ಮೆಲ್ಬರ್ನ್: ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯಾ ಓಪನ್‌ಗೆ ಸೋಮವಾರ ಚಾಲನೆ ದೊರೆಯಲಿದ್ದು, ವಿಶ್ವ ಟೆನಿಸ್‌ನ ಪ್ರಮುಖ ಆಟಗಾರರಾದ ರಫೆಲ್ ನಡಾಲ್, ನೊವಾಕ್ ಜೊಕೊವಿಚ್ ಹಾಗೂ ಸೆರೆನಾ ವಿಲಿಯಮ್ಸ್ ಮೇಲೆ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ ಈ ತಾರೆಗಳು ಇದ್ದಾರೆ.
ಸ್ಪೇನ್ ಆಟಗಾರ ನಡಾಲ್ ಅವರಿಗೆ ಇಲ್ಲಿ ಟ್ರೋಫಿ ಮುಡಿಗೇರಿಸಿಕೊಂಡರೆ, ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಗ್ರ್ಯಾನ್‌ಸ್ಲಾಮ್ ಗೆದ್ದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ನಡಾಲ್ ಇದುವರೆಗೆ ತಲಾ 20 ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊಣಕಾಲು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಫೆಡರರ್, ಇಲ್ಲಿ ಕಣಕ್ಕಿಳಿಯುತ್ತಿಲ್ಲವಾದ್ದರಿಂದ, ಸ್ಪೇನ್ ಆಟಗಾರನಿಗೆ ಅವರ ದಾಖಲೆ ಮೀರುವ ಅವಕಾಶವಿದೆ.
ನಡಾಲ್ ಕೂಡ ಎರಡು ವಾರಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಇತ್ತೀಚೆಗೆ ನಡೆದ ಎಟಿಪಿ ಟೂರ್ನಿಯಲ್ಲಿ ಆಡಿರಲಿಲ್ಲ. ಆದರೂ ಪರಿಸ್ಥಿತಿ ಸುಧಾರಿಸುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.
ಮಂಗಳವಾರ ಮೊದಲ ಸುತ್ತಿನ ಪಂದ್ಯವಾಡುತ್ತಿರುವ ನಡಾಲ್ ಅವರಿಗೆ ಸರ್ಬಿಯಾದ ಲಾಸ್ಲೊ ಡಿಜೇರ್ ಸವಾಲು ಎದುರಾಗಿದೆ.
ಅಮೆರಿಕ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರಿಗೆ ಮಾರ್ಗರೇಟ್ ಕೋರ್ಟ್ ಅವರ 24 ಗ್ರ್ಯಾನ್‌ಸ್ಲಾಮ್ ಟ್ರೋಫಿ ವಿಜಯದ ದಾಖಲೆ ಸರಿಗಟ್ಟಲು ಇನ್ನು ಒಂದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಅಗತ್ಯವಿದೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ಸೆರೆನಾ, ಜರ್ಮನಿಯ ಲಾರಾ ಸಿಜಮಂಡ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.
ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ (8) ಪ್ರಶಸ್ತಿ ಗೆದ್ದ ತಮ್ಮದೇ ದಾಖಲೆಯನ್ನು ಅಳಿಸಿಹಾಕುವ ಅವಕಾಶ ಇದೆ. ಅಲ್ಲದೆ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅತಿ ಹೆಚ್ಚು ವಾರಗಳ ಕಾಲ ಅಗ್ರಸ್ಥಾನದಲ್ಲಿರುವ ಅವಕಾಶವಿದೆ.
ಸೋಮವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್, ಫ್ರಾನ್ಸ್‌ನ ಜೆರೆಮಿ ಚಾರ್ಡಿ ಎದುರು ಸೆಣಸಲಿದ್ದಾರೆ.
30 ಸಾವಿರ ಪ್ರೇಕ್ಷಕರಿಗೆ ಅವಕಾಶ: ಕೋವಿಡ್–19 ಪಿಡುಗಿನ ಆತಂಕದ ಹಿನ್ನೆಲೆಯಲ್ಲಿ ದಿನವೊಂದಕ್ಕೆ 30 ಸಾವಿರ ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂದರೆ ಕ್ರೀಡಾಂಗಣಗಳ ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಲೈನ್ ಅಂಪೈರ್‌ಗಳಿರುವುದಿಲ್ಲ: ಟೂರ್ನಿಯ ಪ್ರತಿ ಪಂದ್ಯಗಳು ಲೈನ್ ಅಂಪೈರ್‌ಗಳ ಅನುಪಸ್ಥಿಯಲ್ಲಿ ನಡೆಯಲಿವೆ. ಇಲೆಕ್ಟ್ರಾನಿಕ್ ಪರದೆಯಲ್ಲಿ ತೀರ್ಪುಗಳನ್ನು ಭಿತ್ತರಿಸಲಾಗುತ್ತದೆ. ಹೋದ ವರ್ಷದ ಅಮೆರಿಕ ಓಪನ್ ಟೂರ್ನಿಯಲ್ಲಿ ಇದೇ ಮಾದರಿಯನ್ನು ಅನುಸರಿಸಲಾಗಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ