತಾವರಣ ಬದಲಾಗಲಿದೆ.
*ಇಲ್ಲಿಯವರೆಗೂ ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದಲ್ಲಷ್ಟೇ ಅರ್ಹತೆಯನ್ನು ನಿರ್ಧರಿಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಪ್ರತಿ ಮಗುವಿನ ಆಸಕ್ತಿದಾಯಕ ಕ್ಷೇತ್ರಗಳನ್ನು ಗುರುತಿಸಲು ಹಾಗೂ ಅದನ್ನು ಪ್ರೋತ್ಸಾಹಿಸಲು ಆದ್ಯತೆ
2022–23ನೇ ಸಾಲಿನಿಂದ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ಹಂತ ಹಂತವಾಗಿ ಸುಧಾರಣೆ ತಂದು ವಾಡಿಕೆ ಕಲಿಕೆ, ಪರೀಕ್ಷೆಯ ಬದಲಾಗಿ ವಾಸ್ತವ ಸ್ಥಿತಿಯಲ್ಲಿ ಮಕ್ಕಳು ತಮ್ಮ ಕಲಿಕೆಯನ್ನು ಹೇಗೆ ಅಳವಡಿಸುತ್ತಾರೆ, ವಿಶ್ಲೇಷಕ ಕೌಶಲ್ಯದ ಮುಖಾಂತರ ಅವರ ಪರೀಕ್ಷೆ ನಡೆಯಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
*₹35,219 ಕೋಟಿ: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಷ್ಕರಿಸಿದ್ದು, ಇದರಲ್ಲಿ ಕೇಂದ್ರದ ಪಾಲನ್ನು ಹೆಚ್ಚಿಸಲಾಗಿದೆ. 2025–26ರವರೆಗೆ ಈ ಯೋಜನೆಗೆ ಕೇಂದ್ರವು ಮೀಸಲಿರಿಸಿರುವ ಹಣ ಇದಾಗಿದೆ. ಇದರಿಂದ 4 ಕೋಟಿ ಎಸ್ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ