ಸೋಮವಾರ, ಆಗಸ್ಟ್ 21, 2017

ಸ್ವಾತಂತ್ರ್ಯ ಹೋರಾಟದ

Kannada News >> ವಾರ್ತಾಭಾರತಿ >> home

Sunday, 20 Aug, 8.06 pm

ಮುಖಪುಟ

A A A

ಸ್ವಾತಂತ್ರ್ಯ ಹೋರಾಟದೊಂದಿಗೆ ಸಂಬಂಧವೇ ಇರದ ಸರಕಾರವೊಂದು ಕೇಂದ್ರದಲ್ಲಿದೆ: ಮ್ಯಾಗ್ಸೆಸೆ ಪುರಸ್ಕೃತ ಪಿ. ಸಾಯಿನಾಥ್

"ದೇಶದ ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸದ ಮಾಹಿತಿಯೇ ಇಲ್ಲದ ಯುವಜನಾಂಗ ನಮ್ಮ ಮುಂದಿದೆ"

ಉಡುಪಿ, ಆ.20: ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದೊಂದಿಗೆ ಯಾವುದೇ ರೀತಿಯಲ್ಲೂ ಸಂಬಂಧವನ್ನೇ ಹೊಂದಿಲ್ಲದ ಮೊದಲ ಸರಕಾರವೊಂದು ಕೇಂದ್ರದಲ್ಲಿದ್ದು, ಇಂದಿನ ಮಾಧ್ಯಮಗಳೂ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಇಂದಿನ ಜನಾಂಗಕ್ಕೆ ತಲುಪಿಸಲು ನಿರಾಸಕ್ತವಾಗಿವೆ. ಹೀಗಾಗಿ ದೇಶದ ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸದ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲದ ಯುವಜನಾಂಗವೊಂದು ನಮ್ಮ ಮುಂದಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪಾಲಗುಮ್ಮಿ ಸಾಯಿನಾಥ್ ಹೇಳಿದ್ದಾರೆ.

ನಗರದ ಪುರಭವನದಲ್ಲಿ ರವಿವಾರ ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ತಲ್ಲೂರ್ಸ್ ಇನ್ಫೊವ್ಯಾಲಿಡೇಷನ್ಸ್ನ ದಶಮಾನೋತ್ಸವದ ಅಂಗವಾಗಿ ನಡೆದ ತಲ್ಲೂರು ನುಡಿಮಾಲೆ 'ಕರಾವಳಿ ಕಟ್ಟು' ದತ್ತಿ ಉಪನ್ಯಾಸ ಮಾಲೆಯಲ್ಲಿ 'ಡಿಜಿಟಲ್ ಯುಗದಲ್ಲಿ ಗ್ರಾಮೀಣ ಭಾರತ ಕಥನ' ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.

"ಇನ್ನು ಕೇವಲ 4-5 ವರ್ಷಗಳಲ್ಲಿ ದೇಶದ ಯುವಪೀಳಿಗೆಗೆ, ಹೊಸ ತಲೆಮಾರಿಗೆ ನಮ್ಮ ಸ್ವಾತಂತ್ರ್ಯ ಹೋರಾಟದ ಭವ್ಯ, ರೋಚಕ ಇತಿಹಾಸ, ಕಥೆಗಳನ್ನು ತಲುಪಿಸಬಲ್ಲವರು ಇಲ್ಲವಾದ ಬಳಿಕ, ಸ್ವಾತಂತ್ರ್ಯ ಹೋರಾಟದೊಂದಿಗಿನ ದೇಶದ ಕೊನೆಯ ಕೊಂಡಿಯೂ ಕಳಚಿ ಬೀಳಬಹುದು. ಅಲ್ಲಿಗೆ ಭಾರತವು ಸ್ವಾತಂತ್ರ್ಯ ಹೋರಾಟದೊಂದಿಗೆ ಯಾವುದೇ ಸಂಬಂಧವಿರದ ದೇಶವಾಗಲಿದೆ" ಎಂದವರು ಕಳವಳ ವ್ಯಕ್ತಪಡಿಸಿದರು.

"ಮಹಾರಾಷ್ಟ್ರದ ಸತಾರ ಜಿಲ್ಲೆಯ ಸಾಂಗ್ಲಿಯಲ್ಲಿರುವ 94ರ ಹರೆಯ ಸ್ವಾತಂತ್ರ್ಯ ಹೋರಾಟಗಾರ ರಾಮಚಂದ್ರ ಶ್ರೀಪತಿ ಲಾಡ್ನಂಥವರ ಹೋರಾಟದ ಕಥೆ ನಮಗೆ ಬೇಡವಾಗಿದೆ. ಸತಾರದಲ್ಲಿ ಲಾಡ್ ನೇತೃತ್ವದಲ್ಲಿ ಪ್ರತಿ ಸರಕಾರ್ ರಚಿಸಿ ತೂಫಾನ್ ಸೇನೆ ಕಟ್ಟಿ ಬ್ರಿಟಿಷರಿಗೆ 1943ರಲ್ಲಿ ಸಡ್ಡುಹೊಡೆದ ರೋಚಕ ಕಥೆಯನ್ನು ಕೇಳುವವರೇ ಇಲ್ಲವಾಗಿದ್ದಾರೆ. ತಮ್ಮ ಪ್ರಾಂತ್ಯದಲ್ಲಿ ಸಾಗುತ್ತಿದ್ದ ರೈಲನ್ನು ತಡೆದು ಅದರಲ್ಲಿದ್ದ ಸರಕಾರದ ನೌಕರರಿಗೆ ಸಾಗಿಸುತ್ತಿದ್ದ ಸಂಬಳದ ದುಡ್ಡನ್ನು ದೋಚಿದ್ದನ್ನು, ಈಗಲೂ ಅದನ್ನು ಅಷ್ಟೇ ಜೋರಾಗಿ ಸಮರ್ಥಿಸಿಕೊಂಡು ರಸವತ್ತಾಗಿ ವರ್ಣಿಸುವ ಲಾಡ್ರ ಮಾತನ್ನು ಕೇಳುವವರೇ ಇಲ್ಲವಾಗಿದ್ದಾರೆ".

"ದೇಶದ ಗ್ರಾಮೀಣ ಭಾಗದಲ್ಲಿರುವ ಇಂಥ ನೂರಾರು ಲಾಡ್ಗಳ ಕಥೆ, ಇತಿಹಾಸವನ್ನು ನಾವಿಂದು ಓದುವುದಿಲ್ಲ. ಪ್ರಾಯಶ: ಇನ್ನು ಕೆಲವೇ ವರ್ಷ ಗಳಲ್ಲಿ ನಮ್ಮ ಮಕ್ಕಳು, ಪುರಾಣದಲ್ಲಿದ್ದ ಪುಷ್ಪಕ ವಿಮಾನದ ಬಗ್ಗೆ, ಗಣಪತಿಯ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಇತಿಹಾಸವಾಗಿ ಓದುವ ಸಾಧ್ಯತೆ ಇದೆ" ಎಂದು ಸಾಯಿನಾಥ್ ವ್ಯಂಗ್ಯವಾಡಿದರು.

"ಇದರೊಂದಿಗೆ ಭಾರತ ತನ್ನ ಬಹುತ್ವವನ್ನು ಅತ್ಯಂತ ವೇಗವಾಗಿ ಕಳೆದುಕೊಳ್ಳುತ್ತಿದೆ. ಭಾರತದ ಗ್ರಾಮೀಣ ಪ್ರದೇಶಗಳು ಭೂಮಿಯ ಮೇಲಿನ ಅತ್ಯಂತ ಸಂಕೀರ್ಣ ಭಾಗವಾಗಿದೆ. ಭಾಷೆ ಮತ್ತು ಸ್ಥಳೀಯ ಉದ್ಯೋಗಗಳು ನಶಿಸುವ ಮೂಲಕ ಗ್ರಾಮೀಣ ಭಾರತದ ವೈವಿಧ್ಯತೆಗೆ ಅತೀ ದೊಡ್ಡ ಅಪಾಯ ಎದುರಾಗುತ್ತಿದೆ. ತಮಿಳುನಾಡಿನ ಕಾಂಚಿವರಂನ ನೈಪುಣ್ಯ ಪಡೆದ ನೇಕಾರರು ಇಂದು ಚೆನ್ನೈ, ಹೈದರಾಬಾದ್ನಂಥ ಪಟ್ಟಣಗಳಿಗೆ ವಲಸೆ ಹೋಗಿ ರಿಕ್ಷಾ ಚಾಲಕರಾಗಿ ದುಡಿಯುತ್ತಿರುವುದನ್ನು ನಾನು ಕಂಡಿದ್ದೇನೆ" ಎಂದು ಸಾಯಿನಾಥ್ ನುಡಿದರು.

ಕಳೆದ 50 ವರ್ಷಗಳಲ್ಲಿ ದೇಶದಲ್ಲಿ 255 ಭಾರತೀಯ ಭಾಷೆಗಳು ಶಾಶ್ವತವಾಗಿ ಅಳಿದುಹೋಗಿವೆ. ತಾನು ಒರಿಸ್ಸಾದ ಕಾಳಹಂಡಿಯಿಂದ ಕೊರಾಪಟ್ಣದ 240 ಕಿ.ಮೀ.ದೂರವನ್ನು ಕ್ರಮಿಸುವಾಗ 40 ವಿಧದ ಭಾಷೆಗಳನ್ನು ಜನ ಮಾತನಾಡುವುದನ್ನು ಕಿವಿಯಾರೆ ಕೇಳಿದ್ದೇನೆ. ಆದರೆ ಇಂದು ಈ ವೈವಿಧ್ಯತೆ ಎಂಬುದು ಶಾಶ್ವತವಾಗಿ ಅಳಿಸಿಹೋಗುತ್ತಿದೆ. ತ್ರಿಪುರದಲ್ಲಿ ಒಂದು ಆದಿವಾಸಿಗಳ ಗುಂಪಿನ ಕೇವಲ 300 ಮಂದಿ ಮಾತ್ರ ಉಳಿದಿದ್ದು, ಇವರಲ್ಲಿ ಕೇವಲ ಏಳು ಮಂದಿ ಮಾತ್ರ ಅವರ ಭಾಷೆಯನ್ನು ಮಾತನಾಡಬಲ್ಲವರಾಗಿದ್ದಾರೆ. ಅವರೊಂದಿಗೆ ಆ ಭಾಷೆಯೂ ಅಳಿಯುತ್ತದೆ ಎಂದರು.

ಮಾಧ್ಯಮಗಳ ಪಾತ್ರಕ್ಕೆ ಟೀಕೆ: ದೇಶದ ಇಂದಿನ ಮಾಧ್ಯಮಗಳ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿದ ಸಾಯಿನಾಥ್, ಮಾಧ್ಯಮಗಳು ಇಂದು ದೇಶದ ಒಟ್ಟು ಜನಸಂಖ್ಯೆಯ ಶೇ.70ರಷ್ಟಿರುವ ಬಹುಸಂಖ್ಯಾತ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಅಭಿವೃದ್ಧಿ, ಬೆಳವಣಿಗೆ ಎಂಬುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂಬ ಸ್ಥಿತಿ ಎದುರಾಗಿದೆ ಎಂದರು.

"ಪ್ರಮುಖ ಪತ್ರಿಕೆಗಳ ಮುಖಪುಟಗಳ ಸಮೀಕ್ಷೆ ನಡೆಸಿದಾಗ ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಸುದ್ದಿಗಳಿಗೆ ಸಿಕ್ಕಿದ ಪ್ರಾಶಸ್ತ್ಯ ಶೇ.0.67 ಮಾತ್ರ. ಕಳೆದ ವರ್ಷ ಅದು ಶೇ.0.26 ಮಾತ್ರ. ಅದೇ ಹೊಸದಿಲ್ಲಿಯ ಸುದ್ದಿಗಳಿಗೆ ಶೇ.67ರಷ್ಟು ಪ್ರಾಶಸ್ತ್ಯ ಸಿಕ್ಕಿದೆ. ಇದು ಬಿಟ್ಟರೆ ಮುಂಬೈ, ಚೆನ್ನೈ, ಕಲ್ಕತ್ತಾದ ಸುದ್ದಿಗಳಿಗೆ ಅವಕಾಶ ಸಿಕ್ಕಿದೆ. ಅಂದರೆ ಈಗಲೂ ದೇಶದ 67ರಿಂದ 70ಶೇ. ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದು, ಇದಕ್ಕೆ ಸಿಕ್ಕಿದ ಅವಕಾಶ ಶೇ.0.26 ಮಾತ್ರ. ಅದು ಸಹ ರೈತರ ಆತ್ಮಹತ್ಯೆ ಅಥವಾ ದೊಡ್ಡ ಮಟ್ಟದ ದುರಂತ ಸುದ್ದಿಗಳಿಗೆ ಮಾತ್ರ".

"ಇದರರ್ಥ ಏನೆಂದರೆ, ನಗರಗಳಲ್ಲಿ ಬೆಳೆಯುವ ಹೊಸ ತಲೆಮಾರಿಗೆ ದೇಶದ ಬಗ್ಗೆ ಸಂಪೂರ್ಣ ಮಾಹಿತಿಯೇ ಇಲ್ಲವಾಗುತ್ತಿದೆ. ಏಕೆಂದರೆ ಅವರ ಪಾಲಿಗೆ ಶೇ.70ರಷ್ಟು ಮಂದಿ ಅಸ್ತಿತ್ವದಲ್ಲೇ ಇಲ್ಲವಾಗಿದ್ದಾರೆ" ಎಂದವರು ಹೇಳಿದರು.

ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಕಟುವಾಗಿ ಟೀಕಿಸಿದ ಸಾಯಿನಾಥ್, ಇಂದಿನ ಶಿಕ್ಷಣ ಸಂಪೂರ್ಣವಾಗಿ ವಾಣಿಜ್ಯೀಕರಣ ಹಾಗೂ ಖಾಸಗೀಕರಣಗೊಂಡಿದೆ ಎಂದರು. ಕೋಟ್ಯಾಂತರ ಮಕ್ಕಳು ಇಂದು ಗುಣಮಟ್ಟದ ಶಿಕ್ಷಣ ಪಡೆಯಲು ಅಸಮರ್ಥರಾಗಿದ್ದಾರೆ. 2016ನೇ ಸಾಲಿನಲ್ಲಿ ದೇಶದ ಕೇವಲ ಶೇ.1ರಷ್ಟು ಜನರಲ್ಲಿ ಶೇ.58.8ರಷ್ಟು ಸಂಪತ್ತು ಶೇಖರಣೆಯಾಗಿತ್ತು. ಕೆಳಗಿನ ಶೇ.10ರಷ್ಟು ಜನರಲ್ಲಿ ಶೇ.-0.7 ಹಣವಿತ್ತು. ಅಂದರೆ ಬೆಳವಣಿಗೆ ನೇತ್ಯಾತ್ಮಕವಾಗಿತ್ತು. ಮೇಲಿನ ಶೇ.1ರಷ್ಟು ಶ್ರೀಮಂತರಲ್ಲಿ ಕೆಳಗಿನ ಶೇ.90ರಷ್ಟು ಜನರಲ್ಲಿದ್ದ ಸಂಪತ್ತಿನ ಮೂರು ಪಟ್ಟು ಹಣ ಸಂಗ್ರಹವಿತ್ತು ಎಂದವರು ಹೇಳಿದರು.

ಪಿ.ಸಾಯಿನಾಥ್ ಅವರ ಉಪನ್ಯಾಸದ ಬಳಿಕ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ಕತೆಗಾರ, ಅರ್ಥಶಾಸ್ತ್ರಜ್ಞ ಪ್ರೊ.ಎಂ.ಎಸ್.ಶ್ರೀರಾಮ್, ಲೇಖಕ, ಅಂಕಣಕಾರ, ಪ್ರಾಧ್ಯಾಪಕ ಡಾ.ಎ.ನಾರಾಯಣ ಅವರು ಸಂವಾದ ನಡೆಸಿದರು. ಪತ್ರಕರ್ತ ಜಿ.ಎನ್.ಮೋಹನ್ ಸಂವಾದ ನಡೆಸಿಕೊಟ್ಟರು.

ಇದಕ್ಕೆ ಮೊದಲು ಪಿ.ಸಾಯಿನಾಥ್ ಅವರು, ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿಗಳಲ್ಲೊಬ್ಬರಾದ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಅಂಕಣ ಬರಹಗಳ ಸಂಗ್ರಹ 'ನುಣ್ಣನ್ನಬೆಟ್ಟ'ವನ್ನು ಬಿಡುಗಡೆಗೊಳಿಸಿದರು. ಬಳ್ಳಾರಿ ಕೃಷ್ಣದೇವರಾಯ ವಿವಿಯ ಪ್ರೊ.ರಾಬರ್ಟ್ ಜೋಸ್ ಪುಸ್ತಕವನ್ನು ಪರಿಚಯಿಸಿ ದರೆ, ಸತೀಶ್ ಚಪ್ಪರಿಕೆ ಅತಿಥಿಗಳನ್ನು ಪರಿಚಯಿಸಿದರು.

ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಅತಿಥಿಗಳನ್ನು ಸ್ವಾಗತಿಸಿದರು. ರಾಜಾರಾಂ ತಲ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐವನ್ ಡಿಸಿಲ್ವ ಹಾಗೂ ರಾಮಕೃಷ್ಣ ಹೇರ್ಳೆ ವಂದಿಸಿದರು. ಉಪನ್ಯಾಸಕಿ ಸುಮಾ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ