ಇರಾನ್ ಜೊತೆಗಿನ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧ ಮರುಸ್ಥಾಪಿಸಿದ ಕತರ್
ದುಬೈ, ಆ. 24: ತನ್ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿರುವ ಅರಬ್ ದೇಶಗಳನ್ನು ಧಿಕ್ಕರಿಸಿರುವ ಕತರ್, ಗುರುವಾರ ಇರಾನ್ ಜೊತೆಗಿನ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಿದೆ.
ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಜೂನ್ ತಿಂಗಳ ಆದಿ ಭಾಗದಲ್ಲಿ ಆ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದ್ದವು.
ಬಳಿಕ, ಬಿಕ್ಕಟ್ಟು ಕೊನೆಗೊಳ್ಳಲು ಅರಬ್ ದೇಶಗಳು ಕತರ್ಗೆ ಹಲವು ಬೇಡಿಕೆಗಳನ್ನೊಳಗೊಂಡ ಪಟ್ಟಿಯೊಂದನ್ನು ಸಲ್ಲಿಸಿದ್ದವು. ಇರಾನ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಬೇಕೆನ್ನುವುದು ಬೇಡಿಕೆಗಳ ಪೈಕಿ ಒಂದಾಗಿತ್ತು.
ಆದರೆ, ಈಗ ಇರಾನ್ ಜೊತೆಗೆ ಪೂರ್ಣ ಪ್ರಮಾಣದ ಸಂಬಂಧವನ್ನು ಮರುಸ್ಥಾಪಿಸುವ ಮೂಲಕ ಕತರ್ ತನ್ನ ನೆರೆಯ ಅರಬ್ ದೇಶಗಳಿಗೆ ಸಡ್ಡು ಹೊಡೆದಿದೆ.
ಅದೇ ವೇಳೆ, ಕತರ್ ರಾಜಕುಟುಂಬದ ಸದಸ್ಯರೊಬ್ಬರಿಗೆ ಸೌದಿ ಅರೇಬಿಯ ಬೆಂಬಲ ನೀಡಲು ಆರಂಭಿಸಿದ ದಿನಗಳ ಬಳಿಕ ಈ ಬೆಳವಣಿಗೆ ನಡೆದಿರುವುದು ಗಮನಾರ್ಹವಾಗಿದೆ. ಕತರ್ ರಾಜಕುಟುಂಬದ ಈ ಸದಸ್ಯನ ಕುಟುಂಬದ ಶಾಖೆಯನ್ನು 1972ರಲ್ಲಿ ಅರಮನೆಯಲ್ಲಿ ನಡೆದ ಕ್ಷಿಪ್ರಕ್ರಾಂತಿಯಲ್ಲಿ ಅಧಿಕಾರದಿಂದ ಹೊರದಬ್ಬಲಾಗಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.
ಇರಾನ್ಗೆ ಕತರ್ ರಾಯಭಾರಿಯು ಟೆಹರಾನ್ಗೆ ವಾಪಾಸಾಗಲಿದ್ದಾರೆ ಎಂದು ಕತರ್ ವಿದೇಶ ಸಚಿವಾಲಯ ಗುರುವಾರ ಘೋಷಿಸಿದೆ.
ಶಿಯಾ ಧರ್ಮಗುರುವೊಬ್ಬರನ್ನು ಸೌದಿ ಅರೇಬಿಯ ಗಲ್ಲಿಗೇರಿಸಿದ ಹಿನ್ನೆಲೆಯಲ್ಲಿ, ಇರಾನ್ನಲ್ಲಿರುವ ಸೌದಿಯ ಎರಡು ರಾಜತಾಂತ್ರಿಕ ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ, 2016ರ ಆದಿ ಭಾಗದಲ್ಲಿ ಕತರ್ ಇರಾನ್ನಿಂದ ತನ್ನ ರಾಯಭಾರಿಯನ್ನು ವಾಪಾಸ್ ಕರೆಸಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ