ಶುಕ್ರವಾರ, ಫೆಬ್ರವರಿ 5, 2021

Union Budget 2021: ಆದ್ಯತೆ ಪಡೆದ ಮೂಲಸೌಕರ್ಯ

Union Budget 2021: ಆದ್ಯತೆ ಪಡೆದ ಮೂಲಸೌಕರ್ಯ

ಪ್ರಜಾವಾಣಿ ವಾರ್ತೆ Updated: 
prajavani

ಸಾಂದರ್ಭಿಕ ಚಿತ್ರ

ಬಜೆಟ್‌ನಲ್ಲಿ ಹೆದ್ದಾರಿ ವಿಭಾಗಕ್ಕೆ 1.18 ಲಕ್ಷ ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಅತಿಹೆಚ್ಚಿನ ಮೊತ್ತ ಎಂದಿದ್ದಾರೆ. ದಾಖಲೆ ಮೊತ್ತ ಹಣ ನಿಗದಿಪಡಿಸಿರುವುದರಿಂದ ಪ್ರಮುಖ ಹೆದ್ದಾರಿ ಕಾರಿಡಾರ್‌ಗಳು ತ್ವರಿತವಾಗಿ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ. ಕೆಲವು ಪ್ರಮುಖ ಕಾರಿಡಾರ್‌ಗಳು ಮತ್ತು ಇತರ ಪ್ರಮುಖ ಯೋಜನೆಗಳು 2021-22ರಲ್ಲಿ ಸಾಕಷ್ಟು ಚಟುವಟಿಕೆಯನ್ನು ಕಾಣಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿ ಕಾರಿಡಾರ್

* ತಮಿಳುನಾಡು: 1.02 ಲಕ್ಷ ಕೋಟಿ ವೆಚ್ಚದಲ್ಲಿ 3,500 ಕಿಲೋಮೀಟರ್ ರಸ್ತೆ ಅಭಿವೃದ್ಧಿ; ಮದುರೈ–ಕೊಲ್ಲಂ ಕಾರಿಡಾರ್, ಚಿತ್ತೂರು–ತಟ್ಚೂರು ಕಾರಿಡಾರ್ ಮಾರ್ಗದ ರಸ್ತೆ ಕೆಲಸ ಮುಂದಿನ ವರ್ಷದಿಂದ ಆರಂಭ

* ಕೇರಳ: 65000 ಕೋಟಿ ವೆಚ್ಚದಲ್ಲಿ 1,100 ಕಿಲೋಮೀಟರ್ ರಸ್ತೆ ನಿರ್ಮಾಣ; ಮುಂಬೈ–ಕನ್ಯಾಕುಮಾರಿ ಕಾರಿಡಾರ್ ಇದರಲ್ಲಿ ಸೇರಿದೆ

* ಪಶ್ಚಿಮ ಬಂಗಾಳ: 25,000 ಕೋಟಿ ವೆಚ್ಚದಲ್ಲಿ 675 ಕಿಲೋಮೀಟರ್ ರಸ್ತೆ ನಿರ್ಮಾಣ; ಕೋಲ್ಕತ್ತ–ಸಿಲಿಗುರಿ ರಸ್ತೆ ಮೇಲ್ದರ್ಜೆಗೆ

* ಅಸ್ಸಾಂ: 19,000 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ; ಮುಂದಿನ ವರ್ಷಗಳಲ್ಲಿ ಮತ್ತೆ 34,000 ಕೋಟಿ ಮೊತ್ತದ 1,300 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕ್ರಮ

* ದೆಹಲಿ-ಮುಂಬೈ ಎಕ್ಸ್‌ಪ್ರೆಸ್, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲನೆ

* ಪ್ರಸಕ್ತ ಹಣಕಾಸು ವರ್ಷದಲ್ಲಿ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಕಾಮಗಾರಿ ಪ್ರಾರಂಭ

* ಕಾನ್ಪುರ-ಲಖನೌ ಎಕ್ಸ್‌ಪ್ರೆಸ್ ಹೆದ್ದಾರಿ ಕೆಲಸ 2021-22ರಲ್ಲಿ ಪ್ರಾರಂಭ

* 277 ಕಿ.ಮೀ ಉದ್ದದ ಚೆನ್ನೈ-ಸೇಲಂ ಕಾರಿಡಾರ್‌ಗೆ ಶೀಘ್ರ ಆದೇಶ. ಇದು 2021-22ರಲ್ಲಿ ನಿರ್ಮಾಣ ಪ್ರಾರಂಭ

* ಛತ್ತೀಸಗಡ, ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶದ ಮೂಲಕ ಹಾದುಹೋಗುವ ರಾಯ್‌ಪುರ-ವಿಶಾಖಪಟ್ಟಣಂ ಮಾರ್ಗದ 464 ಕಿ.ಮೀ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ಕಾರ್ಯಾದೇಶ; 2021-22ರಲ್ಲಿ ನಿರ್ಮಾಣ ಪ್ರಾರಂಭ

* 2021-22ರಲ್ಲಿ ಅಮೃತಸರ-ಜಾಮ್‌ನಗರ ಹಾಗೂ ದೆಹಲಿ-ಕತ್ರ ಮಾರ್ಗದಲ್ಲಿ ನಿರ್ಮಾಣ ಶುರು

* ಭಾರತ್‌ಮಾಲಾ ಯೋಜನೆಯಡಿ 3.3 ಲಕ್ಷ ಕೋಟಿ ವೆಚ್ಚದಲ್ಲಿ 13,000 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಕಾರ್ಯಾದೇಶ; ಈ ಪೈಕಿ ಈಗಾಗಲೇ 3,800 ಕಿಲೋಮೀಟರ್ ರಸ್ತೆ ಸಿದ್ಧ

ಹಡಗು ಮರುಬಳಕೆ ಸಾಮರ್ಥ್ಯ ವೃದ್ಧಿ ಗುರಿ

* ಹಡಗು ಮರುಬಳಕೆ (ರೀಸೈಕಲ್) ಸಾಮರ್ಥ್ಯ 2024ರಲ್ಲಿ ದ್ವಿಗುಣ (45 ಲಕ್ಷ ಎಲ್‌ಡಿಟಿ)

* ಈ ವಲಯದಲ್ಲಿ 1.5 ಲಕ್ಷ ಉದ್ಯೋಗ ಸೃಷ್ಟಿ

* ಯುರೋಪ್ ಮತ್ತು ಜಪಾನ್‌ನಿಂದ ಹೆಚ್ಚು ಹಡಗುಗಳನ್ನು ತರಿಸಲು ಕ್ರಮ

* ಗುಜರಾತ್‌ನ ಅಲಂಗ್‌ನಲ್ಲಿ ಸುಮಾರು 90 ಹಡಗು ಮರುಬಳಕೆ ಯಾರ್ಡ್‌ಗಳು ಪ್ರಮಾಣಪತ್ರ ಪಡೆದಿವೆ

* ಹಡಗು ಮರುಬಳಕೆ: ಜಾಗತಿಕವಾಗಿ ಭಾರತದ ಪಾಲು ಶೇ 30ರಷ್ಟಿದ್ದು, ಶೇ 50ಕ್ಕೆ ಹೆಚ್ಚಿಸುವ ಗುರಿ

ಕೋಲ್ಕತ್ತದಲ್ಲಿ ಕಾರ್ಮಿಕರು ವಾಣಿಜ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದು. –ರಾಯಿಟರ್ಸ್‌ ಚಿತ್ರ
 

ವಿದ್ಯುತ್ ವಿತರಣಾ ವ್ಯವಸ್ಥೆ ಪುನಶ್ಚೇತನಕ್ಕೆ ಹೆಜ್ಜೆ

ದೇಶದ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂ) ಪುನರುಜ್ಜೀವನಗೊಳಿಸಲು ಐದು ವರ್ಷಗಳಲ್ಲಿ 3.05 ಲಕ್ಷ ಕೋಟಿ  ವಿನಿಯೋಗಿಸುವ ಯೋಜನೆಯನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. ಜೊತೆಗೆ ವಿದ್ಯುತ್ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡುವ ಅವಕಾಶವನ್ನು ಗ್ರಾಹಕರಿಗೇ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ವಿದ್ಯುತ್ ಸೇವಾ ವಿತರಣೆ ಖಚಿತಪಡಿಸಿಕೊಳ್ಳಲು ಕಳೆದ ವರ್ಷ ಗ್ರಾಹಕರ ನಿಯಮಗಳನ್ನು ಜಾರಿಗೊಳಿಸಲಾಗಿತ್ತು.ಎಲ್ಲರಿಗೂ ದಿನದ 24 ಗಂಟೆ ವಿದ್ಯುತ್ ನೀಡುವುದು ಕಾರ್ಯಕ್ರಮದ ಉದ್ದೇಶ.

ರಾಜ್ಯ ಸರ್ಕಾರಗಳ ಒಡೆತನದಲ್ಲಿರುವ ಬಹುತೇಕ ವಿದ್ಯುತ್ ವಿತರಣಾ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿವೆ. ದಿನದ 24 ಗಂಟೆ ವಿದ್ಯುತ್ ಪೂರೈಸಲು ಬೇಕಾದ ವಿದ್ಯುತ್ ಖರೀದಿಸಲು ಹಣಕಾಸಿನ ಕೊರತೆಯಿದೆ. 2020ರ ಡಿಸೆಂಬರ್ ವೇಳೆಗೆ ವಿದ್ಯುತ್ ಉತ್ಪಾದನಾ ಸಂಸ್ಥೆಗಳು ವಿದ್ಯುತ್ ಉತ್ಪಾದಕರಿಂದ 1.35 ಲಕ್ಷ ಕೋಟಿ ಬಾಕಿ ಉಳಿಸಿಕೊಂಡಿವೆ.

ಪೂರ್ವ ಪಾವತಿಸಿದ ಸ್ಮಾರ್ಟ್ ಮೀಟರಿಂಗ್ ಅಳವಡಿಕೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳ ಮೂಲಕ ಡಿಸ್ಕಾಂಗಳ  ಮೂಲಸೌಕರ್ಯ ವೃದ್ಧಿಸಲು ಈ ಯೋಜನೆ ನೆರವು ನೀಡುತ್ತದೆ ಎಂದು ಸಚಿವೆ ಹೇಳಿದರು. ಋಣಭಾರದಲ್ಲಿರುವ ಡಿಸ್ಕಾಂಗಳ ಪುನರುಜ್ಜೀವನಕ್ಕಾಗಿ ಕೇಂದ್ರವು 2015ರ ನವೆಂಬರ್‌ನಲ್ಲಿ ಉದಯ್ (ಉಜ್ವಾಲ್ ಡಿಸ್ಕಾಂ ಅಶ್ಯೂರೆನ್ಸ್ ಯೋಜನೆ) ಯೋಜನೆಯನ್ನು ಪರಿಚಯಿಸಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ